Quantcast

ಅದೊಂದು ಸಂತೆಯಲ್ಲಿ ಮಿಡಿದ ಏಕತಾರಿ..

ರಾತ್ರಿಯಾಗಿದೆ.. ಮಸುಕು ಬೆಳಕು. ಅದೊಂದು ಮಧ್ಯಮ ವರ್ಗದ ಮನೆ, ಆ ಮನೆಯಲ್ಲಿ ಏಕಾಕಿಯಾಗಿ ಕುಳಿತ ಆ ವೃದ್ಧ ಪ್ರೊಫೆಸರ್, ಪಕ್ಕದಲ್ಲಿ ಹಳೆಯ ರೇಡಿಯೋ, ಲತಾ ಮಂಗೇಶ್ಕರ್ ಹಾಡು, ’ಆಪ್ ಕೀ ನಜರೋನೆ ಸಮ್ ಝಾ ಪ್ಯಾರ್ ಕಿ ಕಾಬಿಲ್ ಮುಝೆ, ದಿಲ್ ಕಿ ಎ ಧಡ್ಕನ್ ಟೆಹರ್ ಜಾ ಮಿಲ್ ಗಯಿ ಮಂಝಿಲ್ ಮುಝೆ’ ಹಾಡು ಬರುತ್ತಿದ್ದಂತೆ ಆತನ ಮುಖಭಾವ ಬದಲಾಗುವುದು ನೋಡಬೇಕು, ಗಾಳಿಯಲ್ಲಿ ಆತನ ಕೈ ಬೆರಳುಗಳು ಯಾವುದೋ ತಂತಿಯನ್ನು ಮೀಟುವಂತೆ, ಭಾವವೊಂದರ ವೀಣೆ ನುಡಿಸುವಂತೆ, ಕದಲುವುದನ್ನು ನೋಡಬೇಕು, ಆತನ ಕಾಲುಗಳು ತನ್ನಂತಾನೆ ತಾಳ ಹಾಕುವುದನ್ನು ನೋಡಬೇಕು. ಆತನ ಇಡೀ ದೇಹ ಅಲ್ಲಿ ಒಂದು ಹಾಡಾಗುತ್ತದೆ. ನಿಧಾನವಾಗಿ ಆತ ಆ ಹಾಡಿಗೆ ತನ್ನ ಸ್ವರ ಸೇರಿಸಲು ಪ್ರಯತ್ನಿಸುತ್ತಾನೆ, ಅವನೆಷ್ಟು ಒಂಟಿ ಎಂದರೆ ಮಾತೇ ಆಡದೆ ದನಿ ಗೊಗ್ಗರಾಗಿದೆ, ಲತಾ ಮಂಗೇಶ್ಕರಳ ಸಿರಿದನಿಯ ಎದುರಿನಲ್ಲಿ ಅವನ ಗೊಗ್ಗರು ದನಿ.

ಆ ದನಿ ನಿಮ್ಮಲ್ಲಿ ಹುಟ್ಟಿಸುವ ಶೂನ್ಯಭಾವವನ್ನು ನೀವೆಂದೂ ಮರೆಯಲಾರಿರಿ. ಎಂದಾದರೂ ಯಾರ ಕಣ್ಣಿಗಾದರೂ ನಾನು ಪ್ರೇಮಕ್ಕೆ ಅರ್ಹನಾಗಿ ಕಾಣಬಲ್ಲೆನೇ ಎನ್ನುವ ನಿರಾಸೆ, ಹಾಡಿನ ಯಾವುದೋ ಪದ ಮೀಟುವ ಹಳೆಯ ಗಾಯ, ಎಲ್ಲೋ ಒಮ್ಮೆ ಸ್ತಬ್ಧವಾಗುವ ಅವನ ಮುಖಭಾವ, ಇಡೀ ಜಗತ್ತು ತನಗಿತ್ತ ಗಡಿಪಾರಿನ ಶಿಕ್ಷೆಯ ಭಾರ ಹೊತ್ತ ಆ ಕಣ್ಣುರೆಪ್ಪೆಗಳು… ಆ ಕ್ಷಣದಲ್ಲಿ ಒಂಟಿತನಕ್ಕೆ ಒಡಲು ದಕ್ಕಿದರೆ ಅದು ಈತ ಎನ್ನುವ ಹಾಗೆ ಪ್ರೊ ಶ್ರೀನಿವಾಸ್ ರಾಮಚಂದ್ರ ಸಿರಸ್ ಕಾಣುತ್ತಿರುತ್ತಾರೆ. ಚಿತ್ರ ’ಆಲಿಗರ್’, ನಟ ’ಮನೋಜ್ ಬಾಜಪೇಯಿ’. ಆದರೆ ಇಡೀ ಚಿತ್ರದಲ್ಲಿ ಒಮ್ಮೆ ಸಹ ನಿಮಗೆ ಆತ ಮನೋಜ್ ಬಾಜಪೇಯಿ ಅನ್ನಿಸಿದರೆ ಕೇಳಿ. ಅದು ಹೂಬೇಹೂಬು ಪ್ರೊ ಸಿರಸ್.

ಚಿತ್ರದ ಬಗ್ಗೆ ಬರೆಯುವವರೆಲ್ಲಾ ಇದು ಸಲಿಂಗಕಾಮ ಮತ್ತು ಅದಕ್ಕೆ ಸಂಬಂಧಿಸಿದ ಹಕ್ಕುಗಳ ಬಗ್ಗೆ ಮಹತ್ವದ ಚಿತ್ರ ಎಂದು ಬರೆಯುತ್ತಾರೆ. ಆದರೆ ಈ ಚಿತ್ರ ಕೇವಲ ಸಲಿಂಗ ಕಾಮಿಗಳ ಬಗ್ಗೆ ಮತ್ತು ಅವರ ಹಕ್ಕುಗಳ ಬಗ್ಗೆ ಮಾತ್ರ ಅಲ್ಲ. ಇದರ ವಿಸ್ತಾರ ಅದಕ್ಕೂ ಮಿಗಿಲಾದದ್ದು. ಇದು ಬದುಕಿನ ಒಂಟಿತನದ ಬಗ್ಗೆ ಮಾತನಾಡುತ್ತದೆ, ಬದುಕಿನ ಘನತೆಯ ಹಕ್ಕಿನ ಬಗ್ಗೆ ಮಾತನಾಡುತ್ತದೆ. ಇಲ್ಲಿ ಪ್ರೊಫೆಸರ್ ಸಲಿಂಗಕಾಮಿ ಆಗಿರುವುದು ಕೇವಲ ನಿಮಿತ್ತ.

ತೃತೀಯಲಿಂಗಿಗಳ ಸಮಸ್ಯೆಯ ಬಗ್ಗೆ ಮಾತನಾಡುತ್ತಾ ರೇವತಿ ಒಮ್ಮೆ ಒಂದು ಮಾತು ಹೇಳಿದ್ದರು, ’ನಮ್ಮ ಇಡೀ ಸಾಮಾಜಿಕ ವ್ಯವಸ್ಥೆ ಕುಟುಂಬ ಪದ್ಧತಿಯ ಪರವಾಗಿದೆ. ಒಬ್ಬಂಟಿ ಬದುಕುವವರನ್ನು ಇದು ಯಾವಾಗಲೂ ಎರಡನೆಯ ದರ್ಜೆಯವರಂತೆ ನೋಡುತ್ತದೆ’ ಎಂದು. ಹಾಗಾಗಿ ಇಲ್ಲಿ ಆ ಪ್ರೊಫೆಸರ್ ಜಾಗದಲ್ಲಿ ನೀವು ಒಬ್ಬಂಟಿಯಾಗಿ ಬದುಕುತ್ತಿರುವ ಯಾರನ್ನಾದರೂ ಊಹಿಸಿಕೊಳ್ಳಿ. ಅವರ ಅಂತರಿಕ ಬದುಕಿಗೆ, ಅವರ ಮಲಗುವ ಕೋಣೆಗೆ, ಅವರ ಅತ್ಯಂತ ಖಾಸಗಿ ಕ್ಷಣಗಳಲ್ಲಿ ಯಾರಾದರೂ ಕ್ಯಾಮೆರಾ ಹಿಡಿದು ನುಗ್ಗುವುದನ್ನು ಕಲ್ಪಿಸಿಕೊಳ್ಳಿ. ಆ ಕ್ಷಣದಲ್ಲಿ ಆ ಕೋಣೆಯ ಒಳಗಿರುವವರು ಅನುಭವಿಸುವ ಶಾಕ್, ಹೆದರಿಕೆ, ಅವಮಾನವನ್ನು ಊಹಿಸಿಕೊಳ್ಳಿ. ಈ ಚಿತ್ರದಲ್ಲಿ ಆಗುವುದು ಅದೇ, ಅದು ಒಂದು ಅಂತರಿಕ ಲೋಕದ ಮೇಲಾಗುವ ಅತ್ಯಾಚಾರ.

ಆತ ಆಲಿಗರ್ ಎನ್ನುವ, ಉರ್ದು ಮಾತನಾಡುವ ಊರಿನಲ್ಲಿ, ದೇಶದಲ್ಲೇ ಮೂರನೆಯ ಸ್ಥಾನದಲ್ಲಿರುವ ಆಲಿಗರ್ ಯೂನಿವರ್ಸಿಟಿಯಲ್ಲಿ ಮರಾಠಿ ಕಲಿಸುವ ಪ್ರೊಫೆಸರ್. ಭಾಷಾಶಾಸ್ತ್ರ ವಿಭಾಗದ ಚೇರ್ಮನ್. ಆ ಕಾರಣಕ್ಕಾಗಿಯೇ ಸ್ಥಳೀಯರಿಗೆ ಅವನ ಮೇಲೆ ಅಸಹನೆ ಇದೆ. ಅದೊಂದು ರಾತ್ರಿ ಅವನು ತನ್ನ ಸಂಗಾತಿಯೊಡನೆ ಏಕಾಂತದಲ್ಲಿರುವಾಗ ಸ್ಥಳೀಯ ಚಾನೆಲ್ ನ ಇಬ್ಬರು ವರದಿಗಾರರು ಆತನ ಮನೆಗೆ ನುಗ್ಗುತ್ತಾರೆ. ಪ್ರೊಫೆಸರ್ ಮತ್ತು ಆತನ ಸಂಗಾತಿ ರಿಕ್ಷಾ ಚಾಲಕನ ಅರೆಬೆತ್ತಲೆ ಫೋಟೋ ತೆಗೆಯುತ್ತಾರೆ, ಅವರ ಹಿಂದೆಯೇ ಯೂನಿವರ್ಸಿಟಿಯ ಇನ್ನೂ ನಾಲ್ಕು ಜನ ಒಳ ನುಗ್ಗುತ್ತಾರೆ. ಒಟ್ಟಿನಲ್ಲಿ ಇದೇನೋ ಒಳಸಂಚಿನ ಭಾಗ ಎನ್ನುವಂತೆ ಅಲ್ಲಿನ ಘಟನೆಗಳು ನಡೆಯುತ್ತವೆ. ಪ್ರೊಫೆಸರ್ ನನ್ನು ಯೂನಿವರ್ಸಿಟಿಯಿಂದ ಸಸ್ಪೆಂಡ್ ಮಾಡಲಾಗುತ್ತದೆ.

ಇಲ್ಲಿ ಇನ್ನೊಬ್ಬ ಯುವಕ ಇದ್ದಾನೆ, ದೀಪಕ್ ಸೆಬಾಸ್ಟಿಯನ್, ದೀಪು. ಆತ ಪತ್ರಿಕೆಯೊಂದರ ಇಂಟರ್ನಿ. ಅವನ ಕಣ್ಣಿಗೆ ಈ ಸುದ್ದಿ ಬಿದ್ದ ತಕ್ಷಣ ಅವನಿಗೆ ಇದು ಸಲಿಂಗಕಾಮದಾಚೆಗಿನ ವಿಷಯ ಅನ್ನಿಸುತ್ತದೆ. ಸಂಪಾದಕಿಗೆ ದುಂಬಾಲು ಬಿದ್ದು ಆ ವಿಷಯದ ಬಗ್ಗೆ ವರದಿ ಬರೆಯಲು ಆಲಿಗರ್ ಗೆ ಹೋಗುತ್ತಾನೆ. ಇಲ್ಲಿ ಈಗ ಪ್ರೊಫೆಸರ್ ಇರುವ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ಮಾನಸಿಕವಾಗಿ ಆತ ಪೂರ್ತಿ ಕುಸಿದಿದ್ದಾನೆ, ಯಾರನ್ನೂ ನಂಬುವ ಪರಿಸ್ಥಿತಿ ಇಲ್ಲ. ನಿನ್ನೆಮೊನ್ನೆಯವರೆಗೂ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರು ಇಂದು ಮುಖಕ್ಕೆ ಮುಖಕೊಟ್ಟು ಮಾತನಾಡುತ್ತಿಲ್ಲ. ಬಿಪಿ ಹೆಚ್ಚಾಗಿ ಆಸ್ಪತ್ರೆಗೆ ಹೋದರೆ ವೈದ್ಯರು ಇವನನ್ನು ನೋಡುವುದಿಲ್ಲ, ತಾನೇ ಬಿಪಿ ಪರೀಕ್ಷೆ ಮಾಡಿಕೊಳ್ಳಬೇಕಾಗುತ್ತದೆ. ಬಾಗಿಲುಹಾಕಿ, ಅದಕ್ಕೆ ಮೂರು ಚಿಲಕ ಹಾಕಿ, ಕಿಟಕಿಗಳನ್ನು ಮುಚ್ಚಿ, ಅದಕ್ಕೆ ಪರದೆ ಎಳೆದು ಜಗತ್ತಿಗೇ ಬೆನ್ನು ತಿರುಗಿಸಿ ಕುಳಿತವನ ಒಂದೇ ಸಂಗಾತಿ ಆ ಹಳೆಯ ರೇಡಿಯೋದಲ್ಲಿ ಬರುವ ಲತಾಮಂಗೇಶ್ಕರಳ ಹಾಡು.

ಮೊದಲಿಗೆ ಆ ವರದಿಗಾರ ಮಾತನಾಡಿಸಲು ಬಂದಾಗ ಪ್ರೊಫೆಸರ್ ಕೊಡೆಯಲ್ಲಿ ಅವನನ್ನು ಹೊಡೆದು ಓಡಿಸುತ್ತಾನೆ. ಆದರೆ ಆ ವರದಿಗಾರ ಊರಿಗೆ ವಾಪಸ್ಸಾಗುವುದಿಲ್ಲ, ಅಲ್ಲೇ ನಿಲ್ಲುತ್ತಾನೆ. ಮತ್ತೆ ಪ್ರೊಫೆಸರ್ ರನ್ನು ನೋಡಲು ಹೋಗುತ್ತಾನೆ. ಅಷ್ಟರಲ್ಲಿ ಆ ಪ್ರೊಫೆಸರ್ ನನ್ನು ಸುತ್ತುವರೆದ ಈ ಬೇಟೆಗಾರರ ಗುಂಪು ಇನ್ನೊಂದು ಕಲ್ಲನ್ನೆಸೆದಿರುತ್ತಾರೆ. ವಾರದೊಳಗೆ ಪ್ರೊಫೆಸರ್ ಮನೆ ಖಾಲಿ ಮಾಡಬೇಕು ಎನ್ನುವ ನೋಟೀಸು ಕೊಡುವುದಲ್ಲದೆ, ಮನೆಗಿದ್ದ ವಿದ್ಯುತ್ ಸಂಪರ್ಕ ಕತ್ತರಿಸಿರುತ್ತಾರೆ. 64ರ ಆ ವೃದ್ಧ ರಾತ್ರಿ ಹೊತ್ತು, ತನ್ನ ಮನೆಗೆ ತಾನೇ ಕದ್ದು ವಿದ್ಯುತ್ ಸಂಪರ್ಕ ಜೋಡಿಸಿಕೊಳ್ಳುವ ಸಂದರ್ಭದಲ್ಲಿ ವರದಿಗಾರ ಈತನನ್ನು ಭೇಟಿ ಆಗುತ್ತಾನೆ, ಪ್ರೊಫೆಸರ್ ಆತನ ಜೊತೆ ಮಾತನಾಡುವುದಲ್ಲದೆ ಮನೆಗೂ ಕರೆದು, ಆತನಿಗೆ ಸಂದರ್ಶನ ಕೊಡಲು ಒಪ್ಪಿಕೊಳ್ಳುತ್ತಾರೆ.

’ಕಿತನೇ ದಿನೋಂಕೆ ಪ್ಯಾಸೆ ಹೋಗೆ ಯಾರೋ ಸೋಚೋ ತೊ, ಶಬ್ನಂ ಕ ಕತರಾ ಭಿ ದಿಲ್ ಕೊ ದರಿಯಾ ಲಗ್ ಥಾ ಹೈ’ – ಎಷ್ಟೋ ಯುಗಗಳಿಂದ ಬಾಯಾರಿದ್ದೇನೆ ಗೆಳೆಯಾ, ಮಂಜಿನ ಒಂದು ಹನಿ ನನಗೆ ನದಿಯಂತೆ ಕಾಣುತ್ತದೆ…ಇಡೀ ಜಗತ್ತೇ ಮರುಭೂಮಿಯಾದಾಗ ಒಂದು ಸ್ನೇಹದ ಸ್ಪರ್ಶಕ್ಕಾಗಿ ಆತ ಎಷ್ಟು ಹಂಬಲಿಸುತ್ತಿರುತ್ತಾನೆ ಎಂದರೆ ಯಾವ ಮಾಧ್ಯಮ ಪ್ರತಿನಿಧಿಯನ್ನು ಆತ ಕೊಡೆಯಿಂದ ಹೊಡೆದು ಓಡಿಸಿರುತ್ತಾನೋ ಅವನನ್ನೇ ಕರೆದು ಕೂರಿಸಿಕೊಂಡು ಕವಿತೆಗಳ ಬಗ್ಗೆ ಮಾತನಾಡುತ್ತಾನೆ. ಮಾತನಾಡುತ್ತಾ ಆಡುತ್ತಾ ಆ ಪ್ರೊಫೆಸರ್ ಒಬ್ಬ ಕವಿಯಾಗುತ್ತಾನೆ, ಚಿಂತಕನಾಗುತ್ತಾನೆ, ತತ್ವಜ್ಞಾನಿ ಆಗುತ್ತಾನೆ.

ಆ ವರದಿಗಾರ ’ನೀವು ಗೇ ನಾ’ ಎಂದು ಕೇಳುವಾಗ ಆ ಪ್ರೊಫೆಸರ್ ಕೊಡುವ ಉತ್ತರವನ್ನು ಗಮನಿಸಬೇಕು, ’ನೀವು ಈಗಿನ ಕಾಲದವರು, ಪ್ರತಿ ಭಾವನೆಗೂ ಒಂದು ಹೆಸರು, ಲೇಬಲ್ ಹಚ್ಚಿ ಸೂಪರ್, ಫೆಂಟಾಸ್ಟಿಕ್, ಕೂಲ್ ಎಂದು ಬಿಡುತ್ತೀರಿ. ನನ್ನ ಒಡಲಾಳದ ಈ ತೀವ್ರ ಇಚ್ಛೆಯನ್ನು, ನನ್ನೊಳಗಿನ ಕವಿತೆಯನ್ನು ನೀವು ಮೂರು ಅಕ್ಷರಗಳಲ್ಲಿ ಹೇಗೆ ಹಿಡಿದಿಡುತ್ತೀರಿ’ ಎಂದು ಕೇಳುವಾಗ ಅಲ್ಲಿ ಆವೇಶವಿರುವುದಿಲ್ಲ, ಸಹಜ ಮತ್ತು ಸರಳ ಪ್ರಾಮಾಣಿಕತೆ ಇರುತ್ತದೆ. ಆ ಪ್ರಾಮಾಣಿಕತೆ ನಮ್ಮನ್ನು ತಾಕುತ್ತದೆ.

ಚಿತ್ರದಲ್ಲಿ ಅವರು ಸಣ್ಣಸಣ್ಣ ವಿವರಗಳನ್ನು ಹಿಡಿದಿಡುವ ರೀತಿ ಗಮನ ಸೆಳೆಯುತ್ತದೆ. ರಸ್ತೆಯಲ್ಲಿ ಬರುವಾಗ ಬಿಪಿ ಏರುಪಾರಾಗಿ ಪ್ರೊಫೆಸರ್ ಮುಗ್ಗರಿಸಿದಾಗ, ಓಡಿಬಂದ ವರದಿಗಾರ ಆತನನ್ನು ಆತುಗೊಳ್ಳುತ್ತಾನೆ. ಆಗ ಪ್ರೊಫೆಸರ್ ಕೇಳುವ ಮೊದಲ ಮಾತು, ’ಯಾವ ವರ್ಷ?’, ನೂರಾರು ಮಕ್ಕಳಿಗೆ ಪಾಠ ಹೇಳುವ ಪ್ರೊಫೆಸರ್ ಯಾರಾದರೂ ಹುಡುಗರು ನಮಸ್ಕಾರ ಮಾಡಿದರೆ ಮೊದಲು ಕೇಳುವ ಪ್ರಶ್ನೆ ಅದೇ. ಹಾಗೆಯೇ ಸಂದರ್ಶನ ತೆಗೆದುಕೊಳ್ಳುವಾಗ ಯಾವುದಾದರೂ ಮುಖ್ಯ ವಿಷಯದ ಮಾತು ಬಂದರೆ ಯಾವುದೇ ಪತ್ರಕರ್ತರ ಕಣ್ಣು ಅನಿಯಂತ್ರಿತವಾಗಿ ರಿಕಾರ್ಡ್ ಸರಿಯಾಗಿ ಆಗುತ್ತಿದೆಯೋ ಇಲ್ಲವೋ ಎಂದು ಪರೀಕ್ಷಿಸುತ್ತದೆ. ಪ್ರೊಫೆಸರ್ ಮಾತನ್ನು ಸಹಾನುಭೂತಿಯಿಂದ ಕೇಳುವ ಕ್ಷಣದಲ್ಲಿ ಸಹ ವರದಿಗಾರನ ಕಣ್ಣುಗಳು ಒಮ್ಮೆ ರೆಕಾರ್ಡರ್ ಕೆಲಸ ಮಾಡುತ್ತಿದೆಯೆ ಎಂದು ಪರೀಕ್ಷಿಸುತ್ತಿರುತ್ತದೆ. ಚಿತ್ರದ ನಿರ್ದೇಶನ ಮತ್ತು ಸ್ಕ್ರೀನ್ ಪ್ಲೇ ಗೆಲ್ಲುವುದು ಇಲ್ಲಿ.

ಒಂದು ಹೆಣ್ಣಿಗೆ ಮತ್ತೊಂದು ಗಂಡಿನ ಸ್ಪರ್ಶ ಹೇಗೆ ಒಂದು ಸಣ್ಣ ಪುಳಕವನ್ನೆಬ್ಬಿಸುತ್ತದೋ, ಆತನ ಮೆಚ್ಚುಗೆಯ ನುಡಿ ನಾಚಿಕೆಯ ನಗುವನ್ನು ತರುತ್ತದೆಯೋ ಅಷ್ಟೇ ಸಹಜವಾಗಿ ಇಲ್ಲಿ ಪ್ರೊಫೆಸರ್ ವರದಿಗಾರ ’You are a very handsome man’ ಎನ್ನುವ ಮೆಚ್ಚುನುಡಿಗೆ ಪ್ರತಿಕ್ರಿಯಿಸುತ್ತಾರೆ. ದೋಣಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ, ಒಂದು ಸ್ನೇಹಕೂಟದಲ್ಲಿ ಹಾಡು ಹಾಡುವಾಗ ಪ್ರೊಫೆಸರ್ ನಾಚಿಕೊಳ್ಳುವ ಆ ಕ್ಷಣಗಳಲ್ಲಿ ಮನೋಜ್ ಬಾಜಪೇಯಿ ನಿಮಗೆ ಕಾಣಿಸುವುದಿಲ್ಲ. ಇದು ಮನೋಜ್ ಬಾಜಪೇಯಿಯ ಇಲ್ಲಿಯವರೆಗಿನ ಅತ್ಯುತ್ತಮ ನಟನೆ ಎಂದು ಮುಲಾಜಿಲ್ಲದೆ ಹೇಳಬಹುದು. ತನ್ನ ಪಾತ್ರವನ್ನು ಅಂಡರ್ ಪ್ಲೇ ಮಾಡುವುದರ ಮೂಲಕ ಮನೋಜ್ ಇದನ್ನು ಸಾಧಿಸುತ್ತಾರೆ. ಚಿತ್ರದಲ್ಲಿ ಅಷ್ಟೇ ಗಮನ ಸೆಳೆಯುವ ಇನ್ನೊಂದು ಪಾತ್ರ ವರದಿಗಾರನಾಗಿ ರಾಜಕುಮಾರ್ ರಾವ್.

ಚಿತ್ರದಲ್ಲಿ ಒಂದು ದೃಶ್ಯ ಬರುತ್ತದೆ, ಇಡೀ ಸ್ಕ್ರೀನ್ ತುಂಬಾ ಸಣ್ಣ ಸಣ್ಣ ಸರಳುಗಳಿರುವ ಕಿಟಕಿಗಳು, ಕಿಟಕಿಗಳ ಹಿಂದಿರುವ ತೆರೆ, ತೆರೆಯಿಂದ ಇಷ್ಟೇ ಇಷ್ಟು ಇಣುಕುವ ಪ್ರೊಫೆಸರ್… ವೈಡ್ ಆಂಗಲ್ ಲೆನ್ಸ್ ಬಳಸಿ, ಕ್ಲೋಸ್ ಅಪ್ ನಲ್ಲಿ ತೆಗೆದಿರುವ ಆ ಒಂದು ಫ್ರೇಂ ಒಂದು ಕವಿತೆಯ ಹಾಗೆ ಕಾಣುತ್ತದೆ. ಸತ್ಯರಾಯ್ ನಾಗಪಾಲ್ ಕ್ಯಾಮೆರಾ ಆಲಿಗರ್ ನ ಗಲ್ಲಿಗಳನ್ನು, ಕೋರ್ಟ್ ನ ಏಕತಾನತೆಯನ್ನು, ಒಬ್ಬಂಟಿ ವಯಸ್ಕ ಪ್ರೊಫೆಸರ್ ನ ಅಸಹಾಯಕತೆಯನ್ನು ಫ್ರೇಂ ಹಾಕಿ ನಿಲ್ಲಿಸುತ್ತದೆ. ಚಿತ್ರದ ನಿರ್ದೇಶನ ಹಂಸಲ್ ಮೆಹ್ತಾ, ಕಥೆ ಇಶಾನಿ ಬ್ಯಾನರ್ಜಿ, ಚಿತ್ರಕಥೆ ಅಪೂರ್ವ ಅಸ್ರಾಣಿ ಎಲ್ಲರೂ ತಮ್ಮತಮ್ಮ ಹಾಡು ಹಾಡುತ್ತಲೇ ಅದನ್ನು ಒಂದು ಸ್ವರಕ್ಕೆ ಅಳವಡಿಸಿದ ಗೀತೆ ಇದು. ಸಲಿಂಗ ಸಂಬಂಧದ ಬಗ್ಗೆ ಜಗತ್ತಿಗಿರುವ ಹೋಮೋಫೋಬಿಯಾ ಅದೆಂತಹುದು? ಅದು ಯೂನಿವರ್ಸಿಟಿಯ ರಾಜಕಾರಣವನ್ನೂ ಮೀರಿ ಹೇಗೆ ಈ ಪ್ರೊಫೆಸರ್ ರನ್ನು ಬೇಟೆಯಾಡುತ್ತದೆ ಎಂದು ಅನ್ವೇಷಿಸುತ್ತಲೇ ಅದು ನಮ್ಮ ನಮ್ಮ ಮನಸ್ಸುಗಳಲ್ಲಿ ನಮ್ಮ ನಮ್ಮ ನಂಬಿಕೆಗಳ ಮೂಲವನ್ನು ಪ್ರಶ್ನಿಸುತ್ತದೆ.

ಚಿತ್ರದಲ್ಲಿ ಒಂದು ದೃಶ್ಯದಲ್ಲಿ ದೀಪು ತಡರಾತ್ರಿ ಆಫೀಸಿನಲ್ಲಿರುವಾಗ ತನ್ನ ಮೇಲಧಿಕಾರಿಯನ್ನು ಚುಂಬಿಸುವ ಒಂದು ದೃಶ್ಯ ಬರುತ್ತದೆ. ಬಹುಶಃ ದೀಪು ಸಲಿಂಗಸಂಬಂಧ ಬಯಸುವವನಲ್ಲ, ಆ ಕಾರಣಕ್ಕೆ ಅವನು ಪ್ರೊಫೆಸರ್ ವಿಷಯಕ್ಕೆ ಅಷ್ಟು ಕಾಳಜಿ ತೆಗೆದುಕೊಳ್ಳುವುದಿಲ್ಲ ಎಂದು ಸೂಚಿಸಲು ಈ ದೃಶ್ಯ ಸೇರಿಸಿರಬೇಕು. ಏಕೆಂದರೆ ಇದಕ್ಕೆ ಪೂರಕವಾದ ಯಾವುದೇ ಎಳೆ ಕಥೆಯಲ್ಲಿಲ್ಲ. ಆದರೆ ಅದನ್ನು ಬಲವಂತವಾಗಿ ಹೇಳದೆ ಹಾಗೆ ಬಿಟ್ಟಿದ್ದರೆ ಈ ಚಿತ್ರ ಹೆಚ್ಚು ಸಂಕೀರ್ಣ ಅರ್ಥಗಳನ್ನು ಹೊಮ್ಮಿಸುತ್ತಿತ್ತು ಅನ್ನಿಸುತ್ತದೆ.

ವರದಿಗಾರ ಕವಿತೆಗಳ ಬಗ್ಗೆ ಮಾತನಾಡುತ್ತಾ ಆ ಶಬ್ಧಗಳು ತನಗೆ ಅರ್ಥವಾಗುವುದಿಲ್ಲ ಎಂದಾಗ ಆ ಪ್ರೊಫೆಸರ್ ಹೇಳುವ ಮಾತುಗಳು ಇನ್ನೂ ಅನುರಣಿಸುತ್ತಿವೆ. ’ಕವಿತೆ ಶಬ್ಧಗಳಲ್ಲಿರುವುದಿಲ್ಲ, ಶಬ್ಧಗಳ ನಡುವಿನ ಮೌನದಲ್ಲಿರುತ್ತದೆ, ನಿಲುಗಡೆಯಲ್ಲಿರುತ್ತದೆ. ಓದುವವರು ತಮ್ಮ ತಮ್ಮ ವಯಸ್ಸು, ಜೀವನಾನುಭವಗಳಿಗೆ ತಕ್ಕಂತೆ ಆ ಮೌನದಿಂದ ಕವಿತೆಗಳನ್ನು ಹೆಕ್ಕಿಕೊಳ್ಳುತ್ತಾರೆ….’ ಈ ಚಿತ್ರದಲ್ಲಿ ಮನೋಜ್ ನಟನೆ ಸಹ ಥೇಟ್ ಹಾಗೆಯೇ ಇದೆ.

17 Comments

 1. Sreekanth
  March 18, 2017
 2. Shyamala Madhav
  March 18, 2017
  • ಸಂಧ್ಯಾರಾಣಿ
   March 18, 2017
 3. N.Viswanatha
  March 18, 2017
 4. Chalam
  March 18, 2017
 5. ಅನು ಪಾವ೦ಜೆ
  March 17, 2017
 6. K.Nalla Tambi
  March 17, 2017
 7. Anonymous
  March 17, 2017
 8. Samyuktha
  March 17, 2017
 9. ಭಾರತಿ
  March 17, 2017

Add Comment

Leave a Reply