Quantcast

ಸಂಸಾರ ಅನ್ನದ ಎದೆ ಒಳಗಿಟ್ಕಂಡು ಕಾಯ್ಕ ಬೇಕು..

ಸಣ್ಣಮ್ಮಿ ಅನ್ನೋ ಹರೆದ ಹುಡ್ಗಿ ಈಗಿನ್ನೂ ಮೈ ಬಣ್ಣ ತಿರೊಗೊ ಪ್ರಾಯಾದಾಗೆ ಆಗಲೆ ಊರಿನ ವರಸೆ ಅಂಗೆ ಒಂದ ಮಗಿನ, ತಾಯೂ ಆಗೋಗಿದ್ಲು. ಕಂಕಳಲ್ಲಿ ಎಳೆ ಕೂಸ ಹೊತ್ಕಂಡು, ತಲೆ ಮೇಲೆ ಆಕ್ಕಾಶನೆ ಕಳಚ್ಕೊಂಡು ಬಿದ್ದಂಗಿರೋಳು. ನೋಡ್ತ.. ನೋಡ್ತಲೇ ದೇವರ ಮುಂದೆ ಉರಿಯೋ ಹಣತೆ ಹಂಗಿದ್ದ ಅವಳ ಕಣ್ಣು ಅನ್ನವು, ಬರ್ತಾ… ಬರ್ತಾ ಕಾವಳ ಕವದಿರೊ ನಸುಕನಂಗೆ ಮಂಕಾ…ಗೋಗಿದ್ದು.

ಗಂಡನ ಪಕ್ಕ ಮಲಗದಾಗ, ಇದು ನನ್ನ ಬದುಕು! ಕಂಡೋರ ಮುಂದೆ ನಗೆಪಾಟ್ಲಿಗೆ ಇದ ಬೀಳಕ್ಕೆ ಬುಡ್ಬಾರ್ದು ಅನ್ಸದು. ಆದ್ರೆ, ಆಗ್ಲೆ ಊರು ಅನ್ನೋದು ದೆವ್ವ ಮೆಟ್ಕಂಡಾಗ….ಗಾಳಿ ಬುಡ್ಸತಾರಲ್ಲಾ…. ಹಂಗಾಡತಾ… ಇತ್ತು. ಇದಕ್ಕೆ ಕಾರಣ ಆದ ಗಂಡ ಅನ್ನೋನು, ನಾಗಿ ಇಟ್ಕಂಡವನೆ ಅನ್ನೋದ ಅವನು ಬಿಲೇಡಲ್ಲಿ ಕುಯ್ಕತಕ್ಕಬಂದು ತೋರ್ಸಿದ ಅವಳ ತಲೆಕೂದ್ಲು ಅನ್ನೋದು ಸಾಬೀತು ಮಾಡಾಕಿತ್ತು.

ಪಂಥ ಕಟ್ದೋರು ಬೀದೀಲೆ ಉರುಳಾಕಿ ಇವ್ನ, ಸಿಗಹಾಕ್ಸಿದ್ರು. ಇವನ ನೆಮ್ಮದಿ ಅನ್ನದು ಊರ ಬೀದ್ ಬೀದಿಲೂ ಈಗ ಚೆಲ್ಲಾಡೋಗಿತ್ತು. ಅವನು ಈಗ ಕೇವಲ ಹೆಂಡತಿ ಹಕ್ಕಾಗಿ ತೆಪ್ಪಗಾಗಿ ಹೋಗಿದ್ದ. ಆದ್ರೆ, ಅವನ ಹೆಂಡ್ತಿ ಸಣ್ಣಮ್ಮಿಯ ಕಣ್ಣ ವಳಗೆ ಗಾಳಿಲಿ ತೇಲಾಡೊ ಅವನ ಸಣ್ಣ ಆಳ್ತನ ಅನ್ನೋದು, ಭೂತಾಕ್ಕರದಂಗೆ ಬೆಳ್ದು…. ಕಳ್ಳ ನಾಗನ ಹೆಂಡ್ತಿ ಕೈಗಾಕಂಡಿರೊ ಬೆಲೆ ಕಟ್ಟೋ ಜೀವ ಆಗೋಗಿತ್ತು. ಈಗ ಅವಳ ಮುಂದೆ ಇದ್ದದ್ದು ಇಷ್ಟೆಯಾ!

ಆಡ್ಕಂದು ನಗಾಡೊ ಜನಿನ ಮುಂದೆ ಅವನನ್ನ ನಾಗಿತವಳಿಂದ ತನ್ನತಾಕೆ ವಾಪಾಸು ಕರ್ಕಂಬರಬೇಕಾಗಿತ್ತು. ಅಷ್ಟೆಯ! ಆ ಎಡಬಿಡಂಗಿ ವಯಸಿನ ಛಲ ಅನ್ನೋದು ದೊಡ್ಡನ್ನ ಪಂಥಕ್ಕೆ ಕಟ್ಟಹಾಕಿ ಅವನು, ತನ್ನ ವಿವೇಚನೇನ ಕಳಕಂಡಂಗೆ, ಜಿದ್ದಿಗೆ ಬಿದ್ದ ಇವ್ಳ ವಿವೇಕನೂವೆ, ಇವಳ ಕಣ್ಣನ್ನೆ ಮರೆಮಾಡಿ, ದಿನಬೆಳಗಾದ್ರೆ ಅವಮಾನ ಅನ್ನ ಮಾಯದಕೋಲು…ಮನಸನ್ನ ಘಾಸಿ ಮಾಡಾಕ್ತಿತ್ತು. ದೊಡ್ಡ ಅತ್ಲಾಗೆ ಅಲ್ಲೂ ಓಗ್ನಾರ್ದೆ..ಇಲ್ಲೂ ನೆಟ್ಟಗೆ ಮುಂದರಿನಾರ್ದೆ… ಮಾಡಿದ ದುಡುಕಿನ ಕೆಲ್ಸಕ್ಕೆ ಕುಗ್ಗೋಗಿ, ಹ್ಯಾಪ ಮೋರೆ ಹಾಕ್ಕೊಂಡು ಓಡಾಡನು ಕುರಿ ಹಂಗೆ.

ಮಾತೆತ್ತಿದ್ರೆ ಸಣ್ಣಮ್ಮಿಗೆ ಅವಳ ಅಪ್ಪಾವ್ವನ ಬಾಳಾಟ ಅನ್ನೋದೆ ನೆಪ್ಪಾಗೋದು. ಕುಳ್ಳೀರನ ಸಂಸಾರ ಅಂದ್ರೆ ಸದ್ದಿಲ್ದೆ ಸಣ್ಣ ನಾದದಲ್ಲಿ ಹರಿಯೊ ತಿಳಿನೀರಂಗಿತ್ತು. ಇಬ್ರೂ ಮೈ ತುಂಬ ದುಡಿಮೆ ಮಾಡ್ಕಂಬಂದು, ಕಣ್ಣತುಂಬ ಇದ್ದೊಬ್ಬ ಮಗಳ ತಬ್ಬಕೊಂಡು ನಿದ್ದೆ ಮಾಡೋರು. ಊರಲ್ಲಿ ಒಬ್ರುವೆ ತುಟಿಪಿಟಕನ್ನಂಗೆ ಇರ್ನಿಲ್ಲ. ಹಂಗಿತ್ತು ಅವ್ರ ಸಂಸಾರ! ಈಗ ಮಗಳ ಕಾಲಕ್ಕೆ ಹಿಂಗಾಯ್ತಲ್ಲ! ಅಂತ ಒಳಗೇ ಕೊರಗೂದ್ರುವೆ, ಅವ್ರೂ ಸೈತ ಅವಳಿಗೆ ಧೈರ್ಯ ಹೇಳರು.

“ಯಾರ್ ಮನೆಲೂ ನಡಿಬಾರದ್ದೇನು ನಡ್ದದ ಮಗ, ಪರಪಂಚ ಅಂದ ಮೇಕೆ ಇದ್ದದ್ದೆ ಕನ ಕೂಸೆ ಇದು. ಆಗೋಗಿರ ತ್ತೆಪ್ಪ ಹೊಟ್ಟಿಗೆ ಹಾಕೊಂಡು ಸುಮ್ಕಿರವ್ವ, ಹಲ್ಲ ಕಚ್ಕಂದು ಯಾವಾಗ್ಲೂ ಸಂಸಾರ ಮಾಡ್ಬೇಕು ಕಣೆ. ನಮ್ಮೂರಿನ ಪಾಪ ನನಮಕ್ಳು ಅವನನ್ನ ಹುಚ್ಚೆಬ್ಬಸವ್ರೆ. ಅವನೂ ಹುಂಡೆದ್ದು ದುಡುಕುಬುಟ್ಟವ್ನೆ. ಎಳೆ ಬತ್ತಿಯಂಗಿರೊ ಮಗಿನ್ ಮುಖ ನೋಡ್ಕಂದು, ಕಾಲ… ಹಾಕ್ಬೇಕು ಕನೆ ಇಬ್ಬರೂವೆ”.

ಎಷ್ಟೆ ನಯವಾಗಿ ಅವರು ತಿಳಿ ಹೇಳೂದ್ರುವೆ, ಇವಳ ಒಳಗಿನ ಕುದಿತ ಅನ್ನದು ತಪ್ನಿಲ್ಲ. ದೊಡ್ಡ, ದುಡುಕಿದ ತಪ್ಪಿಗೆ ಮಲಗೋ ಮುಂದೆ ಒಂದಿನ ಸಣ್ಣಮ್ಮಿ ಕಾಲಿಗೂ ಬಿದ್ಬುಟ್ಟ.

“ಸಂಸಾರ ಅಂದ ಮೇಲೆ ಜೋಡೆತ್ತಿನ ಗಾಡಿದ್ದಂಗೆ, ತೆಪ್ಪಾತು ಕಣಮ್ಮಿ, ಇನ್ನ ಬುಟ್ಬುಡು ಅದ. ಮಖ ಇಳೆಬುಟ್ಕಂಡು ಇರ್ಬೇಡ ನೀನು ಇನ್ಮುಂದೇಯ…ಇನ್ನ, ಈ ಮಗಿನಾಣೆಗೂ ಅವ್ಳ ಮಗ್ಲಿಗೆ ಹೋಗದಿಲ್ಲ ನಾನು. ಮೊದ್ಲಂಗಿರನ ಇಬ್ರೂವೆ.” ಅಂತ ಅದರ ತಲೆ ಮೇಲೆ ಆಣೆ ಇಟ್ಟು ಗೋಗರ್ದು…. ಗೊಟ್ರಗರ್ದ್ರೂವೆ, ಅವಳು ತಲೆ ಮೇಲೆ ಹೊತ್ತ ಕೈಯ ಇಳಿಸ್ನಿಲ್ಲ. ಮಾತ್ನೂ…. ಆಡ್ನಿಲ್ಲ.

ಮಗಿಗೆ ಮೂರ್ವರ್ಶ ಆತಾ ಬಂತು. ಕುಳ್ಳೀರಂಗೆ ಮಗಳು ಸಣ್ಣಮ್ಮಿಗೆ ಒಂದು ಹೆಣ್ಮಗ ಆಗ್ಲಿ ಅಂತಾಸೆ. ಮನಿಗೊಂದು ಹೆಣ್ಮಗ ಅಂತ ಇದ್ರೆ ತಲೆಕೆರದು ಹೂ ಮುಡ್ಸಕ್ಕೆ ಅಂತ್ಲಾರೂವೆ ಮಗ್ಳು, ಹಿತ್ಲು ಮನೆ ಬೆಂಟಾಡ್ಕಂಡು ಇರ್ತಾಳೇ. ನಂಜಬಟ್ಲು, ಕಾಚೆಕಣಗಲು, ಪತ್ರೆ, ಸೂಜ ಮಲ್ಗೆ ಅಂಟು, ದುಂಡು ಮಲ್ಗೆ ಅಂಬು, ಸೂಜ ಬಲ್ದಾರೆ, ತಟ್ಟೆ ಬಲ್ಡಾರೆ ಗೆಡ್ಡೆ ತಂದು ನೆಲದಾಗೆ ಊ…ಣಿ, ಶ್ಯಾವಂತಿಗೆ ಅಂಟ ನಮ್ಮ ಹಿತ್ಲಲ್ಲು ಬೆಳಿಯಾನ ಅನ್ಕಂದು, ಮಗಳ ತಲೆ ಮೇಲೆ ಹೂ ಮುಡ್ಸಾ ಆಸೆಗಾರೂವೆ ಆಸ್ಯಾಗಿ ಓಡಾಡಳೇನೋ? ಅನ್ಕಂದು ಅವ್ರಿವ್ರ ಮನಿಗೆ ಅಡ್ಡಾಡಕೊಂಡಾದ್ರೂ… ಗೆಲವಾದಾಳೇನೊ? ಅಂತ ಅನ್ಸದು.

ಅವರವ್ವಂತು ಮಗಳ ಬೆನ್ನಿಗೆ ಕಣ್ ಇಟ್ಕೊಂಡು ಅಂಗೆ… ಪಾರಾ ಕಾಯೋಳು. ಇಂಗೆ ಬಾಳಾಟ ಅನ್ನೋ…ದು ಗುಡುಸ್ಲುತಾವಲೇ ಇರೊ ಬಾವಿಕಟ್ಟೆ ಸುತ್ತಾಲೂ… ಕಾಲಿಲ್ದಿರೊ ಮಗಿನಂಗೆ ತೆವಿತಿತ್ತು.

ಅವರವ್ವ ಒಂಜಿನ ಕಾಯ್ಲೆ ಮಲುಗಬುಟ್ಲು. ಇದ್ದಕ್ಕಿದ್ದಂಗೆ ಅವತ್ತು ಮಗಳು ಸಣ್ಣಮ್ಮಿಗೆ ಏನನಿಸ್ತೋ?ಏನೋ? ಮಗಾನ ಮನೇಲಿ ಬುಟ್ಟು “ನಾನೇ ಗದ್ದೆ ನಟ್ಟಿಗೆ ಹೋತೀನಿ ಕನವ್ವಾ, ನೀನು ಮಗ ನೋಡ್ಕಾ” ಅಂದು ಗದ್ದಿಗೆ ಹೊರಟನಿಂತ ಮಗಳ ಕಂಡಿದ್ದೆ…. ತಡ, ಅವರವ್ವಂಗೆ ಚಳಿ ಜ್ವರೆಲ್ಲ ಬುಟ್ಟೋದ್ವು. ಅದರೂವೆ ತೋರುಸ್ಕಳ್ದಂಗೆ ಇದುವರ್ಗೂ ಎದೆಮೇಲೆ ಕುಂತಿದ್ದ ಉಸ್ರ ನಿಸೂರಾಗಿ ಬುಟ್ಟಿದ್ದೆಯ…. ಅವ್ರ ಮನೆ ದೇವ್ರು ಉಡಸ್ಲಮ್ಮಂಗೆ ಅಲ್ಲಿಂದ್ಲೇ, ಕೈಯ್ಯ ಮುಗುದ್ಲು.

ಕಟ್ಟಿಟ್ಟಿದ್ದ ಮಲ್ಲಿಗೆ ಹೂವ ತಗಂದು ತಲಿಗೆ ಹೇರಪಿನ್ದಲ್ಲಿ ಸಿಗ್ಸಿ, ಹೆಬ್ಬಾವಂಗೆ ಇದ್ದ ಅವ್ಳ ಕೂದ್ಲುದ್ದಕ್ಕು ಬಿಟ್ಕಂದು, ಕೂದ್ಲು ತುದಿಗೆ ಕೆಂಪನೆ ಟೇಪೆಣೆದು ಕೆಳಗಡೆ ಹೂವುನಂಗೆ ಗೊಂಡೆ ಕುಚ್ಚ ಹಾಕಿ, ಜಡೆ ಹಿಂದಕ್ಕೆ ಎಸ್ಕಂದ್ಲು. ವ್ಯಾಸಲೆಣ್ಣೆ ಹಚ್ಚಿ, ಅದರ ಮೇಲೆ ಪುಡಿ ಕುಕ್ಕುಮವ ಹಣೆ ಮೇಲೆ ತಿದ್ದದ ನೋಡ್ಕಂದು ಅವಳವ್ವಂಗೆ, ದಿನಾಲೂ ಮೂಡ್ಲದಿಕ್ಕನಲ್ಲಿ ಹುಟ್ಟೋ ಸೂರ್ಯದೇವನು ಮನೆ ವಳಗಡೇಲೆ ಮೂಡಿ ಆಗ್ತಾನೆ…. ಹುಟ್ಟ್ದಂಗಾಗೋಯ್ತು. ಮಗಳು ಮುಖ ನೋಡ್ಕಲ್ಲಿ ಅಂಥಾಲೇ, ಗೋಡೆ ಮೈಗೆ ಅಂಟ್ಸಿ ಗಾರೆಗಚ್ಚಲ್ಲಿ ಹೂತಿದ್ದ, ಮನೆಕತ್ಲೊಳಗೆ ಮರೆಯಾಗಿದ್ದ ಅಂಗೈ ಅಗಲಕ್ಕಿದ್ದ ಕನ್ನಡಿ ಚೂರುವೆ, ಸೂರಿನ ಕೈಹೆಂಚಿನ ಸಂದಿಲಿ ಬಿದ್ದ ಬಿಸ್ಲು ಕೋಲಿಗೆ, ಒಂದೇ ಸಲಕ್ಕೆ ಪಳಾರ್ ಅಂತು.

“ತಾಯಿ ನನ್ನವ್ವಾ, ನನ್ನ ಮಗಿನ್ ಸಂಸಾರಾ ಹಿಂಗೆ ನೆಗ್ನೆಗ್ತಿದ್ರೆ, ನಿಂಗೆ ಮುಂದ್ಲೆ ವಾರ್ದಲ್ಲಿ ಕೋಳಿ ಒಪ್ಪುಸ್ತಿನಿ ಕಣೆ” ಅಂಥ ಕೈಕಾಲಮುಕ ತೋಳ್ಕಂಡಿದ್ದೆ, ಆ ತಾಯಿಗೆ ಮುಡುಪ ಕಟ್ಟಿಟ್ಲು. ಗದ್ದೇಲಿ ಸಸಿ ಕಂತೆಯ ಅತ್ಲಾಗಿತ್ಲಾಗೆ ನಾಟಿಹಾಕೋರ್ಗೆ ಸಮನಾಗಿ ಎಸಕೊಂದು ಹೋತಿದ್ದ ದೊಡ್ಡಂಗೆ, ಗದ್ದೆ ಕೆಲ್ಸಕ್ಕೆ ಅಂತ ಬಂದ ಹೆಂಡ್ತಿನ ನೋಡುದೇಟ್ಗೆ, ಮಿಂಚು ಬಂದು ಕಣ್ಣ ಕತ್ಲು ಹಿಡಸದಂಗೆ ಆದದ್ದೆ ತೆಗ, ಮತ್ತೆ ಕಣ್ಣ ಅಳ್ಳಸ್ಕಂದು ನೋಡದ. ಅವ್ಳು ದಿಟವಾಗ್ಲೂ ಗದ್ದಿಗೇ ಇಳಿತಿದ್ಲು. ಆಗ…ಮಳೆ ಉಬ್ರಾಸಾಡ್ತಿತ್ತು.

ಹೆಂಗಸ್ರು ಗೊರಬ ತಲೆ ಮೇಲೆ ಹಾಕ್ಕಂಡು ಮೇಲೆತ್ತಿಕಟ್ಟಿರೊ ಸೀರೆ ಸೆರಗಲ್ಲಿ ನಳ್ಳಿಕಾಯಿ ತುಂಬಕೊಂಡ ದೆಸಿಂದ ಎಲ್ರೂವೆ, ಬಸ್ರು ಹೆಂಗಸ್ರಂಗೆ ಕಾಣಸ್ತಿರೋರು. ಕಟ್ಟಿರೊ ಗದ್ದೆ ನೀರ ವಳಗೆ ಓಲಾಡ್ಕಂಡು, ಹಣ್ಣಣ್ಣು ಮುದುಕ್ರಂಗೆ ಮೆಲ್ಲಗೆ ಕಾಲಾಡಸ್ಕಂಡು, ಗದ್ದೆ ದರಿಗೆ ಏರ ಹೋಗ್ತಿದ್ದ ನಳ್ಳಿ ಕಾಯ್ಗಳು ಅನ್ನವು, ನೀರೊಳಗಡೆ ಎಂಗಸ್ರ ಕಾಲಿಗೆ ಸಿಕ್ಕಿ ಮುಲಮುಲ ಅಂತ ಕಚ್ಕತಿದ್ದಂಗೆ, ಅವನ್ನ ಹಿಡದಿದ್ದೆಯ ಕೊಂಬ ಮುರ್ದು ಮುರ್ದು, ಸೊಂಟದ ಬಾಳೆಕಾಯ ವಳಗೆ ಸೇರುಸ್ತಲೆ ಎಂಗಸ್ರು ಅಂಗೇ….ಯ ಗೆಲುವಾದ್ರು.

ಮಳೆಗಾಳಿ ತಿಂಗ್ಳಲ್ಲಿ ಬೆಳ್ಗಿಂದಲೂವೆ ಸಾಯಂಕಾಲದವರಗೂ… ನೀರೊಳ್ಗೆ ನಿಂತು ನಡ ಬಗ್ಸಿ ಕೆಲ್ಸ ಮಾಡ್ದೋರ್ಗೆ, ಘಮಗುಡೊ ನಳ್ಳಿ ಸಾರಲ್ಲಿ ಬಾನ ಉಂಡು ಮಲಗಿದ್ರೆ…. ಆಹಾ!…..ಸೀತ ಅನ್ನೋದು ಕಿತ್ಕಂದು ಹೋಗೋದು. ದೇಹ ಅನ್ನೋದು ಗರಿಗೆದರಿ ಬೆಚ್ಚಗಿರೋದು. ಆ ಘಮನವ ನೆನದುದ್ದೇ.. ತಡ! ನೇಜಿ ನೇಯೊ…. ಪದ, ಸೋಬಾನೆ ಪದ… ಅನ್ನೋವು ಹಕ್ಕಿಸಾಲಿನಂಗೆ ಗದ್ದೆ ಮೇಲೆ ಹರಿತಾ, ಗಾಳೀಲಿ ಹಾರತಾ, ಸಾಲಾಗಿ ನೆಟ್ಟಿರೊ ಬತ್ತದ ಸಸಿಯಂಗೆ ಕೇಳ್ದೊರ ಮನಸ್ನಲ್ಲಿ ಬೇರೊಡ್ದು.

ಸೋ… ಅನ್ನೋ ಪದ ಶುರು ಹಚ್ಚಿದ ಗೌಡಗಳ ಪೈಕಿ ಗಂಗಕ್ಕನ ಪಕ್ಕದ ನುಂಬಲ್ಲೇ ಸುವ್ವಿ…. ಅಂತಾ ರಾಗಾ ಎಳೆಯೊ ಆಸೆ ಇಟ್ಕಂಡು, ಸಣ್ಣಮ್ಮಿ ಬಂದು ಸಾಲು ಹಿಡ್ದು ಸಸಿ ನೆಡ್ತಾ ಹೋದ್ಲು.

“ಅಯ್ಯೋ ಗಂಗಕ್ಕಾರ ದನಿ ಅಂದ್ರೆ ನಮ್ಮ ದೊಡ್ಡವ್ವಣ್ಣಿ ಲಕ್ಕವ್ವ ಇದಾಳಲ್ಲ ಅವಳ ದನಿಗಿಂತ್ಲೂ ಚೆನ್ನಾಗದಲ್ಲ!” ಅಂದಕಂಡ್ಲು. ಎಲ್ಲದಕ್ಕಿಂತ ಅವಳ ಅರಿವಿಗೇ ಬರ್ದಂಗೆ ಅವಳ ಎದೆಯೊಳಗೆ ಕಲ್ಲಂಗೆ ಕುಂತಿದ್ದ ಚಿಂತೆ ಅನ್ನೋದು ಈಗ ನಿಸೂರಾಗಿ ಈ ಪದ ಅನ್ನೋ ಮಾಯಕಾರಿ ರಾಗಗಳ ದಿರಿಸ ಹಾಕ್ಕಂಡು ಬಂದೇಟ್ಗೆ, ಚೂರು ಚೂರಾಗಿ ನುರ್ಜಾಗಿ ನುರುದು ಮನಸನ್ನೇ ನಾದಿ ಮಿದ ಮಾಡ್ಬುಟ್ವು…

ಇಂಗೆ ಆಸ್ಯಾಗಿ, ಇವಳೂ…. ರಾಗ ಕೂಡಸದೇಟ್ಗೆ ತಗ, ಗಂಗಕ್ಕ

“ಅಕ್ಕಳೇ! ಸಣ್ಣಮ್ಮಿ ರಾಗಾ ಕಂಡ್ರೇನೆ. ಅಂಗೆ ಬಿದರೆ ಒಳಗಿನ ಚದುರೆ ಬಂದಂಗೀತೆ” ಅಂತ ಬಿರುದ ಕೊಟ್ಟೇಬಿಟ್ಲು. ಇವಳಂತೂ ಉಸ್ರುಬುರ್ಡೆ ಅಂಗೆ…ಬುರಬುರನೆ ಊದಿ ಉಬ್ಬೋದ್ಲು. ಅಷ್ಟೊತ್ತಿಗೆ ಗೌಡಮ್ಮರ ಮನೆ ಬಿಸ್ಬಿಸಿ ಊಟದ ಕುಕ್ಕೆ ದೂರದಲ್ಲಿ, ಗದ್ದೆ ಏರಿ ಮೇಲೆ ವಾಲಾಡ್ಕಂಡು ಬರದು ಕಾಣುಸ್ತು. ಹತ್ತರಕ್ಕೆ ಬಂದ ಕುಕ್ಕೆನ ಇವಳೋಗಿ ಇಳಕ್ಕತ್ತಿದ್ದಂಗೆಯ ರಂಗವ್ವಾರು ಹುಸ್ನಗೆ ನೆಗ್ತಾ

“ಮಗವಾ ನಿಮ್ಮವ್ವನ್ನ ಮನೇಲಿ ಬಿಟ್ಬಂದೆನಗೀ. ಒಳ್ಳೆದಾತು ಬುಡು. ಅವರಿವರು ಸಾವ್ರ ಹೇಳ್ಲಿ. ಸಂಸಾರ ಅನ್ನದ ಎದೆ ಒಳಗಿಟ್ಕಂಡು ಕಾಯ್ಕ ಬೇಕು ಕಣೆ ಹುಡ್ಗಿ. ನಿನ ಗಂಡ ದೊಡ್ಡನ್ನ ನೋಡು. ನಿಮ್ಮಪ್ಪವ್ವನ್ನ ನೋಡು. ನಿನ್ನ ಮಗ ನೋಡ್ಕಂಡು…. ಬಾಳ್ಮೆ ಮಾಡು. ಅಂದವರು… ಆಡ್ದವರು…. ಬತ್ತಾರೆನೆ? ನಮ್ಮನೆ ನಡ ಹಿಡಿಯಾಕೆ. ತಾಪತ್ರೆಯ ಅನ್ನದು.. ಮನುಶಂಗೆ ಬರದಲೆ, ಮರಕ್ಕೆ ಬತ್ತಿತೇನೆ? ಹೆಡ್ಡಿ! ಓಗು ಈಗ, ಮುತ್ತುಗದೆಲೆ ಕುಯ್ಕಂಬರೋಗು ಏರಿ ಮೇಲೆ ಹತ್ತಿ.” ಅಂತ ಸಣ್ಣಗೆ ಗದರುದ್ರು.

ಅವರ ಮಾತ ಕೇಳದ ಮೇಲೆ… ಇವಳೂ ಮುನಸಕಳ್ದಲೇ ತಕ, ಅಂಗೇ…. ಗೆಲುವಾದ್ಲು. ಅವರ ಮಾತು ಅಂದ್ರೆ ಅವಳಗೆ ಮೊದಲಿಂದ್ಲೂವೆ ಒಂಥರ ಆಸೆ. ಅವರ ನಗಾಡುದ್ರಂತೂ, ಹಾಲಕ್ಕಿ ಗಂಟಲಲ್ಲಿ ಗಳಗಳ ಅಂದಂಗಾಗೋದು.

ಇವಳು ಪರ್ರಪರ್ರನೆ ಮುತ್ತುಗದ ಎಲೆ ಕುಯ್ಯತಿದ್ದಂಗೆ, ಆ ಸದ್ದಿಗೆ ಸಾಲಮಕನಾಗೆ ನೀರ ಮೇಲೆ ತೇಲ್ತಿದ್ದ ಗುಳುಮುಳಗನ ಹಕ್ಕಿ, ಅಗಾ… “ಚಿಕ್ ಚಿಕ್, ಚಿಕ್ಚಿಕ್” ಅನ್ನೊ ಸದ್ದ ಮಾಡ್ಕಂಡು…. ಗುಳು..ಗುಳು..ಗುಳುಂ, ಅಂತ ನೀರಲ್ಲಿ ಒಂದೇಸಲ ಮುಳುಗಿದ್ವು. ಅವಳ ಹಗುರಾಗಿರೊ ಮನಸಲ್ಲಿ ಮತ್ತೆ ಚಿಗೊರೊಡೆಯೊ ಆಸೆ ಹಂಗೆ, ಮುಳುಗಿದ್ದ ಕಪ್ಪನೆ ಹಕ್ಕಿಸಾಲು ಅನ್ನೋವು ಸಾಲಮಕನಾಗೆ ಕೆರೆಯ ಆ ಕಡೆ ತೂಬಿನ್ನುದ್ದು…ಕ್ಲು ಮೇಲೆದ್ದು, ಇವಳ ಕಡೆ ಅಂಡ ಹಾಕ್ಕಂಡು ಕತ್ತ ನೆಟ್ಟಗೆ ಮಾಡ್ಕಂಡು ಗಾಳಿ ಹಾರಸೋ ನೀರಲೆ ಮೇಲೆ ತೇಲ್ಕಂಡು ಮೋಜು ಮಾಡ್ಕಂಡು, ಹೋಗ್ತಿದ್ವು.

ಇವ್ಳು ಗದ್ದೆ ಇಳಾಲ ಇಳ್ದು, ಗದ್ದೆ ಬದಿನ ಮೇಲೆ ಬರೊವಾಗ ಗದ್ದೆ ಕಾವ್ಲಿಲಿ ಹರಿಯೊ ನೀರಲ್ಲಿ ಕೈಕಾಲ ತೊಳಿತಿದ್ದ ದೊಡ್ಡ, ತಲೆಯೆತ್ತಿ ಇವಳನ್ನ ನೋಡ್ದ. ಹಣೆಲಿ ಕೆಂಪನೆ ಕುಂಕುಮ ಕಲಸಕಂಡಿತ್ತು. ಆದ್ರೂವೆ ಕಣ್ಣು ಅನ್ನೋವು ಅಂಗೇಯ, ಹೊಳಪಾಗಿದ್ವು. ಹೊಸ ಮುಖ ನೋಡೋವಂಗೆ ಇವಳೂ ನೋಡುದ್ಲು. ಚಿಲ್ಲನೆ, ಒಬ್ಬರಿಗೊಬ್ಬರಿಗೆ ಅಕ್ಕರೆ ಅಂಬೋದು ಉಕ್ಕಿ ಬಂದು ಇಬ್ರೂವೆ, ಪಾಪ! ನವದು ಹೋಗವ್ರೆ ಅಂತವ ಮನಸಲ್ಲಿ ಅಂದಕಂಡ್ರು.

ಹಿಂಗೆ ಗದ್ದೆ ನಾಟಿಗೆ ಸಣ್ಣಮ್ಮಿ ಬರೋಕೆ ಪಾಠ ಆದ್ಲು. ಗೌಡಮ್ಮನಿಂದ ಹಿಡ್ದು ಅವಳ ಅಪ್ಪ ಅವ್ವ ಎಲ್ರುವೆ ಸಮಾಧಾನಾದ್ರು. ದೊಡ್ಡಂತೂ ಇನ್ನಂದಪ ಮದ್ವೆ ಆಗಿರೊ ಮದವಣನಂಗೆ ಮೈ ಕೂಡ್ಕಂದ. ಈಗೊಸಿ ಊರವ್ರೆದ್ರುಗೆ ತಲೆ ಎತ್ಕಂಡು ಓಡಾಡಕ್ಕೆ ಸುರು ಮಾಡದ. ನನ್ನ ಜೊತೆಲಿ ಒಂದು ಜೀವ ಇದೆ ಅನ್ನೋದೆ ಒಂದು ಸಮಾಧಾನ ಅಲ್ವಾ? ಮತ್ತೆ! ಏನ್ ಸುಮ್ನೇನಾ… ಇಬ್ಬರೂ ಇನ್ನೇನು ಉಡುಸ್ಲಮ್ಮಂಗೆ ಕೋಳಿ ಒಪ್ಸುದ್ರು. ಮಗವ ಭುಜದ ಮೇಲೆ ಕೂರಸ್ಕಂಡು ಜೊತೇಲಿ… ಸಂತಿಗೂ ಹೋಗಬಂದ್ರು.

ಇಂಗೆ, ಊರು ಅನ್ನದು ಎಲ್ಲನು ಮರ್ತುಕಂದು ಬ್ಯಾಸಿಗೆಲಿ ಒಣಗಿ ವಾಟೆಗರದು, ಮರದ ನೆರಳಲ್ಲಿ ವಸಿ ದಣಿವಾರ್ಸಕಳಕ್ಕೆ ಅಂತ ಕುಂತಿತ್ತು. ಟ್ರಿಣ್ ಟ್ರಿಣ್ ಅನ್ನೋ ಸೈಕಲ್ಲು ಅನ್ನೋದರ ಬೆಲ್ಲಿನ ಶಬುದ ಆಗ ಕಿವಿಗೆ ಬಂತು. ಎಲ್ಲಾರ ಕಣ್ಣು ಕಿವಿ ಅನ್ನೋವು ಚುರಕಾದು. ಕಡ್ಡಿ ಐಸ್ಕ್ಯಾಂಡಿ ಅನ್ನೊದು ತಣ್ಣಗಿರೊದು. ನೆಕ್ಕುದ್ರೆ ಸೀಸೀಗಿರೊದು. ಅದು ಬಣ್ಣಬಣ್ಣವ ನಾಲಿಗೆ ಮೇಲೆ ಉಳಿಸಿ ನೀರಾಗೊ ಅಂಥದ್ದು. ಮಳೆ ಜತೆಲಿ ಬೀಳೋ ಆಣಿಕಲ್ಲಿನಂಗಿರೊ ನೀರಕಲ್ಲಿನ ಚೂರು ತುಂಬಿರೊ ಐಸ್ ಕ್ಯಾಂಡಿ ಡಬ್ಬ… ಸೈಕಲ್ಲಿನ ಮೇಲೆ ಹೊಸದಾಗಿ ಆಗ್ತಾನೆ ಬಂದು ಊರ ಕಂಡಿತ್ತು.

ಬಿಸ್ಲುಮಳೆ ಬೀಳೊವಾಗ ಆಕಾಸದಾಗೆ, ಆ ತುದಿಂದ್ಲೂ ಈ ತುದಿವರ್ಗೂ ಬಗ್ಗಿ ಬಿದ್ದಿರೊ ಕಾಮದೇವ್ರ ಬಿಲ್ಲಿಗಿಂತ್ಲೂ ಜೋರಾಗಿರದು ಅದರ ಬಣ್ಣ. ಅದರ ಬಣ್ಣಕೀಟು ಯಾಸ್ ಹೊಡ್ಯಾ…ಅಂತ ದೊಡ್ಡೋರು ಬಯ್ಕಳ ಅಂಗೆ…. ಮಕ್ಳ ಕಣ್ಣಿಗೆ ಮಿಂಚು ಹೊಡ್ಯೋದು.

“ಕಾಗೆಗೂ ನರಿಗೂ ಮದ್ವೆ ಅಂತೆ.
ನಾಯಣ್ಣರೂ, ಗೂಬಕ್ಕರೂ ಬೀಗರಂತೆ”.
ಅಂತ ಆ ಗಳಿಗೇಲಿ ಹಾಡನ್ನ ಹಾಡ್ಕಂದು… ಊರ ಹುಡ್ಲೆಲ್ಲಾ…. ಸೈಕಲ್ಲಿನ ಹಿಂದಗುಟ್ಲೆ ಹೋಗವು.

ಆಗ, ಊರು ಅನ್ನೊದರ ಕಣ್ಣು ಆ ಡಬ್ಬದ ಸುತ್ತಲೂ ಬಂದು ಸೇರದು. ಐಸ್ ಕ್ಯಾಂಡಿ ಅನ್ನೋದು ಬಾಯಿಗಿಟ್ರೆ ಸಾಕು…. ಬಾಯೇ ತಣ್ಣಗೆ ಕೋಟ್ರುಸೋದು. ಅಯ್ಯಪ್ಪ! ಏನ ಕಲಿಯುಗ ಬಂತಪ್ಪಾ….

ಗೌಡ್ರ ಸೈಕಲ್ಲೊಂದು ಬಿಟ್ರೆ ಊರಲ್ಲಿ ಇನ್ನೊಂದು ಸೈಕಲ್ಲು ಅನ್ನದು ಕಡ್ಲೆಕಾಯಿ, ಐಸ್ಕ್ಯಾಂಡಿ ಮಾರಕ್ಕೆ ಬರೊ ಸಾಬಿ ತಾವಲೇ ಇದ್ದದ್ದು. ನೀಳಾಗಿದ್ದ ಅಷ್ಟುದ್ದನೆ ಬಿಳೇ ಪೈಜಾಮಾ ಬಿಳೇ ಷರಟು ಹಾಕ್ಕಂಡು ಬರೊ ಸಾಬಿ, ನೀರಗದ್ದೆಲಿದ್ರೂವೆ ಒಂದೀಟೂ ರೋಸ ಉಯ್ಕಳ್ದಂಗೆ ಬೆಳ್ಳಗೆ ನಿಂತಿರೊ ಕೊಕ್ಕರೆ ಹಂಗೆ ಲಕ್ಷಣವಾಗಿ ಕಾಣನು. ಅವನು ಮಾಗಿ ಕಾಲ್ದಲ್ಲಿ, ಕಡ್ಲೆಕಾಯಿನು ತರೊನು.

ಇದಕ್ಕೆ ಅದಲು ಬದಲಾಗಿ ಅವನಿಗೆ ಮುರದೋಗಿರೊ ಕಬ್ಬಣದ ನೇಗಲ ಗುಳ, ಹಳೆ ಕಬ್ಬಿಣದ ಕುಡ್ಲು, ಬತ್ತ, ರಾಗಿ, ತರಕಾರಿ, ಎಂಗಸ್ರ ಕಣ್ಣಾಸ್ರೆ, ಇಂಗೆ ಮನ್ಲಿರೊದೆಲ್ಲಾ ಅವನ ಗೋಣಿಚೀಲ ಬಂದು ಸೇರೋದು. ವಾರಕ್ಕೆರಡು ದಿನ ಬರೊ ಸಾಬಣ್ಣ ಯಾಪಾರ ಸಾಪಾರ ಆದಮೇಲೆ, ಮಜ್ಜಿಗೆ ಕುಡ್ದು ಗಂಗಕ್ಕನ ಮನೆ ಕಟ್ಟೆ ಮೇಲೆ ಊರ ಉಸಾಬರಿ ಮಾತಾಡ್ತಲೆ ಕುಂತ್ಕಂದು ಸುಧಾರ್ಸ್ಕಳನು.

ಇಂಗೆ ಒಂದಿನ ಪದ ಹೇಳ್ಕೊಡು ಅಂತ ಹೋಗಿ ಗಂಗಕ್ಕನ ಬಡ್ಡೆಲಿ ಕುಂತಿದ್ದ ಸಣ್ಣಮ್ಮಿ ಮುಂದಗಡೆಲೆ ಬಂದು ಸಾಬಿ ಕೂತ. ಯಾರನ್ನಾದ್ರೂ ಎಳ್ಕಂಬಿಡೊ ಹಂಗಿದ್ದ ಅವಳ ಕಣ್ಣ ಮೇಲೆ ಕಣ್ಣಿಟ್ಟು ಮಾತುಮಾತಿಗೆ

“ನಿಮ್ಮ ಕೂದ್ಲಿಗೆ ಕನಕಾಂಬರ ಹೂವನ ಮುಡಿಬೇಕು ನೋಡಿ! ಆಗ… ನಿಮ್ಮ ಹಾಮಿನಂಗೆ ಇರೋ ಕೂದ್ಲಿಗೆ ಒಂದು ಲಕ್ಷಣ ಬರ್ತದೆ.” ಅಂದೋನೆ ತಿಂದ ಹಾಕನಂಗೆ ಅವಳ್ನ ನೋಡ್ದ.

ಗಂಗಕ್ಕನ ಮನೆ ಅನ್ನೋದು ಮೇಯೊ ದನಗಳಿಗೆ ಹಸ್ರು ಹುಲ್ಲುಗಾವ್ಲು. ಊರಿನ ಕಡೇ…. ಮನೆ ಬೇರೆ ಅದು! ಕೇಳ್ಬೇಕಾ? ಅವಳೂ…. ಹಂಗೆ ಇದ್ಲೂ ಅನ್ನಿ. ಕುಳ್ಳಕೆ.. ತೆಳ್ಳಕೆ.. ಬೆಳ್ಳಕೆ….
ದೇವ್ರು ಒಳ್ಳೆ ಹೊತ್ನಲ್ಲಿ ಎದ್ದು, ನಿಧಾನಕ್ಕೆ ಸಮಾಧಾನದಲ್ಲಿ ಮುಖ ಮೂತಿ ತಿದ್ದಿ ಮಾಡಿದ ಸಕ್ಕರೆ ಗೊಂಬೆ ಹಂಗಿದ್ಲು.

ಅವಳ ಸ್ವರ ಅನ್ನೋದು ಸೋಬಾನೆ ರಾಗವ ಗುನುಗಿ ಎಳದಾ… ಅಂದ್ರೆ, ಮರದ ಮೇಲಿನ ಕೋಗಿಲು ಕೂ…ಕೂ…. ಅಂತ ಇವ್ರಿಗೆ ಕರ್ದಂಗಾಗೋದು. ಹಂಗೇ…. ಬರೊ ಹೋಗೋರ ಕಣ್ಣು ಅನ್ನವು, ಅವಳ ನೋಡಕ್ಕೆ ಮನೆ ಸುತ್ಲೂ….ವೆ ಹಂಬಲ್ಸವು. ಆರು ತಿಂಗಳೊತ್ತಿಗೆ ಗಂಗಕ್ಕನ ಜೊತೆಲಿ ಸ್ನೇಹ ಅನ್ನದು ಹೆಚ್ಚಾಗಿ ಸಣ್ಣಮ್ಮಿ ಮನೆಯ ಸಂತೆಕುಕ್ಕೆ ಅವ್ಳ ಜತೆ ಹೋಗಿ ಸಂತೆ ಮಾಡ್ಕಂಡು ಬಂತು.

ಅಲ್ಲಿ ಮಾರಾಟಾ ಮಾಡೊ ಮುತ್ತಗದ ಹೂವಿನಂಗೆ ಕೆಂಪಗಿರೊ ಕನಕಾಂಬರದ ಹೂವು ಅನ್ನೋದು ಇವಳ ಮುಡಿಗೇ… ಬಂತು. ಅಚ್ಚ ಮಲ್ಲಿಗೆ ಹಂಬನ್ನಷ್ಟೆ ಕಂಡ ಹಳ್ಳಿಯೋರಿಗೆ ಕೆಂಪು ಹೂವಿನ ಮಾಲೆ ಅಂಬೋದೆ ಆಗಿನ ಕಾಲ್ದಲ್ಲಿ ಅಚ್ಚರಿಯಾಗಿತ್ತು. ಹಂಗೆ…ಬೆಳಗಿನ ಇಬ್ಬನಿಗೆ ಇಟ್ಟು ಮುಡುದ್ರೆ ಎರಡು ದಿನ ಬಾಡದೆ ಇರೊ ಆ ಹೂವಿನ ಮೋಹಾನೂ ಊರಲ್ಲಿ ಬೆಳೀತಾ ಹೋಯ್ತು.

ಇದ ಕಂಡು ಸಾಕಾಗಿ, ಗಂಗಕ್ಕನ ಸ್ನೇಹ ಮಾಡೋ ಸಣ್ಣಮ್ಮಿಗೆ ಗಂಡನಿಂದ ಗದರಿಕೆನೂ ಬಂತು. ಅವಳು ಕ್ಯಾರೆ ಅನ್ನಲಿಲ್ಲ. ಇವನು ಉಗುಳು ನುಂಗಿದ್ದೆ ಅವಳ ನಗೆಮುಖ ನೆನಕಂದು ನನ್ನ ಅನುಮಾನವೆ ಸುಳ್ಳಿರಬೇಕು ಅಂತ ನಂಬಕೊಂಡು, ನಾನೇ ಪಾಪಿ ಅನ್ಕಂಡು ಸುಮ್ಮಗಾದ.

ಕುಳ್ಳೀರನ್ನೂ ಅವನ ಹೆಂಡ್ತಿನೂ ಹಿಂಗೆ… ಕಣ್ತಪ್ಪಿಸಿ, ಗಂಗಕ್ಕನ ಜಗುಳಿ ಗೋಡೆ ಮೇಲೆ ಬಿಡಿಸಿದ್ದ…. ಹಸೆಸಾಲಲ್ಲಿ ಕುಂತಿದ್ದ….. ಗಿಳಿ ಅನ್ನೋವು ಹಸ್ರು ಬಣ್ಣ ಉಟ್ಕಂಡು, ಕೆಂಪು ಕೊಕ್ಕ ಒಂದುಕ್ಕೊಂದು ಕೊಟ್ಕಂಡು, ಇವರಿಬ್ಬರ ಹಾಡಿಗೆ ಅಂಗೇಯ ಗುಜುಗುಜು ಅನ್ನೋವು.

ಈ ಸ್ವರ ಅನ್ನವು ಕೈಗೆ ಸಿಗಲಾರದೆ…. ಕಣ್ಣ ಮುಚ್ಚಾಲೆ ಆಡೊ ಇವರ ಸ್ನೇಹದ ಗುಟ್ಟನ್ನ ಕಾದು ಕುಳ್ತಿರೊ ಅಂಥವರ ಕಿವಿಯ ಬಂದು ಕಚ್ಚಿದ್ವು..ಅವರು ಬಂದೋರೆ, ಗಂಗಕ್ಕನ ಮನೆ ಅಗಳಿ ಹಾಕಿ ಊರ ಪಂಚಾಯ್ತಿಗೆ ಈ ಮಾತಾಡೋ ಗಿಣಿ ಜೋಡಿಯ ಹಿಡಿದು ಕೊಟ್ರು.

ಗಂಗಕ್ಕ ಗೌಡರ ಗರತಿ ಒಬ್ಬ ಹೊಲೆರ ಹುಡುಗನ ಜೊತೆಗಿದ್ದರೆ, ಸಣ್ಣಮ್ಮಿ ಕಡ್ಲೆಕಾಯಿ ಸಾಬಣ್ಣನ ಜೊತೆಗಿದ್ಲು. ಗಂಗಕ್ಕನ್ನ ಪಂಚಾಯ್ತಿಗೆ ಬಿಟ್ಟುಕೊಟ್ಟು ಸಣ್ಣಮ್ಮಿಯ ಬಾವಿ ಕಟ್ಟೆಗೆ ಕಟ್ಟಿ ಹಾಕುದ್ರು . ಕುಳ್ಳೀರನೂ ಅವನ ಹೆಂಡತಿನೂ ಇಬ್ರೂವೆ ಗದ್ದೆ ತಾವಲಿಂದ ಓಡೊಡಿ ಬರೊ ಹೊತ್ತಿಗೆ, ಇವಳಿಗೆ ಏಟು ಬಿದ್ದು ಬಾಸುಂಡೆ ಆಗಿ… ಮೈಮೇಲೆ ಬರೆ ಬಿದ್ದಿದ್ದವು. ಇವಳ ಅಂತರಂಗದಲ್ಲಿ ಹಿಂದೆ ಹೇಳ್ದಂಗೆ ಕೇಳ್ಕೊಂಡು ನಾಚುಕಂದು ಸರ್ದೋಗ್ತಿದ್ದ ನಾಗರಾವು ಈಗ, ಸೆಡೆಯೆತ್ತಿ ನಿಂತಿತ್ತು.

ಏಟಿನ ಗುರುತ ಇಟ್ಕಂದ್ರೂವೆ ತಲೆಯೆತ್ತಿ ನಿಂತ ಮಗಳನ್ನ ನೋಡಿದ್ದೆ, ಇವರಿಬ್ಬರೂ… ಕುಸದು ಬಿದ್ದಿದ್ದೆ… ಧರೆಗಿಳ್ದು ಹೋದ್ರು. ಗಲಾಟೆ ಕೇಳಿ ಓಡಿಬಂದ ಗೌಡಮ್ಮ ಹಗ್ಗ ಬಿಚ್ಚಿದ್ದೆಯ
” ಓಗ್ರ ಎಲ್ಲರು ಮನಿಗೆ, ಓಗೆ ಈಗ ವಳಿಕೆ ನೀನು.” ಅಂಥ ಗದರಿಸಿ ಎಲ್ರನ್ನೂ ಅತ್ತಲಾಗೆ ಕಳಸಿದ್ರು. ಅವತ್ತು ರಾತ್ರಿಕೆ ದೊಡ್ಡ ಮಗವ ತಬ್ಬಿ ಮಲಗದವನು ಉಸ್ರು ಉಯ್ನಿಲ್ಲ.

ಅವಳ ಅವ್ವ ಅಪ್ಪ ಇಬ್ರೂವೆ ಯಾರ್ನೂ ಮಾತಾಡುಸ್ದಲೆಯ ಮನೆ ವಳಿಕೆ ಸೇರ್ಕಂಡು ಕಣ್ಣೀರ ಕೋಡಿನೆ ಒಡಕಂಡಿದ್ರು. ಅವಳೆದ್ದು ನೀರ ಕಡಿಕೆ ಹೋದರೂವೆ… ಅವಳ ಕಾಯ್ಕಂದು ಅತ್ತಕಂದು, ಅವಳ ಹಿಂದಹಿಂದಲೆ ಹೋಗರು.

ಮೂರು ದಿನ ಆಗಿತ್ತು. ಗಂಗಕ್ಕನ್ನ ಗಂಡ ತಪ್ಪುದಂಡ ಒಪ್ಸಿ ಹೆಂಡತಿ ಬುಡ್ಸ್ಕಂಡ. ಅವಳ ಜೊತೆಲಿ ಇದ್ದ ಹುಡ್ಗನ್ನೂವೆ ಅವ್ರಣ್ಣ ಬುಡುಸ್ಕಂಡಿದ್ದ. ಇನ್ನ ಸಣ್ಣಮ್ಮಿ ಸರದಿ. ಪಂಚಾಯ್ತಿ ಹೇಳ್ಕಳುಸ್ತು. ಅವಳನ್ನ ಕರೆಯಾಕೆ ಅಂತ ಮನೆಗ ಬಂದ ಕುಳವಾಡಿ. ಅಷ್ಟೊತ್ತಿಗೆ ಅವಳು ನಾಪತ್ತೆ ಆಗೋಗಿದ್ಲು. ಕೆರೆ ಬಾವಿ ತಡಕಾಡಿದ್ರು. ಮನೆ ಹೊಲ ಹುಡುಕನೋಡುದ್ರು. ಒಂದು ಅಮಾಸೆ, ಒಂದು ಹುಣ್ಣಿಮೆ ಕಳಿತು.

ತಿಂಗಳಾ…..ಗಿತ್ತು. ಒಂದಿನ, ಆಲೂರ ಪ್ಯಾಟೇಲಿ ಐಸ್ಕ್ಯಾಂಡಿ ಸಾಬಿ ಜೊತೆಲಿ ತಣ್ಣಗ ಕುಂತ್ಕಂಡು, ಮೀನ್ ಮಾರ್ತಿದ್ಲು ಸಣ್ಣಮ್ಮಿ. ಬುರ್ಖಾ ತೊಟ್ಟಿದ್ಲು. ವಾರ ವಾರ ದೊಡ್ಡನ ಜೊತೆ ಸಂತಿಗೆ ಹೋಗೊ ಅವಳ ಮಗ ದ್ಯಾವಣಿ, ಓ….ಡೋಗಿದ್ದೇಯ ಅವರವ್ವನ್ನ ಹೊಸ ವೇಷ ನೋಡ್ತಾ ನಿಂತ್ಕಂತು. ಪಾಪದ್ದು!

ದೊಡ್ಡ ಅಲ್ಲಿಗೆ ಬಂದಿದ್ದೆಯ, ಉಬ್ಬುಸ್ರು ಹುಯ್ತಾ ದರದರಾಂತ….ಚಂಡಿ ಬೀಳೊ ಮಗವ ಅಲ್ಲಿಂದ ಎಳ್ಕಂಡು ಹೋದ. ರಾಗಾವ ಎಳ್ಕಂದು ಅಳ್ತಿರೊ ಮಗಂಗೆ “ಬಾ, ನಿಮ್ಮಪ್ಪ ಇನ್ನೂ ಜೀವಾಗಿದಾನೆ. ಸತ್ತವನೆ ಅಂಥ ಮಾಡಿದ್ದೀಯ” ಅನ್ಕಂದು, ಅವಳಿಂದ ದೂರ ಸರದುಹೋದ.

ಬಾಯಿಂದ ಕಿವಿಗೆ, ಕತ್ತಾಳೆ ನಾರಿಗೆ ಸಾಲಾಗಿ ಪೋಣಿಸಕಂಡು ನೇತು ಬಿದ್ದಿರೊ ಜೀವ ಇರೊ ಆ… ಮೀನಗಳು, ಸರ ಎತ್ತಿ ಹಿಡಿದಿರೊ ಅವಳ ಕೈಯ ಮೇಲೆಯೆ ಬೆಲೆ ಕಟ್ಟಸ್ಕಂತಾ ಇದ್ದವು. ಗಂಟಲಲ್ಲಿ ಸಿಕ್ಕಹಾಕ್ಕಂಡಿರೊ ನಾರಿನ ಹಿಂಸೆಗೆ ಪತರಪತರನೆ…. ಬಾಯಿ ಬಾಯಿ ಬಿಟ್ಟಕಂದು ಮೀನು ಅನ್ನವು ಬಾಲ ತಿರುವತಾ, ಮಯ್ಯ ನುಲಿತಾ…. ಪಣ್ಣಪಣ್ಣನೆ, ಜೀವ ಬಿಡುಸ್ಕಳಕೆ ಅತ್ತಾ…ಗಿತ್ತಗೆ ಹಾರತಿದ್ದವು.

ಯಾಪಾರಕ್ಕೆ ಬಂದು ನಿಂತೋರ ಜೀವ ಅನ್ನೋದೂವೆ, ಹಂಗೇ…. ಜೀವ ಇರೊ ಆ ಮೀನಸಾರ ರುಚಿಯ ನೆನಕಂದು ವಳಗೆ….ಮಿಲಿಮಿಲಿ ಅನ್ನೋದು. ಆ ಗಳಿಗೇಲಿ ಮನಸಲ್ಲೇ ಅವರು ಲೆಕ್ಕಚಾರ ಹಾಕಂಡು, ಮೀನಿಗೆ ಬೆಲೆ ಕಟ್ತಾ ನಿಂತಿದ್ರು.

3 Comments

    • H.R.sujatha
      March 23, 2017
  1. k puttaswamy
    March 19, 2017

Add Comment

Leave a Reply