Quantcast

ಚಲಂ ಎಂಬ ಬೆಂಕಿಕಡ್ಡಿ..

ಚಲಂ ಮತ್ತು ಬೆಂಕಿಕಡ್ಡಿ

ಕೆ ಪುಟ್ಟಸ್ವಾಮಿ 

ಮಿತ್ರ ಹಾಗು ಕಲಾವಿದ ಎಂ ಎಸ್ ಪ್ರಕಾಶ್ ಬಾಬು ಅವರ ಸ್ಟೇಟಸ್ ನಲ್ಲಿ ಚಲಂ ಬೆನ್ನೂರಕರ್ ಅವರು ನಿಧನರಾದ ಸುದ್ದಿ ನೋಡಿ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದಾಯಿತು.

ಹಾಗೆ ನೋಡಿದರೆ ಚಲಂ ನನ್ನ ಆತ್ಮೀಯ ಗೆಳೆಯರ ವಲಯದವರಲ್ಲ. ಬೇಟಿಯಾದದ್ದು ಕಡಿಮೆಯೇ. ನನ್ನ ಮೇಷ್ಟ್ರು ಅಕುಮಲ್ ರಾಮಚಂದರ್‍ರವರಿಂದ ಪರಿಚಯ.

ಅದಕ್ಕೂ ಮೊದಲು ಎಪ್ಪತ್ತರ ದಶಕದಲ್ಲಿ ಕನ್ನಡ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಅವರ ಕತೆಗಳ ಓದುಗನಾಗಿದ್ದೆ. ಈಗ ಅನೇಕರಿಗೆ ಅವರೊಬ್ಬ ವಿಶಿಷ್ಟ ಸಣ್ಣಕತೆಗಳ ಲೇಖಕರಾಗಿದ್ದರೆಂಬುದೇ ತಿಳಿದಿಲ್ಲ. ಮಲ್ಲಿಗೆಯೋ ಮಯೂರದಲ್ಲೋ ಪ್ರಟವಾಗಿದ್ದ ಅವರ “ ಜಿರಲೆಗಳು” ಕತೆ ಈಗಷ್ಟೇ ಓದಿದಂತಿದೆ. ನವ್ಯ ಶೈಲಿ ಇನ್ನೂ ಬಳಕೆಯಿದ್ದ ಕಾಲದಲ್ಲಿ ಹೊಸ ನುಡಿಗಟ್ಟೊಂದನ್ನು ಮೈಗೂಡಿಸಿಕಂಡ ಕತೆಯದು. ಕಲಾವಿದನ ವೈಯಕ್ತಿಕ ಬದುಕನ್ನು ಬಗೆವ ಆ ಕತೆಯ ಭಾಷೆ ಮತ್ತು ನಿರೂಪಣೆಯಲ್ಲಿ ಭಿನ್ನತೆಯಿತ್ತು. ಚೇತೋಹಾರಿಯಾಗಿತ್ತು. ಆದರೆ ಅವರು ಬರಹವನ್ನು ಗಂಭೀರವಾಗಿ ತೆಗೆದುಕೊಳ್ಳದೇ ಹೋದರು. ಜೊತೆಗೆ ಅವರು ಚಿತ್ರ ಕಲಾವಿದರಾಗಿದ್ದರು ಎಂದು ಕೇಳಿದ್ದೆ.

ರಾಯಚೂರಿನ ಭಾಗವರಾದ ಚಲಂ ಬೆನ್ನೂರಕರ್ ಜೀನಿಯಸ್ ಎಂದು ಗೆಳೆಯ ಕೋಟಗಾನಹಳ್ಳಿ ರಾಮಯ್ಯ ಹೊಗಳುತ್ತಿದ್ದರು. ಅವರ ಪಾಲಿಗೆ ನಾನು ಕಂಡಂತೆ ಇಬ್ಬರು ಜೀನಿಯಸ್‍ ಗಳಿದ್ದರು. ಒಬ್ಬರು ಮಲಯಾಳಂ ಚಲನಚಿತ್ರ ನಿರ್ದೇಶಕ ಜಾನ್ ಅಬ್ರಹಾಂ: ಮತ್ತೊಬ್ಬರು ಚಲಂ.

ಸ್ವಲ್ಪ ಜ್ವರದಿಂದ ಬಳಲಿದ್ದ ನಾನು ಹಳೆಯ ಸಂಗ್ರಹವನ್ನು ಜಾಲಾಡಿ “ಕುಟ್ಟಿ ಜಪಾನಿನ್ ಕುಳಂದೈಗಳ್” (Children of Mini Japan) ಡಿವಿಡಿಯನ್ನು ತೆಗೆದು ನೋಡಿದೆ. ಇದು ಚಲಂ ನಿರ್ದೇಶಿಸಿದ್ದ ಸಾಕ್ಷ್ಯಚಿತ್ರ. ಜಗತ್ತಿನ ಹಲವಾರು ಪ್ರಶಸ್ತಿಗಳನ್ನು ಪಡೆದ ಚಿತ್ರ. ಚಲಂನ ಬದ್ಧತೆ ಮತ್ತು ಸಿನಿಮಾ ಮಾಧ್ಯಮದ ಮೇಲಿನ ಹಿಡಿತವನ್ನು ಈ ಚಿತ್ರ ಪರಿಚಯಿಸುತ್ತದೆ. ಕ್ಯಾಮೆರಾವನ್ನೇ ನೋಡುವ ನೂರಾರು ಬಾಲಕ ಬಾಲಕಿಯರ ಮುಗ್ಧ ಮುಖ ನಮ್ಮನ್ನು ಸದಾ ಕಾಲ ಕಾಡುತ್ತದೆ.

1991ರಲ್ಲಿ ನಿರ್ಮಿಸಿದ ಇದು ಶಿವಕಾಶಿಯಲ್ಲಿನ ಬೆಂಕಿಕಡ್ಡಿ ಫ್ಯಾಕ್ಟರಿಯಲ್ಲಿ ದುಡಿಯುವ ಲಕ್ಷಾಂತರ ಬಾಲಕಾರ್ಮಿಕರ ಬದುಕನ್ನು ಕುರಿತ ಚಿತ್ರ. ದುಡಿವ ಮುಕ್ಕಳ ಮುಖಗಳನ್ನು ತೋರಿಸುತ್ತಲೇ ಹಿನ್ನಲೆಯಲ್ಲಿ ಯಾವುದೋ ಶಾಲೆಯಲ್ಲಿ ಮೇಷ್ಟ್ರು ಪಾಠವನ್ನು ಮಕ್ಕಳಿಗೆ ಉರು ಹೊಡೆಸುವ ಧ್ವನಿಯಿಂದ ಚಿತ್ರ ಮೊದಲಾಗುತ್ತದೆ.. “ನಾನು ಹೇಳಿದ ಹಾಗೆ ಹೇಳಿ- ಶಿವಕಾಸಿ-ಕುಟ್ಟಿ ಜಪಾನ್.. ರಾಜಾಪಾಳ್ಯ-. ಮಾವಿನ ಹಣ್ಣು, ಚೆನ್ನೈ – ತಮಿಳು ನಾಡು ಸರ್ಕಾರದ ಕೇಂದ್ರ… ಮಧುರೈ- ಮೀನಾಕ್ಷಿ ಅಮ್ಮನ್ ಕೋಯಿಲ್…”

“ಕ ಅಲ್ಲ ಕಾ ಕಾ .. ಕಾಸಿ , ಸಿವಕಾಸಿ. ಶಿವಕಾಸಿ ಅಂದ್ರೆ ಕುಟ್ಟಿ ಜಪಾನ್. ಯಾಕೆ ಆ ಹೆಸ್ರು ಬಂತು? ….ಯಾಕಂದ್ರೆ ಜಪಾನ್‍ನವರು ಹ್ಯಾಗಿದ್ದಾರೆ? .. ಕುಳ್ಳರು..ಕುಳ್ಳು ಅಲ್ಲ ಅಲ್ಲ ಅವರು. ಎಲ್ಲವನ್ನು ಬೇಗ ಬೇಗ ಮಾಡುತ್ತಾರೆ. ಫಾಸ್ಟ್..” ಈ ಧ್ವನಿಯ ನಂತರ ಮಿನಿ ಜಪಾನ್ ಎನಿಸಿಕೊಂಡ ಸಿವಕಾಸಿಯ ನೂರಾರು ಬೆಂಕಿಕಡ್ಡಿ ಫ್ಯಾಕ್ಟರಿಯಲ್ಲಿ ದುಡಿಯುವ 2.5 ಲಕ್ಷಕ್ಕೂ ಅಧಿಕ ಮಕ್ಕಳ ದಾರುಣ ಕತೆ ಬಿಚ್ಚಿಕೊಳ್ಳುತ್ತದೆ.

1920ರ ದಶಕದಲ್ಲಿ ಶಿವಕಾಶಿಯಲ್ಲಿ ಗುಡಿಕೈಗಾರಿಕೆಯಾಗಿ ಆರಂಭವಾದ ಬೆಂಕಿಕಡ್ಡಿ ತಯಾರಿಕೆ ಮುಂದೆ ದೇಶದ ಬೆಂಕಿಕಡ್ಡಿ ಬೇಡಿಕೆಯಲ್ಲಿ ತೊಂಭತ್ತು ಭಾಗ ಪೂರೈಸುವ ಉದ್ದಿಮೆಯಾಗಿ ಬೆಳೆಯಿತು. ಅದಕ್ಕೆ ಕಾರಣ ಸಿವಕಾಸಿಯ ಸುತ್ತಲಿನ ಪರಿಸರದ ಬಡತನ. ಬೆಂಗಾಡಿನಂತಹ ಊರುಗಳಲ್ಲಿ ವ್ಯವಸಾಯ ಲಾಭದಾಯಕವಲ್ಲ. ಕಡಿಮೆ ಬೆಲೆಗೆ ದೊರೆಯುವ ಕೂಲಿಕಾರರನ್ನಾಧರಿಸಿ ಸಿವಕಾಸಿ ಪಟ್ಟಣದಲ್ಲಿ ಬೆಂಕಿಕಡ್ಡಿ, ಲಿಥೋ ಪ್ರೆಸ್, ಪಟಾಕಿ ಕಾರ್ಖಾನೆಗಳು ಆರಂಭವಾಗಿ ಸಮೃದ್ಧಿಯಾಗಿ ಬೆಳೆದವು.

ಮೂರನೇ ವಯಸ್ಸಿಗೆ ಬಾಲ್ಯಕಾಲವನ್ನೆಲ್ಲ ಮರೆತು ಕೂಲಿಗೆ ಹೋಗುವ ಮಕ್ಕಳು 10- 14 ಗಂಟೆ ದುಡಿದು ದಣಿಯುತ್ತಾರೆ. ಸುಮಾರು 18ನೇ ವಯಸ್ಸಿನವರೆಗೆ ದುಡಿದ ನಂತರ ಮಾಲೀಕ ಹೊರದಬ್ಬುತ್ತಾನೆ. ಮೆಜಾರಿಟಿಗೆ ಬಂದವರು ಯೂನಿಯನ್ ಕಟ್ಟಬಹುದೆಂಬ ಭಯ. ಬದುಕಿನಲ್ಲಿ ಬೇರೆ ಯಾವ ಕೌಶಲ್ಯವನ್ನು ಕಲಿಯದ ಗಂಡು ಹೆಣ್ಣುಗಳು ಅನಿವಾರ್ಯವಾಗಿ ಕಲ್ಲುಗಣಿ ಸೇರುತ್ತಾರೆ. ಮದುವೆಯಾಗುತ್ತದೆ. ಮಕ್ಕಳಾಗುತ್ತವೆ. ಅವು ಫ್ಯಾಕ್ಟರಿ ಸೇರುತ್ತವೆ. ವಿಷಚಕ್ರ ಹಾಗೆ ಮುಂದುವರೆಯುತ್ತದೆ.

ಬೆಳಕಿಲ್ಲದ, ಸುರಕ್ಷತೆಯೂ ಇಲ್ಲದ, ಆಟಪಾಟಗಳ ಸೋಂಕಿಲ್ಲದ (ತಮಿಳಿನಲ್ಲಿ ಓಡುವಿಳೈಯಾಡು ಪಾಪ ಎಂಬ ಸುಂದರ ಹಾಡಿದೆ), ಮದ್ದು ಅಂಟುಗಳ ವಾಸನೆಯಲ್ಲೇ ಬದುಕಿನ ಆಕರ್ಷಕ ಭಾಗವೆಂಬ ಬಾಲ್ಯ ನವೆದು ಹೋಗುತ್ತದೆ. ಯಂತ್ರವನ್ನೂ ಮೀರಿಸುವಂತೆ ದುಡಿಯುವ, ತಾವು ಸಿಕ್ಕಿಕೊಂಡಿರುವ ಬಲೆಯ ಅರಿವಿಲ್ಲದೆ ತಮ್ಮ ಕಾರ್ಯಗಳನ್ನು ಚಕಚಕನೆ ಯಾಂತ್ರಿಕವಾಗಿ ಮಾಡುತ್ತಾ, ನಿರ್ಲಿಪ್ತವಾಗಿ ಕ್ಯಾಮೆರಾ ದಿಟ್ಟಿಸುವ ಮಕ್ಕಳ ಬೆಳಕಿಲ್ಲದ ಕಣ್ಣುಗಳು ಪ್ರೇಕ್ಷಕನ ಎದೆಯಿರಿಯುತ್ತವೆ. ಇವುಗಳ ನಡುವೆ ಆಗಾಗ್ಗೆ ಶ್ರೀಕೃಷ್ಣನ ಬಾಲಲೀಲೆಗಳನ್ನು ಹೇಳುವ ಜಾನಪದ ಮೇಳದ ಹಾಡುಗಳು ಮಕ್ಕಳ ಕುಟ್ಟಿಜಪಾನಿನ ಮಕ್ಕಳ ಬಾಲ್ಯದ ದೊಡ್ಡ ವ್ಯಂಗ್ಯವಾಗಿ ಬರುತ್ತದೆ.

ಇಡೀ ಸಾಕ್ಷ್ಯ ಚಿತ್ರವನ್ನು ಚಲಂ ನಿರ್ಲಿಪ್ತವಾಗಿ ಕಟ್ಟುತ್ತಾರೆ. ಬಾಲ್ಯ ಬಹಳ ನಾಜೂಕಾದ ಭಾಗ. ಮಕ್ಕಳ ಬಗ್ಗೆ ವಿಶೇಷವಾದ ಭಾವನಾತ್ಮಕತೆಯನ್ನು ನಮ್ಮ ಸಂಸ್ಖೃತಿ ಸಾಹಿತ್ಯ ಕಟ್ಟಿದೆ. ಹಾಗಾಗಿ ಇಂತಹ ಸ್ಫೋಟಕ ವಿಷಯವನ್ನು ನಿರ್ವಹಿಸುವಾಗ ನಿರ್ಲಿಪ್ತತೆಯನ್ನು ಸಾಧಿಸುವುದು ಕಠಿಣ. ನಮ್ಮ ಧ್ವನಿ ಘೋಷಣೆಯಾಗುವ ಸಾಧ್ಯತೆಯೇ ಹೆಚ್ಚು. ಇಢಿ ಚಿತ್ರ ನಿರೂಪಣೆಯ ಧ್ವನಿಯಿಂದ ಮುಕ್ತವಾಗಿದೆ. ಕೆಲವೊಂದು ಸಂದರ್ಶನ ಮತ್ತು ಪತ್ರಿಕಾ ತುಣುಕು, ವ್ಯಂಗ್ಯಚಿತ್ರ ಮತ್ತು ಮಕ್ಕಳ ಬಗ್ಗೆ ಬಂದಿರುವ ಕೆಲವು ಘಟನೆಗಳು ಘೋಷಣೆಗಳೆ ಇಲ್ಲಿನ ಪೂರಕ ಸಾಹಿತ್ಯ. ಹಾಗಗಿ ಕುಟ್ಟಿ ಜಪಾನಿನ್ ಕುಳಂದೈಗಳು ವಿಶಿಷ್ಟ ಸಾಕ್ಷ್ಯ ಚಿತ್ರವಾಗಿ ಗಮನ ಸೆಳೆಯುತ್ತದೆ.

ನಾನು ‘ಸಿನಿಮಾ ಯಾನ’ ಪ್ರಕಟಿಸಿದಾಗ ಒಂದು ಬಾರಿ ಫೋನ್ ಮಾಡಿ ಕಚೇರಿಗೆ ಬಂದ ಚಲಂ ಪುಸ್ತಕದ ಪ್ರತಿಯೊಂದನ್ನು ಕೇಳಿ ಪಡೆದರು. ಪ್ರತಿಯಾಗಿ ಅವರ ನಿರ್ಮಾಣದ “ ಬಿಶರ್ ಬ್ಲೂಸ್” ಸಾಕ್ಷ್ಯ ಚಿತ್ರದ ಡಿವಿಡಿ ಹಾಗು ಜಗತ್ತಿನ ಸುಮಾರು ಐದು ಸಾವಿರ ಚಿತ್ರಗಳ ಪಟ್ಟಿಯನ್ನು ಕಂಪ್ಯೂಟರ್‍ಗೆ ಫೀಡ್ ಮಾಡಿ ಹೋದರು. ಒಂದು ವಾರದ ಬಳಿಕ ಪುಸ್ತಕ ಕುರಿತು ಒಳ್ಳೆಯ ಮಾತು ಹೇಳಿದರು.

ಅವರು ನಿರ್ದೇಶಕ ಅಮಿತಾಬ್ ಚಕ್ರವರ್ತಿ ಜೊತೆ ಸಹನಿರ್ಮಾಪಕರಾಗಿ ರೂಪಿಸಿರುವ ಬಿಶರ್ ಬ್ಲೂಸ್ ಮತ್ತೊಂದು ವಿಶಿಷ್ಟ ಚಿತ್ರ. ಅತ್ಯುತ್ತಮ ಸಾಕ್ಷ್ಯ ಚಿತ್ರವಾಗಿ ರಾಷ್ಟ್ರೀಯ ಸ್ವರ್ಣಕಮಲ ಪಡೆದ (2006) ಈ ಚಿತ್ರ ಶರಿಯತ್ ನಿಯಮಗಳಿಂದಾಚೆಗೆ ಬದುಕುವ ಪಶ್ಚಿಮ ಬಂಗಾಳದ ಫಕೀರರ ಬದುಕನ್ನು ಕುರಿತದ್ದು. ಬಿಶರ್ ಎಂಬುದು ಬಹುತೇಕ ತಳಸಮುದಾಯಗಳು ಆಚರಿಸುವ, ಇಸ್ಲಾಮಿನ ಭಿನ್ನ ಪಂಥ. ಈ ಪಂಥದ ಫಕೀರರ ಸಂಗೀತ, ದಿನನಿತ್ಯದ ಬದುಕಿನಲ್ಲಿ ಅವರು ಕಾಣುವ ಗಾಢ ಅನುಭೂತಿಯನ್ನು ಈ ಚಿತ್ರ ಅನ್ವೇ಼ಇಸುತ್ತದೆ.

ಬಿಶರ್ ಅನುಯಾಯಿಗಳು, ಅಲ್ಲಾಹು, ಪ್ರವಾದಿ ಮತ್ತು ಕುರ್‍ ಆನ್ ಅನ್ನು ನಂಬುತ್ತಾರೆ ಹಾಗೇಯೇ ಈ ಮೂರು ಸಂಗತಿಗಳನ್ನು ಮತ್ತು ಅವುಗಳ ನಡುವಿನ ಸಂಬಂಧಗಳನ್ನು ಮುಕ್ತವಾಗಿ ವ್ಯಾಖ್ಯಾನಿಸುತ್ತಾರೆ. ಮಸೀದಿ, ಧಾರ್ಮಿಕ ಪಠ್ಯ, ಪೂಜಾರಿಗಳ ಅಂಕುಶವನ್ನು ನಿರಾಕರಿಸಿ ಮನುಷ್ಯನಲ್ಲಿ ಅಲ್ಲಾಹುವನ್ನು ಹುಡುಕುವ ಯತ್ನ ಮಾಡುತ್ತಾರೆ. ಅದಕ್ಕಾಗಿ ಅವರು ಸರಳತೆಯ ಜೊತೆಗೆ ವಿಶಿಷ್ಟವಾದ ಸಂಗೀತ ಮತ್ತು ತತ್ವ ಪದಗಳಂತಹ ಸರಳ, ಆದರೆ ಗಹನವಾದ ವಿಚಾರದ ಹಾಡುಗಳ ಮೊರೆ ಹೋಗುತ್ತಾರೆ ( ಹಿಂದೊಮ್ಮೆ ಬಾವುಲ್ ಹಾಡುಗಾರರ ಬಗ್ಗೆ ಪ್ರೊ. ರಹಮತ್ ತರಿಕೆರೆಯವರು ಬರೆದಿದ್ದ ನೆನಪು) ಮರ್ಫತ್ ಎಂದು ಕರೆವ ಈ ಧರ್ಮದ ಅರಿವನ್ನು ಬಂಗಾಳದ ಫಕೀರರು ತಮ್ಮ ಹಾಡುಗಳ ಮೂಲಕ ಜನರ ಎದೆಯಲ್ಲಿ ಜೀವಂತವಾಗಿಟ್ಟಿದ್ದಾರೆ. ಪ. ಬಂಗಾಳದಲ್ಲಿ ಸುಮಾರು 3000 ಕಿ.ಮೀ ಸುತ್ತಿ ಈ ಪಂಥದ ವಿಶಿಷ್ಟತೆಯನ್ನು ಕಣ್ಣಿಗೆ ಕಟ್ಟವಂತೆ ನಿರೂಪಿಸಿದ್ದಾರೆ.

ಎಂಭತ್ತರ ದಶಕದಲ್ಲಿ ಗಂಭೀರ ಚಲನಚಿತ್ರ ವೀಕ್ಷಣೆ ಮತ್ತು ಸಂವಾದ ಅಪರೂಪವಾಗಿದ್ದ ಕಾಲದಲ್ಲಿ ಬೆಂಗಳೂರು ಫಿಲಂ ಸೊಸೈಟಿ ಮತ್ತು ಸುಚಿತ್ರ ಸಮಾಜ ಸಕ್ರಿಯವಾಗಿ ಆ ಕೊರತೆಯನ್ನು ನೀಗಿಸಿದ್ದವು. ಜಗತ್ತಿನ ಸಿನಿಮಾ ಬಗ್ಗೆ ವಿಸ್ತಾರವಾದ ತಿಳಿವಳಿಕೆಯಿದ್ದ ಚಲಂ ಅನೇಕ ಯುವಕರಿಗೆ ಗಂಭೀರ ನಿಮಾಗಳ ಬಗ್ಗೆ ಆಸಕ್ತಿ ಮೂಡಿಸಿದ್ದರು. ಚಲನಚಿತ್ರ ಅವರಿಗೆ ಗೀಳು ಅನಿಸುವಷ್ಟರ ಮಟ್ಟಿಗೆ ಅಂಟಿಕೊಂಡಿತ್ತು. ಸ್ವಯಂ ಸೇವಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಕೆಲಕಾಲ ಬೆಂಗಳೂರು ಫಿಲಂ ಸೊಸೈಟಿಯ ಮೂಲಕ ಮಹಿಳೆಯರು, ಮಕ್ಕಳು ಮತ್ತು ಇತರ ಸಾಮಾಜಿಕ ವಿಷಯಗಳ ಕುರಿತ ಆಶಯದ ಚಿತ್ರೋತ್ಸವಗಳಾಗಲು ದುಡಿದಿದ್ದರು.

ನಾನು ‘ಮುಂಗಾರು’ ಪತ್ರಿಕೆಯನ್ನು ಬಿಟ್ಟು ನಿರುದ್ಯೋಗಿಯಾಗಿದ್ದಾಗ (1985) ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವಂತೆ ಚಲಂ ಬೆನ್ನೂರಕರ್ ಆಹ್ವಾನ ನೀಡಿದ್ದರು. ನಾನು ಹೋಗಲಿಲ್ಲ. ಇಷ್ಟು ಬಿಟ್ಟರೆ 35 ವರ್ಷಗಳಲ್ಲಿ ನಾವಿಬ್ಬರೂ ಬೇರೆ ಬೇರೆ ಸಂದರ್ಭಗಳಲ್ಲಿ ಒಂದು ಇಪ್ಪತ್ತು ಬಾರಿ ಭೇಟಿಯಾಗಿರಬಹುದು. ಆದರೂ ಅವರ ಸಾವು ಯಾಕೋ ನನ್ನನ್ನು ವಿಷಣ್ಣತೆಗೆ ದೂಡಿದೆ.ಯಾಕಿರಬಹದು?

ಚಲಂ ಬೆನ್ನೂರಕರ್ ಅವರದು ಆಕರ್ಷಕ ವ್ಯಕ್ತಿತ್ವ. ಇಂಟಲೆಕ್ಚುಯಲ್ ಲುಕ್ ಅಂತಾರಲ್ಲಾ, ಹಾಗೆ. ಭೇಟಿಯಾದರೆ ಆತ್ಮೀಯತೆ ಯಾವ ಪ್ರೇರಣೆಯಿಲ್ಲದೆ ಒಸರುವಂತೆ ಮಾಡಬಲ್ಲ ಮಾತುಗಾರಿಕೆ. ತೀಕ್ಷ್ಣವಾದ ಕಣ್ಣುಗಳು. ತಾರ್ಕಿಕವಾಗಿ ವಿಷಯವನ್ನು ಮಂಡನೆಮಾಡಬಲ್ಲ ಪ್ರತಿಭಾವಂತ. ಕನ್ನಡ -ಇಂಗ್ಲಿಷ್ ಭಾಷೆಯಲ್ಲಿನ ಹಿಡಿತ. ಹೀಗಿದ್ದ ವ್ಯಕ್ತಿ ಅನೇಕ ಕಲಾವಿದರು, ಬರಹಗಾರರನ್ನು ಆಕರ್ಷಿಸಿದ್ದರು.

ಒಬ್ಬ ಕತೆಗಾರನಾಗಿ ಮಿಂಚು ಸೃಷ್ಟಿಸಿದ್ದ, ಕಲಾವಿದನಾಗಿ ರೇಖೆ ಎಳೆದ, ಸಾಕ್ಷ್ಯ ಚಿತ್ರ ನಿರ್ದೇಶಕನಾಗಿ ಗಮನ ಸೆಳೆದ ಚಲಂ ಬೆನ್ನೂರಕರ್ ಕೊನೆಗೂ ತಾವು ಕೊಡಬಹುದಾದಷ್ಟು ಕೊಡಲಿಲ್ಲವೆಂದು ನನಗನಿಸುತ್ತದೆ. ಅವರ ವೈಯಕ್ತಿಕ ಬದುಕು ತಿಳಿಯದ ನಾನು ಇದಕ್ಕಿಂತ ಹೆಚ್ಚು ಹೇಳಲಾರೆ.. ಅವರ ನಿಧನದ ವಾರ್ತೆ ಕೇಳಿದ ನಂತರ ಮೇಲಿನ ಈ ಎರಡೂ ಚಿತ್ರಗಳನ್ನು ಮತ್ತೊಮ್ಮೆ ನೋಡಿ ನನಗನಿಸಿದ್ದನ್ನು ಹಂಚಿಕೊಂಡಿದ್ದೇನೆ.

 

ವಿಜಯೇಂದ್ರ 

ಗೆಳೆಯ ಚಲಂ ಬೆನ್ನೂರ್ಕರ್ ಸಾವಿಗೀಡಾದನೆಂಬ ಸುದ್ದಿ ವೆಂಕಟೇಶ್ ಸಂಜೆ ಪ್ರೆಸ್ ಕ್ಲಬ್ ನಲ್ಲಿ ಅರುಹಿದಾಗಿನಿಂದ ಆರಂಭವಾದ ವೇದನೆ ನೋವು ಇನ್ನೂ ಕಾಡುತ್ತಿದೆ.

೧೯೭೨ ರ ಸಮಯ. ಚಿತ್ರದುರ್ಗದಲ್ಲಿ ಗೆಳೆಯ ಮಂಗ್ಳೂರ ವಿಜಯ ಸಂಪಾದಿಸುತ್ತಿದ್ದ ಬದುಕು ಬಳಗದಿಂದ ಪರಿಚಿತನಾದ ಚಲಂ ಬದುಕು ಅರಸಿ ಬೆಂಗಳೂರಿಗೆ ಬಂದಾಗ ನಾನವನಿಗೆ ಆಶ್ರಯ ನೀಡಿದ್ದ ನೆನಪು. ತದನಂತರ ಸೋಮಯ್ಯ, ರವಿವರ್ಮಕುಮಾರ್ (ಇಂದಿನ ಖ್ಯಾತ ವಕೀಲರು) ಜತೆ ಸೇರಿ ಸನ್ನಿಧಿ ರಸ್ತೆಯಲ್ಲಿ ಮನೆ ಮಾಡಿದ್ದ.

ಉತ್ತಮ ಬರಹಗಾರನಾಗಿದ್ದ ಅವನಾಗಲೇ ‘ಪ್ರಜಾವಾಣಿ’ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದ.

ಅಂದು ‘ಸಿಯೆಡ್ಸ್’ ಎಂಬ ವಿದೇಶಿ ಹಣದಿಂದ ನಡೆಯುತ್ತಿದ್ದ ಸ್ವಯಂಸೇವಾ ಸಂಸ್ಥೆಯ ತೆಕ್ಕೆಯಲ್ಲಿ ಬಿದ್ದ. ಅಲ್ಲಿ ಅದಾಗಲೆ ಡೋನ, ಸೆಲೀನ್, ಚಿತ್ರ, ಸೇತು (ಮುಂದಿನ ದಿನಗಳಲ್ಲಿ ರಾಜೇಶ್ವರಿ) ಇನ್ನೂ ಹಲವಾರು ಗೆಳೆಯರು ವಿದೇಶಿ ಹಣದಲ್ಲಿ ಕ್ರಾಂತಿಯ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತಿದ್ದರು.

ಮುಂದೆ ಮಹಿಳಾ ವಿಮೋಚನೆಗೆಂದೇ ಆರಂಭಗೊಂಡ ‘ವಿಮೋಚನಾ’ ಕೂಡ ಸಿಎಡ್ಸ್ ಕೂಸು.

ಚಲಂ ಕೂಡ ಕ್ರಾಂತಿಯ ಕನಸನ್ನು ಹೆಣ್ಣು, ಹೆಂಡಗಳ ಮೂಲಕ ಕಂಡುಕೊಳ್ಳಲು ಪ್ರಯತ್ನಿಸಿ ವಿಫಲನಾದ.

ಕಿರು ಚಿತ್ರ ನಿರ್ಮಾಣದಲ್ಲೂ ಪ್ರಯತ್ನಿಸಿ ಮಕ್ಕಳ ಚಿತ್ರ ನಿರ್ಮಿಸಿದ್ದ. ಇತ್ತ ಸಾಹಿತ್ಯದಲ್ಲಿ ಮುಂದುವರಿಯದೆ, ಅತ್ತ ಒಳ್ಳೆಯ ಕ್ರಾಂತಿಕಾರಿಯೂ ಆಗದೆ, ಸಾಂಸಾರಿಕವಾಗಿಯೂ ಯಶಸ್ವಿಯಾಗದ ಅತ್ಯಂತ ಪ್ರತಿಭಾವಂತ ನನ್ನ ಈ ಗೆಳೆಯ ಹೇಳಹೆಸರಿಲ್ಲದೆ ಸಾಯಬೇಕಾಯಿತಲ್ಲ- ಸತ್ತನಲ್ಲ ಎಂಬ ನೋವಿನಲ್ಲಿ ಈ ಅಶ್ರುತರ್ಪಣ.

Add Comment

Leave a Reply