Quantcast

“ಟೇಡಾ ಹೈ ಪರ್ ಮೇರಾ ಹೈ!”

ತಾರೆ ಜೂಹಿ ಚಾವ್ಲಾ ಅದೆಂತದೋ ವಿಚಿತ್ರ ಕನ್ನಡದಲ್ಲಿ “ತಿರುಚಾಗಿದೆ, ಆದರೂ ಅದು ನನ್ನದೆ” ಎಂದೇನೋ ಕುರ್ಕುರೆಯ ಟೆಲಿವಿಷನ್ ಜಾಹೀರಾತಿನಲ್ಲಿ ಉಲಿಯುವಾಗ ಯಾವತ್ತಿಗೂ ನನಗೆ ತಟ್ಟನೆ ನೆನಪಾಗುವುದು ನನ್ನ ದೇಶದ್ದು.

ಕೇರಳದ ಎರ್ನಾಕುಳಂನಲ್ಲಿ ಬಾರೊಂದಕ್ಕೆ ಹೋಗುವ ದಾರಿಯೊಂದನ್ನು ಐನೂರು ಮೀಟರಿಗೆ ಹಿಗ್ಗಿಸಿದ ಪರಿ, ಇನ್ನೆಲ್ಲೋ ಹೊಟೇಲಿನ ಮುಂಬಾಗಿಲು ಮುಚ್ಚಿ ಹಿಂಬಾಗಿಲು ತೆರೆದ ಪರಿ… ಇದೆಲ್ಲ ನಮ್ಮ ದೇಶದ ಕಾನೂನು ಪಾಲನೆಯ ವೈಶಿಷ್ಟ್ಯ. ನಮ್ಮ ಯಾವ ಜೀನು ನಮ್ಮ ಯೋಚನೆಗಳನ್ನು ಈ ರೀತಿ ತಿರುಚುತ್ತದೆ ಎಂಬುದು ಈವತ್ತಿಗೂ ನನಗೆ ಕುತೂಹಲದ ಸಂಗತಿ.

ಸುಪ್ರೀಂ ಕೋರ್ಟು ರಾಷ್ಟ್ರೀಯ ಹೆದ್ದಾರಿಯ ಆಸುಪಾಸಿನಲ್ಲಿ ಮದ್ಯದಂಗಡಿಗಳಿದ್ದರೆ ಕುಡಿದು ವಾಹನ ಚಾಲನೆ ಹೆಚ್ಚಬಹುದೆಂಬ ಕಳಕಳಿಯಿಂದ ಮದ್ಯದಂಗಡಿಗಳು ರಾಷ್ಟ್ರೀಯ ಹೆದ್ದಾರಿಯಿಂದ 500  ಮೀ ದೂರದಲ್ಲಿರಬೇಕು ಎಂದು ಆದೇಶಿಸುವ ಮೂಲಕ ಜೇನುಗೂಡಿಗೆ ಕಲ್ಲೆಸೆದಿದೆ.

ಒಂದೆಡೆ ಬಹಳ ಕ್ರಿಯೇಟಿವ್ ಆದ ಯೋಚನೆಗಳ ಮೂಲಕ ಸರ್ಕಾರಿ ನಿಯಮವನ್ನು “ಪಾಲಿಸಿ ಸೋಲಿಸುವ” ಪ್ರಯತ್ನಗಳು ನಡೆದಿದ್ದರೆ, ಇನ್ನೊಂದೆಡೆ ಈ ತೀರ್ಮಾನ ಸಾಮಾಜಿಕ ವೈಮನಸ್ಸುಗಳಿಗೆ ಕಾರಣವಾಗಲಿದೆ.

ಯಾಕೆಂದರೆ, ಹೆದ್ದಾರಿಯಿಂದ 500 ಮೀ. ದೂರ ಎಂದರೆ ಅದು ಬಂದು ತಲುಪುವುದು ಬಹುತೇಕ ವಸತಿ ಪ್ರದೇಶಗಳ ನಡುವೆ. ಅಂದರೆ, ಈಗಾಗಲೇ ವಸತಿ ಪ್ರದೇಶಗಳಲ್ಲಿ, ಶಾಲೆ- ಧಾಮಿಕ ಕೇಂದ್ರಗಳ ಬಳಿ ಮದ್ಯದಂಗಡಿಗಳಿಗೆ ಅವಕಾಶ ಇಲ್ಲ ಎಂಬ ನಿಯಮವೇ ಇರುವುದರಿಂದ ಈಗಾಗಲೇ ಹಲವು ಕಡೆ ಇಂತಹ ತಿಕ್ಕಾಟಗಳು ವ್ಯಾಜ್ಯಗಳು ಆರಂಭ ಆಗಿರುವ ಬಗ್ಗೆ ಪ್ರತಿದಿನ ಎಂಬಂತೆ ಸುದ್ದಿಗಳು ಬರುತ್ತಿವೆ.

ಇಂತಹದೊಂದು ಸ್ಥಿತಿಯಲ್ಲಿ “ಕೋಟಿಗಟ್ಟಲೆ” ಸುರಿದು ಮದ್ಯದಂಗಡಿ ನಡೆಸುವ ಲೈಸನ್ಸ್ ಪಡೆದವರು ಸಹಜವಾಗಿಯೇ ತಮ್ಮ ಅಸ್ತಿತ್ವಕ್ಕಾಗಿ  ಹೋರಾಟಕ್ಕಿಳಿದಿದ್ದಾರೆ; ಕಾನೂನು ಚಾಪೆಯಡಿ ತೂರಿದರೆ ತಾವು ರಂಗೋಲಿಯಡಿ ತೂರಿಕೊಳ್ಳುತ್ತಿದ್ದಾರೆ. ಸ್ವತಃ ಸರಕಾರಗಳು ಹೆದ್ದಾರಿಗಳನ್ನು ಕಿರುದಾರಿಗಳಾಗಿ ಡಿನೋಟಿಫೈ ಮಾಡುವ ಮೂಲಕ ಮದ್ಯಮಾರುವವರ ಹಿತಾಸಕ್ತಿ ರಕ್ಷಿಸಲು ಮುಂದಾಗಿವೆ.

ಅಂಕಿಸಂಖ್ಯೆಗಳ ದ್ರಷ್ಟಿಕೋನದಿಂದ ನೋಡಿದರೆ ಜಗತ್ತಿನಲ್ಲಿ ಉತ್ಪಾದನೆ ಆಗುವ ಒಟ್ಟು ಮದ್ಯದ 65% ಭಾಗ ಭಾರತದಲ್ಲೇ ಉತ್ಪಾದನೆ ಆಗುತ್ತಿದೆ ಮತ್ತು 7% ಭಾರತಕ್ಕೆ ಆಮದಾಗುತ್ತಿದೆ. ವಾರ್ಷಿಕ 31 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಆದಾಯವನ್ನು ಮದ್ಯ ಮಾರಾಟ ದೇಶದ ಖಜಾನೆಗೆ ತಂದು ಸುರಿಯುತ್ತಿದೆ. ಈ ಅಕ್ಕಿಯ ಮೇಲಿನ ಆಸೆ ನೆಂಟರ ಮೇಲಿನ ಪ್ರೀತಿಗಿಂತ ಹೆಚ್ಚು ತೂಗಲಾರಂಭಿಸಿದ್ದೇ ಸರ್ಕಾರ-ವ್ಯವಸ್ಥೆಯ ಈ ರೀತಿಯ ತೀರ್ಮಾನಕ್ಕೆ ಕಾರಣ.

ಮದ್ಯ ಕೆಟ್ಟದ್ದೆಂದಾದರೆ, ಅದನ್ನು ಸಂಪೂರ್ಣ ನಿಲ್ಲಿಸಿಬಿಡುವ ನಿರ್ಧಾರದ ಬದಲು ಅತ್ತ ಕೋಲೂ ಮುರಿಯದ, ಇತ್ತ ಹಾವೂ ಸಾಯದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಇದು ಮದ್ಯವೊಂದೇ ವಿಷಯದಲ್ಲಲ್ಲ. ಇಂತಹದೇ ಇನ್ನೂ ಕೆಲವು ನಿರ್ಣಯಗಳನ್ನು ನೋಡಿ.

1. ತಂಬಾಕು ಆರೋಗ್ಯಕ್ಕೆ ಹಾನಿಕರ. ಅದನ್ನು ಪೂರ್ಣ ನಿಲ್ಲಿಸಲು ಸರ್ಕಾರ ಇನ್ನೂ ಸಿದ್ಧವಿಲ್ಲ. ಬದಲಾಗಿ ಪ್ರತೀ ಬಜೆಟ್ಟಿನಲ್ಲಿ ತೆರಿಗೆ ಏರಿಸುವ, ಸಿಗರೇಟು-ಬೀಡಿ ಪ್ಯಾಕೆಟ್ಟುಗಳ ಮೇಲೆ ವಿಕ್ರತ ಚಿತ್ರಗಳನ್ನು ಮುದ್ರಿಸುವ ಕೆಲಸ ಮಾಡಲಾಗುತ್ತಿದೆ.

2. ರಸ್ತೆ ದಟ್ಟಣೆ ಮತ್ತು ಹೊಗೆ ಮಾಲಿನ್ಯಕ್ಕೆ ವಾಹನಗಳ ಸಂಖ್ಯೆ ಮಿತಿ ಮೀರಿರುವುದು ಕಾರಣ ಎಂದು ದಾಖಲೆಗಳು ಹೇಳುತ್ತವೆ; ಆದರೆ ವಾಹನಗಳ ಉತ್ಪಾದನೆಗೆ, ಮಾರಾಟಕ್ಕೆ ಪ್ರೋತ್ಸಾಹ ನಿಂತಿಲ್ಲ.

ಭಾರತದಂತಹ ದೊಡ್ಡ ದೇಶದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭ ಅಲ್ಲ. ಆವಶ್ಯಕತೆ ಆಧರಿತ ನಿರ್ಧಾರ ತೆಗೆದುಕೊಳ್ಳುವುದೆಂದರೆ ಯಾರ ಆವಶ್ಯಕತೆ ಎಂಬ ಪ್ರಶ್ನೆ; ಬೇಡಿಕೆ ಆಧರಿಸಿ ನಿರ್ಧಾರ ತೆಗೆದುಕೊಳ್ಳುವುದೆಂದರೆ ಯಾರ ಬೇಡಿಕೆ ಎಂಬ ಗುಮಾನಿ ಸಹಜ. ಇಂತಹ ಸಂಕೀರ್ಣ ಸನ್ನಿವೇಶದಲ್ಲೂ ಸ್ಪಷ್ಟ ಉದ್ದೇಶವಿದ್ದರೆ ‘ಆಹಾರ’ದಂತಹ ವಿಚಾರದಲ್ಲೂ ಹಸ್ತಕ್ಷೇಪ ಮಾಡಬಲ್ಲ ನಿರ್ಧಾರ ಕೈಗೊಳ್ಳುವ ಇಚ್ಛಾಶಕ್ತಿ ಸರಕಾರಕ್ಕಿರುತ್ತದೆ ಎಂಬುದಕ್ಕೆ ಹಾಲೀ ಕೇಂದ್ರ ಸರ್ಕಾರ ಮತ್ತು ಆ ಪಕ್ಷದ ಆಡಳಿತ ಇರುವ ರಾಜ್ಯ ಸರ್ಕಾರಗಳು ತೆಗೆದುಕೊಳ್ಳುತ್ತಿರುವ ನಿರ್ಧಾರಗಳೇ ಸಾಕ್ಷಿ.

ಹೀಗಿರುವಾಗ, ಮದ್ಯ-ಮಾದಕ-ಮಾಲಿನ್ಯದಂತಹ ಖಚಿತ ಆರೋಗ್ಯ ದೂಷಕಗಳನ್ನು ಜನರ ಬದುಕಿನಿಂದ ಹೊರಗಟ್ಟುವುದಕ್ಕೆ ಸರಕಾರಗಳು ಮನಸ್ಸು ಮಾಡಲು ಏನಾಗಬೇಕು?

Add Comment

Leave a Reply