Quantcast

ಜನಪದ ಕಲ್ಪನೆಯ ಸುಂದರ ಅನಾವರಣ ‘ಬಾಹುಬಲಿ’

                                                                                             

                                                                                                       ಗೊರೂರು ಶಿವೇಶ್

ಬಿಡುಗಡೆಯ ಮುನ್ನ ಅಪಾರ ನಿರೀಕ್ಷೆ ಮತ್ತು ಕುತೂಹಲವನ್ನು ಮೂಡಿಸಿ ದಿನದಿನವೂ ಹತ್ತು ಹಲವು ಬಣ್ಣವನ್ನು ಪಡೆದು ಬಿಡುಗಡೆಯಾದ ಚಿತ್ರ ಬಾಹುಬಲಿ – 2 ಗಲ್ಲಾಪೆಟ್ಟಿಗೆಯಲ್ಲಿ ನಭೂತೋ ನಭವಿಷ್ಯತಿ ಎಂಬಂತೆ ಸದ್ದು ಮಾಡುತ್ತಿದೆ.

ಹಿಂದಿಯ ದಂಗಲ್, ಭಜರಂಗಿ ಬಾಯಿಜಾನ್, ಸುಲ್ತಾನ್‍ನಂಥ ಚಿತ್ರಗಳು ಐನೂರು ಕೋಟಿಗೂ ಹೆಚ್ಚು ಹಣವನ್ನು ಗಳಿಸಿದಾಗ ಬಾಯಿಗೆ ಬೆರಳಿಟ್ಟುಕೊಂಡಿದ್ದ ಪ್ರೇಕ್ಷಕ, ಈಗ ಬಿಡುಗಡೆಯಾದ ಹತ್ತು ದಿನಗಳೊಳಗೆ ಚಿತ್ರ ಸಾವಿರ ಕೋಟಿ ದಾಟುವ ನಿರೀಕ್ಷೆ ಮೂಡಿಸಿರುವುದನ್ನು ಕಂಡು ಬೆಕ್ಕಸಬೆರಗಾಗಿದ್ದಾನೆ.

ಕನ್ನಡದಲ್ಲಿ ತುಂಬಾ ನಿರೀಕ್ಷೆಯಿದ್ದ ಜನಪ್ರಿಯ ನಟರ ಚಿತ್ರ ಹಾಸನದಂಥ ನಗರದಲ್ಲಿ ಎರಡು ಥಿಯೇಟರ್‍ನಲ್ಲಿ ಬಿಡುಗಡೆಯಾಗಿ ಆಟೋದಲ್ಲಿ ರೀಲ್‍ಗಳು ಥಿಯೇಟರ್‍ಗಳ ಓಡಾಡುತ್ತಿರುವುದನ್ನು ನೋಡಿದ ಪ್ರೇಕ್ಷಕ ಮಹಾಶಯ ಏಕಾಏಕಿ ಹಾಸನದಲ್ಲಿ ಇರುವ ಏಳು ಥಿಯೇಟರ್‍ನಲ್ಲಿ ನಾಲ್ಕು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ, ಪ್ರವೇಶದರದ ಎರಡುಪಟ್ಟು ಪ್ರೀಮಿಯಂ ಹಣ ನೀಡಿ ನೋಡಿ ತಣಿದಿದ್ದಾನೆ. ಮೈಸೂರಿನಲ್ಲಿ ಇರುವ ಹದಿನಾರು ಥಿಯೇಟರ್‍ನಲ್ಲಿ ಅರ್ದದಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಚಿತ್ರ ರಾಷ್ಟ್ರಾದ್ಯಂತ 9 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡು ವಿತರಕರಿಗೆ ಹಣದ ಹೊಳೆಯನ್ನೇ ಹರಿಸಿವೆ.

‘ಬಣ್ಣ ಬಣ್ಣಗಳಿಂದಲೂ, ಭಯಂಕರ ಹೋರಾಟದಿಂದಲೂ, ಇಂಪಾದ ಸಂಗೀತದಿಂದಲೂ, ಸುಂದರವಾದ ಹಾಡುಗಳಿಂದಲೂ ಮನಮೋಹಕ ನೃತ್ಯಗಳಿಂದಲೂ, ನಕ್ಕನಗಿಸುವ ಹಾಸ್ಯ ದೃಶ್ಯಗಳಿಂದಲೂ ಕೂಡಿರುವ ಸುಮಧುರ, ಸುಂದರ ಚಿತ್ರ. . ‘- ಇದು ಚಿತ್ರ ಹೇಗೆ ಇರಲಿ ನಾವು ಬಾಲ್ಯಕಾಲದಲ್ಲಿ ಸಿನಿಮಾದ ಪೋಸ್ಟರನ್ನು ಹೊತ್ತ ಸೈಕಲ್ ಇಲ್ಲವೆ ಗಾಡಿಗಳಲ್ಲಿ ಚಿತ್ರದ ಪ್ರಚಾರ ಮಾಡುತ್ತಾ ಹೋಗುತ್ತಿದ್ದಾಗ ಕೇಳಿ ಬರುತ್ತಿದ್ದ ದನಿ. ಬಹುಶ: ಆ ಮಾತುಗಳನ್ನು ಈ ಚಿತ್ರಕ್ಕೆ ಸಂಪೂರ್ಣವಾಗಿ ಅನ್ವಯಿಸಿ ಹೇಳಬಹುದೇನೋ ಏಕೆಂದರೆ ಬಾಹುಬಲಿ ಹಲವು ವಿಶೇಷಗಳ ಸಂಗಮ ಚಿತ್ರಗಳ ಸಿಕ್ವೇಲ್‍ಗಳನ್ನು ಮಾತ್ರ ನೋಡಿದ್ದ ಪ್ರೇಕ್ಷಕ ಮೊದಲ ಬಾರಿಗೆ ಒಂದೇ ಚಿತ್ರವನ್ನು ಎರಡು ಭಾಗದಲ್ಲಿ ನೋಡಿದ್ದಾನೆ.

ವಿಶೇಷವೆಂದರೆ ಚಿತ್ರದ ಕಥೆಯ ಎರಡನೇ ಭಾಗ ಬಾಹುಬಲಿ – 1 ರಲ್ಲಿ ಒಡಮೂಡಿದ್ದರೆ ಕಥೆಯ ಬಹುತೇಕ ಮೊದಲ ಅರ್ಧ ಭಾಗ – 2 ರಲ್ಲಿ ಪಡಿಮೂಡಿದೆ. ಎರಡು ಸಿನಿಮಾಗಳ ಕೊಂಡಿ ಮತ್ತು ಪ್ರೇಕ್ಷಕರನ್ನು ಕುತೂಹಲಕ್ಕೆ ಕೆಡವಿ ಕಾಡಿದ “ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ”? ಎಂಬ ಅಂಶವೇ ಚಿತ್ರದ ಪ್ರಮುಖ ಅಂಶವಾಗಿದೆ.

ಭಾರತದ ಮಹಾಕಾವ್ಯಗಳಲ್ಲೊಂದಾದ ಮಹಾಭಾರತ ಅಂದಿನಿಂದ ಇಂದಿನವರೆಗೂ ಅನೇಕ ಕಥೆ ಕಾದಂಬರಿಗಳಿಗೆ -ಚಲನಚಿತ್ರಗಳಿಗೆಸ್ಪೂರ್ತಿ ನೀಡಿದೆ. ಅಂತೆಯೇ ಈ ಚಿತ್ರದ ಪ್ರಧಾನ ಎಳೆಯು ರಾಜ್ಯ ಮತ್ತು ರಾಣಿಯರಿಗಾಗಿ ರಾಜರ ನಡುವೆ ನಡೆದ ಹೋರಾಟವನ್ನು ಹೊಂದಿದೆ. ಅಂಗವಿಹೀನ ರಾಜ ರಾಜ್ಯವನ್ನಾಳಲಾಗದ ಸಂದರ್ಭದಲ್ಲಿ ಮಹಾರಾಣಿ ಶಿವಗಾಮಿ ಮಹಿಷ್ಮತಿ ರಾಜ್ಯದ ಸೂತ್ರವನ್ನು ಹಿಡಿದಿದ್ದಾಳೆ. ಅವಳ ಮಗ ಬಲ್ಲಾಳದೇವ. ಇನ್ನೂ ರಾಜನ ಸಹೋದರನ ಮಗ ಅಮರೇಂದ್ರ ಬಾಹುಬಲಿ. ಆತ ಬಾಲ್ಯದಲ್ಲಿಯೆ ತಂದೆ-ತಾಯಿಗಳನ್ನು ಕಳೆದುಕೊಂಡು ತಬ್ಬಲಿಯಾದಾಗ ರಾಣಿ ಶಿವಗಾಮಿ ತನ್ನ ಮಗನ ಜೊತೆ ಬಾಹುಬಲಿಯನ್ನು ಪೊರೆಯುತ್ತಾಳೆ. ಇಬ್ಬರೂ ಸಮಾನ ಶಿಕ್ಷಣ ಪಡೆಯುತ್ತಾರೆ. ಮುಂದೆ ಕಾಲಕೇಯನ ಶತೃಪಡೆ ರಾಜ್ಯದ ಮೇಲೆ ದಂಡೆತ್ತಿ ಬಂದಾಗ ಶಿವಗಾಮಿ ಇಬ್ಬರಿಗೂ ಒಂದು ಪಣವೊಡ್ಡುತ್ತಾಳೆ. ಅದುವೆ ಇಬ್ಬರ ನಡುವೆ ಯುದ್ದ ಸಾಮಾಗ್ರಿ ಮತ್ತು ಸೈನಿಕರನ್ನು ಸಮವಾಗಿ ಹಂಚಿ ಯಾರು ಕಾಲಕೇಯನ ಕೈ ಕಾಲುಗಳನ್ನು ಕತ್ತರಿಸಿ ತರುವರೋ ಅವರಿಗೆ ರಾಜ್ಯಾಭಿಷೇಕಎಂದು ಘೋಷಿಸುತ್ತಾಳೆ.

ಬಲ್ಲಾಳದೇವನ ತಂದೆ ಬಿಜ್ಜಳದೇವ ಈ ಸಂಧರ್ಭದಲ್ಲಿ ಮಗನ ಪರ ಪಕ್ಷಪಾತ ವಹಿಸಿ ತನ್ನ ಮಗನಿಗೆ ಹೆಚ್ಚು ಯುದ್ಧ ಸಾಮಗ್ರಿ ಮತ್ತು ಸೇನೆ ದೊರೆಯುವಂತೆ ಮಾಡುತ್ತಾನೆ. ಆದರೂ ಯುದ್ಧದಲ್ಲಿ ತನ್ನ ಸೈನಿಕರನ್ನು ಸ್ಪೂರ್ತಿಗೊಳಿಸಿ ತನ್ನ ಚಾಣಾಕ್ಷತೆಯಿಂದ ಕಾಲಕೇಯರ ವಿರುದ್ದ ಬಾಹುಬಲಿ ಯುದ್ದ ಗೆದ್ದರೂ ಕಾಲಕೇಯನ ಕಾಲುಗಳನ್ನು ಬಲ್ಲಾಳದೇವ ಕತ್ತರಿಸುವುದರಿಂದ ಅವನಿಗೆ ರಾಜ್ಯಾಭಿಷೇಕ ಮಾಡಬೇಕಾದ ಪ್ರಸಂಗ ಬರುತ್ತದೆ.

ಆದರೆ ಮಹಾರಾಣಿ ಶಿವಗಾಮಿ ತನ್ನ ಅಧಿಕಾರ ಚಲಾಯಿಸಿ ಯುದ್ದವನ್ನು ಸಮರ್ಥವಾಗಿ ಮುನ್ನೆಡೆಸಿ ಬಾಹುಬಲಿಗೆ ರಾಜ್ಯಾಭಿಷೇಕ ಎಂದು ಘೋಷಿಸುತ್ತಾಳೆ. ಇದು ಬಲ್ಲಾಳದೇವ, ಬಿಜ್ಜಳದೇವರಿಗೆ ಅಸಮಧಾನವನ್ನು ಉಂಟುಮಾಡುತ್ತದೆ.

ರಾಜ್ಯಾಭಿಷೇಕಕ್ಕೆ ಮುನ್ನ ಜನಸಾಮಾನ್ಯರ ಕಷ್ಟಗಳನ್ನು ಅರಿಯಲು ಜನಸಾಮಾನ್ಯರಂತೆ ಅಕ್ಕಪಕ್ಕದ ರಾಜ್ಯಕ್ಕೆ ವೇಷ ಬದಲಾಯಿಸಿ ಪರರಾಜ್ಯದೊಳಗೆ ಹೋಗಿಬರಲು ಸೇನಾಧಿಪತಿ ಕಟ್ಟಪ್ಪನನ್ನು ಜೊತೆ ಮಾಡಿ ಕಳುಹಿಸುತ್ತಾಳೆ. ಕುಂತಳ ರಾಜ್ಯಕ್ಕೆ ಹೋಗುವ ಇಬ್ಬರು ಅಲ್ಲಿದ್ದ ಸಂದರ್ಭದಲ್ಲಿ ಅಮರೇಂದ್ರ ಬಾಹುಬಲಿ ರಾಜಕುಮಾರಿ ದೇವಸೇನಾಳ ಪ್ರೀತಿಯ ಬಲೆಗೆ ಬೀಳುತ್ತಾನೆ. ಈ ವಿಷಯ ತಿಳಿದ ಬಲ್ಲಾಳದೇವ ಹೊಸದೊಂದು ಹುನ್ನಾರದ ಬಲೆ ಎಣೆಯುತ್ತಾನೆ. ಅಂತೆಯೆ ತನ್ನ ತಾಯಿಯ ಬಳಿ ಹೋಗಿ ತಾನು ದೇವಸೇನಾಳನ್ನು ಇಷ್ಟಪಟ್ಟಿರುವ ವಿಷಯ ತಿಳಿಸುತ್ತಾನೆ. ಅಮರೇಂದ್ರ ದೇವಸೇನಾಳ ಪ್ರೀತಿ ವಿಷಯ ಅರಿಯದ ರಾಣಿ ಶಿವಗಾಮಿ ಮದುವೆ ಬೇಡಿಕೆಯನ್ನು ಕುಂತಳ ರಾಜ್ಯಕ್ಕೆ ಕಳುಹಿಸುತ್ತಾಳೆ.

ಅದೇ ಸಮಯದಲ್ಲಿ ಪಿಂಡಾರಿಗಳ ದಾಳಿಗೆ ಸಿಕ್ಕಿದ್ದ ಕುಂತಳ ರಾಜ್ಯವನ್ನು ತನ್ನ ಶೌರ್ಯ ಮತ್ತು ಚಮತ್ಕಾರಿಕೆಯಿಂದ ಅಮರೇಂದ್ರ ಬಾಹುಬಲಿ ರಕ್ಷಿಸುತ್ತಾನೆ.ಇದೆಲ್ಲವನ್ನು ಕಂಡು ಅಮರೇಂದ್ರನ್ನು ಇಷ್ಟಪಟ್ಟಿದ್ದ ದೇವಸೇನ ಬಲ್ಲಾಳನನ್ನು ಮದುವೆಯಾಗಲು ನಿರಾಕರಿಸುತ್ತಾಳೆ. ಕೋಪೋದ್ರಿಕ್ತಳಾದ ರಾಣಿ ಶಿವಗಾಮಿ ಬಾಹುಬಲಿಗೆ ದೇವಸೇನಾಳನ್ನು ಬಂಧಿಸಿ ತರಲು ಆದೇಶಿಸುತ್ತಾಳೆ.

ಮುಂದೆ ರಾಜ್ಯಸಭೆಯಲ್ಲಿ ನಡೆದ ವಿಚಾರಣೆಯಲ್ಲಿ ವಿಷಯ ತಿಳಿದ ರಾಣಿ ಶಿವಗಾಮಿ ರಾಜ್ಯ ಮತ್ತು ದೇವಸೇನ ಎರಡರಲ್ಲಿ ಒಂದನ್ನು ್ಲ ಆಯ್ಕೆಮಾಡಿಕೊಳ್ಳುವ ಅವಕಾಶ ನೀಡಿದಾಗ ಅಮರೇಂದ್ರ ದೇವಸೇನಾಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ರಾಜ್ಯಾಭಿಷೇಕದ ಭಾಗ್ಯ ಬಲ್ಲಾಳನಿಗೆ ದೊರೆಯುತ್ತದೆ. ಪುರಜನರ ಅಸಂತುಷ್ಟತೆಯ ನಡುವೆ ಪಟ್ಟವನ್ನೇರುವ ಬಲ್ಲಾಳ ಯಾವತ್ತಿದ್ದರೂ ಅಮರೇಂದ್ರ ತನ್ನ ಮಗ್ಗುಲ ಮುಳ್ಳು ಎಂದು ಭಾವಿಸಿ ಅಮರೇಂದ್ರ-ದೇವಸೇನಾರನ್ನು ಕೊಲ್ಲುವ ಯೋಜನೆ ರೂಪಿಸುತ್ತಾನೆ.

ದೇವಸೇನಾಳ ಮಾವನ ಮೂಲಕ ತನ್ನನ್ನು ಕೊಲ್ಲಲು ಅಮರೇಂದ್ರ ಯತ್ನಿಸಿದ್ದಾನೆ ಎನ್ನುವಂತೆ ಯೋಜನೆ ರೂಪಿಸಿ ಅದನ್ನು ಮಹಾರಾಣಿ ಶಿವಗಾಮಿ ನಂಬುವಂತೆ ಮಾಡಿ ಆಕೆಯಲ್ಲಿ ಆಕ್ರೋಷವನ್ನುಂಟು ಮಾಡಿ ಆಕೆ ತನ್ನ ಬಲಗೈ ಭಂಟ ಕಟ್ಟಪ್ಪನಿಗೆ ಅಮರೇಂದ್ರನನ್ನು ಕೊಲ್ಲುವಂತೆ ಆದೇಶಿಸುತ್ತಾಳೆ. ಆಕೆಯ ಆಜ್ಞೆ ಮೀರಲಾರದ ಕಟ್ಟಪ್ಪ ಇಷ್ಟವಿಲ್ಲದಿದ್ದರೂ ಅಮರೇಂದ್ರನನ್ನು ಕೊಲೆಗೈಯುತ್ತಾನೆ. ಅಷ್ಟೆ ಅಲ್ಲದೆ ದೇವಸೇನಾಳನ್ನು ಬಲ್ಲಾಳ ಬಂಧಿಸಿಡುತ್ತಾನೆ.

ಮುಂದೆ ವಾಸ್ತವ ತಿಳಿದ ಶಿವಗಾಮಿ ಅಮರೇಂದ್ರ ಬಾಹುಬಲಿಯ ಮಗ ಮಹೇಂದ್ರ ಬಾಹುಬಲಿಯನ್ನು ರಕ್ಷಿಸುವ ಸಂದರ್ಭದಲ್ಲಿ ಪ್ರವಾಹದಲ್ಲಿ ತಾನು ಕೊಚ್ಚಿ ಹೋಗುವ ಸಂದರ್ಭದಲ್ಲೂ ಮಗುವನ್ನು ಕೈಯ ತುದಿಯಲ್ಲಿ ಹಿಡಿದು ರಕ್ಷಿಸಿ ತಾನು ಅಸು ನೀಗುತ್ತಾಳೆ.. ಆ ಮಗು ದಂಡೆಯ ಬಳಿಯಿದ್ದ ಜನರಿಗೆ ಸಿಕ್ಕು ಮಕ್ಕಳಿಲ್ಲದ ಸಂಗ ಮತ್ತು ಆತನ ಪತಿ ಆ ಮಗುವಿಗೆ ಶಿವ ಎಂದು ಹೆಸರಿಡುತ್ತಾರೆ. ಮುಂದೆ ಆ ಮಗು ಬೆಳೆದು ಹೇಗೆ ತನ್ನ ಇತಿಹಾಸವನ್ನು ತಿಳಿದು ತನ್ನ ರಾಜ್ಯ ಮತ್ತು ತಾಯಿಯನ್ನು ತಿರುಗಿ ಪಡೆಯುತ್ತಾನೆ ಎಂಬುದು ಎರಡು ಚಿತ್ರಗಳಲ್ಲಿ ಹರಡಿಹೋಗಿರುವ ಕಥಾಹಂದರ.

ಬಾಲ್ಯದಲ್ಲಿ ಓದಿದ ಚಂದಮಾಮ ಅಮರಚಿತ್ರಕೋಶದ ಕಥೆಗಳನ್ನು ನೆನಪಿಸುವ ಅದ್ಭುತ ರಮ್ಯ ಕಥಾನಕದ ಈ ಚಿತ್ರ ಯುದ್ಧ, ಬೇಟೆ, ತಂತ್ರ, ಪ್ರತಿತಂತ್ರ, ಶೃಂಗಾರದ ಜೊತೆ ಚಿತ್ರಕಾರ ರಚಿಸಿದ ಸುಂದರ ಚಿತ್ರಗಳಂತೆ ಭಾಸವಾಗುವ ಛಾಯಾಗ್ರಹಣ ಸುಂದರ ಸಂಗೀತದ ಹಿನ್ನೆಲೆ ಚಿತ್ರದ ನಿರ್ದೇಶಕ ರಾಜಮೌಳಿಯವರಿಗೆ ಹ್ಯಾಟ್ಸಪ್ ಹೇಳುವಂತೆ ಮಾಡಿದೆ. ನಾಯಕ ಪ್ರಧಾನವಾದ ಚಿತ್ರರಂಗದಲ್ಲಿ ಸೂಪರ್ ಸ್ಟಾರ್‍ಗಳಿಂದಾಗಿ ಮಾತ್ರ, ಯಶಸ್ವಿ ಚಲನಚಿತ್ರವೆನ್ನುವ ಭ್ರಮೆಯ ಗುಳ್ಳೆಯೊಡೆದು ಚಿತ್ರ ನಿರ್ದೇಶಕನ ಮಾಧ್ಯಮ ಎಂದು ಮತ್ತೊಮ್ಮೆ ಶ್ರುತಪಡಿಸಿ, ನವರಸಗಳನ್ನು ಸಮಪ್ರಮಾಣದಲ್ಲಿ ಹದವಾಗಿ ಬೆರಸಿ ಪ್ರೇಕ್ಷಕನಿಗೆ ಉಣಬಡಿಸಿದ್ದಾರೆ.ಪಾತ್ರಕ್ಕೆ ಹೊಂದುವ ಕಲಾವಿದರ ಆಯ್ಕೆ,ತಂತ್ರಜ್ಞರ ಬಳಕೆಯಲ್ಲಿ ತಮ್ಮ ಜಾಣ್ಮೆ ಮೆರದಿದ್ದಾರೆ. ಹಾಗೆಂದ ಮಾತ್ರಕ್ಕೆ ಚಿತ್ರದಲ್ಲಿ ಕುಂದುಕೊರತೆಗಳಿಲ್ಲವೆಂದಲ್ಲ.

ಭಾಗ – 1ಕ್ಕೆ ಹೋಲಿಸಿದರೆ ಭಾಗ -2ರಲ್ಲಿ ಯುದ್ದದ ಹಾಗೂ ಪ್ರಣಯದೃಶ್ಯಗಳು ಕೊಂಚ ನೀರಸವೆನಿಸುತ್ತದೆ. ಅಷ್ಟೆಲ್ಲಾ ತಾಂತ್ರಿಕ ಅಬ್ಬರವಿದ್ದರೂ ಕನ್ನಡದ ಮಯೂರ, ಬಬ್ರುವಾಹನದಂತೆ ಮನಸ್ಸಿನಲ್ಲಿ ಕೂತು ಕಾಡುವುದಿಲ್ಲ. ಕ್ಲೈಮ್ಯಾಕ್ಸ್‍ನಲ್ಲಿ ರನ್ನನ ಗದಾಯುದ್ದದ ಸನ್ನಿವೇಶವನ್ನು ನೆನಪಿಸುವ ರೋಚಕತೆ, ನಾಯಕ ಖಳನಾಯಕರ ನಡುವೆ ಸಮ ಪ್ರಮಾಣದ ಹೋರಾಟ ಚಿತ್ರಕ್ಕೆ ಹೊಸರಂಗು ನೀಡಿದೆ.

ಇಂಗ್ಲಿಷ್ ಚಿತ್ರಗಳ ಪ್ಯಾಂಟಸಿ ಲೋಕದಲ್ಲಿ ರಕ್ತ ಮಾಂಸವಿಲ್ಲದ ವಿಚಿತ್ರ ಜೀವಿಗಳೊಂದಿಗೆ ಹೋರಾಡುವ ಅವತಾರ್, ಸ್ಟಾರ್‍ವಾರ್ಸ್ ಚಿತ್ರಗಳನ್ನು ನೋಡಿ ಮೈಮರೆಯುವ ಯುವಜನರಿಗೆ ಈ ಚಿತ್ರ ಹೊಸ ಅನುಭವವನ್ನು ನೀಡುತ್ತಾ ಅಬಾಲ ವೃದ್ದರಾಗಿ ಎಲ್ಲರನ್ನೂ ರಂಜಿಸಿ ನಿರ್ದೇಶಕರ ಬಗ್ಗೆ ಹೆಮ್ಮೆಯನ್ನುಂಟು ಮಾಡುತ್ತದೆ.

4 Comments

 1. Rajan
  May 5, 2017
 2. kishor k
  May 4, 2017
  • GNK
   May 5, 2017
  • ಓದುಗ ದೊರೆ!
   May 5, 2017

Add Comment

Leave a Reply