Quantcast

ಇವರು ನಾ ಕಂಡ ಲಂಕೇಶ್..

ಸಂಧ್ಯಾರಾಣಿ 

‘ಈಗ ಲಂಕೇಶರಿರಬೇಕಿತ್ತು..’

ರಾಜಕೀಯ ಭಂಡತನವನ್ನು ಆವಾಹಿಸಿಕೊಂಡ ಸಮಯದಲ್ಲಿ, ಧರ್ಮ ಢಾಂಬಿಕತೆಯನ್ನು ಹೊತ್ತು ಕುಣಿಯುವ ಸಂದರ್ಭದಲ್ಲಿ, ಅಷ್ಟೇ ಏಕೆ ಯಾವುದೇ ಸಾಮಾಜಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಈ ಮಾತನ್ನು ಮಂತ್ರದಂತೆ ಉಚ್ಛರಿಸುತ್ತಲೇ ಬಂದಿದ್ದೇವೆ. ಲಂಕೇಶ್ ಎನ್ನುವ ಹೆಸರು ನಮಗೆಲ್ಲಾ ಕಾಣದ ಗುರಾಣಿಯಂತೆ ಕೆಲಸ ಮಾಡುತ್ತಲೇ ಬಂದಿದೆ.

ನಾನು ಲಂಕೇಶರ ’ಆ ಕಾಲ’ ವನ್ನು ಓದುಗಳಾಗಿ ಕಂಡವಳು.

ಹೇಗಿತ್ತು ಆ ಕಾಲ? ಲಂಕೇಶರಿದ್ದ ಆ ದಶಕದ ಕಾಲ? ’ಲಂಕೇಶ್’ ಎನ್ನುವ ಎಚ್ಚರ ಆ ಕಾಲ ರೂಪಿಸಿದ ಪ್ರಜ್ಞೆಯೋ ಅಥವಾ ಆ ಕಾಲವನ್ನು ರೂಪಿಸಿದ ರೂವಾರಿಯೋ? ಇಷ್ಟು ವರ್ಷಗಳ ನಂತರವೂ ನಮಗೇಕೆ ಆ ಹೆಸರನ್ನೂ, ಆ ಹೆಸರು ಪ್ರತಿನಿಧಿಸುವ ಯಾವುದನ್ನೂ ಮರೆಯಲು ಸಾಧ್ಯವಾಗಿಲ್ಲ?

ಲಂಕೇಶ್ ಪತ್ರಿಕೆಯ ’ಆ’ ಕಾಲ ನನ್ನ ಕಾಲೇಜು ದಿನಗಳ ಕಾಲವೂ ಹೌದು. ಮೊದಮೊದಲು ಅಪ್ಪ ತಂದು ಓದಿ, ನಂತರ ನಾನು ಓದುತ್ತಿದ್ದ ಪತ್ರಿಕೆ ಅದು. ಆ ಪತ್ರಿಕೆಯ ಬಿಸಿ, ಆವೇಶ, ಪ್ರಶ್ನಿಸಬೇಕು ಎನ್ನುವ ತುಡಿತ ಎಲ್ಲ ನೋಡಿ ಯಾಕೋ ಮಗಳು ಬದಲಾಗುತ್ತಿದ್ದಾಳೆ ಅನ್ನಿಸಿತೇನೋ ಗೊತ್ತಿಲ್ಲ, ಅಪ್ಪ ಪತ್ರಿಕೆ ಕೊಂಡು ತರುವುದನ್ನು ನಿಲ್ಲಿಸಿಬಿಟ್ಟರು! ಆದರೆ ಅಷ್ಟರಲ್ಲಾಗಲೇ ಲಂಕೇಶ್ ಪತ್ರಿಕೆಯ ಕಿನ್ನರಿ ನಾದಕ್ಕೆ ನಾನು ಸೋತಾಗಿತ್ತು. ಅಲ್ಲಿನ ಅಂಕಣಗಳು, ನೀಲು, ನಿಮ್ಮಿ, ಟೀಕೆ ಟಿಪ್ಪಣಿ ಎಲ್ಲವನ್ನೂ ಒಂದಕ್ಷರ ಬಿಡದೆ ಓದುವುದು ಅಭ್ಯಾಸ ಆಗಿತ್ತು.

ಪತ್ರಿಕೆ ಬಿಟ್ಟು ಇರುವುದು ಕಷ್ಟವಾಗತೊಡಗಿತ್ತು. ಆ ಸಮಯದಲ್ಲಿ ನಾನು ಮಾಲೂರಿನಿಂದ ಬಂಗಾರಪೇಟಿಗೆ ಕಾಲೇಜಿಗೆ ಬರುತ್ತಿದ್ದೆ. ಬೆಳಗ್ಗೆ ಆರಕ್ಕೆ ಹೊರಟ ಮಗಳು ಮಧ್ಯಾಹ್ನ ಮೂರೂವರೆ ನಾಲ್ಕಕ್ಕೆ ಮನೆಗೆ ಬರುತ್ತಾಳೆ, ದಾರಿಯಲ್ಲಿ ಏನಾದರೂ ತಿನ್ನಲಿ ಎಂದು ಅಪ್ಪ ತಿಂಗಳಿಗೊಮ್ಮೆ ಪಾಕೆಟ್ ಮನಿ ಕೊಡುತ್ತಿದ್ದರು. ಆದರೆ ನಾನು ಪ್ರತಿ ದಿನ ಏನೂ ತಿನ್ನದೆ ಹಣ ಉಳಿಸಿ ವಾರಕ್ಕೊಮ್ಮೆ ಲಂಕೇಶ್ ಪತ್ರಿಕೆ, ಒಂದು ಡೈರಿಮಿಲ್ಕ್ ಚಾಕೋಲೇಟ್ ತೆಗೆದುಕೊಳ್ಳುತ್ತಿದ್ದೆ. ಅದು ಅಪ್ಪನೆದುರಿಗೆ ನನ್ನ ಮೊದಲ ಮತ್ತು ಒಂದೇ ಒಂದು ಪ್ರತಿಭಟನೆ.

ಅದುವರೆಗೆ ಕೇವಲ ಕಥೆ, ಕಾದಂಬರಿ, ಧಾರಾವಾಹಿಗಳನ್ನು ಓದುತ್ತಿದ್ದ ನನಗೆ ಕಾಲೇಜಿನಲ್ಲಿ ಮೇಷ್ಟರು ನಿರಂಜನರ ’ಮೃತ್ಯುಂಜಯ’ ಕೊಟ್ಟಿದ್ದರು. ಚಿತ್ತಾಲರ ಹನೇಹಳ್ಳಿಯ ವಿಳಾಸ ಕೊಟ್ಟಿದ್ದರು, ತೇಜಸ್ವಿ ಎನ್ನುವ ಮೋಡಿಕಾರನನ್ನು ಪರಿಚಯಿಸಿದ್ದರು. ಜೊತೆಗೆ ಲಂಕೇಶ್ ಪತ್ರಿಕೆಯನ್ನು ನಾವು ಯಾವ ಕಾರಣಕ್ಕಾಗಿ ಓದಬೇಕು ಎಂದು ಹೇಳುತ್ತಿದ್ದರು. ಆಗ ಶುರುವಾದ ಪತ್ರಿಕೆಯೊಡನಿನ ನನ್ನ ಬಾಂಧವ್ಯ ಲಂಕೇಶರು ಇರುವವರೆಗೂ ಹಾಗೇ ಇತ್ತು.

ಈಗ ಅವರಿಲ್ಲದೆ ಹದಿನೇಳು ವರ್ಷಗಳೇ ಉರುಳಿದೆ. ಕೊನೆಕೊನೆಯಲ್ಲಿ ಕಾಲವೆಂಬ ಮಾಂತ್ರಿಕ ನಮ್ಮೆಲ್ಲರ ಆರಾಧ್ಯ ದೈವವಾಗಿದ್ದ ಲಂಕೇಶರನ್ನು ಇನ್ನಿಲ್ಲದಂತೆ ಕಾಡಿದ್ದ. ವಯಸ್ಸು, ಮಧುಮೇಹ, ತೊಂದರೆ ಕೊಡುತ್ತಿದ್ದ ಕಣ್ಣುಗಳು ಅವರಲ್ಲಿ ಸಿಡಿಮಿಡಿ ಹುಟ್ಟಿಸಿದ್ದವು. ಅವರ ಲೇಖನಿಗೂ ಒಮ್ಮೊಮ್ಮೆ ಮರೆವು ಆವರಿಸುತ್ತಿತ್ತು. ಆದರೂ ’ಲಂಕೇಶ್’ ಎಂದ ಕೂಡಲೆ ಕಣ್ಣುಗಳು ಅರಳುತ್ತಿದ್ದವು. ಕಾಲ ಉರುಳಿದೆ, ನನಗೂ ವಯಸ್ಸಾಗಿದೆ. ಆಗ ಆರಾಧಿಸುತ್ತಿದ್ದ ಲಂಕೇಶ್ ರನ್ನು ಈಗ ಇಷ್ಟಪಡುತ್ತೇನೆ. ಲಂಕೇಶ್ ಈಗ ದೈವವಾಗಿ ಅಲ್ಲ ಮನುಷ್ಯರಾಗಿ ಕಾಣುತ್ತಾರೆ, ಹೆಚ್ಚು ಅರ್ಥವಾಗುತ್ತಾರೆ ಮತ್ತು ಆ ಕಾರಣಕ್ಕೇ ಹೆಚ್ಚು ಆಪ್ತರಾಗುತ್ತಾರೆ.

ಲಂಕೇಶ್ ಪತ್ರಿಕೆಯ ಯಶಸ್ಸಿನಲ್ಲಿ ಲಂಕೇಶ್ ಒಬ್ಬ ಸಂಪಾದಕ ಮಾತ್ರ ಆಗಿರಲಿಲ್ಲ. ಲಂಕೇಶ್ ಒಬ್ಬ ಕವಿ, ಲಂಕೇಶ್ ಒಬ್ಬ ಕಥೆಗಾರ, ಲಂಕೇಶ್ ಒಬ್ಬ ನಾಟಕಕಾರ, ಒಬ್ಬ ಚಿತ್ರ ನಿರ್ದೇಶಕ, ಒಬ್ಬ ಚಿಂತಕ, ಪ್ರಶ್ನಿಸುವ ಎಚ್ಚರ ಮತ್ತು ಪ್ರಶ್ನಿಸಬಲ್ಲ ಧೈರ್ಯ ಎರಡೂ ಇದ್ದ ಅಪರೂಪದ ಸೂಕ್ಷ್ಮಜ್ಞ.

ಈ ಕಾರಣಕ್ಕೆ ಲಂಕೇಶ್ ಒಂದು ಭಿನ್ನ ಹಾದಿಯ ಪತ್ರಿಕೆ ಮಾಡುವುದು ಸಾಧ್ಯವಾಯಿತು. ಕಡೆಕಡೆಯಲ್ಲಿ ಅವರ ಆರೋಗ್ಯ ಕುಸಿದು, ಒಂದು ಕಣ್ಣು ಮಂಜಾಗಿದ್ದಾಗ, ಅವರ ಮಗ ಮತ್ತು ಸಹಾಯಕರು ಲಂಕೇಶರು ಇನ್ನು ಮುಂದೆ ಕೇವಲ ಬರೆದುಕೊಂಡಿದ್ದರೆ ಸಾಕು, ಪತ್ರಿಕೆಯನ್ನು ಅವರೇ ನೋಡಿಕೊಳ್ಳುತ್ತಾರೆ ಎಂದು ಹೇಳಿದರಂತೆ.

ಜೋರಾಗಿ ನಕ್ಕ ಲಂಕೇಶ್ ಉತ್ತರಿಸಿದ್ದು ಹೀಗೆ, ’ನನ್ನನ್ನು ನೀವು ಏನೆಂದು ತಿಳಿದಿದ್ದೀರಿ? ಈತನೊಬ್ಬ ಬರೆಯುವ ಕಂಪ್ಯೂಟರ್ ಎಂದೆ? ನಾನಿವತ್ತು ಏನಾದರೂ ಬರೀತಿದ್ರೆ ಅದಕ್ಕೆ ಕಾರಣ ನಾನು ಪಂಜರ ಅಥವಾ ಗೂಡಿನಲ್ಲಿರುವ ಲೇಖಕನಲ್ಲ. ಪತ್ರಿಕೆಯ ಯಶಸ್ಸಿಗೆ ನಾನು ಉತ್ತಮ ಲೇಖಕ ಅಥವಾ ವ್ಯವಸ್ಥಾಪಕ ಎಂಬುದೇ ಕಾರಣವಲ್ಲ. ಹೊಸ ಹುಡುಗರನ್ನು ಕರೆದು ಮಾರ್ಗದರ್ಶನ ಮಾಡಿ, ಬೈದು ಅವರ ದುಃಖ ಕಂಡು ಮರುಗಿ – ಹಾಗೆಯೇ ಒಬ್ಬೊಬ್ಬ ಏಜೆಂಟನ ಗುಣ ಮತ್ತು ದೋಷ ತಿಳಿದುಕೊಂಡು, ಹೊಸ ಅಂಕಣಕಾರರನ್ನು ಕರೆದು ಸೂಚನೆ ನೀಡಿ, ಹಣ ಬಂದಾಗ ಸಂತೋಷಿಸಿ ವ್ಯಯಮಾಡಿ, ಜಿಪುಣನಾಗಿಯೂ ಇದ್ದು ಇದೆಲ್ಲವನ್ನೂ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಬರವಣಿಗೆಗೆ ಬಳಸಿಕೊಂಡು ’ಪತ್ರಿಕೆ’ ಬೆಳೆಯಿತು.

ನಾನು ಒಂದು ರೂಮಿನಲ್ಲಿ ಕೂತು ಧ್ಯಾನಿಸಿದ್ದರೆ ಇದೆಲ್ಲಾ ಆಗುತ್ತಿರಲಿಲ್ಲ’ ಎಂದು ಹೇಳುತ್ತಾರೆ. ಮೇಲ್ನೋಟಕ್ಕೆ ಇದು ತಮಾಷೆಯಾಗಿ ಕಂಡರೂ ಅವರ ವ್ಯಕ್ತಿತ್ವದಲ್ಲಿದ್ದ ಆ ಆಳ ಅವರು ಬದುಕನ್ನು, ಲೋಕವನ್ನು ನೋಡುವ ಹೊಸನೋಟವನ್ನು ಕೊಟ್ಟಿತು. ಹಾಗೆಂದೇ ಅವರು ಕೇವಲ ಬೌದ್ಧಿಕವಾಗಿ ಮಾತ್ರವಲ್ಲದೆ ಜನರನ್ನು ಅವರ ಬದುಕುಗಳ ಮೂಲಕ ಮುಟ್ಟುವುದು ಸಾಧ್ಯವಾಯಿತು.

ಲಂಕೇಶ್ ಲಂಕೇಶರಾಗುವುದರಲ್ಲಿ ಅವರ ಒಳತಾಕತ್ತಿನಷ್ಟೆ ಮುಖ್ಯವಾದದ್ದು ಅವರಿದ್ದ ಆ ಕಾಲಘಟ್ಟ. ಅದು ಜಾಗತೀಕರಣ ಮತ್ತು ಖಾಸಗೀಕರಣ ಇನ್ನೂ ಭಾರತದ ಗದ್ದುಗೆ ಏರದ ಕಾಲ. ಒಂದು ಹೋರಾಟಕ್ಕೆ ಬೇಕಾದ ಸಾಮಾಜಿಕ ಪ್ರಾಮಾಣಿಕತೆ ಆ ಕಾಲಕ್ಕೆ ಇತ್ತು, ಅದಕ್ಕೊಂದು ತಾತ್ವಿಕ ಚೌಕಟ್ಟನ್ನು ಒದಗಿಸಿಕೊಡುವ ಕೆಲಸವನ್ನು ಪತ್ರಿಕೆ ಮಾಡಿತು. ಆ ಕಾಲದ ಸಾಮಾಜಿಕ ಚಳುವಳಿಗಳು ಸಹ ಅಂತಹ ಒಂದು ಮನೋಸ್ಥಿತಿಗೆ ಬೇಕಾದ ಭೂಮಿಕೆಯನ್ನು ಸಿದ್ದಪಡಿಸಿದ್ದವು. ಲಂಕೇಶರಿದ್ದ ಆ ಕಾಲದಲ್ಲಿ ಕುವೆಂಪು ಇದ್ದರು, ತೇಜಸ್ವಿ ಇದ್ದರು, ನಂಜುಂಡಸ್ವಾಮಿಗಳಿದ್ದರು, ಸುಂದರೇಶ್ ಇದ್ದರು, ಯೂ ಆರ್ ಅನಂತಮೂರ್ತಿಗಳಿದ್ದರು, ಡಿ ಎಲ್ ನಾಗರಾಜ್ ಇದ್ದರು. ಇವರೆಲ್ಲರೂ ಪರಸ್ಪರರನ್ನು ಪ್ರಭಾವಿಸುತ್ತಿದ್ದುದಷ್ಟೇ ಅಲ್ಲ ಪರಸ್ಪರರಿಗೆ ಎಚ್ಚರಿಕೆಯ ಕೈದೀವಿಗೆಯೂ ಆಗಿದ್ದರು.

ಲಂಕೇಶರ ವ್ಯಕ್ತಿತ್ವ ಪರಿಪೂರ್ಣ ಅಲ್ಲದಿರಬಹುದು. ಅವರಲ್ಲೂ ಕೆಲವು ವಿರೋದಾಭಾಸಗಳಿರಬಹುದು. ಆದರೆ ಈ ಎಲ್ಲಾ ಮಿತಿಗಳ ಆಚೆಗೂ ಲಂಕೇಶ್ ಏನು ಎಂದು ನೋಡಬೇಕಾಗುತ್ತದೆ. 1993 ರಲ್ಲಿ ಬದನವಾಳಿನಲ್ಲಿ ದಲಿತರು ದೇವಸ್ಥಾನವನ್ನು ಪ್ರವೇಶಿಸಬಾರದು ಎನ್ನುವ ಕಾರಣಕ್ಕೆ ಶುರುವಾದ ಗಲಾಟೆ ಅಲ್ಲಿನ ಲಿಂಗಾಯತರು ಮತ್ತು ದಲಿತರನ್ನು ಎದುರುಬದುರಾಗಿ ನಿಲ್ಲಿಸಿರುತ್ತದೆ. ಜಾತಿಯ ಚೌಕಟ್ಟನ್ನೂ ದಾಟಿ ಲಂಕೇಶರು ದಲಿತರ ಪರವಾಗಿ ಬರೆಯುತ್ತಾರೆ. ಪ್ರತಿಯೊಂದು ಜಾತಿಯೂ ದ್ವೀಪವಾಗುತ್ತಿರುವ, ಜಾತಿಗಳ ಧೃವೀಕರಣವಾಗುತ್ತಿರುವ ಈ ಕಾಲಘಟ್ಟದಲ್ಲಿ, ಹೌದು ಲಂಕೇಶ್ ಇರಬೇಕಿತ್ತು ಅನ್ನಿಸುತ್ತದೆ.

ನಾಡಿನ ಅಭಿಪ್ರಾಯವನ್ನು ರೂಪಿಸುವುದರಲ್ಲಿ, ಒಂದು ಜನಾಂಗದ ಪ್ರಶ್ನೆಗಳಿಗೆ ದನಿಯಾಗುವುದರಲ್ಲಿ, ಪ್ರಶ್ನೆಗಳ ಪರಿಧಿ ಆಚೆಗೆ ಯಾವ ಪ್ರಭುತ್ವವಾಗಲೀ, ಧಾರ್ಮಿಕ ಪೀಠವಾಗಲೀ ಇಲ್ಲ ಎನ್ನುವುದನ್ನು ನಮಗೆ ಕಲಿಸುವುದರಲ್ಲಿ ಲಂಕೇಶರ ಗೆಲುವಿದೆ.
ಯಾವುದೇ ಗಂಭೀರವಾದ ಓದು ಅಥವಾ ಚರ್ಚೆಯ ತಳಹದಿಯಿಲ್ಲದೆ ಇಂದು ಪುಟ್ಟ ಹುಡುಗರು ಕಟುಗ್ರವಾದಿಗಳಂತೆ ವಾದಕ್ಕಿಳಿಯುವಾಗ, ಅಭಿಪ್ರಾಯಗಳಿಗೂ ನಂಬಿಕೆಗಳಿಗೂ ನಡುವಣ ವ್ಯತ್ಯಾಸವನ್ನೇ ಅರಿಯದೆ ಮಾತನಾಡುವಾಗ ಮೀಸಲಾತಿಯನ್ನು ವಿರೋಧಿಸಲು ಚಳುವಳಿ ಮಾಡುತ್ತೇವೆ ಎಂದು ಬಂದ ಕಾಲೇಜಿನ ಹುಡುಗರೆದುರಲ್ಲಿ ಲಂಕೇಶ್ ಜಾತಿಗಳ ಬೃಹತ್ ಸ್ವರೂಪದ ನೆಟ್ ವರ್ಕ್ ಮತ್ತು ಜಾತಿ ಹೇಗೆ ಒಂದು ಸಾಮಾಜಿಕ ಬಂಡವಾಳವಾಗಿದೆ ಎಂದು ವಿವರಿಸಿದ್ದು ನೆನಪಾಗುತ್ತದೆ.

ಮೇಷ್ಟರಾಗಿ ಜಾತಿಗಳ ಬಗ್ಗೆ ಮಾತನಾಡುತ್ತಲೇ ಹದಿಹರೆಯದವರ ತಲ್ಲಣಗಳ ಬಗ್ಗೆ ಹಿರಿಯ ಗೆಳೆಯನಂತೆ ’ಹದಿಹರೆಯದವರನ್ನು ಕುರಿತು’ ಲಂಕೇಶ್ ಬರೆಯಬಲ್ಲವರಾಗಿದ್ದರು. ಅವರ ಲೋಕದ ಆಸೆ, ಒತ್ತಡಗಳು, ಹಣದ ಪ್ರಭಾವ, ಲೈಂಗಿಕತೆ ಎಲ್ಲದರ ಬಗ್ಗೆಯೂ ಹೇಳಬಲ್ಲವರಾಗಿದ್ದರು. ಅತ್ಯಂತ ಖಾಸಗಿ ಅನುಭವವನ್ನು ಸಾರ್ವತ್ರಿಕವಾಗಿಸಬಲ್ಲ ಕಲೆ ಅವರಿಗೆ ಸಿದ್ಧಿಸಿತ್ತು. ಅವರ ತಂದೆ ತೀರಿಕೊಂಡ ಸಂದರ್ಭದ ಬಗ್ಗೆ ಬರೆಯುತ್ತಾ, ಅಪ್ಪನನ್ನು ಮಣ್ಣು ಮಾಡಬೇಕಾದಾಗ ಅವರ ಕಣ್ಣುಗಳಿಂದ ನೀರು ಸುರಿಯಲು ಪ್ರಾರಂಭವಾಗಿದ್ದರ ಬಗ್ಗೆ ಅವರು ಬರೆಯುತ್ತಾರೆ. ಅದು ಕೇವಲ ಅಪ್ಪ ಸತ್ತಿದ್ದಕ್ಕಾಗಿ ಬಂದ ಕಣ್ಣೀರಲ್ಲ, ಕಣ್ಣೆದುರಲ್ಲೇ ಅಪ್ಪ ಮಾಡಿದ ತೋಟ ಪಾಳುಬಿದ್ದಿದ್ದೆ. ತೋಟ ಮಾಡಬೇಕಾಗಿದ್ದ ಮಗ, ಮೊಮ್ಮಗ ಪುಡಾರಿಗಳಾಗಿದ್ದಾರೆ. ಬೀಳುಬಿದ್ದ ಗದ್ದೆಯಲ್ಲಿ ನಿತ್ಯ ದುಡಿದ ಅಪ್ಪನ ಹೆಣ ದಫನ್ ಆಗುತ್ತದೆ. ಒಂದೇ ಸಮಯಕ್ಕೆ ಇದು ಭಾರತದ ಎಲ್ಲಾ ಮನೆಗಳ ದುರಂತವಾಗಿ ಪರಿವರ್ತನೆ ಆಗಿಬಿಡುತ್ತದೆ.

ಇಲ್ಲಿ ನನಗೆ ನೆನಪಾಗುವುದು ಲಂಕೇಶ್ ಕಟ್ಟಿದ ಅಕ್ಷರ ಲೋಕ. ಯಾರು ಯಾರನ್ನು ಅವರು ಕರೆತಂದು ಬರೆಸಿದರು ಎಂದು ಗಮನಿಸಿ : ಅದುವರೆವಿಗೂ ಫ್ಯಾಷನ್ ಮತ್ತು ಅಡಿಗೆ ಅಂಕಣಗಳಿಗೆ ಮೀಸಲಾಗಿಬಿಟ್ಟಿದ್ದ ಮಹಿಳೆಯರಿಂದ ಅವರು ಅವರ ಲೋಕದ ಕಥೆ ಬರೆಸಿದರು. ಭಾನು ಮುಷ್ತಾಕ್ ಎನ್ನುವ ಪ್ರಖರ ದನಿಯನ್ನು ಅವರು ನಮ್ಮ ಮುಂದಿಟ್ಟರು. ಸಾರಾ ಅಬೂಬಕ್ಕರ್ ಮಾತೇ ಇಲ್ಲದ ಅನೇಕ ಭಾವಗಳಿಗೆ ದನಿಯಾದರು. ’ಜಗಲಿಯ ಮಾತುಗಳನ್ನೇ ಕೇಳುತ್ತಿದ್ದವರಿಗೆ ಮೊದಲ ಬಾರಿಗೆ ಹಿತ್ತಲಿನ ಮಾತನ್ನು’ ಲಂಕೇಶರು ತಲುಪಿಸಿದರು. ಹಾಗೆ ಒಂದು ಅವಗಣನೆಗೆ ತುತ್ತಾಗಿದ್ದ ಸಾಮುದಾಯಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ ಕಾರಣಕ್ಕೆ ನಮಗೆ ಲಂಕೇಶ್ ಮುಖ್ಯರಾಗುತ್ತಾರೆ.

ನನಗೆ ವೈಯಕ್ತಿಕವಾಗಿ ಇನ್ನೂ ನೆನಪಿರುವ ಅವರ ಒಂದು ಬರಹ ಅವರು ಸಂಜಯ್ ಗಾಂಧಿ ಅಪಘಾತಕ್ಕೆ ಸಿಲುಕಿ ಮೃತನಾದ ಸಂದರ್ಭದಲ್ಲಿ ಬರೆದದ್ದು. ಅದಕ್ಕೆ ಅವರು ಕೊಡುವ ತಲೆಬರಹ, ’ಮುಳ್ಳಿನ ತೋಟದ ಕನಸುಗಾರ’. ತುರ್ತು ಪರಿಸ್ಥಿತಿಯ ಕಾರಣಕ್ಕೆ ಅಲ್ಲಿಯವರೆಗೂ ಇಂದಿರೆ ಮತ್ತು ಸಂಜಯ ಇಬ್ಬರನ್ನೂ ಇನ್ನಿಲ್ಲದೆ ತರಾಟೆಗೆ ತೆಗೆದುಕೊಂಡಿದ್ದ ಲಂಕೇಶ್ ಆ ಖಾಸಗಿ ದುರಂತದ ಸಮಯದಲ್ಲಿ ಕೇವಲ ಒಬ್ಬ ಮನುಷ್ಯನಾಗಿ ಪ್ರತಿಕ್ರಯಿಸುತ್ತಾರೆ. ಇಂತಹ ಸೂಕ್ಷ್ಮಗಳನ್ನು ಅವರು ಹೊಂದಿದ್ದ ಕಾರಣಕ್ಕೆ ಲಂಕೇಶ್ ಮುಖ್ಯರಾಗುತ್ತಾರೆ.

ಪ್ರತಿಯೊಂದು ಕಾಲಘಟ್ಟವೂ ತನಗೆ ಬೇಕಾದ ಹತಾರುಗಳನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ, ತನಗೆ ಸರಿಯಾದ ನಾಯಕರನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ ಎಂದು ನಾನು ನಂಬಿದ್ದೇನೆ. ಇಂದಿನ ದಿನಮಾನದಲ್ಲಿ ಲಂಕೇಶರ ಹಾಗೆ ಎಚ್ಚರ ಹೇಳುವ ಮತ್ತೊಂದು ದನಿಗಾಗಿ ನಮ್ಮ ಕಾಯುವಿಕೆ ಇಂದಿಗೂ ಹಾಗೆಯೇ ಇದೆ.

ಲಂಕೇಶರ ಅನಾರೋಗ್ಯದ ಸಮಯದಲ್ಲಿ ಅವರನ್ನು ಕಾಣಲು ಬಂದ ಮಿತ್ರರೊಬ್ಬರು ’ನೀವು ಕನ್ನಡ ನಾಡಿಗೆ ಇನ್ನೂ ಹಲವು ವರ್ಷಗಳು ಬೇಕು, ನಿಮಗಾಗಿ ಅಲ್ಲದಿದ್ದರೂ ಈ ನಾಡಿಗಾಗಿ ಬದುಕಬೇಕು’ ಎಂದರಂತೆ. ಆಗ ಲಂಕೇಶ್ ’ಹಾಗೆಲ್ಲಾ ನನಗಲ್ಲದೆ, ಸಿದ್ಧಾಂತಕ್ಕಾಗಿ, ನಾಡಿಗಾಗಿ ಬದುಕುವವ ನಾನಲ್ಲ, ನಾನು ನನಗಾಗಿ ಪ್ರಾಮಾಣಿಕವಾಗಿ ತೀವ್ರವಾಗಿ ಬದುಕಿದಾಗಲೇ ಈ ನಾಡಿಗೂ ಒಳ್ಳೆಯದಾಗುತ್ತದೆ ಎಂದು ನಂಬಿದವನು ನಾನು’ ಎಂದರಂತೆ. ಬದುಕಿನ ಬಗ್ಗೆ ಹಾಗೆ ತೀವ್ರ ವ್ಯಾಮೋಹ ಮತ್ತು ಪ್ರಾಮಾಣಿಕತೆಯಿಂದ ಬದುಕಲು ಲಂಕೇಶ್ ಅವರಿಗೆ ಸಾಧ್ಯವಾಗಿತ್ತು ಎನ್ನುವುದು ನಮಗೆ ಕೈದೀವಿಗೆಯಾಗಬೇಕು.

ಯಾರಾದರೂ ’ಈಗ ಲಂಕೇಶ್ ಇರಬೇಕಿತ್ತು’ ಎಂದರೆ ನನಗೆ ಮನಸ್ಸಿನಲ್ಲಿ ಪ್ರಶ್ನೆಗಳು ಶುರುವಾಗುತ್ತವೆ. ಅಂದರೆ ಲಂಕೇಶರಂತಹ ಲಂಕೇಶರು ಅಷ್ಟು ಬರೆದ ಮೇಲೂ, ಪ್ರಶ್ನಿಸುವುದನ್ನು ಕಲಿಸಿದ ಮೇಲೂ, ಆ ಕಾಲದ ಎಲ್ಲಾ ಪ್ರಜ್ಞೆಗಳ ಅಷ್ಟು ಪ್ರಯತ್ನಗಳ ನಂತರವೂ ಇಂದಿಗೂ ಸಹ ನಮಗೆ ಏನಾದರೂ ಆಗಬೇಕು ಎಂದರೆ ನಮಗೆ ಲಂಕೇಶರೇ ನೆನಪಾಗುತ್ತಾರೆ ಎಂದರೆ ನಮ್ಮ ಮನೋಲೋಕವನ್ನು ಹಾಗೆ ವ್ಯಾಪಿಸಿಕೊಂಡಿರುವ ಆ ಶಕ್ತಿ ಎಂತಹದು?

ಅನ್ಯಾಯವನ್ನು ಪ್ರಶ್ನಿಸುವುದು, ಪ್ರತಿಭಟಿಸುವುದು ನಮ್ಮೆಲ್ಲರ ಕೆಲಸ ಎನ್ನುವ ಸಾಮೂಹಿಕ ಜವಾಬ್ದಾರಿಯನ್ನು ನಾವೇಕೆ ಹೊರುವುದಿಲ್ಲ? ಯಾವಾಗಲೂ ಮತ್ಯಾರಾದರೂ ನೈತಿಕತೆಯ ಚುಕ್ಕಾಣಿ ಹಿಡಿಯಬೇಕು, ನಾವು ಆ ವಾಹನದಲ್ಲಿ ಕುಳಿತು ನೆಮ್ಮದಿಯಲ್ಲಿ ಪಯಣಿಸಬೇಕು ಎನ್ನುವ ನಿರೀಕ್ಷೆ ಇಟ್ಟುಕೊಳ್ಳುವುದು ಅನೈತಿಕ ಅನ್ನಿಸುತ್ತದೆ.

ಒಬ್ಬ ಸೂರ್ಯನಿಗಾಗಿ ಹಂಬಲಿಸುತ್ತಾ ಕೂರುವ ಬದಲು ಲಂಕೇಶರು ನಮಗಿತ್ತ ಎಚ್ಚರವನ್ನು ಕಾಪಾಡಿಕೊಳ್ಳುತ್ತಲೇ ಇಂದು ನಾವೆಲ್ಲರೂ ಸಣ್ಣ ಸಣ್ಣ ಹಣತೆಗಳಾಗುವುದು ನಾವು ಲಂಕೇಶರಿಗೆ ಕೊಡಬಹುದಾದ ಅತ್ಯುನ್ನತ ಮರ್ಯಾದೆ ಎಂದು ನನಗನ್ನಿಸುತ್ತದೆ.

12 Comments

 1. Sathyakama Sharma Kasaragodu
  March 15, 2017
 2. Shyamala Madhav
  March 15, 2017
 3. Sadashiv soratur
  March 15, 2017
 4. Anonymous
  March 15, 2017
 5. gauri lankesh
  March 14, 2017
 6. ಅನಿಲ್ ಗುನ್ನಾಪುರ
  March 14, 2017

Add Comment

Leave a Reply