Quantcast

ಇನ್ನ ರಾಮಮೋಹನ ರಾವ್ ಇನ್ನಿಲ್ಲ

ಪುರುಷೋತ್ತಮ ಬಿಳಿಮಲೆ 

ನಗರದ ಎಲ್ಲ ಬಗೆಯ ಕ್ರೌರ್ಯಗಳನ್ನು ನಿರಾಕರಿಸಿ ಮಗುವಿನ ಮುಗ್ಧತೆಯನ್ನು ಕೊನೆತನಕ ಕಾಪಾಡಿಕೊಂಡು ಬದುಕಿದ್ದ

ಇನ್ನ ರಾಮಮೋಹನ ರಾವ್ ಇನ್ನಿಲ್ಲ

ಇನ್ನ ರಾಮಮೋಹನ ರಾವ್ ಅವರು ಹೊರನಾಡ ಕನ್ನಡಿಗರ ಹೆಮ್ಮೆಯಾಗಿದ್ದರು. ಭಾರತ ಸರಕಾರದಲ್ಲಿ  ಉನ್ನತ ಹುದ್ದೆಗಳನ್ನು ಸುದೀರ್ಘ ಕಾಲ ಘನತೆಯಿಂದ ನಿಭಾಯಿಸಿದ ಅವರು ಕನ್ನಡ ಮತ್ತು ತುಳುಭಾಷೆಗಳ ವಿಚಾರದಲ್ಲಿ ಅತ್ಯಂತ ವಿನೀತರಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದರು.

ಅವರು  ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಈಗ ಎದ್ದು ಕಾಣುತ್ತಿರುವ ಸಾಂಸ್ಕೃತಿಕ ಸಮುಚ್ಚಯಕ್ಕೆ ಬೀಜಾಂಕುರವಾದ್ದು. ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಅವರು ಕಟ್ಟಡ ಸಮಿತಿಯ ಸಂಚಾಲಕರಾಗಿದ್ದು ಕಟ್ಟಡದ ಕೆಲಸಗಳಿಗೆ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಂಡಿದ್ದರಲ್ಲದೆ, ಆನಂತರದ ಕಾಲದಲ್ಲಿ ಸಂಘದ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದರು, ಸಂಘದ ಬಿಕ್ಕಟ್ಟಿನ ಕ್ಷಣಗಳಲ್ಲಿ ನೇರ ಮಾತುಗಳ ಮೂಲಕ ಸಂಘಕ್ಕೆ ಮಾರ್ಗ ದರ್ಶನ ಮಾಡುತ್ತಿದ್ದರು.

ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ತುಳುವರ ಬೇಡಿಕೆಯ ಮುಂಚೂಣಿಯಲ್ಲಿ ಶ್ರೀ ರಾಮಮೋಹನ ರಾವ್ ಅವರಿದ್ದರು. ಅವರು ಮುಖ್ಯ ಸಂಪಾದಕರಾಗಿದ್ದ ಏಷಿಯಾ ನ್ಯೂಸ್ ಇಂಟರ್ ನ್ಯಾಶನಲ್ ನಲ್ಲಿ  ಕನ್ನಡ ಮತ್ತು ತುಳುವಿನ ಕುರಿತು ಆದಷ್ಟೂ ಹೆಚ್ಚು ಸುದ್ದಿ ಪ್ರಸಾರವಾಗುವಂತೆ ಸದ್ದಿಲ್ಲದೇ ಮಾಡುತ್ತಿದ್ದರು.

ಇದೀಗ ನಾನು ಕೆಲಸ ಮಾಡುತ್ತಿರುವ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಕನ್ನಡ ಭಾಷಾ ಪೀಠದ ಎಲ್ಲ ಚಟುವಟಿಕೆಗಳಿಗೂ  ಅಂತಾರಾಷ್ಟ್ರೀಯವಾದ ಒಂದು ಮನ್ನಣೆಯನ್ನು ಅವರು ತಂದುಕೊಡುತ್ತಿದ್ದರು. ಕರ್ನಾಟದ ಯಾರೇ ಆದರೂ ಸಹಾಯಕ್ಕಾಗಿ ಅವರನ್ನು ಸಂಪರ್ಕಿಸಿದರೆ, ಅವರು ಅದನ್ನು ಮನಸಿಗೆ ಹಚ್ಚಿಕೊಂಡು ಕೆಲಸಮಾಡಿಕೊಡುತ್ತಿದ್ದರು.

ಸುದೀರ್ಘ ಕಾಲ ದೆಹಲಿಯಲ್ಲಿ ನೆಲೆಸಿದ್ದ ಅವರಿಗೆ ಶ್ರೀ ಶಾರದಾ ಪ್ರಸಾದ್, ಶಾ ಬಾಲೂ ರಾವ್, ಶ್ರೀ ಎಂಕೆ ಧರ್ಮ ರಾಜ್ ಮೊದಲಾದ ಹಿರಿಯ ಸಾಂಸ್ಕೃತಿಕ ನಾಯಕರ ಜೊತೆ ಜೊತೆ ನಿಕಟ ಸಂಪರ್ಕವಿತ್ತು. ಆ ತಲೆಮಾರಿನ ಕೊನೆಯ ಕೊಂಡಿಯಾಗಿದ್ದ ಶ್ರೀ ರಾಮಮೋಹನ ರಾವ್ ಅವರ ನಿಧನದಿಂದ ದೆಹಲಿ ಕನ್ನಡಿಗರು ಹಿರಿಯ ಪರಂಪರೆಯ ದೊಡ್ಡ ವ್ಯಕ್ತಿತ್ವವೊಂದನ್ನು ಕಳೆದುಕೊಂಡಂತಾಯಿತು.

ಮಹಾನಗರದಲ್ಲಿ ಬದುಕಿದ್ದರೂ ನಗರದ ಎಲ್ಲ ಬಗೆಯ ಕ್ರೌರ್ಯಗಳನ್ನು ನಿರಾಕರಿಸಿ ಮಗುವಿನ ಮುಗ್ಧತೆಯನ್ನು ಕೊನೆತನಕ ಕಾಪಾಡಿಕೊಂಡು ಬದುಕಿದ್ದ ಅವರು ನನ್ನಂಥವರಿಗೆ ಎಂದೆಂದೂ ಒಂದು ಮರೆಯದ ಆದರ್ಶ.

Add Comment

Leave a Reply