Quantcast

ನಮ್ಮ ಮನದ ತಣ್ಣಗೆ ಉರಿಯುವ ದೀಪ..

ತೇಜಸ್ವಿ ಬದುಕಿದ್ದಾರೆ !

ಚಿನ್ನಸ್ವಾಮಿ ವಡ್ಡಗೆರೆ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮಾಯಾಲೋಕಕ್ಕೆ ತೆರಳಿ ಹತ್ತು ವರ್ಷಗಳಾದವು. ಸಹಜ ಕುತೂಹಲ, ತಮಾಷೆ, ಉಡಾಫೆ ಗುಣಗಳಿಂದ ನಗಿಸುತ್ತಲೇ ಗಂಭೀರ ವಿಷಯಗಳನ್ನು ಹೇಳುತ್ತಿದ್ದ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ..

ತೇಜಸ್ವಿ ಈಗ ಇಲ್ಲ ಅಂತ ಮನಸ್ಸು ನಂಬುತ್ತಿಲ್ಲ. ಅವರು ಕಾಡಿನಲ್ಲಿ ಹಕ್ಕಿಗಳ ಪೋಟೊ ಹಿಡಿಯುತ್ತಾ, ಹೊಳೆಯ ದಂಡೆಯಲ್ಲಿ ಕುಳಿತು ಮೀನು ಶಿಕಾರಿ ಮಾಡುತ್ತಾ, ‘ಕಿವಿ’ಯ ಜೊತೆ ಸುತ್ತಾಡುತ್ತಾ, ತಮ್ಮ ಇಷ್ಟ ಬಂದಂತೆ ಹಸಿರಿನ ನಡುವೆ ಹೆಗಲ ಮೇಲೆ ಕೋವಿ ಹೊತ್ತು ತಿರುಗುತ್ತಿದ್ದಾರೆ ಅನ್ನಿಸುತ್ತದೆ.

ಜುಗಾರಿ ಕ್ರಾಸ್ ನ ನಿಗೂಢ ಮನುಷ್ಯರಿಂದ ಸದಾ ದೂರವಿದ್ದ ತೇಜಸ್ವಿ ಅವರಿಗೆ ಮಂತ್ರಿಗಳು, ಜಿಲ್ಲಾಧಿಕಾರಿಗಳು ಹಾಗೂ ಶ್ರೀಮಂತರ ಗೆಳೆತನ ಇರುತ್ತಿರಲಿಲ್ಲ. ಯಾವಾಗಲೂ ಅವರಿಗೆ ಮೀನು ಹಿಡಿಯುವವರು, ಕೀಟತಜ್ಞರು, ಮಂದಣ್ಣನಂತಹ ಹಳ್ಳಿವಿಜ್ಞಾನಿಗಳೇ ಹೆಚ್ಚು ಆಪ್ತವಾಗಿರುತ್ತಿದ್ದರು.

90 ರ ದಶಕದಲ್ಲಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಾಗಿದ್ದ ನಮಗೆ ಲಂಕೇಶ್, ತೇಜಸ್ವಿ, ಅನಂತಮೂರ್ತಿ, ದೇವನೂರ ಮಹಾದೇವ ಅಂದರೆ ಅತಿ ಪ್ರೀತಿ. ಅವರ ಸಾಹಿತ್ಯದ ಜೊತೆಗೆ ನಡೆನುಡಿ ಎಲ್ಲವನ್ನೂ ಕಾಪಿ ಮಾಡಲು ಹಾತೊರೆಯುತ್ತಿದ್ದ ದಿನಗಳು ಅವು. ಈ ತ್ರಿಮೂರ್ತಿಗಳು ಮೈಸೂರಿನ ಸಭೆ ಸಮಾರಂಭಗಳಿಗೆ ಬರುತ್ತಾರೆ ಎಂದರೆ ನಾವು ತಪ್ಪಿಸಿಕೊಳ್ಳುತ್ತಿರಲಿಲ್ಲ. ಮಹದೇವ ಅವರಂತೂ ಆಗಾಗ ಲೂನಾ ಮೇಲೆ ದರ್ಶನ ಕೊಡುತ್ತಿದ್ದರು. ಅವರು ಬೀದಿಬದಿ ಟೀ ಅಂಗಡಿಯಲ್ಲಿ ನಿಂತು ಟೀ ಹೀರುತ್ತಾ ಸಿಗರೇಟು ಸೇದುವುದನ್ನು ನೋಡಿ ಪುಳಕಿತರಾಗುತ್ತಿದ್ದೆವು. ಎಂ.ಎ ತರಗತಿಯಲ್ಲಿ ಜಿ.ಹೆಚ್.ನಾಯಕರು ತೇಜಸ್ವಿ ಅವರ ಬರಹ ಬದುಕಿನ ಬಗ್ಗೆ ಪ್ರಾಸಂಗಿಕವಾಗಿ ಆಗಾಗ ಹೇಳುತ್ತಿದ್ದರು. ಆಗ ಸ್ವಾರಸ್ಯಕರ ವಿಷಯಗಳಿಗೆ ನಾವು ಕಣ್ಣರಳಿಸಿ ಕಿವಿಯಾಗುತ್ತಿದ್ದೆವು.

 

ಇಷ್ಟಪಟ್ಟಿದ್ದರೆ ದೊಡ್ಡ ವೈಟ್ ಕಾಲರ್ ಹುದ್ದೆಯಲ್ಲಿ ಇರಬಹುದಾಗಿದ್ದ ತೇಜಸ್ವಿ ಎಲ್ಲವನ್ನೂ ನಿರಾಕರಿಸಿ ಕಾಡಿನ ಸಂತನಾಗಿ ಜಗತ್ತಿನ ವಿದ್ಯಮಾನಗಳೆಲ್ಲವನ್ನೂ ಗಮನಿಸುತ್ತಾ ನಮ್ಮ ಅರಿವಿನ ದಿಗಂತವನ್ನು ವಿಸ್ತರಿಸಿದರು.

ಒಮ್ಮೆ ಮೂಡಿಗೆರೆ ತೋಟದಲ್ಲೇ ತೇಜಸ್ವಿ ಅವರನ್ನು ಭೇಟಿಯಾದ ಮಧುರ ಕ್ಷಣವನ್ನು ನಾನೆಂದಿಗೂ ಮರೆಯಲಾರೆ. ಆ ಚೇತನದ ಜೊತೆ ಕಳೆದ ಅರ್ಧಗಂಟೆಗೆ ಬೆಲೆ ಕಟ್ಟಲಾಗದು. ಮೂಡಿಗೆರೆಯ ತೋಟದಲ್ಲಿ ತೇಜಸ್ವಿಯವರನ್ನ ಭೇಟಿಯಾದ ಆ ಸುಂದರ ಬೆಳಗು ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ಅವು ‘ವಿಜಯ ಕರ್ನಾಟಕ’ದ ಆರಂಭದ ದಿನಗಳು. ಈಶ್ವರ ದೈತೋಟ ನಮ್ಮ ಸಂಪಾದಕರಾಗಿದ್ದರು. ನಾನು ಮತ್ತು ಸಿ.ಕೆ.ಮಹೇಂದ್ರ ಹೇಗಾದರೂ ಮಾಡಿ ಭಾನುವಾರದ ಸಾಪ್ತಾಹಿಕ ಪುರವಾಣಿಗೆ ತೇಜಸ್ವಿ ಅವರಿಂದ ಅಂಕಣವೊಂದನ್ನು ಬರೆಸಬೇಕೆಂದು ಅವರಿಗೆ ಪೋನ್ ಮಾಡಿದೆವು. ಸರಿ ಮಾತಾಡೋಣ ಬನ್ನಿ ಅಂದರು.

ರಾತ್ರಿ ಸುಮಾರು ಒಂದು ಗಂಟೆಯಲ್ಲಿ ಪತ್ರಿಕೆಯ ಕೆಲಸ ಮುಗಿಸಿ ನಾನು ಮತ್ತು ಮಹೇಂದ್ರ ಮೂಡಿಗೆರೆಯತ್ತ ಕಾರಿನಲ್ಲಿ ಹೊರಟೆವು. ತೇಜಸ್ವಿ ಅವರ ತೋಟಕ್ಕೆ ಹೋದಾಗ ಬೆಳಗ್ಗೆ ಏಳು ಗಂಟೆಯಾಗಿತ್ತು. ಅವರು ಮನೆಯಲ್ಲಿರಲಿಲ್ಲ. ರಾಜೇಶ್ವರಿ ಮೇಡಂ ಇದ್ದರು. ನಾವು ನಮ್ಮ ಪರಿಚಯ ಹೇಳಿಕೊಂಡು, ಮೈಸೂರಿನಿಂದ ತೇಜಸ್ವಿ ಅವರನ್ನು ಕಾಣಲು ಬಂದಿದ್ದೇವೆ, ಸ್ವಲ್ಪ ಸಂಕೋಚದಿಂದಲೇ ಅವರೇ ಬರಲು ಹೇಳಿದ್ದರು ಅಂದೆವು. ಸರಿ, ಅವರು ತೋಟದ ಕಡೆಗೆ ಹೋಗಿದ್ದಾರೆ. ಬರುತ್ತಾರೆ ಕುಳಿತುಕೊಳ್ಳಿ ಎಂದರು.

ಅರ್ಧಗಂಟೆ ಬಿಟ್ಟುಕೊಂಡು ತೇಜಸ್ವಿ ಬಂದರು. ಅದೇ ನೀಲಿ ಕಲ್ಲರ್ ನ ಜೀನ್ಸ್ ಪ್ಯಾಂಟು. ಅರ್ಧತೋಳಿನ ಚೌಕಳಿ ಮನೆಯ ಶರ್ಟು. ನಾವು ನೀವು ಸದಾ ಕಲ್ಪಿಸಿಕೊಳ್ಳುವ ವೇಷದಲ್ಲೇ. ನಮ್ಮನ್ನು ಒಮ್ಮೆ ಕುತೂಹಲದಿಂದ ನೋಡಿದರು. ಸಾರ್ ನಮಸ್ಕಾರ. ನಾವೂ ಸಾರ್ ಮೈಸೂರಿನಿಂದ ಬಂದಿದ್ದೇವೆ. ಅದೇ ರಾತ್ರಿ ನಿಮಗೆ ಪೋನ್ ಮಾಡಿದ್ವಲ್ಲಾ ಅಂತ ನಾನು ಪೀಠಿಕೆ ಹಾಕಿದೆ.

ಅಯ್ಯೋ, ಮೈಸೂರಿನಿಂದ ಬಂದ್ರೆನಯ್ಯಾ, ನಾನು ಎಲ್ಲೋ ಇಲ್ಲೆ ಹತ್ತಿರದಿಂದ ಮಾತಾಡ್ತಾ ಇದಿರಾ ಬನ್ನಿ ಅಂದ್ರೆ.. ಅಷ್ಟ್ ದೂರದಿಂದ ಇಲ್ಲತಂಕ್ಕ ಯಾಕ್ ಬರಕೋದ್ರಯ್ಯ ಅಂದ್ರು. ಅದೇ ಸಾರ್ ವಿಜಯ ಕರ್ನಾಟಕ ಪತ್ರಿಕೆಗೆ ನಿಮ್ಮಿಂದ ಒಂದು ಅಂಕಣ ಬರೆಯೋದಕ್ಕೆ ಕೇಳೋಣ ಅಂತ ಬಂದ್ವಿ ಸಾರ್……..

ನೀವು ಹುಡುಗರು, ನಿಮಗೆ ಏನು ಗೊತ್ತಾಗಲ್ಲ ಕಣ್ರಯ್ಯಾ. ನಿಮ್ಮ ಪತ್ರಿಕೆ ಓನರ್ರೂ ವಿಜಯ ಸಂಕೇಶ್ವರ. ಬಿಜೆಪಿ ಪಾರ್ಟಿ. ನಾನು ಬಿಜೆಪಿ ವಿರುದ್ಧವಾಗಿ ಯಾವುದಾದರೂ ಅಂಕಣ ಬರೆಯೋದು. ಅದು ಎಡವಟ್ಟಾಗಿ ನಿಮ್ಮ ತಲೆಗೆ ಬರೋದು. ತೇಜಸ್ವಿ ಅವರನ್ನ ಬರೆಯೋಕೆ ಹೇಳಿದೊರು ಯಾರು ಅಂತ ವಿಚಾರಣೆ ಮಾಡೋದು. ನೀವು ಅಂತ ಗೊತ್ತಾಗಿ, ನಿಮ್ಮನ್ನ ಕೆಲಸದಿಂದ ಕಿತ್ತಾಕೋದು. ನನ್ನಿಂದ ನೀವು ಬೀದಿಪಾಲಾಗ್ತೀರಾ. ಪತ್ರಿಕೆಯ ಒಳರಾಜಕೀಯ ನಿಮಗೆ ಏನೇನೂ ಗೊತ್ತಿಲ್ಲಾ ಅಂತ ಕಾಣುತ್ತೆ ಅಂತ ಬುದ್ದಿವಾದ ಹೇಳಿ, ಕಾಫಿ ಬಿಸ್ಕತ್ ಕೊಟ್ಟು ಪ್ರೀತಿಯಿಂದ ಮಾತನಾಡಿ ಕಳಿಸಿಕೊಟ್ಟಿದ್ದರು.

ತೇಜಸ್ವಿ, ಲಂಕೇಶ್, ಅನಂತಮೂರ್ತಿ ಅವರಂತಹ ಸಾಂಸ್ಕೃತಿಕ ದಿಗ್ಗಜರು ಈಗ ನಮ್ಮ ನಡುವೆ ಇಲ್ಲ ನಿಜ. ಆದರೆ ಅವರು ಆಡಿದ ಮಾತು, ಅವರ ಕೃತಿಗಳು ಎಲ್ಲೋ ನಮ್ಮ ಜೀವನದ ಗತಿಯನ್ನು ಬದಲಿಸುತ್ತಾ, ನಮ್ಮಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತಾ ಜೀವಂತವಾಗಿಟ್ಟಿವೆ. ಬದುಕಿನಲ್ಲಿ ಸೋತಾಗ, ಹತಾಶರಾದಾಗ ಮತ್ತೆ ಮತ್ತೆ ಓದುವ ನಿಮ್ಮ ಸಾಹಿತ್ಯ ಕೃತಿಗಳು ನಮಗೆ ಸ್ಪೂರ್ತಿ ನೀಡಿವೆ. ನಮ್ಮ ಮನದಲ್ಲಿ ನೀವು ಸದಾ ತಣ್ಣಗೆ ಉರಿಯುವ ದೀಪದಂತೆ ಬೆಳಕಾಗಿ ದಾರಿ ತೋರಿಸುತ್ತಾ ಮುನ್ನಡೆಸುತ್ತಾ ಇದ್ದೀರಿ, ನಿಮ್ಮ ನೆನಪೆ ನಮಗೆ ಹಿತವಾದ ಭಾವನೆ ತರುತ್ತದೆ. ಕಲಿಸದೆ ಕಲಿಸಿದ ಗುರುಗಳು ನೀವು, ಸದಾ ನಿಮ್ಮ ನೆನಪಲ್ಲಿ ನಾವು……

One Response

  1. Chalam
    April 8, 2017

Add Comment

Leave a Reply