Quantcast

ಮಣಿರತ್ನಂ ಮ್ಯಾಜಿಕ್ ಇದೆ..

 

ಕಾಳಿಮುತ್ತು ನಲ್ಲತಂಬಿ

ಕಾಟ್ರು ವೆಳಿಯಿಡೈ – ಹೊಸದಾಗಿ ರಿಲೀಸ್ ಆಗಿರುವ ಮಣಿರತ್ನಂ ಅವರ ತಮಿಳು ಸಿನಿಮಾ.

ಪಲ್ಲವಿ ಅನುಪಲ್ಲವಿ, ಬಾಂಬೇ, ರೋಜಾ, ನಾಯಗನ್, ಅಲೈಪಾಯುದೆ, ಯುವ, ಗುರು, ಕೇಳಡಿ ಕಣ್ಮಣಿ ಹೀಗೆ ಅನೇಕ ಒಳ್ಳೆಯ ಸಿನಿಮಾಗಳನ್ನು ಕೊಟ್ಟವರಿಂದ ಮತ್ತೊಂದು ಒಳ್ಳೆಯ ಸಿನಿಮಾವನ್ನು ಅಪೇಕ್ಷಿಸುವುದು ಸಹಜ. ಆ ನಿರೀಕ್ಷೆಗೆ ಯಾವ ಧಕ್ಕೆಯೂ ಇಲ್ಲ.

ಕಾಟ್ರು ವೆಳಿಯಿಡೈ- ಬಾಹ್ಯಾಕಾಶದ ನಡುವೆ – In Between Space ಹೀಗೆ ತರ್ಜುಮೆ ಮಾಡಬಹುದು.

ಸಿನಿಮಾದ ಹೀರೋ ಒಬ್ಬ ಏರ್ ಫೋರ್ಸ್ ಪೈಲಟ್, ಸಿನಿಮಾದ ಶೀರ್ಷಿಕೆ ಬಹಳ ಸೂಕ್ತವಾಗಿ ಒಪ್ಪುತ್ತದೆ. ಮತ್ತು ಶೀರ್ಷಿಕೆ ಬಹಳ ಕಾವ್ಯಮಯವಾದದ್ದು, ಭಾರತಿಯಾರ್  ನ ಒಂದು ಕವಿತೆಯ ಮೊದಲ ಸಾಲು. (ಕೊಸುರು ಸುದ್ಧಿ- ಭಾರತಿಯಾರ್ ಕೃಷ್ಣನನ್ನು ಹೆಣ್ಣಾಗಿ, ತನ್ನ ಪ್ರೇಯಸಿಯಾಗಿ ಕಲ್ಪಿಸಿಕೊಂಡು ಬರೆದ ಅನೇಕ ‘ಕಣ್ಣಮ್ಮಾ’ ಕವಿತೆಗಳಲ್ಲಿ ಒಂದು. ‘ಕಣ್ಣ’ ಎಂದರೆ ಕೃಷ್ಣ. ಭಾರತಿಯಾರ್ ಕವಿತೆಗಳು ಅದೇ ಬೇರೆಯದೇ ಲೋಕ, ಬಿಡಿ, ಇಲ್ಲಿ ಬೇಡ.)

ಕಾರ್ಗಿಲ್ ಯುದ್ದದ ಫ್ಲಾಷ್ ಬ್ಯಾಕ್ ನಿಂದ ಸಿನಿಮಾ ಶುರುವಾಗುತ್ತದೆ. ಸಿನಿಮಾದ ಹೀರೋ ವರುಣ್ (ಕಾರ್ತಿಕ್) ಒಬ್ಬ ಸೆಲ್ಫ್ ಸೆಂಟೆರ್ಡ್ ಇಂಪಲ್ಸಿವ್ ನಾರ್ಸಿಸ್ಟ್ ಪಾತ್ರ. ಅಹಂಕಾರ, ದಬ್ಬಾಳಿಕೆಯನ್ನು ಒಟ್ಟಾಗಿ ಮೈಗೂಡಿಸಿಕೊಂಡ ವ್ಯಕ್ತಿ. ಇದಕ್ಕೆ ತದ್ವಿರುದ್ಧವಾದ ಪಾತ್ರ ನಾಯಕಿ ಲೀಲಾ ಅಬ್ರಹಾಂ (ಅಧಿತಿ ರಾವ್ ಹೈದ್ರಿ).

ಶ್ರೀನಗರದ ಆಕಾಶದಲ್ಲಿ ಕ್ಯಾಮರಾ ಹಾರಿಬರುವಾಗ ಘನೀಕರಿಸಿದ ಹಿಮವನ್ನೂ ಕರಗಿಸುವ ಸೌಂದರ್ಯದೊಂದಿಗೆ ದೇವತೆಯಂತೆ ಬರುವ ನಾಯಕಿಯ ದೃಶ್ಯ ವಾವ್! ಒಂದು ಕವಿತೆಯನ್ನು ದೃಶ್ಯವಾಗಿಸಿದೆ ಕ್ಯಾಮರಾ. ಇಲ್ಲಿ ಕ್ಯಾಮರಾಮನ್ ರವಿ ವರ್ಮನ್ ಬಗ್ಗೆ ಹೇಳಲೇಬೇಕು.

ತಂದೆ ತೀರಿಕೊಂಡ ಮೇಲೆ ತಾಯಿಯ ಮುಖದಲ್ಲಿ ನಗುವನ್ನೇ ಕಂಡಿಲ್ಲವಂತೆ. ‘ಪ್ರತಿಸಲ ನಾನು ವ್ಯೂ ಫೈಂಡರ್ ನಲ್ಲಿ ನೋಡುವಾಗೆಲ್ಲಾ ಆಕೆ ನನ್ನದೇ ಚಿಂತೆಯಲ್ಲಿರುವಂತೆ ಅವಳ ದಣಿದ, ಸಂಶಯಗಳಿಂದ ತುಂಬಿದ ಮುಖವೇ ಕಾಣುತ್ತದೆ, ಅದಕ್ಕಾಗಿಯೇ ನಾನು ಬಹಳ ಬೆಳಕನ್ನೂ, ಬಣ್ಣಗಳನ್ನೂ ನನ್ನ ಕ್ಯಾಮರಾ ಮುಖೇನ ಕಾಣಬಯಸುತ್ತೇನೆ……’

ರವಿ ವರ್ಮಾ, ಹೆಸರಿಗೆ ತಕ್ಕಂತೆ ದೃಶ್ಯಗಳನ್ನು ಸೆರೆಹಿಡಿದು ನಮ್ಮ ಮುಂದೆ ಇಡುತ್ತಾರೆ. ಇಡೀ ಚಿತ್ರ ಒಬ್ಬ ಫೋಟೋಗ್ರಾಫರಿನ ಆಲ್ಬಂ ನೋಡುವಂತೆ ಇದೆ. ಒಂದು ಮೂರು ನಿಮಿಷದ ಹಾಡಿಗೂ ಫಾರಿನ್ ಲೊಕೇಶನ್ ಹುಡುಕಿಕೊಂಡು ಹೋಗುವ ನಮ್ಮ ಸಿನಿಮಾ ರಂಗದಲ್ಲಿ, ನಮ್ಮ ದೇಶದಲ್ಲಿ ಅವಕ್ಕಿಂತಲೂ ಮಿಗಿಲಾದ ಅನೇಕ ಸುಂದರ ತಾಣಗಳಲ್ಲೇ ಸಿನಿಮಾ ಮಾಡುವ ಮಣಿರತ್ನಂ, ಶ್ರೀನಗರ್, ಲೇಹ್ ಗಳನ್ನು ರವಿವರ್ಮನ್ ಎಂಬ ಒಳ್ಳೆಯ ಪೆಯಿಂಟರ್ ಮೂಲಕ ಬಣ್ಣ ಕಟ್ಟಿ ಚಿತ್ರಿಸಿದ್ದಾರೆ.

ಕಾರ್ತಿಕ್ ಆ ಪಾತ್ರದ ಗುಣಾಂಶಗಳನ್ನು ತನ್ನಲ್ಲಿ ಅಳವಡಿಸಿಕೊಂಡು ನಟಿಸಿದ್ದರೂ, ಕೆಲವೆಡೆ ಸ್ವಲ್ಪ ಅತಿರೇಕವೆನಿಸುತ್ತದೆ. ಒಬ್ಬ ಏರ್ ಫೋರ್ಸ್ ಪೈಲಟ್ ಆಗಿ ಬಹಳ ಸಂಯಮಶೀಲನಾಗಿರಬೇಕಾದವನು (ಕಡೆಪಕ್ಷ ಸಾರ್ವಜನಿಕವಾಗಿ) ತನ್ನ ಪ್ರೇಯಸಿಯನ್ನು ಸ್ನೇಹಿತರೆದುರು ಅವಮಾನಕ್ಕೊಳಗಾಗಿಸುವುದು, ತಂದೆ ತಾಯಿಯರೊಂದಿಗೆ ಎತ್ತರದ ದನಿಯಲ್ಲೇ ಮಾತನಾಡುವುದು – ಇದು ಅವರು ವಹಿಸಿದ ಪಾತ್ರಕ್ಕೆ ಪ್ರಾಮಾಣಿಕವಾಗಿರಲೋ ಅಥವಾ ಸ್ವಲ್ಪ ಓವರ್ ಆಕ್ಟಿಂಗೋ ಎಂಬ ಗೊಂದಲವನ್ನು ಪ್ರೇಕ್ಷಕರಿಗೆ ಉಂಟುಮಾಡುತ್ತದೆ.

ಅದೇ ಲೀಲಾ ಪಾತ್ರ ಇದಕ್ಕೆ ತದ್ವಿರಿದ್ಧವಾದದ್ದು- ಡಾಕ್ಟರಾಗಿ ಇರಬೇಕಾದ ಸಹನೆ, ಕರುಣೆ, ಅರ್ಪಣೆ ಮೈವೆತ್ತಂತೆ – ಒಂದು ಈಕ್ವಲ್ ರಿಲೇಷನ್ ಗಾಗಿ ಹಾತೊರೆಯುವ ಪಾತ್ರವನ್ನು, ಅವರ ಸೌಂದರ್ಯವನ್ನು ಮೀರಿ ಚಿಮ್ಮಿ ಸೊಗಸಾಗಿ ಅಭಿನಯಿಸಿದ್ದಾರೆ. ಈ ಪಾತ್ರಗಳು ಎರಡು ದ್ರುವಗಳಂತೆ ಒಂದಕ್ಕೊಂದು ಭಿನ್ನವಾದದ್ದು, ಆದರೆ ಪ್ರೇಮದ ಆಕರ್ಷಣೆಗೆ ಒಳಗಾಗಿ ಸಮಾನ ಸಂಬಂಧಕ್ಕಾಗಿ ಹೆಣಗಾಡುತ್ತವೆ. ಈ ಪ್ರೀತಿಯೇ ಹಾಗೆ ಅನಿಸುತ್ತದೆ – ಯಾರಿಗೂ ಎಂದಿಗೂ ಅರ್ಥವಾಗದ ನಿಗೂಢವಾಗೇ ಅಡಮ್ ಈವ್ ಕಾಲದಿಂದ ಇಂದಿಗೂ ಉಳಿದು ಹೋಗಿದೆ.

ಲೀಲ ತನ್ನ ಪ್ರೇಮವನ್ನು ಹೇಳುವಾಗ ಮತ್ತೆ ಮತ್ತೆ ಮತ್ತೆ.. ಹೇಳು ಎಂದು ಹಿತವಾಗಿ ವರುಣ್ ಪೀಡಿಸುವುದು, ಅವನ ಕಾಟವನ್ನು ಲೀಲ ಎಂಜಾಯ್ ಮಾಡುವುದು ಒಂದು ಒಳ್ಳೆಯ ಕವನವನ್ನು ಓದುವಂತಿದೆ. ಇಂತಹ ಅನೇಕ ದೃಶ್ಯಗಳಲ್ಲಿ ಮಣಿರತ್ನಂ ಟಚ್ ಕಾಣಬಹುದು.

ಲಿವ್ ಇನ್ ರಿಲೇಷನ್ ಶಿಪ್, ಮೇರೆಜ್ ಆಫ್ಟರ್ ಕನ್ಸಪ್ಶನ್ , ಸ್ಟೇಯಿಂಗ್ ಅನ್ ಮೇರಿಡ್ ಅಪ್ಟರ್ ಚೈಲ್ಡ್ ಬರ್ತ್ ಇಂತಹ ಕಾನ್ಸೆಪ್ಟ್ಗಳಲ್ಲಿ ಬಂದಿರುವ ಮತ್ತೊಂದು ಚಿತ್ರ. ಸಮಾಜದಲ್ಲಿ ಬಹಳ ಅಪರೂಪವಾಗಿ ಕಾಣುವ ಸಂಗತಿಗಳನ್ನು ವೈಭವೀಕರಿಸಿ ತೋರಿಸುವ ಕೆಲಸವನ್ನು ಮಣಿರತ್ನಂ ಮಾಡಿದ್ದಾರೆ.

ಈ ಸಿನಿಮಾ ಡಿಸೆಂಡೆಂಟ್ ಆಫ್ ದ ಸನ್ – ಎಂಬ ಕೊರಿಯನ್ 16+3 ವಾರದ ಸೀರಿಯಲ್ ಕಥೆ. ಇದು ಎರಡು ಏರ್ ರ್ಫೋರ್ಸ್ ಆಫೀಸರ್ ಮತ್ತು ಇಬ್ಬರು ಡಾಕ್ಟರ್ ಗಳ ಕಥೆ. ಇಲ್ಲಿ ಮಣಿರತ್ನಂ ಮತ್ತೊಂದು ಆಫೀಸರ್ ಮತ್ತು ಡಾಕ್ಟರ್ ಪಾತ್ರವನ್ನು ಬಹಳ ಗೌಣಗೊಳಿಸಿ, ಒಂದು ಜೋಡಿಗೆ ಮಾತ್ರ ಪ್ರಾಮುಖ್ಯತೆಯನ್ನು ನೀಡಿದ್ದಾರೆ.

ಬ್ರೆತ್ ಟೇಕಿಂಗ್ ವಿಶುಯಲ್ಸ್ ಗಳಿಗಾಗಿ, ಚಿತ್ರೀಕರಣದ ಶೈಲಿಗಾಗಿ, ಕೆಲವು ಡೈಲಾಗುಗಳಿಗಾಗಿ ಮತ್ತು ನಮ್ಮನ್ನು ನಾವು ಸ್ವಲ್ಪ ಮರೆಯಲಿಕ್ಕಾಗಿ ಈ ಸಿನಿಮಾವನ್ನು ನೋಡಬಹುದು.

Add Comment

Leave a Reply