Quantcast

ನೋಟು ರದ್ಧತಿ ಕೂಡ “ನಾನ್ ಪರ್ಫಾಮಿಂಗ್ ಅಸೆಟ್”

 

ದೇಶದಲ್ಲಿ ಚಲಾವಣೆಯಲ್ಲಿದ್ದ ಹಣದ 86% ಭಾಗವನ್ನು ರದ್ದುಗೊಳಿಸಿದ ಸರ್ಕಾರದ ಕ್ರಮಕ್ಕೆ ಕಳೆದ ವಾರ 150 ದಿನಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ನಿರೀಕ್ಷೆ – ಸಾಧನೆಗಳ ಬಗ್ಗೆ ಒಂದು ಹಿನ್ನೋಟ ಇಲ್ಲಿದೆ.

ಸರ್ಕಾರದ ಮುಖ್ಯಸ್ಥರಾದ ಪ್ರಧಾನಮಂತ್ರಿ, ಅವರ ಸಚಿವರು ಹಾಗೂ ಆಯಕಟ್ಟಿನ ಜಾಗಗಳಲ್ಲಿರುವ ಸರಕಾರಿ ಅಧಿಕಾರಿಗಳು ವಿವಿಧ ಸಂದರ್ಭಗಳಲ್ಲಿ ನೋಟು ರದ್ಧತಿಯನ್ನು ಸಮರ್ಥಿಸಿಕೊಂಡು ನೀಡಿದ ಹೇಳಿಕೆಗಳು ಮತ್ತು ಅವುಗಳ ಈವತ್ತಿನ ಸ್ಥಿತಿಗೆ ಕನ್ನಡಿ ಹಿಡಿಯುವುದು ಈ ಬರಹದ ಉದ್ದೇಶ.

ನಿರೀಕ್ಷೆ 1: ದೇಶದಲ್ಲಿ ಸೊನ್ನೆ ಲೆಕ್ಕ ಹಾಕಲಾರದಷ್ಟು ಪ್ರಮಾಣದಲ್ಲಿ ಕಪ್ಪು ಹಣ ಇದ್ದು ಸ್ವಿಸ್ ಬ್ಯಾಂಕಿನಲ್ಲಿ ಮತ್ತಿತರೆಡೆ ಇಟ್ಟಿರುವ ಹಣವನ್ನು ತಂದರೆ ದೇಶದ ಪ್ರತೀ ನಾಗರಿಕನಿಗೆ 15 ಲಕ್ಷ ರೂಪಾಯಿ ಸಿಗಬಹುದೆಂಬ ಅಂದಾಜಿನೊಂದಿಗೆ ಆರಂಭವಾದ ಕಪ್ಪು ಹಣದ ಚರ್ಚೆ, ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿರುವ ಒಟ್ಟು ಕಪ್ಪು ಹಣ 4.6 ಲಕ್ಷ ಕೋಟಿ ಎಂದು ಅಂದಾಜು ಮಾಡಿಕೊಂಡಿತ್ತು.

ಸಾಧನೆ 1: ನೋಟು ರದ್ಧತಿ ಮಾಡಿದ ಕ್ಷಣಕ್ಕೆ ದೇಶದಲ್ಲಿರುವ ಕಪ್ಪುಹಣ ಸಂಪೂರ್ಣ ನಾಶವಾಗಿದೆ ಎಂದು ಸ್ವತಃ ಪ್ರಧಾನಿ ಘೋಷಣೆ ಮಾಡಿದ್ದರು. ಆದರೆ ಕಳೆದವಾರ ರಾಜ್ಯಸಭೆಯಲ್ಲಿ ಹಣಕಾಸು ಸಚಿವರು ದೇಶದಲ್ಲಿ ಪತ್ತೆ ಆಗಿರುವ ಕಪ್ಪುಹಣದ ಪ್ರಮಾಣ 5400 ಕೋಟಿ, ಖೋಟಾನೋಟಿನ ಪ್ರಮಾಣ 6.2 ಕೋಟಿ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ. ಕಪ್ಪು ಹಣ ಸಂಪೂರ್ಣ ಇಲ್ಲವಾಗಿದೆಯೇ ಎಂದು ಕೇಳಿದರೆ ಅದಕ್ಕೆ ಉತ್ತರ ಪ್ರತಿಯೊಬ್ಬರಿಗೂ ಅರಿವಾಗಿದೆ. ಹೊಸ ಖೋಟಾನೋಟುಗಳು ಈಗ ಬ್ಯಾಂಕು/ATMಗಳಲ್ಲೆ ಸಿಗಲಾರಂಭಿಸಿವೆ.

ನಿರೀಕ್ಷೆ 2: ಕಾಶ್ಮೀರ ಕಣಿವೆ ಹಾಗೂ ಈಶಾನ್ಯ ರಾಜ್ಯಗಳಲ್ಲಿ  ಉಗ್ರವಾದ ಮತ್ತು ದೇಶದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹಿಂಸೆ ಸಂಪೂರ್ಣವಾಗಿ ನಿಲ್ಲಲಿದೆ.

ಸಾಧನೆ 2: ಮೊನ್ನೆ ಕಾಶ್ಮೀರ ಕಣಿವೆಯಲ್ಲಿ ಉಪಚುನಾವಣೆ ಅಪಾರ ಹಿಂಸೆ, ಸಾವು ನೋವುಗಳೊಂದಿಗೆ ಸಂಭವಿಸಿದ್ದು, ಅನಂತ್ ನಾಗ್ ಉಪಚುನಾವಣೆಯನ್ನು ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂಬ ಕಾರಣ ಮುಂದೊಡ್ಡಿ ಚುನಾವಣಾ ಆಯೋಗ ಮೇ ಅಂತ್ಯಕ್ಕೆ ಮುಂದೂಡಿದೆ.

ನಿರೀಕ್ಷೆ 3: ಭೂಮಿಯ ಬೆಲೆ ಮತ್ತು ನೋಂದಣಿ ಬೆಲೆಗಳ ನಡುವಿನ ಕಂದಕ ಮುಚ್ಚಲಿದ್ದು, ಭೂ ವಹಿವಾಟು ಹೆಚ್ಚಲಿದೆ.

ಸಾಧನೆ3: ASOCHAM ವಣಿಕರ ಸಂಘ ನಡೆಸಿರುವ ಸಮೀಕ್ಷೆಯಂತೆ, 2016ರ ಡಿಸೆಂಬರ್ ವೇಳೆಗೆ ಚಾಲ್ತಿ ಇದ್ದ 2300ರಷ್ಟು ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ 826 ಕಾಮಗಾರಿಗಳು  4  ವರ್ಷಗಳ ಅವಧಿಗೆ ಮುಂದೂಡಿಕೆಯಾಗಿವೆ. ಭೂಮಿಯ ದರ ಇಳಿದಿಲ್ಲ. ಸರ್ಕಾರ ಸ್ವತಃ 2  ಲಕ್ಷ   ಮಧ್ಯಮವರ್ಗದ ಮನೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಭೂ ವಹಿವಾಟಿಗೆ ಚೇತರಿಕೆ ನೀಡುವ ಮಾತನಾಡುತ್ತಿದೆ.

ನಿರೀಕ್ಷೆ 4: ರಾಜಕೀಯ ಪಕ್ಷಗಳಲ್ಲಿ ಕಪ್ಪುಹಣ ಸಂಪೂರ್ಣವಾಗಿ ತೊಲಗಲಿದ್ದು, ಅವು ನಡುಗಿಹೋಗಲಿವೆ.

ಸಾಧನೆ 4: ಉತ್ತರ ಪ್ರದೇಶದ ಚುನಾವಣೆ, ಈಗ ಕರ್ನಾಟಕದಲ್ಲಿ ನಡೆದ ಉಪಚುನಾವಣೆಗಳೆಲ್ಲವೂ ಕಪ್ಪುಹಣಭರಿತವಾಗಿಯೇ ನಡೆದಿದ್ದು, ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳೆರಡೂ ಪರಸ್ಪರ ಹಣ ಹಂಚಿದ ದೂರುಗಳನ್ನು ಆಧಾರ ಸಹಿತ ಕೊಟ್ಟುಕೊಂಡಿವೆ. ಪರಿಸ್ಥಿತಿ ಒಂಚೂರೂ ಬದಲಾಗಿಲ್ಲ ಎಂಬುದು ಸಾಮಾನ್ಯರಲ್ಲಿ ಸಾಮಾನ್ಯರಿಗೂ ಅರಿವಾಗಿದೆ.

ನಿರೀಕ್ಷೆ 5: ದೇಶದ ಆರ್ಥಿಕತೆ ಡಿಜಿಟಲೀಕರಣ ಆಗಲಿದ್ದು ಭಾರತ ಇನ್ನು ಲೆಸ್ ಕ್ಯಾಶ್ ಆರ್ಥಿಕತೆ.

ಸಾಧನೆ 5: 2016 ಡಿಸೆಂಬರ್ ವೇಳೆಗೆ 104.05  ಲಕ್ಷ ಕೋಟಿ ರೂಪಾಯಿಗಳ ವ್ಯವಹಾರ ಡಿಜಿಟಲ್ ಆಗಿ ನಡೆದಿದೆ, ವಿವಿಧ ಡಿಜಿಟಲ್ ವ್ಯವಹಾರಗಳು 140 ರಿಂದ 214 ಶೇಕಡಾದಷ್ಟು ಏರಿಕೆ ಕಂಡಿವೆ. ಆದರೆ, ಅದೇ ವೇಳೆಗೆ ಬೆಂಗಳೂರಿನ IIM ನಲ್ಲಿರುವ CSITM  ಸಂಸ್ಥೆ ನಡೆಸಿರುವ ಅಧ್ಯಯನವೊಂದು, ದೇಶದ ಯಾವುದೇ ಡಿಜಿಟಲ್ ಪಾವತಿ ವಿಧಾನದ ಸುರಕ್ಷೆ, ಖಾಸಗಿತನ ರಕ್ಷಣಾ ಪ್ರಾವಧಾನಗಳು ಏನೇನೂ ತ್ರಪ್ತಿಕರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ನಿರೀಕ್ಷೆ 6: ನೋಟು ರದ್ಧತಿಯಿಂದ ಜನಸಾಮಾನ್ಯರಿಗೆ ತೊಂದರೆ ಆಗಲಿದೆಯಾದರೂ ಅದು ತೀರಾ ತಾತ್ಕಾಲಿಕ. ದಿನ ಕಳೆದಂತೆ ಪರಿಸ್ಥಿತಿ ಸುಧಾರಣೆ ಆಗಲಿದೆ.

ಸಾಧನೆ 6: ಈಗ 150 ದಿನಗಳು ಕಳೆದಿದ್ದರೂ ದೇಶದ ಬಹುತೇಕ ATMಗಳಲ್ಲಿ ದುಡ್ಡು ಸಿಗುತ್ತಿಲ್ಲ. ಬ್ಯಾಂಕುಗಳು ವರ್ಷಾಂತ್ಯವಾದ ಮಾರ್ಚ್ 24ರಿಂದ ಮಾರ್ಚ್ 31ರ ನಡುವೆ ದೇಶದಲ್ಲಿ ಚಲಾವಣೆಯಲ್ಲಿರುವ ದುಡ್ಡಿನ ಪ್ರಮಾಣದಲ್ಲಿ ಹಠಾತ್ 31.65% ಕೊರತೆ ಕಂಡುಬಂದಿದೆ. ಅದರಿಂದ ಉತ್ಪತ್ತಿ ಆಗಿರುವ ಹಣದ ಅಭಾವಕ್ಕೆ ಸರಕಾರದ ಬಳಿ ಇನ್ನೂ ಉತ್ತರ ಇಲ್ಲ.

ನಿರೀಕ್ಷೆ 7:ಬ್ಯಾಂಕುಗಳಿಗೆ 7-8 ಲಕ್ಷ ಕೋಟಿ ಬಿಳಿ ಹಣ ಹೊಸದಾಗಿ ಹರಿದುಬರಲಿದ್ದು, ಬ್ಯಾಂಕುಗಳು ಇನ್ನಷ್ಟು ಹುರುಪಿನಿಂದ ಕಾರ್ಯಾಚರಿಸಲು ಸಾಧ್ಯವಾಗಲಿದೆ.

ಸಾಧನೆ 7: ಬ್ಯಾಂಕುಗಳು ತನ್ನ ಗ್ರಾಹಕರಿಗೆ ಸೇವಾ ವೆಚ್ಚಗಳನ್ನು ಮನಬಂದಂತೆ ಹೇರಲಾರಂಭಿಸಿದ್ದು, ಕನಿಷ್ಟ ಠೇವಣಿ ಮಿತಿ ಮತ್ತಿತರ ಹೊಸ ನಿಯಮಗಳ ಮೂಲಕ ಬಡವರು ಬ್ಯಾಂಕಿನ ಬಳಿ ಬರದಂತೆ ಯೋಜಿಸಿಕೊಳ್ಳುತ್ತಿವೆ. ಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಿ ಎಂದರೆ, ರಿಸರ್ವ್ ಬ್ಯಾಂಕಿನ ಗವರ್ನರ್ ಅವರು ದೇಶಕ್ಕೆ ನೈತಿಕತೆಯ ಪಾಠ ಆರಂಭಿಸಿದ್ದಾರೆ. ಹೂಡಿಕೆಗಳ ಮೇಲಿನ ಬಡ್ಡಿ ದರಗಳು ನಿಧಾನಕ್ಕೆ ಇಳಿಯಲಾರಂಭಿಸಿವೆ.

 

Add Comment

Leave a Reply