Quantcast

ಎಲ್ಲರನ್ನೂ ಕುದಿಸುವ ‘ಕುದಿ ಎಸರು’

ಪ್ರೊ ಸಿ. ಎನ್. ರಾಮಚಂದ್ರನ್

ಸುಮಾರು ಒಂದು ವರ್ಷದ ಹಿಂದೆ..

ನಾನು ಮಧ್ಯಾಹ್ನ ನಾಲ್ಕು ಘಂಟೆಯ ಸಮಯದಲ್ಲಿ ನನ್ನ ಫ್ಲೈಟ್ ಗೆ ಕಾಯುತ್ತಾ ಏರ್‍ಪೋರ್ಟ್ ಲೌಂಜ್‍ನಲ್ಲಿ ಕುಳಿತಿದ್ದೆ.

‘ಇದೇನು, ನೀವು ಇಲ್ಲಿ?  ಯಾಕೆ ಇಷ್ಟು ಮಂಕಾಗಿದ್ದೀರಿ?’

ತಲೆಯೆತ್ತಿ ನೋಡಿದರೆ ಎದುರಿಗೆ ವೈದೇಹಿ.

‘ತುಂಬಾ ಕಸಿವಿಸಿಯಾಗ್ತಾ ಇದೆ, ವೈದೇಹಿ.  ಈಗ ತಾನೆ ಉಮಾಶ್ರೀ ಅವರ ಆತ್ಮಕಥನವನ್ನು ಓದಿ ಮುಗಿಸಿದೆ.

ಏನು ಬದುಕು ಇದು, ವೈದೇಹಿ?  ಏನು ಹೆಣ್ಣಿನ ಜನ್ಮ!  ಇದು ಬದಲಾಗುವುದೇ ಇಲ್ಲವಾ?’ ಅಂತ ಏನೇನೋ ಬಡಬಡಿಸಲು ಪ್ರಾರಂಭಿಸಿದೆ.  ಒಂದೆರಡು ನಿಮಿಷ ನನ್ನ ಮಾತು ಕೇಳಿ, ‘ನೀವೂ ಮಂಗಳೂರಿಗೆ ಬರ್ತಾ ಇದೀರಾ? ಏನು ಕಾರ್ಯಕ್ರಮ?’ ಎಂದು ವೈದೇಹಿ ವಿಷಯಾಂತರ ಮಾಡಿದರು.

ಡಾ. ವಿಜಯಮ್ಮ ಅವರ ಆತ್ಮಕಥೆ ‘ಕುದಿ ಎಸರು’ ಓದಿ ಮುಗಿಸಿದ ಮೇಲೆ ದಿಗ್ಭ್ರಮೆಯಿಂದ ಮೂಡುವ ಇದೇ ಬಗೆಯ ಗೋಜುಗೋಜಲು ಅನಿಸಿಕೆಗಳಲ್ಲಿ ಮೇಲೆದ್ದು ಬರುವುದು, ‘ಯಾವ ಏಳೇಳು ಜನ್ಮಗಳ ಪಾಪದ ಫಲ ಈ ನರಕದ ಬದುಕು?’  ಕೂಡಲೇ ಚುಚ್ಚುವ ಮೊನೆ, ‘ಇದು ಅವರ ಪಾಪದ ಫಲವಲ್ಲ; ನಮ್ಮ ಪಾಪದ ಫಲ; ಈ ಪುಣ್ಯಭೂಮಿಯಲ್ಲಿ ಹೆಣ್ಣಿಗೆ ನಾವು, ಪುರುಷರು, ಕೊಟ್ಟಿರುವ ಸ್ಥಾನದ ಫಲ.’  ಮತ್ತೆ  ‘ಇಂತಹ ಬದುಕನ್ನು ಹೆಣ್ಣಿಗೆ ಕೊಟ್ಟಿರುವ ಪುರುಷ-ವ್ಯವಸ್ಥೆಯಲ್ಲಿ ಪುರುಷನಾಗಿರುವುದರಿಂದ ಪರೋಕ್ಷವಾಗಿ ನಾನೂ ಭಾಗಿಯೆ?’ ಎಂಬ ಗಾಢ ವಿಷಾದ. ಕಣ್ಣಿಗೆ ಕವಿಯುವ ಕತ್ತಲು, ಶೂನ್ಯ ಮನಃಸ್ಥಿತಿ.

ತಮ್ಮ ಆತ್ಮಕಥನದ ಒಂದು ಸಂದರ್ಭದಲ್ಲಿ ವಿಜಯಮ್ಮ ಹೀಗೆ ಉದ್ಗರಿಸುತ್ತಾರೆ:

“ಈ ಬಗೆಯ ಬರವಣಿಗೆ ಎಂದರೆ ಮತ್ತೊಮ್ಮೆ ಆ ಬದುಕನ್ನು ಆಹ್ವಾನಿಸಿ, ಮನಸ್ಸಿನಲ್ಲೇ ಆ ದಿನದ ಘಟನೆಯನ್ನು ತದ್ವತ್ ರೀಪ್ಲೇ ಮಾಡಿಕೊಳ್ಳುವುದು.. ಅದರ ತೀವ್ರತೆ, ನೋವು ಅಸಹನೀಯವಾಗಿದೆ. ಅದಕ್ಕೆ  ಈ ಬರಹವೇ ಬೇಡ ಅನ್ನಿಸುತ್ತದೆ’ (ಪು. 306-307).

ನಿಜ; ಅಸಹನೀಯ, ಅವರ್ಣನೀಯ ನೋವಿನ-ದುಃಖದ-ಅಪಮಾನದ ಬದುಕು ವಿಜಯಮ್ಮನವರದು.  ತೌರಿನ ಯಾವ ಆಸರೆಯೂ ಇಲ್ಲದೆ ಬದುಕಿನುದ್ದಕ್ಕೂ ಇನ್ನೊಬ್ಬರ ಮನೆಯಲ್ಲಿ ಚಾಕರಿ ಮಾಡುತ್ತಾ ಬದುಕಿದ ತಾಯಿ –ಎಲ್ಲಾ ವ್ಯಸನಗಳಿಗೂ ತುತ್ತಾಗಿ ನೆಂಟರಿಷ್ಟರ ತಿರಸ್ಕಾರಕ್ಕೆ ಪಾತ್ರವಾಗಿದ್ದ ತಂದೆ- ಗರ್ಭಕ್ಕೇ ಕೈಹಾಕಿ ಭ್ರೂಣವನ್ನು ಕಿತ್ತುಹಾಕುವ, ಹಿಂಸಾರತಿಯಲ್ಲದೆ ಬೇರೇನೂ ಗೊತ್ತಿಲ್ಲದ, ನಡು ಬೀದಿಯಲ್ಲಿಯೇ ತನ್ನ ಹೆಂಡತಿಯನ್ನು ಕಾಲಿನಿಂದ ಒದೆಯುತ್ತಾ ಉರುಳಿಸಿಕೊಂಡು ಹೋಗುವ ಗಂಡ- ದಿನಕ್ಕೆ 20 ತಾಸು ದುಡಿದರೂ ಮತ್ತೂ ಗೊಣಗಾಡುವ ಗಂಡನ ಮನೆಯವರು- ಪಾದರಸ, ಸೀಮೇಎಣ್ಣೆ, -ಹಲ್ಲಿ ಸತ್ತ ನೀರು,  ಏನು ಕುಡಿದರೂ ಬರದ ಸಾವು- ಇಂತಹ ಬದುಕು ನರಕಸದೃಶವಲ್ಲ, ಸಾಕ್ಷಾತ್ ನರಕವೇ.  ಈ ವಿವರಗಳನ್ನೆಲ್ಲಾ ಓದುತ್ತಿರುವಾಗ 20ನೆ ಶತಮಾನದಲ್ಲಿಯೂ, ಬೆಂಗಳೂರಿನಂತಹ ನಗರದಲ್ಲಿ ಇಂತಹ ಘಟನೆಗಳು ನಡೆಯುತ್ತವೆಯೆ? ಇವೆಲ್ಲಾ ನಿಜವೆ? –ಎಂಬ ಭ್ರಮೆಯುಂಟಾಗುತ್ತದೆ; ಭ್ರಮೆಯಲ್ಲ ಎಂದು ಅರಿವಾದಾಗ ದುಃಖವಾಗುತ್ತದೆ.

ಆತ್ಮಕಥನದ ಒಂದು ಮುಖ್ಯ ಲಕ್ಷಣವೆಂದರೆ ಅದರ ವಿಶ್ವಸನೀಯತೆ.  ಈ ವಿಶ್ವಸನೀಯತೆಯನ್ನು ಕಥನಕ್ಕೆ ಕೊಡುವುದು ನಿರೂಪಣೆಯ ಪ್ರಾಮಾಣಿಕತೆ –ಯಾವ ಸ್ವವೈಭವೀಕರಣದ ಪ್ರಯತ್ನವೂ ಇಲ್ಲದ, ತಮ್ಮ ಅನುಭವಗಳಿಗೆ ಇನ್ನಾರನ್ನೋ ದೂಷಿಸುವ ಅಥವಾ ಅದಕ್ಕೊಂದು ನೈತಿಕ ಸಮರ್ಥನೆಯನ್ನು ಕೊಡುವ ಹಂಗಿಲ್ಲದ, ಕೇವಲ ಘಟಿಸಿದುದನ್ನು ಘಟಿಸಿದಂತೆಯೇ ದಾಖಲಿಸುವ ಪ್ರಾಮಾಣಿಕ ನಿಲುವು.

ಆ ನೆಲೆಯಲ್ಲಿ ನೋಡಿದಾಗ, ಈ ಆತ್ಮಕಥನದಂತಹ ವಸ್ತುನಿಷ್ಠ ಪ್ರಾಮಾಣಿಕ ನಿರೂಪಣೆ ವಿಜಯಮ್ಮನಂತಹವರಿಗೆ ಮಾತ್ರ ಸಾಧ್ಯ ಎಂದು ತೋರುತ್ತದೆ.  ಓದುವಾಗ, ಎಷ್ಟೋ ಬಾರಿ, ತನ್ನ ದೇಹದ ಮೇಲೆ ವಿನಾ ಕಾರಣ ಇಷ್ಟು ದೌಜನ್ಯವು ನಡೆಯುತ್ತಿದ್ದರೂ ಒಮ್ಮೆಯಾದರೂ ಇವರು ಏಕೆ ಪ್ರತಿಭಟಿಸಲಿಲ್ಲ ಎಂಬ ಪ್ರಶ್ನೆ ಓದುಗರ ಮನಸ್ಸಿನಲ್ಲಿ ಏಳುತ್ತದೆ.  ಆದರೆ ಲೇಖಕಿ ಯಾವ ಅಮೂರ್ತ ವೈಚಾರಿಕತೆಯ ಮೂಲಕವೂ ತಮ್ಮ ಬದುಕಿಗೆ  ಇಲ್ಲದ ಛವಿಯನ್ನೂ ಕೊಡಲು ಯತ್ನಿಸುವುದಿಲ್ಲ; ‘ಇದು – ಹೀಗೆ -ನಡೆಯಿತು’, ಇಷ್ಟೇ.  ಇಂತಹ ನಿರೂಪಣೆಯೇ ಅವರ ಕಥನಕ್ಕೆ ಸಂಪೂರ್ಣ ವಿಶ್ವಸನೀಯತೆಯನ್ನು ಕೊಟ್ಟು ಆ ಮೂಲಕ ಓದುಗರ ಆತ್ಮವನ್ನು ಬಡಿದೆಬ್ಬಿಸುತ್ತದೆ.

ಹಾಗೆಯೇ, ಇವರ ಬದುಕನ್ನು ಪ್ರವೇಶಿಸಿದ ಯಾವ ವ್ಯಕ್ತಿಯ ಪಾತ್ರವನ್ನೂ ಹಿಗ್ಗಿಸುವ ಅಥವಾ ಕುಗ್ಗಿಸುವ ಪ್ರಯತ್ನ ಇಲ್ಲಿಲ್ಲ.  ಈ ಕಥನದಲ್ಲಿ ಲೇಖಕಿಯನ್ನು ಹೊರತುಪಡಿಸಿದರೆ, ಮತ್ತೆ ಮತ್ತೆ ನಮ್ಮನ್ನು ಕಾಡುವ ಪಾತ್ರ ಅವರ ತಂದೆಯದು.

ಬೇರೆಯವರು ತೀರ್ಮಾನಿಸುವಂತೆ ಅವರು ಬೇಜವಾಬ್ದಾರಿಯ ಮನುಷ್ಯ; ನಾನಾ ವ್ಯಸನಗಳಿಗೆ ತುತ್ತಾದ ಮನುಷ್ಯ; ಕೊನೆಗೆ ಆ ಕಾರಣದಿಂದಲೇ ಅನೇಕ ರೋಗಗಳಿಗೆ ತುತ್ತಾಗಿ, ನರಳಿ ಸತ್ತ ಮನುಷ್ಯ.  ಆದರೂ ಮಗಳನ್ನು ತೀವ್ರವಾಗಿ ಪ್ರೀತಿಸಿದ ಮನುಷ್ಯ; ತನಗೆ ಸಾಧ್ಯವಿದ್ದಾಗ ಆದಷ್ಟು ಅವಳ ನೆರವಿಗೆ ಬಂದ ಮನುಷ್ಯ; ಕೊನೆಯಲ್ಲಿ, ಇನ್ನು ತಾಳಲಾರದೆ ಮಗಳು ಗಂಡನಿಂದ ದೂರವಿರುತ್ತೇನೆಂದು ನಿಶ್ಚಯಿಸಿದಾಗ ಆ ನಿಶ್ಚಯವನ್ನು ಅನುಮೋದಿಸಿ, ಅವಳಿಗೆ ನೈತಿಕ ಬಲವನ್ನು ತುಂಬಿದ ಮನುಷ್ಯ.  ಇಂತಹ ಸಂಕೀರ್ಣ ವ್ಯಕ್ತಿತ್ವವನ್ನು ನಾವು ಕಥೆ-ಕಾದಂಬರಿಗಳಲ್ಲಿಯೂ ಕ್ವಚಿತ್ತಾಗಿಯೇ ಕಾಣಬಹುದು.

 

ದಾರುಣ ಬದುಕನ್ನು ಮೂರು ದಶಕಗಳ ಕಾಲ ಅನುಭವಿಸಿಯೂ ಬದುಕಿದ, ಬದುಕಿ ಮತ್ತೆ ಹೊಸ ಬಾಳನ್ನು ಕಟ್ಟಿಕೊಂಡು ಇತರರಿಗೂ ಬಾಳು ಕಟ್ಟಿಕೊಟ್ಟಿರುವ ವಿಜಯಮ್ಮನವರ ಸಹನಶೀಲತೆ ಹಾಗೂ ಛಲ ಅಭಿನಂದನೀಯ ಎಂದರೆ ಏನೂ ಹೇಳಿದಂತಾಗುವುದಿಲ್ಲ.

ಈ ಲೇಖನವನ್ನು ಮುಗಿಸುವ ಮೊದಲು ಆನುಷಂಗಿಕವಾಗಿ ಈ ಕೃತಿಯನ್ನು ಕುರಿತು ಬಂದಿರುವ ಒಂದೆರಡು ಪ್ರತಿಕ್ರಿಯೆಗಳ ಬಗ್ಗೆ.

ಮೊದಲಿಗೆ ಲಕ್ಷ್ಮೀಪತಿ ಕೋಲಾರ ಅವರು ಈ ಕೃತಿಗೆ ಬರೆದಿರುವ ತುಂಬಾ ಗಂಭೀರ, ಅರ್ಥಪೂರ್ಣ ಹಾಗೂ ಭಾವಭರಿತ ಬೆನ್ನುಡಿಯಲ್ಲಿ ಒಂದು ಮಾತು ಹೇಳುತ್ತಾರೆ:

“. . . ಮತ್ತೂ ಆಘಾತದ ಸಂಗತಿಯೆಂದರೆ, ಬಹುಶಃ ಸಂಪ್ರದಾಯಗಳ ಮಿತಿಗೊಳಪಟ್ಟ ಅವರ ಸೀಮಿತ ಪ್ರಪಂಚದಲ್ಲಿ ಈ ಸಮಾಜದ ಬ್ರಾಹ್ಮಣೇತರ ಸಕಲೆಂಟು ಜಾತಿಗಳ ಬಹುದೊಡ್ಡ ವೈವಿಧ್ಯಮಯ ಸಮಾಜವೇ ಗೈರುಹಾಜರಾಗಿರುವುದು.”

ಈ ಹೇಳಿಕೆಯನ್ನು ಎರಡು ಬಗೆಯಲ್ಲಿ ಅರ್ಥಮಾಡಿಕೊಳ್ಳಬಹುದು: ‘ಬ್ರಾಹ್ಮಣ ಸಮಾಜವು ‘ಮುಚ್ಚಿದ ಸಮಾಜ’(closed society); ಈ ಸಮಾಜದ ಸ್ತ್ರೀಯರ ಲೋಕವು ಹೊರ ಜಗತ್ತಿಗೆ ತೆರೆದುಕೊಳ್ಳುವುದೇ ಇಲ್ಲ’ ಎಂಬ ಅರ್ಥದಲ್ಲಿ ಲಕ್ಷ್ಮೀಪತಿ ಅವರ ಹೇಳಿಕೆ ಸರಿಯಾಗಿದೆ.  ಆದರೆ, ಈ ಹೇಳಿಕೆಯನ್ನು ಈ ಕೃತಿಯ ಒಂದು ಮಿತಿ ಎಂದೂ ಗ್ರಹಿಸಲಿಕ್ಕೆ ಅವಕಾಶವಿದೆ.  ಈ ಗ್ರಹಿಕೆಯ ಕಾರಣಕ್ಕಾಗಿಯೇ ‘ಅವಧಿ’ಯಲ್ಲಿ ಪ್ರಕಟವಾದ ರಾಜಾರಾಂ ತಲ್ಲೂರು ಅವರ ಪ್ರತಿಕ್ರಿಯೆ  ಲಕ್ಷ್ಮೀಪತಿಯವರ ಹೇಳಿಕೆಯನ್ನು ಉದಹರಿಸುತ್ತಾ ಈ ಕೃತಿಯಲ್ಲಿ “..ವೈವಿಧ್ಯಮಯ ಜಗತ್ತೇ ಗೈರುಹಾಜರಾಗಿರುವುದು ಎದ್ದು ಕಾಣುತ್ತದೆ” ಎಂದು ಅದು ಕೃತಿಯ ಒಂದು ದೊಡ್ಡ ಮಿತಿಯೆಂಬಂತೆ ಕಾಣುತ್ತದೆ.  ಇದನ್ನು ಒಪ್ಪುವುದು ಕಷ್ಟ.  ಆತ್ಮಕಥನದ ಸ್ವರೂಪವೇ ವ್ಯಕ್ತಿಯೊಬ್ಬನ/ ವ್ಯಕ್ತಿಯೊಬ್ಬಳ ಬದುಕಿನ ಕಥೆಯೇ ಹೊರತು ಇಡೀ ಸಮಾಜದ ಬದುಕಾಗಲು ಸಾಧ್ಯವಿಲ್ಲ; ತನ್ನ ಅನುಭವಕ್ಕೆ ಬರದ ಸಂಗತಿಗಳ ಬಗ್ಗೆ ಲೇಖಕನು/ ಲೇಖಕಿ ತನ್ನ ಆತ್ಮಕಥನದಲ್ಲಿ ಹೇಗೆ ಬರೆಯಲು ಸಾಧ್ಯ?

ಇನ್ನೂ ತೀವ್ರತರವಾದ ಟೀಕೆಯೆಂದರೆ ಕೃತಿಯಲ್ಲಿ ಬರುವ ಲೇಖಕಿಯ ಖಾಸಾ ಬದುಕಿನ ವಿವರಗಳನ್ನು ಕುರಿತದ್ದು: “ಈ ಹಸಿ ಹಸಿ ವಿವರಗಳನ್ನು ತೆರೆದ ಮನಸ್ಸಿನಿಂದ ವಿವರಿಸದೆ, ಒಂದಷ್ಟು ಪೂರ್ವ ನಿರ್ಧರಿತ ತೀರ್ಮಾನಗಳ ಕಡೆಗೆ ವಾದಗಳ ಸಹಿತ ಕೊಂಡೊಯ್ಯುವುದು, ಅದಕ್ಕಾಗಿ ಓದುಗನಿಗೆ ಅಗತ್ಯವಿರದ ರೋಚಕ ವಿವರಗಳನ್ನು ಕೊಡುವುದು ಈ ಪುಸ್ತಕಕ್ಕೆ ಮಿತಿ.”  ಇದೊಂದು ದುರದೃಷ್ಟಕರ ತೀರ್ಮಾನ.  ಈ ಹೇಳಿಕೆಯ ಹಿನ್ನೆಲೆಯಲ್ಲಿ ನಾನು ಪುಸ್ತಕವನ್ನು ಮತ್ತೊಮ್ಮೆ ಓದಿದರೂ ಎಲ್ಲಿಯೂ ‘ವಾದ’ಗಳಾಗಲಿ ‘ಪೂರ್ವನಿರ್ಧರಿತ ತೀರ್ಮಾನ’ಗಳಾಗಲಿ ನನಗೆ ಸಿಗಲೇ ಇಲ್ಲ.  (ಕೊನೆಯ ಒಂದೆರಡು ಪುಟಗಳಲ್ಲಿ ಮಾತ್ರ ಲೇಖಕಿ ತನಗೇಕೆ ಪ್ರತಿಭಟಿಸಲು ಸಾಧ್ಯವಾಗಲಿಲ್ಲ ಎಂದು ತಮ್ಮನ್ನೇ ಪ್ರಶ್ನಿಸಿಕೊಳ್ಳುತ್ತಾರೆ.)  ಇನ್ನು, ಈ ‘ಹಸಿ ಹಸಿ ವಿವರಗಳು’ ಇಲ್ಲದಿದ್ದರೆ ಲೇಖಕಿಯ ಭಯಾನಕ ಬದುಕಿನ ಅನುಭವ ಓದುಗರಿಗೆ ಹೇಗೆ ಸಾಧ್ಯವಾಗುತ್ತಿತ್ತು?  ಆದರೆ, ಈ ವಿವರಗಳು ಖಂಡಿತಾ ‘ರೋಚಕ’ವಲ್ಲ; ಭೀಭತ್ಸಕರವಾಗಿವೆ, ನಮ್ಮ ಸಮಾಜದಲ್ಲಿ ಇಂದಿಗೂ ಹೆಣ್ಣಿನ ಸ್ಥಾನ ಏನು ಎಂಬುದನ್ನು ನಮ್ಮ ಕಣ್ಣಮುಂದೆ ರಾಚುತ್ತವೆ.

 

ಇನ್ನೂ ಮುಂದುವರೆದು ಹೇಳಬಹುದಾದರೆ, ಭಾರತದ ಒಳಗೆ ಮತ್ತು ಹೊರಗೆ ನಮ್ಮ ಸನಾತನ ಸಂಸ್ಕೃತಿಯ ಹೆಗ್ಗಳಿಕೆಯ ಬಗ್ಗೆ ತಾಸುಗಟ್ಟಲೆ ಮಾತನಾಡುವ ಮಹಾ ಜ್ಞಾನಿಗಳು, ಪುಟಗಟ್ಟಲೆ ಬರೆಯುವ ಮಹಾನ್ ಸಾಹಿತಿಗಳು, ಒಮ್ಮೆ ವಿಜಯಮ್ಮ, ಉಮಾಶ್ರೀ, ಪ್ರತಿಭಾ ನಂದಕುಮಾರ್, ಇಂದಿರಾ ಲಂಕೇಶ್, ಪ್ರೇಮಾ ಕಾರಂತ, ಎ. ಎಂ. ಮದರಿ, ಅರವಿಂದ ಮಾಲಗತ್ತಿ, ಮುಂತಾದವರ ಆತ್ಮಕಥನಗಳನ್ನು ಕಡ್ಡಾಯವಾಗಿ ಓದಬೇಕು; ಆಗ, ಪ್ರಾಯಃ, ಅವರುಗಳಿಗೆ ಹೇಗೆ ಈ ‘ಸನಾತನ, ಆರ್ಷೇಯ, ಭವ್ಯ’ ಹಿಂದು ಸಂಸ್ಕೃತಿ ಜಾತಿಯ/ ಧರ್ಮದ/ ಲಿಂಗದ ಆಧಾರದಲ್ಲಿ ಇಡೀ ಸಮಾಜದ 90% ಜನರನ್ನು ಸಮಾಜದ ಅಂಚಿಗೆ ಬಲವಂತವಾಗಿ ದೂಡಿದೆ ಎಂಬುದು ಮನದಟ್ಟಾಗಬಹುದು – ಬಹುದು.

ಕೊನೆಯಲ್ಲಿ, ವಿಜಯಮ್ಮನವರಲ್ಲಿ ಒಂದು ವಿನಯಪೂರ್ವಕ ಕೋರಿಕೆ: ಅತ್ಯಂತ ವಸ್ತುನಿಷ್ಠವಾಗಿ ಈ ಕೃತಿಯಲ್ಲಿ ನೀವು ನಿಮ್ಮ ಬದುಕಿನ  ‘Inferno’ ಹಾಗೂ ‘Purgatorio’ ಮುಖಗಳನ್ನು ಅನಾವರಣ ಮಾಡಿದ್ದೀರಿ; ಅಷ್ಟೇ ವಸ್ತುನಿಷ್ಠವಾಗಿ ನಿಮ್ಮ ಬದುಕಿನ   ‘Paradiso’ ಭಾಗವೂ ಆದಷ್ಟು ಬೇಗ ಅನಾವರಣಗೊಳ್ಳಲಿ.

 

4 Comments

 1. Anonymous
  May 7, 2017
 2. anupama prasad
  May 7, 2017
  • Anonymous
   May 7, 2017
   • anupama prasad
    May 8, 2017

Add Comment

Leave a Reply