Quantcast

‘ಉರ್ವಿ’ಯೆಂಬ ಭೂಮಿತೂಕದ ಹೆಣ್ಣು

‘ಉರ್ವಿ’ಯೆಂಬ ಭೂಮಿತೂಕದ ಹೆಣ್ಣಿನ ಸಂಘರ್ಷದ ಚಿತ್ರ

ಶುಭಶ್ರೀ ಭಟ್ಟ

‘ಉರ್ವಿ’ ಸಿನಿಮಾ ಶುರುವಾದಾಗಲಿನಿಂದ ಹೇಗಿರಬಹುದೆಂಬ ಕುತೂಹಲ ಬಹುತೇಕ ಎಲ್ಲಾ ಸಿನಿಪ್ರಿಯರಲ್ಲೂ ಇದ್ದೆ ಇತ್ತು.

ಮತ್ತೊಂದು ಹೊಸ ಪ್ರಯೋಗಾತ್ಮಕ ಚಿತ್ರವನ್ನು ಜನರಿಂದು ಒಪ್ಪಿಕೊಂಡಿದ್ದಾರೆ. ಇಂತಹ ಅದ್ಭುತ ಚಿತ್ರವನ್ನು ನಮಗೆ ಮನಮುಟ್ಟುವಂತೆ ತಲುಪಿಸುವ ಧೈರ್ಯ ಮಾಡಿದ್ದಕ್ಕೆ ನಿರ್ದೇಶಕರಾದ ಪ್ರದೀಪ್ ವರ್ಮಾರಿಗೆ ನಾವು ಧನ್ಯವಾದ ಹೇಳಲೇಬೇಕು..

‘ಉರ್ವಿ’ ಅಂದರೆ ಸಂಸ್ಕೃತದಲ್ಲಿ ‘ಭೂಮಿ’ ಎಂದರ್ಥ, ಭೂಮಿ ಎಂದರೆ ಹೆಣ್ಣು,ಹೆಣ್ತನ.. ಇಡೀ ಸಿನೆಮಾದ ಕಥೆಯೂ ನಿಂತಿದ್ದು ‘ನಿತ್ಯ ಮುತ್ತೈದೆ’ಯಾಗಿ ಪ್ರತೀ ಕ್ಷಣವೂ ನರಳುವ ಪ್ರತಿಯೊಬ್ಬ ಹೆಣ್ಣಿನ ಮೇಲೆ.

ಯಾವುದೋ ವೈಶ್ಯಾವಾಟಿಕೆಯ ಕಥೆ, ಅದೇ ಹಳೆ ಹುಳಿ ಮಜ್ಜಿಗೆ ಕಡಿದು ಕೊನೆಗೊಂಚೂರು ಒಗ್ಗರಣೆ ಹಾಕಿರುತ್ತಾರೆ ಎಂದು ಪೂರ್ವಾಗ್ರಹ ಪೀಡಿತರಾಗಿ ಸಿನೆಮಾಕ್ಕೆ ಬಂದರೆ, ಕ್ಷಣ ಕ್ಷಣಕ್ಕೂ ನಿಮ್ಮ ಲೆಕ್ಕಾಚಾರ ಕೈಗೊಡುವುದರಲ್ಲಿ ಸಂಶಯವಿಲ್ಲ. ವೈಶ್ಯಾವಾಟಿಕೆಯ ವಿಷಯ ಹಳೆಯದಿರಬಹುದು, ಆದರೆ ಅಲ್ಲಿರುವವರೂ ನಮ್ಮದೇ ಹೆಣ್ಣುಕುಲಕ್ಕೆ ಸೇರಿದವರು. ಅವರೂ ಕೂಡ ಮನಸ್ಸು ಮಾಡಿದರೆ ‘ಶಕ್ತಿ-ಯುಕ್ತಿ-ಭಕ್ತಿ’ ಯೆಂಬ ದೇವಿಯರ ಪ್ರತಿರೂಪ ತಾಳಿ, ಆ ಕೊಳಕು ಸಾಮ್ರಾಜ್ಯವನ್ನೇ ದ್ವಂಸ ಮಾಡಬಲ್ಲಷ್ಟು ಶಕ್ತಿ ಹೊಂದಿರುತ್ತಾರೆ ಎಂಬುದು ಸಿನೆಮಾದ ಕಥಾ ಹಂದರ.

ದೇವರುಗುಂಡ ಎಂದು ದೇವರ ಹೆಸರಿಟ್ಟುಕೊಂಡ ದೆವ್ವದ ಸ್ವರೂಪಿ ತಲೆಹಿಡುಕ, ಸಿಕ್ಕ ಶವ ಹೆಣ್ಣಾದರೂ ಅದರಲ್ಲೂ ಕಾಸು ಮಾಡಲು ಹೇಸದ ಬಾಬಿಯೆಂಬ ಪಿಶಾಚಿ ಹೆಂಗಸು, ತನ್ನ ಒಡಹುಟ್ಟಿದ ತಂಗಿಯನ್ನು ಕೊಳಕು ದಂಧೆಗೆ ತಳ್ಳಲಿಚ್ಚಿಸದೇ ಹೋರಾಡುವ ಡೈಸಿ, ಕರಾಳದಿನಗಳ ಕನಸ ಕಂಡು ಬೆಚ್ಚಿ ಬೀಳುವ ಸೂಸಿ, ತನಗರಿವಿಲ್ಲದೇ ತನ್ನವರೇ ಹೆಣೆದ ಬಲೆಯಲ್ಲಿ ಸಿಕ್ಕಿಬಿದ್ದ ಕೆಚ್ಚಿನ ಹೆಣ್ಣು ಆಶಾ, ಕಾರಣಾಂತರಗಳಿಂದ ಇಲ್ಲಿ ಸಿಕ್ಕಿ ಬಿದ್ದು ಹೊರಬರಲಾರದೇ ಒದ್ದಾಡುತ್ತಿರುವ ಅನೇಕ ಹೆಣ್ಣುಜೀವಗಳು ಇವರೇ ಈ ಕಥೆಯ ಜೀವಾಳ.

ಸಿನೆಮಾದ ಮೊದಲಾರ್ಧ ವೈಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದು ಹೊರಬರಬಲ್ಲೆವು ಎಂಬ ಯೋಚನೆಯನ್ನೂ ಮಾಡದೇ, ಅಸಹಾಯಕತೆಯಿಂದ ಕಣ್ಣೀರು ಹಾಕುತ್ತಿದ್ದ ಪ್ರತೀ ಹೆಣ್ಣಿನ ಕಥೆಯನ್ನು ತಿಳಿಸಿದರೆ. ದ್ವಿತೀಯಾರ್ಧ ಅದೇ ಅಸಹಾಯಕ ಹೆಣ್ಣುಮಕ್ಕಳು ತಿರುಗಿಬಿದ್ದು ಕ್ರಾಂತಿಯ ಕಿಚ್ಚನೆಬ್ಬಿಸುವ ಕಥೆಯನ್ನು ತಿಳಿಸುತ್ತಿದ್ದರೆ ನಿಮ್ಮ ಮನವೊಮ್ಮೆ ಭಾರವಾಗುವುದು  ಖಂಡಿತ.

ತನ್ನ ಮನೆಯಲ್ಲಿ ಮುದ್ದಾದ ಮಗಳಿಟ್ಟುಕೊಂಡು, ಅವಳ ಮೇಲೆ ಅಪರಿಮಿತ ಪ್ರೀತಿಯಿಟ್ಟುಕೊಂಡ ಅಪ್ಪನೂ ಕೂಡ ತಲೆಹಿಡುಕನಾಗಬಹುದಾ? ಎಂದು ಯೋಚಿಸಲೂ ಸಾಧ್ಯವಿಲ್ಲದ ಸತ್ಯ ಇಲ್ಲಿ ಕರಾಳವಾಗಿ ತೆರೆದುಕೊಂಡಿದೆ. ಒಂದು ಕಡೆ ಮಗಳನ್ನು ಬಿಳಿ ನವಿಲಂತೆ ಮುದ್ದಾಗಿ ಜೋಪಾನ ಮಾಡಿ ಜೀವದಂತೆ ಮುದ್ದು ಮಾಡುವ ಅಪ್ಪ, ಇನ್ನೊಂದೆಡೆ ಬೇರೊಬ್ಬ ಅಪ್ಪನ ಮಗಳನ್ನು ಸರಕಂತೆ ಬಳಸಿಕೊಳ್ಳುವ ಹಂತಕನಂತಹ ತಲೆಹಿಡುಕ ದೇವರಗುಂಡನ ಪಾತ್ರದಲ್ಲಿ ಮನೋಜ್ಞವಾದ ಅಭಿನಯವನ್ನು ನೀಡಿದ್ದು ಅಚ್ಯುತ ಕುಮಾರನೆಂಬ ಅದ್ಭುತ ನಟ.

ತಾನೂ ಒಬ್ಬ ಹೆಣ್ಣಾಗಿ ಬೇರೆ ಹೆಣ್ಣಿನ ಭಾವನೆಗೆ ಕಿಂಚಿತ್ತೂ ಬೆಲೆಕೊಡದೆ ಕಟುಕಿಯಾಗಿ, ತನ್ನ ಸ್ವಂತ ಮಗಳಲ್ಲದಿದ್ದರೂ ಅಮ್ಮನಂತೆ ಅಕ್ಕರಾಸ್ಥೆ ತೋರಿಸುವ ಮಮತಾಮಯಿಯಾಗಿ (ಮಮತೆ ನಾಟಕೀಯವಾದರೂ), ಮಗುವೊಂದು ಸತ್ತು ಮನೆ ಸ್ಮಶಾನವಾದರೂ ಮತ್ತೆ ಮರಳಿ ಥಳುಕಿನ ಲೋಕಕ್ಕೆ ಬರಲು ಎಲ್ಲರಿಗೆ ಎಚ್ಚರಿಕೆ ನೀಡುವ ನಿರ್ದಯಿಯಾದ ಬಾಬಿ ಪಾತ್ರದಲ್ಲಿ ಭವಾನಿ ಶಂಕರ ಅವರು ಎಂದಿಗಿಂತ ಅತ್ಯುತ್ತಮ ಅಭಿನಯವನ್ನು ನೀಡಿದ್ದಾರೆ. ಇವರಿಬ್ಬರ ಅಭಿನಯ ಸಿನೆಮಾಕ್ಕೆ ಪ್ಲಸ್ ಪಾಯಿಂಟ್ ಅಂದರೆ ತಪ್ಪಲ್ಲ.

ಬಾಬಿಯ ನಂತರ ಈ ಕೊಳಕು ಸಾಮ್ರಾಜ್ಯಕ್ಕೆ ತಾನೇ ಉತ್ತರಾಧಿಕಾರಿಯೆಂಬ ಅರಿವಿಂದ ಎಲ್ಲರನ್ನೂ ತನ್ನ ಹಿಡಿತದಲ್ಲಿರಿಸಿಕೊಳ್ಳುವ, ಗಿರಾಕಿಯೇ ದೇವರೆಂದು ಅವರಲ್ಲಿ ಮೈಛಳಿ ಬಿಟ್ಟು ಪ್ರಣಯ ಸನ್ನಿವೇಶದಲ್ಲಿ ತನ್ಮಯಳಾಗುವ ಡೈಸಿಯಾಗಿ, ಎಲ್ಲರ ಕೆಟ್ಟದೃಷ್ಟಿಯಿಂದ ತನ್ನ ತಂಗಿಯನ್ನು ಹೊರಗಿಡಬೇಕೆಂದು ಸತತ ಪ್ರಯತ್ನ ಮಾಡುತ್ತಿರುವ ಅಕ್ಕನಾಗಿ, ಕೊನೆಗೆ ಅನ್ಯಾಯದ ವಿರುದ್ಧ ಹೊರಾಡುವ ಶಕ್ತಿಮಾತೆ ಕಾಳಿಯಂತೆ ಅಭಿನಯಿಸಿದ ‘ಶ್ವೇತಾ ಪಂಡಿತ’ ಅಭಿನಯ ಮನ ಮುಟ್ಟುವಂತಿದೆ,ಎಂದಿಗಿಂತ ಉತ್ತಮವಾಗಿದೆ.

ಹಳೆಯ ಕರಾಳ ನೆನಪುಗಳ ಕನಸ್ಸಿಂದ ಹೊರಬರಲಾರದೇ,ಹೊಸ ಕನಸುಗಳ ಕಾಣಲು ದಿಕ್ಕುತೋಚದೆ, ಈ ವೃತ್ತಿ ಬಿಟ್ಟು ಹೊರಬಂದರೂ ಕರಿನೆರಳು ಹಿಂಬಾಲಿಸಿ ಬರುವುದೆಂಬ ಭಯದಿಂದ ಒದ್ದಾಡುವ ಸೂಸಿಯೆಂಬ ಪಾತ್ರದಲ್ಲಿ ‘ಶ್ರದ್ಧಾ ಶ್ರೀನಾಥ’ ಅಭಿನಯ ಪಾತ್ರಕ್ಕೆ ತಕ್ಕುದಾಗಿದೆ.

ಅನಾಥಳಾಗಿದ್ದು ಎಂ.ಬಿ.ಬಿ.ಎಸ್ ಓದುತ್ತಾ,ಜೊತೆ ಜೊತೆಗೆ ವೈಶ್ಯಾವಾಟಿಕೆಯಂತಹ ಪಿಡುಗಿನ ಬಗ್ಗೆ ಕೆಚ್ಚಿಟ್ಟುಕೊಂಡ ಹುಡುಗಿಯೊಬ್ಬಳು, ತನಗೆ ಅರಿವಿಲ್ಲದಂತೆ ತನ್ನ ಸುತ್ತ ಹೆಣೆದ ಜಾಲಕ್ಕೆ ಸಿಕ್ಕಿಬಿದ್ದು, ಧೃತಿಗೆಡದೆ ಹೋರಾಡಿ, ಬೇರೆಯವರಲ್ಲೂ ಕೆಚ್ಚು ತುಂಬಿಸಿ ಕ್ರಾಂತಿಯನ್ನೆಬ್ಬಿಸಿ ಮೈ ಝುಮ್ಮೆನಿಸುತ್ತಾ ಯುಕ್ತಿದೇವಿಯ ಪ್ರತಿರೂಪವಾಗಿ ನಮ್ಮನ್ನು ಕೊನೆತನಕ ಕಾಡುವುದು ಆಶಾ ಸುಂದರಿಯ ಪಾತ್ರದಲ್ಲಿ ಅಭಿನಯಿಸಿದ ‘ಶೃತಿ ಹರಿಹರನ್’ರದ್ದು ಎಂದಿನ ಮಾಗಿದ ಅಭಿನಯ.

ಬರೀ ನಟನೆಯೇ ಚಿತ್ರದ ಜೀವಾಳವೆಂದರೆ ಖಂಡಿತ ತಪ್ಪಾದೀತು. ಈ ಸಿನೆಮಾದಲ್ಲಿನ ‘ಆನಂದ ಸುಂದರೇಶ’ರ ಸುಂದರ ಛಾಯಾಗ್ರಹಣ ನೋಡಲು ತಂಪಾದರೆ,’ಮನೋಜ್ ಜಾರ್ಜ್’ ಎಂಬ ಯುವ ಪ್ರತಿಭೆಯ ಸಂಗೀತವೂ ಕೇಳಲು ಇಂಪಾಗಿದ್ದು ಮನಕ್ಕೆ ಮುದವನ್ನೀಯುತ್ತದೆ. ವೈಶ್ಯಾವಾಟಿಕೆಯ ಪೀಡುಗಿನ ನಡುವೆಯೇ ತೇಲಿ ಬರುವ ನವಿರು ಪ್ರೇಮಕಥೆ ಕಚಗುಳಿಯಿಕ್ಕಿದರೆ, ಮತ್ತೊಂದು ಢೋಂಗಿ ಪ್ರೀತಿ ಮನಕ್ಕೆ ಕಸಿವಿಸಿಯುಂಟುಮಾಡುತ್ತದೆ. ಸಿನೆಮಾದ ಕೊನೆಯಲ್ಲಿ ಬರುವ ದೃಶ್ಯವೂ, ಪ್ರತೀ ಮಾತು ಮನದಲ್ಲಿ ಅಚ್ಚಳಿಯದಂತೆ ಉಳಿಯುವುದು ಸತ್ಯ.

ಕನ್ನಡದಲ್ಲಿ ಒಳ್ಳೆ ಚಿತ್ರ ಬರುವುದಿಲ್ಲ, ಬೇರೆ ಭಾಷೆಯಲ್ಲಿ ಕದ್ದು ಮಾಡುತ್ತಾರೆ, ಹಾಗೇ ಹೀಗೆ ಅದು ಇದು ನೆಪ ಹೇಳುವವರಿಗೆ ಈ ಚಿತ್ರಕ್ಕೆ ಕರೆದುಕೊಂಡು ಹೋಗಿ, ಮತ್ತೆ ಆ ಮಾತು ಅವರ ಬಾಯಿಂದ ಬಂದರೆ ಕೇಳಿ. ನನ್ನ ಪ್ರಕಾರ ಈ ಚಿತ್ರವನ್ನು ನೋಡಲು ಭಾಷೆಯ ಅಗತ್ಯವಿಲ್ಲ,ದೃಶ್ಯವೇ ಸಾಕು ಅದರ ಭಾವವರಿಯಲು. ದಯವಿಟ್ಟು ಒಂದೊಳ್ಳೆ ಚಿತ್ರವನ್ನು ನೀವೂ ನೋಡಿ, ಬೇರೆಯವರಿಗೂ ನೋಡಲು ತಿಳಿಸಿ. ಇದರ ಯಶಸ್ಸು ಅದೆಷ್ಟೋ ಯುವ ಪ್ರತಿಭೆಗಳಿಗೆ ದಾರಿದೀಪವಾದೀತು..

2 Comments

  1. Sujaya
    March 20, 2017

Add Comment

Leave a Reply