Quantcast

ಸಣ್ಣ ಕದನ ಸೋತು ಮಹಾಯುದ್ಧ ಗೆಲ್ಲುವ ಕಲೆ ಪ್ರಜಾಪ್ರಭುತ್ವದಲ್ಲಿ “ಹೊಸಮುಖ” ತಂತ್ರ

ಕಾಂಗ್ರೆಸ್ ರಾಜಕಾರಣದ “ಸಂಕಷ್ಟಕಾಲದ” ಪ್ರಯೋಗಗಳನ್ನೆಲ್ಲ ಅರೆದು, ಕುಡಿದು, ಮಸೆದು- ಹರಿತಗೊಳಿಸಿಕೊಂಡು, ಹದವರಿತು ಬಳಸುವ ಕಲೆಯನ್ನು ಕರತಲಾಮಲಕಗೊಳಿಸಿಕೊಂಡುಬಿಟ್ಟಿರುವುದೇ ಇತ್ತೀಚೆಗಿನ ಬಿಜೆಪಿ ರಾಜಕಾರಣದ ಯಶಸ್ಸಿನ ಬಹುದೊಡ್ಡ ಭಾಗವಾಗಿಬಿಟ್ಟಿದೆ.

ಬಿಜೆಪಿಯ ಪ್ರಯೋಗದ ಕಣವಾಗಿರುವ ಕರಾವಳಿ ರಾಜಕೀಯದಿಂದಲೇ ಆರಂಭಿಸುತ್ತೇನೆ.

ಹಿಂದೆಲ್ಲ ಕಾಂಗ್ರೆಸ್ಸಿನ ಖಚಿತ ಗೆಲುವಿನ ಕ್ಷೇತ್ರಗಳಲ್ಲೊಂದು – ಉಡುಪಿ ಲೋಕಸಭಾ ಕ್ಷೇತ್ರ. 1971ರಿಂದ 1998ರ ತನಕ ಸತತವಾಗಿ ಕಾಂಗ್ರೆಸ್ಸಿನ ಕೈನಲ್ಲಿದ್ದ ಕ್ಷೇತ್ರವನ್ನು ಐದು ಅವಧಿಗಳಿಗೆ ಅಲ್ಲಿನ ಸಂಸದರಾಗಿದ್ದ ಆಸ್ಕರ್ ಫೆರ್ನಾಂಡೆಸ್ ಅವರಿಂದ “ಹೊಸಮುಖ”ವೊಂದು ಮೊತ್ತ ಮೊದಲ ಬಾರಿಗೆ ಕಸಿದುಕೊಂಡಿತು. ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದ, ಆಗಷ್ಟೇ ಬೈಂದೂರಿನಲ್ಲಿ ವಿಧಾನಸಭೆ ಪ್ರವೇಶಿಸಿದ್ದ ಹೊಸಮುಖ  ಐ. ಎಂ. ಜಯರಾಮಶೆಟ್ಟಿ ಸಂಸದರಾದರು.

ಒಮ್ಮೆ ಹೀಗೆ ತಮ್ಮ ಪ್ರವೇಶವನ್ನು ಸುಲಲಿತಗೊಳಿಸಿಕೊಂಡ ಮೇಲೆ ಬಿಜೆಪಿ, ಅಲ್ಲಿ ಆಳವಾಗಿ ಬೇರು ಬಿಡತೊಡಗಿತು. ಆ ಬಳಿಕ ಎರಡು ಬಾರಿ ಸಣ್ಣ ಅಂತರದಲ್ಲಿ ಅಲ್ಲಿ ಕಾಂಗ್ರೆಸ್ (ವಿನಯ ಕುಮಾರ ಸೊರಕೆ, ಜಯಪ್ರಕಾಶ ಹೆಗ್ಡೆ) ಗೆದ್ದಿದೆಯಾದರೂ, ಉಳಿದೆಲ್ಲ ಅವಧಿಗಳಲ್ಲಿ ಒಂದೋ ಕಾಂಗ್ರೆಸ್ಸಿನ ಸ್ಪರ್ಧಿಯನ್ನು ತನ್ನೆಡೆಗೆ ವಾಲಿಸಿಕೊಂಡು (ಮನೋರಮಾ ಮಧ್ವರಾಜ್, ಈಗ ಜಯಪ್ರಕಾಶ ಹೆಗ್ಡೆ) ಇಲ್ಲವೇ ಮತ್ತೆ ಆ ಕ್ಷೇತ್ರಕ್ಕೆ ಹೊಸಮುಖಗಳನ್ನು ಮುಂದಿಟ್ಟುಕೊಂಡು (ಡಿ ವಿ ಸದಾನಂದ ಗೌಡ, ಶೋಭಾ ಕಾರಂದ್ಲಾಜೆ) ಅಲ್ಲಿ ಬಿಜೆಪಿ ಗೆಲ್ಲುತ್ತಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೊಂದಿದೆ. ಅದೇನೆಂದರೆ, ಬೇರು ಆಳವಾಗಿಲ್ಲದಾಗ ಬಿಜೆಪಿ ತಂದ ಹೊಸ ಮುಖ (ಐ ಎಂ ಜಯರಾಮ ಶೆಟ್ಟಿ) ಅವರಿಗೆ ಸೈದ್ಧಾಂತಿಕವಾಗಿ ತೀರಾ ಹತ್ತಿರದ್ದಾಗಿರಲಿಲ್ಲ. ಆದರೆ, ಒಮ್ಮೆ ಅವರು ಗೆದ್ದು ಅಲ್ಲಿ ಬೇರು ಬಿಟ್ಟ ಬಳಿಕ ಬಂದ ಎಲ್ಲ ಮುಖಗಳು (ಡಿ ವಿ ಸದಾನಂದ ಗೌಡ, ಶೋಭಾ ಕಾರಂದ್ಲಾಜೆ) ಸೈದ್ಧಾಂತಿಕವಾಗಿ ಹತ್ತಿರದವು.

ಹೀಗೆ “ಸಣ್ಣ ಕದನ ಸೋತು ಮಹಾಯುದ್ಧ ಗೆಲ್ಲುವ ಕಲೆ” ಯನ್ನು ಬಿಜೆಪಿ ಪರಿವಾರ ಕರತಲಾಮಲಕ ಮಾಡಿಕೊಂಡಿದ್ದು, ಕರ್ನಾಟಕದಲ್ಲಿ ಅವರ ಬೆಳವಣಿಗೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಈ ತಂತ್ರದ ಝಲಕ್ ಕಾಣಸಿಗುತ್ತದೆ. ದೇಶದಲ್ಲಿ  ಎಲ್ಲೆಡೆ ಬಿಜೆಪಿಯ ಬೆಳವಣಿಗೆಯಲ್ಲೂ ಹೆಚ್ಚಿನ ಕಡೆ ಇಂತಹದೇ ಚಿತ್ರಣಗಳು ಕಂಡರೆ ಅಚ್ಚರಿ ಎನ್ನಿಸದು.

ಸ್ವತಃ ಗುಜರಾತಿನಲ್ಲಿ ಈವತ್ತಿನ ದೇಶದ ಪ್ರಧಾನಿ ನರೇಂದ್ರ ಮೋದಿಯವರದೂ ಇಂತಹದೇ ಎಂಟ್ರಿ. ಕರ್ನಾಟಕದಲ್ಲಿ ಈಗಿನ ಕೇಂದ್ರ ಸಚಿವ ಅನಂತ ಕುಮಾರ್ ಅವರೂ ಒಂದೊಮ್ಮೆ ಸಂಘಪರಿವಾರದ ಪೂರ್ಣಾವಧಿ ಕಾರ್ಯಕರ್ತರಾಗಿದ್ದವರು; ರಾಜಕೀಯಕ್ಕೆ ಹೊಸಮುಖ.

ಈ ರೀತಿಯ ಪ್ರಯೋಗಗಳಲ್ಲಿ ಪರಿಣತಿ ಗಳಿಸಿರುವ ಬಿಜೆಪಿಗೆ ತೀರ ಇತ್ತೀಚೆಗೆ ಇಂತಹದೊಂದು ಪ್ರಯೋಗದ ಯಶಸ್ಸು ದಕ್ಕಿರುವುದು ದಿಲ್ಲಿ ನಗರಪಾಲಿಕೆ ಚುನಾವಣೆಯಲ್ಲಿ. ಬಹುತೇಕ ಎಲ್ಲ ಹೊಸಮುಖಗಳೇ ಇದ್ದುದು ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತೆಂಬುದನ್ನು ಹೆಚ್ಚಿನ ಸಮೀಕ್ಷೆಗಳು ಎತ್ತಿ ತೋರಿಸಿವೆ.

ಈಗ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳ ಕಡೆಗೆ ಬಿಜೆಪಿಯ ಗಮನ ತಿರುಗಿದೆ. ಮೊನ್ನೆ ನಡೆದ ಮೈಸೂರಿನ ಕಾರ್ಯಕಾರಿಣಿ ಸಭೆಯಲ್ಲಿ ಈ “ಹೊಸಮುಖ” ತಂತ್ರದ ಚರ್ಚೆ ನಡೆದಿರುವ ಬಗ್ಗೆ ಕೇಳಿಬರುತ್ತಿದೆ. 150ರ ಗುರಿ ಇಟ್ಟು ಹೊರಟಿರುವ ಬಿಜೆಪಿಗೆ 100ಕ್ಕೂ ಮಿಕ್ಕಿ ಹೊಸ ಮುಖಗಳನ್ನು ಸ್ಪರ್ಧೆಗೊಡ್ಡುವ ಉದ್ದೇಶ ಇದೆಯೆಂದು ಮಾಧ್ಯಮಗಳು ಹೇಳುತ್ತಿವೆ.

ವೈಯಕ್ತಿಕ ರಾಜಕೀಯ ಮೇಲಾಟಗಳಲ್ಲಿ ಪಕ್ಷ ರಾಜಕೀಯದ ಮಹತ್ವಾಕಾಂಕ್ಷೆಯನ್ನೇ ಮರೆತಿರುವಂತೆ ಕಾಣುತ್ತಿರುವ ರಾಜ್ಯದ ಕಾಂಗ್ರೆಸ್ಸಿನಲ್ಲಿ ಸಹಜವಾಗಿಯೇ ಹಳೆಯ ಮುಖಗಳು ಸ್ಪರ್ಧೆಗಿಳಿಯುತ್ತಿವೆ. ರಾಜಕೀಯ-ರಾಜಕಾರಣಿಗಳ ಬಗ್ಗೆ ಮಧ್ಯಮ ವರ್ಗ ಹೊಂದಿರುವ ತಿರಸ್ಕಾರದ ಭಾವನೆಗಳನ್ನು ಅಭಿಪ್ರಾಯ ರೂಪಕವಾಗಿ ಬಳಸಿಕೊಂಡು, ಹೊಸಮುಖಗಳ ತಂತ್ರದಿಂದ ರಾಜಕೀಯವಾಗಿ ಗೆಲ್ಲುವುದನ್ನು ಬಿಜೆಪಿ ಅಭ್ಯಾಸ ಮಾಡಿಕೊಳ್ಳುತ್ತಿದೆ.

ಈ ಪಕ್ಷಗಳ ಗೆಲುವಿನ –ಸೋಲಿನ ತಂತ್ರಗಾರಿಕೆಯ ಅಬ್ಬರದ ನಡುವೆ ಅಲ್ಲೋ ಇಲ್ಲೋ  ವಿರಳವಾಗಿ ಜೀವ ಹಿಡಿದುಕೊಂಡಿರುವ, ತಳಮಟ್ಟದಲ್ಲಿ ವೈಯಕ್ತಿಕವಾಗಿ ದುಡಿಯುವ ರಾಜಕಾರಣಿಗಳ ವರ್ಗ ಮಾತ್ರ ಅತ್ತ ಮೇಲಕ್ಕೇರಲೂ ಆಗದೆ ಇತ್ತ ಕೆಳಕ್ಕಿಳಿಯಲೂ ಆಗದೆ ಬಸವಳಿಯುತ್ತಿದೆ. ತಂತ್ರಗಾರಿಕೆಯ ರಾಜಕಾರಣದ ನಡುವೆ ಪ್ರಜಾತಂತ್ರದ ಸೋಲು ಇದು.

ಗ್ರಾಮ-ವಾರ್ಡು ಮಟ್ಟದಲ್ಲಿ ಜನರ ಕಷ್ಟ-ಸುಖ ಅರಿತು, ನಿಧಾನಕ್ಕೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಾ, ತಾಲೂಕು-ಜಿಲ್ಲಾಪಂಚಾಯತಿಗಳ ಮೂಲಕ ವಿಧಾನಸಭೆ, ಮತ್ತೆ ಲೋಕಸಭೆ ಪ್ರವೇಶಿಸಬೇಕಾದ ಜನಪ್ರತಿನಿಧಿಗಳು ತಮಗಿರುವ ಇನ್ಯಾವುದೋ “ಎಕ್ಸ್ ಫ್ಯಾಕ್ಟರಿನ” ಕಾರಣದಿಂದ ರಾತ್ರೋರಾತ್ರಿ ರಾಜಕೀಯದ ಮುಖ್ಯ ಪ್ರವಾಹ ತಲುಪುವುದು ಪ್ರಜಾಪ್ರಭುತ್ವದ ಆರೋಗ್ಯದ ದ್ರಷ್ಟಿಯಿಂದ ಒಳ್ಳೆಯದಲ್ಲ. ಈ ವಿಚಾರ ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಆದರೆ, ಅತ್ತ ಗಮನ ಹರಿಸುವಷ್ಟು ವ್ಯವಧಾನ ರಾಜಕೀಯದಲ್ಲಿ ಈವತ್ತು ಉಳಿದಿಲ್ಲ. ತಳಮಟ್ಟದ ರಾಜಕಾರಣಿಗಳೀಗ “ಎಂಡೇಂಜರ್ಡ್ ಸ್ಪಿಷೀಸ್!”

3 Comments

 1. Lingaraju BS
  May 8, 2017
 2. BVKulkarni
  May 8, 2017
  • Anonymous
   May 9, 2017

Add Comment

Leave a Reply