Quantcast

ಮೇರೇ ಸಾಮನೇವಾಲೀ ಕಿಡಕಿ ಮೇ…

ರಾಜೀವ ನಾರಾಯಣ ನಾಯಕ

ಬಣ್ಣ ಬಣ್ಣದ ಕನಸುಗಳನ್ನು ಹೊತ್ತು ಮಾಯಾನಗರಿ ಮುಂಬಯಿಗೆ ಬಂದ ನಂತರದಲ್ಲಿ ಎಲ್ಲರೂ ಕಾಣುವ ಮಹಾ ಕನಸು ಎಂದರೆ ಸ್ವಂತದ್ದೊಂದು ಮನೆ ಮಾಡಿಕೊಳ್ಳುವುದು! ಎಲ್ಲೋ ಬಾಡಿಗೆಗುಳಿದು ಹನ್ನೊಂದು ತಿಂಗಳ ಒಪ್ಪಂದವನ್ನು ನವೀಕರಿಸುತ್ತಾ ಫ್ಲ್ಯಾಟ್ ಮಾಲೀಕನ ಅವಕೃಪೆಗೊಳಗಾದರೆ ಮನೆ ಬದಲಿಸುವ ಅನಿವಾರ್ಯತೆಯಲ್ಲಿ ಹೈರಾಣಾಗುವ ಜೀವಗಳು ಒಂದು ನಿರ್ದಿಷ್ಟ ನೆಲೆಗಾಗಿ ಹಾತೊರೆಯುತ್ತವೆ.

ಅಂಥ ಒಂದು ನೆಲೆಯೇ ಅವರ ಅಸ್ಮಿತೆಯ ಸವಾಲೂ ಆಗಿರುತ್ತದೆ. ಇಕ್ಕಟ್ಟಿನ ಮುಂಬಯಿ ಬದುಕನ್ನು ನೀಡಬಲ್ಲದೇ ಹೊರತು ಸೂರನ್ನು ಕೊಡಲಾರದು. ಹೀಗಾಗಿ ನೆಲೆಯನ್ನು ಅರಸಿ ಉಪ ನಗರಗಳತ್ತ ಮುಖಮಾಡುವುದು ಅನಿವಾರ್ಯವಾಗುತ್ತದೆ. ಮಧ್ಯಮ ವರ್ಗದವರ ಇಂಥ ಅತೃಪ್ತ ಮನಸುಗಳನ್ನು ಅರಿತ ಬಿಲ್ಡರುಗಳು ಅಸಲಿ ಮುಂಬಯಿಯಿಂದ ನೂರಾರು ಮೈಲಿವರೆಗೂ ಭೂಮಿಯನ್ನು ಸೈಟುಗಳಾಗಿಸಿ ಬಹು ಮಹಡಿ ಕಟ್ಟಡಗಳನ್ನು ನಿರ್ಮಿಸಿ ಹೊಸ ಉಪನಗರಗಳನ್ನೇ ಸೃಷ್ಟಿಸಿದ್ದಾರೆ.

ಫ್ಲ್ಯಾಟ್ ಬಯಸುವವರು ದುಡಿದ ಹಣವನ್ನೆಲ್ಲಾ ಬಿಲ್ಡರುಗಳ ಅಡಿಗಳಿಗೆ ಮುಡಿಪಾಗಿಟ್ಟು ಮಾಡಿದ ಸಾಲವನ್ನು ಜಿಂದಗಿ ಭರ್ತೀ ತೀರಿಸುತ್ತಾ ಕಂತುಗಳಲ್ಲಿ ಬದುಕಲೂ ತಯಾರಾಗುತ್ತಾರೆ.

ನವಿ ಮುಂಬಯಿಯ ಕಾಮೋಠೆಯಲ್ಲಿರುವ ಮಾನಸ ಅಪಾರ್ಟಮೆಂಟ್ಸ್ ಇಂಥ ಕನಸನ್ನು ನನಸಾಗಿಸಿಕೊಂಡವರ ಒಂದು ನಿವಾಸ ಸ್ಥಾನವಾಗಿದೆ.  ಲೋಕಲ್ ಸ್ಟೇಶನ್ನುಗಳಲ್ಲಿ ಒಂದಾದ ಮಾನಸ ಸರೋವರದಿಂದ ಹತ್ತೇ ನಿಮಿಷಗಳ ಕಾಲುನಡಿಗೆಯಲ್ಲಿ ತಲುಪುವಷ್ಟು ಹತ್ತಿರವಿದೆ. ಶೇರ್ ರಿಕ್ಷಾ ಹಿಡಿದರೆ ಎರಡೇ ನಿಮಿಷ ಸಾಕು. ಮಾನಸ ಅಪಾರ್ಟಮೆಂಟ್ಸನಲ್ಲಿ ಹತ್ತಿಪ್ಪತ್ತು ಬಿಲ್ಡಿಂಗುಗಳು ಒಂದಕ್ಕೊಂದು ಅಡ್ದಡ್ಡವಾಗಿಯೂ ಉದ್ದುದ್ದವಾಗಿಯೂ ನಿಂತಿವೆ. ನೋಡುವವನ ಮನಸ್ಥಿತಿಗನುಸಾರ ಇಮಾರತುಗಳು ಒಮ್ಮೊಮ್ಮೆ ಮಮಕಾರಗಳಲ್ಲಿ ಕೆಲವೊಮ್ಮೆ ನಿರ್ವಿಕಾರದಲ್ಲಿ ನಿಂತಿರುವಂತೆ ಕಾಣುತ್ತವೆ.

ಇಮಾರತುಗಳ ನಡುವಿನ ಇಕ್ಕಟ್ಟಿನಲ್ಲಿ ಒಂದು ಚಿಕ್ಕ ಮೈದಾನವಿದೆ. ಒಂದು ಅಡಿ ನೆಲಕಂಡರೂ ಸಾಕು, ಕಬ್ಬಿಣ ಸಿಮೆಂಟು ಸುರಿದು ಕಟ್ಟಡಗಳನ್ನು ಎಬ್ಬಿಸುವ ಬಿಲ್ಡರುಗಳ ಹಪಾಹಪಿತನದಿಂದ ಅವಿತುಕೊಂಡಿರುವಂತೆ ಕಾಣುತ್ತದೆ. ಮಕ್ಕಳು ಚುಪಾಚುಪಿ ಆಟದಲ್ಲಿ ಆ ಮೈದಾನವನ್ನೇಆಟವಾಡಿಸುತ್ತಾರೆ. ಹಿರಿಯರು ಬದಿ ಸಾಲಿನ ಬೆಂಚ್ಮೇಲೆ ದಿನದ  ಧಾವಂತಕ್ಕೆ ತುಸು ಬ್ರೇಕ್ಹಾಕಿದಂ ತೆ ಕೂತಿರುತ್ತಾರೆ. ಬಹು ಮಹಡಿಯಿಂದ ಕೆಳಗೆ ನೋಡಿದಾಗ ಕುಣಿದಾಡುವ ಮಕ್ಕಳು ಮೈದಾನವನ್ನು ತೊಟ್ಟಿಲಂತೆ ತೂಗುತ್ತಿರುವ ಹಾಗೆ ಅನಿಸುತ್ತದೆ. ಮೈದಾನದಲ್ಲಿ ನಿಂತು ಮೇಲೆ ನೋಡುವಾಗ ಇಮಾರತುಗಳು ಆಕಾಶವನ್ನು ಹೊತ್ತಿರುವಂತೆಯೂ ಕಾಣುತ್ತದೆ. ಹೆ  ಫಕ್ತ್ ಗ್ರೌಂಡ್ ಆಹೆ.. ಸಬ್ ಚೀಜ್ ಮೇ ಕಹಾನಿ ಬನಾತೇ ಹೋ… ಜೈಸಾ ಹೈ ವೈಸಾ ದೇಖನಾ ಸಿಖೋ.. ಎಂದು ಬಾಜು ಖೋಲಿಯ ಸಾಳುಂಕೆ ಈ ಕತೆಗಾರನಿಗೆ ಹಿಂದಿ ಮಿಶ್ರಿತ  ಮರಾಠಿಯಲ್ಲಿ ಹೇಳುತ್ತಿರುತ್ತಾನೆ.

ಜೈಸಾ ಹೈ ವೈಸಾ ದೇಖೋ.. ಎಂಬುದನ್ನು ತನ್ನ ಪ್ರಜ್ಞೆಯ ಭಾಗವಾಗಿಸಿಕೊಳ್ಳಲು ಪ್ರಯತ್ನಿಸಿದರೂ ಈ ಕತೆಗಾರನಿಗೆ ಕಿಟಕಿ ಬಳಿ ಕೂತರೆ ಕಹಾನಿಗಳೇ ಕಾಣುವವು. ಎದುರಿನ ಮತ್ತು ಎಡಬಲಗಳ ಕಿಟಕಿಗಳಲ್ಲಿಯ ಸಜೀವ ಮತ್ತು ನಿರ್ಜೀವ ವಸ್ತುಗಳೂ ಅವನ ಭಾವತಂತುಗಳನ್ನು ಮೀಟುವವು. ಅಪಾರ್ಟಮೆಂಟಿನ ಕಿಟಕಿಗಳು ಗಾಳಿ ಬೆಳಕನ್ನು ಪಡೆಯಲು ಮಾತ್ರ ಇರುವಂಥವಲ್ಲ; ಕೋಣೆಯೊಳಗಿನ ಬದುಕನ್ನು ಇಷ್ಟಿಷ್ಟೇ ತೋರಿಸುವ ಇಣುಕು ಕಿಂಡಿಗಳೂ ಆಗಿವೆ. ನಾಲ್ಕು ಗೋಡೆಗಳ ನಡುವೆ ಬಂಧಿತ ಭಾವದಿಂದ ಬಿಡುಗಡೆಗೊಳ್ಳಲು ಬಯಸುವ ಹದಿಹರಯದ ಮನಸುಗಳು ಆಕಾಶವನ್ನೇ ತಮ್ಮ ಮನದಂಗಳವಾಗಿಸಿಕೊಳ್ಳಲು ಕಿಟಕಿಗಳ ಸನಿಹದಲ್ಲೇ ಸುಳಿದಾಡುತ್ತಿರುವರು.

ಬಳ್ಳಿಗೆ ತೂಗಿದ ಪುಟ್ಟ ಪುಟ್ಟ ಉಡುಪುಗಳಿಗಂಟಿದ ಜಾನ್ಸನ್ ಬೇಬಿ ಗಂಧ ಗಾಳಿಯಲ್ಲಿ ಬೆರೆತು ಕತೆಗಾರನ ಕಿಟಕಿವರೆಗೂ ಚಲಿಸುವುದು.  ಶಾಲೆಗೆ ಹೋಗುವ ಚಿಣ್ಣರ ಒಣ ಹಾಕಿದ ಯುನಿಫಾರ್ಮು ಆಸುಪಾಸಿನ ಸ್ಕೂಲುಗಳನ್ನೇ ತೂಗು ಹಾಕಿರುವಂತೆ ಕಾಣುವುದು. ಬಾರಾನಂಬರ್  ಬಿಲ್ಡಿಂಗಿನ ಚಾರ್ ನಂಬರ್ ಕಿಟಕಿಯಲ್ಲಿ ಒಣಗಿದ ಉದ್ದ ಓಡನಿಯೊಂದು ಗಾಳಿಯೊಂದಿಗೆ ಬಳಕುತ್ತಾ ಕಬ್ಬಿಣ ಮತ್ತು ಸಿಮೆಂಟಿನಲ್ಲಿ ಬಿಗಿಹಿಡಿದ ಬಿಲ್ಡಿಂಗಿನ ಅವ್ಯಕ್ತ ಭಾವವನ್ನು ಮುಕ್ತವಾಗಿಸಲು ಪ್ರಯತ್ನಿಸುತ್ತಿರುವಂತೆ ಕಾಣುವುದು.

ಕಿಟಕಿಯಿಂದ ಹೊರಚಾಚಿರುವ ಅಡ್ಡಪಟ್ಟಿಯಲ್ಲಿ ಮಕ್ಕಳು ಬಿಟ್ಟು ಹೋದ ಬಾರ್ಬಿ ಗೊಂಬೆಗಳು ಅವರು ಮತ್ತೆ ಬರುವವರೆಗೂ ಕಣ್ಣು ಬಿಟ್ಟೇ ಕಾದಿರುವವು.  ರಾತ್ರಿಯಿನ್ನೂ ಬಾಕಿಯಿರುವಾಗ ನಾಲ್ಕನೇ ಅಂತಸ್ತಿನ ಮೂರನೆ ಕಿಟಕಿಯಲ್ಲಿ ಸಣ್ಣ ಬೆಳಕೊಂದು ಮಿಸುಕಾಡುವುದು. ಬೆಳಕಿನ ಬೀಜವೊಂದು ಅಲ್ಲಿಂದಲೆ ಮೊಳಕೆಯೊಡೆದು ನಸುಕು ಹರಿಯುವಾಗ ಎರಡೇ ಕುಡಿಗಳ ತುಳಸಿ ಗಿಡಕ್ಕೆ ತಾಮ್ರದ ಬಿಂದಿಗೆಯಲ್ಲಿ ನೀರೆರಚುವ ಮಾಂಶಿಯ ಪ್ರಸನ್ನ ಮುಖಚಿತ್ರ ವು ಕಿಟಕಿಯ ಚೌಕಟ್ಟಿನಲ್ಲಿ ಸರಿದಾಡುವುದು. ಮುಂಜಾನೆಯ ಆ ಮೌನದಲ್ಲಿ ಅವಳ ಮಂತ್ರೋಚ್ಛಾರಣೆ ತುಸು ಏರಿದ ದನಿಯಲ್ಲೇ  ಕೇಳಿಸುವುದು. ಪಂಡರಪುರ ವಿಠೋಬ ರುಕುಮಾಯಿ ಈ ಮಾಂಶಿಯ ಆರ್ತತೆಯನ್ನು ಕೇಳಿಯೇ ಕಣ್ಣು ತೆರೆಯುತ್ತಿರಬಹುದು!

ಬಿಲ್ಡಿಂಗ್ ನಂಬರ್ ತೇರಾ ಬಿ ವಿಂಗಿನ ಬಿಲ್ಡರ್ ಎಲ್ಲಾ ಬಜೆಟ್ಟಿನವರಿಗೂ ಎಟಕುವ ಹಾಗೆ ಗೋಡೆಗಳನ್ನು ಕಟ್ಟಿ ಸಾಮಾಜಿಕ ನ್ಯಾಯ ಒದಗಿಸಿದ್ದಾನೆ. ಇಲ್ಲಿಯ ತಳ ಭಾಗದ ಫ್ಲ್ಯಾಟ್ ಗಳು ಒಂದೇ ರೂಮು ಇರುವಂಥವು. ಅವುಗಳ ಮೇಲಿನ ಸಾಲಿನಲ್ಲಿ ಒನ್ ರೂಮ್  ಕಿಚನ್ (ಆರ್ಕೆ), ನಡು ಭಾಗದವು ಒನ್ ಬೆಡ್ ರೂಮ್ ಕಿಚನ್ (೧ಬಿಎಚ್ಕೆ)  ಟಾಪ್ ನಲ್ಲಿ ಟು ಬಿಚ್ಕೆ ಫ್ಲ್ಯಾಟುಗಳು. ಈ  ಕ್ಷೇತ್ರ ವ್ಯತ್ಯಾಸಗಳೇ ಕೀಳರಿಮೆ ಮತ್ತು ಮೇಲರಿಮೆಯ ಮುಖಭಾವದಲ್ಲಿ ವ್ಯಕ್ತಗೊಳ್ಳುತ್ತಿರುವುದು. ಒಂದು ಸೂರು ಸಿಕ್ಕರೆ ಸಾಕೆಂದು ಹಂಬಲಿಸಿದ್ದ ಮನಸು ಮತ್ತೊಂದು ರೂಮಿನ ಕನಸು ಕಾಣಲೂ ಕಾರಣವಾಗುವುದು.  ಎಲ್ಲ ಅಂತಸ್ತುಗಳ ಕಿಟಕಿಗಳು ಕಾಣಲು ಒಂದೇ ರೀತಿಯವಾಗಿದ್ದರೂ ಭಿನ್ನ ಬಗೆಯ ಬದುಕನ್ನು ಪ್ರದರ್ಶಿಸುತ್ತಿರುತ್ತವೆ.

ಫ್ಲ್ಯಾಟ್ ವಿಶಾಲವಾದಷ್ಟೂ ಮನೆಯ ಸದಸ್ಯರ ಸಂಖ್ಯೆ ಕಡಿಮೆಯಾಗುವುದನ್ನು ಕತೆಗಾರನು ಲೆಕ್ಕ ಮಾಡಿಯೇ ಖಾತ್ರಿ ಮಾಡಿಕೊಂಡಿದ್ದಾನೆ. ರತ್ನಾಗಿರಿ ಕಡೆಯ ಒಂದು ಫ್ಯಾಮಿಲಿ ಒಂದೇ ರೂಮಿನಲ್ಲಿ ಅದು ಹೇಗೋ ಅಡ್ಜಸ್ಟ್ ಮಾಡಿಕೊಂಡಿದ್ದಾರೆ. ಗಂಡ ಹೆಂಡತಿ ತಂದೆ ತಾಯಿ ಇಬ್ಬರು ಚಿಕ್ಕ ಮಕ್ಕಳು -ಇವರಿಗೆಲ್ಲರಿಗೂ ಮಲಗುವುದು ಉಣ್ಣುವುದು ಅಡುಗೆ ಮಾಡುವುದು ಬೆಡ್ರೂಮ್ ಕಿಚನ್ ಹಾಲ್ಎಲ್ಲದಕ್ಕೂ ಇರುವುದು ಆ ಒಂದು ಕೋಣೆ ಮಾತ್ರ. ಇಂಥ ಇಕ್ಕಟ್ಟಿನಲ್ಲಿ ಎರಡೆರಡು ಮಕ್ಕಳನ್ನು ಹೇಗೆ ಉದುರಿಸಿದ ಮಾರಾಯಾ ಎಂಬ ಸಂದೇಹಕ್ಕೆ ಸಾಳುಂಕೆ ಬಳಿ ಉತ್ತರವಿದೆ… ಹರ್ ದಿನ್ ಶಾಮ್ ಕೋ ಬುಡ್ಡಾಬುಡ್ಡಿ ಗಾರ್ಡೆನ್ ಮೆ ಜಾತೆ ಹೈ…. ಆಕ್ಚುವಲಿ ಉನ್ಕೋ ಗಾರ್ಡನ್ ಮೆ ಬೈಟನೇ ಕಾ ಶೌಕ್ ನಹೀ… ಬೇಟಾ ಔರ್ ಬಹು ಪ್ಯಾರ್ ಕರ್ನೆ ಕಾ ಮೌಕಾ ದೇತಾ ಹೈ… ಎಂದು ನಕ್ಕಿದ್ದ.

ದಸ್ ಬೈ ದಸ್ ಕೋಣೆಗಳಲ್ಲಿರುವ ಜೀವಾತ್ಮಗಳ ಪ್ರೀತಿ, ಪ್ರೇಮ, ಸಂಭ್ರಮ, ಸಂಕಟ, ಸಿಟ್ಟು, ಸೆಡವು, ಮನಸ್ತಾಪಗಳೂ ಅವರವರ ನಿಲುವಿನಲ್ಲಿ, ಚಲನೆಯ ಗತಿಯಲ್ಲಿ ಅಭಿವ್ಯಕ್ತಗೊಂಡು ಕತೆಗಾರನ ಎದೆಗೆ ಬಂದು ಬೀಳುವವು. ನಗರ ಜೀವನದ ಮೆಲೋಡ್ರಾಮಾಗಳು  ಕಿಟಕಿಗಳೆಂಬ ಸಾಲುಸಾಲು ಫ್ರೇಮುಗಳಲ್ಲಿ ಸರಿದಾಡಿ ದೃಶ್ಯಾತೀತ ಶ್ರವ್ಯಾತೀತ ಅನುಭವಗಳಲ್ಲಿ ಅಚ್ಚಾಗುವವು.

ಚೌದಾ ನಂಬರ್ ಬಿಲ್ಡಿಂಗಿನ ಬಾರಾ ನಂಬರ್ ಕಿಟಕಿಗಳು ಏಸಿ ಹಾಕಿಸಿಕೊಂಡು ಸದಾ ಮುಚ್ಚಿರುವ ಕಾರಣಕ್ಕೆ ಪಾರಿವಾಳಗಳು  ಗೂಡು ಕಟ್ಟಿ ಮರಿ ಮಾಡಿವೆ. ಆ ಕೋಣೆಯೊಳಗಿನ ವ್ಯಕ್ತಿಗಳ ಎಂದೂ ಕಾಣದ ಮುಖಗಳು ಹೇಗಿರಬಹುದು ಎನ್ನುವ ಕುತೂಹಲವೋ ಪಾರಿವಾಳಗಳು ಮರಿ ಮಾಡುವ ಸಂಭ್ರಮವೋ- ಮುಚ್ಚಿರುವ ಆ ಕಿಟಕಿಗಳತ್ತ ಕತೆಗಾರನ ಒಂದು ಕಣ್ಣಿರುವುದು ಸುಳ್ಳಲ್ಲ. ಆದರೆ ಕಿಟಕಿಗಳು ತೆರೆದ ಆ ದಿನದಂದು ಕತೆಗಾರನು ಕಣ್ಣುಗಳನ್ನು ಮುಚ್ಚಿಕೊಳ್ಳಬೇಕಾಯಿತು. ಒಂದು ನಡು ಮಧ್ಯಾಹ್ನ ಆ ಬಿಲ್ಡಿಂಗನಲ್ಲಿ ಅಲ್ಲಿಯ ರಹವಾಸಿಗಳೂ ಪೋಲೀಸರೂ ಅಗ್ನಿಶಾಮಕದಳದವರೂ ಆತಂಕದಲ್ಲಿ ಓಡಾಡುತ್ತಿದ್ದರು. ಮುಚ್ಚಿರುವ ಕಿಟಕಿ ತಟ್ಟನೇ ತೆರೆದುಕೊಂಡಾಗ ಫ್ಯಾನಿಗೆ ನೇಣು ಹಾಕಿಕೊಂಡ ಹೆಣ್ಣು ಜೀವದ ಮುಖ ದರ್ಶನವಾಗಿತ್ತು! ಈ ಕತೆಗಾರನೂ ಊಹಿಸದ ಕಹಾನಿಯನ್ನು ಸಾಳುಂಕೆ ಹೇಳಿದ್ದ! ಇದು ಕಹಾನಿಯಲ್ಲವೆಂದೂ ಹಕೀಕತ್ತು ಎಂದೂ ಹೇಳಿದ್ದ!

ಅಪಾರ್ಟುಮೆಂಟುಗಳಲ್ಲಿ ಬಾಗಿಲು ಮುಚ್ಚಿದ್ದರೂ ಕಿಟಕಿಗಳು ತೆರೆದಿರುವುದರಿಂದ ಅಷ್ಟರಮಟ್ಟಿಗಾದರೂ ಬದುಕು ಸಾರ್ವಜನಿಕವಾಗುತ್ತದೆ. ಆದರೆ ಕಿಟಕಿಗಳೂ ಮುಚ್ಚಿದ್ದರೆ ಬರೀ ಕಹಾನಿಗಳೇಹುಟ್ಟಿಕೊಳ್ಳುತ್ತವೆ. ಮುಚ್ಚಿದ ಕಿಟಕಿಗಳತ್ತ ಮತ್ತೆಂದೂ ನೋಡಬಾರದು ಎಂದುಕೊಂಡರೂ ಮುರಿದ ಬಾಗಿಲು ಕಿಟಕಿಗಳನ್ನು ರಿಪೇರಿ ಮಾಡಿದ ಮೇಲೆ ಮತ್ತೆ ಪಾರಿವಾರಗಳು ಗೂಡುಕಟ್ಟತೊಡಗಿರುವುದು ಕತೆಗಾರನಿಗೆ ಕಾಣುತ್ತದೆ.

ಆರು ತಿಂಗಳ ನಂತರ ಅದೇ ಕಿಟಕಿಯಲ್ಲಿ ನವಜಾತ ಶಿಶುವನ್ನು ಎಳೆ ಬಿಸಿಲಿಗೆ ಹಿಡಿದಿರುವುದೂ ಕಾಣುತ್ತದೆ!

3 Comments

 1. Anant Bhagwat
  May 3, 2017
 2. Ahalya Ballal
  May 2, 2017
  • ರಾಜೀವ
   May 2, 2017

Add Comment

Leave a Reply