Quantcast

ಹಿರಿಯರೇ ನೀವು ಮಾಡಿರುವ ಅಭಿವೃದ್ಧಿ ಸಾಕು!

ಡಾ ರಾಜೇಗೌಡ ಹೊಸಹಳ್ಳಿ

‘ಇದುವರೆಗೂ ಹಿರಿಯರು ಮಾಡಿರುವ ಅಭಿವೃದ್ಧಿ ಬದುಕಿಗೆ ಪೂರಕವಾಗಿಲ್ಲ. ಹೊಸ ಪ್ರಪಂಚ ಸೃಷ್ಟಿಯಾಗಬೇಕು. ಹಿರಿಯರು ಅದನ್ನು ಅನುಸರಿಸುವಂತಿರಬೇಕು’ ಎಂದು ಹಾಸನದ ಮಕ್ಕಳ ಸಾಹಿತ್ಯೋತ್ಸವದಲ್ಲಿ ಮಕ್ಕಳ ಪ್ರತಿನಿಧಿಯಾಗಿ ಬೆಳೆಯುತ್ತಿರುವ ಮಗು ಮಾತನಾಡಿದ ಭಾಷೆಯಿತ್ತು. ಹೌದು. ‘ಮನುಷ್ಯರೇ ನೀವು ಮಾತಾಡಲು ತೊಡಗಿದ/ದಿನದಿಂದಲೂ/ಪ್ರಾಣಿ ಪಕ್ಷಿ ಗಿಡಮರಗಳು/ಮಾತು ನಿಲ್ಲಿಸಿವೆ’ ಎಂಬ ಕೃಷ್ಣಮೂರ್ತಿ ಬಿಳಿಗೆರೆ ಕವನ ಸಾಲುಗಳಲ್ಲಿನ ನುಡಿಗಳಿಗೆ ಇದು ಭಾಷ್ಯ ಬರೆದಂತಿದೆ. ಹಾಗಾದರೆ ಮುಂದಿನ ಪೀಳಿಗೆ ಏನು ಬಯಸುತ್ತಿದೆ? ಈ ಎಪ್ಪತ್ತು ವರುಷಗಳಲ್ಲಿ ಗಾಂಧೀಜಿಯನ್ನು ನಾವು ತಿರಸ್ಕರಿಸಿಯಾಗಿದೆ. ನೆಹರು ಹೂಡಿದ ಯಂತ್ರಗಳನ್ನು ಕಳಚಿಯಾಗಿದೆ. ಭಾಗ್ಯದ ಬಾಗಿಲುಗಳಾದ ನೀರಾವರಿಗಳು ಮುದಿಯಾಗಿವೆ. ಅರ್ಜುನ ಪರಂಪರೆಯು ಬಾಣ ಹೂಡಿ ಚಿಮ್ಮಿಸಿದ ಪಾತಾಳ ಬಾವಿಗಳು ವಿಷ ಕಾರುತ್ತಿವೆ.

ದೊರೆಗಳು ಮಾಂಡಳಿಕರು ನಿರ್ಮಿಸಿದ ಮೇಲು ಜಲಸಂಗ್ರಹಗಳಲ್ಲಿ ಹಕ್ಕಿ ಕುಡಿಯಲು ನೀರಿಲ್ಲ. ಆನೆ ಹಿಂಡುಗಳು ದಾವಾರಿವೆ; ಬಾಯಾರಿ ಕೊಳಕು ನೀರೆಳೆದು ಪ್ರಾಣ ಬಿಡುತ್ತಿವೆ. ಈ ನಡುವೆ ತಂತ್ರಾಂಶಗಳಲ್ಲಿ ಕುಳಿತಲ್ಲಿ ಜಗತ್ತು ಕಾಣುತ್ತಿದೆ. ಇದೇ ಹೊತ್ತಿನಲ್ಲಿ ಆಲ್ಪಸ್ ಪರ್ವತ ಶ್ರೇಣಿಯ ಆಸ್ಟ್ರಿಯಾ ನೆಲದ ಸೀ ಹೋಟೆಲ್‍ನ 180 ಪ್ರವಾಸಿ ಕೋಣೆಗಳಲ್ಲಿ ಕುತಂತ್ರಾಂಶದಿಂದ ನವನಾಗರೀಕ ಜಗತ್ತಿನ ತಂತ್ರಾಂಶ ಕಳ್ಳರು ಹಣ ವಸೂಲಿ ಮಾಡಲು ಜನರಿಲ್ಲದೆಯೇ ಕೀಲಿ ಹಾಕಿದ ವಿಚಾರದ ಘಟ್ಟದಲ್ಲಿದ್ದೇವೆ. (ಪ್ರ.ವಾ.15 ಫೆ) ಈ ಲೇಖನ ಬರೆಯುತ್ತಿರುವ ಎನ್.ಎ.ಎಂ. ಇಸ್ಮಾಯಿಲ್ ಅವರ ಮೂಲ ಹಾಸನ ಅರೆಮಲೆನಾಡಿನ ಗ್ರಾಮದಲ್ಲಿ Tussh ಹೆಸರಿನ ರೇಷ್ಮೆ ಕೃಷಿಯಿತ್ತು. ಅದು ಅಸ್ಸಾಂ ಮಾದರಿಯದು. ಇದು ಮತ್ತಿಮರಗಳ ಮೇಲೆ ಹೆಬ್ಬೆರಳಿಗೂ ಗಾತ್ರದ ತುಸು ಕಪ್ಪುಬಣ್ಣದ ಅಡವಿ ರೇಷ್ಮೆ ಹುಳುಗಳನ್ನು ಮೇಯಿಸುವ ವಿಧಾನ. ಅಂದರೆ ಮನೆ ಒಳಗಿನ ರೇಷ್ಮೆಕೃಷಿ; ಹೊರಗೆ ಅಡವಿಯೊಳಗಿನ ರೇಷ್ಮೆ ಕೃಷಿ ರೈತನಿಗೆ ಬಲ ನೀಡುತ್ತಿತ್ತು. ಈಗ ಒಳಗೆ ಹೊರಗೆ ಎಲ್ಲೂ ಭಾರತದ ರೈತಾಪಿಗೆ ಬಲವಿಲ್ಲ. ಎಲ್ಲವೂ ಜಿಗಿದೋಡುವ ಆಟ. ತಂತ್ರಾಂಶಕ್ಕೂ ಕುತಂತ್ರಾಂಶಕ್ಕೂ ನಡುವೆಯೊಂದು ಮಾಯಾ ಪರದೆಯ ಗೊಂಬೆಯಾಟ. ಇದನ್ನು ದೇಶ ‘ಅಭಿವೃದ್ಧಿ’ ಎಂದು ಹೇಳುತ್ತಲೇ ಇದೆ. ಸರಳ ಬದುಕನ್ನು ಕಿತ್ತುಕೊಂಡು ಗಾಳಿಕೊಲ್ಲುವ ಯಂತ್ರಗಳನ್ನು ವಾಹನಗಳನ್ನು ನೀಡಿಯಾಗಿದೆ!

ಹಾಸನದ ಡಿಗ್ರಿ ಕಾಲೇಜಿನಲ್ಲಿ ನಾನು ಮೊನ್ನೆ ಗಮನಿಸಿದಂತೆ ಶಿಕ್ಷಣವು ಮರುರೂಪ ಪಡೆಯುತ್ತಿದೆ. ಅಲ್ಲಿ ತರಗತಿ ಮುಗಿದ ಮೇಲೆ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಪ್ರಾರಂಭಿಸಿರುವ ಶಿಕ್ಷಕರ ಹಾಗೂ ಪ್ರಾಂಶುಪಾಲರ ಆಲೋಚನೆಗಳಿವೆ. ಅಲ್ಲಿ ಅಣಬೆ ಬೇಸಾಯ, ಟೈಲರಿಂಗ್, ಕೋಳಿ ಸಾಕಾಣೆ ಈ ರೀತಿ ಕಲಿಕೆ ಪ್ರಾರಂಭವಾಗಿವೆ. ಇದೆಲ್ಲವೂ ವಿದೇಶಿ ಶಿಕ್ಷಣದ ಭ್ರಮೆಗಳನ್ನು ಕಳಚುತ್ತಾ ಪ್ರಾಥಮಿಕ ಶಾಲಾ ಹಂತಕ್ಕೂ ಹಬ್ಬಬೇಕಾಗಿದೆ. ಈ ವಿಧಾನವೇ ಹಿರಿಯರ ನಕಲಿಗಳನ್ನು ಬಿಡಿಸಿಕೊಳ್ಳುವ ವಿಧಾನ. ‘ನಾನು ಮೆಟ್ಟು ಹೊಲಿಯುವುದನ್ನು ನೂಲುವುದನ್ನು ಕಲಿಸಿದ್ದೇನೆ. ಅಕ್ಷರ ಶಿಕ್ಷಣ ಕೈ ಶಿಕ್ಷಣದ ನಂತರ ಬರಬೇಕು…. ಮೂಲ ಶಿಕ್ಷಣದ ಗುರಿ ಹಳ್ಳಿಯ ಮಕ್ಕಳನ್ನು ಮಾದರಿ ಹಳ್ಳಿಯವರನ್ನಾಗಿ ಮಾಡುವುದು’ ಎಂದು ಗಾಂಧೀಜಿಯವರು ಹೇಳಿದ್ದು ಕೂಡ ಈ ಬಿಡಿಸಿಕೊಳ್ಳುವ ಶಿಕ್ಷಣವನ್ನು ಎಂಬ ಅರಿವು ಈಗ ಬಂದಂತಿದೆ.

 

ಈಗ ಅಲ್ಲಲ್ಲೆ ರೈತಾಪಿಯಲ್ಲಿ ಕಾಲೇಜುಗಳಲ್ಲಿ ಸತ್ಯಾನ್ವೇಷಣೆಗಳು ಪ್ರಾರಂಭವಾಗಿವೆ. ಇದೇ ಪರಂಪರೆಯ ಜ್ಞಾನ ಹಾಗೂ ವಿಜ್ಞಾನ ಅನ್ವೇಷಣೆ. ಗಾಂಧೀಜಿ ಕೂಡ ಯಂತ್ರ ವಿರೋಧಿಯಾಗಿರಲಿಲ್ಲ. ಯಂತ್ರವು ಕೈಕಾಲುಗಳ ಕೆಲಸವನ್ನು ಕಿತ್ತುಕೊಳ್ಳಬಾರದೆಂದು ನಂಬಿದ್ದರು. ಈಗ ಬೇಕಾಗಿರುವುದು ಅಂತಾ ಶಿಕ್ಷಣ. ಹಸಿರು ಕ್ರಾಂತಿ ನೆಲಮುಗಿಲುಗಳ ಆಸರೆಯಲ್ಲಿಲ್ಲ. ಪಂಚಭೂತಗಳು ಪ್ರಾಣಿಪಕ್ಷಿಗಳಂತೆಯೇ ಮಾತು ನಿಲ್ಲಿಸಿವೆ. ಮನುಷ್ಯ ಮಾತನಾಡುತ್ತಲೇ ಇದ್ದಾನೆ. ದನಿ ನಿಲ್ಲುವ ಕಾಲಕ್ಕೆ ಅವನ ನಡಿಗೆ ಸಾಗುತ್ತಿದೆ. ಬದುಕೀಗ ಇಂತಾ ಬೇವಿನ ಎಲೆಗಳನ್ನು ಚೇಳಾಗಿಸುವ ರಣಮೋಡಿಯಿಂದ ಕಳಚಿಕೊಳ್ಳಬೇಕಾಗಿದೆ.

ಮೊನ್ನೆ ಚಲನಚಿತ್ರೋತ್ಸವದಲ್ಲಿ ‘ಇಷ್ಟಿ’ ಎಂಬ ಸಂಸ್ಕೃತ ಸಿನಿಮಾವಿತ್ತು. ಈ ಭಾಷೆ ದೇಶಿಭಾಷೆಗಳನ್ನು ಬದುಕುಗಳನ್ನು ಅಣಕಿಸುವ ರೂಪಕ. ಈ ಗೀರ್ವಾಣ ಭಾಷಾ ಬದುಕಿನ ಅಭಿಮಾನ ಲಂಡನ್ ಭಾಷಾಭಿಮಾನದೊಳಗೆ ನೆಂಟಸ್ತಿಕೆ ಬೆಳೆಸಿ ವರ್ತಮಾನದಲ್ಲಿ ಅಮೆರಿಕೆಯ ಪ್ರಜಾಪ್ರಭುತ್ವದಲ್ಲಿ ನಮ್ಮ ದೇಶಿ ಮಕ್ಕಳನ್ನು ಕುತ್ತಿಗೆ ಹಿಡಿದು ಆಚೆಗೆ ನೂಕಿಸುವ ಸ್ಥಿತ್ಯಾಂತರಕ್ಕೆ ತಂದು ನಿಲ್ಲಿಸಿದೆ. ಈ ಸಿನಿಮಾ ನಾಯಕ ನಂಬೂದ್ರಿ ಮನೆ ಹಿರಿಯನು ಅಗ್ಗಿಷ್ಟಿ ಯಜ್ಞಗಳಿಗೆ ಖರ್ಚು ಮಾಡುತ್ತಲೇ ಆದಾಯಕ್ಕಾಗಿ ಮೂರು ನಾಲ್ಕನೆಯ ಮದುವೆಯನ್ನು ತನ್ನ 71ನೇ ವಯಸ್ಸಿನಲ್ಲಿ ಆಗುತ್ತಾನೆ. ಆ ಹುಡುಗಿಗೆ 17 ವಯಸ್ಸು. ತಮ್ಮಂದಿರುಗಳಿಗೆ ಕೆಳವರ್ಗದ ಹೆಣ್ಣುಗಳನ್ನು ಇಟ್ಟುಕೊಳ್ಳುವ ಅವಕಾಶವೇ ಹೊರತು ಮದುವೆ ಎಂಬುದಿಲ್ಲ. ಇಲ್ಲಿ ‘ನಂಬೂದ್ರಿ ಬ್ರಾಹ್ಮಣರು ಕನಿಷ್ಠ ಮನುಷ್ಯರಾಗುವವರೆಗೆ ಭಾರತದ ಜನಾಂಗಗಳು ಅವರನ್ನು ಮಾನ್ಯ ಮಾಡಬೇಡಿ’ ಎಂಬ ಕೋಪದ ವಿವೇಕಾನಂದರ ಮಾತು ನೆನಪಾಗುತ್ತಿದೆ. ಅಲ್ಲಿನ ಈಳವ ಜನಾಂಗಗಳ ನೆರವಿಗೆ ಬಂದು ಜಗದೆಚ್ಚರಗಳಿಗೆ ಮಾರ್ಗ ತೋರಿದ ನಾರಾಯಣ ಗುರು ಸಹಾ ಇದೇ ಸಮಯದಲ್ಲಿ ಪ್ರಸ್ತುತವಾಗುತ್ತಾರೆ.

ಜನರ ಬದುಕೆಂದರೆ ಕೃಷಿ, ಭಾಷೆ, ಶಿಕ್ಷಣ, ಬದುಕು ಇದೆಲ್ಲದರ ಅರಿವು. ಈ ಆಗಿ ಹೋದ ಅರವಿನಲ್ಲಿ ಮಕ್ಕಳು ಮುಂದಿನ ದಾರಿ ಕಂಡುಕೊಳ್ಳುತ್ತಲಿವೆ. ಅದೇ ಜಗದ ತಿರುವು. ಭೂಮಿ ಒಂದು ಬುಗುರಿ. ತಿರುಗಿಸುವ ಚಾಟಿ ಎಲ್ಲೋ ಇದೆ. ಅದರೆಚ್ಚರವಿದ್ದರೆ ಶಾಲಾ ಕಾಲೇಜುಗಳಲ್ಲಿ ಮೂಲಶಿಕ್ಷಣದ ಪರಂಪರೆಯು ಜ್ಞಾನ ಪುನಃ ಪಲ್ಲವಿಸುತ್ತದೆ. ಹೀಗೆ ಮರುಪಯಣದಲ್ಲಿ ಹುಡುಕಿಕೊಳ್ಳುವ ಬೀಜಗಳು ಪುನಃ ಮೊಳಕೆ ಒಡೆಯುವುದುಂಟು. ಪ್ರಜಾವಾಣಿ ಪತ್ರಿಕೆಯ ಪುಟದಲ್ಲಿ ಅಡವಿ ಹೊತ್ತಿ ಉರಿಯುತ್ತಿರುವ ಧಗಧಗ ಸುದ್ದಿಗಳಿವೆ. ಅಂದಿನ ಖಾಂಡವ ದಹನ ಇನ್ನೂ ನಿಂತಿಲ್ಲ ಅಂತ್ಯವಾಗುವವರೆಗೂ ನಿಲ್ಲುವುದಿಲ್ಲ. ತಲ್ಲಣದ ಮನಸ್ಸುಗಳ ನಡುವೆ ಇದೇ ಪತ್ರಿಕೆಯಲ್ಲಿನ ಮತ್ತೊಂದು ಸುದ್ದಿಯಂತೆ ಕಾಡು ಬೆಳೆಸಲು ‘ಅಭಿಯಾನ ಸೀಡ್’ ಎಂಬ ಕಾರ್ಯಕ್ರಮವಿದೆ. (ಪ್ರ.ವಾ.ಫೆ.14) ಇದು ಜರ್ಮನಿ, ಫ್ರಾನ್ಸ್ ದೇಶಗಳು ಬೀಜದುಂಡೆಗಳನ್ನು ಹೆಲಿಕಾಪ್ಟರಿನಲ್ಲಿ ಬಿತ್ತುತ್ತಿರುವ ವಿಧಾನವಿದು.

ವಿಚಾರವೇನೋ ಒಳ್ಳೆಯದೇ ಹೌದು. ಈ ಸಂಘಸಂಸ್ಥೆಗಳು ಈ ಬೀಜದುಂಡೆ ಮಾಡಿ ಬಿತ್ತುತ್ತಿರುವುದು ಆಗಿಹೋಗಿರುವ ಅನಾಹುತಗಳನ್ನು ಪುನಾರವಲೋಕಿಸುವ ಮಾದರಿಯೂ ಹೌದು. ಇಷ್ಟರಲ್ಲಿ ಕಾಡು ಬೆಳೆಯುವುದಿಲ್ಲ. ಅದಕ್ಕೆ ಮನುಷ್ಯ ತನ್ನ ಮಾತು ನಿಲ್ಲಿಸುವುದಷ್ಟೆ ಅಲ್ಲ ಕೈಕಾಲುಗಳನ್ನು ಗಿಡಮರ ಪ್ರಾಣಿ ಪಕ್ಷಿಗಳ ಬಳಿ ಕೊಚ್ಚಲು ಕೊಂಡೊಯ್ಯುವುದನ್ನು ನಿಲ್ಲಿಸಬೇಕು. ಈಗ ಭೂಮಿಯೇ ಒಂದು ಆಟಂಬಾಂಬಾಗಿ ಪರಿವರ್ತಿತವಾಗುತ್ತಿದೆ. ಜಗದಳಿವು ಉಳಿವು ‘ನಿನ್ನ ಕೈಲಿದೆ’ ಎಂಬ ಸರ್ವತಂತ್ರ ಸ್ವತಂತ್ರ ಅಧಿಕಾರವನ್ನು ಮಾನವ ಪಡೆದುಕೊಂಡಿದ್ದಾನೆ. ಈ ಎಚ್ಚರಗಳ ಪಾಠ, ಶಿಕ್ಷಣ ಪ್ರಥಮ ಹಂತದಲ್ಲಿ ಮಗುವಿಗೆ ಬೇಕಾದಷ್ಟೆ ಆಳುವ ಶೂರಾಧಿ ಶೂರರಿಗೆ ಬೇಕಾಗಿದೆ. ಅದರೆಚ್ಚರದಲ್ಲೆ ನಿಸರ್ಗದೊಳಗೆ ಕೂಡಿ ಬಾಳುವ ಪ್ರಜಾಪ್ರಭುತ್ವವಾಗದಿದ್ದರೆ ತಿರುಗುತ್ತಿರುವ ಭೂಮಿ ಎಂಬ ಬುಗುರಿ ಆಟ ನಿಲ್ಲಿಸಿ ಪುನಃ ಬುದ್ಧಮೌನ ತಾಳುತ್ತದೆ. ಇದೇ ಅಂತ್ಯದ ಆರಂಭ.

 

One Response

  1. vihi.wadawadagi
    April 19, 2017

Add Comment

Leave a Reply