Quantcast

ನನ್ನ ಮೂಗಿನ ಪೈಪು..

ಆಗ ಜಗತ್ತಿನೆದುರಿಗೆ ಬೆತ್ತಲಾಗಿದ್ದು ಭವ್ಯ ಭಾರತದ ಸೈನಿಕರು..

ಕ.ನಾ.ವಿಜಯಕುಮಾರ

ಯುದ್ಧೋನ್ಮಾದದ ಸೈನಿಕರಿಂದ ಶತ್ರುಗಳ ನೆತ್ತರು ಹರಿಯಬೇಕಿತ್ತು,

ಆದರೆ ಆ ದೇಶಭಕ್ತ ಸೈನಿಕರ ಹಸಿವಿನಿಂದ ಹರಿದದ್ದು,

ನನ್ನ ಸೋದರಿಯರು ನೋವಿನಿಂದ ಸ್ರವಿಸಿದ ಅಸಹನೀಯ ರಕ್ತ..

ಪ್ರತಿರೋಧಿಸಲು ಪಟ್ಟುಗಳೇ ಇಲ್ಲವಾಗಿತ್ತು ನನ್ನ ಜನರಲ್ಲಿ

ಈಶಾನ್ಯದ ಮಲಮಕ್ಕಳ ಮೈಯ್ಯ ಬಾಸುಂಡೆಗಳಿಗೆ ಮುಲಾಮು ಹಚ್ಚುವ ಬದಲು ಮುಳ್ಳನ್ನು ಮೆತ್ತಿದ್ದು

ಭಾರತ ಸರ್ಕಾರದ ವಿಶೇಷಾಧಿಕಾರವೆಂಬ ವಿಷದ ಕಾನೂನು

 

ನನ್ನಂಥ ಸೋದರಿಯರು ಹಾಡಹಗಲೇ ಬತ್ತಲಾಗಿ, ಬಲಾತ್ಕರಿಸಲು ಕೂಗಿ ಕರೆದಿದ್ದರು ನಿಮ್ಮ ಸೈನ್ಯವನ್ನು,

ಆಗ ಜಗತ್ತಿನೆದುರಿಗೆ ಬೆತ್ತಲಾಗಿದ್ದು ಭವ್ಯ ಭಾರತದ ಸೈನಿಕರು..

ನನ್ನದೊಂದು ಸಣ್ಣ ಸಮೂಹದ ಎದುರಾಗಿ ನಿಂತದ್ದು ಸಾಗರದಂಥ ಭಾರತ ಸೇನೆ

ಆಗ.., ನನ್ನೊಳಗಿನ ಚಡಪಡಿಕೆಗಳಿಗೆ ಚಟುವಟಿಕೆಯ ಚೌಕಟ್ಟುಗಳಿರಲಿಲ್ಲ,

ಮಾವೋನ ಮಕ್ಕಳ ಪಡೆಯ ಪ್ರತಿಪಾದನೆಗಳು ನನಗೆ ಪರಿಹಾರವೆನಿಸಲಿಲ್ಲ

ಕೆಂಪು ಸಂಗಾತಿಗಳ ಸಮಸಿದ್ದಾಂತಗಳು ನನ್ನೂರಿಗೆ ಉತ್ತರವಾಗಿರಲಿಲ್ಲ

 

ಮಂಡೇಲಜ್ಜನ ಶಾಂತಿಯ ಸಿದ್ಧಾಂತ, ಸೂಕಿಯ ಸೈರಣೆಯ ಸೆಳವು

ಬಾಬಾ ಸಾಹೇಬರ ಬುನಾದಿಯ ಸಂವಿಧಾನ,

ನಮ್ಮದೇ ಗಾಂಧಿಯ ಸತ್ಯಾಗ್ರಹದ ಹಸಿವಿನ ಸುಳಿವುಗಳನ್ನರಿತು

ಸೆಟೆದು ನಿಂತೆ…. ಮರುಟಿದರು ನನ್ನ ಮತ್ತೆ ಚಿಗುರದಂತೆ

ಪಟ್ಟು ಬಿಡುವವಳಲ್ಲ ನಾನು…     ಪಟ್ಟಾಗಿ ಕುಳಿತೆ..

ನನ್ನ ಹರೆಯವೇ ಹೊನಲಿನಂತೆ ಹರಿದುಹೋಗುವಷ್ಟು..

 

ಕದಲದೇ ಕುಳಿತವಳಲ್ಲಿ ಕಳಕಳಿಯ ಕನಲಿಕೆ,

ನನ್ನ ಮೂಗಿನ ಪೈಪು ಮೂಗುತಿಗಿಂತಲೂ ಮೆರೆದ ಆಭರಣ..

ಅನ್ನದ ಹಂಗು ತೊರೆದು ಹಕ್ಕುಗಳಿಗಾಗಿ ಹಂಬಲಿಸಿದೆ..

ಹದಿನಾರು ವರ್ಷಗಳಲ್ಲಿ ಹಸಿವು-ನೀರಡಿಕೆಯಾಗಲಿಲ್ಲ ನನಗೆ..

ನನ್ನ ದಾಹವಿದ್ದದ್ದು  ನಿಮ್ಮ ದರಿದ್ರ ಅಧಿಕಾರಶಾಹಿ ಕಾನೂನಿನ ತಿದ್ದುಪಡಿಗೆ.,

ಆದರೆ ನೀವು ತಿದ್ದಹೊರಟದ್ದು ನನ್ನ ಜನರ ಮುಗ್ಧತೆಯನ್ನು, ನಿಮ್ಮ ಅಭಿವೃದ್ಧಿ ಆಮಿಷಗಳ ಅಖಂಡತೆಯಡಿಯಲ್ಲಿ..

 

ನನ್ನದು ಕವಿಮನಸ್ಸು..,

ಅದು ಕಲ್ಪನೆಯ ಮೂಸೆಯಲಿ ಕನಸ ಹೊದ್ದು, ಕ್ರಾಂತಿಯ ಕಂದೀಲಿಗಾಗಿ ಕನವರಿಸಿತ್ತು.

ವರುಷ ವರುಷಗಳುರುಳಿದಂತೆ ಉಪವಾಸಕ್ಕೂ ಹಸಿವಿನ ಹಂಬಲ.

ನನ್ನ ಮೂಗಿನ ಕೊಳವೆಗೂ ಆಯಾಸದ ನರಳಿಕೆ..

 

ಮಣಿಪುರದ ಮಹಿಳೆಯರ ಹೃದಯಗಳಲಿ ನನಗಾಗಿ ಮಿಡಿತವಿತ್ತು

ಬಿರಿದ ಬೀಜಕ್ಕಿದುವೇ ಭರವಸೆಯ ಬಿತ್ತನೆ ಭೂಮಿ

ಭವಿಷ್ಯದ ಬಣ್ಣಬಣ್ಣದ ಹುಣ್ಣುಗಳ ಹುಟ್ಟಿಗಾಗಿ

ಹದಿನಾರು ವರ್ಷಗಳ ಹಸಿವೊಂದು ಇಂಗಿಹೋಗುವ ಪರ್ವಕಾಲ

ವರುಷಗಟ್ಟಲೇ ಕುಳಿತವಳು, ಚುನಾವಣೆಗಾಗಿ ಚಿತ್ತಗೊಟ್ಟು ನಿಂತಿದ್ದೆ

ಯಾವುದೇ ವ್ಯಕ್ತಿಯ ಎದುರಾಳಿಯಾಗಿ ಅಲ್ಲ

ಮುಖ್ಯಮಂತ್ರಿಯ ಪ್ರತಿಸ್ಪರ್ಧಿಯಾಗಿ ಅಲ್ಲವೇ ಅಲ್ಲ

ನಾನು ನಿಂತಿದ್ದು ಒಂದು ವ್ಯವಸ್ಥೆಯ ವಿರುದ್ಧ…

 

ಅಷ್ಟು ದಿನ ಕುಂತರೂ ಸ್ಥಾವರಕ್ಕಳಿವಾಗಿರಲಿಲ್ಲ

ಜಂಗಮತೆಯ ಸೋಲು ನನ್ನದು,

ಮಣಿಪುರದ ಜನರ ಹತಾಶ ಹೃದಯಗಳ ಅನಾವರಣ..

 

ಅಷ್ಟಕ್ಕೂ ನನ್ನದು ಪರಾಭವದ ಪರಿಮಳ

ಪಟ್ಟಕಟ್ಟಿಕೊಂಡು ಪ್ರಭಾವಳಿಯೊಳಗೆ ಪರಿತಪಿಸುವವಳಲ್ಲ

 

ಕ್ಷಮಿಸಿ.. ನಾನು ಇರೋಮ್  ಚಾನು ಶರ್ಮಿಳ

ಮಣಿಪುರದ ಹೆಣ್ಣು.., ಭಾರತದ ಈಶಾನ್ಯೆ.

ಹರೆಯವನ್ನೆಲ್ಲ ಹಸಿವಿನಲಿ ಹೂತಿಟ್ಟು

ನಲವತ್ತೈದರಲಿ ಮೈನೆರೆದವಳು

ಮುಂಬರುವ ಮನ್ವಂತರಕ್ಕಾಗಿ…

 

 

Add Comment

Leave a Reply