Quantcast

ಗದ್ದರ್: ಆ ಮನುಷ್ಯನನ್ನು ನಾವು ಗೌರವಿಸೋಣ..

 ವೃತ್ತಿಯಿಂದ ವೈದ್ಯರಾದ ಡಾ ಲಕ್ಷ್ಮಣ್ ಅವರು ತಮ್ಮ ಕವಿತೆಗಳಿಂದ ಹೆಸರಾಗಿದ್ದಾರೆ. ಅವರು ಗದ್ದರ್ ಅವರ ಇತ್ತೀಚಿನ ಬದಲಾವಣೆಯ ಬಗ್ಗೆ ಬರೆದ ಬರಹವನ್ನು ಇಲ್ಲಿ ನೀಡುತ್ತಿದ್ದೇವೆ.

ಈ ಬರಹ ಅನೇಕ ಪ್ರಶ್ನೆಗಳನ್ನು ಎತ್ತುತ್ತಿದೆ.

‘ಜುಗಾರಿ ಕ್ರಾಸ್’ ಇರುವುದೇ ವಿಚಾರ ಮಥನಕ್ಕಾಗಿ..

ಬನ್ನಿ ನೀವೂ ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಅನಿಸಿಕೆಯನ್ನು avadhimag@gmail.comಇಲ್ಲಿಗೆ ಕಳಿಸಿ    

ಡಾ. ಲಕ್ಷ್ಮಣ್ ವಿ ಎ

ಇವರ ಹೆಸರು ಗುಮ್ಮಾಡಿ ವಿಠ್ಠಲ ರಾವ್.

ಹುಟ್ಟಿದ್ದು೧೯೪೯ರಲ್ಲಿ

ಈಗಿನ ತೆಲಂಗಾಣ ರಾಜ್ಯದ ಮೇಢಕ ಜಿಲ್ಲೆಯ ತೂಪ್ರಾನ್ ಎಂಬ ಹಳ್ಳಿಯ ಬಡ ದಲಿತ ಕುಟುಂಬದಲ್ಲಿ.

ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್

ಆದರೂ ಸೆಳೆದದ್ದು ಮಾವೋವಾದಿಯ ಚಳುವಳಿ.

ಮೈ ಮೇಲೊಂದು ಬಿಳಿಯ ಧೋತಿ, ಹೆಗಲ ಮೇಲೆ ಕೆಂಪು ವಸ್ತ್ರ ಹೊದ್ದು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಕೈಯಲ್ಲಿ ತಮಟೆ ಹಿಡಿದು ಕ್ರಾಂತಿ ಗೀತೆಗಳನ್ನು ವೇದಿಕೆಯ ಮೇಲೆ ಹಾಡುತ್ತಿದ್ದರೆ ,ಆಂಧ್ರದ ಬಡಕೂಲಿ ಕಾರ್ಮಿಕರ ಕೃಷಿಕರ ಆದಿವಾಸಿಗಳ, ದಲಿತರ, ದೀನ ದಮನಿತರ ದನಿಯೊಂದು ದೇವರ ರೂಪದಲ್ಲಿ ಧರೆಗಿಳಿದು ಬಂದಂತೆ ಕಾಣುತ್ತಿದ್ದರು. ಮುಂದೆ ಎಲ್ಲರ ಬಾಯಲ್ಲಿ “ಗದ್ದರ” ಎಂಬ ಹೆಸರಿನಿಂದ ಪರಿಚಿತನಾಗಿ ಮಾವೋವಾದಿ ಸಿದ್ದಾಂತದ ಚಳುವಳಿಯ ಕ್ರಾಂತಿಕಾರನಾಗಿ ಹೊರಹೊಮ್ಮಿದರು.

ಗದ್ದರ ಎಂಬುದು ಸ್ವಾತಂತ್ರ್ಯ ಪೂರ್ವದಲ್ಲಿ ಪಂಜಾಬಿನಲ್ಲಿ ಬ್ರಿಟಿಷರ ವಿರುದ್ದ ಹೋರಾಡಿದ ಒಂದು ಸಂಘಟನೆ. ನಿಘಂಟಿನ ಪ್ರಕಾರ ಇದನ್ನು ರಾಜದ್ರೋಹವೆಂದೂ ಕರೆಯುತ್ತಾರೆ. ಎಪ್ಪತ್ತರ ದಶಕದ ಆಂಧ್ರ ಪ್ರದೇಶದಲ್ಲಿ ಮಾವೋ ಚಳುವಳಿ ಕಾವು ಉಚ್ಛ್ರಾಯ ಸ್ತಿತಿಯಲ್ಲಿದ್ದಾಗ ಅದರ ಭಾಗವಾಗಿ ಸಂಘಟನೆಯನ್ನು ಸಿದ್ಧಾಂತವನ್ನೂ ಏಕಕಾಲಕ್ಕೆ ಮೀರಿ ಬೆಳೆದವರು ಗದ್ದರ.
ಪ್ರಭುತ್ವದ ವಿರುದ್ದ ಶಸ್ತ್ರ ಸಮೇತವಾಗಿ ರಣಾಂಗಣಕ್ಕಿಳಿದಿದ್ದು ಸರ್ಕಾರದ ಕಣ್ಣು ಕೆಂಪಾಗುವಂತೆ ಮಾಡಿತ್ತು.

ಹೀಗಾಗಿ ಅನೇಕ ವರ್ಷಗಳ ಕಾಲ ಭೂಗತರಾಗಿ ವ್ಯವಸ್ಥೆಯ ವಿರುದ್ದ ಬಂಡೇಳುತ್ತಾರೆ. ಸುಮಾರು ನಲವತ್ತು ವರ್ಷಗಳ ಕಾಲ ಒಂದು ಸಿದ್ಧಾಂತ ದ ಬೆನ್ನೆಲುಬಾಗಿ ದುಡಿಯುತ್ತ, ಹಾಡುತ್ತ, ಕುಣಿಯುತ್ತ, ಒಂದೊಮ್ಮೆ ಭದ್ರತಾ ಪಡೆಗಳ ಗುಂಡಿಗೆ ಮಾರಣಾಂತಿಕವಾಗಿ ಹಲ್ಲೆಗೊಳಗಾದರೂ ಛಲಗುಂದದೆ ಚಳುವಳಿಯನ್ನು ಮುನ್ನೆಡೆಸಿ ಆದಿವಾಸಿಗಳ ಪಾಲಿಗೆ ಹೀರೋ ಎನಿಸಿಕೊಂಡರು. ಮುಂದೆ ತೆಲಂಗಾಣ ಪ್ರತ್ಯೇಕ ರಾಜ್ಯದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅದರಲ್ಲಿ ಯಶಸ್ವಿಯೂ ಆದರು. ಈಗ ಇವರ ಕ್ರಾಂತಿಗೀತೆಯೊಂದು ತೆಲಂಗಾಣ ರಾಜ್ಯದ ನಾಡಗೀತೆಯ ಗೌರವ ಪಡೆದುಕೊಂಡಿದೆ. ಇದೆಲ್ಲ ಈಗ ಇತಿಹಾಸ.

ಸಧ್ಯದ ತಲ್ಲಣವೆಂದರೆ-

ಅಂತಹ ಕ್ರಾಂತಿಕಾರಿ ಸಂಘಟನೆಯ ಮುಂದಾಳುವೊಬ್ಬ ಯಾವ ಫ್ಯೂಡಲ್ ವ್ಯವಸ್ಥೆಯನ್ನು ಪೋಷಿಸಿಕೊಂಡು ಬಂದ ಆರೋಪ ಹೊತ್ತ ಪುರೋಹಿತ ಶಾಹಿಯ ವಿರುದ್ಧ ಹೋರಾಡಿದ್ದರೋ ಅಂತಹ ಗದ್ದರ ಈ ದಿನಗಳಲ್ಲಿ ಗುಡಿ, ಗುಂಡಾರ, ದೈವಭಕ್ತಿ ಅಂತ ಕುಟುಂಬ ಸಮೇತರಾಗಿ ಶರಣಾಗಿರುವುದು ಕಂಡು ನಕ್ಸಲ್ ನಾಯಕರ, ದೇಶದ ಕೆಲ ಬುದ್ದಿ ಜೀವಿಗಳ ಹುಬ್ಬೇರುವಂತೆ ಮಾಡಿದೆ. ಅಥವ ಆ ಚಳುವಳಿಯನ್ನೇ ನಂಬಿಕೊಂಡಿರುವ ಸಾವಿರಾರು ಕಾರ್ಯಕರ್ತರಿಗೆ ಇವರ ನಡೆ ಆಘಾತ, ಭ್ರಮನಿರಸನ ತಂದೊಡ್ಡಿದೆ. ಪ್ರಭುತ್ವ ಎಷ್ಟೇ ಕಠೋರವಿದ್ದರೂ ಅದನ್ನು ಒಪ್ಪಿಕೊಂಡು ನಡೆಯಬೇಕೆ? ಎಂಬ ವಿವಶ  ಸ್ಥಿತಿಯಲ್ಲಿದ್ದಾರೆ.

ಅಸಲೀ ಸಂಗತಿಯೆಂದರೆ ನಕ್ಸಲರ ಈ ಸಶಸ್ತ್ರ ಹೋರಾಟ ಜನಬೆಂಬಲ ಎಂದೋ ಕಳೆದುಕೊಂಡಿದೆ. ಹೋರಾಟ ತನ್ನ ಕಾವು ಕಳೆದುಕೊಂಡಿದೆ. ಅಮಾಯಕರ ಜನಸಾಮಾನ್ಯರ ಯೋಧರ ಹತ್ಯೆಯ ಆರೋಪಗಳು ಹೋರಾಟಗಾರರ ಮನೋಧೈರ್ಯವನ್ನು ಕಂಗೆಡಿಸಿವೆ. ಮೇಲಾಗಿ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟದಲ್ಲಿ ಸಶಸ್ತ್ರ ಹೋರಾಟಗಳು ಗೆಲುವು ಕಂಡಿದ್ದು ಅಪರೂಪ.

ಈ ಹಿನ್ನೆಲೆಯಲ್ಲಿ ನೋಡಿದಾಗ ಕೆಲ ವರ್ಷಗಳ ಹಿಂದೆ ಕರ್ನಾಟಕ ದ ನಕ್ಸಲ್ ನಾಯಕರೆನಿಸಿಕೊಂಡವರು ಯಾವುದೇ ಷರತ್ತುಗಳಿಲ್ಲದೆ ಸರಕಾರಕ್ಕೆ ಶರಣಾಗಿದ್ದು ಈ ಘಟನೆಗಳ ಮುಂದುವರೆದ ಭಾಗವಾಗಿ ತೋರುತ್ತದೆ. ಇಲ್ಲಿನ ಸಮಸ್ಯೆಯೆಂದರೆ ಗದ್ದರ ಸಂಘಟನೆಯನ್ನು ಮೀರಿ ಬೆಳೆದು ದೇವರಾಗಿ ಜನ ಅನುಯಾಯಿಗಳು ಅವನ ಭಜನೆ ಶುರುಮಾಡಿದರು. ಹೀಗಾಗಿ ನಾಯಕನೊಬ್ಬ ಸಂಘಟನೆಯೆಡೆಗೆ ಬೆನ್ನು ತಿರುಗಿಸಿದಾಗಿನ ಹತಾಶೆ ಇವರನ್ನು ಕಾಡುತ್ತಿದೆ.

ಮಾವೋವಾದದ ಸಿದ್ದಾಂತಗಳೇನೆ ಇರಲಿ ಕ್ರಾಂತಿಯ ಹೆಸರಿನಲ್ಲಿ ರಕ್ತಪಾತವನ್ನು ಇಲ್ಲಿ ಯಾರೂ ಒಪ್ಪಲಾರರು. ಹಾಗಂತ ಪ್ರಭುತ್ವದ ಜಡತ್ವವನ್ನು ಒಪ್ಪಿಕೊಂಡಂತಲ್ಲ. ದಶಕಗಳಿಂದ ಮಾತುಕತೆಗಳಿಂದ ಸಮಸ್ಯೆ ಬಗೆಹರಿಸುವುದಾಗಿ ಸರಕಾರಗಳು ಹೇಳುತಿದ್ದರು ಸಮಸ್ಯೆ ಅಷ್ಟು ಸುಲಭವಾಗಿ ಬಗೆಹರಿಯುವ ಲಕ್ಷಣಗಳು ಕ್ಷೀಣವಾಗಿ ಕಂಡಂತಾದರೆ ಅಚ್ಚರಿಯೇನಲ್ಲ ಹೀಗಾಗಿ ನಕ್ಸಲ ಪೀಡಿತ ಭಾಗಗಳಿಂದಾಗುವ ಘರ್ಷಣೆಗಳು ಆಗಾಗ ವರದಿಯಾಗುತ್ತಲೇ ಭಾರತ ದೇಶ ದಶಕಗಳಿಂದ ಕಾಡುವ ರೋಗಕ್ಕೆ ಮದ್ದಿಲ್ಲದೆ ನರಳುತ್ತಿದೆ.

ಶಾಂತಿ, ಸಹನೆ, ತಾಳ್ಮೆ, ಪ್ರೀತಿಯಿಂದ ಜಗತ್ತಿಗೆ ತೋರಿಸಿಕೊಟ್ಟ ಅಹಿಂಸೆಯ ದೊಡ್ಡ ಅಸ್ತ್ರ ವೆಂಬ ಗಾಂಧೀ ಮಂತ್ರದ ಕೋಲು ನಮ್ಮ ಬಳಿಯಿದೆ. ಅಂದ ಹಾಗೆ ಗಾಂಧೀಜಿಯವರಿಗೂ ಗದ್ದರವರಿಗೂ ಕೆಲವೊಂದು ಸಾಮ್ಯತೆಗಳು ಮೇಲ್ನೋಟಕ್ಕೆ ಕಂಡುಬರುತ್ತವೆ. ಇವರಿಬ್ಬರೂ ದಮನಿತರ ಪರವಾಗಿ ದನಿಯೆತ್ತಿದವರು, ಬರಿಮೈಯಲ್ಲಿ ನಡೆದವರು, ಆದರೆ ಸೈದ್ಧಾಂತಿಕವಾಗಿ ಭಿನ್ನ ನಿಲುವಿನವರು. ಗಾಂಧೀಜಿ ದೇವರ ಹೆಸರಿನಲ್ಲಿ ನಡೆದುಬಂದ ಕಂದಾಚಾರಗಳನ್ನು ವಿರೋಧಿಸುತ್ತಲೇ ದೇವರನ್ನು ಒಪ್ಪಿಕೊಂಡು ಅಪ್ಪಿಕೊಂಡವರು. ಗದ್ದರ ಪುರೋತಶಾಹಿಯನ್ನು ಧಿಕ್ಕರಿಸಿದವರು. ಗದ್ದರವರು ಇದ್ದಕ್ಕಿದ್ದಂತೆ ದೈವಭಕ್ತರಾಗಿದ್ದು ಕೆಲವರ ಅಚ್ಚರಿಗೆ ಕಾರಣವಾದ್ದು ಸುಳ್ಳೇನಲ್ಲ.

ದೇವರನ್ನು ಧಿಕ್ಕರಿಸಿದವರೆಲ್ಲ ಜ್ಞಾನಿಗಳಲ್ಲ. ಹಾಗೆ ಒಪ್ಪಿಕೊಂಡವರೂ ಯೋಗಿಗಳಲ್ಲ . ಅಪಾರ ನಾಸ್ತಿಕನೊಬ್ಬನಿಗೆ ತನ್ನ ಜೀವನದಲ್ಲಿ ನಡೆದ ಪವಾಡವೊಂದು ಇದ್ದಕ್ಕಿದ್ದಂತೆ ದೈವ ಭಕ್ತಿ ಮೂಡಲು ಕಾರಣರಾಗಿರಬಹುದು. ಹಾಗೆ ದೈವ ಭಕ್ತನೊಬ್ಬನಿಗೆ ಇದ್ದಕ್ಕಿದ್ದಂತೆ ದೇವರ ಅಸ್ತಿತ್ವ ಅನುಮಾನ ಉಂಟುಮಾಡಿರಲೂಬಹುದು. ಅದು ಆಯಾ ಮನುಷ್ಯನ ಪರಿಸರ, ಪರಿಸ್ಥಿತಿಯ ಮೇಲೆ ನೇರವಾಗಿ ಅವಲಂಬಿಸಿದೆ. ಒಬ್ಬಸಾಮಾನ್ಯ ಮನುಷ್ಯ ಈ ಇಬ್ಬಂದಿತನದಲ್ಲಿ ಸದಾ ಜೀಕುತ್ತಿರುತ್ತಾನೆ.

ಮನುಷ್ಯ ಮೂಲತಃ ಒಬ್ಬ ಸಂಕೀರ್ಣ ಜೀವಿ. ಇಲ್ಲಿ ಅವನ ಭಾವನೆಗಳನ್ನು ಗೌರವಿಸುವುದು ಇಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಯಾಗಿರುತ್ತದೆ. ಹಾಗಾಗಿ ಗದ್ದರರವರ ಭಾವನೆಗಳನ್ನು ಗೌರವಿಸುವುದು ಇಲ್ಲಿ ಸೂಕ್ತವೆನಿಸುತ್ತದೆ. ದೇವರನ್ನು ಒಪ್ಪಿಕೊಂಡ ಮಾತ್ರಕ್ಕೆ ಅವರು ಹೋರಾಟ ನಿಂತಂತಾಗುವುದಿಲ್ಲ. ನಮ್ಮ ನಾಡಿನ ಶ್ರೇಷ್ಠ ಚಿಂತಕರಾದ ಲಂಕೇಶ್ -ಅನಂತಮೂರ್ತಿವರು ಎಷ್ಟೇ ಪ್ರಗತಿಪರ ಚಿಂತಕರಾಗಿದ್ದರೂ ಪುರೋತಶಾಹಿಯ ಕಂದಾಚಾರಗಳನ್ನು ವಿರೋಧಿಸುತ್ತಲೇ, ಸಮಾಜದ ಅಭ್ಯುದಯಕ್ಕೆ ದೇವರ ಪಾತ್ರ ದ ಹಿರಿಮೆಯನ್ನು, ಅದರ ಪ್ರಭಾವವನ್ನು ಮನಗಂಡಿದ್ದರು.

ಒಬ್ಬ ಕ್ರಾಂತಿಕಾರಿಯಲ್ಲಿ ಕವಿಯೂ ಇರಬಹುದು, ಒಬ್ಬ ಸಾಮಾನ್ಯ ಮನುಷ್ಯನೂ ಇರಬಹುದು. ಗದ್ದರರಲ್ಲಿಯ ಆ ಮನುಷ್ಯನನ್ನು ನಾವು ಗೌರವಿಸೋಣ.

Add Comment

Leave a Reply