Quantcast

ಯಾವುದು ಶಾಸ್ತ್ರೀಯ ಭಾಷೆ ?

ಮಾತೃ ಭಾಷಾ ಮಾಧ್ಯಮದ ಸವಾಲುಗಳು

ಡಾ ರಾಜೇಗೌಡ ಹೊಸಹಳ್ಳಿ

ಈ ಹಿಂದೆ ದಿಲ್ಲಿಯ ಸಾಹಿತ್ಯ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ `ಮಾತೃಭಾಷೆ ಮತ್ತು ಜನಪದ ಸಾಹಿತ್ಯ ರಕ್ಷಣೆ”” ಎಂಬ ವಿಚಾರ ಕುರಿತು ಮಾತನಾಡುತ್ತಾ ಎಸ್. ಎಲ್. ಬೈರೈಪ್ಪನವರು ಆತಂಕ ವ್ಯಕ್ತಪಡಿಸಿದ್ದರು

ಹೌದು. ಇಂಗ್ಲಿಷೆಂಬ ಬ್ರಹ್ಮರಾಕ್ಷಸ ದೇಶೀ ಮಕ್ಕಳ ನಾಲಿಗೆಯೊಳಗಿನ ಸಂಸ್ಕೃತಿಯನ್ನೇ ಗಂಟಲಿಗೆ ಕೈಹಾಕಿ ಕಿತ್ತುಕೊಂಡಾಗಿದೆ. ಈ ಇಂಗ್ಲಿಷ್ ಮಾಧ್ಯಮವೆಂಬ ಹಾವಳಿ ಹೀಗೇ ಮುಂದುವರಿದರೆ ಬೈರಪ್ಪನವರು ಹೇಳುವಂತೆ “ಪ್ರಾದೇಶಿಕ ಭಾಷೆಗಳ ಪುಸ್ತಕಗಳನ್ನು ಬರೆಯುವವರು ಮತ್ತು ಓದುವವರೇ ಇರುವುದಿಲ್ಲ” ಈ ಎಚ್ಚರಿಕೆಯ ಮಾತುಗಳನ್ನು ಕೇಂದ್ರವಾಗಲೀ, ರಾಜ್ಯವಾಗಲೀ ಕೇಳಿಸಿಕೊಳ್ಳುತ್ತಿಲ್ಲ.

ತಂತ್ರಜ್ಞಾನ ವಿಜ್ಞಾನ ಹಾಗೂ ಆಡಳಿತದಲ್ಲಿ ಇಂಗ್ಲಿಷು ಜಗತ್ತಿನ ಕೊಂಡಿಯಾಗಿರುವುದು ಸರಿ; ಅದನ್ನಿಟ್ಟುಕೊಂಡೇ ದೇಶೀ ಭದ್ರತೆಯನ್ನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅರಳುವ ಮಕ್ಕಳ ದೇಹ ಮನಸ್ಸುಗಳಿಗೆ ಗೊಟ್ಟದಲ್ಲಿ ನೀರು ಮಜ್ಜಿಗೆ ಉಯ್ದಂತಾಗುತ್ತದೆ. ಕನ್ನಡಕ್ಕೀಗ 31.10.2008ರಂದು ಶಾಸ್ತ್ರೀಯ ಸ್ಥಾನಮಾನವೇನೋ ದೊರೆತಿದೆ. ಅದು ಹಲವು ಕನ್ನಡಂಗಳನ್ನು ಕೂಡಿಸಿಕೊಂಡು ಸಮರ್ಥ ಭಾಷಾ ಅಧಿಕಾರವನ್ನು ನಿರ್ವಹಿಸುವ ಚಾಕಚಕ್ಯತೆ ಪಡೆದುಕೊಳ್ಳಬೇಕಾಗಿದೆ. ಇದೇ ಈಗಿನ ಮಾತೃಭಾಷಾ ಮಾಧ್ಯಮದ ಸವಾಲು.

 

ಶಾಸ್ತ್ರೀಯ ಎನ್ನುವುದೇ ಅಕ್ಷರಸ್ತರ ಒಳಸುಳಿ ಹೇಳುತ್ತದೆ. ಯಾವುದು ಶಾಸ್ತ್ರೀಯ ಭಾಷೆ ಎನ್ನುವಾಗ ಸಾವಿರ ವರ್ಷ ಹಳತು ಎಂಬುದು ಈ ರೀತಿಯ ಸಂವಿಧಾನಾತ್ಮಕ ಅಧ್ಯಯನ ಅಳತೆಗೋಲಷ್ಟೆ. ಕ್ರಿ.ಶ. 450ರ ಹಲ್ಮಿಡಿ ಶಾಶನ ಮೊದಲ ಅಕ್ಷರ ದಾಖಲೆ. ವಡ್ಡಾರಾಧನೆ ಮೊದಲ ಕನ್ನಡ ಕಥನ ಗ್ರಂಥ. ಅದು ಪ್ರಾಕೃತ ಭಾಷೆಯ ಸಾರ. ‘ಕವಿರಾಜಮಾರ್ಗ’ ಮೊದಲ ಕನ್ನಡ ‘ಲಕ್ಷಣ’ ಗ್ರಂಥ. ಅದು ‘ಭಾವಿಸಿದ ಜನಪದ’ ಸ್ಥಿತಿಯಲ್ಲಿ ಹಲವು ಕನ್ನಡಂಗಳ ಪರವೇ ಚಲಿಸುತ್ತದೆ. ಮಹಾಕವಿ ಪಂಪ ತನ್ನ ಮಹಾಕಾವ್ಯಗಳಲ್ಲಿ ‘ದೇಶಿಯೊಳ್ ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು’ ಎಂದು ಶ್ರೀಸಾಮಾನ್ಯರ ಕನ್ನಡವನ್ನು ಮಹಾಕಾವ್ಯದೆತ್ತರಕ್ಕೆ ಏರಿಸಿ ಬಿಡುತ್ತಾನೆ.

ಇದೆಲ್ಲದರ ಹಿನ್ನಲೆಯಲ್ಲಿ ಕನ್ನಡವು ಶಾಸ್ರ್ರೀಯ ಭಾಷಾ ಕಾಯಿದೆ ಚೌಕಟ್ಟಿಗೆ ಬಂತು. ಯಾವಾಗಲೂ ಕನ್ನಡ ಕಂಡರೆ ದಾಯಾದಿ ತಮಿಳರಿಗೆ ಕಾಲುಕೆರೆತ. ಕ್ಯಾತೆ ತೆಗೆದು ನ್ಯಾಯಾಲಯಕ್ಕೆ ಹೋಗಿದ್ದುಂಟು. ಅದು ದ್ರಾವಿಡಸ್ಥಾನದ ರಾಜಕೀಯ. ಅಂದು ಕರ್ನಾಟಕ ಪ್ರವಾಸದಲ್ಲಿ ಮಹಾತ್ಮಗಾಂಧಿ ಹೇಳಿರುವ ಮಾತು ಈಗಲೂ ಅನ್ವಯವಾಗುತ್ತಿದೆ. ‘ನೀವೇ ಸ್ವತಃ ಕೈಯಲ್ಲಿ ಪೊರಕೆ ಬಕೆಟ್ಟುಗಳನ್ನು ಹಿಡಿಯದೆ ಈ ಊರು ಸ್ವಚ್ಛವಾಗದು, ಮೈಸೂರಿನಲ್ಲಿ ಜನ ಬಹಳ ಸೋಮಾರಿಗಳಂತೆ. ಏಳು ಗಂಟೆಯಾದರೂ ಬೆಳಗ್ಗೆ ಹಾಸಿಗೆ ಬಿಟ್ಟು ಏಳರಂತೆ’ ಈ ಜಡತ್ವವನ್ನು ಕನ್ನಡಿಗರು ನೀಗಿಕೊಳ್ಳಬೇಕು.

ಜಗತ್ತಿನಲ್ಲಿ ಸುಮಾರು 6700 ಭಾಷೆಗಳಿವೆಯೆಂದೂ ಆಗಲೇ 30 ಸಾವಿರ ಭಾಷೆಗಳು ನಾಶವಾಗಿವೆಯೆಂದೂ ಅಂದಾಜಿಸಲಾಗಿದೆ. ಕನ್ನಡ ಕೂಡ ಅಳಿವಿನಂಚಿನಲ್ಲಿರುವ ಭಯ ಹುಟ್ಟಿಸುತ್ತಿದೆ. ಹೀಗೇ ಕನ್ನಡಿಗರು ಸೋಮಾರಿತನದಲ್ಲಿದ್ದರೆ ಇನ್ನರ್ಧ ಶತಮಾನದಲ್ಲಿ ಮನೆಯೊಳಗಿನ ಆಡುಭಾಷೆ ಮಟ್ಟಕ್ಕೆ ಕನ್ನಡ ಮುಟ್ಟಿಬಿಡುವ ಸಂಭವವಿದೆ. ಇಂದು ಹಳ್ಳಿಮಕ್ಕಳು ಸಹಾ ಕನ್ನಡ ಶಾಲೆ ಬಿಟ್ಟು ಪೇಟೆ ಇಂಗ್ಲೀಷಿಗೆ ಸರಿದಾಗಿದೆ. ದೇಶದ ಸರ್ವೋಚ್ಛ ನ್ಯಾಯಾಲಯ ಕೂಡ ಮಾತೃಭಾಷೆಯ ಕಲಿಕೆಯನ್ನು ಪೋಷಕರಿಗೆ ಬಿಡಿ ಎಂದು ಹೇಳುತ್ತಿದೆ.

ಹೀಗಾದರೆ ಇಂಗ್ಲೀಷೆಂಬ ದೊಡ್ಡ ಮೀನು ದೇಶೀ ಭಾಷೆಗಳನ್ನೆಲ್ಲಾ ನುಂಗುವುದು ಖಚಿತ. ಸಮಾಜವಿಜ್ಞಾನ, ವೈದ್ಯವಿಜ್ಞಾನ, ತಂತ್ರವಿಜ್ಞಾನ ಸಹಿತವಾಗಿ ಕನ್ನಡದಲ್ಲಿ ಭಾಷೆಯನ್ನು ಭದ್ರಪಡಿಸಿಕೊಳ್ಳದೆ ಹೋದರೆ ಷೇಕ್ಸ್‍ಪಿಯರನಿಗಿಂತ ಸಾವಿರ ವರ್ಷ ಪ್ರಾಚೀನ ಹಾಗೂ ಹಿರಿದಾದ ಕನ್ನಡವೆಂದು ಹೊಗಳಿಕೊಳ್ಳುವ ಕೀರ್ತಿ ಅಳಿಸಿಹೋಗುತ್ತದೆ. ದೇಶದಾದ್ಯಂತ ರಾಜಕೀಯ ಹಾಗೂ ಶಿಕ್ಷಣ ತಜ್ಞರು ಚರ್ಚಿಸಿ ನಾಡಿನಲ್ಲಿರುವ ಹಲವು ಮಾತೃಭಾಷೆ ಸ್ಥಾನವನ್ನು ರಾಜ್ಯಭಾಷಾ ಸ್ಥಾನಕ್ಕೆ ಪಲ್ಲಟಗೊಳಿಸಿಕೊಳ್ಳಬೇಕು. ಈ ರಾಜ್ಯಭಾಷಾನೀತಿ ರಾಷ್ಟ್ರಮಟ್ಟದಲ್ಲಿ ಎಲ್ಲ ರಾಜ್ಯ ಭಾಷೆಗಳಿಗೂ ತಕ್ಷಣ ಬೇಕಾಗಿದೆ.

 

ಶಾಸ್ತ್ರೀಯ ಕನ್ನಡವೆಂದರೆ ಬಹುಸಂಸ್ಕೃತಿಯ ಜಡೆಕೋಲಾಟವಾಗಬೇಕು. ಜನಪದ ಹಾಗೂ ಶಿಷ್ಠವೆಂಬ ಅರಿವು ಅಳಿಸಿ ತಿಳಿವು ಮೂಡಬೇಕು. ಗತವನ್ನು ವರ್ತಮಾನಕ್ಕೆ ತರಬೇಕು. ಅಂದು ಸಂಸ್ಕೃತ ಬಿಟ್ಟು ವಚನಕಾರರು ಸಿಡಿದಂತೆ ವರ್ತಮಾನದಲ್ಲಿ ಇಂಗ್ಲೀಷೆಂಬ ದಾಸ್ಯ ಕಳಚಬೇಕು. ಅದು ಶಾಸ್ತ್ರೀಯವೆಂದರೆ ನಾಡಿನ ಬಹು ಜನರಾಡುವ ಭಾಷೆಯ ಶಾಸ್ತ್ರ ಎಂಬ ಚೌಕಟ್ಟಿನಲ್ಲಿರಬೇಕು. ಆಯ್ತವಾರ, ಬೇಸ್ತವಾರ ಇವು ಜನಪದರ ಭಾಷೆಯವು. ಕುರುಬ, ಕೊರಚರ ಭಾಷೆ ಕೂಡ ಸರೀಕರ ಭಾಷೆ. ಇದೆಲ್ಲದರ ಸಾರ ಶಾಸ್ತ್ರೀಯ ಚೌಕಟ್ಟಿನಲ್ಲಿರಬೇಕು.

ಇದು ಸಮಕಾಲೀನ ಭಾಷೆಯನ್ನು ಸಜ್ಜುಗೊಳಿಸುವ ಕ್ರಮ. ಪಠ್ಯ ಪವಿತ್ರೀಕರಣದ ಭುಂಜನೆ ಕೂಡ ಶಾಸ್ತ್ರೀಯ ಅಧ್ಯಯನದ ಭಾಗವೇ ಹೌದು. ತತ್ವಪದ ಬಹು ಪಠ್ಯಗಳು, ಕನ್ನಡದ ಸುಮಾರು 30 ಜನಪದ ಮಹಾಕಾವ್ಯಗಳ ಪಠ್ಯಗಳೆಲ್ಲವೂ ಇದರ ತಳಹದಿಗೆ ಬರುತ್ತವೆ. ಇದಕ್ಕಾಗಿ ಹೊಸ ಪೀಳಿಗೆಯನ್ನು ಸಜ್ಜುಗೊಳಿಸುವುದು ಕೂಡ ಶಾಸ್ತ್ರೀಯ ಅಧ್ಯಯನದಲ್ಲಿರಬೇಕಾಗುತ್ತದೆ. ಆಗ ಮಾತ್ರ ಕನ್ನಡವು ಜ್ಞಾನ ಭಾಷೆಯಾಗುತ್ತದೆ. ಬೌದ್ಧಿಕ ಮತಾಂತರಗಳನ್ನು ದೂರವಿಡುವುದು ಕೂಡ ಇದರ ಅಧ್ಯಯನ ಭಾಗದಲ್ಲೊಂದು. ಜಾತಿಭೇದ-ಲಿಂಗಬೇಧ ಚರ್ಚೆಯಿಲ್ಲದಿದ್ದರೆ ಅದು ಶಾಸ್ತ್ರೀಯ ಅನಿಸಿಕೊಳ್ಳುವುದೇ ಇಲ್ಲ.

ನಾಡಭಾಷೆ ಕನ್ನಡ ಮಾಧ್ಯಮ ಈಗೊಂದು ಬೇಡದ ಕೂಸು. ಪೋಷಕರು-ಸರ್ಕಾರ-ಶಿಕ್ಷಕರು ಇವರೆಲ್ಲರ ವಿಷ ವರ್ತುಲವಿದೆ. ಇದೆಲ್ಲದರ ಮೇಲೆ ಶಿಕ್ಷಣ ವ್ಯಾಪಾರದ ಮೂಟೆಯ ಭಾರವಿದೆ. ಜಾಗತೀಕರಣವೆಂಬ ಹುಸಿ ಆಧುನಿಕತೆಯಿದೆ. ಇಂಗ್ಲೀಷೆಂಬ ಯಜಮಾನಿಕೆ ತ್ಯಾಜ್ಯವಾಗದ ಹೊರತು ಸಾವಯವ ಚಿಂತನೆ ಸಮಾಜದಲ್ಲಿ ಇಳಿಯದ ಹೊರತು ಯಾವ ನ್ಯಾಯಾಲಯಗಳು ಸರ್ಕಾರಗಳು ಆಶ್ರಯಕ್ಕೆ ಬರುವುದಿಲ್ಲ.

ಜನಾಂದೋಲನ ಮೂಲಕ ಮೊದಲು ಇಂಗ್ಲೀಷು-ಇಂಗ್ಲೀಷಿನೊಳಗಿನ ತಾಂತ್ರಿಕ ಭಾರದಿಂದ ಮಕ್ಕಳು ಮರಿಗಳನ್ನು ಹಿಡಿದೆತ್ತಕೊಳ್ಳಬೇಕು. ಇಡೀ ಜನಪದ ಸಮಾಜ ಹಾಗೂ ಶ್ರೀಸಾಮಾನ್ಯ ಸಮಾಜ ಕೀಳರಿಮೆಯಿಂದ ನರಳುತ್ತಿದೆ. ಮಾನಸಿಕವಾಗಿ ಕುಸಿಯುತ್ತಿದೆ. ಪೋಷಕರು ಸಾಮಾಜಿಕ ಈ ರೋಗದಲ್ಲಿ ಅನಾಥರು. ರಾಜ್ಯಭಾಷೆಯ ಶಿಕ್ಷಣವು ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿ ಕಡ್ಡಾಯ ಶಿಕ್ಷಣವೆಂದು ಸಂವಿಧಾನ ತಿದ್ದುಪಡಿಗೆ ದೇಶಾದ್ಯಂತ ಜನಾಂದೋಲನ ಬೇಕಾಗಿದೆ. ಅದಕ್ಕೆ ಸರಿಯಾದ ರಾಜಕೀಯ ಹೆಜ್ಜೆಗಳಿರಬೇಕಾಗುತ್ತದೆ.

 

‘ಅರಸು ರಾಕ್ಷಸ’ ನಾಗಬಾರದು., ಮಕ್ಕಳನ್ನು ಎತ್ತಿ ಆಡಿಸುವ ಹೂ ಮನಸ್ಸು ಸಹಾ ಅವನೊಳಗಿರುತ್ತದೆ. ಅದನ್ನು ಹುಡುಕಬೇಕಾಗಿರುವುದೇ ಜನಾಂದೋಲನ ಕರ್ತವ್ಯ. ಮಾತೃ ಭಾಷೆಯಲ್ಲಿ ಶಿಕ್ಷಣ ಎನ್ನುವುದಕ್ಕಿಂತ ರಾಜ್ಯಭಾಷೆ ಮಕ್ಕಳ ಕಲಿಕೆಯ ಭಾಷೆಯಾಗಬೇಕು. ಆಗ ಮಾತ್ರ ಭಾಷಾವಾರು ವಿಂಗಡಣೆಯಯ ಸಂವಿಧಾನ ನಿಯಮಕ್ಕೆ ಮೌಲ್ಯ ಸಿಗುತ್ತದೆ.

ಮೊದಲ ಹಂತದಲ್ಲಿ ಐದನೇ ತರಗತಿವರೆಗೆ, ಎರಡನೇ ಹಂತದಲ್ಲಿ ಪ್ರೌಢಶಾಲೆವರೆಗೆ ಮಾನಸಿಕ ಹಾಗೂ ವೈಜ್ಞಾನಿಕ ಮಾದರಿಯಲ್ಲಿ ಪರಂಪರೆಯನ್ನು ಆಧುನಿಕತೆಯನ್ನು ಬೆಸೆಯುತ್ತಾ ಮರುಪಯಣ ಹೊರಟು ದೇಶೀ ಕನ್ನಡಕ್ಕೆ ಜಾಗತೀಕರಣವನ್ನು ಅರಗಿಸಿಕೊಳ್ಳುವ ಶಕ್ತಿ ತುಂಬ ಬೇಕಾದ್ದು, ದೇಶದ ಆಯಾ ನಾಡಿನ ಕರ್ತವ್ಯ. ‘ವಿದೇಶಿ ಭಾಷಾ ಮಾಧ್ಯಮ ಬುದ್ಧಿಯನ್ನು ಬಳಲಿಸಿದೆ. ನಮ್ಮ ಮಕ್ಕಳ ನರಗಳ ಮೇಲೆ ಅನುಚಿತ ಒತ್ತಡ ಹೇರಿದೆ’ ಎಂಬುದು ಗಾಂಧಿನುಡಿ.

ಮಾತೃಭಾಷೆಯಲ್ಲಿ ಕಲಿಯದ ಮಕ್ಕಳು ಯಂತ್ರಕ್ಕೆ ಸಮಾನ ಎಂಬುದು ಮನಃಶಾಸ್ತ್ರದ ತೀರ್ಮಾನ. ಎಲ್ಲ ದಾರ್ಶನಿಕರು ಇದನ್ನೆ ಹೇಳುತ್ತಾರೆ. ಈ ರೀತಿಯ ಸಾಮಾನ್ಯ ಶಿಕ್ಷಣವೇ ಸಾಮಾಜಿಕ ಮದ್ದು. ಇದರಲ್ಲಿ ಬಡವ ಬಲ್ಲಿದ ಮೇಲು-ಕೀಳು ಎಂಬುದು ಅಳಿಸಿ ಪ್ರಜಾಪ್ರಭುತ್ವ ತತ್ವ ಸಮೀಕರಣಗೊಳ್ಳುತ್ತದೆ.

Add Comment

Leave a Reply