Quantcast

ಸರ್ಕಾರಿ ತುರಿಕಜ್ಜಿ ಮತ್ತು ಖಾಸಗಿ ‘ಸ್ಯಾಂಡ್’ ಪೇಪರ್

ಹದವಾಗಿ ತುರಿಸುವ ಕಜ್ಜಿಯ ಹಿತಾನುಭವಕ್ಕೆ ಮನುಷ್ಯ ಒಗ್ಗಿಹೋದಾಗ ಹೀಗೆಲ್ಲ ಆಗುತ್ತದೆ. ನಮ್ಮ ಸರ್ಕಾರ ಮತ್ತು ವ್ಯವಸ್ಥೆಗೆ ಕರಾವಳಿಯ ಮರಳು ಗಣಿಗಾರಿಕೆ ಎಂಬುದು ಇಂತಹದೊಂದು ತುರಿಕೆಯ ಹಿತಾನುಭವ ಕೊಡಲಾರಂಭಿಸಿ ಈಗ ಆರು ವರ್ಷಗಳು ಕಳೆದಿವೆ. ಆದರೆ ಈಗೀಗ ಈ ಕಜ್ಜಿಯ ತುರಿಕೆ ತೀವ್ರಗೊಳ್ಳಲಾರಂಭಿಸಿದ್ದು, ಸ್ಯಾಂಡ್ ಪೇಪರಿನ ತೀಡುವಿಕೆ ಹುಣ್ಣಾಗುವ ಹಂತದ ಲಕ್ಷಣಗಳು ಕಾಣಿಸಲಾರಂಭಿಸಿವೆ. ಮೊನ್ನೆ ಉಡುಪಿ ಜಿಲ್ಲಾಧಿಕಾರಿ ಮತ್ತು ಕುಂದಾಪುರದ ಸಹಾಯಕ ಕಮಿಷನರ್ ಅವರ ಮೇಲೆ ನಡೆದಿದೆಯೆನ್ನಲಾದ ಹಲ್ಲೆ ಯತ್ನ ಈ ಹುಣ್ಣು ತೀವ್ರಗೊಳ್ಳುತ್ತಿರುವ ಹಂತದ ಸ್ಪಷ್ಟ ಸೂಚನೆ.

ವಿಷಯ ತೀರಾ ಸರಳ. ರಾಜೀವ್ ಗಾಂಧಿ ಸರಕಾರ 1986ರಲ್ಲಿ ಜಾರಿಗೆ ತಂದ ಪರಿಸರ ಸಂರಕ್ಷಣಾ ಕಾಯಿದೆಯನ್ನು ಅನುಷ್ಠಾನಕ್ಕೆ ತರಲು ರಚಿಸಲಾದ ಸಮಿತಿಗಳಲ್ಲಿ ನೆಲದ ಸಂರಕ್ಷಣೆಗಾಗಿ ರಚಿಸಲಾದ ಸಮಿತಿ ಈಗ ಕಸ್ತೂರಿ ರಂಗನ್ ವರದಿಯ ಹೆಸರಿನಲ್ಲೂ, ಜಲದ ರಕ್ಷಣೆಗಾಗಿ ಎಂ. ಎಸ್. ಸ್ವಾಮಿನಾಥನ್ ಅವರ ನೇತ್ರತ್ವದ ಸಮಿತಿ ನೀಡಿದ ವರದಿ ಈಗ CRZ  ಪ್ರಕಟಣೆಯ ಹೆಸರಿನಲ್ಲಿಯೂ ಅಟಕಾಯಿಸಿಕೊಂಡಿವೆ.

2011ರಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹೊರಡಿಸಿದ “Coastal Regulation Zone Notification”  ಗಝೇಟು ಪ್ರಕಟಣೆಯೇ ಈವತ್ತಿನ ಮರಳು ಸಂಕಟದ ಮೂಲ. ಆ ಪ್ರಕಟಣೆಯಲ್ಲಿ ಸಮುದ್ರ ಮತ್ತು ನದೀತಟಗಳನ್ನು 4 ವರ್ಗಗಳಾಗಿ ವಿಂಗಡಿಸಿ, ಯಾವ ಯಾವ ವರ್ಗಗಳಲ್ಲಿ ಏನೇನು ಚಟುವಟಿಕೆಗಳನ್ನು ಮಾಡಬಹುದು ಮತ್ತು ಏನೇನು ಮಾಡಬಾರದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಉಳಿದಿರುವ ಅಷ್ಟೋ ಇಷ್ಟೋ ಪರಿಸರವನ್ನು ಜೀವಂತ ಉಳಿಸಿಕೊಂಡು ಉಸಿರಾಡಲು ಗಾಳಿ, ಕುಡಿಯಲು ನೀರು, ಬದುಕಲು ಮನೆ ಒದಗಿಸುವುದು ಸರ್ಕಾರದ ಆದ್ಯತೆ ಆಗಬೇಕಿತ್ತು. ಆದರೆ ಈಗ ಅದಕ್ಕೆ ಬದಲು ರಾಜಕಾರಣಿಗಳಿಗೆ, ಸರ್ಕಾರ ನಡೆಸುತ್ತಿರುವ ಅಧಿಕಾರಿಗಳಿಗೆ ಮತ್ತು ವ್ಯವಹಾರಸ್ಥರಿಗೆ ಈ ಪ್ರಕಟಣೆಯಲ್ಲಿ ಕಾಸು ಮಾಡಿಕೊಳ್ಳುವ ಹಾದಿ ಕಂಡಿರುವುದೇ ಇಡಿಯ ಸಮಸ್ಯೆಯ ತಾಯಿಬೇರು.

ಮರಳು ಎಂಬುದು ನದಿಗೆ/ಸಮುದ್ರಕ್ಕೆ ನಮ್ಮ ದೇಹದಲ್ಲಿ ಕೆಂಪುರಕ್ತ ಕಣ ಇದ್ದಂತೆ. ಅದನ್ನು ಮಿತವಾಗಿ ಬಳಸಬೇಕಾದುದು ಈಗ ಅನಿವಾರ್ಯ. ನದಿ ತನ್ನ ಹರಿವಿನೊಂದಿಗೆ ತಂದು ರಾಶಿಹಾಕುವ ಮರಳು ಗುಡ್ಡೆಗಳನ್ನು, ಹೂಳನ್ನು ಸರಕಾರದ ಅನುಮತಿ ಪಡೆದು ತೆಗೆಯುವುದಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಇಷ್ಟೇ ಮರಳು ನ್ಯಾಯಬದ್ಧವಾಗಿ ತೆಗೆದರೆ ಮನೆ ಕಟ್ಟುವವರಿಗೆ ಸಾಕಾಗುತ್ತದೆ. ಆದರೆ ಉಗುರು ತೋರಿಸಿದರೆ ಬೆರಳು-ಕೈಯಲ್ಲ, ಇಡಿಯ ದೇಹವನ್ನೇ ನುಂಗುವ ಪರಿಣತಿ ಪಡೆದಿರುವ ಮರಳು ಗುತ್ತಿಗೆದಾರರು, ಅವರೊಂದಿಗೆ ಕಿಲುಬುಕಾಸಿನಾಸೆಗೆ ಸೇರಿಕೊಂಡಿರುವ ಅಧಿಕಾರಿಗಳು ಇಡಿಯ ಆಟದ ನಿಯಮಗಳನ್ನೇ ಬದಲಾಯಿಸಿಬಿಟ್ಟಿದ್ದಾರೆ. ಇವರ ಕಾಸಿನಾಸೆ ಅನಂತಗೊಳ್ಳುತ್ತಿದೆ.

ಅದರ ಪರಿಣಾಮವಾಗಿ ಅನಧಿಕ್ರತ ಮರಳು ಗಣಿಗಾರಿಕೆ, ಮರಳು ಕಳ್ಳಸಾಗಾಣಿಕೆ,  ಅಕ್ರಮ ಸಂಗ್ರಹ-ಕಾಳಸಂತೆ, ಲಂಚಕೋರತನ, ಕ್ರಿಮಿನಲ್ ಚಟುವಟಿಕೆಗಳು – ಎಲ್ಲವೂ ಅವ್ಯಾಹತವಾಗಿ ನಡೆಯತೊಡಗಿವೆ. ಯಾರೋ ಕೆಲವು ಮಂದಿಯ ಕೋಟಿ ಕೋಟಿಗಳ ಆಸೆಗಾಗಿ ಒಂದೆಡೆ ಪರಿಸರ ನಾಶವಾಗುತ್ತಿದೆ; ಇನ್ನೊಂದೆಡೆ ನಿಜ ಗ್ರಾಹಕರಿಗೆ ಮರಳು ಗಗನ ಕುಸುಮವಾಗಿದೆ. ಇದೆಲ್ಲ ಸರ್ಕಾರಿ ಕ್ರಪಾಪೋಷಿತವೇ ಆಗಿರುವುದರಿಂದ, ಆಯಕಟ್ಟಿನ ಜಾಗಗಳಲ್ಲಿರುವವರಿಗೆ ಇದರಿಂದ ಜೇಬು ತುಂಬುತ್ತಿದೆಯಾದ್ದರಿಂದ ಇದನ್ನು ಬೇರುಸಹಿತ ಕಿತ್ತುಹಾಕುವುದು ಯಾರಿಗೂ ಬೇಕಾಗಿಲ್ಲ.

ಒಂದು ಸರಳ ಲೆಕ್ಕಾಚಾರ ಸಾಕು. 2011ರಿಂದೀಚೆಗೆ ಕರಾವಳಿಯಲ್ಲಿ ರಚಿಸಲಾದ ನಿರ್ಮಾಣಗಳು-ವಸತಿಗಳೆಷ್ಟು? ಅದಕ್ಕೆ ಬಳಸಲಾದ ಮರಳು ಎಷ್ಟು ಮತ್ತು ಮೈನಿಂಗ್ ಮಾಡಿ ತೆಗೆಯಲಾದ ಮರಳು ಎಷ್ಟು? ಎಂಬ ಲೆಕ್ಕ ಸಿಕ್ಕಿದರೆ ಕಳ್ಳತನ ಆಗಿರುವ, ಹೊರಜಿಲ್ಲೆ-ರಾಜ್ಯಗಳಿಗೆ ಸರಬರಾಜಾಗಿರುವ ಮರಳಿನ ಲೆಕ್ಕಾಚಾರ ಕುಳಿತಲ್ಲಿಗೇ ಸಿಗುತ್ತದೆ. ಈ ರೀತಿಯ ಲೆಕ್ಕಾಚಾರಗಳು ಸರ್ಕಾರಕ್ಕೇ ಬೇಕಾಗಿಲ್ಲ. ಯಾಕೆಂದರೆ ಸರ್ಕಾರಗಳ ಭಾಗವಾಗಿರುವವರೇ ಈ ಕಳ್ಳತನದಲ್ಲೂ ಪಾಲುದಾರರಾಗಿದ್ದು, ಇದರಲ್ಲಿ ಪಕ್ಷಭೇದವೂ ಇಲ್ಲ ಎಂಬ ಮಾತು ಕೇಳಿಸುತ್ತಿದೆ.

ಈ ಇಡಿಯ ಪ್ರಕರಣದಲ್ಲಿ ಜನ ಸಾಮಾನ್ಯರ ದಿಕ್ಕು ತಪ್ಪಿಸಲು ಸ್ವತಃ ಸರಕಾರ ಮೂಲ ಕಾಯಿದೆ – ಅದರ ಅನುಷ್ಠಾನದ ಮಾತುಗಳನ್ನು ಬಿಟ್ಟು ಮರಳು ಮಾಫಿಯಾದ ಸಮಸ್ಯೆಗಳ ಪರಿಹಾರಕ್ಕೆ ಟೊಂಕ ಕಟ್ಟಿದೆ. ಆರ್ಥಿಕತೆಯನ್ನು ರಿಯಲ್ ಎಸ್ಟೇಟಿನವರು ಬಿಟ್ಟರೆ ಇನ್ನಾರೂ ಸುಧಾರಿಸಲಾರರು ಎಂದು ನಂಬಿರುವ ಸರ್ಕಾರ ನಡೆಸುವ ಮೆದುಳುಗಳು, ಅವರಿಗೆ ಪ್ರೋತ್ಸಾಹ ನೀಡುವ ಹೆಸರಿನಲ್ಲಿ, ಮನುಷ್ಯವಾಸ ಇಲ್ಲದ ಖಾಲಿ ವಸತಿಗಳ ನಿರ್ಮಾಣಕ್ಕೆ ರಾಶಿ ರಾಶಿ ಪ್ರೋತ್ಸಾಹ ಸುರಿಯುತ್ತಿದೆ. ಈ ರೀತಿ ಅತಿಯಾದದ್ದು ವಿಷವಾಗದೇ ಇನ್ನೇನಾದೀತು? ಆ ವಿಷವೀಗ ಏರಿ ನೆತ್ತಿ ಹತ್ತಿ ಕುಳಿತಿದೆ. ಇಂತಹ ಅಸಹಜ – ಅನಾವಶ್ಯಕ “ಅಭಿವ್ರದ್ಧಿ”ಯ ಹಪಾಹಪಿಯನ್ನು ಮುಲಾಜಿಲ್ಲದೆ ಹತ್ತಿಕ್ಕದಿದ್ದರೆ, ನಾಳೆ ನಮ್ಮ ಮಕ್ಕಳಿಗೆ ನಾವು ಬಿಟ್ಟುಹೋಗಲಿರುವುದು ಬರಿಯ ಮಸಣವನ್ನು!

ಹೆಚ್ಚಿನ ಓದಿಗಾಗಿ:

ಕೇಂದ್ರ ಸರ್ಕಾರ ಮರಳು ಗಣಿಗಾರಿಕೆಗಾಗಿ ರೂಪಿಸಿರುವ ಮಾರ್ಗದರ್ಶಿ ಇಲ್ಲಿದೆ: http://www.moef.nic.in/sites/default/files/Final%20Sustainable%20Sand%20Mining%20Management%20Guidelines%202016.pdf

 

One Response

Add Comment

Leave a Reply