Quantcast

ಲಾಲಕೃಷ್ಣ ಎಂಬ ರಾಷ್ಟ್ರಪತಿಗಳೂ, ಎಸ್ಸೆಂ ಕೃಷ್ಣ ಎಂಬ ಉಪರಾಷ್ಟ್ರಪತಿಗಳೂ…!

ರೈಸಿನಾ ಹಿಲ್ಸ್ ಗೆ ಎರಡು ಸಮಸ್ಯೆಗಳು. ಒಂದು ಅದು ನಿವೃತ್ತ ರಾಜಕಾರಣಿಗಳ ವ್ರದ್ಧಾಶ್ರಮ ಆಗುತ್ತಿರುವುದು ಮತ್ತು ಇನ್ನೊಂದು ರಬ್ಬರ್ ಸ್ಟಾಂಪ್ ಗಳಿಗೆ ಇಂಕ್ ಪ್ಯಾಡ್ ಆಗುವುದು.

ಜುಲೈ 25, 2017ಕ್ಕೆ ಮೊದಲು ಲುಟೆನ್ಸಿನ ಈ ಆದಿಮನೆಗೆ ಹೊಸ ಒಕ್ಕಲು ಯಾರೆಂಬುದು ನಿರ್ಧಾರ ಆಗಬೇಕಿದೆ. ಅಂದು ಅಲ್ಲಿನ ಹಾಲೀ ನಿವಾಸಿ ಪ್ರಣವ್ ಮುಖರ್ಜಿ ನಿವೃತ್ತರಾಗಲಿದ್ದಾರೆ. 2012ರಲ್ಲಿ ಯುಪಿಎ ಯ ಅಭ್ಯರ್ಥಿ ಪ್ರಣವ್ ಮುಖರ್ಜಿಯವರು ಚಲಾವಣೆ ಆದ ಮತಗಳಲ್ಲಿ 70% ಅಂದರೆ, 7,13,763ಮತಗಳನ್ನು ಗಳಿಸಿ, ಎನ್ ಡಿ ಎ ನ ಅಭ್ಯರ್ಥಿ ಪಿ.ಎ. ಸಂಗ್ಮಾ ಅವರನ್ನು ಸೋಲಿಸಿ, ರಾಷ್ಟ್ರಪತಿ ಭವನವನ್ನು ಪ್ರವೇಶಿಸಿದ್ದರು. ಹೆಚ್ಚಿನಂಶ, ಹೆಚ್ಚೇನೂ ತಕರಾರುಗಳಿಲ್ಲದ ಅವಧಿಯೊಂದನ್ನು ಕಳೆದು, ರಾಷ್ಟ್ರಪತಿ ಭವನದ ಮರ್ಯಾದೆಯನ್ನೂ ಅಷ್ಟೋ ಇಷ್ಟೋ ಹೆಚ್ಚಿಸಿ, ಅವರು ಅಲ್ಲಿಂದ ಹೊರತೆರಳುವವರಿದ್ದಾರೆ.

ಮೊನ್ನೆ ಪಂಚರಾಜ್ಯಗಳ ಚುನಾವಣೆಗೆ ಮೊದಲಿನ ದಿನದ ತನಕ ಕೇಂದ್ರದಲ್ಲಿ ಹಾಲೀ ಅಧಿಕಾರದಲ್ಲಿರುವ ಎನ್ ಡಿ ಎ ಗೆ ಸ್ಪಷ್ಟ ಬಹುಮತದಿಂದ ಗೆಲ್ಲಲು ಸುಮಾರು 70,000  ಮತಗಳ ಕೊರತೆ ಇತ್ತು. ಅವರಲ್ಲಿದ್ದದ್ದು 282 ಲೋಕಸಭಾ ಸದಸ್ಯರು, 56 ರಾಜ್ಯಸಭಾ ಸದಸ್ಯರು ಮತ್ತು 1126 ಮಂದಿ ರಾಜ್ಯಗಳ ಶಾಸಕರು ಆದರೆ, ಮೊನ್ನೆ ಪಂಚ ರಾಜ್ಯಗಳ ಚುನಾವಣೆ ಎನ್ ಡಿ ಎ ಗೆ ಬಂಪರ್ ಬೆಳೆ ತಂದುಕೊಟ್ಟಿದ್ದು, 1,03,756 ಹೆಚ್ಚುವರಿ ಮತಗಳು ಅವರಿಗೆ ದೊರೆಯುವಂತಾಗಿದೆ. ಅಂದರೆ, ಬೇರಾರ ಹಂಗೂ ಇಲ್ಲದೆ ತಮಗೆ ಬಯಸಿದ ವ್ಯಕ್ತಿಗಳನ್ನು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳಿಗೆ ಏರಿಸುವ ಸ್ವಾತಂತ್ರ್ಯವನ್ನು ದೇಶ NDAಗೆ ಕೊಟ್ಟಾಗಿದೆ.

ಸಾರ್ವಜನಿಕವಾಗಿ ಈಗ 86 ವರ್ಷ ಪ್ರಾಯದ ಲಾಲ್ ಕೃಷ್ಣ ಆಡ್ವಾಣಿ, 83 ವರ್ಷ ಪ್ರಾಯದ ಮುರಳೀ ಮನೋಹರ ಜೋಷಿ ಅವರ ಹೆಸರುಗಳು ರಾಷ್ಟ್ರಪತಿ ಹುದ್ದೆಗೆಂದು ಸ್ಪರ್ಧೆಯಲ್ಲಿವೆ. ಇದಲ್ಲದೆ ಲಾಟರಿ ಕೇಸುಗಳಾಗಿ ಕೊಂಕಣ ರೈಲಿನ ಇ. ಶ್ರೀಧರನ್, ರಾಜ್ಯಪಾಲ ರಾಮನಾಯ್ಕ್, ಒಂದಿಬ್ಬರು ಸೇನಾ ಪ್ರಮುಖರು, ನಿವೃತ್ತ ನ್ಯಾಯಮೂರ್ತಿಗಳ ಹೆಸರುಗಳೂ ಚಾಲ್ತಿಯಲ್ಲಿವೆ.

ಉಪರಾಷ್ಟ್ರಪತಿ ಹುದ್ದೆಗೆ ಕಣ್ಣಿಟ್ಟೇ ಬಿಜೆಪಿಗೆ ದಾಟಿರುವರೆನ್ನಲಾದ ಮಾಜೀ ವಿದೇಶಾಂಗ ಸಚಿವ ಎಸ್ಸೆಂ ಕೃಷ್ಣ, ಇತ್ತೀಚೆಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಹಾಲೀ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ಪದಕ್ಕೆ ಪ್ರಮುಖ ದಾವೇದಾರರಾಗಿದ್ದರೆ, ಉಳಿದಂತೆ ದಿಲ್ಲಿಯ ಮಾಜೀ ಲೆ| ಗ| ನಜೀಬ್ ಜಂಗ್ ಸೇರಿದಂತೆ ಹಲವು ಹೆಸರುಗಳು ಚಾಲ್ತಿಯಲ್ಲಿವೆ. ಒಂದಂತೂ ನಿಶ್ಚಿತ. ಏನೆಂದರೆ, ಉಪರಾಷ್ಟ್ರಪತಿಗಳು ರಾಜ್ಯಸಭೆಯ ಸಭಾಪತಿಗಳೂ ಆಗಿರುವುದರಿಂದ, ಸಂಸದೀಯ ನಡಾವಳಿಗಳ ಅನುಭವ ಇರುವವರೇ ಆ ಹುದ್ದೆಗೆ ಪರಿಗಣಿತರಾಗುವುದು ಸಂಪ್ರದಾಯ.

ಬದಲಾದ ರಾಜಕೀಯ ಸನ್ನಿವೇಶದಲ್ಲೀಗ ಈ ಎರಡೂ ಹುದ್ದೆಗಳ ಕೀಲಿಕೈ ನಿಸ್ಸಂಶಯವಾಗಿ “ಮೋದಿ – ಷಾ” ಎಂಬ ಜೋಡಿ ಮಾಲಕರ ಕೈನಲ್ಲಿದೆ.

ಆಡ್ವಾಣಿಯವರಿಗೆ ಕೈಗೂಡದ ಕನಸನ್ನು ಪೂರೈಸಲು ಗುರುಕಾಣಿಕೆಯಾಗಿ ರಾಷ್ಟ್ರಪತಿ ಸ್ಥಾನವನ್ನು ಸಲ್ಲಿಸುವ ಮೂಲಕ ಮೋದಿ ತನ್ನ ರಾಜಕೀಯ ಶೈಲಿಗೆ ತಾನೇ ಒಂದು ಬ್ರೇಕು-ಕ್ಲಚ್ಚು ಇರಿಸಿಕೊಳ್ಳುವರೇ? ಹೀಗೆ ಕೇಳದೆ ಬರುವ ದಾನವನ್ನು ಆಡ್ವಾಣಿಯವರ ಸ್ವಾಭಿಮಾನ ಒಪ್ಪಿಕೊಳ್ಳುವುದೇ ಎಂಬೆರಡು ಪ್ರಶ್ನೆಗಳಿಗೆ ಉತ್ತರದಲ್ಲಿ ಹೆಚ್ಚಿನಂಶ ಮುರಳೀಮನೋಹರ ಜೋಷಿಯವರ ಅಭ್ಯರ್ಥನ ನಿಂತಿದೆ. ಮೋದಿ ಮತ್ತು ಜೋಷಿಯವರ ಈ ಹಿಂದಿನ ಆಪ್ತತೆಯ ಚರಿತ್ರೆಯನ್ನು ಗಮನಿಸಿದರೆ, ಮತ್ತು ಎನ್ ಡಿ ಎ ತನ್ನ ಸಿದ್ಧಾಂತಗಳ ಬಲವಾದ ಪ್ರತಿಪಾದನೆಗೆ ಹೊರಡುವುದಿದ್ದರೆ ಜೋಷಿಯವರಿಗೆ ಈ ಹುದ್ದೆ ಸುಲಭ ತುತ್ತಾಗಬೇಕು.

ಇನ್ನು, ಗರ್ಭಗುಡಿಯ ಒಳಪೌಳಿಯಲ್ಲಿ ಏನೇನು ಕುದಿಯುತ್ತಿದೆಯೋ, ಅದರ ಪರಿಮಳ ಹೊರಪಡಸಾಲೆಗಳಿಗೆ ಇನ್ನಷ್ಟೇ ತಲುಪಬೇಕಿದೆ.  ಸಧ್ಯದ ಸ್ಥಿತಿಯಲ್ಲಿ, ಮುಂದಿನ ದಿನಗಳಲ್ಲಿ ಸರ್ಕಾರ ನಡೆಸಲುದ್ದೇಶಿಸಿರುವ ‘ಸರ್ಜಿಕಲ್ ಸ್ಟ್ರೈಕ್’ ಗಳನ್ನು ಗಮನದಲ್ಲಿರಿಸಿಕೊಂಡು ನೋಡಿದರೆ, ಮೋದಿ-ಷಾ ಜೋಡಿ, ತಮಗಿರುವ ಆಬ್ಸೊಲ್ಯೂಟ್ ಅಧಿಕಾರದ ಹೊರತಾಗಿಯೂ ‘ರಿಸ್ಕ್’ ಗಳನ್ನು ತೆಗೆದುಕೊಳ್ಳಲಾರರೆಂದೇ ಅನ್ನಿಸುತ್ತದೆ. ಅರ್ಥಾತ್, ಯಾರೋ ನ್ಯಾಯಮೂರ್ತಿಗಳು, ಸೇನಾ ಪ್ರಮುಖರು, ಸೆಲಬ್ರಿಟಿಗಳು ಈ ಜಾಗಕ್ಕೆ ಸಮೀಪ ಬರುವ ಸಾಧ್ಯತೆಗಳು ಕಡಿಮೆ.

Add Comment

Leave a Reply