Quantcast

ಸೂರ್ಯ ಏಕಾಂಗಿಯಲ್ಲ..

ಶೀರ್ಷಿಕೆ ಇಲ್ಲದ ಕವನ

ಶ್ರೀವಿಭಾವನ

1
ನಿನ್ನೆ ರಾತ್ರಿ
ಟೆರೇಸ್‍ನ ಮೇಲೆ ಕುಳಿತು
ಆಗಸವನ್ನೊಮ್ಮೆ ದಿಟ್ಟಿಸಿದೆ
ನೆಲದ ಬೆಳಕ ಪ್ರತಿಫಲನಕ್ಕೆ
ಒಂದು ನಕ್ಷತ್ರ ಕೂಡಾ ಕಾಣಿಸಲಿಲ್ಲ.
ಮಂದ ಬೆಳಕಿನ ಛಾಯೆಯಲ್ಲಿ
ಆಕಾಶ ಕರಗಿತ್ತು, ಗ್ರಹಣದ ಛಾಯೆ

2
ಕಣ್ಣು ಹಾಯಿಸಿದಷ್ಟು ದೂರ
ಬರೀ ಶೂನ್ಯತೆ
ಇಳೆಯ ಬೆಳಕನ್ನು ಮೀರುವ
ಹಂಬಲದ ಒಂದಾದರೂ
ನಕ್ಷತ್ರವಿರಬಹುದು ಎಂಬ ನಿರೀಕ್ಷೆ
ಸೂರ್ಯ ಏಕಾಂಗಿಯಲ್ಲ ಎಂದು
ಯಾವತ್ತೋ ಓದಿದ ನೆನಪು

3

ಕತ್ತಲ ಮಧ್ಯೆ ನಾವೆಲ್ಲರೂ
ಕಳುಹಿಸಿದ ಒಂದಾದರೂ ಉಪಗ್ರಹ
ಬೆಳಕು ಸೂಸಬಹುದೆಂದು ಕಾದೆ
ಧೂಳಿನ ಪದರದ ನಡುವೆ
ಕಣ್ಣಿಗೆ ಪೊರೆಕಟ್ಟಿದ ಅನುಭವ
ಜಗತ್ತು ನಿದ್ದೆಗೆ ಹೊರಳಿದ ಬಳಿಕ
ಮೌನಕ್ಕೆ ವಿಷಾಧ ಭಾವದ ನಂಟು
4
ದೂರದಲ್ಲಿ ಎಲ್ಲೋ ಕಾಳ್ಗಿಚ್ಚು
ಗಾಳಿಯಲ್ಲಿ ಬರೀ ಅಸಂಖ್ಯಾತ
ಪ್ರಾಣಿಗಳ ರೋಧನದ ಸದ್ದು
ಬರಕ್ಕೆ ಒಡೆದ ನೆಲದ ಅಂಚುಗಳಲ್ಲಿ
ಕಣ್ಣೀರಿನ ಒರತೆ
ಬೆಳಕು, ಗಾಳಿ, ನೀರು
ಮುಗ್ದತೆ ಕಳೆದುಕೊಂಡ ಕ್ಷಣ

Add Comment

Leave a Reply