Quantcast

ಇದು ಸಿನೆಮಾ ಅಲ್ಲ, ನಾಟಕ

ನಾ ಸಂಪತ್ ಕುಮಾರ್ 

ಶ್ರೀಧರ್,

ನಮ್ಮ ‘ಜನ ಸಂಸ್ಕೃತಿ’ ತಂಡದಿಂದ ಜಗತ್ತಿನ ಸಿನೆಮಾ ವ್ಯಾಕರಣಕ್ಕೆ ತನದೇ ಆದ ಕೊಡುಗೆಯನ್ನು ನೀಡಿದ ಇಟಾಲಿಯನ್ ಚಲನಚಿತ್ರ’ಬೈಸಿಕಲ್ ಥೀವ್ಸ್’ ಆಧರಿಸಿದ ಕನ್ನಡ ನಾಟಕವನ್ನು ನೀನು ನಿರ್ದೇಶಿಸಿದ್ದೆ.

ಯಾವ ವರ್ಷ ಅಂತ ನೆನಪಿಲ್ಲ. ಆದರೆ ನಮ್ಮ ಹೆಮ್ಮೆಯ ಹಿರಿಯ ರಂಗ ಸಂಘಟಕರಾದ ಶ್ರೀನಿವಾಸ ಜಿ. ಕಪ್ಪಣ್ಣನವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅನ್ನುವುದು ನೆನಪಷ್ಟೇ.

ನಮ್ಮ ನಾಟಕವನ್ನು ಬಹುಶಃ ನಾಟಕ ಅಕಾಡೆಮಿಯ ಪ್ರಾಯೋಜನೆಯಲ್ಲಿ ಒರಿಸ್ಸಾದ ನಾಟಕ ಉತ್ಸವವೊಂದಕ್ಕೆ ತೆಗೆದುಕೊಂಡು ಹೋಗಿದ್ದೆವು.

ನಮ್ಮ ‘ಜನ ಸಂಸ್ಕೃತಿ’ಯ ತಂಡದಲ್ಲಿ ಇದ್ದ ಬದ್ದ ಹಣವೆಲ್ಲವೂ ನಾಟಕ ಪ್ರಯೋಗಗಳಿಗೆ ಖರ್ಚಾಗಿ ಹೋಗಿತ್ತು. ಒರಿಸ್ಸಾಗೆ ಹೋಗಲೂ ಹಣವಿಲ್ಲದೆ ನೀನು ಹೇಗೋ ಹೊಂದಿಸಿದೆ.

ಒರಿಸ್ಸಾದ ಪ್ರದರ್ಶನದ ದಿನ ನಾಟಕದಲ್ಲಿ ಮುಖ್ಯ ಪಾತ್ರ ವಹಿಸಿದ್ದ ನನಗೆ ಥ್ರೋಟ್ ಇನ್ಫೆಕ್ಷನ್ ಆಗಿ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ಯಾವುದೋ ವೈದ್ಯರನ್ನು ನೀನು ಹುಡುಕಿ ಟ್ರೀಟ್ ಮೆಂಟ್ ಕೊಡಿಸಿದ್ದು , ಸಂಜೆ ಹೊತ್ತಿಗೆ ಸ್ವಲ್ಪ ಆರಾಮ ಎನಿಸಿ ನಾಟಕ ಮಾಡಿದ್ದು, ದೃಶ್ಯವೊಂದರಲ್ಲಿ ಬಳಸಿದ್ದ ಏಣಿಯ ಮೇಲೆ ನಾನು ಹತ್ತಿ ನಿಂತು ಏಣಿ ಜಾರಿ ಕೆಳಗೆ ಬಿದ್ದದ್ದು, ಅದನ್ನು ಹೇಗೋ ನಿಭಾಯಿಸಿದ್ದು ಎಲ್ಲವೂ ಸ್ಪಷ್ಟವಾಗಿ ನೆನಪಿದೆ. ಎಷ್ಟೆಲ್ಲ ಪರದಾಡಿಕೊಂಡು ನಾಟಕ ಮಾಡಿ ಬಂದೋ.

ಅದಿರಲಿ ನಾಟಕ ಮುಗಿಸಿಕೊಂಡು ಬಂದ ಮೇಲೆ ಅಕಾಡೆಮಿಯು ಅದರ ಹಣವನ್ನು ನಿನಗೆ ಕೊಟ್ಟಿತಾ? ನೀನು ತುಂಬಾ ಸಲ ಅದಕ್ಕಾಗಿ ಓಡಾಡಿದೆ.. ಆ ಹಣ ಬಂತಾ?

Add Comment

Leave a Reply