Quantcast

ಈ ಮಳೆ ಆ ಮೂವರನ್ನೂ..

‘ಇರೈವಿ’ ಎನ್ನುವ ಈ ತಮಿಳು ಚಿತ್ರ ನೋಡಿದ್ದು ಅದು ‘ಪಿಜ್ಜಾ’ ಮತ್ತು ‘ಜಿಗರ್ ಥಂಡಾ’ ದಂತಹ ವಿಭಿನ್ನ ಚಿತ್ರ ಕೊಟ್ಟ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಚಿತ್ರ ಎನ್ನುವ ಒಂದೇ ಕಾರಣದಿಂದ.

ಚಿತ್ರ ನೋಡಿದ ಕೂಡಲೆ ನನಗೆ ನೆನಪಾಗಿದ್ದು ಕೆ ಬಾಲಚಂದರ್.

ಸಾಂಪ್ರದಾಯಿಕ ಮೌಲ್ಯಗಳನ್ನೇ ಮರುಸ್ಥಾಪಿಸುವ ಚಿತ್ರಜಗತ್ತಿನಲ್ಲಿ ಕೆ ಬಾಲಚಂದರ್ ಕಟ್ಟಿಕೊಡುತ್ತಿದ್ದ ನಾಯಕಿಯರು ವಿಭಿನ್ನವಾಗಿರುತ್ತಿದ್ದರು, ಸ್ವತಂತ್ರ ವ್ಯಕ್ತಿಗಳಾಗಿರುತ್ತಿದ್ದರು, ಪ್ರಶ್ನಿಸುತ್ತಿದ್ದರು, ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಮತ್ತು ತಮ್ಮ ನಿರ್ಧಾರದ ಹೊಣೆಯನ್ನು ಹೊರುತ್ತಿದ್ದರು. ಅಂದ ಹಾಗೆ ‘ಇರೈವಿ’ ಎಂದರೆ ದೇವತೆ. ಈ ಚಿತ್ರ ಜೀವಂತವಾಗಿರುವ, ಶಿಲೆಯಾದ, ಜೀವಂತವಾಗಿದ್ದೂ ಶಿಲೆಯಂತೆ ಬದುಕುತ್ತಿರುವ ಎಲ್ಲಾ ದೇವತೆಗಳ ಕುರಿತಾದ್ದು.

 

ಚಿತ್ರ ಪ್ರಾರಂಭವಾಗುವಾಗ ಅಲ್ಲಿ ಮಳೆ ಬರುತ್ತಿರುತ್ತದೆ. ಮೂರು ಭಿನ್ನ ಭಿನ್ನ ವಯೋಮಾನದ, ಮನೋಭಾವದ ಹೆಂಗಸರು ತಮ್ಮತಮ್ಮ ಗೆಳತಿಯರ ಜೊತೆ ತಮ್ಮೊಳಗನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲಿ ಒಬ್ಬಾಕೆ ಇಳಿ ವಯಸ್ಸಿನವಳು. ಗಂಡ ಹೇಗೆ ಕೂತಲ್ಲಿ, ನಿಂತಲ್ಲಿ ತನ್ನ ಮಾತಿನಿಂದ, ನಡುವಳಿಕೆಯಿಂದ ತನ್ನ ಜೀವನವನ್ನು ನರಕ ಮಾಡುತ್ತಾನೆ ಎಂದು ಹೇಳಿಕೊಳ್ಳುತ್ತಾ ಕಣ್ಣೀರಿಡುತ್ತಾಳೆ. ಕಿಟಕಿ ಒಳಗೆ ಕೂತೇ, ಮಳೆಗೆ ಕೈ ಚಾಚುತ್ತಾಳೆ.

ಇನ್ನೊಬ್ಬಳು ನಗರದ ಮೇಲ್ ಮಧ್ಯಮ ವರ್ಗಕ್ಕೆ ಸೇರಿದ ಹೆಣ್ಣು, ಯಾಲಿ. ಸಾಫ್ಟ್ ವೇರ್ ಉದ್ಯೋಗಿ. ಅವಳು ಒಬ್ಬ ನಿರ್ದೇಶಕನನ್ನು ಮದುವೆಯಾಗುತ್ತಿದ್ದಾಳೆ. ಪ್ರೀತಿಸಿ ಮದುವೆಯಾದರೆ ಹೇಗೆ ತನ್ನ ವ್ಯಕ್ತಿತ್ವವನ್ನು ಮದುವೆಯ ನಂತರವೂ ಉಳಿಸಿಕೊಳ್ಳಬಹುದು ಎಂದು ಗೆಳತಿಯಲ್ಲಿ ಹೇಳಿಕೊಳ್ಳುತ್ತಿರುತ್ತಾಳೆ. ಅಂತಹ ಆತ್ಮವಿಶ್ವಾಸವನ್ನು ಅವಳ ವಿದ್ಯೆ, ಸಾಮಾಜಿಕ, ಆರ್ಥಿಕ ಸ್ಥಾನಮಾನ ಅವಳಿಗೆ ಕೊಟ್ಟಿದೆ. ಅವಳಿಗೂ ಮಳೆ ಎಂದರೆ ಇಷ್ಟ, ಆದರೆ ಬಟ್ಟೆ ಒದ್ದೆ ಆದರೆ ಎನ್ನುವ ಹೆದರಿಕೆ.

ಮೂರನೆಯ ಹೆಣ್ಣು ಪೊನ್ನಿ, ಹಳ್ಳಿಯ ಹುಡುಗಿ. ಮನೆಯವರು ತೋರಿಸಿದವನನ್ನು ಮದುವೆ ಆಗುತ್ತೇನೆ. ಗಂಡ ಸ್ವಲ್ಪ ಕಮಲ್ ಹಾಸನ್, ಸ್ವಲ್ಪ ರಜನಿಕಾಂತ್ ಥರಹ ಇರಬೇಕು, ಇಬ್ಬರು ಗಂಡು ಮಕ್ಕಳು, ಒಂದು ಹೆಣ್ಣು ಮಗು ಬೇಕು, ಗಂಡ ಆಗಾಗ ಗಟ್ಟಿಯಾಗಿ ತಬ್ಬಿಕೊಳ್ಳುತ್ತಾ, ಮುತ್ತು ಕೊಡುತ್ತಾ ಇದ್ದರೆ ಸಾಕು ಎನ್ನುವುದು ಅವಳ ಸುಖದ ಪರಿಕಲ್ಪನೆ. ಅವಳೂ ಮಳೆ ನೋಡುತ್ತಾ ಇದ್ದಾಳೆ, ಮಳೆಯಲ್ಲಿ ನೆನೆದರೆ, ನೆಂದು ಹೋಗಬಹುದಲ್ಲವಾ ಎನ್ನುವ ಆತಂಕದಲ್ಲಿ ಇದ್ದಾಳೆ.

ಇವರು ಮೂವರನ್ನು ಬಿಟ್ಟು ಅಲ್ಲಿ ಮತ್ತೊಬ್ಬ ಹೆಣ್ಣೂ ಇದ್ದಾಳೆ, ಮಲರ್. ಆಕೆ ಒಬ್ಬ ಕಲಾವಿದೆ, ಗಂಡ ಸತ್ತಿದ್ದಾನೆ. ಬದುಕಿನಲ್ಲಿ ತಾನಿನ್ನು ಎಂದೂ ಯಾರನ್ನೂ ಪ್ರೀತಿಸಲಾರೆ, ಮದುವೆ ಆಗಲಾರೆ, ಆದರೆ ದೈಹಿಕ ಅನುಸಂಧಾನಕ್ಕಾಗಿ ಮಾತ್ರ ನಿನ್ನೊಂದಿಗೆ ಇದ್ದೇನೆ ಎನ್ನುವುದನ್ನು ನೇರ ತನ್ನ ಸಂಗಾತಿಗೆ ಹೇಳುವ ನೇರವಂತಿಕೆಯ ಹೆಣ್ಣು ಅವಳು.

ಇದು ಈ ಚಿತ್ರದ ಹೆಣ್ಣು ಲೋಕ. ಇಲ್ಲಿ ಇನ್ನೊಂದು ಗಂಡು ಲೋಕವೂ ಇದೆ. ಒಬ್ಬಾತ ಹೆಸರು ಮಾಡಿದ ಶಿಲ್ಪಿ. ಆತ ಕೆತ್ತಿದ ಎಷ್ಟೋ ವಿಗ್ರಹಗಳು ದೇವಸ್ಥಾನದಲ್ಲಿ ಪೂಜೆಗೊಳ್ಳುತ್ತಲಿವೆ. ಈತ ಮೊದಲು ಹೇಳಿದ, ಆ ವಯಸ್ಕ ಹೆಂಡತಿಯ ಗಂಡ. ಅವನಿಗೆ ಇಬ್ಬರು ಗಂಡು ಮಕ್ಕಳು, ಮೊದಲನೆಯವನು ಚಿತ್ರ ನಿರ್ದೇಶಕ. ಕೆಲವಾರು ಉತ್ತಮ ಚಿತ್ರಗಳನ್ನು ಕೊಟ್ಟಿದ್ದಾನೆ. ಆದರೆ ತನ್ನ ಹಠದ ಸ್ವಭಾವದಿಂದ ಚಿತ್ರ ನಿರ್ಮಾಪಕನೊಂದಿಗೆ ವೈಮನಸ್ಸಾಗಿ ಈಗ ನಿರ್ಮಾಪಕ ಚಿತ್ರವನ್ನು ಬಿಡುಗಡೆ ಮಾಡುತ್ತಿಲ್ಲ. ತನ್ನ ಅಂತಃಸತ್ವವನ್ನೆಲ್ಲಾ ಸುರಿದು ತಯಾರಿಸಿದ ಚಿತ್ರ ಡಬ್ಬದಲ್ಲಿ ಕೂತಿದೆ ಎನ್ನುವ ಸಂಕಟಕ್ಕೆ ಕುಡಿತದ ದಾಸನಾಗಿದ್ದಾನೆ. ಒಮ್ಮೆ ಉತ್ಸಾಹದಲ್ಲಿ ಹಾಡುತ್ತಾ ಕುಣಿಯುವ, ಮರುಕ್ಷಣ ಆತ್ಮಮರುಕದಲಿ ಕೈ ಚೆಲ್ಲಿ ಕೂತು ಬಾಟಲಿಗೆ ಕೈ ಚಾಚುವ eccentric ವ್ಯಕ್ತಿ ಇವನು. ಶಿಲ್ಪಿಯ ಎರಡನೆಯ ಮಗ ಜಗನ್ ಕಾಲೇಜು ಓದುತ್ತಿದ್ದಾನೆ. ಅವರ ಮನೆಯಲ್ಲಿ ಕೆಲಸಕ್ಕಿರುವ ಹುಡುಗ ಮೈಕೆಲ್. ಇವನೇ ಆ ಕಲಾವಿದೆ ಮಲರ್ ಳ ಸಂಗಾತಿ. ಅವಳನ್ನು ಕಂಡರೆ ಇವನಿಗೆ ಪ್ರೀತಿ, ಪ್ರೇಮ, ವ್ಯಾಮೋಹ ಎಲ್ಲವೂ.

ಇವರ್ಯಾರೂ ದುಷ್ಟರಲ್ಲ, ಹೆಂಡತಿಯನ್ನು, ಹೆಣ್ಣನ್ನು ಹೊಡೆದು ಬಡಿದು ಹಿಂಸೆ ಕೊಡುವುದಿಲ್ಲ. ಆದರೆ ಅದೇನು ಇಲ್ಲದೆಯೇ ಗಂಡು ಕೇವಲ ತನ್ನ ಪುರುಷಾಹಂಕಾರದ ನೆಲೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಹೇಗೆ ಹೆಣ್ಣಿನ ಬಾಳನ್ನು ಕಿಚ್ಚೇ ಇಲ್ಲದ ಉರಿಯಲ್ಲಿ ಬೇಯಿಸುತ್ತದೆ ಎನ್ನುವುದು ಚಿತ್ರದ ಕಥೆ.

ಜೀವನ ಪೂರ್ತಿ ಗಂಡನ ಕೈಯಲ್ಲಿ ನರಳಿದ ಆ ಅಜ್ಜಿ ಈಗ ಕೈಕಾಲು ಬಿದ್ದು ಹೋಗಿ, ಥೇಟ್ ಒಂದು ಜೀವಂತ ಬೊಂಬೆ ಆಗಿದ್ದಾಳೆ. ಅವಳಿಗೆ ಈಗ ಮಲಗಿದಲ್ಲೇ ಎಲ್ಲಾ ಆಗಬೇಕು. ಈಗ ಗಂಡ ಮಕ್ಕಳು ಎಲ್ಲರೂ ಅವಳನ್ನೂ ಥೇಟ್ ಮನೆಯ ದೇವತೆಯನ್ನಾಗಿ ನೋಡಿಕೊಳ್ಳುತ್ತಾರೆ. ಅಂದರೆ ಆಕೆ ದೇವತೆಯಾಗಬೇಕಾದರೆ ಮೊದಲು ಶಿಲೆಯಾಗಬೇಕು, ಜೀವಂತವಿದ್ದರೆ ಅವಳಿಗೆ ಆ ಬೆಲೆ ಸಿಗುವುದಿಲ್ಲ.

ದೊಡ್ಡ ಮಗ ಅರುಳ್ ಕುಡಿತ ಮಿತಿಮೀರಿದೆ. ಆದರೆ ಅವನಲ್ಲಿ ಹೆಣ್ಣನ್ನು ಅದಮ್ಯವಾಗಿ ಪ್ರೀತಿಸುವ, ‘ಕಣ್ಣಾ, ಬುಜ್ಜಿ’ ಎಂದು ಲಾಲಿಸುವ ಕರುಳಿದೆ. ‘ಈ ಚಿತ್ರವನ್ನು ಬಿಟ್ಟುಬಿಡು, ಹೊಸ ಚಿತ್ರ ಮಾಡು’ ಎಂದು ಕೇಳಿಕೊಳ್ಳುವ ಹೆಂಡತಿಗೆ ‘ನಮ್ಮ ಪಾಪು ನಿನ್ನ ಹೊಟ್ಟೆಯಲ್ಲಿದ್ದಾಗ ಯಾರಾದರೂ ಈ ಪಾಪು ಬೇಡ, ಇನ್ನೊಂದು ಮಗುವಾಗುತ್ತದೆ, ಎಂದಿದ್ದರೆ ನಿನಗೆ ಹೇಗಾಗುತ್ತಿತ್ತು ಬುಜ್ಜಿ, ನನಗೆ ಇದು ಮಗು ಕಣೋ’ ಎಂದು ಕಣ್ಣೀರಿಡುತ್ತಾನೆ. ಆದರೆ ತನ್ನ ಚಿತ್ರಕ್ಕಾಗಿ ತಾನು ಕುಸಿಯುತ್ತಿರುವ ಪಾತಾಳದಿಂದ ಹೆಂಡತಿ, ಮಗು ಯಾವ ನರಕ ಅನುಭವಿಸುತ್ತಿದ್ದಾರೆ ಎನ್ನುವ ಪರಿವೆಯೇ ಅವನಿಗೆ ಇಲ್ಲ. ಅವನ ಜಗತ್ತಿನಲ್ಲಿ ಅವನ ಚಿತ್ರಕ್ಕಿರುವ ಮಹತ್ವ ಮಡದಿ, ಮಗಳಿಗಿಲ್ಲ. ಅವನ ಜೀವನದ ಎಲ್ಲಾ ಕ್ರಿಯೆ ಪ್ರತಿಕ್ರಿಯೆಗಳೂ ಅವನ ಚಿತ್ರದ ಸುತ್ತಲ್ಲೇ ಸುತ್ತುತ್ತಿರುತ್ತದೆ.

ಮನೆಯಲ್ಲಿ ಮೈಕೇಲ್ ಗೆ ಮಲರ್ ಜೊತೆ ಇರುವ ಸಂಬಂಧ ಗೊತ್ತಾಗಿ, ಅವನಿಗೆ ಪೊನ್ನಿಯ ಜೊತೆ ಮದುವೆ ಮಾಡುತ್ತಾರೆ. ಮೈಕೇಲ್ ಮದುವೆಯನ್ನು ನಿರಾಕರಿಸುವುದಿಲ್ಲ, ಅವಳನ್ನು ದೂರವೂ ಇಡುವುದಿಲ್ಲ, ಮೊದಲ ರಾತ್ರಿಯ ಪ್ರಣಯ ಮುಗಿದ ಮೇಲೆ ಸಲಿಗೆಯಿಂದ ಮುಖದ ಮೇಲೆ ಕೈಯಾಡಿಸ ಬಂದ ಹೊಸ ಹೆಂಡತಿಯ ಕೈತಳ್ಳಿ ‘ನೋಡು ಇದು ನನಗೆ ಬಲವಂತದಿಂದ ಮಾಡಿದ ಮದುವೆ. ನನ್ನ ಹತ್ತಿರ ಪ್ರೀತಿ ಪ್ರೇಮ ಎಲ್ಲಾ ನಿರೀಕ್ಷಿಸ ಬೇಡ. ಜೊತೆಯಲ್ಲಿರಬೇಕು ಎಂದರೆ ‘ಅಡ್ಜಸ್ಟ್’ ಮಾಡಿಕೊಳ್ಳಬೇಕು ಅಷ್ಟೇ ಎನ್ನುತ್ತಾನೆ. ಗಂಡ ಹಾಗಂದ ಎಂದು ಬಿಟ್ಟು ನಡೆಯುವ ಸ್ಥಿತಿಯಲ್ಲಿ ತಾನಿಲ್ಲ ಎಂದು ಅವಳಿಗೆ ಗೊತ್ತಿದೆ. ಆದರೆ ನನ್ನನ್ನು ಬಹುವಾಗಿ ಚಕಿತಗೊಳಿಸಿದ್ದು ಅವಳ ಜೀವನಾಭಿಮುಖ ಬದುಕು. ಗಂಡನ ನಿರಾಕರಣೆ ಅವಳಲ್ಲಿ ಸೋಲನ್ನು ಹುಟ್ಟಿಸುವುದಿಲ್ಲ. ಅವನ ಪ್ರೀತಿಯ ಹೊರತಾಗಿಯೂ ಅವಳು ತನ್ನ ಜಗತ್ತನ್ನು ಪ್ರೀತಿಸಬಲ್ಲಳು, ಮಳೆಯನ್ನು ಪ್ರೀತಿಸಬಲ್ಲಳು, ಇಳಯರಾಜ ಹಾಡನ್ನು ಪ್ರೀತಿಸಬಲ್ಲಳು.

ಆ ಶಿಲ್ಪಿಗೆ ಜಗನ್ ಎನ್ನುವ ಮಗನಿರುತ್ತಾನಲ್ಲ, ಅವನದೊಂದು ವಿಚಿತ್ರ ಥಿಯರಿ ಇದೆ. ಅಪ್ಪ, ಅಣ್ಣ, ಮೈಕೆಲ್ ಎಲ್ಲರೂ ಹೆಂಡತಿಯರನ್ನು ನೋಡಿಕೊಳ್ಳುತ್ತಿರುವ ಬಗ್ಗೆ ಅವನಲ್ಲಿ ಸಿಟ್ಟಿದೆ. ದೇವತೆಗಳ ವಿಗ್ರಹ ಕೆತ್ತುವ ನಮ್ಮಿಂದ ಪೂಜೆ ಮಾಡುತ್ತೇವೆ ಎಂದು ಕೊಂಡು ಹೋಗುವ ಜನ ನಿಧಾನವಾಗಿ ಅದನ್ನು ನಿರ್ಲಕ್ಷಿಸುತ್ತಾರೆ, ದೇವಸ್ಥಾನಗಳು ಪಾಳು ಬಿದ್ದಿರುತ್ತವೆ. ಹಾಗಿರುವಾಗ ಆ ವಿಗ್ರಹಗಳನ್ನು ತಾವು ಯಾರಿಗೂ ಕಾಣದಂತೆ ತಂದು ಅವನ್ನು ಚೆನ್ನಾಗಿ ನೋಡಿಕೊಳ್ಳುವವರಿಗೆ ಕೊಟ್ಟರೆ ತಪ್ಪೇನು ಎನ್ನುವುದು ಅವನ ವಾದ. ಅವನು ತನ್ನ ಈ ವಾದವನ್ನು ನಿಜಜೀವನಕ್ಕೂ ಇಳಿಸಲು ಹೋದಾಗ ಸಮಸ್ಯೆ ಶುರುವಾಗುತ್ತದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಅವನೂ ಸಹ ತನ್ನ ಸುತ್ತಲಿನ ‘ಇರೈವಿ’ಗಳನ್ನು ಕಲ್ಲಾಗಿಯೇ ನೋಡುತ್ತಿದ್ದಾನೆ.

ಒಮ್ಮೆ ಚಿತ್ರದ ನಿರ್ಮಾಪಕನೊಂದಿಗೆ ಜಗಳವಾಗಿ, ಮೈಕೇಲ್ ಆತನನ್ನು ಕೊಂದು ಜೈಲು ಸೇರುತ್ತಾನೆ. ಗರ್ಭಿಣಿ ಪೊನ್ನಿಯ ಬದುಕು ನುಚ್ಚುನೂರಾಗುತ್ತದೆ. ‘ಅವನು ಅರುಳ್ ಅಣ್ಣನನ್ನು ಹೊಡೆದ ಸಿಟ್ಟಿಗೆ ಸಿಟ್ಟು ತಡೆಯಲಾಗಲಿಲ್ಲ ಕಣೆ’ ಎಂದ ಗಂಡನಿಗೆ ‘ಆಗ ನನ್ನ ಮುಖ ನಿನಗೆ ನೆನಪಾಗಲಿಲ್ಲವಾ’ ಎಂದು ಕೇಳುತ್ತಾಳೆ. ಉಹೂ, ಅವನಿಗೆ ನೆನಪಾಗಿರುವುದಿಲ್ಲ, ಆ ಕ್ಷಣದಲ್ಲಿ ಅವನು ಥೇಟ್ ಪುರುಷನಂತೆ ತನ್ನ ಸಿಟ್ಟು ಮತ್ತು ಅಹಂ ನ ಮಾತು ಕೇಳಿರುತ್ತಾನೆಯೇ ಹೊರತು ತನ್ನ ಜೀವನಕ್ಕಂಟಿ ಇರುವ ಪತ್ನಿ, ಮಗು ಅವನಿಗೆ ನೆನಪಾಗಿರುವುದಿಲ್ಲ.

ಮೈಕೆಲ್ ಜೈಲಿಗೆ ಹೋಗುತ್ತಾನೆ, ಅರುಳ್ ಹೆಂಡತಿ ಗಂಡನನ್ನು ತೊರೆಯುತ್ತಾಳೆ, ಅರುಳ್ ನನ್ನು ಕುಡಿತ ಬಿಡಿಸಲು ಒಂದು De Tox ಕೇಂದ್ರಕ್ಕೆ ಸೇರಿಸಲಾಗುತ್ತದೆ. ಆದರೆ ಅವರೆಲ್ಲರ ಮಾತು ಬಿಡಿ, ತನ್ನನ್ನು ತಾನು ಸ್ತ್ರೀಯರ ಪಕ್ಷಪಾತಿ ಎಂದು ಕೊಳ್ಳುತ್ತಿರುವ ಜಗನ್ ನ ಮನಸ್ಸಿನಲ್ಲಿ ಅವರೆಲ್ಲರಿಗಿಂತ ಕ್ರೂರವಾದ ರಾಕ್ಷಸನಿರುತ್ತಾನೆ. ಏಕೆಂದರೆ ಅವನು ಥೇಟ್ ಪಿತೃ ಸಂಸ್ಕೃತಿಯ ಹರಿಕಾರನಂತೆ ಹೆಣ್ಣಿನ ಸುಖ ಮತ್ತು ನೆಮ್ಮದಿ ಯಾವುದರಲ್ಲಿದೆ ಎನ್ನುವುದನ್ನು ತಾನು ನಿರ್ಧರಿಸಲು ಹೊರಟುಬಿಡುತ್ತಾನೆ. ಮೈಕೆಲ್ ನಿಂದ ಪೊನ್ನಿಗೆ ಸುಖವಿಲ್ಲ, ಅವಳನ್ನು ತಾನು ಸುಖವಾಗಿಟ್ಟುಕೊಳ್ಳುತ್ತೇನೆ, ಅದಕ್ಕಾಗಿ ಮೈಕೆಲ್ ಜೇಲಿನಲ್ಲೇ ಇರಲಿ ಎಂದುಕೊಂಡು ಅವನ ಜಾಮೀನಿನ ಪ್ರಯತ್ನಗಳನ್ನೆಲ್ಲಾ ನಿಲ್ಲಿಸಿ ಬಿಡುತ್ತಾನೆ.

ಒಂದು ದಿನ ಪೊನ್ನಿಗೆ I love you ಎಂದು ಹೇಳುತ್ತಾನೆ. ಆಗ ಪೊನ್ನಿಯ ಪ್ರತಿಕ್ರಿಯೆ ಗಮನಿಸಬೇಕು. ಅವಳು ಚೀರಾಡುವುದಿಲ್ಲ, ಸಿಟ್ಟಾಗುವುದಿಲ್ಲ, ಬದಲಿಗೆ ತಣ್ಣಗೆ ‘ನನಗೆ ಮದುವೆ ಆಗಿದೆ, ಒಂದು ಮಗುವಿದೆ, ಆದರೆ ಇದುವರೆಗೂ ಯಾರೂ ನನ್ನನ್ನು ಪ್ರೀತಿಸಿಲ್ಲ.. ನಾಳೆ ಇದರ ಬಗ್ಗೆ ಮಾತನಾಡೋಣ’ ಎಂದು ಹೋಗುತ್ತಾಳೆ. ಅಂದಿನ ರಾತ್ರಿಯೇ ಮಗುವನ್ನು ಕರೆದುಕೊಂಡು ಮನೆಬಿಟ್ಟು ಹೊರಟು ಹೋಗುತ್ತಾಳೆ.

ಜೈಲಿನಿಂದ ಬಂದ ಮೈಕೆಲ್ ಈಗ ಅವಳನ್ನು ಹುಡುಕಿಕೊಂಡು ಬರುತ್ತಾನೆ. ಅವಳ ಮನೆ ಪಕ್ಕದವರಿಗೆ ಇವನು ಬಂದರೆ ಮಾತ್ರ ಕೊಡು ಎಂದು ವಿಳಾಸ ಕೊಟ್ಟಿರುತ್ತಾಳೆ. ಅವಳಿಗೆ ಅವನ ಮೇಲೆ ಸಿಟ್ಟಿದೆ, ಆದರೆ ಅವನನ್ನು ದೂರ ತಳ್ಳಲು ಸಾಧ್ಯವಿಲ್ಲ ಎನ್ನುವ ವಾಸ್ತವವೂ ಅವಳಿಗೆ ಗೊತ್ತಿದೆ. ಮುಂದೆ ಅವನು ದೊಡ್ಡಮನೆಯವರ ಸಹವಾಸ ಮಾಡದೆ ಇದ್ದರೆ ಮಾತ್ರ ತಾನು ಅವನೊಂದಿಗೆ ಬರುತ್ತೇನೆ ಎಂದು ಕಡ್ಡಿತುಂಡು ಮಾಡಿದಂತೆ ಹೇಳುತ್ತಾಳೆ.

ಕೊನೆಯದೊಂದು ವಿಗ್ರಹ ಚೋರತನಕ್ಕೆ ಬಂದುಬಿಡು ಎಂದು ಮೈಕೇಲ್ ನನ್ನು ಪುಸಲಾಯಿಸಿ ಕರೆದುಕೊಂಡು ಹೋಗುವ ಜಗನ್ ಅವನನ್ನು ಪೋಲೀಸರ ಕೈಗೆ ಸಿಕ್ಕಿಸುತ್ತಾನೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಮೈಕೆಲ್ ಗೆ ಸ್ನೇಹಿತರಿಂದ ಸತ್ಯ ಜಗನ್ ವಿಷಯ ತಿಳಿದುಬಿಡುತ್ತದೆ.

ಮನೆಗೆ ಧಾವಿಸಿ ಬರುವ ಮೈಕೆಲ್ ಹೆಂಡತಿಯನ್ನು ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನೆ ಕೇಳತೊಡಗುತ್ತಾನೆ. ‘ಜಗನ್ ಗೂ ನಿನಗೂ ನಡುವೆ ಏನಿದೆ’ ಎಂದು ಅಬ್ಬರಿಸಿದವನ ಮುಂದೆ ಪೊನ್ನೆ ನಿರುದ್ವಿಗ್ನ ದನಿಯಲ್ಲಿ, ‘ಅವನು ನನ್ನ ಪ್ರೀತಿ ಮಾಡ್ತೀನಿ’ ಅಂದ ಅನ್ನುತ್ತಾಳೆ. ‘ಮತ್ತೆ, ನೀನು???’ ಅವನದು ಇನ್ನಿಲ್ಲದ ಅಬ್ಬರ. ‘ನಾನೂ ಅವನನ್ನು ಪ್ರೀತಿಸಿದೆ, ಆದರೆ ಅದನ್ನು ಅವನಿಗೆ ಹೇಳಲಿಲ್ಲ, ಮನೆಬಿಟ್ಟು ಹೋದೆ’. ‘ಇದಕ್ಕೆ ಏನೇ ಅರ್ಥ???’, ‘ನೀನು ನನ್ನನ್ನು ಹೇಗೇ ನೋಡಿಕೊಂಡರೂ ನನ್ನ ಬದುಕು ನಿನ್ನಜೊತೆ ಎನ್ನುವುದು ನನ್ನ ಹಣೆಬರಹ ಎನ್ನುವುದು ಅರ್ಥ’ ಎಂದು ಉತ್ತರಿಸಿದವಳು ಮರುಕ್ಷಣವೇ ಮೃದುವಾಗುತ್ತಾಳೆ,

‘ನಾವಿಬ್ಬರೂ ಹೊಸ ಬದುಕು ಕಟ್ಟಿಕೊಳ್ಳೋಣ ಅಂದುಕೊಂಡಿದ್ದೆವಲ್ಲಾ, ಬಾ ಇದೆಲ್ಲವನ್ನೂ ಬಿಟ್ಟು ಹೋಗಿಬಿಡೋಣ’ ಎನ್ನುತ್ತಾಳೆ. ‘ಆಯ್ತು, ಹೋಗಿ ಬಿಡೋಣ’ ಅವನು ಒಪ್ಪುತ್ತಾನೆ, ಆದರೆ ತನ್ನೆರಡೂ ಕಣ್ಣುಗಳ ತುಂಬ, ತನ್ನ ದೇಹದ ಕಣಕಣದ ತುಂಬಾ ನಿರೀಕ್ಷೆ ತುಂಬಿಕೊಂಡು ಅವಳನ್ನು ಕೇಳುತ್ತಾನೆ, ‘ಹಾಗಾದರೆ ನಿನ್ನಾ ಅವನ ನಡುವೆ ಏನೂ ನಡೆಯಲಿಲ್ಲ ಅಲ್ಲವಾ?’,
ಅವಳು ಆಣೆಯಿಟ್ಟು ಅಗ್ನಿಪ್ರವೇಶ ಮಾಡುವುದಿಲ್ಲ, ತನ್ನ ಪಾತಿವ್ರ್ಯತ್ಯದ ಪರೀಕ್ಷೆಗೆ ಯಾವ ದೇವರ ಮೇಲೂ ಆಣೆ ಪ್ರಮಾಣ ಮಾಡುವುದಿಲ್ಲ.

‘ನಾನು ಅವನ ಜೊತೆ ಮಲಗಿದ್ದೆನಾ ಎಂದು ಕೇಳುತ್ತೀಯಾ?….ನಾನು ಸಾಯುವವರೆಗೂ ಈ ಪ್ರಶ್ನೆಗೆ ಉತ್ತರ ಕೊಡುವುದಿಲ್ಲ. ನಂಬಿ ‘ಅಡ್ಜಸ್ಟ್’ ಮಾಡಿಕೊಂಡು ಇರುವುದಾದರೆ ಇರು, ಇಲ್ಲದಿದ್ದರೆ ನಾನು ಮತ್ತೊಮ್ಮೆ ಒಂಟಿಯಾಗಿ ಬದುಕಲು ಸಿದ್ಧ’ ಎಂದು ಬಿಡುತ್ತಾಳೆ. ಈ ದೃಶ್ಯದಲ್ಲಿ ಮೈಕೆಲ್ ಆಗಿ ವಿಜಯ್ ಸೇತುಪತಿ, ಪೊನ್ನಿಯಾಗಿ ಅಂಜಲಿ ಇಬ್ಬರೂ ಪೈಪೋಟಿಯ ಮೇಲೆ ನಟಿಸಿದ್ದಾರೆ. ಈ ದೃಶ್ಯ ಇಡೀ ಚಿತ್ರದ ಹೃದಯ.

ಮೊದಲ ರಾತ್ರಿ ಗಂಡ ಅಡ್ಜಸ್ಟ್ ಮಾಡಿಕೊಂಡು ಇರಬೇಕು ಎಂದಾಗ ತಲೆಬಗ್ಗಿಸಿಕೊಂಡು ಸಹಿಸುವ ಅಂಜಲಿ ಈಗ ಕೊಡುವ ಉತ್ತರ ಬದುಕಿನಲ್ಲಿ ಅವಳು ಮಾಡಿರುವ ಪಯಣದ ಅಂದಾಜನ್ನು ನಮಗೆ ಕೊಡುತ್ತದೆ. ಈ ದೃಶ್ಯವನ್ನು ನಿರ್ದೇಶಕ ಅತ್ಯಂತ subtle ಆಗಿ ತೆಗೆದಿದ್ದಾರೆ. ಅದಕ್ಕೆ ಯಾವುದೇ ಒತ್ತನ್ನು ಕೊಟ್ಟಿಲ್ಲ, ಅತ್ಯಂತ ಸಹಜವಾಗಿ ಅದು ತೆರೆಯ ಮೇಲೆ ಕಾಣಿಸಿಕೊಂಡಿದೆ.
ಚಿತ್ರ ಮುಂದುವರೆಯುತ್ತದೆ. ಅವನು ನಿರ್ದೇಶಿಸಿದ ಸಿನಿಮಾ ಹೇಗೋ ಅರುಳ್ ಗೆ ಮತ್ತೆ ಸಿಗುತ್ತದೆ. ಅವನ ಮಟ್ಟಿಗೆ ಅವನ ಸಮಸ್ಯೆಗಳೆಲ್ಲವೂ ಮುಗಿಯಿತು. ಹಾಗೇ ಹೆಂಡತಿಯ ಪಾಲಿಗೂ ಸಮಸ್ಯೆ ಮುಗಿಯಿತು ಎಂದುಕೊಳ್ಳುವ ಅವನು ಡೈವೋರ್ಸ್ ತೆಗೆದುಕೊಂಡಿರುವ ಅವಳ ಮನೆಗೆ ಧಾವಿಸಿ ಅವಳ ಮರು ಮದುವೆಯನ್ನು ತಪ್ಪಿಸುತ್ತಾನೆ. ಮೈಕೆಲ್ ಹೆಂಡತಿಯನ್ನು ಕರೆದುಕೊಂಡು ಊರುಬಿಟ್ಟು ಹೋಗಲು ಸಿದ್ಧವಾಗುತ್ತಾನೆ.

ಅದಕ್ಕೆ ಮೊದಲು ತನ್ನ ಪಾಲಿನ ಹಣ ತೆಗೆದುಕೊಳ್ಳಲು ಶಿಲ್ಪಿಯ ಮನೆಗೆ ಬಂದ ಮೈಕೆಲ್ ಗೆ ಜಗನ್ ಸಿಗುತ್ತಾನೆ. ಇವನ ಪುರುಷಾಹಂಕಾರ ಜಾಗೃತವಾಗುತ್ತದೆ, ಅವನು ಜಗನ್ ನನ್ನು ಕೊಲ್ಲುತ್ತಾನೆ. ಮನೆಗೆ ಬಂದ ಅರುಳ್ ಗೆ ವಿಷಯ ಗೊತ್ತಾಗುತ್ತದೆ. ಅವರನ್ನು ಹುಡುಕಿಕೊಂಡು ರೈಲು ನಿಲ್ದಾಣಕ್ಕೆ ಬರುವ ಅವನು ಮೈಕೆಲ್ ನನ್ನು ಕೊಲ್ಲುತ್ತಾನೆ. ಪೋಲೀಸರು ಅವನನ್ನು ಕರೆದುಕೊಂಡು ಹೋಗುತ್ತಾರೆ.

ಬದುಕು ಒಂದು ನೆಲೆಗೆ ಬರುತ್ತಿರುವ ಹಂತದಲ್ಲಿ ಯಾಕೆ ಹೀಗೆ ನಡೆದುಕೊಂಡೆ ಎಂದು ಮೈಕೆಲ್ ನ ಚಿಕ್ಕಪ್ಪ ಕೇಳುವ ಪ್ರಶ್ನೆಗೆ ಅರುಳ್ ನೀಡುವ ಉತ್ತರ, ‘ಹೌದು ಕ್ಷಮಿಸಿ ಬಿಡಬಹುದಿತ್ತು, ಮೈಕೆಲ್ ಸಹ ಕ್ಷಮಿಸಿ ಬಿಡಬಹುದಿತ್ತು. ಆದರೆ ಹಾಗೆ ಯೋಚಿಸಿ, ಕ್ಷಮಿಸಿ, ಬದುಕನ್ನು ಪೊರೆಯಲು ನಾವು ಹೆಣ್ಣು ಮಕ್ಕಳೆ? ನಾವು ‘ಗಂಡಸರು’ ಆ ಅಹಂಕಾರ ನಮ್ಮ ಬದುಕಿಗಿಂತ ದೊಡ್ಡದಾಗಿ ಕಾಣಿಸಿಬಿಡುತ್ತದೆ ಮಾಮ, ಸಿಟ್ಟು ರುಮ್ ಎಂದು ತಲೆಗೆ ಏರಿಬಿಟ್ಟಿತು’ ಎನ್ನುತ್ತಾನೆ. ಸಿಟ್ಟಾಗಬಲ್ಲೆ, ಸಿಟ್ಟಾಗಿ ಬೇಕಾದ್ದು ಮಾಡಬಲ್ಲೆ ಎನ್ನುವ ಪುರುಷ ನೆಲೆಯ ನಿರ್ಧಾರಗಳು ಅವರನ್ನು ನಂಬಿಕೊಂಡ ಎಲ್ಲಾ ಹೆಂಗಸರ, ಹೆಣ್ಣು ಮಕ್ಕಳ ಬದುಕನ್ನು ನಾಶ ಮಾಡುತ್ತದೆ. ಅವರು ನೀಡುವ ಯಾವುದೇ ದೈಹಿಕ ಹಿಂಸೆಗಿಂತ ಈ ಮಾನಸಿಕ ಹಿಂಸೆ ಕಡಿಮೆಯದಾಗಿರುವುದಿಲ್ಲ.
ಒಂಟಿ ಬದುಕಿನ ರಿಸ್ಕ್ ಗೆ ಹೆದರುವ ಅವನ ಹೆಂಡತಿ ಮಳೆಯಲ್ಲಿ ನೆನೆಯುತ್ತಿದ್ದ ಮಗಳನ್ನು ಮನೆಯೊಳಗೆ ಎಳೆದುಕೊಳ್ಳುತ್ತಾಳೆ, ಅಪ್ಪ ತೋರಿಸಿದ ಗಂಡನ್ನು ಮರುಮದುವೆ ಆಗುತ್ತಾಳೆ. ಪೊನ್ನಿ ಮಗುವನ್ನು ಕರೆದುಕೊಂಡು ತನ್ನನ್ನು ತಾನು ಮಳೆಗೆ ಒಡ್ಡಿಕೊಳ್ಳುತ್ತಾಳೆ.

ಚಿತ್ರ ಇಷ್ಟೇ.

ಅರುಳ್ ಆಗಿ ಸ್ವತಃ ನಿರ್ದೇಶಕನಾದ ಎಸ್ ಜೆ ಸೂರ್ಯ ಅದ್ಭುತವಾದ ಅಭಿನಯ ನೀಡಿದ್ದಾರೆ. ಮಿಕ್ಕ ಪಾತ್ರಗಳೂ ಅಷ್ಟೇ, ನೋಡುವವರ ಪಾಲಿಗೆ ನಟನೆ ಅನ್ನಿಸದ ಹಾಗೆ ನಟಿಸಿದ್ದಾರೆ. ಫೋಟೋಗ್ರಫಿ, ಸಂಗೀತ First Class. ಆದರೆ ಚಿತ್ರದಲ್ಲಿರುವ ವಿಗ್ರಹ ಚೋರತನದ ಎಳೆ ಅತ್ಯಂತ ಪೇಲವವಾಗಿ ಚಿತ್ರಿತವಾಗಿದೆ, ಅನಗತ್ಯ ಉದ್ದ ಸಹ ಚಿತ್ರದ ಪರಿಣಾಮವನ್ನು ಮಿತಿಗೊಳಿಸುತ್ತದೆ. ಆದರೆ ಇವೆಲ್ಲಕ್ಕೂ ಮೀರಿ ನಮಗೆ ಚಿತ್ರ ಇಷ್ಟವಾಗುವುದು ಹೆಣ್ಣುಗಳ ಬದುಕು ಮತ್ತು ಗಂಡುಗಳ ಕಲ್ಪನೆಯಲ್ಲಿ ಹೆಣ್ಣುಗಳ ಸ್ವಾತಂತ್ರ್ಯ ಮತ್ತು ಸುಖದ ಪರಿಕಲ್ಪನೆಗಳನ್ನು ನಿರ್ದೇಶಕರು ನಿಭಾಯಿಸಿರುವ ರೀತಿ.

ಹಳೆಯಕಾಲದ ಹೆಣ್ಣು ಪಾತ್ರದ್ದು ಇಲ್ಲಿ ಸಂಪೂರ್ಣ ಶರಣಾಗತಿ. ಯಾಲಿಯದು ಒಂದು ವ್ಯಾವಹಾರಿಕ ಎಚ್ಚರಿಕೆಯನ್ನಿಟ್ಟುಕೊಂಡ ಸ್ವಾತಂತ್ರ್ಯದ ಪರಿಕಲ್ಪನೆ. ಮಲರ್ ಬದುಕನ್ನು ತನ್ನ ನಿಭಂದನೆಗಳ ಮೇಲೆ ಬದುಕುವವಳು. ಆದರೆ ಪೊನ್ನಿಯ ಪಾತ್ರಕ್ಕೆ ಚಿತ್ರದಲ್ಲಿ ಪಯಣ ಇದೆ, ಅವಳು ಕ್ರಮಿಸುವ ದೂರ, ಅವಳ ಬಿಡುಗಡೆಯ ದಾರಿಯೂ ಹೌದು. ಇದಕ್ಕೆ ಅವಳಿಗೆ ಅವಳ ಕುಟುಂಬ, ವಿದ್ಯೆ, ಹಣ, ಉದ್ಯೋಗ ಯಾವುದೂ ನೆರವಾಗುವುದಿಲ್ಲ. ಅವಳು ನಂಬುವುದು ತನ್ನ ಅಂತಸ್ಸತ್ವವಾದ ಚೇತನವನ್ನು, ಆ ಕಾರಣಕ್ಕಾಗಿ ಈ ಚಿತ್ರ ಮುಖ್ಯವಾಗುತ್ತದೆ.

5 Comments

 1. ಅಮರದೀಪ್. ಪಿ.ಎಸ್.
  April 15, 2017
 2. Anonymous
  April 10, 2017
 3. Anonymous
  April 9, 2017
 4. Anonymous
  April 9, 2017
 5. K.Nalla Tambi
  April 7, 2017

Add Comment

Leave a Reply