Quantcast

ಮೋಹನ್ ಲಾಲ್ ಎನ್ನುವ ಯಕ್ಷನ ‘ವಾನಪ್ರಸ್ಥಂ’

ಮಲಯಾಳಂ ಚಿತ್ರಗಳಲ್ಲಿ ಮುಮ್ಮಟ್ಟಿ, ಮೋಹನ್ ಲಾಲ್ ಇಬ್ಬರೂ ತಾರೆಯರೂ ಹೌದು, ಕಲಾವಿದರೂ ಹೌದು. ಆದರೂ ಇಬ್ಬರ ಚಿತ್ರಗಳನ್ನೂ ನೆನೆಸಿಕೊಂಡಾಗ ಮೋಹನ್ ಲಾಲ್ ಒಂದಿಷ್ಟು ಹೆಚ್ಚಿಗೆ ತೂಗಿಬಿಡುತ್ತಾರೆ. ’ಯಾರಿಗೂ ಸೋಲೆನು’ ಎನ್ನುವಂತಿರುವ ಮುಮ್ಮುಟ್ಟಿಯ ಎದಿರು ’ನಿನಗಾಗಿ ಸೋಲುತ್ತೇನೆ ಬಿಡು’ ಎನ್ನುವಂತಿರುವ ಮೋಹನ್ ಲಾಲ್ ಹೆಚ್ಚು ಪ್ರೀತಿಪಾತ್ರನಾಗುತ್ತಾನೆ.

’ವಾನಪ್ರಸ್ಥಂ’ ನನ್ನ ಬಹುದಿನಗಳ ಕನಸು. ಆದರೆ ಅದನ್ನು ನೋಡುವ ಅವಕಾಶ ಸಿಕ್ಕಿದ್ದು ನಿನ್ನೆ. ಚಿತ್ರ ನೋಡಿದವಳ ಮನಸ್ಸಿನಲ್ಲಿ ಕಡಲಿನ ತಲ್ಲಣ. ಅದೊಂದು ದೃಶ್ಯಕಾವ್ಯ, ಅಲ್ಲಿ ಕಾವ್ಯ ಇರುವುದು ಮೋಹನ್ ಲಾಲ್ ಕಣ್ಣುಗಳಲ್ಲಿ. ಒಂದು ಶಾಪಗ್ರಸ್ಥ ಬದುಕನ್ನು ಕಲ್ಪಿಸಿಕೊಳ್ಳಿ, ಪ್ರತಿ ದಿನ, ಪ್ರತಿ ಸಂಬಂಧದಲ್ಲೂ ನಿರಾಕರಣೆಗೆ ಒಳಗಾದವನ ನೋವನ್ನು ಕಲ್ಪಿಸಿಕೊಳ್ಳಿ. ಅಲ್ಲಿ ದುಃಖ, ಅವಮಾನ ಒಂದು ಸೀನ್, ಅಥವಾ ಒಂದು ಫ್ರೇಂ ಗೆ ಸಂಬಂಧಿಸಿದ್ದಲ್ಲ. ಅವನ ದೇಹದ ಪ್ರತಿ ಅವಯವದಲ್ಲೂ, ಅವನ ಪ್ರತಿ ನಡೆ ನುಡಿಯಲ್ಲೂ ಆ ನೋವು ಹತಾಶೆ ಕಾಣಬೇಕು. ಹಾಗೆ ಪ್ರತಿ ದೃಶ್ಯದಲ್ಲೂ ನೋವನ್ನು ಮೈಯ ಚರ್ಮವಾಗಿ ಹೊದ್ದಂತೆ ಅಭಿನಯಿಸಿರುವ ಮೋಹನ್ ಲಾಲ್ ನಟನೆ ಅನುಭವಿಸಲಿಕ್ಕೆಂದೇ ಆ ಚಿತ್ರ ನೋಡಬೇಕು.

ಒಬ್ಬ ಬ್ರಾಹ್ಮಣ ನಂಬೂದರಿ ಮತ್ತು ಆತನ ಕೆಲಸದಾಳುವಿಗೆ ಹುಟ್ಟಿದ ಮಗು ಕುಂಜಿಕುಟ್ಟನ್. ತಂದೆ ಅವನನ್ನು ಎಂದಿಗೂ ಮಗ ಎಂದು ಒಪ್ಪಿಕೊಳ್ಳಲಾರ, ಆ ಮಟ್ಟಿಗೆ ಅವನದು ಶಪಿತ ಬದುಕು. ಆದರೆ ಅವನ ಬದುಕಿನ ಶಾಪ ಅಷ್ಟೇ ಅಲ್ಲ. ಅವನ ಮಗಳನ್ನು ಹೊರತು ಪಡಿಸಿ ಅವನು ಆತುಗೊಳ್ಳಬಯಸುವ ಯಾವ ಸಂಬಂಧವೂ ಅವನ ಕೈಹಿಡಿಯುವುದಿಲ್ಲ. ಅವನು ಅನುಭವಿಸುವ ಅತಂತ್ರ, ಒಂಟಿತನ, ಹತಾಶೆ ಎಲ್ಲವನ್ನೂ ಕಟ್ಟಿಕೊಡಲು ನಿರ್ದೇಶಕ ಶಾಜಿ ಕರುಣ್ ಕಥಕ್ಕಳಿಯ ಮಾಧ್ಯಮವನ್ನು ಬಳಸಿಕೊಳ್ಳುತ್ತಾರೆ. ಕಥಕ್ಕಳಿ ಒಂದು ವರ್ಣಭರಿತ ಕಲಾ ಮಾಧ್ಯಮ. ಕೈಯ ಮುದ್ರೆ, ಮುಖದ ಕದಲಿಕೆಗಳಲ್ಲಿ ನೂರು ನೂರು ಭಾವಗಳು ಜೀವತಳೆಯುತ್ತವೆ. ಅದಕ್ಕೆ ನೆರವಾಗುವ ಹಾಗೆ ಮುಖಾಲಂಕಾರ, ಉಡುಗೆ ತೊಡುಗೆ. ಮುಖಭಾವದಲ್ಲಿ, ಕಣ್ಣುಗಳಲ್ಲಿ ಹಲವು ಪುಟಗಳ ಸಂಭಾಷಣೆ ವ್ಯಕ್ತ ಪಡಿಸುವ ಮೋಹನ್ ಲಾಲ್ ಗೆ ಇದು ಅವರಿಗೆಂದೇ ಹೊಲಸಿಟ್ಟ ಉಡುಪು. ಜೊತೆಗೆ ಸಂತೋಷ್ ಶಿವನ್ ಛಾಯಾಗ್ರಹಣ, ಜಾಕಿರ್ ಹುಸೇನ್ ಸಂಗೀತ, ಸುಹಾಸಿನಿ ಮತ್ತಿತರರ ಸಹಾಭಿನಯ ಈ ಚಿತ್ರವನ್ನು ಕ್ಲಾಸಿಕ್ ಆಗಿಸಿಬಿಡುತ್ತದೆ.

ಚಿತ್ರ ಪ್ರಾರಂಭವಾದಾಗ ಜೋರಾದ ಗುಡುಗು. ಚಂಡೆ ಬಾರಿಸುವವನೊಬ್ಬ ಅದನ್ನು ವಿವರಿಸಬೇಕಾದರೆ ಏನೆಂದು ಹೇಳಿಯಾನು? ’ಅಬ್ಬಬ್ಬಾ ಇದೇನಿದು, ಇಂದು ಆ ಶಿವನೇ ಚಂಡೆ ಭಾರಿಸುತ್ತಿರುವಂತಿದೆ!’. ಹಾಗೆ ಶಿವ ಚಂಡೆ ಭಾರಿಸುತ್ತಿರುವಾಗ ಕುಣಿಯುವವರು ಯಾರು? ಆ ಪರಶಿವನ ಚಂಡೆಗೆ ಕುಣಿಯಬಲ್ಲವನು ಈ ಕುಂಜಿಕುಟ್ಟನ್. ಅವನ ಕಲ್ಪನೆಯಲ್ಲಿ ಕುಣಿಯುತ್ತಿದ್ದ ಕುಂಜಿಕುಟ್ಟನ್ ಇದ್ದಕ್ಕಿದ್ದಂತೆ ಬುಡಕಡಿದ ಬಾಳೆಯಂತೆ ನೆಲಕ್ಕುರುಳುತ್ತಾನೆ. ಕನಸು ಹರಿಯುತ್ತದೆ, ಚಿತ್ರ ಶುರುವಾಗುತ್ತದೆ.

ಕುಂಜಿಕುಟ್ಟನ್ ಸಮಾಜದ ನಿರಾಕರಣೆಗೊಳಗಾದ ಕೂಸು. ಅವಮಾನ ಅವನ ದಿನನಿತ್ಯದ ವಾಸ್ತವ. ಅವನು ಕಥಕ್ಕಳಿ ಕಲಿತರೆ ಬಡತನದ ಬದುಕಿಗೆ ಆಸರೆ ಆದೀತು ಎಂದು ತಾಯಿ ಅವನನ್ನು ಕಥಕ್ಕಳಿಯ ಶಾಲೆಗೆ ಕಳಿಸುತ್ತಾಳೆ. ಹಾಗೆ ಹೊಟ್ಟೆಪಾಡಿಗಾಗಿ ಕಥಕ್ಕಳಿ ಕಳಿಯಲು ಬಂದವನಿಗೆ ಕಥಕ್ಕಳಿ ಹೊಸ ಜಗತ್ತನ್ನೇ ತೋರಿಸುತ್ತದೆ. ಇಲ್ಲಿ ಆತ ಲೋಕನಿಂದಿತನಲ್ಲ, ಕೇವಲ ’ಭಾಗೀರತಿಯ ಮಗ’ನಲ್ಲ. ಇಲ್ಲಿ ಆತ ಏನು ಬೇಕಾದರೂ ಆಗಬಲ್ಲ, ಯಾರು ಬೇಕಾದರೂ ಆಗಬಲ್ಲ, ಯಕ್ಷ, ಗಂಧರ್ವ, ಅರ್ಜುನ, ಕೃಷ್ಣ, ಸುಭದ್ರೆ…. ಎಲ್ಲವೂ ಆಗಬಲ್ಲ. ಆತನ ಮಟ್ಟಿಗೆ ಅದೇ ದೊಡ್ಡ ವಿಮೋಚನೆ.

ರಂಗಸ್ಥಳವನ್ನು ಬಿಟ್ಟರೆ ಅವನ ಬದುಕಿನಲ್ಲಿ ಆರ್ದ್ರತೆ ತುಂಬುವ ಯಾವ ಸಂಬಂಧವೂ ಅವನಿಗಿಲ್ಲ. ತಾಯಿ ಸದಾ ಕಳೆದುಕೊಂಡ ನೋವಿನಲ್ಲಿ ನವೆಯುವವಳು. ಹೆಂಡತಿಗೆ ಇವನು ಒಲ್ಲದ ಗಂಡ. ತನ್ನ ಅಸಹನೆಯನ್ನು ಮುಚ್ಚಿಡುವ ಪ್ರಯತ್ನವನ್ನೂ ಮಾಡುವುದಿಲ್ಲ. ಅವನ ಜೀವನದ ನಗು ಆತನ ದೇವತೆಯಂತಹ ಮಗಳು ಮಾತ್ರ. ’ಚಂಡೆಗೆ ಮೋಕ್ಷ ಸಿಗುವುದು ಅದನ್ನು ಯಾರಾದರೂ ಭಾರಿಸಿದರೆ ಮಾತ್ರ’ ಎಂದು ನಂಬಿದ ಅವನು ಯಾರನ್ನೂ ಪ್ರೀತಿಸಲಾರದೆ, ಯಾರ ಪ್ರೀತಿಗೂ ಒಳಗಾಗದೆ ಬದುಕುತ್ತಿರುತ್ತಾನೆ. ಚಿತ್ರದ ಶುರುವಿನಲ್ಲಿ ಚರ್ಮ ಹರಿದುಕೊಳ್ಳುವ ಚಂಡೆ, ಹಸಿರು ಮರ ಸುಡುವ ಸಿಡಿಲು.. ಜೊತೆಯಲ್ಲೇ ಆ ದೇವತೆಯಂತಹ ಮಗುವಿನ ನಗು ಕಾಣುತ್ತದೆ, ಆತನ ಬದುಕೆಂದರೂ ಥೇಟ್ ಇದೇ.

ಹೀಗೆ ಬದುಕುತ್ತಿರುವ ಕುಂಜಿಕುಟ್ಟನ್ ಬದುಕಿನಲ್ಲಿ ಮತ್ತೊಂದು ಪಾತ್ರದ ಪ್ರವೇಶವಾಗುತ್ತದೆ. ಆ ಪಾತ್ರದ ಗುಣವಿಶೇಷವನ್ನು ನಿರ್ದೇಶಕ ಶಾಜಿ ಒಂದೇ ಫ್ರೇಂ ನಲ್ಲಿ ಕಟ್ಟಿಕೊಡುತ್ತಾರೆ. ಕುಂಜಿಕುಟ್ಟನ್ ಕಥಕ್ಕಳಿ ಆಡುತ್ತಿರುತ್ತಾನೆ. ಅದೊಂದು ಅರಮನೆ, ಅಲ್ಲಿ ಒಂದು ಚಿತ್ತಾರದ ಕಿಟಕಿ. ಸುಂದರ ಒಡವೆಗಳನ್ನು ಧರಿಸಿದ ಕೈಯೊಂದು ಅಲ್ಲಿ ಕಾಣಿಸುತ್ತದೆ. ಅದು ನಿಜವೆ, ಕನಸೆ? ವಾಸ್ತವ ಮತ್ತು ಅವಾಸ್ತವಗಳ ನಡುವಿನ ಲೋಕಕ್ಕೆ ಸೇರಿದಂತೆ ಕಾಣುವ ಆ ಕೈಯ ಒಡತಿ ದಿವಾನರ ಸೊಸೆ. ಆಕೆ ಅವಾಸ್ತವ ಜಗತ್ತಿನಲ್ಲಿಯೇ ಹೆಚ್ಚು ಬದುಕುವವಳು. ಅವಳ ಹೆಸರು ಸುಭದ್ರ. ತಾನು ಮಹಾಭಾರತದ ಸುಭದ್ರೆ ಎಂದೇ ಭಾವಿಸುವ ಆಕೆ ಕಾಯುತ್ತಿರುವುದು ಅವಳ ಲೋಕದ ಅರ್ಜುನನಿಗಾಗಿ.

ಮೊದಲ ಸಲ ಅವರಿಬ್ಬರು ಸಂಧಿಸುವ ದೃಶ್ಯ ಸಂತೋಶ್ ಶಿವನ್ ಮಾಂತ್ರಿಕತೆಗೆ ಸಾಕ್ಷಿ. ಮಹಡಿಯ ಮೇಲೆ ಒಂದು ಉದ್ದದ ಹಾದಿ, ಆಚೀಚೆ ಮರದ ಕುಸುರಿಕೆಲಸ, ಅವುಗಳ ನೆರಳು ಬೆಳಕು. ಕಥಕ್ಕಳಿಯ ಹಾಡಿನ ಒಂದು ಸಾಲನ್ನು ಗುನುಗುನಿಸುತ್ತಾ ಕುಂಜಿಕುಟ್ಟನ್ ಬರುತ್ತಿರುವಾಗ ಅರ್ಧದಾರಿಯಲ್ಲಿ ಅದೇ ರಾಗ ಗುನುಗುನಿಸುತ್ತಾ ಅವನಿಗೆ ಈಕೆ ಯಕ್ಷಿಯಂತೆ ಎದುರಾಗುತ್ತಾಳೆ. ಆ ಹಾಡಿನಲ್ಲಿ ಭಾವಕ್ಕೆ ಕೊಡಬೇಕಾದ ಒತ್ತಿನ ಬಗ್ಗೆ ನಯವಾಗಿಯೇ ಸೂಚಿಸುತ್ತಾಳೆ. ಆತ ಹಾಡುವ ಹಾಡಿನಲ್ಲಿ ಭಾವನೆಗಳ ಬಗ್ಗೆ ಹೇಳುವ ಅವಳು ಅವನಿಗೆ ’ಭಾವಿಸು’ವುದನ್ನು ಕಲಿಸುತ್ತಾಳೆ. ಏನಾಗಿರಬೇಡ ಕುಂಜಿಕುಟ್ಟನ್ ಪರಿಸ್ಥಿತಿ. ಇದುವರೆವಿಗೂ ಹೆಣ್ಣೊಂದು ಅವನನ್ನು ಪ್ರೀತಿಯಿಂದ ಮಾತನಾಡಿಸಿಯೇ ಇಲ್ಲ. ಇಲ್ಲಿ ಈ ದಿವಾನರ ಮನೆಯ ಸೊಸೆ ತನ್ನ ಜೊತೆಗೆ ಅಷ್ಟು ಅಭಿಮಾನದಿಂದ ಮಾತನಾಡುತ್ತಿದ್ದಾಳೆ. ಅವರಿಬ್ಬರ ಪರಿಚಯ ಬೆಳೆಯುವಾಗ ಅವರಿಬ್ಬರೂ ಹತ್ತಿರವಾದದ್ದನ್ನು ನಿರ್ದೇಶಕರು ಒಂದೇ ದೃಶ್ಯದಲ್ಲಿ ತೋರಿಸುತ್ತಾರೆ. ಅವರಿಬ್ಬರೂ ಮಾತನಾಡುತ್ತಾರೆ, ಆದರೆ ಮಾತುಗಳ ಮೂಲಕವಲ್ಲ, ಕಥಕ್ಕಳಿಯ ಮುದ್ರೆಗಳ ಮೂಲಕ. ಅದೇನು ಎಂದು ನಿರ್ದೇಶಕರು ಪ್ರೇಕ್ಷಕರಿಗೆ ವಿವರಿಸುವುದೂ ಇಲ್ಲ, ಅದು ಅವರಿಬ್ಬರ ಲೋಕ, ಅಲ್ಲಿ ಮೂರನೆಯವರಿಗೆ ತಾವಿಲ್ಲ.

ಆಕೆಯದು ಒಂದೇ ಆಸೆ, ’ಸುಭದ್ರಾಪಹರಣಂ’ ಎನ್ನುವ ಕಥಕ್ಕಳಿ ಪ್ರಸಂಗವನ್ನು ಆಕೆ ಬರೆಯಬೇಕು, ಕುಂಜಿಕುಟ್ಟನ್ ಅದನ್ನು ಅಭಿನಯಿಸಬೇಕು. ಆಲ್ಲಿಂದ ಎಲ್ಲೇ ಆತನ ಕಥಕ್ಕಳಿ ವೇಷ ಇದ್ದರೂ ಅವಳು ಹಾಜರ್. ಅವರಿಬ್ಬರ ನಡುವೆ ಹೆಸರಿಲ್ಲದ ಸಂಬಂಧವೊಂದು ಬೆಳೆಯುತ್ತಾ ಹೋಗುತ್ತದೆ. ಆದರೆ ಇಲ್ಲಿ ಒಂದು ತೊಡಕಿದೆ. ಅವಳು ಪ್ರೀತಿಸುವುದು ದೇವೇಂದ್ರನ ಮಗ ಅರ್ಜುನನನ್ನು. ಇವನು ಆ ವೇಷ ಹಾಕುತ್ತಾನೆಯಾದ್ದರಿಂದ, ಆ ವೇಷ ಹಾಕಿದಾಗ ಇವನನ್ನು. ಆದರೆ ಅವನು ಅವಳನ್ನು ಪ್ರೀತಿಸುವುದು ಅರ್ಜುನ ವೇಷದ ಒಳಗಿನ ಕುಂಜಿಕುಟ್ಟನ್ ಆಗಿ.

ಅವರಿಬ್ಬರ ಮಿಲನದ ಸನ್ನಿವೇಶವನ್ನು ಶಾಜಿ ಅತ್ಯಂತ ಕಲಾತ್ಮಕವಾಗಿ ಚಿತ್ರಿಸಿದ್ದಾರೆ, ಕಪ್ಪಾದ ರಾತ್ರಿ, ಹಿನ್ನಲೆಯಲ್ಲಿ ಚಂಡೆಯ ಸದ್ದು. ಮಣ್ಣಿನ ಹಣತೆಯೊಂದರಲ್ಲಿ ಬೇರೆಬೇರೆಯಾಗಿ ಉರಿಯುತ್ತಿರುವ ಎರಡು ಸೊಡರುಗಳು ನಂತರ ಒಂದೇ ಆಗಿ ಉರಿಯಲಾರಂಭಿಸುತ್ತದೆ. ಬಾಗಿಲು ತೆಗೆದುಕೊಂಡು ಕುಂಜಿಕುಟ್ಟನ್ ಹೊರಗೆ ಬರುತ್ತಾನೆ. ಅವನ ನಡೆಯಲ್ಲಿ ತಪ್ಪಿತಸ್ಥ ಭಾವ. ಬೇಗ ಬೇಗ ಕೊಳಕ್ಕೆ ಹೋಗಿ ಬಣ್ಣ ತೊಳೆದುಕೊಳ್ಳುತ್ತಾನೆ. ಅವನೀಗ ಬಣ್ಣ ಕಳಚಿಟ್ಟ ಅರ್ಜುನ.

ಇವನಿಗೆ ಸಂಪೂರ್ಣ ವ್ಯತಿರಿಕ್ತವಾಗಿ ಸುಭದ್ರೆ ಇದ್ದಾಳೆ. ಅವನ ಮುಖಾಲಂಕಾರದ ಬಣ್ಣವೆಲ್ಲಾ ಈಗ ಇವಳ ಮುಖದ ಮೇಲೆ, ಮೈಮೇಲೆ. ಅವಳು ಬಣ್ಣವನ್ನೇ ಮೋಹಿಸಿದವಳು. ಈಗ ತನ್ನ ದೇಹದ ಮೇಲೆ ಉಳಿದ ಬಣ್ಣವನ್ನು ನೋಡಿ ಸಂಭ್ರಮಿಸುತ್ತಾಳೆ. ಅವಳು ಮೋಹಿಸಿದ್ದು ತನ್ನ ವೇಷವನ್ನು ಎನ್ನುವ ಅರಿವು ಅವನ ಆತ್ಮಕ್ಕಾಗಿದೆ, ಅವನಲ್ಲಿ ಮಿಲನದ ಸಂಭ್ರಮವೂ ಇಲ್ಲ, ಸಿಹಿ ನೆನಪೂ ಇಲ್ಲ. ಆದರೆ ಅವಳು ತನ್ನ ವೇಷ ಕಳಚೇ ಇಲ್ಲ. ಅವಳು ತನ್ನ ಮುಖವನ್ನಷ್ಟೇ ಅಲ್ಲ ಪ್ರತಿಬಿಂಬದ ಮುಖವನ್ನೂ ನೀರಿನಿಂದ ತೊಳೆಯುತ್ತಾಳೆ. ಅವಳ ಮಟ್ಟಿಗೆ ನಿಜ ಮತ್ತು ನೆರಳು ಎರಡೂ ಕಲಸಿ ಹೋಗಿವೆ.

ಅವಳ ಮತ್ತೆ ಬರುವಳೆ ಎನ್ನುವ ತಪನೆಯಲ್ಲಿ ಅವನು ಕಾಯುತ್ತಿರುತ್ತಾನೆ. ಅಷ್ಟರಲ್ಲಿ ಅವನನ್ನು ಎಂದೂ ಒಪ್ಪಿಕೊಳ್ಳದ ಅವನ ತಂದೆ ಅವನ ಹೆಸರಿಗೆ ಒಂದಿಷ್ಟು ಜಮೀನು ಬರೆದಿದ್ದು, ಆ ಪತ್ರ ಅವನ ಕೈಗೆ ಸಿಗುತ್ತದೆ. ಪತ್ರವನ್ನು ಸುಟ್ಟು ಹಾಕುವ ಅವನು ಅಪ್ಪನಿಲ್ಲದೆ ಕಳೆದ ತನ್ನೆಲ್ಲಾ ವರ್ಷಗಳ ಯಾತನೆಯನ್ನು ಈ ಜಮೀನು ಕಳೆಯಬಲ್ಲುದೆ ಎಂದು ಇರುಳೆಲ್ಲಾ ಗೋಳಾಡುತ್ತಾನೆ.

ಸುಭದ್ರೆ ಈಗ ಗರ್ಭಿಣಿ. ಅದನ್ನು ಅವನಿಗೆ ಹೇಳಬೇಕು. ಅವನು ಚೌಕಿಮನೆಯಲ್ಲಿ ವೇಷ ಹಾಕಿಸಿಕೊಳ್ಳುತ್ತಿರುತ್ತಾನೆ. ಇವನ ವೇಷದ ಅಲಂಕಾರ ಮುಗಿದಾಗ ಎದ್ದು ನೋಡುತ್ತಾನೆ, ಸುಭದ್ರಾ ಒಳಗೆ ಬರುತ್ತಿರುತ್ತಾಳೆ. ಕೈಚಾಚುತ್ತಲೇ ಬಂದ ಇವನು, ’ತುಂಬಾ ಹೊತ್ತು ಕಾದೆಯಾ’ ಎಂದು ಕಾತರದಲ್ಲಿ ಕೇಳುತ್ತಾನೆ. ಆದರೆ ಅವಳು ನಿರಾತಂಕವಾಗಿ ’ನೀನು ಕಿರೀಟ ಹಾಕಿಕೊಳ್ಳಲಿ ಎಂದು ಕಾಯುತ್ತಿದ್ದೆ’ ಎನ್ನುತ್ತಾಳೆ. ಅಂದರೆ ಅವಳು ತಾನು ಗರ್ಭಿಣಿ ಎಂದು ಹೇಳುವುದೂ ಸಹ ಅವನು ಕಿರೀಟಿ ಆದಮೇಲೆಯೇ, ಹೇಳುವುದೂ ಸಹ ’ಅಭಿಮನ್ಯು ಬರುತ್ತಿದ್ದಾನೆ’ ಎಂದೇ. ಅಷ್ಟು ಹೇಳಿದವಳು ಅಲ್ಲಿಂದ ಹೊರಟುಬಿಡುತ್ತಾಳೆ. ಇವನು ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾನೆ, ಅಲ್ಲಿ ಅರ್ಜುನ ಕಾಣುತ್ತಾನೆ, ಇವನ ಕಣ್ಣುಗಳು ಅಯಾಚಿತವಾಗಿ ತುಂಬಿಕೊಳ್ಳುತ್ತವೆ.

ಆಮೇಲೆ ಅವನ ಪತ್ರಗಳಿಗೆ ಅವಳು ಉತ್ತರಿಸುವುದಿಲ್ಲ, ಭೇಟಿಯಾಗಲು ಬಂದರೆ ಒಳಗಿದ್ದೂ ಇಲ್ಲಾ ಎಂದು ಹೇಳಿಸುತ್ತಾಳೆ. ಅವನು ಅವಳನ್ನು ಸಂಪರ್ಕಿಸಲು ಪ್ರಯತ್ನ ಪಡುತ್ತಲೇ ಇರುತ್ತಾನೆ. ಕಡೆಗೊಮ್ಮೆ ಅವಳು ಬರುತ್ತಾಳೆ, ಅವನು ಅರ್ಜುನನಾಗಿದ್ದಾಗಲೇ ಬರುತ್ತಾಳೆ. ಜನ್ಮವಿಡೀ ಅಪ್ಪನ ಸ್ಪರ್ಶವನ್ನೇ ಕಾಣದ ಮಗ ಇವನು, ಮೊದಲ ಬಾರಿ ತನ್ನ ಮಗುವನ್ನು ಸ್ಪರ್ಶಿಸಲಿದ್ದಾನೆ. ಅದೇ ವೇಷದಲ್ಲೇ ಧಾವಿಸಿ ಬಂದು ಮಗುವನ್ನು ಎತ್ತಿಕೊಳ್ಳುತ್ತಾನೆ, ಎದೆಗಪ್ಪಿಕೊಳ್ಳುತ್ತಾನೆ, ಮೂಸುತ್ತಾನೆ. ಆದರೆ ಅವಳು ಹಿಮದ ಗೊಂಬೆ. ನಿರ್ದಾಕ್ಷಿಣ್ಯವಾಗಿ ’ಇವನು ಅರ್ಜುನನ ಮಗ, ಕುಂಜಿಕುಟ್ಟನ್ ಮಗನಲ್ಲ.’ ಮತ್ತೆಂದಿಗೂ ಅವನು ತನ್ನನ್ನಾಗಲೀ ತನ್ನ ಮಗುವನ್ನಾಗಲೀ ನೋಡಲು ಪ್ರಯತ್ನಿಸಬಾರದು. ತಾನು ಎಂದಿಗೂ ಅವನನ್ನು ನೋಡಬಯಸುವುದಿಲ್ಲ ಎಂದು ಹೇಳುತ್ತಾಳೆ. ಅವಳು ಅವನಿಗೆ ತನ್ನ ಕಷ್ಟ ಹೇಳುವುದಿಲ್ಲ, ಒಪ್ಪಿಕೋ ಎಂದು ಅನುನಯಿಸುವುದಿಲ್ಲ, ನಿನಗೆ ಇದು ಒಪ್ಪಿಗೆಯೇ ಎಂದು ಕೇಳುವುದಿಲ್ಲ. ತನ್ನ ತೀರ್ಪನ್ನು ಮಾತ್ರ ಕೊಟ್ಟುಬಿಡುತ್ತಾಳೆ. ಅವಳ ಕ್ರೌರ್ಯ ಇರುವುದು ಅಲ್ಲಿ.

ಇಡೀ ಸನ್ನಿವೇಶದಲ್ಲಿ ಅವನದು ಒಂದೂ ಮಾತಿಲ್ಲ. ಸುಮ್ಮನೆ ಮಗುವನ್ನು ಎದೆಗವುಚಿಕೊಂಡು ನಿಂತಿರುತ್ತಾನೆ. ಎಲ್ಲಾ ಮುಗಿದು, ಮಗುವನ್ನು ಅವನ ಕೈಗಳಿಂದ ಕಿತ್ತುಕೊಂಡು ಅವಳು ಹೋದಮೇಲೆ ಅವನು ಮೌನವಾಗಿ ಎದೆಯ ಮೇಲೆ ಕೈಯಿಟ್ಟುಕೊಳ್ಳುತ್ತಾನೆ, ಅವಳ ಕಾರಿನ ದೀಪ ಅವನ ಮುಖದ ಮೇಲೆ ಫೋಕಸ್ ಆಗುತ್ತದೆ, ಅವನ ಮುಖದ ಸ್ನಾಯುಗಳು ಕಂಪಿಸುತ್ತಿರುತ್ತವೆ, ದುಃಖವನ್ನು ಅದುಮಿಡುವ ಅವನ ಎಲ್ಲಾ ಪ್ರಯತ್ನವನ್ನೂ ಮೀರಿ ಒಂದು ’ಹುಂ’ ಕಾರ ಮಾತ್ರ ಅವನಿಂದ ಹೊರಡುತ್ತದೆ. ಅಷ್ಟೇ, ನೋಡುತ್ತಿರುವವರ ಎದೆ ಒಡೆದುಹೋಗುತ್ತದೆ.

ಇದು ಇಡಿ ಚಿತ್ರದಲ್ಲಿ ಅತ್ಯಂತ ಭಾವಪೂರಿತವಾದ ಸನ್ನಿವೇಶ.

ಅವನು ಅರ್ಜುನ ವೇಷವನ್ನು ಮತ್ತೆಂದೂ ತೊಡುವುದಿಲ್ಲ ಎಂದು ಬಿಡುತ್ತಾನೆ, ಅಂದಿನಿಂದ ಅವನದೇನಿದ್ದರೂ ರೌದ್ರ ವೇಷಗಳು ಮಾತ್ರ. ಸ್ವಲ್ಪ ದಿನಗಳಲ್ಲೇ ಅವನ ಮೇಳದಲ್ಲಿ ಹಾಡು ಹಾಡುತ್ತಿದ್ದವರಿಗೆ ಕೆಮ್ಮು ಹೆಚ್ಚಾಗಿ ಹಾಡಲಾಗುವುದಿಲ್ಲ. ಇವನ ವೇಶ ನೋಡಿದ ಮಹಾರಾಜರು ಇವನಿಗೆ ಪಾರಿತೋಷಕ ಕೊಡಲು ಬಂದಾಗ ’ನನಗೇನೂ ಬೇಡ, ನಮ್ಮ ತಂಡದ ಹಾಡುಗಾರನಿಗೆ ಚಿಕಿತ್ಸೆ ಕೊಡಿಸಿ’ ಎಂದು ಕಣ್ಣೀರಿಡುತ್ತಾನೆ. ಅವನ ಬದುಕಿನಿಂದ ಒಂದೊಂದೇ ಬಂಧಗಳು ಕಳಚಿ ಬೀಳುತ್ತಿವೆ. ಖಾಲಿ ಕೈ ಅವನನ್ನು ಹೆದರಿಸುತ್ತಿವೆ. ಆ ಹಾಡುಗಾರನ ಬಳಿ ಕೂತು, ’ವೇಷ ಕಳಚಿ ನೀನು ಇಲ್ಲಿದ್ದೀಯ, ವೇಷ ಕಳಚಲಾರದೆ ನಾನು ಒದ್ದಾಡುತ್ತಿದ್ದೇನೆ’ ಎನ್ನುತ್ತಾನೆ. ಅವನು ಹೊರಗಿನ ವೇಷ ಕಳಚಿದ್ದಾನೆ ಆದರೆ ಆತ್ಮಕ್ಕಂಟಿದ ಅರ್ಜುನನ ವೇಷ ಕಳಚಲಾಗುತ್ತಿಲ್ಲ. ಅವನಿಗೂ ಅವನ ಮಗುವಿಗೂ ಇರುವ ಒಂದೇ ಸೇತು ಆ ವೇಷ. ಅದೀಗ ಅವನ ಚರ್ಮಕ್ಕಂಟಿ ಹೋಗಿದೆ.

ಸುಭದ್ರೆ ಎಷ್ಟೇ ಉದಾಸೀನ ಮಾಡಿದರೂ ಅವನು ಪತ್ರ ಬರೆಯುವುದು ನಿಲ್ಲಿಸುವುದಿಲ್ಲ, ಆಗಾಗ ಅವಳ ಮನೆಗೆ ಹೋಗುವುದನ್ನು ನಿಲ್ಲಿಸುವುದಿಲ್ಲ. ಒಂದು ಸಲ ಆಕೆಯ ಮನೆಗೆ ಹೋಗುತ್ತಾನೆ. ಮಾಮೂಲಿನಂತೆ ಆಕೆ ಇದ್ದರೂ ಇಲ್ಲ ಎಂದು ಹೇಳುತ್ತಾಳೆ. ಮಹಡಿಯ ಮೇಲೆ ಆಕೆ ಇದ್ದಾಳೆ, ಕೆಳಗಡೆ ಗೆಳೆಯನೊಂದಿಗೆ ಈತ. ಮಹಡಿಯ ಮೇಲೆ ಚೆಂಡಾಡುತ್ತಿರುವ ಅವನ ಮಗು. ಆ ಮನೆಯಲ್ಲಿನ ಒಂದು ಸಣ್ಣ ಸದ್ದಿಗೂ ಅವನು ಮೈಯೆಲ್ಲಾ ಕಣ್ಣಾಗಿ ಕಾಯುತ್ತಿರುತ್ತಾನೆ. ಚೆಂಡಿನ ಸದ್ದು ಕೇಳಿಯೇ ಗೆಳೆಯನಿಗೆ ’ಆಟ ಆಡುತ್ತಿದ್ದಾನೆ, ಗುಂಡು ಗುಂಡಾಗಿದ್ದಾನೆ’ ಎಂದು ಹೆಮ್ಮೆಯಲ್ಲಿ ಹೇಳಿಕೊಳ್ಳುತ್ತಾನೆ. ಅವನೊಡನೆ ನಾವೂ ಸಹ ಕಾಯುವ ಭಾವವನ್ನು ನಿರ್ದೇಶಕರು ಎಷ್ಟು ಚೆನ್ನಾಗಿ ಕಟ್ಟಿಕೊಡುತ್ತಾರೆಂದರೆ ನಮಗೂ ಕೇಳಿಸುವುದು ಆ ಸದ್ದುಗಳು ಮಾತ್ರ, ಕಾಣಿಸುವುದು ಆ ಪುಟಿಯುವ ಚೆಂಡು ಮಾತ್ರ. ವಿದೇಶಕ್ಕೆ ಹೋದಾಗ ಅವಳಿಗಾಗಿ ಒಂದು ಪೆನ್ ತಂದಿರುತ್ತಾನೆ. ಮನೆ ಕೆಲಸದವರ ಕೈಗೆ ಅದನ್ನು ಕೊಡುತ್ತಾನೆ. ಆ ಕೆಲಸದವನ ಕಣ್ಣುಗಳಲ್ಲೂ ನೀರಾಡುತ್ತಿರುತ್ತದೆ. ಕಣ್ಣು ತುಂಬಾ ನೀರು ತುಂಬಿಕೊಂಡು ಕುಂಜಿಕುಟ್ಟನ್ ಅಲ್ಲಿಂದ ಹೊರಟುಬಿಡುತ್ತಾನೆ.

ಅಲ್ಲಿಗೆ ಅವನ ತಾಳ್ಮೆಯ ಕೊಡ ಸಹ ತುಂಬಿರುತ್ತದೆ. ಸ್ನೇಹಿತ ಕ್ಯಾನ್ಸರ್ ಪೀಡಿತನಾದ ಮೇಲೆ ಅವನಿಗೂ ಆಟ ಸಾಕೆನ್ನಿಸುತ್ತದೆ. ಅವನನ್ನು ಹಿಡಿದಿಡುವುದೇನೂ ಪ್ರಪಂಚದಲ್ಲಿ ಇರುವುದಿಲ್ಲ. ನಡುವಲ್ಲೇ ಆಟ ನಿಲ್ಲಿಸಿ ಬರುವ ಆತ ಒಂದೊಂದಾಗಿ ವೇಷ ಕಳಚುತ್ತಾ ಹೋಗುತ್ತಾನೆ. ಅದುವರೆಗಿನ ಅವನ ಎಲ್ಲಾ ಆವೇಶ, ತುಮುಲ, ಸಂಕಟವನ್ನು ಆತ ಅದೊಂದು ದೃಶ್ಯದಲ್ಲಿ ಮಾತ್ರ ವ್ಯಕ್ತಪಡಿಸುತ್ತಾನೆ. ಅಲ್ಲಿಂದ ಅವನ ವಾನಪ್ರಸ್ಥ ಪ್ರಾರಂಭ.

ಆಮೇಲೆ ಆತ ಎಂದೂ ತನ್ನನ್ನು ಒಪ್ಪಿಕೊಳ್ಳದ ತಂದೆಯ ಶ್ರಾದ್ಧ ಮಾಡಲು ಕಾಶಿಗೆ ಹೋಗುತ್ತಾನೆ. ಅಲ್ಲಿಂದ ಬರುತ್ತಾನೆ. ಏನೇ ಮಾಡಲಿ ಅವನಿಗೆ ತನ್ನ ಅಸ್ಥಿತ್ವವನ್ನು ಹುಡುಕಿಕೊಳ್ಳಲು ಆಗುವುದಿಲ್ಲ. ಮಗನಾಗಿಯೂ ಅವನಿಗೆ ಅಸ್ಥಿತ್ವ ಇಲ್ಲ, ಈಗ ತಂದೆಯಾಗಿಯೂ ಇಲ್ಲ. ವೇಷದ ಲೋಕ ಬೇರೆ, ವಾಸ್ತವ ಬೇರೆ ಎಂದೇ ಸಾಧಿಸಿದ ಸುಭದ್ರಳ ಸುಳ್ಳಿನ ಕವಚವನ್ನು ಮುರಿದು ಹಾಕಲು ಅವನಿಗಿರುವುದು ಒಂದೇ ದಾರಿ. ಆತ ಮಗಳಿಗೆ ಕಥಕ್ಕಳಿ ಕಲಿಸುತ್ತಾನೆ. ಸುಭದ್ರೆ ಬರೆದ ’ಸುಭದ್ರಾಪಹರಣಂ’ ನಾಟಕವನ್ನು ಆಕೆಯ ಅದೇ ಮನೆಯಲ್ಲಿ ಮಗಳೊಂದಿಗೆ ಆಡುತ್ತಾನೆ. ಕಡೆಯದಾಗಿ ಈತ ಅರ್ಜುನನ ವೇಷ ಹಾಕುತ್ತಾನೆ, ಮಗಳು ಸುಭದ್ರೆ. ಇದನ್ನು ಸಹಿಸದ ಈತನ ಹೆಂಡತಿ ಮನೆಬಿಟ್ಟು ಹೋಗುತ್ತಾಳೆ. ಆತನ ಗೆಳೆಯ ಸಹ ಇದು ಬೇಡ ಎನ್ನುತ್ತಾನೆ. ಆದರೆ ಕುಂಜಿಕುಟ್ಟನ್ ನಿರ್ಧಾರ ಸಡಲಿಸುವುದಿಲ್ಲ.
ವೇಷದ ದಿನ ಸುಭದ್ರೆ ಅಲ್ಲಿಗೆ ಬರುತ್ತಾಳೆ. ತಂದೆ ಮಗಳು ವೇಷ ಕಟ್ಟಿರುವುದನ್ನು ನೋಡುತ್ತಾಳೆ. ಅದನ್ನು ಕೇವಲ ಒಂದು ವೇಷವಾಗಿ ನೋಡಲು ಅವಳಿಂದಾಗುವುದಿಲ್ಲ. ಎರಡೂ ಪ್ರಪಂಚಗಳು ಬೇರೆ ಬೇರೆ ಅಲ್ಲ ಎನ್ನುವುದು ಅವಳಿಗೆ ಅರ್ಥವಾಗುತ್ತದೆ. ಮನೆಗೆ ಬಂದವಳೇ ಸ್ನಾನ ಮಾಡುತ್ತಾಳೆ. ಅವನ ಮಗಳಿಗೆ ಪತ್ರ ಬರೆಯಲೆಂದು ಕೂರುತ್ತಾಳೆ. ಕೆಲಸದವರು ಬಂದು ಯಾರೋ ಬಂದಿರುವುದಾಗಿ ಹೇಳುತ್ತಾರೆ. ಅವನೇ ಬಂದಿದ್ದಾನೆಂದುಕೊಂಡು ಆಕೆ ಸಿಂಗರಿಸಿಕೊಳ್ಳುತ್ತಾಳೆ. ಆದರೆ ಬಂದಿರುವುದು ಆತನ ಸಾವಿನ ಸುದ್ದಿ. ವೇಷ ಕಳಚಿಟ್ಟ ಕುಂಜಿಕುಟ್ಟನ್ ಹೃದಯಾಘಾತದಿಂದ ಸತ್ತಿರುತ್ತಾನೆ. ಅವನ ಬದುಕಿನಲ್ಲಿ ಅರ್ಜುನನನ್ನು ಹುಡುಕುವ ಸುಭದ್ರೆ ಅವನ ಸಾವಿನಲ್ಲಿ ಅವನನ್ನು ಗುರುತಿಸುತ್ತಾಳೆ.

ಚಿತ್ರ ಮುಗಿದ ಮೇಲೆ ಒಂದು ಆಳವಾದ ವಿಷಾದವನ್ನು ಉಳಿಸಿಬಿಡುತ್ತದೆ. ಚಿತ್ರದಲ್ಲಿ ಮೋಹನ್ ಲಾಲ ಕಣ್ಣುಗಳಿಂದ ಕಾಡಿಗೆಯ ಬಣ್ಣ ಮರೆಯಾಗುವುದೇ ಇಲ್ಲ. ಅವನು ಹಾಕಿದ ಹಲವು ವೇಷಗಳ ಉಳಿಕೆಯಂತೆ ಅದು ಅವನ ಕಣ್ಣುಗಳಿಗೆ ಒಂದು ಫ್ರೇಂ ಕಟ್ಟಿಕೊಡುತ್ತದೆ. ಆ ಫ್ರೇಂ ಒಳಗಡೆ ಒಂದೊಂದು ಭಾವವೂ ಚೌಕಟ್ಟು ಹಾಕಿದಂತೆ ಕಾಣುತ್ತದೆ. ಈ ಚಿತ್ರವನ್ನು ಅಷ್ಟು ಗಾಢವಾಗಿಸುವುದು ಏನು ಎಂದು ಸುಲಭವಾಗಿ ಹೇಳಲು ಸಾಧ್ಯವಿಲ್ಲ. ಕಥೆಯೋ, ಚಿತ್ರಕಥೆಯೋ, ನಿರ್ದೇಶನವೋ, ನಟನೆಯೋ, ಸಂಗೀತವೋ, ನೃತ್ಯವೋ ಅಥವಾ ಇವೆಲ್ಲವೂ ಗೆದ್ದಾಗ ಇಂತಹ ಚಿತ್ರ ಮೂಡುತ್ತದೆಯೋ ಗೊತ್ತಿಲ್ಲ.

26 Comments

 1. Anil
  May 4, 2017
 2. Sarala
  May 2, 2017
 3. Gangadar Rai
  May 1, 2017
 4. Lingaraju BS
  April 30, 2017
 5. Bhavya
  April 30, 2017
 6. Poornimasuresh
  April 30, 2017
 7. Anonymous
  April 29, 2017
 8. Sathyakama Sharma Kasaragodu
  April 29, 2017
 9. ರಾಜೀವ ನಾರಾಯಣ ನಾಯಕ
  April 29, 2017
 10. Anonymous
  April 29, 2017
  • ಸಂಧ್ಯಾರಾಣಿ
   April 29, 2017
 11. ಭಾರತಿ ಬಿ ವಿ
  April 29, 2017
  • ಸಂಧ್ಯಾರಾಣಿ
   April 29, 2017
 12. ಮಮತ
  April 29, 2017
  • ಸಂಧ್ಯಾರಾಣಿ
   April 29, 2017
 13. Asha R Viswanath
  April 29, 2017
  • ಸಂಧ್ಯಾರಾಣಿ
   April 29, 2017
 14. K.Nalla Tambi
  April 29, 2017
  • ಸಂಧ್ಯಾರಾಣಿ
   April 29, 2017

Add Comment

Leave a Reply