Quantcast

ದಕ್ಷಿಣಾಯಣ: ಸಂವೇದನೆಯನ್ನು ಬಡಿದೆಬ್ಬಿಸುವ ವೇದಿಕೆಯಾಗಲಿ

ಸಂಕೀರ್ಣ ಪ್ರಶ್ನೆಗಳು ಕಠಿಣ ಸವಾಲುಗಳ ನಡುವೆ ‘ದಕ್ಷಿಣಾಯಣ’ದ ದಿಟ್ಟ ಪಯಣ

ನಾ ದಿವಾಕರ

ಬದಲಾದ ಸಂದರ್ಭದಲ್ಲಿ ಭಾರತದ ರಾಜಕಾರಣ ಹಲವು ಸಂಕೀರ್ಣ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

1991ರ ಜಾಗತೀಕರಣದ ಸಂದರ್ಭದಲ್ಲಿದ್ದ ಪರಿಸ್ಥಿತಿ ಇಂದು ಕಂಡುಬರುತ್ತಿಲ್ಲ. 2002ರ ಗೋದ್ರಾ-ಗುಜರಾತ್ ನಂತರ ಸಾಮಾಜಿಕ ತಲ್ಲಣಗಳು ಇಂದು ಕಾಣುತ್ತಿಲ್ಲ. 1989ರ ಸೋಮನಾಥ ರಥಯಾತ್ರೆಯ ತಲ್ಲಣಗಳ ರಾತ್ರಿ ಇಂದು ಕಾಣಲಾಗುತ್ತಿಲ್ಲ. ಅಥವಾ 2014ರ ರಾಜಕೀಯ ಸನ್ನಿವೇಶ ಇಂದು ಎದುರಾಗುತ್ತಿಲ್ಲ.

ಭಾರತ ಖಚಿತವಾಗಿಯೂ ಮನ್ವಂತರದ ಹಾದಿಯಲ್ಲಿದೆ. ಮನ್ವಂತರ ಎಂದರೆ ಗುಣಾತ್ಮಕ ಎಂದೇ ಇರಬೇಕಿಲ್ಲ. ನಾವು ಎತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆ ದೇಶದ ಪ್ರಜ್ಞಾವಂತ ಜನತೆಯನ್ನು ಕಾಡುತ್ತಿದ್ದರೆ ನಾವು ಸಾಗುತ್ತಿರುವ ಹಾದಿಯೇ ಅಂತಿಮ ಮೋಕ್ಷದ ಮಾರ್ಗ ಎಂಬ ಹಠಮಾರಿ ನಿಲುವು ಆಳುವ ವರ್ಗಗಳದ್ದಾಗಿದೆ.

ಪ್ರಸ್ತುತ ಸನ್ನಿವೇಶದಲ್ಲಿ ಭಾರತದ ಶ್ರಮಜೀವಿಗಳನ್ನು, ಶೋಷಿತ ಸಮುದಾಯಗಳನ್ನು, ಅವಕಾಶವಂಚಿತರನ್ನು, ದೌರ್ಜನ್ಯಕ್ಕೊಳಗಾದವರನ್ನು ಕಾಡುತ್ತಿರುವ ಪ್ರಶ್ನೆ ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮುಂತಾದ ರಾಜಕೀಯ ಪಕ್ಷಗಳದ್ದಲ್ಲ. ಈ ಪಕ್ಷಗಳೆಲ್ಲವೂ ಭಾರತದ ಬಹುಸಂಖ್ಯಾತರ ಸಾಕ್ಷಿ ಪ್ರಜ್ಞೆಗೆ ವ್ಯತಿರಿಕ್ತವಾಗಿಯೇ ನಡೆದುಕೊಂಡಿವೆ. ಇಲ್ಲಿ ಪ್ರಶ್ನೆ ಇರುವುದು ಈ ನೆಲದ ಮೂಲ ಸಂಸ್ಕೃತಿಯನ್ನು ಕುರಿತಾದದ್ದು, ಈ ನೆಲದ ಮಾನವೀಯ ನೆಲೆಯನ್ನು ಕುರಿತಾದದ್ದು.

ಭಾರತ ಕಾಂಗ್ರೆಸ್ ಮುಕ್ತವಾಗಬೇಕೋ, ಬಿಜೆಪಿ ಮುಕ್ತವಾಗಬೇಕೋ, ಸಂಘ ಮುಕ್ತವಾಗಬೇಕೋ ಅಥವಾ ಮುಸ್ಲಿಂ ಮುಕ್ತವಾಗಬೇಕೋ ಎಂಬ ಚರ್ಚೆಗಿಂತಲೂ ಈ ನಮ್ಮ ಭೂಮಿ ಮಾನವತೆಯನ್ನು ಪ್ರತಿನಿಧಿಸಬೇಕೋ ಅಥವಾ ಬರ್ಬರ ನಾಗರೀಕತೆಯನ್ನು ಪ್ರತಿನಿಧಿಸಬೇಕೋ ಎಂಬ ಪ್ರಶ್ನೆ ನಮ್ಮ ಮುಂದಿನ ಸಂಕೀರ್ಣ ಹಾದಿಯನ್ನು ಆವರಿಸಿದೆ.

1970ರ ದಶಕದಲ್ಲಿ ಈ ದೇಶದ ಶ್ರಮಜೀವಿಗಳು ಮತ್ತು ಪ್ರಜ್ಞಾವಂತ ಜನತೆ ಪ್ರಭುತ್ವದ ವಿರುದ್ಧ ಸಮರ ಸಾರಿದ್ದರು. 1990ರ ಅಯೋಧ್ಯಾ ಪರ್ವದ ನಂತರ ದೇಶದ ಮೂಲ ಸಂಸ್ಕೃತಿಯ ಬುಡಕ್ಕೇ ಕೊಡಲಿ ಪೆಟ್ಟು ನೀಡಲಿದ್ದ ವಿಕೃತ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಬೇಕಾಯಿತು.

ಆದರೆ ಈಗ ಪರಿಸ್ಥಿತಿ ಈ ಎರಡೂ ಸನ್ನಿವೇಶಗಳ ಸಮ್ಮಿಲನದಂತಿದ್ದು, ಶ್ರಮಜೀವಿಗಳ, ಶೋಷಿತರ ಹೋರಾಟ ಭಿನ್ನ ಮಾರ್ಗವನ್ನು ಅನುಸರಿಸಬೇಕಿದೆ. ಇಂದು ನಾವು ಹೋರಾಡಬೇಕಿರುವುದು ಯಾವುದೋ ಒಂದು ರಾಜಕೀಯ ಪಕ್ಷ ಅಥವಾ ಮತೀಯ ಸಂಘಟನೆಯ ವಿರುದ್ಧ ಅಲ್ಲ. ಅಥವಾ ಈ ಸಂಘಟನೆಗಳ ಸೈದ್ಧಾಂತಿಕ ಭೂಮಿಕೆಯ ವಿರುದ್ಧವೂ ಅಲ್ಲ.

‘ದಕ್ಷಿಣಾಯಣ’ದ ವೇದಿಕೆಯಲ್ಲಿ ನಾವು ಪ್ರಭುತ್ವವನ್ನು ನಿಯಂತ್ರಿಸುವ ಸಾಂಸ್ಥಿಕ ಶಕ್ತಿಗಳ ವಿರುದ್ಧ ಹೋರಾಡುವ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಈ ದೇಶದ ಜನಸಂಸ್ಕೃತಿಯನ್ನೇ ವಿಕೃತಗೊಳಿಸಿ ಮತ್ತೊಂದು ಕ್ಷುದ್ರ ಸಂಸ್ಕೃತಿಯನ್ನು ಹೇರಲು ಯತ್ನಿಸುತ್ತಿರುವ ವಿಕೃತ ವಿದ್ಯಮಾನದ ವಿರುದ್ಧ ಹೋರಾಡಲು ನೀಲಿ ನಕ್ಷೆ ತಯಾರಿಸಬೇಕಿದೆ. ಈ ದೇಶದ ಜನಸಾಮಾನ್ಯರ ನಾಡಿಮಿಡಿತವನ್ನು ಹಿಡಿದು ತನ್ನ ಸಾಮ್ರಾಜ್ಯ ಸ್ಥಾಪಿಸಲು ಸಜ್ಜಾಗುತ್ತಿರುವ ಸಾಂಪ್ರದಾಯಿಕ ಮತೀಯ ಶಕ್ತಿಗಳ ವಿರುದ್ಧ ಸಮರ ಸಾರಲು ಸಜ್ಜಾಗಬೇಕಿದೆ.

ಜಾತಿ, ಧರ್ಮ ಮತ್ತು ಪ್ರಾದೇಶಿಕ ಅಸ್ಮಿತೆಗಳು ಒಂದು ನೆಲೆಯಲ್ಲಿ ಗಟ್ಟಿಯಾಗುತ್ತಿದ್ದರೂ ಮತ್ತೊಂದು ನೆಲೆಯಲ್ಲಿ ವಿಘಟನೆಯ ಸೂಚನೆಗಳನ್ನೂ ನೀಡುತ್ತಿರುವುದನ್ನು ಗಮನಿಸಬೇಕಿದೆ.

ಇಂದಿನ ಪರಿಸ್ಥಿತಿಯಲ್ಲಿ ಯಾವುದೇ ಒಂದು ಜಾತಿ ಸಮುದಾಯ ಶೋಷಣೆ ಮತ್ತು ದೌರ್ಜನ್ಯದ ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಸಿದ್ಧವಾಗಿಲ್ಲ. ತಾರತಮ್ಯ, ದೌರ್ಜನ್ಯ ಎದುರಿಸುತ್ತಿರುವ ಸಮುದಾಯಗಳು ಸಹ ತಮ್ಮದೇ ಆದ ಕಾರಣಗಳಿಗಾಗಿ ಸ್ಥಾಪಿತ ವ್ಯವಸ್ಥೆಯ ಅಕ್ರಮಗಳನ್ನು ಸಹನೀಯ ಎಂದೇ ಭಾವಿಸುತ್ತಿವೆ.

ಏಕೆಂದರೆ ಈ ಸಹನೀಯತೆಗೆ ಪ್ರತಿಯಾಗಿ ಪ್ರಭುತ್ವ ಮತ್ತು ಪ್ರಭುತ್ವವನ್ನು ನಿಯಂತ್ರಿಸುವ ಸಂಸ್ಥೆಗಳು ಮತ್ತೊಂದು ದುಷ್ಟ ಶಕ್ತಿಯನ್ನು ಸಮಾಜದ ಮುಂದೆ ಪ್ರಸ್ತುತಪಡಿಸುತ್ತಿವೆ. ತಿಳಿದೋ ತಿಳಿಯದೆಯೋ ನಾವು ಶತ್ರು ಕೇಂದ್ರಿತ ಅಭಿವ್ಯಕ್ತಿಯನ್ನು ನಮ್ಮದಾಗಿಸಿಕೊಳ್ಳುತ್ತಿದ್ದೇವೆ. ನಮ್ಮ ಅಭಿವ್ಯಕ್ತಿ ಮತ್ತು ಅಸ್ಮಿತೆಯ ನೆಲೆಯನ್ನು ಕಂಡುಕೊಳ್ಳುವಾಗ ನಮ್ಮ ಸುತ್ತಲಿನ ಮಿತ್ರರು ಯಾರು ಎನ್ನುವುದಕ್ಕಿಂತಲೂ ನಮ್ಮ ಎದುರಿನ ಶತ್ರುಗಳು ಯಾರು ಎಂಬ ಪ್ರಶ್ನೆ ಮುಂಚೂಣಿಗೆ ಬರುತ್ತಿದೆ.

ಹಾಗಾಗಿಯೇ ಇಂದು ಮತೀಯ ಭಯೋತ್ಪಾದನೆ ಅಥವಾ ಜಾತಿ ಸಂಘರ್ಷಗಳು, ಜಾತಿ ಕೇಂದ್ರಿತ ದೌರ್ಜನ್ಯ, ಲಿಂಗಾಧಾರಿತ ತಾರತಮ್ಯ, ಧರ್ಮ ಕೇಂದ್ರಿತ ಅಧಿಪತ್ಯ ರಾಜಕಾರಣ ಇವೆಲ್ಲವನ್ನೂ ಒಂದೇ ಚೌಕಟ್ಟಿನಲ್ಲಿ ಬಂಧಿಸುವ ವಿಕೃತ ವಿದ್ಯಮಾನವೊಂದು ದೇಶದ ಸಾಂಸ್ಕೃತಿಕ, ಸಾಮಾಜಿಕ ಸಂಕಥನವನ್ನು ಆವರಿಸಿದೆ.

ಆಹಾರ ಪದ್ಧತಿ ನಮ್ಮ ಅಸ್ಮಿತೆಗಳನ್ನು ನಿರ್ಧರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಹಾಗಾಗಿಯೇ ಅನ್ನ ಬೆಳೆಯುವ ರೈತರ ಆತ್ಮಹತ್ಯೆ ನಮ್ಮ ಸಂವೇದನೆಯನ್ನು ಕಲಕುತ್ತಿಲ್ಲ, ಪಶುಪಾಲಕ ಸಮುದಾಯಗಳ ಸಮಸ್ಯೆಗಳು ನಮ್ಮನ್ನು ಕಾಡುತ್ತಿಲ್ಲ. ಆದರೆ ಗೋಮಾಂಸ , ಮಾಂಸಾಹಾರ ಮತ್ತು ಈ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಸಮುದಾಯಗಳ ಸಮಸ್ಯೆಗಳು ಕಾಡುತ್ತಿವೆ.

ದಾದ್ರಿಯ ಘಟನೆ ಅಥವಾ ಊನ ಗ್ರಾಮದಲ್ಲಿ ನಡೆದ ಘಟನೆ ಸಾಂದರ್ಭಿಕವೂ ಅಲ್ಲ ಆಕಸ್ಮಿಕವೂ ಅಲ್ಲ. ಇದು ಬದಲಾಗುತ್ತಿರುವ ಭಾರತದ ಸ್ಪಷ್ಟ ಸೂಚನೆ. ಅನ್ನಾಹಾರಗಳಿಲ್ಲದೆ ಸೊರಗಿ ಮಸಣ ಸೇರುತ್ತಿರುವ ಅಸಂಖ್ಯಾತ ಪ್ರಜೆಗಳನ್ನು ಕಣ್ಣೆತ್ತಿಯೂ ನೋಡದೆ ಆಹಾರ ಸೇವನೆಯ ಹಕ್ಕುಗಳನ್ನೇ ಕಸಿದುಕೊಳ್ಳುವ ನಿಟ್ಟಿನಲ್ಲಿ ಪ್ರಭುತ್ವ ಮುನ್ನಡೆಯುತ್ತಿದೆ. ಹಸಿವಿನಿಂದ ಕಂಗೆಟ್ಟು ಇಹಲೋಕ ತ್ಯಜಿಸುವವರ ಬವಣೆ ನಿರ್ಲಕ್ಷ್ಯಕ್ಕೊಳಗಾಗುತ್ತಲೇ, ಸ್ಥಾಪಿತ ವ್ಯವಸ್ಥೆ ಮತ್ತು ಚುನಾಯಿತ ಪ್ರಭುತ್ವವನ್ನು ನಿಯಂತ್ರಿಸುವ ಅಗೋಚರ ಶಕ್ತಿಗಳು ತಮ್ಮದೇ ಆದ ಆಹಾರ ಪದ್ಧತಿಯ ನಿಯಮಗಳನ್ನು ಪ್ರಜೆಗಳ ಮೇಲೆ ಹೇರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಅಂದರೆ, ಮಾನವನ ಸಹಜ ಜೀವನವನ್ನೂ ತನ್ನ ನಿಯಂತ್ರಣದಲ್ಲಿರಿಸಿಕೊಳ್ಳುವ ವಿಕೃತ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ಈ ವಿಕೃತಿಯನ್ನು ವಿರೋಧಿಸುವ ಮನಸುಗಳು ಮನದ ಮಾತುಗಳನ್ನಾಡುವ ಪ್ರಭುತ್ವದ ಪ್ರತಿನಿಧಿಗಳಿಗೆ ಅಪ್ಯಾಯಮಾನವಾಗುವುದಿಲ್ಲ. ನಾವು ಬಯಸಿದ ಆಹಾರವನ್ನು ನೀವು ಸೇವಿಸುವಿರಾದರೆ ನಿಮಗೆ ಈ ಭೂಮಿಯಲ್ಲಿ ಬದುಕುವ ಹಕ್ಕು ಇದೆ ಎನ್ನುವ ಅಹಮಿಕೆಯ ಅಧಿಪತ್ಯವನ್ನು ನಾವಿಂದು ಎದುರಿಸುತ್ತಿದ್ದೇವೆ.

ಇದು ಜನಸಂಸ್ಕೃತಿಗೆ ವ್ಯತಿರಿಕ್ತವಾದ ಅಪಾಯಕಾರಿ ಬೆಳವಣಿಗೆ.

ಆದರೆ ಈ ಅಧಿಪತ್ಯದ ವಿರುದ್ಧ ದನಿ ಎತ್ತಬೇಕಾದ ಜನಪರ ವಿವೇಚನೆ ಮಸುಕಾಗುತ್ತಿದೆ. ರಾಜಕೀಯ ಪ್ರಭುತ್ವ ಮತ್ತು ಸಾಂಸ್ಕೃತಿಕ ಪ್ರಭುತ್ವ ಎರಡೂ ನೆಲೆಯಲ್ಲಿ ಸಾಂಪ್ರದಾಯಿಕ ವಿಕೃತಿಗಳು ಜನಸಮುದಾಯಗಳನ್ನು ಆವರಿಸಿವೆ. ಹಾಗಾಗಿಯೇ ದಾದ್ರಿ, ಊನ ಮುಂತಾದ ಘಟನೆಗಳ ನಂತರವೂ ಈ ದೇಶದ ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ನಿರ್ಣಾಯಕವಾದ ಪ್ರತಿರೋಧದ ರಾಜಕೀಯ ನೆಲೆ ಕಂಡುಕೊಳ್ಳಲು ವಿಫಲರಾಗುತ್ತಿದ್ದಾರೆ. ವೈಚಾರಿಕ ಚಿಂತನೆಗಳ ಮೇಲೆ ನಡೆಯುತ್ತಿರುವ ಸತತ ಪ್ರಹಾರ ಒಂದೆಡೆಯಾದರೆ, ಜನಪರ ಎನ್ನಬಹುದಾದ ಚಿಂತನೆಗಳು ದೇಶಪ್ರೇಮ , ದೇಶಭಕ್ತಿ ಮತ್ತು ಸಾಮುದಾಯಿಕ ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿಯಾಗುತ್ತಿವೆ.

ಇತಿಹಾಸ ಮತ್ತು ಸಮಕಾಲೀನ ವಾಸ್ತವಗಳ ತಲ್ಲಣಗಳ ನಡುವಿನ ದುರ್ಗಮ ಮಾರ್ಗದಲ್ಲಿ ನಾವು ಒಂದು ಸಾರ್ವಕಾಲಿಕ, ಸಾರ್ವತ್ರಿಕ ಸೂತ್ರವನ್ನು ಹಿಡಿದು ಸಾಗುತ್ತಿದ್ದೇವೆ. ‘ದಕ್ಷಿಣಾಯಣ’ದ ಆಶಯಗಳಲ್ಲಿ ಈ ಸೂತ್ರದ ಮೂಲ ನೆಲೆಗಳನ್ನು ಶೋಧಿಸುವುದೂ ಒಂದಾಗಿರಬೇಕು. ಲೇಖಕರು, ಸಾಹಿತಿ ಕಲಾವಿದರು ದೇಶದ ರಾಜಕೀಯ ಚಿತ್ರಣವನ್ನು ಬದಲಿಸುವ ಧ್ಯೇಯದೊಂದಿಗೆ ಮುನ್ನಡೆಯುವುದು ಸ್ವಾಗತಾರ್ಹವೇ.

ಆದರೆ ಅದಕ್ಕೂ ಮುನ್ನ ಸತ್ತು ಹೋಗಿರುವ ಈ ದೇಶದ ಸಾಕ್ಷಿ ಪ್ರಜ್ಞೆಯನ್ನು, ಮಸುಕಾಗಿರುವ ಆತ್ಮಸಾಕ್ಷಿಯನ್ನು ಮತ್ತು ಶವಪೆಟ್ಟಿಗೆಯಲ್ಲಿರುವ ಮಾನವೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಮಹತ್ತರ ಹೊಣೆಗಾರಿಕೆ ಈ ಪ್ರಜ್ಞಾವಂತ ಸಮುದಾಯದ ಮೇಲಿದೆ.

ಇಲ್ಲಿ ಅಸ್ಮಿತೆಗಳಿಗಿಂತಲೂ ಅಸ್ತಿತ್ವ ಮುಖ್ಯವಾಗುತ್ತದೆ. ಆತ್ಮರತಿಯ ಗುಂಗಿನಿಂದ ಹೊರಬಂದು, ಆರಾಧನೆಯ ಭೂಮಿಕೆಯನ್ನು ತೊಡೆದುಹಾಕಿ, ಪ್ರತಿಷ್ಠೆಯ ಕಣಗಳನ್ನು ನರನಾಡಿಗಳಿಂದ ಕಿತ್ತೊಗೆದು ಮಾನವತೆಯ ಹೆದ್ದಾರಿಯಲ್ಲಿ ಸುದೀರ್ಘ ಪಯಣವನ್ನು ಮುಂದುವರೆಸಬೇಕಿದೆ.

‘ದಕ್ಷಿಣಾಯಣ’ ತತ್‍ಕ್ಷಣದ ಪರಿಹಾರ ಸೂತ್ರಗಳನ್ನು ರೂಪಿಸುವ ದುಂಡುಮೇಜಿನ ಪರಿಷತ್ತು ಆಗಬೇಕಿಲ್ಲ. ಈ ದೇಶದ ಮೂಲ ಸಾಂಸ್ಕೃತಿಕ ನೆಲೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಂವೇದನೆಯನ್ನು ಬಡಿದೆಬ್ಬಿಸುವ ವೇದಿಕೆಯಾದರೆ ಸಾಕು. ಸಾರ್ಥಕತೆ ಇರುವುದು ಇಲ್ಲೇ ಎನಿಸುತ್ತದೆ.

Add Comment

Leave a Reply