Quantcast

ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ..

ಬಿಸಿ ಬಿಸಿ ಕಜ್ಜಾಯ,ರುಚಿ ರುಚಿ ಕಜ್ಜಾಯ
ಎಂಬ ಹಾಡು ಹುಟ್ಟಿದ್ದು ಹೇಗೆ ಗೊತ್ತಾ?

ಆರ್ ಟಿ ವಿಠ್ಠಲಮೂರ್ತಿ 

ಅವತ್ತು ಕುಮಾರಪಾರ್ಕ್ ಬಳಿಯಿದ್ದ ಮನೆಗೆ ಬಂದ ಅವರು ‘ಇವತ್ತು ತಿನ್ನಲು ಕಜ್ಜಾಯ ಮಾಡಿ ಹೊಟ್ಟೆ ತುಂಬ ತಿಂದು ನೆಮ್ಮದಿಯಾಗಿದ್ದು ಬಿಡುತ್ತೇವೆ’ ಎಂದವರೇ ಪಕ್ಕದಲ್ಲಿದ್ದವರನ್ನು ಒಮ್ಮೆ ನೋಡಿ ನಕ್ಕರು. ಅವತ್ತು ಅವರ ಜತೆಗಿದ್ದವರು ಚಿ||ಉದಯಶಂಕರ್.

ಹೀಗವರನ್ನು ಜತೆಯಾಗಿ ಕರೆದುಕೊಂಡು ನಿಷ್ಕಲ್ಮಶ ನಗೆಯ ಮೂಲಕ ಮನೆಯ ಒಳಗೆ ಬಂದವರು ಕನ್ನಡದ ವರ ನಟ ಡಾ||ರಾಜ್ ಕುಮಾರ್. ಅವರಿಗೆ ಕಜ್ಜಾಯ ಎಂದರೆ ಬಹಳ ಇಷ್ಟ. ಅಂದ ಹಾಗೆ ಕಜ್ಜಾಯ ಅಂದರೆ ಇಲ್ಲಿನ ತರಹದ ಸಿಹಿ ತಿಂಡಿಯಲ್ಲ. ಮಲೆನಾಡಿನ ಕಡೆ ಅಕ್ಕಿಯಲ್ಲಿ ಮಾಡುವ ಕೋಡುಬಳೆಯ ರೂಪದ ತಿಂಡಿ.

ನಿಜ ಹೇಳಬೇಕೆಂದರೆ ರಾಜ್ ಕುಮಾರ್ ಅವರು ಒಂದರ್ಥದಲ್ಲಿ ಯೋಗಿ ಇದ್ದಂತೆ. ಹೊಟ್ಟೆ ತುಂಬ ಹಸಿವು, ಕಣ್ಣ ತುಂಬ ನಿದ್ದೆ, ಮಾಡುವ ಕೆಲಸದಲ್ಲಿ ಅಪೂರ್ವ ಶ್ರದ್ಧೆ. ಸರಿ, ಮನೆಯಲ್ಲಿ ಅವತ್ತು ಕಜ್ಜಾಯ ಸಹಿತ ಭೂರೀ ಭೋಜನ. ರಾಜ್ ಕುಮಾರ್ ಹಾಗೂ ಚಿ||ಉದಯಶಂಕರ್ ಚೆಂದಗೆ ಊಟ ಮಾಡಿದರು. ನೆಮ್ಮದಿಯಾಗಿ ವಿಶ್ರಾಂತಿ ಪಡೆದರು.

ನಿಮಗೆ ಚಿ||ಉದಯಶಂಕರ್ ಗೊತ್ತು.ಕನ್ನಡ ಚಲನ ಚಿತ್ರರಂಗವನ್ನು ತಮ್ಮ ಅದ್ಭುತ ಹಾಡುಗಳ ಮೂಲಕ ಶ್ರೀಮಂತಗೊಳಿಸಿದ ದೊಡ್ಡ ವ್ಯಕ್ತಿ ಅವರು. ರಾಜ್ ಕುಮಾರ್ ಹಾಗೂ ಚಿ||ಉದಯ ಶಂಕರ್ ತುಂಬ ಸಲ ಹೀಗೆಯೇ ಮನೆಗೆ ಬಂದು ಬಿಡುತ್ತಿದ್ದರು. ತಿಂಡಿ,ಊಟ ಅಂತ ಮಾಡಿ ನೆಮ್ಮದಿಯಾಗಿ ಕಾಲ ಕಳೆಯುತ್ತಿದ್ದರು.

ಸರಿ,ಇದಾದ ಮರುದಿನವೇ ‘ಹಾವಿನ ಹೆಡೆ’ ಪಿಕ್ಚರಿನ ಹಾಡೊಂದರ ರೆಕಾರ್ಡಿಂಗು. 1981 ರ ಸುಮಾರಿಗೆ ತೆರೆ ಕಂಡ ಚಿತ್ರ ಅದು. ಅಂದರೆ ಅದು ತೆರೆ ಕಾಣುವ ಮುನ್ನಿನ ಘಟನೆ ಇದು. ಇರಲಿ,ಹೀಗೆ ಕಜ್ಜಾಯದ ರುಚಿ ಸವಿದು ವಿಶ್ರಾಂತಿ ಪಡೆದ ಈ ಜೋಡಿ ಮರುದಿನವೇ ರೆಕಾರ್ಡಿಂಗ್ ನಲ್ಲಿ ಪಾಲ್ಗೊಳ್ಳಬೇಕಿತ್ತು.

ಆ ಚಿತ್ರದಲ್ಲಿ ರಾಜ್ ಕುಮಾರ್ ಅವರು ಹಾಡು ಹೇಳುತ್ತಾ ಫೈಟಿಂಗ್ ಮಾಡುವ ಸೀನು ಇತ್ತು. ಆ ಸೀನಿಗೆ ಅಗತ್ಯವಾದ ಹಾಡನ್ನು ಚಿ||ಉದಯಶಂಕರ್ ಬರೆಯಬೇಕಿತ್ತು.

ತಕ್ಷಣ ಅವರಿಗೆ ನೆನಪಿಗೆ ಬಂದಿದ್ದು ಹಿಂದಿನ ದಿನ ನಮ್ಮ ಕುಮಾರಪಾರ್ಕ್ ಮನೆಯಲ್ಲಿ ತಿಂದ ಕಜ್ಜಾಯ. ಹಾಗಂತಲೇ: ‘ಬಿಸಿ-ಬಿಸಿ ಕಜ್ಜಾಯ,ರುಚಿ-ರುಚಿ ಕಜ್ಜಾಯ ಮಾಡಿಕೊಡಲೇ ನಾನು, ಹಿಂದೆ ಎಂದು ತಿಂದೇ ಇಲ್ಲ, ಮುಂದೆ ಎಂದೂ ತಿನ್ನೋದಿಲ್ಲ. ಜನುಮಜನುಮದಲ್ಲಿ ನೆನಪಲಿ ಉಳಿಯುವ..’ ಅಂತ ಶುರು ಮಾಡೇಬಿಟ್ಟರು.

ಆ ಹಾಡು ಅದೆಷ್ಟುಜನಪ್ರಿಯವಾಯಿತೆಂದರೆ ಅದನ್ನುಕೇಳಿದಾಗಲೆಲ್ಲ ನಾವು ರಾಜ್ ಕುಮಾರ್ ಹಾಗೂ ಚಿ||ಉದಯಶಂಕರ್ ಬಂದು ಕಜ್ಜಾಯದ ಊಟ ಮಾಡಿ ಹೋದ ಘಟನೆಯನ್ನುನೆನಪಿಸಿಕೊಳ್ಳುತ್ತೇವೆ.

ಹೀಗೆ ಹಳೆಯದನ್ನು ಸ್ಮರಿಸಿಕೊಳ್ಳುತ್ತಾ, ತಮ್ಮ ಬದುಕಿನ ವಿಶೇಷ ಅನುಭವಗಳನ್ನು ಹಂಚಿಕೊಳ್ಳುತ್ತಾ, ಇವತ್ತು ಸದಾಶಿವನಗರದ ತಮ್ಮ ಬಂಗಲೆಯಲ್ಲಿ ಪ್ರೀತಿಯಿಂದ ಕಜ್ಜಾಯದ ಊಟ ಮಾಡಿಸಿದವರು ಮಧು ಬಂಗಾರಪ್ಪ.

ಅವರು ನಾಡು ಕಂಡ ಅದ್ಭುತ ನಾಯಕ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರ. ನಾನು ಮೊದಲು ನೋಡಿದಾಗ ಅವರು ‘ಆಕಾಶ್ ಆಡಿಯೋ’ ಸಂಸ್ಥೆಯ ವ್ಯವಹಾರಗಳೊಂದಿಗೆ, ತಂದೆ ಬಂಗಾರಪ್ಪ ಅವರ ಜತೆ ಸದಾ ನೆರಳಿನಂತೆ ಇದ್ದರು.

ಕ್ಲಾಸಿಕ್ ಕಂಪ್ಯೂಟರ್ ಹಗರಣದ ನೆಪದಲ್ಲಿ ಬಂಗಾರಪ್ಪ ಅವರನ್ನು ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿದರಲ್ಲ? ಆ ಸಂದರ್ಭದಲ್ಲಿ angry young man ತರಹ ಪಕ್ಕದಲ್ಲೇ ಇರುತ್ತಿದ್ದವರು.

ನನಗಿನ್ನೂನೆನಪಿದೆ. ಮುಂದೆ ಬಂಗಾರಪ್ಪ ಅವರು ಕೆಸಿಪಿ ಕಟ್ಟಿದ ನಂತರ ದಾವಣಗೆರೆಯಲ್ಲಿ ಪಕ್ಷದ ಸಮಾವೇಶ ಮಾಡಿದರು. ಆ ಸಮಾವೇಶದ ಸಕಲ ಉಸ್ತುವಾರಿಗಳನ್ನು ನೋಡಿಕೊಂಡವರು, ನಮ್ಮನ್ನೆಲ್ಲ ಅಲ್ಲಿಗೆ ಕರೆದುಕೊಂಡು ಹೋದವರು ಇದೇ ಮಧುಬಂಗಾರಪ್ಪ.

ನಿಜ ಹೇಳುತ್ತೇನೆ.ನನ್ನ ಬದುಕಿನಲ್ಲಿ ಒಂದು ಸಮಾವೇಶಕ್ಕೆ ಅಷ್ಟು ಜನ ಸೇರಿದ್ದನ್ನುನಾನು ಹಿಂದೆ ನೋಡಿರಲಿಲ್ಲ. ಇವತ್ತಿನ ತನಕ ನೋಡಿಯೂ ಇಲ್ಲ. ದಾವಣಗೆರೆಯ ಆ ಸಮಾವೇಶದ ತುದಿಯಲ್ಲಿದ್ದ ಜನರನ್ನು ನೋಡಲು ಸಾಧ್ಯವೇ ಇರಲಿಲ್ಲ. ಆ ಮಟ್ಟಿಗೆ ಜನ, ಜನ, ಜನ ಜಾತ್ರೆ.

ಆದರೆ ಆಗಲೂ ಮಧು ಬಂಗಾರಪ್ಪ ರಾಜಕೀಯಕ್ಕೆ ಬರುತ್ತಾರೆ ಅಂತ ನಾವ್ಯಾರೂ ಊಹಿಸಿರಲಿಲ್ಲ. ಹೀ ಈಸ್ ಸಕ್ಸಸ್ ಫುಲ್ ಬಿಸಿನೆಸ್ ಮ್ಯಾನ್. ಅದೇನೇ ಏರಿಳಿತಗಳಿದ್ದರೂ ಆಗಲೇ ಅದನ್ನು ಒಂದು ಲಯದಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದ್ದವರು ಅವರು. ಹೀಗಿದ್ದಾಗ ಅವರೇಕೆ ರಾಜಕೀಯಕ್ಕೆ ಬರುತ್ತಾರೆ?

ಆದರೆ ಪರಿಸ್ಥಿತಿ ಅವರನ್ನು ರಾಜಕೀಯಕ್ಕೆ ಎಳೆದುಕೊಂಡು ಬಂತು. ಅವರೀಗ ಜೆಡಿಎಸ್ ಶಾಸಕ. ಒಂದು ಕುತೂಹಲದ ಸಂಗತಿ ಏನು ಗೊತ್ತಾ? ಬಂಗಾರಪ್ಪ ಅವರು ಮೊಟ್ಟ ಮೊದಲಬಾರಿ ಶಾಸಕರಾಗಿದ್ದು 1967 ರಲ್ಲಿ. ಈಗ 2017. ಅಂದರೆ ಬರೋಬ್ಬರಿ ಐವತ್ತು ವರ್ಷ. ತಂದೆಯ ಕಿರೀಟ ಐವತ್ತನೇ ವರ್ಷದಲ್ಲಿ ಮಗ ಮಧುಬಂಗಾರಪ್ಪ ಅವರ ನೆತ್ತಿಯಮೇಲೆ ಕೂತಿದೆ. ಮುಂದಿನ ದಿನಗಳಲ್ಲಿ ಅವರು ಮಂತ್ರಿಯಾದರೂ ಅಚ್ಚರಿಪಡುವುದೇನಿಲ್ಲ.

ಇವತ್ತು ನೆನಪಿಸಿಕೊಂಡು ಹೇಳಲು ಹೊರಟರೆ, ಬಂಗಾರಪ್ಪ ಅವರ ಬದುಕಿನ ಸಾವಿರ ಘಟನೆಗಳನ್ನು ನಾನು ಹೇಳಬಲ್ಲೆ. ಹೀ ಈಸ್ ಏ ಬಾರ್ನ್ ಲೀಡರ್. ಸಂಗೀತ ಕ್ಷೇತ್ರಕ್ಕೆ ಒಬ್ಬ ಭೀಮಸೇನ್ ಜೋಷಿ, ಚಲನಚಿತ್ರ ಲೋಕಕ್ಕೆ ಡಾ||ರಾಜ್ ಕುಮಾರ್ ಹೇಗೋ?ಅದೇ ರೀತಿ ರಾಜಕೀಯ ರಂಗದ ಅತ್ಯಪರೂಪದ ನಾಯಕ ಬಂಗಾರಪ್ಪ.

ಇವತ್ತು ಮಧು ಬಂಗಾರಪ್ಪ ಅವರು ಪ್ರೀತಿಯಿಂದ ಬಡಿಸಿದ ಕಜ್ಜಾಯವನ್ನು ತಿಂದು ಸದಾಶಿವನಗರದ ಆ ಬಂಗಲೆಯ ಹಾಲ್ ಗೆ ಬಂದು ಕುಳಿತಾಗ ಕಣ್ಣಿಗೆ ಕಾಣಿಸಿದ್ದು ಬಂಗಾರಪ್ಪಹಾಗೂ ಶ್ರೀಮತಿ ಶಕುಂತಲಾ ಬಂಗಾರಪ್ಪ ಅವರ ಫೋಟೋ.

ಬಂಗಾರಪ್ಪ ಅವರು ರಾಜಕೀಯದಲ್ಲಿ ಗೂಳಿಯಂತೆ ಮುನ್ನುಗ್ಗುತ್ತಿದ್ದರಲ್ಲ? ಆಗೆಲ್ಲ ಸಾರ್ವಜನಿಕ ವಲಯಗಳಲ್ಲಿ ಒಂದುಮಾತು ಕೇಳಿ ಬರುತ್ತಿತ್ತು. ಅದೆಂದರೆ,ಬಂಗಾರಪ್ಪ ಅವರ ಬೆನ್ನ ಹಿಂದೆ ಒಂದು ಅಪೂರ್ವ ಶಕ್ತಿಯಿದೆ. ಆ ಶಕ್ತಿ ಇರುವುದರಿಂದ ಬಂಗಾರಪ್ಪ ಅವರನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಾಗುತ್ತಿಲ್ಲ ಅಂತ.

ಈ ಶಕ್ತಿ ಅವರ ಪತ್ನಿ ಶ್ರೀಮತಿ ಶಕುಂತಲಾ ಬಂಗಾರಪ್ಪ. ಬದುಕಿನ ಕೊನೆಯ ದಿನಗಳ ತನಕ ಆ ತಾಯಿ, ಮನೆಯಲ್ಲಿದ್ದವರಿಂದ ಹಿಡಿದು, ಗೇಟಿನ ಕಾವಲುಗಾರರ ತನಕ ಎಲ್ಲರ ಊಟವಾಯಿತಾ? ಎಂಬುದನ್ನು ಕನ್ ಫರ್ಮ್ ಮಾಡಿಕೊಂಡ ಮೇಲೆ ತಾವು ಊಟ ಮಾಡುತ್ತಿದ್ದರು. ಅಂತಹ ಶ್ರೀಮಂತ ಮನಸ್ಸಿನ ತಾಯಿ ಅವರು. ಹೀಗಾಗಿ ಅವರ ಹಾಗೂ ಬಂಗಾರಪ್ಪ ಅವರ ಬಾವಚಿತ್ರವನ್ನುತುಂಬ ಹೊತ್ತು ನೋಡಿ ಹೊರಬಂದೆ. ಒಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಅಪೂರ್ವ ತ್ಯಾಗದ ಕತೆಗಳು ಇರುತ್ತವೆ ಅನ್ನಿಸಿ ಮೂಕನಾದೆ.

ಇದೆಲ್ಲದರ ಮಧ್ಯೆ ನಾವು ಗೆಳೆಯರು ಅಂದರೆ.. ಸೋಮಣ್ಣ, ಶಿವರಾಜು, ಲಕ್ಷ್ಮೀನಾರಾಯಣ, ರಾಜಶೇಖರ್, ಮೋಹನ್ ಕುಮಾರ್, ಹೆಗಡೆ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಗೆಳೆಯರು ಮಧುಬಂಗಾರಪ್ಪ ಅವರ ಜತೆ ಕೂತು ನೆಮ್ಮದಿಯಿಂದ ಕಾಲ ಕಳೆಯುವಂತೆ, ಎಲ್ಲ ಜಂಜಡಗಳನ್ನು ಮರೆಯುವಂತೆ ಮಾಡಿದ ಸ್ನೇಹಿತರಾದ ಗೋಪಾಲ್ ಪ್ರೀತಿಯಿಂದ ನಗುತ್ತಾ ನಮ್ಮ ಜತೆಗಿದ್ದರು.

ಹೀಗೆ ಒಟ್ಟಿಗೆ ತುಂಬ ಹೊತ್ತು ಕಳೆದು ಸದಾಶಿವನಗರದ ಆ ಮನೆಯಿಂದ ವಾಪಸ್ಸು ಬರುವಾಗ ಪುನ: ನಾನು ಅವರಿಗೆ ಒಂದು ಪ್ರಶ್ನೆ ಕೇಳಿದೆ.ಸಾರ್, ನಿಮ್ಮ ಬದುಕಿನಲ್ಲಿ ಮರೆಯಲಾಗದ ಒಂದುಸಂಗತಿಯನ್ನು ಹೇಳಿ ಎಂದೆ.

ಅರೆ ಕ್ಷಣ ಸುಮ್ಮನಾದ ಮಧು ಬಂಗಾರಪ್ಪ: ಕಾಡುಗಳ್ಳ ವೀರಪ್ಪನ್ ಗ್ಯಾಂಗು ರಾಜ್ ಕುಮಾರ್ ಅವರನ್ನು ಕಿಡ್ ನ್ಯಾಪ್ ಮಾಡಿತಲ್ಲ? ಅದಾದ ನಂತರ ಆತಂಕದ ಘಳಿಗೆಗಳು ಮುಗಿದು ಅವರ ಬಿಡುಗಡೆಯ ಸಂದರ್ಭ ಬಂತು.ಆಗ ನಾವು ಹಲವರು ತಮಿಳ್ನಾಡಿನ ಧರ್ಮಪುರಿ ದಾಟಿ ಕೊಳತ್ತೂರು ಮಣಿ ಅವರ ಮನೆಗೆ ತಲುಪಿದೆವು. ಅಲ್ಲಿ ನನ್ನನ್ನು ನೋಡುತ್ತಲೇ ರಾಜ್ ಕುಮಾರ್ ಅವರು:

“ಮಧು, ನನ್ನನ್ನುನೋಡಲು ನೀನು ಬಂದ್ಯಾಪ್ಪ” ಅಂತ ಪ್ರೀತಿಯಿಂದ ಆಲಿಂಗಿಸಿದರು. ಅವರ ಆಲಿಂಗನದ ಘಮ ಹೊತ್ತ ನನ್ನ ಷರಟನ್ನು ಒಂದು ವರ್ಷ ಕಾಲ ನಾನು ಒಗೆದೇ ಇರಲಿಲ್ಲ. ಒಗೆದರೆ ಎಲ್ಲಿ ಆ ಘಮ ಹೋಗುತ್ತದೋ?ಅಂತ. ಆದರೆ ಈಗ: ನನ್ನಂತವರ ಬದುಕಿಗೇ ಅವರ ವಿಶ್ವಾಸದ ಘಮ ಅಂಟಿಕೊಂಡಿದೆ ಅನ್ನಿಸುತ್ತಿದೆ ಎಂದರು.

ಅವರ ಒಂದೊಂದು ಮಾತನ್ನೂ ಆಲಿಸುತ್ತಾ, ನಾಡು ಇವತ್ತು ಎದುರಿಸುತ್ತಿರುವ ನಾಯಕರ ಕೊರತೆಯನ್ನು ನೀಗಿಸಲು ಮಧು ಬಂಗಾರಪ್ಪ ಅವರಂತವರ ಅಗತ್ಯವಿದೆ ಅನ್ನಿಸಿತು. ಅವರಿಗೆ ಸದಾ ಕಾಲ ಒಳ್ಳೆಯದಾಗಲಿ. ಛಲ ಬಿಡದೆ, ತಂದೆ ಬಂಗಾರಪ್ಪ ಅವರಂತೆಯೇ ಮೇಲಕ್ಕೇರಲಿ ಅಂದುಕೊಳ್ಳುತ್ತಾ ವಾಪಸ್ಸುಬಂದೆ.

Add Comment

Leave a Reply