Quantcast

GST ಎಂಬ ತಮ್ಮ; TFA ಎಂಬ ಅಣ್ಣ; WTO ಎಂಬ ಅಪ್ಪ ಮತ್ತು ಕಾಂಗ್ರೆಸ್ -BJP ಎಂಬ ದಾಯಾದಿಗಳು

 

1993ರ ವೇಳೆಗೆ ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಮತ್ತು ಅಂದಿನ ಹಣಕಾಸು ಸಚಿವರಾಗಿದ್ದ ಡಾ| ಮನಮೋಹನ್ ಸಿಂಗ್ಅ ವರು ಜನರಲ್ ಅಗ್ರೀಮೆಂಟ್ಸ್ ಆನ್ ಟ್ರೇಡ್ ಅಂಡ್ ತಾರಿಫ್ (GATT) ಎಂಬ ಅಂತಾರಾಷ್ಟ್ರೀಯ ವ್ಯವಹಾರ ಒಪ್ಪಂದಕ್ಕೆ ಭಾರತದ ಒಪ್ಪಿಗೆ ನೀಡುವ ಹಂತದಲ್ಲಿದ್ದರು.

ಜಸ್ವಂತ್ ಸಿಂಗ್ ಎಂಬ ಸೇನಾನಿ ಹಾಗು ವೀರೇನ್ ಷಾ ಎಂಬ ವ್ಯವಹಾರಸ್ಥ ಬಿಟ್ಟರೆ ಅಂದಿನ ಬಿಜೆಪಿಯಲ್ಲಿ ಬೇರಾರಿಗೂ ಈ ಒಪ್ಪಂದದ ಬಗ್ಗೆ ಸುತಾರಂ ಮನಸ್ಸಿರಲಿಲ್ಲ. ಆಡ್ವಾಣಿ, ವಾಜಪೇಯಿ ಆದಿಯಾಗಿ ಎಲ್ಲರೂ GATT  ವಿರುದ್ಧ ಇದ್ದರು.

ಸ್ವತಃ ವಾಜಪೇಯಿಯವರು “ಭಾರತ ಡಂಕಲ್ ಪ್ರಸ್ತಾಪದ ಕರಡು ಪ್ರತಿಗೆ ಒಪ್ಪಿಗೆ ನೀಡಲು ಐಎಂಎಫ್ ಮತ್ತು ವಿಶ್ವಬ್ಯಾಂಕಿನ ಚಿತಾವಣೆಗಳೇ ಕಾರಣ” ಎಂದು ನೇರವಾಗಿ ಹರಿಹಾಯ್ದಿದ್ದರು. ಮುಂದೆ BJP ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಈ ಕೆಳಗಿನನಿರ್ಣಯವನ್ನೂ ಸ್ವೀಕರಿಸಿತ್ತು:

“ನಾವು ಕೇಳಿದ್ದು fair trade ಹೊರತು free trade ಅಲ್ಲ, ಆದರೆ ನಮಗೆ ಸಿಕ್ಕಿರುವುದು ಅತ್ಯಂತ ಅನ್ಯಾಯದ ಟ್ರೇಡಿಂಗ್ ವ್ಯವಸ್ಥೆಯಾಗಿದ್ದು, ಇಲ್ಲಿ ಸಿರಿವಂತ ದೇಶಗಳು ತಮ್ಮ ಆರ್ಥಿಕ ಮತ್ತು ರಾಜಕೀಯ ಬಲಗಳನ್ನು ಬಳಸಿ ಬಡ ದೇಶಗಳ ಮೇಲೆ ಸವಾರಿ ಮಾಡಿವೆ. ಇದರಿಂದಾಗಿ ಭಾರತದ ಗ್ರಾಹಕರು ಮತ್ತು ಉತ್ಪಾದಕರು ಬಲವಾನ ವಿದೇಶೀ ಕಾರ್ಪೋರೇಟ್ ಗಳ ಎದುರು ಕೈಯೊಡ್ಡಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.

ತೃತೀಯ ಜಗತ್ತು ಈಗ ಮತ್ತೆ ಹೊಸ ವಿಧದ ಕೊಲೋನಿಯಲ್ ಆಕ್ರಮಣದ ಅಪಾಯ ಎದುರಿಸುತ್ತಿದೆ” (ಇದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯು 1993ರಲ್ಲಿ GATT  ಒಪ್ಪಂದದ ಮೇಲೆ ಸ್ವೀಕರಿಸಿದ ನಿರ್ಣಯದ ಕನ್ನಡ ರೂಪ.)

ಈವತ್ತು WTOದ್ದೇ ಮರ್ಜಿ

ಈವತ್ತಿನ ಸ್ಥಿತಿಯಲ್ಲಿ WTO ಒಪ್ಪಂದದ ಪರವಾಗಿ ನಿಲ್ಲದೆ ಬೇರೆ ಹಾದಿ ಇಲ್ಲ ಎಂಬುದು ಸತ್ಯ; ಅದರ ಒಳಿತು –ಕೆಡಕುಗಳ ವಿಶ್ಲೇಷಣೆ ಬೇರೆಯದೇ ಚರ್ಚೆ. ಆದರೆ, ಹಿಂದೆ ವಿರೋಧ ಪಕ್ಷವಾಗಿದ್ದಾಗ ಕೇವಲ ರಾಜಕೀಯ ಕಾರಣಗಳಿಗಾಗಿ ಈ ನಿರ್ಧಾರವನ್ನು ವಿರೋಧಿಸಿ ಒಂದು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಪಕ್ಷವೊಂದು ಈಗ ತಾನು ಅಧಿಕಾರಕ್ಕೆ ಬಂದಮೇಲೆ ಅದೇ ನಿರ್ಧಾರವನ್ನು ಬಿರುಸಿನಿಂದ ತೆಗೆದುಕೊಳ್ಳುತ್ತಾ, ಅದು ತನ್ನದೇ ಸಾಧನೆ ಎಂದು ಕ್ರೆಡಿಟ್ ತೆಗೆದುಕೊಳ್ಳುತ್ತಿರುವುದು “ಸಾರ್ವಜನಿಕ ನೆನಪು ಎಷ್ಟು ಅಲ್ಪಾಯು” ಎಂಬುದನ್ನಲ್ಲದೇ ಬೇರೇನನ್ನೂ ಸೂಚಿಸುವುದಿಲ್ಲ.

2010ರ ಹೊತ್ತಿಗೇ ಭಾರತ ದೇಶದ ಒಳಗಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ  ಸರಕು ಮತ್ತು ಸೇವಾ ತೆರಿಗೆ (GST) ಮತ್ತು ಅಂತಾರಾಷ್ಟ್ರೀಯ ಸೀಮಾ ಸುಂಕವನ್ನೊಳಗೊಂಡ ವ್ಯವಹಾರಗಳಿಗಾಗಿ ವಾಣಿಜ್ಯ ಸೌಲಭ್ಯ ಒಪ್ಪಂದ (Trade Facilitation Agreement – TFA)  ಮಾಡಿ ಮುಗಿಸಿಕೊಳ್ಳಬೇಕಿತ್ತು. ಆದರೆ ಕಾಂಗ್ರೆಸ್ಸು ದೇಶವನ್ನು ವಿದೇಶಿ ಕಾರ್ಪೋರೇಟ್ ಗಳಿಗೆ ಮಾರುತ್ತಿದೆ ಎಂಬ ವಿಪಕ್ಷಗಳ ವಿರೋಧಕ್ಕೆ ಮಣಿದ ಅಂದಿನ ಕಾಂಗ್ರೆಸ್ ಸರ್ಕಾರ ರೂಪಾಯಿಯ ಪರಿವರ್ತನೀಯತೆ ಸೇರಿದಂತೆ ಉದಾರೀಕರಣದ ಎಲ್ಲ ರಂಗಗಳಲ್ಲೂ ವಿನಾಕಾರಣ ಬ್ರೇಕ್ ಹಾಕಿಸಿಕೊಳ್ಳಬೇಕಾಯಿತು.

ಡಾ| ಮನಮೋಹನ್ ಸಿಂಗ್ ಅವರಿಗೆ ತಾನು ನಂಬಿದ್ದ ಹಾದಿಯಲ್ಲಿ ನಡೆಯಲು ವ್ಯವಸ್ಥೆ  ಬಿಡದಿದ್ದುದರಿಂದ ಅಂತಿಮವಾಗಿ ಡಾ| ಸಿಂಗ್ ಮತ್ತವರ ಉದಾರೀಕರಣ ನೀತಿ ಎಡಬಿಡಂಗಿಯಂತೆ ಕಾಣಿಸಿಕೊಳ್ಳುವಂತಾಯಿತು.

ಈವತ್ತಿಗೆ ಯಾರೇ ಅಧಿಕಾರದಲ್ಲಿದ್ದರೂ, ಈ GST ಮತ್ತು  TFAಗಳಿಗೆ ಒಪ್ಪಿಗೆ ನೀಡುವುದು ಅನಿವಾರ್ಯವಾಗಿತ್ತು. ಯಾಕೆಂದರೆ, ದೇಶಕ್ಕೆ ಸಾಲ ಕೊಟ್ಟಿರುವ ವಿಶ್ವಬ್ಯಾಂಕ್, ADB ಯಂತಹ ಸಂಸ್ಥೆಗಳು ಇದನ್ನು ಅನಿವಾರ್ಯಗೊಳಿಸಿ, ದೇಶದ ಮೇಲೆ ಒತ್ತಡ ಹಾಕಿ ಕುಳಿತಿದ್ದವು. ಆದರೆ ಹಾಲೀ ಕೇಂದ್ರದಲ್ಲಿರುವ ಸರ್ಕಾರ ಮಾತ್ರ ಬಹಳ ಚಾಣಾಕ್ಷತನದಿಂದ ಇದು ತನ್ನದೇ ಸಾಧನೆ ಎಂದು ತನ್ನ ತುತ್ತೂರಿ ಮಾಧ್ಯಮಗಳ ಮೂಲಕ ಊದಿಸಿಕೊಳ್ಳುತ್ತಾ WTO  ಶರತ್ತುಗಳಿಗೆಲ್ಲ ಒಪ್ಪಿಗೆ ಕೊಡುತ್ತಿದೆ. GSTಗೆ ಸಂಸತ್ತಿನ ಅನುಮೋದನೆ ಸಿಕ್ಕಿದ್ದು, 2017  ಜುಲೈನಿಂದ ಜಾರಿಗೆ ಬರಲಿದೆ.

TFA ಅನುಷ್ಠಾನ ಅಂತಿಮ ಹಂತ ತಲುಪಿದ್ದು, ಕೇಂದ್ರ ಸರಕಾರ ಈಗಾಗಲೇ WTO ಒಪ್ಪಂದದ ವಿಧಿ 23.2 ರನ್ವಯ ಕ್ಯಾಬಿನೆಟ್ ಸೆಕ್ರೆಟರಿ ಪಿ. ಕೆ. ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ National Committee on Trade Facilitation (NCTF) ನ್ನು ರಚಿಸಿದೆ. ಆದರೆ ಈಗ ಅಮೆರಿಕದಲ್ಲಿ ಬದಲಾಗಿರುವ ಸನ್ನಿವೇಶದಲ್ಲಿ ಅಲ್ಲಿನ ಆಡಳಿತ ತನ್ನ ವೀಸಾ ನೀತಿಯಲ್ಲಿ ಬದಲಾವಣೆಗಳನ್ನು ಘೋಷಿಸಿದೆ.

ಹಾಗಾಗಿ TFA ಸವಲತ್ತು “ಟ್ರೇಡ್” ಜೊತೆ “ಸೇವೆ”ಗಳಿಗೂ ಅಗತ್ಯ ಎಂಬ ಹೊಸ ವರಾತವನ್ನು ಭಾರತ ತೆಗೆದಿದ್ದು,  2017 ಡಿಸೆಂಬರಿನಲ್ಲಿ ಅರ್ಜಂಟೀನಾದ ಬ್ಯುನೊಸ್ ಐರಿಸ್ ನಲ್ಲಿ ಜರುಗಲಿರುವ ಉನ್ನತ ಮಟ್ಟದ ಶ್ರಂಗಸಭೆಯಲ್ಲಿ  ಈ ವಿಚಾರ ಚರ್ಚೆ ಆಗಲಿದೆ. ಅಮೆರಿಕ, ಐರೋಪ್ಯ ದೇಶಗಳು ಭಾರತದ ಈ ನಿಲುವನ್ನು ವಿರೋಧಿಸುವ ನಿರೀಕ್ಷೆಯಿದ್ದು, ಈ ಬಗ್ಗೆ ಏನು ತೀರ್ಮಾನ ಆಗಲಿದೆ ಎಂಬುದು ಸದ್ಯಕ್ಕೆ ಕುತೂಹಲಕರ ಸಂಗತಿಯಾಗಿದೆ.

Add Comment

Leave a Reply