Quantcast

ಬೆತ್ತಲೆಗೆ ಬಣ್ಣ ತುಂಬುತ್ತಾ..

ಲೇಖಕಿ ಮೀರಾ ಪಿ. ಆರ್. ಅವರ ‘ದೂರ ಸಾಗರ’  ಬಾಸ್ಟನ್ ಸಮೀಪದ ಫ್ರೇಮಿಂಗ್ ಹ್ಯಾಮಿನಲ್ಲಿ ನಡೆಯಲಿರುವ ‘ವಸಂತ ಸಾಹಿತ್ಯೋತ್ಸವ’ದಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಸಾಹಿತ್ಯ ರಂಗದ, ವಸಂತ ಸಾಹಿತ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾದ ಲಕ್ಶ್ಮೀಶ ತೋಳ್ಪಾಡಿಯವರು ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

‘ದೂರ ಸಾಗರ’ದಿಂದ ಆಯ್ದ ಒಂದು ಲೇಖನ ಇಲ್ಲಿದೆ..

ಮೀರಾ ಪಿ ಆರ್ 

‘ಮಾಮಾ ಮಿಯಾ!!!’ ಎಂದು ಇಟಾಲಿಯನ್‍ನಲ್ಲಿ ಉದ್ಘರಿಸುತ್ತಾ ಈ ರಷ್ಯನ್ ಬಾಲೆ ನನ್ನ ಕ್ಯಾನ್ವಾಸ್ ಮುಂದೆ ಬಂದು ನಿಂತಳು. ಕ್ಲಾಸ್ ಪೂರಾ ಸಣ್ಣಗೆ ನಗುವಿನ ತೆರೆಗಳೆದ್ದವು. ಮತ್ತೆ ಮತ್ತೆ ಆಶ್ಚರ್ಯವನ್ನೂ ಆಘಾತವನ್ನೂ ಅಭಿನಯಿಸುತ್ತಾ ನನ್ನ ಕಡೆ ನೋಡಿ ‘ಏನಾಯ್ತು?’ ಎಂದು ಕೇಳಿದಳು. ‘ನೀನು ಹೇಳಿದಂತೆ ಅವನ ಬೆನ್ನಲ್ಲಿ ನೀಲಿ, ನೇರಳೆ ಅಂತೆಲ್ಲ ಹುಡುಕಿ, ನನಗೆ ಕಾಣಿಸಿದ ಹಾಗೆ ಬಣ್ಣ ತುಂಬಿಸಿದೆ ಅಷ್ಟೆ, ಈಗ ಹೀಗಾಯ್ತು’ ಅಂದೆ. ಎಲ್ಲರೂ ಸಶಬ್ದವಾಗಿ ನಕ್ಕರು. ಕಣ್ಣಾಲಿಗಳನ್ನು ತಿರುಗಿಸಿ, ಭುಜ ಕೊಡವಿ ‘ನಿಮ್ಮನ್ನೆಲ್ಲ ಆ ದೇವರೇ ಕಾಪಾಡಬೇಕು. ಬ್ರಷ್ ಕೊಡು’ ಎಂದು ಹೇಳಿ ನನ್ನ ಕೈಲಿದ್ದ ಬ್ರಷ್ ತೆಗೆದುಕೊಂಡು ಒಮ್ಮೆ ಟರ್ಪೈಂಟನ್‍ನಲ್ಲಿ ಅದ್ದಿ ಅದಕ್ಕಂಟಿದ್ದ ಬಣ್ಣಗಳನ್ನೆಲ್ಲ ತೊಳೆದು ‘ ಓಕೆ ಗ್ಯಾದರ್ ಅರೌಂಡ್’ ಎಂದು ಈಕೆ ಕೂಗಿದ್ದೇ ಎಲ್ಲರೂ ತಮ್ಮ ತಮ್ಮ ಕ್ಯಾನ್ವಾಸ್‍ಗಳನ್ನು ಬಿಟ್ಟು ಇವಳ ಸುತ್ತ ಬಂದು ನಿಂತೆವು.

೩೦ರ ಹರಯದ ರಷ್ಯನ್ ಮೂಲದ  ಅದ್ಭುತ ಚಿತ್ರ ಕಲಾವಿದೆ, ಥೇಟ್ ಇಂದ್ರಜಾಲದಂತೆ ಅದುವರೆಗೂ ನಮಗೆ ಕಾಣದ ಬಣ್ಣಗಳನ್ನೆಲ್ಲ ಕಾಣಿಸತೊಡಗುತ್ತಿದ್ದಳು. ಮಾಡೆಲ್‍ ಅನ್ನು ದಿಟ್ಟಿಸಿ ನೋಡಲು ಹೇಳುತ್ತಾ ‘ಅಲ್ಲಿ ಭುಜದ ಮೇಲೆ ಕಿಟಕಿಯಿಂದ ಬೆಳಕು ಬಿದ್ದಿರುವ ಕಡೆ ಯಾವ ಬಣ್ಣ ಕಾಣ್ತಿದೆ? …ಬಿಳಿ? ಹಳದಿ?…ಇನ್ಯಾವುದು?…ಬೆನ್ನಿಗೂ ಕೈಗೂ ಮಧ್ಯೆ ಇರುವ ಖಾಲಿ ಜಾಗದಲ್ಲಿ? ನೋ ನೋ ನೋ..ಅಲ್ಲಿ ಕಪ್ಪು ಇಲ್ಲವೇ ಇಲ್ಲ..ನೇರಳೆ ಕಾಣ್ತಿದೆಯಾ? ನೀಲಿ?..ಇಲ್ಲಿ ನಿತಂಬಕ್ಕೂ ಕಾಲು ಶುರುವಾಗುವಲ್ಲಿಗೂ ಮಧ್ಯೆ ಇರುವ ಆ ಅರ್ಧಚಂದ್ರ? ಅಲ್ಲೊಂಚೂರು ಕೆಂಪಿದೆಯಾ? ಇಲ್ಲ ನೇರಳೆಯಾ?..” ಹೀಗೆ ಇವಳು ನಮಗೆಲ್ಲ ಕಣ್ಣನ್ನು ಅಗಲಿಸಿ, ಕಿರಿದುಗೊಳಿಸಿ, ದಿಟ್ಟಿಸಿ, ದೃಷ್ಟಿ ಮಂಜಾಗಿಸಿ ಎದುರಿಗಿದ್ದ ಆಕೃತಿಯನ್ನೂ ಅದರಲ್ಲಿದ್ದ ಬಣ್ಣಗಳನ್ನೂ ಆ ಬಣ್ಣಗಳ ಹತ್ತಾರು ಬೇರೆ ಬೇರೆ ಛಾಯೆಗಳನ್ನೂ ಹುಡುಕಿಸಿ, ಹುಡುಕಿಸಿ ಕಾಣಿಸುತ್ತಿದ್ದಳು.

ನಮ್ಮ ಮುಂದೆ ನಿಂತ ಮಾಡೆಲ್ ಇಮ್ಯಾನುಯೆಲ್, ಬಾಸ್ಟನ್‍ನ ಮರಗಟ್ಟಿಸುವ ಚಳಿಗಾಲದಲ್ಲಿ ಬಟ್ಟೆಗಳನ್ನೆಲ್ಲಾ ಕಳಚಿ, ಬೆತ್ತಲಾಗಿ ನಾಲ್ಕು ಮೂಲೆಯಲ್ಲೂ ಇರಿಸಿದ್ದ ಹೀಟರ್‌ಗಳ ಮಧ್ಯ ಗಂಟೆಗಟ್ಟಲೆ ಅಲುಗಾಡದೆ ಥೇಟ್ ವಿಗ್ರಹದ ಹಾಗೆ ನಿಂತಿರುತ್ತಿದ್ದ. ನಮಗೆ ಬೇಕಾದ ಕೋನವನ್ನು ಆರಿಸಿಕೊಂಡು, ಅಲ್ಲಿ ನಿಂತು ನಾವು ಈ ಮಾನವಾಕೃತಿಯನ್ನು ನಮ್ಮ ಕ್ಯಾನ್ವಾಸ್‍ಗೆ ಇಳಿಸಬೇಕಿತ್ತು.

ಮೊದಲಿಗೆ ಹಲವು ದಿನ ಬಣ್ಣಗಳ ಬಗ್ಗೆ, ಕುಂಜದ ಬಗ್ಗೆ, ನೆರಳು-ಬೆಳಕಿನ ಆಟಗಳ ಬಗ್ಗೆ ಅಂತೆಲ್ಲ ಪ್ರಾಥಮಿಕ ಪಾಠಗಳನ್ನು ಕಲಿಯುತ್ತಾ ನಂತರದ ಹಲವು ದಿನಗಳು ಐದು ನಿಮಿಷಕ್ಕೊಂದು, ಒಂದು ಘಂಟೆಗೆ ಒಂದು, ಅರ್ಧ ದಿನದಲ್ಲಿ ಒಂದು ಅಂತೆಲ್ಲ ಸ್ಟಿಲ್ ಲೈಫ್ ಪೆಯಿಂಟಿಂಗ್‍ಗಳನ್ನು ಮಾಡಿ ಮುಗಿಸಿದ ಬಳಿಕ ದಿನಕ್ಕೊಂದು ಭಂಗಿ, ದಿನಕ್ಕೊಬ್ಬ ಮಾಡೆಲ್ ಎಂಬ ಲೆಕ್ಕದಲ್ಲಿ ಮೂರು ಮನುಷ್ಯಾಕೃತಿಗಳ ಚಿತ್ರ ಈಗಾಗಲೇ ಮುಗಿಸಿದ್ದೆವು. ಕಣ್ಣು, ಮೂಗು, ಬಾಯಿಯಂಥ ಚಹರೆಗೆ ಸಂಬಂಧಿಸದ ಯಾವುದನ್ನೂ ವಿವರವಾಗಿ ಚಿತ್ರಿಸದೆ, ಮುಖದ ಭಾವವನ್ನು ಲಂಬಿಸದೆ, ಬರೀ ಮನುಷ್ಯ ದೇಹವನ್ನು ಮಾತ್ರ ಬಿಡಿಸುವ ಕಲೆಯನ್ನು ಈ ಕ್ಲಾಸ್ ಕಲಿಸುತ್ತಿತ್ತು. ಹಾಗೆ ಚಹರೆ, ಭಾವ ಎರಡನ್ನೂ ತೆಗೆದು ಹಾಕಿ ಎದುರಿಗಿದ್ದ ದೇಹವನ್ನು ಬರೀ ಬಣ್ಣಗಳ ಮೊತ್ತವಾಗಿ, ನಿಂತ ಭಂಗಿಯ ಅಂಕುಡೊಂಕು ಗೆರೆಗಳಾಗಿ ಕಾಣುವುದೇ ಆ ತರಗತಿಗಳ ಅರ್ಧ ಆಶಯ. ಇನ್ನರ್ಧ, ಹಾಗೆ ಕಂಡಿದ್ದನ್ನು ತೈಲವರ್ಣದಲ್ಲಿ ಕ್ಯಾನ್ವಾಸ್‍ಗೆ ತರುವುದು. ಈ ಕ್ಲಾಸಿನಲ್ಲಿದ್ದ ವಿವಿಧ ಭಾಷೆ, ಬಣ್ಣ, ದೇಶ, ಲಿಂಗ, ವಯೋಮಾನಗಳ ೧೪ ಮಂದಿ ಗಂಡು ಹೆಣ್ಣುಗಳಿಗೆ ಬ್ರಷ್ ಹಿಡಿಯುವ, ಕ್ಯಾನ್ವಾಸ್ ಮುಂದೆ ಸರಿಯಾದ ಕೋನದಲ್ಲಿ ನಿಲ್ಲುವ, ಬಣ್ಣಗಳನ್ನೂ ಆಕೃತಿಯನ್ನೂ ಅವು ಇರುವ ಹಾಗೇ ಗುರುತಿಸುವ ಮತ್ತು ಅದನ್ನು ಕ್ಯಾನ್ವಾಸ್‍ಗೆ ತುಂಬಿಸುವ ತಂತ್ರಗಳನ್ನೆಲ್ಲ ಕಲಿಸುತ್ತಾ ನಡು ನಡುವೆ ‘ನಿಮ್ಮನ್ನೆಲ್ಲ ಆ ದೇವರೇ ಕಾಪಾಡಬೇಕು’ ಎಂದು ಹೇಳುತ್ತಾ ಈ ಚಿಗರೆಯಂಥಾ ಇನ್ಸ್‍ಟ್ರಕ್ಟರ್ ಓಡಾಡುತ್ತಿದ್ದಳು.

ಬ್ರೆಜಿಲ್‍ನಿಂದ ಬಂದಿದ್ದ ಕ್ಯಾಥರೀನ್ ಪೋರ್ಟರೀಕೋದ ಪೆಡ್ರೋ  ಜೊತೆಗೆ, ಡಿಪೆಂಡೆಂಟ್ ವೀಸಾದಲ್ಲಿದ್ದೂ ಈ ದೇಶದಲ್ಲಿ ಕೆಲಸ ಮಾಡಲಿಕ್ಕೆ ಸಾಧ್ಯವಾಗುವಂತ ವರ್ಕ್ ಪೆರ್ಮಿಟ್ ತರಹದ್ದು ಏನಾದರೂ ಇದೆಯಾ ಅಂತ ವಿಚಾರಿಸುತ್ತಿದ್ದರೆ, ಟರ್ಕಿಯ ಸುಂದರಿ ಜೆನಿತ್, ಮನೆಯಲ್ಲಿ ತನ್ನ ಗಂಡನನ್ನೇ ಮಾಡೆಲ್ ಆಗಿಸಿ ಒಂದು ಪೆಯಿಂಟಿಂಗ್ ಪ್ರಾರಂಭಿಸಿರುವುದರ ಬಗ್ಗೆ ಹೇಳುತ್ತಿದ್ದಳು.  ಬಾಸ್ಟನ್‍ನ ೬೦ರ ಲಿಂಡಾ ‘ನಿಮ್ಮ ಹೆಸರುಗಳೆಲ್ಲ ನೀವು ಎಷ್ಟು ಸಲ ಹೇಳಿದರೂ  ನನಗೆ ಮರೆತೇ ಹೋಗತ್ತೆ…ಓಹ್ ಹೌ ಐ ಮಿಸ್ಸ್ ದಿ ಓಲ್ಡ್ ಅಮೇರಿಕನ್ ನೇಮ್ಸ್!’ ಎಂದು ಉದ್ಘರಿಸುತ್ತಿದ್ದರೆ, ಇನ್ನೊಬ್ಬ ಅಮೆರಿಕನ್ ಅಜ್ಜ ಡೇವ್, ‘ಈ ಹುಡುಗಿಗೆ ಏನು ಗೊತ್ತು ಮಣ್ಣು, ಇವಳು ಹುಟ್ಟೋ ವೇಳೆಗಾಗಲೇ ನಾನು ನೂರಾರು ಪೆಯಿಂಟಿಂಗ್ ಮಾಡಿ ಮುಗಿಸಿದ್ದೆ’ ಎಂದು ನಮ್ಮ ಇನ್ಸ್‍ಟ್ರಕ್ಟರನ್ನು ಅಣಕಿಸುತ್ತಲೇ ಕ್ಲಾಸಿಗೆ ಬಂದು ಕೂರುತ್ತಿದ್ದರು.

ಡೈವೋರ್ಸ್ ಆಗಿ ಆಗಿನ್ನೂ ತಿಂಗಳಾಗಿದ್ದ ಸೂಸನ್ ಹೊಸದೇನಾದರೂ ಕಲಿಯುವ ಹಂಬಲದಲ್ಲಿ, ಕಪ್ಪು ಹುಡುಗ ಜಮಾಲ್ ಹೀಗೆ ಸುಮ್ಮನೆ ಕುತೂಹಲಕ್ಕೆ, ಕ್ಲಾಸ್‍ಗೆ ಹೋಗಿ ಕಲಿಯದೆ ಸುಮ್ಮನೆ ತಾವೇ ತಮ್ಮಷ್ಟಕ್ಕೆ ಚಿತ್ರ ಬಿಡಿಸುತ್ತಿದ್ದ ನನ್ನಂಥ ಹಲವರು ಆಯಿಲ್ ಪೆಯಿಂಟಿಂಗನ್ನು ಒಂದಿಷ್ಟು ಶಾಸ್ತ್ರೀಯವಾಗಿ ಅಭ್ಯಾಸ ಮಾಡಲು, ಈಗಾಗಲೇ ಕೆಲವು ಆರ್ಟ್ ಗ್ಯಾಲರಿಗಳಲ್ಲಿ ಸ್ವತಂತ್ರ ಪ್ರದರ್ಶನಗಳನ್ನು ಮಾಡಿ ನಾನಾ ಕಾರಣಕ್ಕೆ ಹಲವು ವರ್ಷಗಳಿಂದ ಬ್ರಷ್ ಮುಟ್ಟದಿದ್ದ ಕೆಲವರು ರಿಫ್ರೆಷ್ ಆಗಲು… ಹೀಗೆ ಹವ್ಯಾಸಿಗರಿಂದ ಹಿಡಿದು ನುರಿತ ಕಲಾವಿದರವರೆಗೆ ಎಲ್ಲರೂ ಆ ಕ್ಲಾಸಿನಲ್ಲಿ ತುಂಬಿಕೊಂಡಿದ್ದೆವು.

ಇನ್ನು ಈ ಮಾಡೆಲ್‍ಗಳ ಕಥೆ. ಕಾಲೇಜಿನಲ್ಲಿ ಮೈಕ್ರೋಬಯಾಲಜಿ ಕಲಿಯುತ್ತಿದ್ದ ೨೦ರ ಚೀನಿ ಹುಡುಗಿ ಮಿಲಿ, ಬಟ್ಟೆ ಕಳಚಿ ವಿಗ್ರಹವಾಗುವುದಕ್ಕೆ ಮುಂಚೆ ಥಾಯ್ ಚಿ, ಯೋಗ, ಪ್ರಾಣಾಯಾಮ ಎಲ್ಲ ಒಟ್ಟು ಸೇರಿಸಿದ ೨-೩ ನಿಮಿಷದ ಒಂದು ರಿಲ್ಯಾಕ್ಸಿಂಗ್ ಎಕ್ಸರ್ಸೈಜ್ ಮಾಡುತ್ತಿದ್ದರೆ, ೪೫ರ ಅಮೆರಿಕನ್ ರಿಚರ್ಡ್, ಪೂರ್ತಿ ಬಟ್ಟೆ ಕಳಚಿದ ಬಳಿಕ ಕೈ ಬೀಸುತ್ತಾ, ತಲೆ ತಿರುಗಿಸುತ್ತಾ ಕ್ಲಾಸ್ ಪೂರ ಒಂದು ಸುತ್ತು ಸುತ್ತಿ ನಂತರ ಬಂದು ತಮ್ಮ ಜಾಗದಲ್ಲಿ ಕೂರುತ್ತಿದ್ದರು. ನಡುವೆ ಸಿಗುವ ೫-೧೦ ನಿಮಿಷದ ಬ್ರೇಕ್‍ನಲ್ಲಿ ಮತ್ತೆ ಬಟ್ಟೆ ಹಾಕಿಕೊಳ್ಳದೆ ತಮ್ಮ ಹೆಂಡತಿಯ ಜೊತೆಗೆ ಸೆಲ್‍ಫೋನಿನಲ್ಲಿ ಮಾತನಾಡುತ್ತಾ ಮಗನ ಸ್ವಿಮ್ಮಿಂಗ್ ಕ್ಲಾಸ್‍ನ ಬಗ್ಗೆಯೋ ಜ್ವರ ಬಂದು ಮಲಗಿದ್ದ ಮಗಳ ಟೆಂಪರೇಚರ್ ಕಡಿಮೆಯಾಯ್ತ  ಅಂತಲೋ ವಿಚಾರಿಸಿಕೊಳ್ಳುತ್ತಿದ್ದರು. ಯಾವ ಪೂರ್ವ ಸಿದ್ಧತೆಯೂ ಇಲ್ಲದೆ ಸುಮ್ಮನೆ ಬಟ್ಟೆ ಕಳಚಿ ತಮ್ಮ ಜಾಗಕ್ಕೆ ಬಂದು ಕೂರುತ್ತಿದ್ದ  ಅಮೆರಿಕನ್ ಅಜ್ಜಿ ೬೨ರ ವಿಕ್ಟೋರಿಯಾ, ಪ್ರತಿ ಬ್ರೇಕ್‍ನಲ್ಲೂ ಮೈಗೆ ಶಾಲು ಸುತ್ತಿಕೊಂಡು ಬಂದು ಎಲ್ಲರ ಕ್ಯಾನ್ವಾಸ್ ಮುಂದೂ ನಿಂತು ‘ನೀವೆಲ್ಲ ಎಷ್ಟು ಚೆನ್ನಾಗಿ ಪೆಯಿಂಟಿಂಗ್ ಮಾಡ್ತೀರಪ್ಪ’ ಅಂತ ಸುಳ್ಳುಸುಳ್ಳೇ  ಹೇಳಿ ನಮ್ಮನ್ನ ಉಬ್ಬಿಸುತ್ತಾ ತಮ್ಮ ಮೊಮ್ಮಕ್ಕಳ ಕೀಟಲೆ, ಕೋಟಲೆಗಳ ಕತೆಗಳನ್ನೂ ಹೇಳಿ ನಗಿಸುತ್ತಿದ್ದರು.

ಎಲ್ಲರಿಗಿಂತ ಕಲರ್ಫುಲ್ ಅನ್ನಿಸಿದ್ದು, ಕಡೆಯ ಐದು ದಿನಗಳ ಮಾಡೆಲ್ ಇಮ್ಯಾನುಯೆಲ್. ದಿನಕ್ಕೆ ನಾಲ್ಕು ಗಂಟೆಯಂತೆ ಐದು ದಿನವೂ ಒಂದೇ ಭಂಗಿಯಲ್ಲಿ ಬೆತ್ತಲಾಗಿ ಅಲುಗಾಡದೆ ನಿಲ್ಲುವುದು ಬೋರಿಂಗ್ ಎಂದು ಹೇಳುತ್ತಾ, ಅದನ್ನು ನಿವಾರಿಸಲು ಬ್ಯಾಟರಿ ಚಾಲಿತ ಬಿಂದಿಯಂಥ ಪುಟ್ಟ ಆಭರಣವೊಂದನ್ನ ತನ್ನ ಹೊಕ್ಕಳ ಮೇಲೆ ಧರಿಸಿ ನಿಲ್ಲುತ್ತಿದ್ದ. ಇಷ್ಟು ದಿನ ಬೇರೆ ಮಾಡೆಲ್‍ಗಳನ್ನು ಅವರ ಮುಂದೆ ಕುಳಿತೇ ಪೆಯಿಂಟಿಂಗ್ ಮಾಡಿದ್ದ ನಾನು, ಕಡೆಯ ಐದು ದಿನ ನನ್ನ ಚಿತ್ರಕ್ಕೆ ಮಾಡೆಲ್ ಬೆನ್ನು ಆರಿಸಿಕೊಂಡು ನಿಂತಿದ್ದರಿಂದ ಈತ ಧರಿಸುತ್ತಿದ್ದ, ಕೆಂಪಗೆ ಹೊಳೆಯುವ ಬಿಂದಿಯ ದರ್ಶನ ನನಗಾಗುತ್ತಿರಲಿಲ್ಲ. ಅವನ ಮುಂದೆ ನಿಲ್ಲುತ್ತಿದ್ದ ಜೆನಿತ್ ಮಾತ್ರ, ಅವನ ಈ ಮಿಣುಗುಟ್ಟುವ ಬಿಂದಿಯಿಂದ ತನಗೆ ತಲೆನೋವು ಬರುತ್ತಿದೆಯೆಂದೂ ಆದರೆ ಅಷ್ಟು ಹೊತ್ತೂ ನಮಗಾಗಿ ಮಾಡೆಲ್ ಮಾಡುತ್ತಾ ನಿಲ್ಲುವ ಇಷ್ಟು ಒಳ್ಳೆಯ ಹುಡುಗನಿಗೆ ಹಾಗೆ ಹೇಳುವುದು ಬೇಡವೆಂದು ಸುಮ್ಮನಿರುವುದಾಗೂ ನಮ್ಮ ಜೊತೆ ಹೇಳುತ್ತಿದ್ದಳು.

ಬಾಸ್ಟನ್‍ನ ಹಾರ್ವರ್ಡ್ ಸ್ಕ್ವೇರ್-ನಲ್ಲಿದ್ದ ಕಟ್ಟಡವೊಂದರ ಎರಡನೇ ಮಹಡಿಯ, ವಿಶಾಲವಾದ ಒಂದು ಕೊಠಡಿಯಲ್ಲಿ,  ಹಾರ್ವರ್ಡ್ ವಿಶ್ವವಿದ್ಯಾಲಯದ `ನಿರಂತರ ಕಲಿಕೆ’ ಕಾರ್ಯಕ್ರಮದಡಿ  ನಡೆಯುತ್ತಿದ್ದ ಈ  ಕ್ಲಾಸ್‍ರೂಮಿನ ಗೋಡೆಗಳ ತುಂಬ ದೊಡ್ಡ ದೊಡ್ಡ  ಕಿಟಕಿಗಳು. ಚಳಿಯ ಕಾರಣಕ್ಕೆ ಕಿಟಕಿಗಳನ್ನು ಮುಚ್ಚಿದ್ದರೂ ಧಾರಾಳ ಬೆಳಕು ಬರಲೆಂದು ಪರದೆಗಳನ್ನು ಮುಚ್ಚುತ್ತಿರಲಿಲ್ಲ. ಸುತ್ತಮುತ್ತ ಹತ್ತು ಹಲವು ಕಛೇರಿ ಕಟ್ಟಡಗಳು. ಎಲ್ಲಕ್ಕೂ ಹೀಗೇ ಒಳಗಿನದೆಲ್ಲ ಕಾಣಿಸುವ ಸ್ವಚ್ಛ ಗಾಜಿನ, ತೀರ ದೊಡ್ಡದೆನಿಸುವ ಕಿಟಕಿಗಳು. ಈ ಕಛೇರಿಗಳ ಒಳಗೆ ನಡೆಯುವ ಸಮಸ್ತ ಚಟುವಟಿಕೆಗಳೂ ನಮ್ಮ ಕ್ಲಾಸ್ ಒಳಗಿರುವವರಿಗೆ ಕಾಣಿಸುವಂತೆ, ಅಲ್ಲಿಯವರಿಗೂ ಇಲ್ಲಿನದೆಲ್ಲ ಕಾಣುತ್ತಿತ್ತು. ಅಲ್ಲಿ ಕೆಲಸ ಮಾಡುವವರು ಮತ್ತು ಅಲ್ಲಿಗೆ ಬಂದು ಹೋಗುತ್ತಿದ್ದ ನೂರಾರು ಮಂದಿ ಒಮ್ಮೆ ಕ್ಲಾಸ್ ಕಡೆ ನೋಡಿ, ಅಲ್ಲಿ ಬೆತ್ತಲೆ ನಿಂತ ಮಾಡೆಲನ್ನು ನೋಡಿದ್ದಾದರೆ ಮತ್ತೆ ಈ ಕಡೆ ತಮ್ಮ ದೃಷ್ಟಿ ಹರಿಸುತ್ತಿರಲಿಲ್ಲ.  ‘ನಮ್ಮ ಹೆಣ್ಣುಮಕ್ಕಳು ಕಡಿಮೆ ಬಟ್ಟೆ ಧರಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ’ ಎಂದು ಬೊಬ್ಬೆ ಹಾಕುವ ಮಂದಿ ಈ ಸಭ್ಯ, ಮುಕ್ತ ವಾತಾವರಣವನ್ನ ಅದು ಇರುವ ಹಾಗೆ ಒಮ್ಮೆಯಾದರೂ ನೋಡಲು ಸಾಧ್ಯವಾದರೆ ಅಂತ ನಾನು ಅಂದುಕೊಳ್ಳುತ್ತಿದ್ದೆ. ಅಮೆರಿಕಾ ಹೀಗಿದೆ ಎಂದು ಹೇಳ ಹೊರಡುವುದು, ಕುರುಡರು ಮುಟ್ಟಿ ನೋಡಿ ತಿಳಿದ ಆನೆಯ ಆಕಾರದ ಹಾಗೆ. ಯಾವುದೇ ದೇಶವನ್ನು, ಅದರ ಸಂಸ್ಕೃತಿಯನ್ನು ಒಂದು ಮಾತಲ್ಲಿ ವಿಶ್ಲೇಷಿಸಿಬಿಡುವುದು ನನ್ನ ಉದ್ದೇಶವಲ್ಲ. ನಾನಿರುವ ಈ  ದೇಶದ, ಈ ಭಾಗದ ಜನರನ್ನು, ಅವರ ಜೀವನವನ್ನು ನನ್ನ ಕಣ್ಣಿಗೆ, ಅನುಭವಕ್ಕೆ, ಅರಿವಿಗೆ ದಕ್ಕಿದಂತೆ ಬರೆಯುವ ಮತ್ತು ಆ ಮೂಲಕ ಅಮೆರಿಕಾದ ಬಗ್ಗೆ ತುಂಬಾ ಜನರಿಗೆ ಇರಬಹುದಾದ ಚಿತ್ರ ವಿಚಿತ್ರ ಸಿದ್ಧ, ಕಲ್ಪಿತ ಚಿತ್ರಗಳ ನಿಜವಾದ ಬಣ್ಣಗಳನ್ನು ತೋರಿಸುವ ಆಸೆ ನನ್ನದು.

ಅಂತೂ ಅದೊಂದು ಚಳಿಗಾಲದಲ್ಲಿ, ನನ್ನಷ್ಟೆ ಭಾರವಿದ್ದ ನನ್ನ ಆರ್ಟ್ ಬೈಂಡರ್-ಅನ್ನು ಹೊತ್ತು, ದಿನವೂ ನಿಲ್ಲಿಸಿದೆಡೆಯೇ ಹಿಮದಲ್ಲಿ ಹೂತು ಹೋಗಿರುತ್ತಿದ್ದ ನನ್ನ ಕಾರು ಹೊರತೆಗೆದು, ಮತ್ತೆ ಟ್ರೈನ್ ಹಿಡಿದು ನಾನಿದ್ದ ಸಬರ್ಬನ್ ಊರಿನಿಂದ ಬಾಸ್ಟನ್‍ಗೆ ಬಂದು ಹಲ್ಲು ಕಟಕಟಿಸುತ್ತಾ ಮಿನಿ ಅಮೆರಿಕಾದಂತಿದ್ದ ಆ ಬಣ್ಣದ  ಕ್ಲಾಸಿಗೆ  ಸೇರಿಕೊಳ್ಳುತ್ತಿದ್ದೆ. ಅಲ್ಲಿ ಹೆಸರು, ಚಹರೆ ಎಲ್ಲ ಕಳೆದುಕೊಂಡು ಬರೀ ದೇಹವಾಗಿ ನಿಲ್ಲುತ್ತಿದ್ದ ಮಾಡೆಲ್ಗಳನ್ನು ಬಣ್ಣಗಳಾಗಿ, ಆಕೃತಿಗಳಾಗಿ ತುಂಬಿಸಿಕೊಳ್ಳುತ್ತಿದ್ದ ಕ್ಯಾನ್ವಾಸ್ ಎದುರು ನಿಂತ ಕ್ಷಣ ಬೇರೆ ಎಲ್ಲವೂ ಮರೆತು ಹೋಗುತ್ತಿತ್ತು.

ಎರಡು ಮೂರು ದಿನಕ್ಕೊಮ್ಮೆ ನನ್ನ ಈ ಪೆಯಿಂಟಿಂಗ್‍ಗಳನ್ನು ನೋಡಲು ಮನೆಗೆ ಬರುತ್ತಿದ್ದ ನನ್ನ ಗುಜರಾತಿ ಗೆಳತಿ ನಾಚಿಕೊಳ್ಳುತ್ತಾ ಕೆಂಪು ಕೆಂಪಾಗುತ್ತಾ ‘ಈ ಮಾಡೆಲ್ಗಳು ಅದು ಹ್ಯಾಗೆ ನಾಚಿಕೆಯಿಲ್ಲದೆ ನಿಮ್ಮ ಮುಂದೆ ನಿಲ್ತಾರೋ, ನೀವೆಲ್ಲ ಅದ್‍ಹ್ಯಾಗೆ ನಾಚಿಕೆ ಬಿಟ್ಟು ಈ ಚಿತ್ರಗಳನ್ನ ಬಿಡಿಸುತ್ತೀರೋ’ ಎನ್ನುತ್ತಿದ್ದಳು. ‘ನೀನು ಅದು ಹ್ಯಾಗೆ ನಾಚಿಕೆಯಿಲ್ಲದೆ ಈ ಬೆತ್ತಲೆ ಚಿತ್ರಗಳನ್ನ ನೋಡ್ತೀಯೋ’ ಅಂತ ನಾನು ರೇಗಿಸಿದರೆ ಇನ್ನೂ ಕೆಂಪಾಗುತ್ತಿದ್ದಳು. ಇವಳ ಜೊತೆಗೇ ಬರುತ್ತಿದ್ದ , ದೆಹಲಿಯ ಇನ್ನೊಬ್ಬ  ಗೆಳತಿ ಮಾತ್ರ ಹಾಗೇನೂ ನಾಚಿಕೊಳ್ಳದೆ, ನಾನು ಬಳಸಿದ ಬಣ್ಣ ತುಂಬಾ ಢಾಳಾಯ್ತು ಅಂತಲೋ, ದೇಹದ ಆಕಾರ ಪ್ರಪೋರ‍್ಷನೇಟ್ ಆಗಿ ಬಂದಿಲ್ಲ ಅಂತಲೋ ವಿಮರ್ಶೆ ಮಾಡುತ್ತಿದ್ದಳು.

‘ದೇಹ ಬರೀ ಬಟ್ಟೆಯ ಹಾಗೆ, ಆತ್ಮ ನಿರಾಕಾರ’ ಎಂಬ ತತ್ವದ ಜೊತೆಗೇ ಬೆತ್ತಲೆ ದೇಹಕ್ಕೆ ನಾಚಿಕೊಳ್ಳುವುದನ್ನೂ  ಅಲ್ಲದೆ, ಬೆತ್ತಲೆಯ ಜೊತೆಗೆ ಗಂಟು ಹಾಕಬಾರದ್ದೆಲ್ಲವನ್ನೂ ಗಂಟು ಹಾಕುವ ಮಂದಿಯನ್ನ ಎದುರಿಸಬೇಕಾದ ಅನಿವಾರ್ಯತೆಯನ್ನೂ ಕಲಿಸಿದ ದೇಶದಿಂದ ಬಂದ ನಾವು ಮೂವರೂ ಮಸಾಲ ಟೀ ಕುಡಿಯುತ್ತಾ, ಹುರಿಗಾಳು ಮೆಲ್ಲುತ್ತಾ ನನ್ನ ಪೆಯಿಂಟಿಂಗ್‍ಗಳ ಕಟು ವಿಮರ್ಶೆ ಮಾಡುತ್ತಾ ಕೂರುತ್ತಿದ್ದ ಆ ಸಂಜೆಗಳಲ್ಲಿ, ನನ್ನ ರಷ್ಯನ್ ಇನ್ಸ್‍ಟ್ರಕ್ಟರ್ ಹೇಳುತ್ತಿದ್ದ ‘ಕೇವಲ ಬಿಳಿ ಮತ್ತು ಕೇವಲ ಕಪ್ಪು ಎಂಬ ಎರಡು ಬಣ್ಣಗಳು ಇಡೀ ಸೃಷ್ಟಿಯಲ್ಲಿ ಎಲ್ಲೂ ಇರುವುದು ಸಾಧ್ಯವೇ ಇಲ್ಲ’ ಎಂಬ ಮಾತು ನಿಜವಾ ಅಂತ ಒಬ್ಬರನ್ನೊಬ್ಬರು ಕೇಳಿಕೊಳ್ಳುತ್ತಿದ್ದೆವು. ಈಗ ಆ ತರಗತಿಗಳು ಮುಗಿದು ಎಷ್ಟೋ ವರ್ಷಗಳಾದ ಬಳಿಕವೂ ಇಲ್ಲದ ಕಪ್ಪು-ಬಿಳಿ ಬಣ್ಣವನ್ನೂ ಎಲ್ಲೆಡೆ ಇದ್ದೂ ಅಷ್ಟು ಸುಲಭಕ್ಕೆ ಕಾಣಿಸದ ಹತ್ತಾರು ಬಣ್ಣಗಳ ಹಲವಾರು ಛಾಯೆಗಳನ್ನೂ ಇನ್ನೂ ಹುಡುಕುತ್ತಲೇ ಇರುವೆ.

One Response

  1. Anonymous
    April 29, 2017

Add Comment

Leave a Reply