Quantcast

ಗೆಳೆಯರು ನೆನೆದಂತೆ ‘ಗರುಡನಗಿರಿ ನಾಗರಾಜ್’

ಹಿರಿಯ ಪತ್ರಕರ್ತ, ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀ ಗರುಡನಗಿರಿ ನಾಗರಾಜ (85 ವರ್ಷ) ಭಾನುವಾರ ಬೆಳಗಿನ ಜಾವ ಸುಮಾರು 2.55 ರ ವೇಳೆಗೆ ನಿಧನರಾದರೆಂದು ಅವರ ಪುತ್ರ ಹರ್ಷ ಗರುಡನಗಿರಿ ಅವರು ತಿಳಿಸಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಭಾನುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಅವರ ಜೆ.ಪಿ. ನಗರ 3ನೇ ಹಂತದ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು ಎಂದೂ ಕುಟುಂಬದ ಮೂಲಗಳು ತಿಳಿಸಿವೆ.

ಶ್ರೀ ಗರುಡನಗಿರಿ ನಾಗರಾಜ ಅವರು ಜನವಾಣಿ ಪತ್ರಿಕೆಯಿಂದ ವೃತ್ತಿ ಜೀವನವನ್ನು ಆರಂಭಿಸಿದ್ದರು. ನಂತರ ಕನ್ನಡಪ್ರಭ ಪತ್ರಿಕೆಯ ಹಿರಿಯ ವರದಿಗಾರರಾಗಿ ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ನಂತರ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿಯೂ ನಾಗರಾಜ ಅವರು ಸೇವೆ ಸಲ್ಲಿಸಿದ್ದರು.

ಕೆಲ ಕಾಲ ಕರ್ಮವೀರ ವಾರಪತ್ರಿಕೆ ಹಾಗೂ ಕಸ್ತೂರಿ ಮಾಸಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಮತ್ತು ಟಿಯೆಸ್ಸಾರ್ ಪ್ರಶಸ್ತಿಗಳಲ್ಲದೆ ಹಲವಾರು ಪ್ರಶಸ್ತಿಗಳಿಗೆ ನಾಗರಾಜ ಅವರು ಭಾಜನರಾಗಿದ್ದರು. ಮೃತರು ಪತ್ನಿ, ಪುತ್ರಿ, ಪುತ್ರ ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

(ಹೆಚ್ಚಿನ ಮಾಹಿತಿಗಾಗಿ ಮೊಮ್ಮಗ ಹೊಯ್ಸಳರವರ ಮೊಬೈಲ್ : 9886126968)

 

ಹಿರಿಯರಾದ ಗರುಡನಗಿರಿ ಅವರ ಜೊತೆ ಕೆಲಸಮಾಡುವ ಅವಕಾಶ ನನಗೆ ಸಿಕ್ಕಿತ್ತು. ಅತ್ಯಂತ ಸ್ವಾಭಿಮಾನಿ ಯಾರ ಬಳಿಯೂ ಏನನ್ನೂ ಬೇಡದ ಅವರ ನಿರ್ದಾಕ್ಷಿಣ್ಯ ಸ್ವಭಾವ ನಮಗೆಲ್ಲಾ ಪ್ರಭಾವ ಬೀರಿತ್ತು.

ಮೇಲ್ಮನೆ ಕಲಾಪ ವರದಿ ಮಾಡುವಾಗ ಪಕ್ಕ ಕೂರುತ್ತಿದ್ದೆವು. ನಾನು ಹೊರಗೆ ಹೋಗಿ ಬರುವಷ್ಟರಲ್ಲಿ ನನ್ನ ಪ್ಯಾಡ್ನಲ್ಲಿ ಅಬ್ಬೂರು ಎನ್ನುವುದನ್ನು ಗಬ್ಬೂರು ಎಂದು ಬರೆದಿಡುತ್ತಿದ್ದರು. ಇದು ಅವರ ತುಂಟತನ ಹಾಗೂ ಹಾಸ್ಯಪ್ರಜ್ಞೆಗೆ ಸಾಕ್ಷಿ. ನಾನು ಗರುಡನಗಿರಿ ಎನ್ನುವುದನ್ನು ಅಶ್ಲೀಲವಾಗಿ ತಿದ್ದಿದರೂ ನೋಡಿ ನಕ್ಕು ಸುಮ್ಮನಾಗುತ್ತಿದ್ದರು.

ಅವರ ಒಡನಾಟದ ಕ್ಷಣಗಳು ಮರೆಯಲಾಗದ ಜೀವನದ ಪಾಠಗಳು.

ಹೆಚ್ಚು ಸಿಗರೇಟು ಸೇದುವ ಹವ್ಯಾಸ ಇದ್ದರೂ ಯಾರನ್ನೂ ಕೇಳಿದವರಲ್ಲ. ಜೊತೆಗೆ ಮನೆ ಹತ್ತಿರ ಬಂದಾಗ ಸಿಗರೇಟ್ ಪ್ಯಾಕ್, ಬೆಂಕಿಪೊಟ್ಟಣ ರಸ್ತೆ ಬದಿ ಎಸೆದು ಹೋಗುವ ಮೂಲಕ ಹವ್ಯಾಸ ಹೊರಗಿಟ್ಟಿದ್ದರು! ಇಂತಹ ವಿರಳ ವ್ಯಕ್ತಿತ್ವದ ಜೊತೆ ಕೆಲಸ ಮಾಡಿದ್ದು ಅತ್ಯಂತ ಸಾರ್ಥಕ ಭಾವ ಮೂಡಿಸಿದೆ.

-ಅಬ್ಬೂರು ರಾಜಶೇಖರ್ 

ಗರುಡನಗಿರಿ ಅವರು ಪತ್ರಿಕಾ ಅಕಾಡೆಮಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹಾಸನದಲ್ಲಿ ಪತ್ರಕರ್ತರಿಗೆ ಶಿಬಿರ (1994-95) ಸಂಘಟಿಸಿದ್ದರು. ಆಗ ಸಿಎಂ ಆಗಿದ್ದ ದೇವೇಗೌಡರು ಶಿಬಿರ ಸಮಾರೋಪ ಸಮಾರಂಭಕ್ಕೆ ಬಂದಿದ್ದರು. ಈ ಅಕಾಡೆಮಿಗೆ ಸರ್ಕಾರ 5 ಲಕ್ಷ ಅನುದಾನ ಕೊಡುತ್ತಿದೆ. ಏನಾದರೂ ಮಾಡಿ 15 ಲಕ್ಷ ಕೊಡುವಂತೆ ಸರ್ಕಾರದ ಮೇಲೆ ಒತ್ತಾಯ ತರಬೇಕು. ಆ ಕೆಲಸ ಇವತ್ತೆ ಆಗಬೇಕು ಎಂದು ಪುಸಲಾಯಿಸಿದರು. ನಾವೆಲ್ಲ ಗೌಡರು ಭಾಷಣ ಮಾಡುವಾಗ ಅಕಾಡೆಮಿ ಅನುದಾನ 20 ಲಕ್ಷಕ್ಕೆ ಏರಿಕೆ ಮಾಡಬೇಕು ಎಂದು ಒತ್ತಾಯಿಸತೊಡಗಿದೆವು. ನಮ್ಮೂರಿನ ಗೌಡರೇ ಸಿಎಂ ಅಲ್ವ ಎಂಬ ಅಭಿಮಾನ & ನಾವೆಲ್ಲ ಹೇಳಿದರೆ ಆ ಕೆಲಸ ಆಗುತ್ತದೆ ಎಂಬ ನಂಬಿಕೆ.

ಒತ್ತಾಯಕ್ಕೆ ಕಟ್ಟುಬಿದ್ದ ಗೌಡರು ಅಕಾಡೆಮಿಗೆ 10 ಲಕ್ಷ ಅನುದಾನ ಹೆಚ್ಚು ಮಾಡಿ ಅಲ್ಲಿಯೇ ಘೋಷಿಸಿದರು.
ಇದರ ಹಿಂದಿನ ಪ್ರೇರಕರಾಗಿದ್ದ ಗರುಡನಗಿರಿ ಅವರು, ಆಮೇಲೆ ನಮಗೆಲ್ಲ ಬೆನ್ನು ತಟ್ಟಿ ಶಬ್ಬಾಶ್ ಗಿರಿ ಕೊಟ್ಟಿದ್ದರು.

ಹಾಸನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರನ್ನು ಕೆಲ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಒಂದು ಕಾರ್ಯಕ್ರಮದಲ್ಲಿ ಅವರು ಹಾಸ್ಯವಾಗಿ ಮಾತನಾಡಿದ್ದು, ಒಂದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿ, ರಾಜ್ಯದಲ್ಲಿ ಪ್ರತಿಭಟನೆ ದಾರಿ ಹಿಡಿದು ರದ್ದಾಂತವಾಯಿತು.
ಕೂಡಲೆ, ಬೆಂಗಳೂರಿಂದ ಪೋನಾಯಿಸಿದ ಗರುಡನಗಿರಿ ಅವರು, ನೀ ಕರೆದಿದ್ದಕ್ಕೆ ಬಂದಿದ್ದೆ. ತಮಾಷೆಗಾಗಿ ಮಾತನಾಡಿದ್ದು ಹೀಗೆಲ್ಲ ಆಗುತ್ತೆ ಅಂದುಕೊಂಡಿರಲಿಲ್ಲ. ಈಗ ನೀನೆ ಆ ಸಮುದಾಯ, ಪ್ರತಿಭಟನಾಕಾರರ ಜೊತೆ ಮಾತನಾಡಿ ಈ ಸಮಸ್ಯೆ ಪರಿಹರಿಸಬೇಕು. ಬೇಕಾದ್ರೆ ವಿವರಣೆ ನೀಡಲು ನಾನೂ ಬರ್ತಿನಿ ಅಂದ್ರು. ಪ್ರತಿಭಟನೆ ಮುಂಚೂಣಿಯಲ್ಲಿರುವ ನಾಯಕರ ಜೊತೆ ಮಾತನಾಡಿಸಿದ್ದಲ್ಲದೆ ಅವರ ಮೇಲೆ ದಾಖಲಾಗಿದ್ದ ಪೊಲೀಸ್ ಕೇಸು ವಾಪಸು ತೆಗೆಸಿದೆವು.
ಆಗ ಮತ್ತೊಂದು ಶಬ್ಬಾಶ್ ಗಿರಿ ಕೊಟ್ಟರು.

ಏನ್ ತಗಡೂರ್ ಅಂತ ಮಾತನಾಡಿಸುವುದೇ ಅವರಿಗೆ ಖುಷಿ.

ನಮಗೂ ಅಷ್ಟೇ.
ಗರುಡನಗಿರಿ ಸಾರ್ ಅಂತ ಮಾತಾನಾಡಿಸಿದರೆನೇ ಸಮಾಧಾನ.

ಜೆಪಿ ನಗರದ ಅವರ ಮನೆಯಲ್ಲಿ ಇತ್ತೀಚೆಗೆ ಭೇಟಿಯಾದಾಗ, ಹಾಸನದ ತವರು ನೆನಪಿನಿಂದ ಹಿಡಿದು, ಕನ್ನಡ ಪತ್ರಿಕೋದ್ಯಮ ಬಗ್ಗೆ ಬಹಳ ಹೊತ್ತು ಎರಡೆರಡು ಬಾರಿ ಕಾಫಿ ಕುಡಿದು, ಮಾತನಾಡಿದ್ದು ನೆನಪಾಯಿತು.

ಪತ್ರಿಕೋದ್ಯಮದ ಹಿರಿಯ ಕೊಂಡಿಯೊಂದು ಕಳಚಿಕೊಂಡದ್ದು ನೋವಿನ ಸಂಗತಿ.😌

-ಶಿವಾನಂದ ತಗಡೂರು 

Add Comment

Leave a Reply