Quantcast

‘ಡುಂಡಿ’ ನಶ್ಯ

ಕೀರ್ತಿ ಕೋಲ್ಗಾರ್

ಡುಂಡಿರಾಜರಿಗೆ ಅರವತ್ತಾಯ್ತು… ನಮ್ಮ ನೆನಪಿನ ಹುಂಡಿಯಲ್ಲಿ ಅವರ ‘ಹನಿ’ಗಳ ಕಾಣಿಕೆ ಅಪಾರ. ಅವರಿಗೆ ಈ ವಯಸ್ಸಿನ ತನಕ ಎನರ್ಜಿ ಕೊಟ್ಟ ಸಂಗತಿಗಳಲ್ಲಿ ನಶ್ಯವೂ ಒಂದು. 34 ವರ್ಷ ನಶ್ಯೋತ್ತಮರಾಗಿದ್ದ ಕತೆ ಕಾಡಿತು… (ಹಿಂದೊಮ್ಮೆ ಬರೆದ ಲೇಖನ)

ಡುಂಡಿನಶ್ಯ (1970- 2004)
ಹನಿದೊರೆ ಡುಂಡಿರಾಜ್ ಒರಿಜಿನಲ್ಲಾಗಿ ಇರುವುದು ತೆಳ್ಳಗೆ. ಹೊತ್ತೊತ್ತಿಗೆ ಊಟ, ತಿಂಡಿ ಮಾಡುವ ಕಾರಣಕ್ಕಾಗಿ ಸ್ವಲ್ಪ ದಪ್ಪಗೆ ಕಾಣಿಸುತ್ತಾರಷ್ಟೇ! ಹತ್ತು ವರ್ಷದ ಹಿಂದೆಯೂ ಹೀಗೆಯೇ ಇದ್ದರು. ಈಗಲೂ ಹಾಗೆಯೇ ಇದ್ದಾರೆ. ಆದರೆ, ಒಟ್ಟು ತೂಕದಲ್ಲಿ ಇಪ್ಪತ್ತೈದು ಗ್ರಾಂ ಲೆಸ್ ಆಗಿರೋದು ಅವರ ಪಾಲಿಗೆ ತುಂಬಲಾರದ ನಷ್ಟ. ಈ ಒಂಬತ್ತು ವರ್ಷದಿಂದ ಅವರ ಜೇಬೊಳಗೆ ನಶ್ಯ ಡಬ್ಬಿ ಕಾಣಿಸುತ್ತಿಲ್ಲ!

‘ಮೂಗಿರುವುದು ಉಸಿರಾಡಲು’ ಎಂಬುದನ್ನು ಎಸ್ಸೆಸ್ಸೆಲ್ಸಿಯ ಜೀವಶಾಸ್ತ್ರ ತರಗತಿಯಲ್ಲೇ ಮರೆತುಬಿಟ್ಟ ನಶ್ಯೋತ್ತಮ ಡುಂಡಿ. ನಶ್ಯದ ಪಾಲಿಗೆ ಅವರ ಮೂಗು ಡಬಲ್ ಬೆಡ್‌ರೂಮಿನ ಮನೆ. ಬಾಡಿಗೆಯಿಲ್ಲ. ಅಗ್ರಿಮೆಂಟಿಲ್ಲ. ಒಟ್ಟಾರೆ ಮೂವತ್ನಾಲ್ಕು ವರ್ಷದ ನೆಲೆ. ನಶ್ಯ ಸೇದಲು ಅವರಲ್ಲಿ ಕಾರಣ ಇರುತ್ತಿರಲಿಲ್ಲ. ಅಪ್ಪ ಸೇದುತ್ತಾರಲ್ಲ, ತಾನೂ ಸೇದಬಹುದು ಎಂದುಕೊಂಡು ವಂಶಪಾರಂಪರ್ಯವಾಗಿ ಚಟಕ್ಕೆ ಪಟ್ಟ ಕೊಟ್ಟರು.

ಮನೆಯಲ್ಲಿದ್ದಾಗ ಅಪ್ಪನ ಜೇಬಿನಲ್ಲಿದ್ದಿದ್ದನ್ನು ಕದ್ದು ಸೇದುವುದು, ಸ್ಕೂಲಿಗೆ ಬಂದಾಗ ನಶ್ಯದ ಗೆಳೆಯನೊಟ್ಟಿಗೆ ಸಾರ್ವಜನಿಕವಾಗಿ ಸೇದುವುದು. ಈ ಎರಡೂ ಕಡೆ ಅವರ ಮೂಗಿಗೆ ನಶ್ಯ ಪುಕ್ಕಟೆ ಸಪ್ಲೈ.
ಡುಂಡಿ ದುಡ್ಡು ಕೊಟ್ಟು ನಶ್ಯ ಖರೀದಿಸಿದ್ದು ಕುಂದಾಪುರ ಬಿಟ್ಟು ಬೆಂಗಳೂರಿನ ಕಾಲೇಜಿಗೆ ಬಂದಾಗ. ‘ಮಂಗಳೂರು ನಶ್ಯ’ ಇಲ್ಲಿ ಸಿಗದ ಕಾರಣದಿಂದ ಮೊದಲ ದಿನ ಒದ್ದಾಡಿದರು. ಅನಿವಾರ್ಯವಾಗಿ ಬ್ರ್ಯಾಂಡ್ ಬದಲಾಯಿತು. ಎರಡೇ ದಿನದಲ್ಲಿ ‘ಕಂದವಿಲಾಸ್‌’ ಎಂಬ ಮದ್ರಾಸ್ ನಶ್ಯ, ಛತ್ರಿ ಮಾರ್ಕಿನ ನಶ್ಯದೊಂದಿಗೆ ಅವರ ಮೂಗು ಒಪ್ಪಂದ ಮಾಡಿಕೊಂಡವು.

ನಾವು ಕಲ್ಪಿಸಿಕೊಳ್ಳುವಂತೆ ಡುಂಡಿ ರಂಪಾಟ ಮಾಡಿಕೊಂಡು ನಶ್ಯ ಸೇದುತ್ತಿರಲಿಲ್ಲ. ಅವರ ಸೇದುವಿಕೆ ತುಂಬಾ ಆರ್ಟಿಸ್ಟಿಕ್ಕಾಗಿ ಇತ್ತು. ನೋಡುಗನಿಗೂ ಸೇದುವ ಆಸೆ ಹುಟ್ಟಿಸುತ್ತಿತ್ತು. ಹಾಗೆ ಸೇದಿದ ಮೇಲೆ ಅವರ ಮೂಗೇನು ಸೀನು ಕ್ರಿಯೇಟ್ ಮಾಡುತ್ತಿರಲಿಲ್ಲ. ಅಭ್ಯಾಸ ಆದ ಮೇಲೆ ಯಾರಿಗೂ ಸೀನು ಬರದು. ಆದರೆ, ಮೂಗಿನಿಂದ ಸ್ವಲ್ಪ ದ್ರವ ಇಳಿಯುತ್ತದೆ. ಆಗ ‘ಇಳಿದು ಬಾ ತಾಯೆ ಇಳಿದು ಬಾ’ ಎಂದು ಬೇಂದ್ರೆಯವರ ಗೀತೆ ಹಾಡಿಬಿಟ್ಟರೆ ಮೂಗಿನಾಳದ ತೊರೆ ಮಾಯ. ಡುಂಡಿಯವರ ಮೂಗು ಮೊದಲಿನ ಆಕಾರದಲ್ಲಿಲ್ಲ. ಇದಕ್ಕೆ ಕಾರಣವೂ ನಶ್ಯವೇ. ದಿನಕ್ಕೆರಡು ಕರಚೀಫು. ಅಂಗಿಯ ಮೇಲೆ ಅಲ್ಲಲ್ಲಿ ನಶ್ಯದ ಮದರಂಗಿ. ವಿಪರೀತ ಸೇದಿದಾಗ ಕೆಂಪಾದ ಕಣ್ಣನ್ನು ಕನ್ನಡಕ ಸಾಮರ್ಥ್ಯ ಮೀರಿ ಮರೆಮಾಚಿಸುತ್ತಿತ್ತು.

ಡುಂಡಿ ಅವರು ಕಾರ್ಪೋರೇಶನ್ ಬ್ಯಾಂಕಿನಲ್ಲಿ ಹಿರಿಯ ಅಧಿಕಾರಿ. ಲಖ್ನೌ, ದೆಹಲಿ, ಕೋಲ್ಕತಾ, ಪುಣೆ… ಅಂತ ಅಲ್ಲಿ ಇಲ್ಲಿ ಶಾಖೆಗಳಿಗೆ ಟ್ರೈನಿಂಗ್ ಕೊಡಲು ಓಡಾಡುತ್ತಾರೆ. ಸ್ವಲ್ಪ ವರ್ಷದ ಹಿಂದೆ ದೆಹಲಿಗೂ ಹೋಗಿದ್ದರು. ಅದೊಂದು ರಾತ್ರಿ, ವಾಸ್ತವ್ಯ ಹೂಡಿದ ಹಾಸ್ಟೆಲ್ಲಿನ ಮೂರನೇ ಮಹಡಿಯಲ್ಲಿ ನಿಂತಾಗ ಯಾಕೋ ತೀರಾ ಸಭ್ಯಸ್ಥನಾಗಬೇಕೆಂದು ಬಯಸಿಬಿಟ್ಟರು. ನಶ್ಯವನ್ನು ಬಿಡಲೇಬೇಕೆಂದು ತೀರ್ಮಾನಿಸಿದರು. ತಂದಿದ್ದ ನಶ್ಯ ಡಬ್ಬಿಯನ್ನು ಅಲ್ಲಿಂದ ಕೆಳಕ್ಕೆಸೆದರು. ಆದರೆ, ರಾತ್ರಿಯಿಡೀ ನಿದ್ರೆಯೇ ಬರಲಿಲ್ಲ. ಬೆಳಗ್ಗೆದ್ದ ಕೂಡಲೇ ಮೂಗು ದುಃಖದಲ್ಲಿ ಅಳಲು ಶುರುಮಾಡಿತ್ತು.

ಸಾಂತ್ವನ ಹೇಳಲು ನಶ್ಯ ಡಬ್ಬಿ ಇಲ್ಲ! ಚಿಲ್ಲರೆ ಹಿಡಿದು, ದೆಹಲಿಯ ಬೀದಿ ಬೀದಿಯ ಅಂಗಡಿಗಳಿಗೆ ಅಲೆದರು. ಹಿಂದಿಯಲ್ಲಿ ನಶ್ಯಕ್ಕೆ ಏನಂತಾರೆ ಅಂತ ಇವರಿಗೆ ಗೊತ್ತಿಲ್ಲ. ನಶ್ಯ ಎಂದರೆ ಆ ಹಿಂದಿಯವರಿಗೆ ಗೊತ್ತಿಲ್ಲ! ಡುಂಡಿ ಮೂಗಿಗೆ ಬೆರಳು ತುರುಕಿ ಆ್ಯಕ್ಷನ್ ಮಾಡಿಯೆಲ್ಲ ತೋರಿಸಿದರು. ಅಲ್ಲಿ ಯಾರಿಗೂ ಮೂಗಿಗೆ ಹಾಕುವ ಆ ಪುಡಿಯ ಪರಿಚಯವಿರಲಿಲ್ಲ. ಯಾರೋ ಒಬ್ಬ ನಶ್ಯದ ರೂಪವಿದ್ದ, ಮಣ್ಣಿನ ಹುಡಿ ಥರ ಇದ್ದ ಕಂದು ಪದಾರ್ಥ ಕೊಟ್ಟ. ಅದು ಹಲ್ಲಿಗೆ ಹಾಕುವ ಪುಡಿಯಂತೆ. ಮೊದಲೇ ಮೂಗಿನ ಮೇಲೆ ಇನ್ಸೂರೆನ್ಸ್ ಮಾಡಿಸಿರಲಿಲ್ಲ; ಡುಂಡಿ ಪ್ರಯೋಗಿಸಲು ಹೋಗಲಿಲ್ಲ. ಕೊನೆಗೆ ಹಾಸ್ಟೆಲ್‌ಗೆ ಮರಳಿ, ಹಿಂದಿನ ರಾತ್ರಿ ಎಸೆದ ನಶ್ಯದ ಡಬ್ಬಿಯನ್ನು ಕಷ್ಟಪಟ್ಟು ಹುಡುಕಿದರು. ಅಂತೂ ಸಿಕ್ಕಿತು. ಮೂಗು ಅಳುವುದನ್ನು ನಿಲ್ಲಿಸಿತ್ತು.

2004ರಲ್ಲಿ ಪುಣೆಗೆ ಆಫೀಸಿನ ಡ್ಯೂಟಿ ಮೇಲೆ ಹೊರಟರು. ಹೋದ ಮೇಲೆ ಅರಿವಿಗೆ ಬಂತು, ಎರಡು ಡಬ್ಬಿ ನಶ್ಯ ಒಂದು ವಾರಕ್ಕೆ ಸಾಲದು. ಹಾಗೆಯೇ ಆಯಿತು. ಕೊನೆಯ ಎರಡು ದಿನಕ್ಕೆ ನಶ್ಯವೇ ಇರಲಿಲ್ಲ. ಹೇಗೋ ಸಹಿಸಿಕೊಂಡರು. ಆ ಎರಡು ದಿನ ನಶ್ಯ ನೆನಪಾಗಲೇ ಇಲ್ಲ. ಮಂಗಳೂರಿನಲ್ಲಿ ವಿಮಾನ ಇಳಿದು ಬರುವಾಗ ಹೆಂಡತಿಗೆ ಫೋನು ಮಾಡಿದರು, ‘ನಾನು ನಶ್ಯ ಬಿಟ್ಟಿದ್ದೀನಿ. ಮನೆಯಲ್ಲಿರುವ ನಶ್ಯ ಡಬ್ಬಿಗಳನ್ನೆಲ್ಲ ಬಿಸಾಕು. ಕಣ್ಮುಂದೆ ಇದ್ದರೆ ಮತ್ತೆ ಶುರುಮಾಡುವ ಅಪಾಯ ಇದೆ.’ ಅವರ ಪತ್ನಿ ನಂಬಲಿಲ್ಲ. ‘ನಿಮ್ಮ ಬುಲೆಟ್ಟು ಇದ್ದಿದ್ದೆ’ ಎಂದು ಉಡಾಫೆಯಲ್ಲೇ ಹೇಳಿಬಿಟ್ಟರು. ಡಬ್ಬಿಗಳನ್ನು ಬಿಸಾಕದೆ ಮುಚ್ಚಿಟ್ಟರು, ‘ಈ ಆಸಾಮಿ ಮತ್ತೆ ಕೇಳಬಹುದು’ ಎಂಬುದವರಿಗೆ ಗೊತ್ತು. ಆದರೆ, ಹತ್ತು ಹದಿನೈದು ದಿನವಾದ ಮೇಲೂ ಡುಂಡಿಯವರಿಗೆ ನಶ್ಯ ನೆನಪಾಗಲಿಲ್ಲ. ಸಂಪೂರ್ಣವಾಗಿ ತೊರೆದರು.

ಕೀ.ರಂ. ನಾಗರಾಜ್ ಒಮ್ಮೆ ಮಂಗಳೂರಿಗೆ ಬಂದಾಗ ಡುಂಡಿ, ಕೃಷ್ಣ ನಶ್ಯದ ಡಬ್ಬಿ ಕೊಟ್ಟಿದ್ದರಂತೆ. ಕೆಲವು ದಿನಗಳ ನಂತರ ಕೀರಂ, ಡುಂಡಿಗೆ ಪತ್ರ ಬರೆದು- ‘ತುಂಬಾ ಚೆನ್ನಾಗಿದೆ ಕೃಷ್ಣ ನಶ್ಯ’ ಅಂತ ಹೊಗಳಿದ್ದರಂತೆ. ನಶ್ಯದ ಕುರಿತೇ ಡುಂಡಿ ಹನಿಗವನ ಬರೆದಿದ್ದಾರೆ, ‘ಸಸ್ಯ ತಿನ್ನುವವ ಸಸ್ಯಾಹಾರಿ/ ಮಾಂಸ ತಿನ್ನುವವ ಮಾಂಸಾಹಾರಿ/ ಮೂಗಿನ ತುಂಬಾ ತಂಬಾಕಿನ ಪುಡಿ/ ತುಂಬಿಸಿಕೊಳ್ಳುವವ ನಶ್ಯಾಹಾರಿ’!
ಡುಂಡಿಯವರ ನಶ್ಯ ಚಟದ ಪ್ರತಿಪಾದನೆ ಸೊಗಸಾಗಿದೆ, ‘ದೇಗುಲದ ಗರ್ಭಗುಡಿಯೊಳಗೆ ಸಿಗರೇಟು ಪ್ರವೇಶಿಸದು, ಮದ್ಯದ ಬಾಟಲಿಗೂ ಅನುಮತಿ ಇಲ್ಲ, ನಶ್ಯ ಮಾತ್ರ ಒಳಹೋಗಬಹುದು’ ಎಂದು ಪುರೋಹಿತರ ಬೆಂಬಲ ಪಡೆಯುತ್ತಾರೆ.

ದಿನಕ್ಕೆಷ್ಟು ಸಲ ಅಂತ ಲೆಕ್ಕವೇ ಇಲ್ಲದೆ ಸೇದುತ್ತಿದ್ದ ಡುಂಡಿಗೆ, ‘ನಶ್ಯ ಓಲ್ಡ್ ಫ್ಯಾಶನ್. ಇದನ್ನು ಬಿಟ್ಟು ಸಿಗರೇಟು ಸೇದೋಣ’ ಅಂತಲೂ ಅನ್ನಿಸಿತ್ತು. ಆದರೆ, ಹೆಂಡತಿ ಬಿಡಲಿಲ್ಲ.
ಡುಂಡಿ ಇವತ್ತಿಗೂ ಹೆಂಡತಿಗೆ ಹೆದರಿಸುತ್ತಾರೆ, ’34 ವರ್ಷ ಜತೆಗಿದ್ದ ನಶ್ಯವನ್ನೇ ಬಿಟ್ಟಿದ್ದೀನಿ, ಇನ್ನು ನಿನ್ನೆ ಮೊನ್ನೆ ಬಂದ ನಿನ್ನ ಬಿಡೋದೇನ್ ದೊಡ್ಡದಲ್ಲ’!

One Response

  1. ರಘುನಾಥ
    May 15, 2017

Add Comment

Leave a Reply