Quantcast

ಮಲ್ಲಿಗೆ ತೋಟ ಅಲ್ಲಲ್ಲ.. ಕಾಪಿ ತೋಟ  

ಒಂದಿಪ್ಪತ್ತು ದಿನದ ಹಿಂದೆ ಜೋರು ಮಳೆ. ಯುಗಾದಿ ಮುಂದೆ ಮಳೆ ಬರೋದೇನು ಹೊಸದಲ್ಲ ಅನ್ನಿ. ಬರಗೆಟ್ಟು ವಣಗಿ ನಿಂತಿದ್ದ ಮರಗಿಡ ಒಂದ್ನಾಕು ದಿನದಲ್ಲಿ ತಳಿರುತೋರಣ ಕಟ್ಟಿ ನಿಂತಕಂದವು. ಅಣ್ಣ ನಾನು ಪ್ರತೀ ವರುಷದ ವಾಡಿಕೆಲಿ ಊರಿಗೆ ಹೊರಟು ನಿಂತಕಂದವಿ. ಮೊದಲನೇ ಮಳೆಗೆ ಇಡೀ ಕಾಫಿ ಸೀಮೆ ಚಾತಕ ಪಕ್ಷಿಯಂಗೆ ಕಾಯ್ತಿರುತ್ತೆ. ಯಾಕಪ್ಪಾ ಅಂದ್ರೆ….. ಮಲೆನಾಡು ಅನ್ನೋದೇ ಮಳೆ ನಾಡು. ಮಳೆ ನೀರಿನ ಮೇಲೆ ಅದರ ವ್ಯವಸಾಯ. ಜನಜೀವನ, ಅದರ ಮೈ ಸಿರಿ ಎಲ್ಲ. ಅಲ್ಲಿ ಕಾಡುಮೇಡು ಅಲ್ಲದೆ ಕಾಸು ಕರೀಮಣಿ ಸೈತಾ ಆ ಆ ಕಾಲದ ಮಳೆಯನ್ನೇ ನಂಬಿಕೊಂಡು ನಡಿತಿರುತ್ತೆ. ಮಳೆ ಮಾತನ್ನಾಡದೆ ಅಲ್ಲಿನ ಜನ ಮುಂದಿನ ಮಾತನ್ನ ಆಡದೇ ಇಲ್ಲ. ಮಖ ನೋಡಿದ ಕೂಡಲೇ ಅದೇ ಮೊದಲನೇ ಮಾತು.

“ಹೊಡಿತೇತೆ. ಹೊಡಿತೇತೆ ಮೂಡಗೆರಿಗೆ ಮೂರು ದಿಸದಿಂದ…. ಚಿಕ್ಕಮಂಗಳೋರ್ನರಿಗೆ ೩ ಇಂಚು. ಒಂದೆ ದಿಸ. ಯಾಕೆಳ್ತೀರಾ? ನಮಗೂ ಎರಡಿಂಚು ಆತು. ಸಾಕು ನಮ್ಗೆ ಹೂವಾಗಕ್ಕೆ. ಇನ್ನ ಹದ್ನೈದು ದಿಸಕ್ಕೆ ಯೋಚ್ನಿಲ್ಲ. ಹೂವಿಗೆ ಒಳ್ಳೆ ಮಳೆ ಇದು ರಾಜಣ್ಣ. ಈ ಸಲದಂಗೆ ಆಗಿರ ’ಬ್ಲೊಸ್ಸಮ್” ಇತ್ತೀಚಿಗೆ ಆಗೇ ಇರನಿಲ್ಲ. ಏನು ಹೂವು ಅಂದ್ರೆ ಈ ಸಲ. ತ್ವಾಟ ಪೂಜೆ ಮಾಡವರು ಮಾಡತಾವರೆ. ನಮ್ಮ ಕಡೇರು ಹಬ್ಬ ಮಾಡವರು ಮಾಡತಾವರೆ. ಪಾರ್ಟಿ ಮಾಡರು ಮಾಡ್ತವರೆ.” ಜೊತೆಲಿ ಬಂದಿದ್ದ ನೆಂಟ ಭಾವಾರ ಮಾತು ನಡಿತಿತ್ತು.

ಹಿಂಗೆ ನಾವು ಬೆಂಗಳೂರಲ್ಲಿ ಇದ್ದರು ಸೈತ ಮೊದಲನೇ ಮಳೆ ಕಾಯ್ಕಂಡಿದ್ದು ಊರಿನ ಸುದ್ದಿ ತಗಂದಿದ್ದೇ ೯ ನೇ ದಿನಕ್ಕೆ ಪ್ರತಿ ವರುಷದಂಗೆ ಊರಿಗೆ ಹೊರಟಿದ್ವಿ. ಅಣ್ಣನ ಮುಖದ ಮೇಲೆ ಸಂತೃಪ್ತಿಯಿತ್ತು. ಸಧ್ಯ ಊರಲ್ಲಿರ ತಮ್ಮದಿರು, ನೆಂಟರ ಒಣಗ್ತಿದ್ದ ತೋಟಗಳು ಸಧ್ಯಕ್ಕೆ ಉಳಕಂಡಿದವೆ. ಅವರ ಪಾಡು ಕೊಂಚ ಸುಧಾರುಸ್ತು ಅಂತ. ಅದೂ ಇದೂ ಮಾತಾಡಕಂಡು ಬೆಳಬೆಳಗ್ಗೇನೇ ಎಂಟಕ್ಕೆಲ್ಲಾ ಪಾಳ್ಯ ದಾಟಿ ಕಾಫಿ ನಾಡಿಗೆ ಕಾರು ಹಾಯುತಿದ್ದಂಗೆ ಗಂಧ….. ಸುಗಂಧ…… ಗಾಳೀಲಿ ಊದು ಬತ್ತಿಯ ಪರಿಮಳ ತೇಲದಂಗಾಗಿ ಮೂಗಿಗೆ ತಾಕಿದ್ದೆ ತಟಕ್ಕನೆ ಮೊಬೈಲಲ್ಲಿದ್ದ ಕಣ್ಣು ಚುರುಕಾಗಿ ಕಿಟಕಿ ಕಡೆಗೆ ತಿರುಗತು.

ಮಳೇಲಿ ತೊಳೆದ ಹಸಿರು ಕಾಪಿ ತೋಟಕ್ಕೆ ಬೆಳ್ಳನೆ ಮಂಜುಮಲ್ಲಿಗೆ ಆಕಾಷದಿಂದ ಇಳಕಬಂದವಳೆ ಪುಷ್ಪವತಿಯಾಗಿ ನಗೆ ಅರಳಿಸಿ ಹೂವ ಸುರದು ಚೆಲ್ಲಾಡಿ ಸೂಸಾಡಿ ಹೋಗಿದ್ಲು. ಅದು ಹಸಿರು ಗಿಡದ ಮ್ಯಾಲೆ ಮೊಸರು ಚೆಲ್ಲಿದಂತೆ….ಪರಿಷೇಲಿ ಪುರಿಕಾಳೆರಚಿದಂತೆ ಕಾಣಸ್ತಿತ್ತು. ಮೊಗ್ಗಿನ ಜಡೆಯಂತೆ ಹೂವಿನ ಕೊಂಡೆ… ಗೆಣ್ಣುಗೆಣ್ಣಿಗೂ ಹೂವಿನ ಜೇನುಗೊಂಡೆ…. ಕಟ್ಟಿಕೊಂಡು ಮದುವೆ ಹೆಣ್ಣಿನ ಹೂವಿನ ಜಡೆಯಂತೆ ಕಾಪಿ ರೆಕ್ಕೆಗಳು ಕಾಣಸ್ತಿದ್ವು.  ಕಾಪಿ ತೋಟ ಸಿಂಗರಿಸಿದ ಮದುವೆ ಮನೆಯಂಗೆ ಕಾಣುತಿದ್ವು. ಹತ್ತಿರಕ್ಕೆ ಕಂಡರೆ ಹಿಂಗಾ…. ದೂರಕ್ಕೆ….. ಕಾಪಿ ತೋಟ ಅಲ್ಲ ಇದು ಮಲ್ಲಿಗೆ ತೋಟವೇನೋ ಅನ್ನಂಗೆ ಕಾಣೀಸ್ತಾ ಇತ್ತು. ಮುತ್ತು ಎರಚಾಡಿ ಸೊಬಗು ತುಳುಕಾಡತಿತ್ತು..

ದಾರಿ ಸಾಗತಾ ೫೦ ಕಿ.ಮಿ. ಹೂವಿನ ಹಾದೀಲಿ ಹಾದು ನೆಂಟರ ಮನೆಗೆ ಹೋದ್ರೆ ಮನೆ ಸುತ್ತ ನೆತ್ತಿಗೆ ಹಾಕಿ ತಿಕ್ಕುವಂಥ ಘಾಟು. ಮೊದಮೊದಲು ಮೂಗಿಗೆ ತಾಗಿದ ಗಂಧ ಸುಗಂಧವಾಗಿ ಬರಬರತಾ ಮೂಗನ್ನೇ ಸೊಕ್ಕಿಸಿ ಮೊಂಡು ಮಾಡಾಕಿತ್ತು. ಅವರ ಮನೇಲಿ ಹಂದಿಕರಿ ಅಕ್ಕಿ ರೊಟ್ಟಿಯ, ಕಡಬು ಕೋಳಿಗೊಜ್ಜಿನ ರುಚಿಗೆ ದಿನಕ್ಕಿಂತ ಎರಡು ಪಟ್ಟು ಉಂಡರೂ ಇದರ ಕಟುವಾಸನೆಗೆ ಮಾಂಸದೆಸರು ಆವತ್ತು ಗಂಧಾನೇ ಮರ್ತಿತ್ತು. ತೋಟದಲ್ಲಿ ಅಡ್ಡಾಡುವಾಗ ಮನೆ ಕಡೆಗೆ ದಾರೀಲಿ ಹೆಜ್ಜೆ ಹಾಕುತಿದ್ದ ಕೆಲ್ಸದವರು ಸಿಕ್ಕರು.

“ಹೂವಿನ ತ್ವಾಟದಲ್ಲಿ ಒಬ್ರೇ ಸುಳದಾಡಬಾರದು ಅಮ್ಮಾರೇ, ನಾಗರಹಾವು ಇರ್ತವೆ. ಗಾಳಿ ಸುಳ್ದಾಡತಿರ್ತೀತೆ ಘಮನಕ್ಕೆ. ಹೂವಿನ ಘಮನಕ್ಕೆ ಸಕಲೆಂಟು ಜೀವರಾಶಿನೂ ಎಚ್ಚೆತ್ಕಂದಿರ್ತವೆ. ಬ್ಯಾಡ ಮನೆ ಕಡಿಗೆ ಹೋಗುಬುಡಿ ದಮ್ಮಯ್ಯ” ಅನ್ನೋ ಅವರ ಕಕ್ಕುಲಾತಿಗೆ ಹಿಂತಿರುಗಿ ಬಂದೆ. ಬರುವಾಗ ಭೂಮಿಯೇ ಎದ್ದು ರೆಕ್ಕೆ ಬಿಚ್ಚಿ ಗುಡುಗುಡತಾ ಭಯಾನಕವಾಗಿ ಹಾರಿ ಹೋದಂತೆ ಆಯ್ತು. ಅವಳ ಮಾತಿಗೂ ಕಣ್ಮುಂದೆ ಆದ ದೊಡ್ಡ ಸದ್ದಿಗೂ ಒಮ್ಮೆಲೆ ಜೀವ ಢವಗುಟ್ಟಿ ಹೋಯ್ತು. ನಿಂತ ಕಡೇನೆ ನಿಂತೆ.

ಉದ್ದನೆಯ ನವಿಲಿನ ಬಾಲ ಕಾಣಸ್ತು. ನನ್ನನ್ನ ನೋಡಿ ಮೇಯ್ತಿದ್ದ ನವಿಲೊಂದು ಮೇಲೆ ಹಾರಿತ್ತು. ಅದರ ರೆಕ್ಕೆ ಗಿಡಮರಕ್ಕೆ ತಾಗಿ ಆ ಸದ್ದು ಬಂದಿತ್ತು. ಅದು ಅ ಮರಗಳ ನಡುವೆ ಬಿಸಿಲು ನೆರಳು ಬೆಳಕಿನಾಟದಲ್ಲಿ ಸುಳುವಿನಂತೆ ತೇಲಿ ಹೋದ ಚೆಂದಕ್ಕೆ ನೋಡತಾ ನಿಂತೆ. ಬಣ್ಣದ ವಿಮಾನವೊಂದು ಬೆನ್ನು ಹಾಕಿ ಬಾಲ ಎಳಿತಾ ತೇಲಿ ಕಣ್ಮರೆ ಆಗಿತ್ತು. ಗಳಿಗೆ ಹಿಂದೆ ಇದ್ದದ್ದು ಈಗ ಇಲ್ಲವಾಗಿತ್ತು. ಮೌನದಲ್ಲಿ ಜೀಗುಡುವ ಜೇನಿನ ಸದ್ದೊಂದು ಬಿಟ್ಟರೆ ಎಲ್ಲವೂ ಸ್ತಬ್ಧ. ತೋಟದ ಕೆಲಸಗಾರರಿಗೆ ಒಂದು ವಾರ ರಜೆ. ಅಡ್ಡಾಡುವಾಗ ಹೂವುದರದಿರ್ಲಿ ಅಂತ ಹಿರಿಯರ ನಿಯಮ ಇರಬೇಕು.

ಮೊಗ್ಗು ನೂಕಿ ಮೊದಲ ಮಳೆಗೆ ಕಾಯುತ್ತಾ ನಿಲ್ಲುವ, ಮಳೆ ಬಂದು ೯ ನೆ ದಿನಕ್ಕೆ ಹೂವು ಜೇನ್ನಾಗುವ, ಜೇನು ಗೂಡಾಗುವ, ನಂತರ ಕಾಯಿಕಟ್ಟಿ ಕೆಂಪನೆ ಜೊಂಪೆಜೊಂಪೆ ಹಣ್ಣಾಗಿ ಕಪ್ಪನೆ ಸಿಪ್ಪೆಯ ಬೀಜವಾಗಿ ಅದು ಚಿಗುರುವ ಆಸೆ ಹೊತ್ತು ನಿಲ್ಲುವ ಪ್ರಕ್ರಿಯೆ ಕಂಡ ಮನುಜ ತನ್ನ ವರಮಾನಕ್ಕೆ ಬದುಕಿಗೆ ಪ್ರಕ್ರುತಿಯ ನಿಯಮಕ್ಕೆ ಈ ಬೆಳೆಯನ್ನು ಹೊಂದಾಣಿಕೆ ಮಾಡಿಕೊಂಡಿದ್ದಾನೆ. ಅದನ್ನು ಪಲ್ಪರ್ ಮಾಡಿ ನೀರಲ್ಲಿ ಹರಿ ಬಿಟ್ಟು ಸಿಪ್ಪೆಯಿಂದ ಅಗಲಿಸಿ ಹದವಾಗಿಸಿ ಕಾಪಿ ಬೀಜದ ದಳವಾಗಿಸಿ ಮತ್ತೆ ಅದನ್ನು ಹುರಿದು ಪುಡಿಮಾಡಿ, ಚಿಕೋರಿಯ ಸಾಂಗತ್ಯದಲ್ಲಿ ಕುದಿಸಿ ಹಾಲು ಸಕ್ಕರೆ ಮಿಳಿತವಾಗಿ ಕಾಫ಼ಿ ಲೋಟ ಕೈಗೆತ್ತಿಕೊಳ್ಳುವ ಅವನು ನಿಜಕ್ಕೂ ಹುಚ್ಚು ಸಾಹಸಿ .

ಅದೇನೆ ಇರಲಿ. ಕಾಪಿ ಹೂಮಳೆ…. ನೋಡಿ ನೋಡಿ ತಣಿಯಿತ್ತು ಜೀವ. ಬೇಕಾದವರನ್ನು ನೆನೆಯಿತ್ತು ಎಂದರೆ ತಪ್ಪಾಗಲಾರದು. ಮೂಗಂತು ಸೊಕ್ಕಿತ್ತು. ಮತ್ತೆ ಹೆತ್ತೂರಿಂದ ಪ್ರಯಾಣ ತವರ ಕಡೆಗೆ ಸಾಗಿ ಒಂದೆಪ್ಪತ್ತು ಮೈಲಿ ಹೂವಿನ ಹಾದಿ ಹಾದು ಸುತ್ತಾಟ ಮುಗಿಸಿ, ಕಣ್ಣು ಕಿವಿ ಮೂಗನ್ನ ಪಾವನ ಮಾಡಕಂಡು ಅಣ್ಣನ ಕಾಪಿ ತೋಟ ಸೇರಿ ಮಲಗಿದಾಗ ಜೀವ ಧನ್ಯವಾಗಿತ್ತು. ಇನ್ನೆರಡು ದಿನ ಮಳೆ ಬರದಿದ್ದರೆ ಕಾಪಿ ನಾಡಿನವರು ಬಚಾವು. ಯಾಕೆ ಅಂದ್ರೆ ಹೂವಾದಾಗ ಮಳೆ ಬಂದ್ರೆ ಅದು ಉದುರಿ ತೊಟ್ಟಿಗೆ ನೀರು ಸೇರುತ್ತೆ. ಆಗ ಕಾಯಿ ಕಚ್ಚುವ ಪಾತ್ರ ಕರಗಿ ಹೋಗುತ್ತೆ. ಕಟ್ಟಿದ್ದ ಮೋಡ ನೋಡಿಕೊಂಡೇ ಎಲ್ರೂ ಓಡಾಡತಿದ್ರು.

ನಂತರದ ಮುಂದಿನ ಮಳೆಗಳು ಕಾಲಕಾಲಕ್ಕೆ ಮೈ ನೆರೆದು ಹರಿಯಲೇಬೇಕು. ಎಷ್ಟೊಂದು ಆತಂಕಗಳು…..ರೈತರಿಗೆ. ಆದರೆ….. ಎರಡು ವರುಷದಿಂದ ಸರಿಯಾಗಿ ಮಳೆಯಿರದ ಊರಲ್ಲಿ ಕೆರೆ ಕಟ್ಟೆ ಹಳ್ಳಗಳೆಲ್ಲಾ ಬತ್ತಿದ್ದವು ಅನ್ನುವ ಆತಂಕ ಮಲಗಿದ್ದರೂ ಎದೆಯೇರಿತ್ತು. ಆದರೂ ಚಂಡಮಾರುತದ ಬೀಸಿಗೆ,  ಬಿದ್ದ ಮಳೆ ಹಾಗೂ ಮೋಡದ ವಾತಾವರಣಕ್ಕೆ ಹಸಿರು ಹೊದ್ದು  ಬಿಸಿಲಿಗೆ ಮೈ ನೆರೆದ ನಮ್ಮ ಭೂಮ್ ತಾಯಿ ಅಂದು ಮಲ್ಲಿಗೆ ನಗೆಯಲ್ಲಿ

ಮನತಣಿಸಿ ಗಾಳಿಯನ್ನು ತಂಪಾಗಿಸಿ ಅಂದಿನ ರಾತ್ರಿಯಲ್ಲಿ ನಮಗೆ ರಗ್ಗು ಹೊದ್ದಿಸಿ ಮಲಗಿಸಿದ್ದಳು.

ಕಣ್ಣು ಮುಚ್ಚಿದ್ದರೂ ಎಂದೂ ಬತ್ತದಿರುವ ಹೇಮಾವತಿಯಂಥ ಚಿರಯೌವ್ವನೆಯ ಸೇತುವೆ ದಾಟುವಾಗ ಕಾರಿನ ಕಿಟಕಿಯಲ್ಲಿ ಮಧ್ಯಾಹ್ನ ಅವಳನ್ನು ಕಂಡಾಗ ಅವಳು ಭಣಗುಡುತಿದ್ದಳು. ಅಗಾಧ ನೀರ ಪಾತ್ರ ಬರಿದಾಗಿ ಗುಂಡಿಯಲ್ಲಿ ನೀರು ಕೆಸರಂತೆ ನಿಂತಿತ್ತು. ಈಗಲೂ ನೆನೆದರೆ ಸಕಲೇಶನನ್ನೇ ಮುಳುಗಿಸಿ ಭೋರ್ಗರೆಯುತಿದ್ದ ಹೊಳೆಯೊಡಲು ಬರಿದಾಗಿ ಮಳೆಗೆ ಭಿಕ್ಷೆಯೊಡ್ಡಿ ನಿಂತಂತೆ ಅನ್ನಿಸುತ್ತದೆ.  ಇದೇ ಮೊದಲು ಖಾಲಿ ಹೊಳೆ ಪಾತ್ರವನ್ನು ನಾವು ಕಂಡಿದ್ದು. ಸೇತುವೆ ದಾಟುವಾಗ ಕಣ್ತುಂಬುತ್ತಿದ್ದ ನೀರು, ನೀರು, ನೀರು ಎತ್ತ ನೋಡಿದರತ್ತ ಚಾಚಿರುತಿದ್ದ ನೀರ ಹರಿವು. ಸೇತುವೆ ದಾಟುವಾಗೊಮ್ಮೆ ಜೀವ ಝುಂ ಎನ್ನುವಂತೆ ಇರುತಿದ್ದ ನೀರ ಪಾತ್ರವನ್ನ ಮನುಷ್ಯನ ದುರಾಸೆಗೆ ಅಡವಿಟ್ಟು ಹೇಮೆ ಈಗ ಹಾಳು ಹೊಡೆಯುತ್ತಿದ್ದಳು. ಆದರೆ ಕಾಪಿ ನಾಡಿಗೆ ಕಾಪಿ ನಾಡೇ ಹೂವಾಗಿ ಮೈ ನೆರೆದದ್ದನ್ನು ನೆನೆದಾಗ ಇನ್ನೂ ಜೇನು ಕರೆಯುತ್ತಿರುವ ಅವಳೊಡಲ ತಾಕತ್ತನ್ನು ಕಂಡಾಗ ಆ ತಾಯಿಗೆ ಮಳೆಹೊಳೆಯನ್ನು ತಂದು ತನ್ನೊಳಗೆ ಮತ್ತೆ ಮುಳುಗಿಸಿಕೊಳ್ಳುವ ಅಪರಿಮಿತ ಸಾಧ್ಯತೆ ಇದೆ ಎಂಬ ನಂಬಿಕೆಯ ಆಶಯವೂ ಬಂತು.

ಸ್ಥಳದ ಜನರನ್ನು ಕುರಿತು ಅಲ್ಲಿಯವರೇ ಆದ ಹಿರಿಯರಾದ ನಮ್ಮ ಆ ನೆಂಟ ಭಾವಾರು ಕಳಕಳಿಯಿಂದ ಹೇಳಿದ ಮಾತಿದು. “ನಮ್ಮೂರಿನ ಸೊಬಗಿಗೆ ಜನ ಬರತರೆ. ಅದನ್ನು ಸವಿಯಲು. ಈ ಸೊಬಗನ್ನು ಮುಕ್ಕಾಗದಂತೆ ಕಾಪಾಡಬೆಕು ಅಂದ್ರೆ ಅತಿಥಿಗಳಿಗೆ ಹಾಗೂ ತಮಗೇ ಒಂದು ನಿಯಮಾವಳಿಯನ್ನು ಇಲ್ಲಿಯವರು ಹಾಕಿಕೊಳ್ಬೇಕು. ನಮ್ಮವರು ಅನಾವಶ್ಯ ರಸ್ತೆ ಮಾಡದ ಬಿಡಬೇಕು. ಮ್ಯಾಲೆ ಗುಡ್ಡದ ತಾವಿಂದ ಕೆಳಗೆ ಹರಿಯೋ ಹಳ್ಳದತಂಕ ಇಟಾಚಿ ತಂದು ದೊಗುಸ್ತರೆ ಮಣ್ಣೊಡಲ ರಾಜಣ್ಣ. ನಮ್ಮ ಎದೇನೆ ಬಗುಸ್ದಂಗೆ ಆಗುತ್ತೆ. ಏನಂತೀರಾ? ಬೆಂಗಳೂರು ಮಾಡತಾ ಕೂತವ್ರೆ ಇಲ್ಲಿ ನಮ್ಮೂರರು. ನೀವು ನೋಡಬೇಕು ಗಲಾಟೆಘೌಜು. ಮೊನ್ನೆ ಅಬ್ಬಿಗೆ ಹೋಗಿದ್ದೆ. ಜನ ಜನ, ಕಸ ಸುರದು ನೀರಲ್ಲಿ ಕಾಲಿಡಂಗಿಲ್ಲ. ನೀರಿಗಿಳದ್ರೆ ಸಾಕು ಗಾಜಿನ ಚೂರು ಕಾಲಿಗೊಡಿತವೆ. ಮೊನ್ನೆ ನಮ್ಮ ಹುಡುಗ್ರು ಗಲಾಟೆ ಮಾಡಿ ಏನೋ ನಿಯಮಾವಳಿ ಮಾಡಕಂದರಂತೆ. ಇಕಾ ಇಲ್ಲಿ ನೋಡಿ. ಒಂದು ಕರಪತ್ರ ಮಾಡಿ ಕೊಟ್ಟವರೆ ಓದಿ.

“ಅತಿಥಿಗಳು ಅಮಾನವೀಯವಾಗಿ ನಡೆಯುವುದನ್ನು ಶಿಸ್ತಿನಿಂದ ದೂರವಿಡಿ. ನಿಮ್ಮ ಹೊಳೆ ಹಳ್ಳಕೊಳ್ಳಗಳನ್ನು, ನಿಮ್ಮ ನೆಲಜಲವನ್ನು ಬರುವ ಅತಿಥಿಗಳು ಎಚ್ಚರಿಕೆಯಿಂದ ಗೌರವದಿಂದ ಶುಚಿತ್ವದಿಂದ ಇದ್ದು ನೋಡಿ ಹೋಗುವಂತೆ ರೂಢಿಸಿ. ಪ್ರವಾಸೋದ್ಯಮ ತಪ್ಪಲ್ಲ. ಅದರ ಆಕ್ರಮಣ ತಪ್ಪು. ಸ್ಥಳದವರಿಗೆ ಈ ಎಚ್ಚರಿಕೆ ಹಾಗೂ ಅಕ್ಕರೆ ಎರಡೂ ಇರಲಿ. ಇಲ್ಲದಿದ್ದರೆ ಒಂದು ದಿನ ನಾವೇ ಗುಳೇ ಹೋಗುವ ಪರಿಸ್ಥಿತಿಗೆ ತಲಪುತ್ತೇವೆ. ಈಗ ಉಳಿದಿರುವ ಸಂಪತ್ತನ್ನಾದರೂ ಕಾಪಾಡಿಕೊಳ್ಳುವ ಪ್ರಯತ್ನ ನಮಗಿರಲಿ.”

“ದುಡ್ಡಿರೋರು ಬಂದು ಮಲೆನಾಡ ಸೆರಗಲ್ಲಿ ಮಲಗಿ ಎದ್ದು ಹೋಗುವಾಗ ಗಾಜು ಗೊಸರು ಹಾಕಿ, ನಮ್ಮ ನೆಲದಲ್ಲಿ ಹೇತು ಹೋತರೆ. ಕಟುವಾಗಿದೆ ರಾಜಣ್ಣ ಮಾತು. ಏನ್ಮಾಡತೀರಿ? ಜಗತ್ತು ಉಳಿಬೇಕಂದರೆ ಮಳೆಬೆಳೆ ಬದುಕಬೇಕಂದರೆ ಅದು ಒಂದು ಶುಭ್ರತನವನ್ನ ಬೇಡುತ್ತೆ. ಹಸಿರು ಉಳಿಬೇಕು ಅಂದ್ರೆ, ಅದ್ರ ಉಸಿರಂಗಿರೊ ನೀರನ್ನ ಜಿಪುಣತನ ಮಾಡಿ ಬಳಸಬೇಕು. ಏನಂತೀರ? “ಗಿಣಿ ಮಾತು ಕಲ್ತು ತನ್ನ ಹೇಲು ತಾನು ತಿನ್ಕತಂತೆ” ಅನ್ನೋ  ಹಂಗೆ ಆಗೋ ಕಾಲ ದೂರ ಇಲ್ಲ ನೋಡಿ. ಒಬ್ಬ ಮಕ್ಳು ಊರಲ್ಲಿ ಉಳಿತಿಲ್ಲ. ಉಳದವ್ಕೆ ತಮ್ಮ ಸಂಪತ್ತು ಏನು ಅನ್ನದು ತಿಳಿತಿಲ್ಲ. ಏನ್ಮಾಡತೀರ?  ಒಂದ್ಸಲ ಶಿವರಾಮ ಕಾರಂತರು ನಮ್ಮ ಮಹರಾಜಾ ಕಾಲೇಜಿಗೆ ಬಂದಾಗ ಭಾಷಣದಲ್ಲಿ ಒಂದು ಮಾತು ಹೇಳಿದ್ರು.” ನಾವು ನಡೆದಾಡುವ ದಾರಿಯನ್ನು ನಾವೇ ಹೇಸಿಗೆಗೊಳಿಸಿದರೆ ಮುಂದೆ ನಮ್ಮ ಮಕ್ಕಳು ಅದೇ ದಾರಿಯಲ್ಲಿ ನಡೆದಾಡುತ್ತಾರೆ ಎಂಬ ಎಚ್ಚರಿಕೆಯಿರಲಿ.” ಅವರು ನೋಡಿ ನುಡಿದಂಗೆ ನಡೆದೋರು. ನಮ್ಮವಕ್ಕೆ ಈ ತಿಳುವಳಿಕೆನೆ ಇಲ್ಲಲ. ಏನ್ಮಾಡತೀರ? ಬರುತ್ತೆ ಅಂತೀರ….. ”  ಅವರ ಆತಂಕದ ಒದ್ದಾಟಕ್ಕೆ ನಮ್ಮ ಮಾತು ನಿಂತು ಹೋಗಿದ್ದವು.

ಆ ಹಿರಿಯರು ವಿಧ್ಯಾಭ್ಯಾಸ ಮಾಡಿ ಊರಲ್ಲಿ ನೆಲೆನಿಂತು ಗಂಭೀರವಾಗಿ ವ್ಯವಸಾಯವನ್ನೇ ನಂಬಿ ಬದುಕಿದ ಆ ಸ್ಥಳದವರು. ನನ್ನ ನಿದ್ದೆಗಣ್ಣಲ್ಲಿ ಏನೆಲ್ಲಾ ಯೋಚನೆಗಳು…..ಕಂಡ ಸೌಂದರ್ಯದ ಜೊತೆಯಲ್ಲೇ ಹೆಣಕೊಂಡಿರುವ

ಕಂಡ ಆತಂಕದ ಲಹರಿಗಳು.

6 Comments

 1. P.kousalya
  April 4, 2017
 2. Sharadamurthy
  April 3, 2017
 3. Anonymous
  April 2, 2017
  • H.R.sujatha
   April 4, 2017
 4. ಗೀತಾ
  April 2, 2017
  • H.R.sujatha
   April 4, 2017

Add Comment

Leave a Reply