Quantcast

ಎಲ್ಲೆಲ್ಲೂ ಇರುತ್ತಾರೆ ಪುಟ್ಟ ದೇವರುಗಳು..

ಪ್ರಸಾದ್ ಶೆಣೈ ಆರ್ ಕೆ

“ದೇವರನ್ನು ಗುಡಿಯಲ್ಲಿ ಹುಡುಕಿ ಹೋಗುವವರಿಗೆ ಈ ಪುಟ್ಟನ ಫೋಟೋವನ್ನು ತೋರಿಸು, ಅಂತ ಜಯಂತ ಕಾಯ್ಕಿಣಿ ಅವರು ಯಾವುದೋ ಮನೆಯ ಅಂಗಳದಲ್ಲಿ ಕೂತು ಸೈಕಲ್ ರಿಪೇರಿ ಮಾಡುವ ಮಗುವಿನ ಚಿತ್ರ ನೋಡಿ ಪ್ರತಿಕ್ರಿಯೆ ಕೊಟ್ಟರು.

ಹೌದಲ್ಲಾ ದೇವರಿರೋದು ಆ ಪುಟ್ಟ ಮಗುವಿನೊಳಗೇ, ಅವನು ಧ್ಯಾನದಿಂದ ಮಾಡುತ್ತಿದ್ದಾನಲ್ಲ ಆ ತನ್ಮಯತೆಯೊಳಗೆ, ಪ್ರತೀ ಕ್ಷಣದಲ್ಲೂ ಬೆರಗೂ ಕಂಡುಕೊಂಡು ಸೈಕಲ್ಲಿನ ನೆಟ್ಟು ಬೋಲ್ಟು ಬಿಚ್ಚಿ ಇದನ್ನೀಗ ಏನಾದರೂ ಮಾಡಬೇಕು ಎಂದುಕೊಂಡು ಆ ಮಾಡುವ ವಿಚಿತ್ರ ಧ್ಯಾನಸ್ಥ ಸ್ಥಿತಿಯಲ್ಲಿಯೇ ಜಗವ ಮರೆತಿದ್ದಾನಲ್ಲ ಹೌದು ದೇವರಿರೋದು ಅಲ್ಲಿ ಆ ಬೆರಗುಗಣ್ಣಲ್ಲಿ..

..ಆ ಕ್ಷಣದ ಕೂತೂಹಲಕ್ಕೆ ಭಕ್ತಿಪರವಶನಾಗಿಬಿಟ್ಟಿವೆಯಲ್ವಾ ಅವನ ಆ ಮಾಯಕದ ಬೆರಳುಗಳಲ್ಲಿ ದೇವರಿದ್ದಾನೆ ಅಂತ ನಿಜಕ್ಕೂ ಅನ್ನಿಸಿಬಿಟ್ಟಾಗ ಆ ಕ್ಷಣವೆಲ್ಲಾ ಅದ್ಯಾವೋದೋ ಸುಪ್ತ ಸುಖ, ಅದ್ಯಾವುದೋ ಜೀವನ ಪ್ರೀತಿಯ ತುಣುಕು ಸಿಕ್ಕಿಬಿಟ್ಟಿತು ನನಗೆ.

ಯಾವುದೋ ಒಂದು ಊರಲ್ಲಿ ಈ ಪುಟ್ಟ ದೇವರಂತಹ ಪುಟ್ಟ ಜಿಗ್ಗನೇ ಪ್ರತ್ಯಕ್ಷನಾಗಿ ಕ್ಯಾಮರಾಕ್ಕೆ ಸಿಕ್ಕಿದ್ದೂ ನನ್ನ ಪಾಲಿಗೇ ದೇವರೇ ಸಿಕ್ಕಿದಂತಾಯಿತಲ್ಲ ಅಂತನ್ನಿಸಿ ನಿರುಮ್ಮಳನಾಗಿಬಿಟ್ಟೆ. ಹೀಗೆಲ್ಲಾ ಸಿಗುವ ದೇವರಂತಹ ಪುಟ್ಟ ಪುಟ್ಟಿಯರೇ ಬದುಕು ಅನ್ನೋದು ಎಷ್ಟೊಂದು ಸರಳ, ಎಷ್ಟೊಂದು ಚೆಂದ, ಎಷ್ಟೊಂದು ಸುಲಲಿತ ಅನ್ನೋದನ್ನು ಪ್ರತೀ ಕ್ಷಣಾನೂ ಹೇಳಿಕೊಡುತ್ತಲೇ ಇರುತ್ತಾರೆ.

ಕಡಲತಡಿಗೆ ಹೋಗುವಾಗ ಅಲ್ಲೊಂದು ಪುಟ್ಟನು ಮರಳಿನಿಂದ ಗೊಂಬೆ ಮಾಡುತ್ತಿರುತ್ತಾನೆ. ಆ ಗೊಂಬೆಯನ್ನು ದೂರದಿಂದ ನೋಡುವ ಕಡಲಅಲೆ ಕ್ಷಣಾರ್ಧದಲ್ಲಿಯೇ ಬಂದು ಗೊಂಬೆಯನ್ನು ತಿಂದು ಹಾಕುತ್ತದೆ. ಆದರೆ ಪುಟ್ಟ ಬಿಡುವುದಿಲ್ಲ ಮತ್ತೆ ಗೊಂಬೆ ಮಾಡುತ್ತಾನೆ. ಆ ಪುಟ್ಟನ ತಾಳ್ಮೆ ಇನ್ನಷ್ಟು ಬೆಳೆಯುತ್ತದೆ. ಅವನ ಬೆರಳುಗಳು ಆ ಸೂರ್ಯನ ಬೆರಗಾದ ಬೆಳಕಿನ ಜತೆ ಕುಣಿಯುತ್ತಾ ಮತ್ತೊಂದು ಮರಳ ಬೆಳಕಿನ ಅರಮನೆಯನ್ನು ಕಟ್ಟಿಯೇ ಕಟ್ಟುತ್ತದೆ. ಮತ್ತೆ ಬಂದು ಕಡಲ ತೆರೆಗಳು ಅಳಿಸಿ ಹಾಕಬಹುದು ಎನ್ನುವ ಚಿಂತೆಯೇ ಆ ಪುಟ್ಟನಿಗಿಲ್ಲ.

ಆ ಕ್ಷಣದ ಕುರಿತಷ್ಟೇ ಅವನ ಯೋಚನೆ. ತಾಳ್ಮೆಯಿಂದ ಮರಳ ಮನೆ ಕಟ್ಟೋದು, ಅದಕ್ಕೆ ಕೊನೆಯ ಸ್ಪರ್ಶ ನೀಡೋದು, ಆ ಕ್ಷಣದ ಅವನ ಬೆರಗು ಕಣ್ಣಲ್ಲಿ ಏನೇನು ಮೂಡುತ್ತದೋ ಅದನ್ನೆಲ್ಲಾ ಆ ಮರಳ ಮನೆಯ ಪುಟ್ಟ ಗೋಡೆಗೆ ಹಚ್ಚಿಬಿಡೋದು, ಆ ಕ್ಷಣದಲ್ಲಿ ತನ್ನ ಬೆರಳಿಗೆಷ್ಟು ಮರಳು ಸಿಗುತ್ತದೋ ಅದನ್ನೇ ಆ ಕ್ಷಣದ ಸ್ಪೂರ್ತಿಯಾಗಿಸಿ, ಮರಳಿನ ಮೂರ್ತಿಯಾಗಿಸಿಬಿಡೊದು ಇದಷ್ಟೇ ಅವನಿಗೆ  ಮುಖ್ಯ.

ಆ ಪುಟ್ಟ ಕೊನೆಗೊಮ್ಮೆ ತೃಪ್ತನಾಗಿ ತುಂಬು ಚಂದಿರನಂತೆ ನಕ್ಕುಬಿಡುತ್ತಾನಲ್ಲ ಅದು ತಿಳಿವಿನ ಬೆಳಕು, ಅವನು ಮಾಡಿದ ಪುಟ್ಟ ಮನೆ ಇದೆಯಲ್ಲಾ ಅದು ದೇವರ ಗರ್ಭಗುಡಿ, ದೇವರಿರೋದು ಅವನ ಬೆರಳ ಸುಖದಿಂದ ಮಾಡಿದ ಆ ಮರಳಿನಲ್ಲಿ. ಬಿಸಿಲು ತೀಡಿ ಬೆವರಾಗಿದೆ ಅಲ್ವಾ ಅವನ ಆ ಹೆರಳಿನಲ್ಲಿ..

ಯಾವುದೇ ಆಡಂಭರದ ಪೂಜೆ ಬೇಡದ ಪುಟ್ಟ ದೇವರುಗಳು ಎಲ್ಲೆಲ್ಲೆಲ್ಲಿ ಸಿಕ್ಕಿಬಿಡುತ್ತಾರೆ ಗೊತ್ತಾ? ಗಲ್ಲಿಯೊಂದರ ಮಾವಿನ ಮರದ ನೆರಳಲ್ಲಿ, ಅಮ್ಮನ ತೊಡೆಯಲ್ಲಿ ಕೂತು ಅಷ್ಟೂ ಪ್ರಯಾಣಿಕರನ್ನು ನೋಡಿ ಪಿಳ್ಳೆಂದು ನಗುವ ಬಸ್ಸಿದ ಮೊದಲ ಸೀಟಿನಲ್ಲಿ, ಯಾರೂ ಇಲ್ಲದ ನೀರವ ಮದ್ಯಾಹ್ನ ಬಿಸಿಲು ಸುರಿಯುವ ಮನೆಯ ಅಂಗಳದಲ್ಲಿ, ತರಕಾರಿ ರಾಶಿಗಳ ನಡುವಿನ ಬೆಂಡೆಯಂತಹ ನಗುವಿನಲ್ಲಿ,ಬಾಹುಬಲಿ ಬೆಟ್ಟದ ಬಾಹುಬಲಿಯ ಮುಗುಳಿನಲ್ಲಿ, ಅಬ್ಬಾ ಎಲ್ಲೆಲ್ಲೂ ಈ ಪುಟ್ಟ ದೇವರುಗಳೇ ತುಂಬಿದ್ದಾರೆ…

ಮಕ್ಕಳಿರಲ್ಲವ್ವಾ ಮನೆತುಂಬಾ ಅಂತಾರಲ್ಲ ಈ ಮಾತಿನ ಹಿಂದೆ ಮನೆ ತುಂಬಾ ಇಂತಹ ದೇವರಿರಲಿ ಅಂತ ಅಲ್ವಾ? ಮನೆಯಲ್ಲಿ ರಾಶಿ ರಾಶಿ ದೇವರ ಫೋಟೋಗಳು ಇರದಿದ್ದರೂ ಚಿಂತಿಲ್ಲ. ಕೋಣೆ ಕೋಣೆಗೂ ಮಗುವಿನ ಕೇಕೆ ಕೇಳುತ್ತದಲ್ಲಾ? ಮನೆಪೂರ್ತಿ ಧೂಪ,ಉದುಬತ್ತಿಯ ಪರಿಮಳ ಹರಿಯದಿದ್ದರೂ ಚಿಂತಿಲ್ಲ, ಮನೆ ಪೂರ್ತಿ ಮಗುವಿಗಷ್ಟೇ ಇರುವ ಸುವಾಸನೆ ಹರಿಯುತ್ತಲೇ ಇರುತ್ತದೆ ಅಲ್ವಾ ಇದಕ್ಕಿಂತ ಬೇರೆ ಸುಖ ಏನಿದೆ ಹೇಳಿ?

ನಾವೆಲ್ಲಾ ದೊಡ್ಡವರಾಗಿಬಿಟ್ಟಿದ್ದೇವೆ.ಯಾವುದೋ ಮೋಸದ ಮುಖವಾಡ ಹಾಕಿಕೊಂಡು, ಸಹಜ ನಗುವನ್ನೇ ನುಂಗಿಕೊಂಡು ವಾಟ್ಯಾಪ್‍ಗಳ ಹಳದಿ ಮಂಗಣ್ಣ ಇಮೋಜಿಗಳಂತಹ ಕೃತಕ ನಗುವಿನಲ್ಲೇ ತುಂಬಿಕೊಂಡು, ಅಂಗಳದಲ್ಲೊಂದು ಹಕ್ಕಿ ನೀರಿಲ್ಲದೇ ವಿಲ ವಿಲ ಅನ್ನುತ್ತಿದ್ದರೂ ಡಿಸ್ಕವರಿ ಚಾನೆಲ್‍ಗಳ ಹಕ್ಕಿ ನೋಡಿಕೊಂಡು, ಮಾವು ಮಿಡಿಬಿಟ್ಟರೂ ನೋಡದೇ, ಗುಲಾಬಿ ಪರಿಮಳ ಸೂಸಿದರೂ ಮೂಸದೇ, ಒಳಗೊಂದು ಚೆಂದ ಹಾಡು ಮೂಡಿದರೂ ಹಾಡದೇ ದೊಡ್ಡವರಾಗಿಬಿಟ್ಟಿದ್ದೇವೆ. ನಮ್ಮ ಮನೆಯಲ್ಲಿರುವ ಪುಟ್ಟ ಮಕ್ಕಳ ಜೊತೆಗೂ ಸೇರಿಕೊಂಡು ನಾವು ಅರೆಕ್ಷಣ ಮಕ್ಕಳಂತಾಗಲೂ ಕಷ್ಟ ಪಡುತ್ತಿದ್ದೇವೆ. ಅಥವಾ ನಮ್ಮಂತೆಯೇ ಅವರನ್ನು ಬೇಗ ದೊಡ್ಡವರನ್ನಾಗಿ ಮಾಡಿ ಖುಷಿ ಪಡುತ್ತಿದ್ದೇವೆ.

ಆದರೆ ಒಂದಂತೂ ಸತ್ಯ ನಮ್ಮಲ್ಲಿ ಮಗುತನವಿಲ್ಲದೆ ನಾವು ನಿಜವಾದ ಮನುಷ್ಯರಾಗುವುದಿಲ್ಲ. ದಿನ ನಿತ್ಯ ನಮ್ಮನ್ನು ಸರಿದು ಹೋಗುವ ಸಣ್ಣ ಸಣ್ಣ ಖುಷಿಗಳು ನಮಗೆ ಕಾಣಿಸೋದಿಲ್ಲ.. ಕ್ಷಣ ಕ್ಷಣಕ್ಕೂ ನಾವು ಬೆರಗಾಗೋದೂ ಇಲ್ಲ. ಮಳೆಗೆ ನೆನೆಯಬೇಕು ಅನ್ನಿಸೋದೂ ಇಲ್ಲ. ಮಕ್ಕಳು ಆಡೋವಾಗ ಅವರ ಜೊತೆ ಆಡೋದು ಬಿಡಿ, ಅವರ ಆಟ ನೋಡಬೇಕು ಅನ್ನಿಸೋದೂ ಇಲ್ಲ. ಯಾಕಂದ್ರೆ ನಾವು ದೊಡ್ಡವರಾಗಿಬಿಟ್ಟಿದ್ದೇವೆ ಅಲ್ವಾ?

One Response

  1. Sarojini Padasalagi
    April 5, 2017

Add Comment

Leave a Reply