Quantcast

ಸಂಪಿಗೆಯಂತೆ ಎಸಳುದುರಿಸಿ ಮಲಗಿದ್ದೆ..

 ಅಲಕೆಯೆಂಬ ಸಂಪಿಗೆ
 
ಶುಭಶ್ರೀ ಭಟ್ಟ
(ಯಯಾತಿ ಪುಸ್ತಕದಲ್ಲಿ ಬರುವ ದಾಸಿಯರ ಪಾತ್ರದಿಂದ ಪ್ರೇರಿತವಾಗಿ ಬರೆದಿದ್ದು)
ಸುಕ್ಕಾಗಿರೋ  ಮುಖ, ಪೊರೆ ಕಳಚಿದಂತಿರುವ ಕೂದಲುಗಳ ರಾಶಿ, ಇಳಿಬಿದ್ದ ದೇಹ, ಗೂನಾದ ಬೆನ್ನು, ಮಿಂಚಿಲ್ಲದ ಕಣ್ಣುಗಳು, ಎಸಳಿಲ್ಲದ ಸಂಪಿಗೆಯಂತೆ.. ಸಂಪಿಗೆಯೆಂದೊಡನೆ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಿದ್ದ ಅಲಕೆಯ ನೆನಪು ಹಿಂದಕ್ಕೋಡಿತು..
“ನನ್ನ ಹೆಸರು ಅಲಕೆ, ಮಹಾರಾಜರ ಪ್ರೀತಿಯ ಸಂಪಿಗೆ.. ನನ್ನ ಜೊತೆಗಿನ ಸಖಿಯರು ಹೇಳುವಂತೆ ನಾನು ಚೆಲುವಿನ ಖನಿ. ದೊರೆಗಳು ವರ್ಣಿಸಿದಂತೆ ‘ಉದ್ದನೆಯ ನಿಲುವು, ಹಾಲು ಬಿಳುಪು ಬಣ್ಣ, ಗುಲಾಬಿಗೆನ್ನೆ, ಚಿಗುರೆಲೆಯ ಕೆಂದುಟಿ, ಸಂಪಿಗೆ ನಾಸಿಕ, ಜಿಂಕೆಯೊಡುವ ಕಣ್ಣುಗಳು’.. ಇಷ್ಟೆಲ್ಲಾ ಸೌಂದರ್ಯದರಸಿಯಾದರೇನು ಬಂತು, ಪಟ್ಟದರಸಿಯಾಗುವ ಭಾಗ್ಯವಂತೂ ಬರಲಾರದು..ಕಾರಣವಿಷ್ಟೇ! ನಾನ್ಯಾರೋ ರಾಜಕುವರಿಯಲ್ಲ, ಬದಲಿಗೆ ಹಸ್ತಿನಾಪುರ ಮಹಾರಾಜರುಗಳ ಸೇವೆಗಾಗೇ ಜೀವನ ಮುಡಿಪಿಡುವ ದಾಸಿಯ ಮಗಳು..
‘ಯಯಾತಿ’ ದೊರೆಗಳ ಮನಸ್ಸನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಂಡಿರುವವರಲ್ಲಿ ನಾನು ಒಬ್ಬಳು. ಚಿಕ್ಕವಳಿದ್ದಾಗಲಿಂದ ಯುವರಾಜರ ಜೊತೆಗೆ ಆಡಿ ಬೆಳೆದವಳು, ಒಡನಾಡಿದವಳು, ಜೊತೆಗಾದವಳು ..
ಯುವರಾಜರು ಹುಟ್ಟುತ್ತಲೇ ಕವಿಹೃದಯ ಹೊಂದಿದವರು. ಅರಮನೆಯಂಗಳದಲ್ಲಿನ ಹೂದೋಟದಲ್ಲೇ ಬಹುತೇಕ ಸಮಯ ಕಳೆಯುತ್ತಿದ್ದರು. ಬಾಲ್ಯದಿಂದಲೂ ಹೂಗಳ ಸೌಂದರ್ಯವನ್ನೂ, ಸುಗಂಧವನ್ನೂ ಆರಾಧಿಸುತ್ತ, ಆಘ್ರಾಣಿಸುತ್ತ ಬೆಳೆದವರು. ಬೆಳೆಯುತ್ತ, ಬೆಳೆಯುತ್ತ ಸ್ತ್ರೀಯರಲ್ಲೇ ಹೂವನ್ನು ಕಂಡವರು. ಅವರು ಆಘ್ರಾಣಿಸಿದ ಹೂಗಳಲ್ಲಿ ನಾನು ಒಬ್ಬಳು. ಅಲಕೆಯೆಂಬ ಹೂವಿಗೆ ಅಂದರೆ ನನಗೆ ಅವರಿಟ್ಟ ಹೆಸರು ‘ಸಂಪಿಗೆ’..
ನನಗೆ ಆ ಮೊಗ್ಗು ಬಿರಿದು ಹೂವಾದ ಕ್ಷಣವಿನ್ನೂ ನೆನಪಿದೆ. ನಗರದೇವಿಯ ಉತ್ಸವದಲ್ಲಿ ಶತ್ರುವಿನಿಂದ ಗಾಯಗೊಂಡು ಅಜ್ಞಾತ ಸ್ಥಳದಲ್ಲಿ ಶುಶ್ರೂಷೆ ಪಡೆಯುತ್ತಿದ್ದ ಯಯಾತಿ ದೊರೆಗಳ ನೋಡಿಕೊಳ್ಳಲು ನನ್ನನ್ನು ನೇಮಿಸಲಾಗಿತ್ತು. ಪ್ರಜ್ಞೆಯಿಲ್ಲದ ಅವರನ್ನು ಹಗಲು- ರಾತ್ರಿಯ ಪರಿವೆಯಿಲ್ಲದೇ ನೋಡಿಕೊಳ್ಳುತ್ತಿದ್ದೆ. ವಾರದ ನಂತರ ಅಪರಾಹ್ನಕ್ಕೆ ನಿಧಾನವಾಗಿ ಕಣ್ತೆರೆದರು.
ನನಗೇ ಜೀವ ಮರಳಿಬಂದಷ್ಟು ಖುಷಿ-ಸಮಾಧಾನ, ಕುಲಪುತ್ರನಿಗೆ ಮರುಜನ್ಮವಾದಷ್ಟು ಸಂತಸ ನನ್ನಮ್ಮ-ಅರಮನೆಯ ಹಿರಿಯದಾಸಿಗೆ. ಮಹಾರಾಜ-ಮಹಾರಾಣಿಯರ ಸಂಭ್ರಮವಂತೂ ಹೇಳತೀರದು. ಎಲ್ಲರನ್ನೂ ದೀರ್ಘವಾಗಿ ನೋಡಿದ ಯಯಾತಿ ರಾಜರಿಗೆ ನನ್ನ ಕಂಡೊಡನೆ ಕಣ್ಣಲ್ಲಿ ಮಿಂಚು, ‘ಈ ಸಂಪಿಗೆಯ ಸುಗಂಧವೂ ನನ್ನ ಮೂಗಿಗೆ ಸೋಕದೇಯಿತ್ತೆ ಇಷ್ಟು ದಿನ’ ಎಂದು ಮೆಲ್ಲನುಸುರಿದಾಗ ನನ್ನೊಳಗೇನೋ ಅರಿಯದ ಪುಳಕ.. ಅದಾಗಿ ಎರಡು ದಿನಕ್ಕೆ ನಾ ಬಿರಿದ ಹೂವಾಗಿದ್ದೆ, ನನ್ನೆಸರು ಸಂಪಿಗೆಯೆಂದು ಮರುನಾಮಕರಣಗೊಂಡಿತ್ತು. ಮತ್ತದೇಷ್ಟೋ ದಿನ, ಲೆಕ್ಕವಿಲ್ಲದಷ್ಟು ಹಗಲು-ರಾತ್ರಿ ನಾನವರ ಶಯ್ಯೆಯಲ್ಲಿ ಸಂಪಿಗೆಯಂತೆ ಎಸಳುದುರಿಸಿ ಮಲಗಿದ್ದೆ, ಮುಲುಗಿದ್ದೆ, ನಲುಗಿದ್ದೆ. .
ಅಷ್ಟರಲ್ಲಾಗಲೇ ಈ ಸಂಪಿಗೆಯಲ್ಲೊಂದು ಪುಟಾಣಿ ಮೊಗ್ಗು ಅರಳತೊಡಗಿತ್ತು. ನಾನು ನಿಧಾನವಾಗಿ ಅರಮನೆಯೆಡೆಗೆ ಹೋಗುವುದನ್ನು ನಿಲ್ಲಿಸಿದ್ದೆ. ನನ್ನ ಪ್ರಿಯ ದೊರೆಯ ಪ್ರೀತಿಯ ಮೊಗ್ಗನ್ನು ಕಣ್ರೆಪ್ಪೆ ತರಹ ಜೋಪಾನ ಮಾಡುವುದರಲ್ಲೇ ಕಾಲಕಳೆಯತೊಡಗಿದೆ. ಮತ್ತೆ ಯಯಾತಿಯ ಸೇವೆಗೆ ಹಿಂತಿರುಗಿ ಬರುವಷ್ಟರಲ್ಲೇ, ಋಷಿಪುತ್ರಿ ದೇವಯಾನಿ-ಶರ್ಮಿಷ್ಠೆಯೆಂಬ ತ್ರಿಲೋಕ ಸುಂದರಿ ಪ್ರಿಯದಾಸಿಯಾಗಿ ಸ್ಥಾನಗಳಿಸಿಯಾಗಿತ್ತು.
ಇನ್ನುಮೇಲೆ ಈ ಕಾಡುಸಂಪಿಗೆಯ ಅಗತ್ಯವೇ ಯಯಾತಿ ಮಹಾರಾಜರಿಗಿಲ್ಲವೆಂದು ಅರಿವಾದಾಗ ಮಾತ್ರ ಕಂಬನಿ ಕೆನ್ನೆಯ ತೋಸಿತ್ತು.. ಭಾರವಾದ ಮನಸ್ಸಿಂದ ಮನೆಗೆ ಹಿಂತಿರುಗಿ ಬರುವಷ್ಟರಲ್ಲಿ ಎಸಳಿಲ್ಲದ ಸಂಪಿಗೆಯಾಗಿದ್ದೆ. ಅದೇ ಕೊನೆ, ಮತ್ಯಾವತ್ತೂ ನಾನು ಅರಮನೆಯೊಳಗೆ ಕಾಲಿಡಲಿಲ್ಲ, ಮಹಾರಾಜರ ಸೇವೆಗೆ ಹೋಗಲಿಲ್ಲ, ಈ ಕಾಡುಸಂಪಿಗೆಯ ಸುಗಂಧವನ್ನು ಆಘ್ರಾಣಿಸುವ ಅವಶ್ಯಕತೆ ಅವರಿಗೆ ಬರಲೂ ಇಲ್ಲ..
ಅವರೊಡನೆ ಕಳೆದ ಆ ಮಧುರ ಕ್ಷಣಗಳ ಮೆಲಕುಹಾಕುತ್ತಾ, ಅವರು ಪ್ರಸಾಧಿಸಿದ ಪುಟ್ಟಸಂಪಿಗೆಯನ್ನು ದಾಸೀ ಪರಂಪರೆಗೆ ಜಾರಗೊಡದೇ, ಸ್ವತಂತ್ರವಾಗಿ ಬೆಳೆಸಿ, ಬದುಕು ಕಟ್ಟಿಕೊಟ್ಟ ಸಮಾಧಾನವೇ ಸಾಕು ಈ ಜೀವಕ್ಕೆ..” ಎಂದುಕೊಳ್ಳುತ್ತಾ ದೀರ್ಘ ನಿಟ್ಟುಸಿರಿಟ್ಟು ನೆನಪಿನಾಳದಿಂದ ಹೊರಬಂದಳು ಅಲಕೆ.. 

6 Comments

 1. ಶ್ರೀ ತಲಗೇರಿ
  March 15, 2017
 2. Anonymous
  March 15, 2017
 3. Anonymous
  March 14, 2017
  • Shubhashree
   March 15, 2017

Add Comment

Leave a Reply