Quantcast

ಅದು ನಮಗೆ ಕೇವಲ ಬ್ಯಾಂಕ್ ಆಗಿರಲಿಲ್ಲ..

ಸದಾಶಿವ್ ಸೊರಟೂರು

ಅಪ್ಪನ ಕೈ ಬೆರಳು ಹಿಡಿದು ತಿಂಗಳಿಗೊಮ್ಮೆಯಾದರೂ ನಾನು ಅಲ್ಲಿಗೆ ಹೋಗಿ ಬರುತ್ತಿದ್ದೆ.

ಕೀಲಿ ತೂರಿಸುವ ಚಿಹ್ನೆಯ ಚಿತ್ರಗಳನ್ನು ನೋಡಿ ನೋಡಿ ನನಗೆ ಇಂದಿಗೂ ಬ್ಯಾಂಕ್ ಅಂದ್ರೆ ಕೇವಲ ಅದೊಂದೇ ಚಿತ್ರ ನೆನಪಾಗುತ್ತದೆ.

ನನ್ನಪ್ಪ ಬಡ ಮಾಸ್ತರ. ತಿಂಗಳಿಗೆ ಒಂದಾವರ್ತಿ ಅಪ್ಪನಿಗೆ ರಜೆ ಇರುತ್ತಿತ್ತು. ಅವತ್ತು ಅಪ್ಪ ಬ್ಯಾಂಕ್‍ಗೆ ಹೋಗುತ್ತಿದ್ದರು. ಅದು ಬ್ಯಾಂಕಿಗೆ ಹೋಗಲಿಕ್ಕೆಂದೇ ನೀಡುತ್ತಿದ್ದ ರಜೆಯೆಂದು ನನಗೆ ಮೊನ್ನೆ ಮೊನ್ನೆವರೆಗೂ ಗೊತ್ತಿರಲಿಲ್ಲ. ಹೋಗುವಾಗ ಅಪ್ಪನ ಕೈಯಲೊಂದು ಚಿಕ್ಕ ಪುಸ್ತಕ, ಆ ಕಡೆಯಿಂದ ಬರುವಾಗ ಅಪ್ಪನ ಕೈಯಲ್ಲಿ ಎರಡು ಮೂರು ನೋಟುಗಳು.

ಅಪ್ಪನ ದೆಸೆಯಿಂದ ಬಾಲ್ಯದಲ್ಲೇ ಬ್ಯಾಂಕ್ ನೋಡಿದ್ದೆ. ಅಪ್ಪ ಮನೆ ಕಟ್ಟಿಸಿದ್ದು, ಅಕ್ಕನ ಮದುವೆ, ನನ್ನ ಓದಿನ ಸಾಲ ಎಲ್ಲದಕ್ಕೂ ಒತ್ತಾಸೆಯಾಗಿಯೇ ನಿಂತಿದ್ದು ಇದೇ ಬ್ಯಾಂಕ್. ಕಾಕತಾಳೀಯವೆಂದರೆ ಇಂದಿಗೂ ನಾನೂ ಕೂಡ ಸಂಬಳ ಎಣಿಸುತ್ತಿರುವುದು ಅದೇ ಬ್ಯಾಂಕಿನಲ್ಲಿ.

ನನ್ನ ಅಪ್ಪನ ಕಾಲದಿಂದ ಬ್ಯಾಂಕಿನ ಕಟ್ಟಡದಿಂದ ಹಿಡಿದು, ಬದಲಾಗುತ್ತಿದ್ದ ಸಿಬ್ಬಂದಿಗಳನ್ನು ನೋಡಿಯೇ ಬೆಳೆದು ಬಂದವನು. ನಾನು ಬೆಳೆದಂತೆ ಅದು ಕೂಡ ಬೆಳೆದು ಲೋಗೊದಿಂದ ಹಿಡಿದ ಆಡಳಿತಾತ್ಮಕವಾಗಿಯೂ ಬೆಳೆದು ಬಂದಿತ್ತು.
ಇದರಲ್ಲಿ ಏನಿದೆ ವಿಶೇಷ ಎಲ್ಲಾ ಬ್ಯಾಂಕ್ ಮಾಡುವುದೇ ಅದು ಕೂಡ ಮಾಡಿದೆ ಬಿಡಪ್ಪ ಅನ್ನಬಹುದು ನೀವು.

ಆ ಮೈಸೂರು ಬ್ಯಾಂಕಿನ ಮುಂದೆ ಚಿಕ್ಕ ಪ್ರಾಂಗಣದಲ್ಲಿ ವಿಶ್ವೇಶ್ವರಯ್ಯನವರ ಒಂದು ಚಿಕ್ಕ ಮೂರ್ತಿಯೊಂದನ್ನು ಸ್ಥಾಪಿಸಿದ್ದರು. ನನ್ನ ಅಪ್ಪನಿಗೆ ‘ಅಪ್ಪಾ, ಇವರ್ಯಾಕೆ ಇಲ್ಲಿ?’ ಅಂದಿದ್ದಕ್ಕೆ ‘ಇವರೇ ಮಗಾ, ಈ ಬ್ಯಾಂಕ್ ಶುರು ಮಾಡಿದ್ದು’ ಅಂದಿದ್ದರು. ಅಂದಿನಿಂದ ನನಗೆ ಮೈಸೂರು ಬ್ಯಾಂಕ್ ಅಂದ್ರೆ ವಿಶ್ವೇಶ್ವರಯ್ಯನವರು ನೆನಪಾಗುತ್ತಾರೆ. ಮೈಸೂರು ಬ್ಯಾಂಕ್ ಅಂದ್ರೆ ಮೈಸೂರು ಬ್ರಾಂಡ್ ನೆನಪಾಗುತ್ತಿತ್ತು ಮೈಸೂರು ಸೋಪು, ಮೈಸೂರು ಮಲ್ಲಿಗೆ, ಮೈಸೂರು ಅರಮನೆಗಳ ನೆನಪಿನ ಸಾಲಿನಲ್ಲಿ ನನ್ನ ಮೈಸೂರು ಬ್ಯಾಂಕ್ ನಿಲ್ಲುತ್ತಿತ್ತು.

ಮೈಸೂರು ಬ್ಯಾಂಕ್ ಅಂದ್ರೆ ಕನ್ನಡ ನಾಡು ನೆನಪಾಗುತ್ತಿತ್ತು. ಅಖಂಡ ಕರ್ನಾಟಕವೊಂದರ ಸಂಕೇತವೆಂದೆನಿಸುತ್ತಿತ್ತು, ಮೈಸೂರು ಸೀಮೆ ನೆನಪಾಗುತ್ತಿತ್ತು, ಅಪ್ಪ ನೆನಪಾಗುತ್ತಿದ್ದರು, ಅದು ನಮ್ಮ ಮನೆಯ ಬ್ಯಾಂಕ್ ಅನ್ನುವಷ್ಟೇ ಬಲವಾದ ಭಾವನೆ ರಕ್ತದಲ್ಲೇ ಹೊಕ್ಕಿ ಬಂದಿದೆಯೇನೋ ಎಂಬಂತೆ ಆಗಿಬಿಟ್ಟಿತ್ತು.

ಕನ್ನಡಿಗರಿಗೂ ಈ ಬ್ಯಾಂಕಿಗೂ ಅದೇನು ಒಂದು ಬಂಧವಿದೆ. ಕರ್ನಾಟಕ ಎಂದು ಹೇಳುವ ಲಕ್ಷಣಗಳಲ್ಲಿ ಮೈಸೂರು ಬ್ಯಾಂಕ್ ಕೂಡ ಬಂದು ಸೇರುತ್ತಿತ್ತು. ಆದರೆ ಇಂದು ಮೈಸೂರು ಬ್ಯಾಂಕ್ ಭಾರತದ ಬ್ಯಾಂಕ್ ಆಗಿ ಬದಲಾಗುತ್ತಿದೆ, ಬದಲಾಗಿದೆ ಕೂಡ. ಆಡಳಿತಾತ್ಮವಾಗಿ ಬದಲಾದ ಆ ಬ್ಯಾಂಕಿನಲ್ಲಿ ಅಂಥದೇನೂ ಬದಲಾವಣೆ ಕಾಣಲಾರವು. ಒಂದು ಬ್ಯಾಂಕ್ ಮಾಡಬಹುದಾದ ಕೆಲಸವನ್ನು ಮೊದಲಿನಂತೆ ಮುಂದುವರೆಸಿಕೊಂಡು ಹೋಗುತ್ತದೆ ಬದಲಾದ ಹೆಸರಿನಲ್ಲಿ. ಏನೂ ಬದಲಾವಣೆ ಕಾಣಲಾರದು.

ಅದೇ ಬ್ರಾಂಚ್,ಅದೇ ಲೋಗೋ, ಅದೇ ಅಕೌಂಟ್,ಅದೇ ಪಾಸ್ ಬುಕ್, ಅದೇ ಉದ್ಯೋಗಿಗಳು ಆದರೆ ಮೈಸೂರು ಎಂಬ ಹೆಸರಿನಲ್ಲಿ ಇಂಡಿಯಾ ಬಂದು ಕೂರುತ್ತದೆ. ಕೇವಲ ಹೆಸರು ಮಾತ್ರ ಬದಲಾಗಿದ್ದಕ್ಕೆ ಇಷ್ಟೆಲ್ಲ ಪುರಾಣ ಮಾತಾಡುವ ಅವಶ್ಯಕತೆ ಇತ್ತ ಎಂದೆನಿಸಬಹುದು ಅಲ್ಲವೇ?

ಆದರೆ ನನ್ನ ಮಾತು ಭಾವನೆಗಳಿಗೆ ಸಂಬಂಧಿಸಿದ್ದು.

ಕನ್ನಡಿಗರ ಕರುಳೊಂದನ್ನು ಕತ್ತರಿಸಿ ಮತ್ತೊಂದಕ್ಕೆ ಜೋಡಿಸಿದ ಭಾವ ಅದು. ಆಧುನಿಕತೆಗೆ, ಜಾಗತೀಕರಣಕ್ಕೆ, ಪ್ರಗತಿಯ ಹೆಸರಿನಲ್ಲಿ ಬದಲಾವಣೆಯ ಮುಂದೆ ಎಂದಿಗೂ ಭಾವನೆಗಳು, ಆತ್ಮೀಯತೆಗಳು ಉಳಿಯಲಾರವು. ಅದರದು ಕರುಣಾಹೀನ ನಡೆ. ಅವೆಲ್ಲಾ ಪರದೆಯ ಮೇಲೆ ಅಂಕಿ ಅಂಶಗಳನ್ನು ತೋರಿಸುವ ರೇಖಾ ನಕ್ಷೆಗಳಷ್ಟೇ!

ಪರಸ್ಪರ ಬ್ಯಾಂಕ್‍ಗಳನ್ನು ವಿಲೀನಗೊಳಿಸುವುದರಿಂದ ಮತ್ತು ಪ್ರತ್ಯೇಕಿಸುವುದರಿಂದ ಆಗುವ ಲಾಭ ನಷ್ಟಗಳ ಬಗೆಗೆ ನನ್ನ ಮಾತಿಲ್ಲ. ಲಾಭವಿದೆ ಅನ್ನೋ ಕಾರಣಕ್ಕೆ ಪ್ರೀತಿಯನ್ನ, ಭಾವನೆಗಳನ್ನು ಮಾರಾಟಕ್ಕೆ ಇಡಲಾಗುವುದಿಲ್ಲ. ನಷ್ಟವಿದೆ ಅಂದ ಮಾತ್ರಕ್ಕೆ ಕೆಲವೊಂದನ್ನು ಕತ್ತರಿಸಿ ಬಿಸಾಡಲಾಗುವುದಿಲ್ಲ. ಹಾಗೆ ಆಗಲೂ ಬಾರದು!

ತಾನೂ ಕೂಡ ಕನ್ನಡದ ಒಂದು ಭಾಗವಾಗಿದ್ದ ಬ್ಯಾಂಕೊಂದು ಕನ್ನಡದಿಂದ ಕಳಚಿಕೊಂಡು ಹೋಯಿತು. ಕನ್ನಡತನದ ಸೊಗಡಿನಿಂದ ಮರೆಯಾಯಿತು. ಯಾವ ಕನ್ನಡಪರ ಸಂಘಟನೆಗಳು ಅದರ ಪರ ನಿಲ್ಲಲಿಲ್ಲ. ಯಾವ ಬ್ಯಾಂಕ್ ಸಿಬ್ಬಂದಿಯೂ ಉಸಿರು ಎತ್ತಲಿಲ್ಲ. ಕನ್ನಡವೆಂದರೆ ಕೇವಲ ಭಾಷೆ, ಸಾಹಿತ್ಯವೆಂದು ಕೊಂಡವರೇ ಜಾಸ್ತಿ. ಕರ್ನಾಟಕದಲ್ಲಿರುವುದರಲ್ಲಿನ ಎಲ್ಲದನ್ನೂ ಕನ್ನಡಮಯವಾಗಿಯೇ ನೋಡುವ ಮನೋಭಾವ ಕಡಿಮೆಯಾಗುತ್ತಿದೆ. ಕೇವಲ ಹೆಸರಿನ ಹೋರಾಟಗಳು ಅವುಗಳ ಹೆಸರಿಗಷ್ಟೇ ಸೀಮಿತವಾಗಿವೆ.

ಮೈಸೂರು ಬ್ಯಾಂಕ್ ಕನ್ನಡದವರೊಂದಿಗೆ ಕೇವಲ ಬ್ಯಾಂಕ್ ಆಗಿರಲಿಲ್ಲ ಅದಕ್ಕಿಂತ ಹೆಚ್ಚಿನ ಪ್ರೀತಿ, ಬಾಂಧವ್ಯ ಪಡೆದುಕೊಂಡಿತ್ತು. ಈಗ ನೋಡು ನೋಡುತ್ತಿದ್ದಂತೆ ನಮ್ಮೆಲ್ಲರ ಬ್ಯಾಂಕ್ ನಮ್ಮಿಂದ ದೂರವಾದ ಭಾವ.

ಯಾಕೋ ಸ್ಟೇಟ್ ಬ್ಯಾಂಕ್ ಇಂಡಿಯಾ ಅನ್ನೋ ಹೆಸರು ಸ್ಟೇಟ್ ಬ್ಯಾಂಕ್ ಮೈಸೂರು ಅನ್ನೋ ಹೆಸರಿಗಿಂತ ತುಂಬಾ ದೂರನೇ ಅನಿಸುತ್ತಿದೆ. ನಮ್ಮ ನಾಲಿಗೆಯೂ ಕೂಡ ಇನ್ನು ಮುಂದೆ ಎಸ್‍ಬಿಎಂ ಎಂದು ಕರೆಯಲು ಅವಕಾಶವಿಲ್ಲವೆಂದು ಬೆಸರಿಸಿಕೊಳ್ಳುತ್ತಿದೆ. ಸಾವಿರಾರು ವರ್ಷಗಳಿಂದ ನಮ್ಮನ್ನು ಪಾಲಿಸಿ ಬೆಳೆಸಿದ ಮೈಸೂರು ಬ್ಯಾಂಕ್‍ಗೆ ಒಂದು ವಿದಾಯ ಹೇಳಲೇ ಬೇಕಿದೆ ಈಗ.

ಈ ವ್ಯವಸ್ಥೆಯಲ್ಲಿ ಇದ್ದ ಮೇಲೆ ಒಪ್ಪಿಕೊಳ್ಳಲೇಬೇಕಿದೆ. ಗೌರವ ಪೂರ್ಣವಾಗಿ ನಮ್ಮ ಮೈಸೂರು ಬ್ಯಾಂಕಿಗೆ ತುಂಬಿದ ಹೃದಯದಿಂದ ಒಂದು ವಿದಾಯ ಹೇಳಲೇಬೇಕಿದೆ. ಹೇಳಿಬಿಡೋಣ.

Add Comment

Leave a Reply