Quantcast

ದೇಶದ ಕಾರ್ಮಿಕರ ಕತ್ತಿನ ಮೇಲೆ ಪ್ರಧಾನ ಸೇವಕರ ಕತ್ತಿ

2005 ರ ವೇಳೆಗೆ ದೇಶದಲ್ಲಿ ಕಂಪ್ಯೂಟರ್ ಮತ್ತು ಇಲೆಕ್ಟ್ರಾನಿಕ್ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಅಂದಿನ ಸರಕಾರ ಬಹುತೇಕ ತೆಗೆದುಹಾಕಿಬಿಟ್ಟಿತು. WTO  ಒಪ್ಪಂದದ ಭಾಗವಾಗಿ ನಡೆದ ಈ ತೀರ್ಮಾನದ ಪರಿಣಾಮವಾಗಿ ದೇಶದ ಹಾರ್ಡ್ ವೇರ್ ಉದ್ಯಮ ನೆಗೆದುಬಿತ್ತು, ಮತ್ತು ಆ ಉತ್ಪನ್ನಗಳು ವಿದೇಶಗಳಿಂದ ಸಾರಾಸಗಟು ಆಮದಾಗತೊಡಗಿದವು. ಅದರ ಪರಿಣಾಮ – ಲಕ್ಷಾಂತರ ಉದ್ಯೋಗಗಳು ಕಿತ್ತೆದ್ದುಹೋಗಿ, ಅಲ್ಪ ಸಂಖ್ಯೆಯಲ್ಲಿ ಅಸೆಂಬ್ಲಿಂಗ್ ಉದ್ಯೋಗ ಮಾತ್ರ ಉಳಿದುಕೊಂಡಿತು.

ನರೇಂದ್ರ ಮೋದಿಯವರ ಸರಕಾರ ಬಂದಮೇಲೆ 2014-15ರಲ್ಲಿ ಕಬ್ಬಿಣದ ಆಮದು ಸುಂಕ ಇಳಿಸಿದ ಪರಿಣಾಮವಾಗಿ ದೇಶದ ಕಬ್ಬಿಣ ಆಮದಿನಲ್ಲಿ 71% ಏರಿಕೆ ಆಯಿತು. ಅದರಿಂದಾಗಿ ದೇಶದೊಳಗೆ ಕಬ್ಬಿಣದ ಉತ್ಪಾದನೆ ಪ್ರಮಾಣ ಕಡಿಮೆ ಆಯಿತು; ಉದ್ಯೋಗಗಳು ನಷ್ಟಗೊಂಡವು.

ದೇಶದಲ್ಲಿ ಈವತ್ತು ವರ್ಷಕ್ಕೆ ಒಂದೂವರೆ ಕೋಟಿಯಷ್ಟು ಉದ್ಯೋಗಗಳು ಹುಟ್ಟಿಕೊಳ್ಳುವ ಅಗತ್ಯ ಇದೆ. ಆದರೆ ಅಧ್ಯಯನಗಳು ಹೇಳುವ ಪ್ರಕಾರ ಅದರ 10%ನಷ್ಟು ಮಾತ್ರ ಉದ್ಯೋಗಗಳು ಸ್ರಷ್ಟಿ ಆಗುತ್ತಿವೆ. ಸ್ವತಃ ಕೇಂದ್ರ ಸರ್ಕಾರ ಕೊಟ್ಟಿರುವ ಅಂಕಿ ಅಂಶಗಳ ಪ್ರಕಾರ 2016ರಲ್ಲಿ ಕಾರ್ಮಿಕ ಸಾಂದ್ರತೆ ಹೆಚ್ಚಿರುವ ಜವುಳಿ, ಚರ್ಮ, ಆಭರಣ, ಲೋಹ, ಆಟೊಮೊಬೈಲ್ ಕ್ಷೇತ್ರಗಳಲ್ಲಿ ಉತ್ಪತ್ತಿಯಾದ ಒಟ್ಟು ಉದ್ಯೋಗ ಕೇವಲ 1.68 ಲಕ್ಷ!

ಹೀಗೆ ಉದ್ಯೋಗ ಸ್ರಷ್ಟಿ ಕಡಿಮೆ ಇರುವ ಸನ್ನಿವೇಶದಲ್ಲಿ ಸರ್ಕಾರ ದೇಶದ ಕಾರ್ಮಿಕರ ಪರವಾಗಿ ನಿಲ್ಲುವ ಬದಲು, ಕಾರ್ಪೋರೇಟ್ ಗಳ ಪರ ನಿಂತು ಇನ್ನಷ್ಟು ಉದ್ಯೋಗ ಕಡಿತಕ್ಕೆ ಕಾರಣ ಆಗಬಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. 1991ರಲ್ಲಿ ಕಾಂಗ್ರೆಸ್ಸಿನ ಉದಾರೀಕರಣ ನೀತಿಯ ಫಲವಾಗಿ ದೇಶದೊಳಗೆ ವಿದೇಶಿ ಹೂಡಿಕೆಗಳು ಆರಂಭವಾದವು. 1995ರಲ್ಲಿ ಭಾರತ WTO ಒಪ್ಪಂದದ ಭಾಗವಾದ ಬಳಿಕ ಹಲವು ದೇಶಗಳೊಂದಿಗೆ ಮುಕ್ತ ವಾಣಿಜ್ಯ ಒಪ್ಪಂದ (FTA) ಗಳು ಏರ್ಪಟ್ಟಿವೆ.

ಆರಂಭದಲ್ಲಿ ವಿವರಿಸಲಾಗಿರುವ ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ಕಬ್ಬಿಣದ ಉದ್ಯಮಗಳಲ್ಲಿ ಸಂಭವಿಸಿದ ಬದಲಾವಣೆಗಳಿಗೆ ಈ FTAಗಳೇ ಕಾರಣ. 2000ದಿಂದೀಚೆಗೆ ಭಾರತವು ಜಪಾನ್, ಮಲೇಷಿಯಾ, ಸಿಂಗಾಪುರ, ದ.ಕೊರಿಯಾ, ಶ್ರೀಲಂಕಾ, ಥೈಲಂಡ್ ಮಾತ್ರವಲ್ಲದೇ 10 ASEAN (ದಕ್ಷಿಣ ಏಷಿಯಾದ ದೇಶಗಳ ಒಕ್ಕೂಟ) ಗಳ ಜೊತೆ ಒಟ್ಟು 9 FTAಗಳನ್ನು ಸಹಿ ಮಾಡಿದೆ. ಈ ಎಲ್ಲ ಒಪ್ಪಂದಗಳೂ ದೇಶದೊಳಗಿನ ಉದ್ಯೋಗ ಸ್ರಷ್ಟಿಗೆ ಹೊಡೆತ ನೀಡಿವೆ.

ಸಾಮಾನ್ಯವಾಗಿ ದೇಶವು ತನ್ನ ಆಂತರಿಕ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಉತ್ಪಾದನೆಗಳ ಆಮದಿನ ಮೇಲೆ ದೊಡ್ಡ ಪ್ರಮಾಣದಲ್ಲಿ ಸುಂಕ ಹೇರುತ್ತದೆ. ಆಗ ಕಾರ್ಪೋರೇಟ್ ಗಳು ತಮ್ಮ ದೇಶದೊಳಗೇ ಉತ್ಪಾದನೆ ಮಾಡಿಕೊಳ್ಳುವುದು ಅನಿವಾರ್ಯ ಆಗುತ್ತದೆ. ಆದರೆ FTAಗಳಿಗೆ ಸಹಿ ಮಾಡಿದಾಗ, ಆ ದೇಶಗಳಿಗೆ ಆಮದು ಸುಂಕವನ್ನು ತಗ್ಗಿಸುವುದು ದೇಶಕ್ಕೆ ಅನಿವಾರ್ಯ. ಹಾಗಾದಾಗ ಕಾರ್ಪೊರೇಟ್ ಗಳಿಗೆ ಮೂಲವಸ್ತುಗಳು ಸುಲಭವಾಗಿ ಆಮದು ರೂಪದಲ್ಲಿ ಸಿಗುತ್ತವೆ; ದೇಶದೊಳಗೆ ಉತ್ಪಾದನೆಗೆ ಕಾರ್ಮಿಕರ ಅಗತ್ಯ ಇರುವುದಿಲ್ಲ.

RCEP ಎಂಬ ಗುಮ್ಮ

ಪ್ರಧಾನ ಸೇವಕ ನರೇಂದ್ರ ಮೋದಿಯವರ ಸರಕಾರವು ತನ್ನ ಗೊಂದಲಮಯ ನೀತಿಗಳ ಕಾರಣದಿಂದಾಗಿ ಇಲ್ಲಿಯ ತನಕದ ಸರಕಾರಗಳು ವಿಳಂಬ ಮಾಡಿದ್ದ 16ದೇಶಗಳ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (Regional Comprehensive Economic Partnership – RCEP) ಒಪ್ಪಂದಕ್ಕೆ ವೇಗ ಕೊಡಲು ನಿರ್ಧರಿಸಿದೆ. 10 ASEAN  ದೇಶಗಳು (ಬ್ರುನೈ, ಕಾಂಬೋಡಿಯಾ, ಇಂಡೋನೇಷಿಯಾ, ಮಲೇಷಿಯಾ, ಮಯಮ್ನಾರ್, ಸಿಂಗಾಪುರ, ಥೈಲಂಡ್, ಫಿಲಿಪೈನ್ಸ್, ಲಾವೋಸ್, ವಿಯೆಟ್ನಾಂ) ಮತ್ತು ಆಸ್ಟ್ರೇಲಿಯಾ, ಚೀನಾ, ಜಪಾನ್, ಕೊರಿಯಾ, ನ್ಯೂಜಿಲಂಡ್ ಮತ್ತು ಭಾರತಗಳನ್ನೊಳಗೊಂಡ  ಒಟ್ಟು 16 ದೇಶಗಳ ಮುಕ್ತ ಮಾರುಕಟ್ಟೆ ಒಪ್ಪಂದ ಸಂಭವಿಸಿದಲ್ಲಿ, ಅದು ದೇಶದ ದುಡಿಯುವ ವರ್ಗಕ್ಕೆ ಆಘಾತಕಾರಿ ಆಗಲಿದೆ.

ಸಾಮಾನ್ಯವಾಗಿ ಭಾರತದಲ್ಲಿ ಆಮದು ಸುಂಕವು ಕೈಗಾರಿಕಾ ಉತ್ಪನ್ನಗಳಿಗೆ 10%  ಮತ್ತು ಕ್ರಷಿ ಉತ್ಪನ್ನಗಳಿಗೆ 32.5% ನಷ್ಟು ಹೆಚ್ಚಿನ ಪ್ರಮಾಣದಲ್ಲಿದೆ. RCEP  ಒಪ್ಪಂದ ಸಂಭವಿಸಿದರೆ, ಈ ಪ್ರಮಾಣ 0-3%ಗೆ ಇಳಿದುಬಿಡಲಿದೆ. ಚೀನಾದಂತಹ ದೇಶವೂ ಒಳಗೊಂಡಿರುವ ಈ ಒಪ್ಪಂದದ ಪರಿಣಾಮ ಘಾತಕವಾಗಲಿದ್ದು, ಬಹುತೇಕ ಎಲ್ಲ ರಂಗಗಳಲ್ಲಿ ಆಮದು ಹೆಚ್ಚಿ, ದೇಶದೊಳಗಿನ ಉತ್ಪಾದನೆ ತಗ್ಗಲಿದೆ ಮತ್ತು ಅದರ ಪರಿಣಾಮವಾಗಿ ಉದ್ಯೋಗಗಳು ಕಡಿಮೆ ಆಗಲಿವೆ.

ITಯಂತಹ ಕೆಲವೇ ಕೆಲವು ಉದ್ಯಮಗಳಿಗೆ ಲಾಭ ತರಲಿರುವ ಈ ತೀರ್ಮಾನವನ್ನು ಸರಕಾರ ಆ ಕಡೆ ಬೊಟ್ಟು ಮಾಡಿ ತೋರಿಸಿ ಸಮರ್ಥಿಸಿಕೊಳ್ಳುತ್ತಿದೆ. ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ, RCEP ಒಪ್ಪಂದವು ವಿದೇಶಿ ಕಂಪನಿಗಳ ಮೇಲೆ ದೇಶದ ಸರ್ಕಾರಕ್ಕಿರುವ ನಿಯಂತ್ರಣಗಳಿಗೂ ಮಿತಿ ಹೇರಲಿದ್ದು, ಆ ಕಂಪನಿಗಳು ನಮ್ಮ ದೇಶದ ಕಾರ್ಮಿಕ ಕಾನೂನುಗಳನ್ನು ಅಂತಾರಾಷ್ಟ್ರೀಯ ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದಾಗಿದೆ.

ಜಗತ್ತಿನ ಒಟ್ಟು ವ್ಯಾಪಾರದ 30% ಮತ್ತು ಒಟ್ಟು ಜನಸಂಖ್ಯೆಯ 50%ನ್ನು ಒಳಗೊಳ್ಳಲಿರುವ ಈ RCEP ಒಪ್ಪಂದ ಇದೇ ಜುಲೈ ಅಂತ್ಯದ ವೇಳೆಗೆ ಅಂತಿಮ ರೂಪ ಪಡೆಯುವ ನಿರೀಕ್ಷೆ ಇದೆ. ಕಾರ್ಮಿಕರು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ಅವರ ಕತ್ತು, ಕತ್ತಿಗೆ ಬಲಿಯಾದಂತೆಯೇ.

Add Comment

Leave a Reply