Quantcast

ಯುದ್ಧಕ್ಕೆ ಎದುರಾಗಿ ಹಿಡಿದ ಪ್ರೇಮದ ಕನ್ನಡಿ..

ಮರಾಠಿಯ ಪ್ರಸಿದ್ಧ ಕಾದಂಬರಿಕಾರ ಪು.ಶಿ.ರೇಗೆ ಅವರು ಬರೆದ ಪತ್ರಾತ್ಮಕ ಕಾದಂಬರಿ ‘ಸಾವಿತ್ರೀ’ ಅದನ್ನು ಕನ್ನಡದ ಮುಖ್ಯ ಬರಹಗಾರರಾದ ಗಿರಿಜಾ ಶಾಸ್ತ್ರಿಯವರು ಅನುವಾದಿಸಿದ್ದಾರೆ.

 ಕೃತಿಯ ಹಿನ್ನೆಲೆಯ ಬಗ್ಗೆ ಒಂದು ಪರಿಚಯವನ್ನು ಗಿರಿಜಾ ಇಲ್ಲಿ ಬಿಡಿಸಿಟ್ಟಿದ್ದಾರೆ. ಜೊತೆಗೆ ಕಾದಂಬರಿಯ ಒಂದು ತುಣುಕು ನಿಮಗಾಗಿ ಇಲ್ಲಿ ನೀಡುತ್ತಿದ್ದೇವೆ. 


ಗಿರಿಜಾಶಾಸ್ತ್ರಿ

“ಯಾರನ್ನು ನಾನು ಪ್ರೇಮಿಸುವೆನೋ ಅವನನ್ನು ನಾನು ಧೈರ್ಯಶಾಲಿಯನ್ನಾಗಿಯೂ, ಜ್ಞಾನಿಯನ್ನಾಗಿಯೂ, ದಾರ್ಶನಿಕ ಹಾಗೂ ಕುಶಾಗ್ರಮತಿಯನ್ನಾಗಿಯೂ ಮಾಡುವೆ”. (ಋಗ್ವೇದ; x, 10; 125)

ಪು.ಶಿ. ರೇಗೆ (1910-78) ಎಂದೇ ಪ್ರಸಿದ್ಧರಾದ ಪುರುಷೋತ್ತಮ ಶಿವರಾಮ ರೇಗೆಯವರ “ಸಾವಿತ್ರೀ” ಎಂಬ ಮರಾಠಿ ಕಾದಂಬರಿಯ ಉಪೋದ್ಘಾತದಲ್ಲಿ ಬರುವ ಮಾತಿದು.

ಈ ಕಾದಂಬರಿಯ ಘಟನೆಗಳ ಕಾಲ 1939-47. ಎರಡನೇ ಮಹಾಯುದ್ಧದ ಕಾಲದಿಂದ ಪ್ರಾರಂಭವಾಗುವ ಈ ಕಾದಂಬರಿ ಭಾರತ ಸ್ವಾತಂತ್ರ್ಯ ಪಡೆದ ಕಾಲದೊಂದಿಗೆ ಮುಕ್ತಾಯವಾಗುತ್ತದೆ. ಆದರೆ ಅದು ಪ್ರಕಟವಾದದ್ದು 1962 ರಲ್ಲಿ. ಇಲ್ಲಿ ಬರುವ ಯುದ್ಧದ ಉಲ್ಲೇಖ, ಮನುಷ್ಯ ಜಾತಿಯ ಆಳದಲ್ಲಿ ಹರಿಯುತ್ತಿರುವ ಯುದ್ಧ ಪಿಪಾಸುತನಕ್ಕೆ ಸಾಕ್ಷಿಯಾಗಿದೆ.

ಇಲ್ಲಿನ ನಾಯಕಿ ಸಾವಿತ್ರೀ ನಾಯಕನಿಗೆ ಬರೆಯುವ ಪ್ರೇಮ ಪತ್ರಗಳು ಯುದ್ಧದ ಸುದ್ದಿಗಳನ್ನು ಒಯ್ಯುತ್ತವೆ. ಇದು ಯುದ್ಧಕ್ಕೆ ಎದುರಾಗಿ ಹಿಡಿದ ಪ್ರೇಮದ ಕನ್ನಡಿಯ ಪ್ರತೀಕವೂ ಆಗಿದೆ. ಯುದ್ಧ ಪ್ರೇಮ ಮತ್ತು ಸ್ವಾತಂತ್ರ್ಯ ಇವು ಈ ಕಾದಂಬರಿಯ ಕೇಂದ್ರಗಳು. ಸ್ವಾತಂತ್ರ್ಯ ಎನ್ನುವುದು ಪ್ರೇಮದ ಮೂಲಕ ದಕ್ಕಬೇಕೆ ಹೊರತು ಯುದ್ಧದ ಮೂಲಕ ಅಲ್ಲ ಎನ್ನುವ ಗ್ರಹಿಕೆಯುಳ್ಳ, ಕೇವಲ 128 ಪುಟಗಳುಳ್ಳ ಪಾಕೆಟ್ ಡಿಕ್ಷನರಿಗಿಂತ ತುಸುವೇ ದೊಡ್ಡದಾದ ಈ ಪುಟ್ಟ ಕಾದಂಬರಿ ಮರಾಠಿಯಲ್ಲಿ ಬಹಳ ಪ್ರಸಿದ್ಧವಾಗಿದೆ. ಈಗಲೂ ಕೂಡ ಇದರ ರಂಗ ಪ್ರಯೋಗಗಳು ನಡೆಯುತ್ತಲೇ ಇವೆ. ಇದು 39 ಪತ್ರಗಳ ಒಂದು ಗುಚ್ಛ. ಆದುದರಿಂದ ಮರಾಠಿಯಲ್ಲಿ ಇದನ್ನು ಪತ್ರಾತ್ಮಕ ಕಾದಂಬರಿಯೆಂದು ಕರೆಯಲಾಗುತ್ತದೆ.

ಮರಾಠಿಯ ಈ ಕಾದಂಬರಿ ಜರಗುವುದೇ ಕರ್ನಾಟಕದಲ್ಲಿ. ಇದರ ನಾಯಕಿ ಸಾವಿತ್ರ್ರೀ, ಬೆಂಗಳೂರಿನ ಕಾಲೇಜಿನಲ್ಲಿ ಕಲಿಯುತ್ತಿರುವ ಕೂರ್ಗಿನ, ತಿರುಪೇಟೆಯ ಹುಡುಗಿ. ಈ ಕೃತಿ ಪ್ರಾರಂಭವಾಗುವುದು ತಿರುಪೇಟೆಯಿಂದ. ಮುಕ್ತಾಯವಾಗುವುದೂ ಅಲ್ಲಿಯೇ. ಈ ಎರಡು ಅಂತ್ಯಗಳ ನಡುವೆ ಮಹಾಯುದ್ಧ ನಡೆಯುತ್ತದೆ. ಇಲ್ಲಿ ನಾಯಕಿಯೇ ಪ್ರಧಾನ. ಅವಳ ಕಣ್ಣಿನ ಮೂಲಕವೇ ಇಲ್ಲಿನ ಎಲ್ಲಾ ಪಾತ್ರಗಳು ಮರುಜೇವಣೆ ಪಡೆದುಕೊಂಡು ಅರಳುತ್ತವೆ.

ಸಾವಿತ್ರ್ರೀ -ಸಂಜೀವಿನಿ

ಪುರಾಣದ ಸಾವಿತ್ರಿ ಕೂಡ ಮಾಡಿದ್ದು ಇದನ್ನೇ. ಉಪೋದ್ಘಾತದಲ್ಲಿ ಬಂದಿರುವ ಋಗ್ವೇದದ ಮಾತು ಕೂಡ ಇಲ್ಲಿ ಕಾಕತಾಳಿಯವೇನಲ್ಲ, ಅಥವಾ ಕೇವಲ ಸಂಸ್ಕತ ಭಾಷೆಯನ್ನು ಬಳಸಬೇಕೆಂಬ ಶೋಕಿಗಾಗಿಯೂ ಬಂದಿಲ್ಲ.

39 ಪತ್ರಗಳು, ಸಾವಿತ್ರೀ ಎಂಟು ವರುಷಗಳ ಕಾಲ (1939-47) ‘ಅವನಿಗೆ’ ಬರೆದ ಪತ್ರಗಳು. ಕಾದಂಬರಿಯುದ್ದಕ್ಕೂ ಕೇವಲ ಅವಳೇ ಬರೆಯುತ್ತಾ ಹೋಗುತ್ತಾಳೆ. ಅವನಿಂದ ಬರುವ ಉತ್ತರಗಳು ಮಾತ್ರ ಇಲ್ಲಿ ಇಲ್ಲ. ಆದರೆ ಅವಳು ಬರೆಯುವ ಪತ್ರಗಳಲ್ಲೇ ‘ಅವನ’ ಉತ್ತರಗಳನ್ನು ಓದುಗರು ಗ್ರಹಿಸಬಹುದಾಗಿದೆ.

ಇದು ಈ ಕಾದಂಬರಿಯ ಒಂದು ವಿಶಿಷ್ಟ ತಂತ್ರ. ಆದುದರಿಂದಲೇ ಇದನ್ನು ಏಕ ಮುಖ ಪ್ರೇಮದ ಕಾದಂಬರಿಯೆಂದು ಕರೆಯುವವರುಂಟು. ಆದರೆ ಇಲ್ಲಿ ಪತ್ರಗಳ ಓಡಾಟ ಮಾತ್ರ ಏಕ ಮುಖವಾಗಿದೆಯೇ ಹೊರತು ಪ್ರೇಮವಲ್ಲ ಎಂದು ಯಾರಾದರೂ ಗ್ರಹಿಸಬಹುದಾಗಿದೆ.

ಅಕ್ಕ ಚೆನ್ನಮಲ್ಲಿಕಾರ್ಜುನನಿಗೆ ಅಲವರಿಯುವ ರೀತಿ ಸಾವಿತ್ರಿಯದಾಗಿದೆ. ಸಾವಿತ್ರಿಯ ‘ಅವನು’ ಒಬ್ಬ ಕಾಲ್ಪನಿಕ ಪುರುಷ. ಆದುದರಿಂದಲೇ ಅವನು ಸಾವಿತ್ರಿ ಬಯಸುವ ಹಾಗಿದ್ದಾನೆ. ಸಾವಿತ್ರಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಾನೆ. (ಚನ್ನಮಲ್ಲಿಕಾರ್ಜುನನ ಹಾಗೆ) ಭಿನ್ನಾಭಿಪ್ರಾಯಗಳನ್ನು ತಾಳ್ಮೆಯಿಂದ ಸ್ವೀಕರಿಸುತ್ತಾನೆ. ಗಂಡುಗರ್ವದ ಲವಲೇಶವೂ ಅವನಲ್ಲಿ ಕಾಣಸಿಗುವುದಿಲ್ಲ.

ವಾಸ್ತವವಾಗಿ ಇದು ಅಸಾಧ್ಯವಾದುದು. ‘ಅವನ’ನ್ನು ಒಬ್ಬ ಕಾಲ್ಪನಿಕ ವ್ಯಕ್ತಿಯನ್ನಾಗಿ ಮಾಡಿರುವುದರ ಹಿಂದೆ ಈ ಉದ್ದೇಶವೇ ಅಡಗಿರಬಹುದು. ಆದುದರಿಂದ ‘ಅವನು’ ಕಾದಂಬರಿಯೊಳಗೆ ಬಂದು ಓದುಗರನ್ನು ಎದುರಿಸುವುದಿಲ್ಲ. ಆದರೆ ಸಾವಿತ್ರಿ ಅಕ್ಕನ ಹಾಗೆ ಈ ‘ಅವನೆoಬ ಪ್ರಿಯಕರನನ್ನು ಕೇವಲ ಪ್ರೇಮ ಪ್ರೀತಿಗಳಿಂದ ಕಟ್ಟಿಹಾಕಲು ಸಿದ್ಧಳಿಲ್ಲ. ಅಂತಹ ಶಬ್ದಗಳು ತನಗೆ ರುಚಿಸುವುದಿಲ್ಲವೆಂದು ಅವನಿಗೆ ಬರೆದ ಪತ್ರದಲ್ಲಿ ಅವಳು ಹೇಳಿಕೊಳ್ಳುತ್ತಾಳೆ.

“ನಾನು ನಿಮಗೆ ಏನು ಬರೆಯಬೇಕೆಂದು ನೀವು ಅಪೇಕ್ಷಿಸುತ್ತೀರಿ? ಪ್ರೇಮ, ಪ್ರೀತಿ, ಅನುರಾಗದಂತಹ ಶಬ್ದಗಳಲ್ಲಿ ನನಗೆ ಆಸಕ್ತಿಯಿಲ್ಲ. ನಮ್ಮನ್ನು ನಾವೇ ಕಟ್ಟಿಹಾಕುವ ಸಲುವಾಗಿ ಅವುಗಳನ್ನು ಒಂದು ನಿಶಾನೆಯಾಗಿ ಬಳಸುತ್ತೇವೆ ಎಂದು ನನಗೆ ಒಮ್ಮೊಮ್ಮೆ ಅನ್ನಿಸುತ್ತದೆ. ಅಂತಹುದರ ರಂಗು ಕಾಲಕಳೆದಂತೆ ಮಾಸಿಹೋಗುತ್ತದೆ. ನಿಮ್ಮ ಬಗ್ಗೆ ನನಗಿರುವ ಏಕೈಕ ಆಕರ್ಷಣೆಯೆಂದರೆ- ಆದರೆ ಹಾಗೆಂದರೇನು? ಅದರ ಬಗ್ಗೆ ನಾನು ಇಷ್ಟು ಮಾತ್ರ ಹೇಳಬಲ್ಲೆ, ನಿಮ್ಮನ್ನು ನನ್ನವರು ಎಂದು ಭಾವಿಸಿದ್ದೇನೆ, ನನ್ನನ್ನು ನಿಮ್ಮವಳೆಂದು ತಿಳಿದಿದ್ದೇನೆ. ಆದರೆ ಇದರಾಚೆಗೆ ಏನೂ ಇಲ್ಲವೇ? ಈ ಕೊಳುಕೊಡುಗೆಳ ಮೂಲಕ ನಾವು ಅದನ್ನು ಮೀರುತ್ತಿದ್ದೇವೆಯೋ ಇಲ್ಲ, ಪುನಃ ನಮ್ಮ ಸುತ್ತ ಹೊಸ ಹೊಸ ಗೋಡೆಗಳನ್ನೇ ನಾವು ಕಟ್ಟಿಕೊಳ್ಳುತಿದ್ದೇವೆಯೋ?”

ಅಕ್ಕ ಪ್ರೇಮದ ಮೂಲಕವೇ ತನ್ನನ್ನು ಬಿಡುಗಡೆಗೊಳಿಸಿಕೊಂಡಂತೆ ಸಾವಿತ್ರಿಯೂ ಪ್ರೇಮದ ಮೂಲಕವೇ ತನ್ನ ಆವರಣದ ಗೋಡೆಗಳನ್ನು ಕೆಡವಿ ಹಾಕುತ್ತಾಳೆ. ಅದರ ಸಾವಿತ್ರಿಯ ಪ್ರೇಮದ ಕಲ್ಪನೆ ವೈಯಕ್ತಿಕವಾಗಿರುವಂತೆ ಜಾಗತಿಕವಾದುದೂ ಆಗಿದೆ. ಅವಳ ಅನಿಯಂತ್ರಿತ ಪ್ರೇಮದಿಂದ ಬಹಳ ಅದ್ಭುತವಾಗಿ ಬೆಳೆದುಬಿಡುತ್ತಾಳೆ. ಅಪರಿಚಿತನಾಗಿ ಬರುವ ‘ಅವನು’ ಕೇವಲ ಪತ್ರಗಳ ಮೂಲಕವೇ ಆತ್ಮಸಖನಾಗಿಬಿಡುತ್ತಾನೆ. ಅವರ ಪರಸ್ಪರ ಬೆಂಬಲ ಪ್ರೀತಿ ಸ್ನೇಹಗಳು ಇಬ್ಬರನ್ನೂ ಪರಸ್ಪರ ಬೆಳೆಸಿವೆ. ಹೆಣ್ಣು ಗಂಡಿನ ಸಂಬಂಧದ ಪಾರಸ್ಪರಿಕತೆಯ ಉತ್ಕಷ್ಟ ರೂಪ ಈ ಕಾದಂಬರಿಯಲ್ಲಿದೆ.

ಕಾದಂಬರಿಯ ಪ್ರಾರಂಭದಲ್ಲಿ ಲಚ್ಚಿಯೆಂಬ ಒಬ್ಬ ಹುಡುಗಿಯ ಕತೆ ಬರುತ್ತದೆ. ಅವಳು ತನ್ನ ಅಜ್ಜಿಯ ಜೊತೆ, ಊರಹೊರಗಿನ ಒಂದು ದಟ್ಟವಾದ ಕಾಡಿನ ಸೆರಗಿನಲ್ಲಿ ವಾಸಿಸುತ್ತಿದ್ದಾಳೆ. ಅವಳ ಗುಡಿಸಿಲಿನ ಬಾಗಿಲಿಗೆ ಒಮ್ಮೆ ಒಂದು ನವಿಲು ಬರುತ್ತದೆ. ಅದನ್ನು ನೋಡಿದ ಲಚ್ಚಿ ಕುಣಿಯತೊಡಗುತ್ತಾಳೆ. ನವಿಲೂ ಕುಣಿಯತೊಡಗುತ್ತದೆ. ನವಿಲನ್ನು ತನ್ನ ಅಂಗಳದಲ್ಲಿ ಕಟ್ಟಿಹಾಕಬೇಕೆಂದು ಲಚ್ಚಿಯ ಹಟ. ಅದಕ್ಕೆ ‘ಕಾಳು ಕಡ್ಡಿ ಎಲ್ಲಿಂದ ತರುವುದು?’ ಇದು ಅಜ್ಜಿಯ ಚಿಂತೆ. ಕೊನೆಗೆ ನವಿಲೇ ಮಾತನಾಡುತ್ತದೆ; ತಾನು ಇದೇ ಕಾಡಿನ ಆಸುಪಾಸಿನಲ್ಲಿ ಇರುವುದಾಗಿಯೂ ಕಾಳಿನ ಆವಶ್ಯಕತೆ ತನಗಿಲ್ಲವೆಂದೂ. ತಾನು ಬಂದಾಗಲೆಲ್ಲಾ ಲಚ್ಚಿ ಕುಣಿಯುತ್ತಿರಬೇಕೆಂದೂ ಅವಳು ಕುಣಿಯುವುದನ್ನು ನಿಲ್ಲಿಸಿದಾಕ್ಷಣ ತಾನು ಬರುವುದನ್ನೂ ನಿಲ್ಲಿಸಿಬಿಡುವ ಒಂದು ಷರತ್ತು ಹಾಕಿ ತಾನು ದಿನ ಲಚ್ಚಿಯ ಬಳಿ ಬರುವುದಾಗಿ ನವಿಲು ಒಪ್ಪಿಕೊಳ್ಳುತ್ತದೆ.

ಸಾವಿತ್ರೀ ಹೇಳುತ್ತಾಳೆ “ಷರತ್ತೇನೋ ಸರಳವಾದುದು ಆದರೆ ನೃತ್ಯಮಾಡುವುದು ಅಷ್ಟು ಸರಳವೇ? ಕುಣಿಯುವ ಮನಸ್ಸು ಇರಬೇಡವೇ?” ಆಮೇಲೆ ‘ನವಿಲು ಬಂದಿತೋ ಇಲ್ಲವೋ ಲಚ್ಚಿಗೆ ತಿಳಿಯುವುದೇ ಇಲ್ಲ ಅವಳು ಮಾತ್ರ ಎಂದಿಗೂ ಖುಷಿಯಿಂದಲೇ ಇದ್ದುಬಿಡುತ್ತಾಳೆ. ಲಚ್ಚಿಯಿಂದ ಪ್ರಾರಂಭವಾಗುವ ‘ಸಾವಿತ್ರೀ’ಯ ಕತೆ ಅಂತ್ಯಗೊಳ್ಳುವುದೂ ಲಚ್ಚಿಯ ಕತೆಯಿಂದಲೇ. ಇಲ್ಲಿ ಬರುವ ನವಿಲು ಕಾದಂಬರಿಯ ಕೇಂದ್ರ ಪ್ರತಿಮೆಯಾಗಿದೆ. (ಒಡಲಾಳದಲ್ಲಿ ಪುಟ್ಟ ಗೌರಿ ಗೋಡೆಯ ಮೇಲೆ ರಚಿಸುವ ನವಿಲ ಚಿತ್ರದಂತೆ)

‘ನಮಗೆ ನವಿಲು ಬೇಕೆಂದರೆ ನಾವೇ ನವಿಲಾಗಿಬಿಡುವುದಪ್ಪ. ನಮಗೆ ಏನು ಬೇಕೋ ಅದೇ ನಾವಾಗಿಬಿಡುವುದು’ ಎನ್ನುತ್ತಾಳೆ ಸಾವಿತ್ರೀ. ಈ ಮಾತುಗಳು, ಹೆಣ್ಣು ತನಗೆ ಏನು ಬೇಕೋ ಅದು ಆಗಬಲ್ಲಳು ಅದನ್ನು ಆತ್ಮಸಾತ್ ಮಾಡಿಕೊಳ್ಳಬಲ್ಲಳು ಎಂಬುದನ್ನು ಧ್ವನಿಸುತ್ತವೆ. ನವಿಲು ಒಂದು ಪ್ರೇರಣೆ ಅಷ್ಟೆ. ನಿಜವಾಗಿ ಜಾಗರವಾಡುವುದು ನಮ್ಮ ಮನಸ್ಸು. ಆ ಮನಸ್ಸಿನೊಳಗೆ ಸೌಂದರ್ಯದ ಅನುಭೂತಿ ಜಾಗೃತವಾಗದಿದ್ದರೆ ಹೊರಗೆ ಎಷ್ಟು ನವಿಲುಗಳು ಬಂದು ಕುಣಿದರೂ, ಲಚ್ಚಿಯ ಹಾಗೆ ಬಿಡುಗಡೆಯ ಅನುಭವವಾಗುವುದಿಲ್ಲ.

ಆದುದರಿಂದಲೇ ಲಚ್ಚಿಯ ಆನಂದಕ್ಕೆ ಹೊರಗಿನ ನವಿಲಿನ ಹಂಗು ಬೇಕಾಗುವುದೇ ಇಲ್ಲ. ಲಚ್ಚಿ, ಸಾವಿತ್ರೀ ಇಬ್ಬರೂ ಬೇರೆ ಬೇರೆಯಲ್ಲ ಅವರಿಬ್ಬರು ಒಂದೇ ಆಗಿದ್ದಾರೆ. ಸಾವಿತ್ರಿಯ ಅಪ್ಪ ಒಮ್ಮೆ ಅವಳನ್ನು ಕರೆದು ‘ಮಗಳೇ ನೀನು ಆನಂದಭಾವಿನಿ’ ಅಗಿದ್ದೀಯೇ ಎನ್ನುತ್ತಾರೆ. ಅವಳು ಅನಂದವನ್ನೇ ಭಾವಿಸುವವಳು. ಅಪ್ಪ ಹೇಳಿದಂದಿನಿಂದ ತಾನು ಅನಂದಮಯಿಯೆಂದೇ ಭಾವಿಸಿರುವುದಾಗಿ ಸಾವಿತ್ರಿ ಹೇಳಿಕೊಳ್ಳುತ್ತಾಳೆ. ಏಕೆಂದರೆ ಅದನ್ನು ‘ಅವನೂ’ ಅನುಮೋದಿಸಿರುತ್ತಾನೆ.

‘ಆನಂದ’ ಎನ್ನುವುದು ಪುರುಷನ ಆಸ್ತಿ. ಆ ಆನಂದಕ್ಕೆ ಅಡ್ಡಿಯನ್ನು ತರುವವಳು ಹೆಣ್ಣು ಆದುದರಿಂದ ಅವಳು ಮಾಯೆ ಎನ್ನುವ ಕಲ್ಪನೆಯನ್ನು ಹರಿಯಬಿಟ್ಟಂತಹ ನಮ್ಮ ಸಂಸ್ಕತಿಯಲ್ಲಿ ಹೆಣ್ಣು ಆನಂದಮಯಿಯಾಗುವುದು ಒಂದು ಮಹತ್ವದ ಸಂಗತಿ. ವಿದ್ವಾಂಸರಾದ ತನ್ನ ಅಪ್ಪನ ಜೊತೆ, ಸೋರ್ ಬಾನ್ ವಿ.ವಿಯಿಂದ ಡಾಕ್ಟರೇಟ್ ಪಡೆದ ವಿದ್ವಾಂಸರೊಬ್ಬರು ಸೌಂದರ್ಯಶಾಸ್ತ್ರದ ಬಗ್ಗೆ ಚರ್ಚಿಸಲು ಬಂದ ಸಂದರ್ಭಕ್ಕೆ ಸಾವಿತ್ರಿ ಸಾಕ್ಷಿಯಾಗುವುದಲ್ಲದೇ ಆ ಗಂಭೀರವಾದ ಚರ್ಚೆಗೆ ಒಂದು ಒಳನೋಟವನ್ನೂ ಹರಿಸಿ ಅಪ್ಪನ ಮೆಚ್ಚುಗೆಯನ್ನು ಗಳಿಸುತ್ತಾಳೆ.

‘ಆನಂದ ಮಿಷನ್’ ಎಂಬ ಜಪಾನಿನ ಒಂದು ತತ್ವಜಿಜ್ಞಾಸೆಯ ಸಂಸ್ಥೆಯಿಂದ, ವಾರ್ಷಿಕ ಉಪನ್ಯಾಸ ಮಾಲೆಯಲ್ಲಿ ಸಾವಿತ್ರಿಯ ಅಪ್ಪನನ್ನು ಅವರ ‘ಎಕ್ಸಪೀರಿಯೆನ್ಸ ಅಂಡ್ ಗ್ರೋಥ್’ ಎಂಬ ಪುಸ್ತಕದ ಕುರಿತಾಗಿ ವ್ಯಾಖ್ಯಾನ ಮಾಡಲು ಕರೆ ಬಂದಾಗ ಅವರೊಡನೆ ಸಾವಿತ್ರೀಯೂ ಹೋಗುತ್ತಾಳೆ. ಅಲ್ಲಿ ಮಹಾಯುದ್ಧ ತಂದೊಡ್ಡಿದ ಅನೇಕ ಕಷ್ಟ ಪರಂಪರೆಗಳಿಗೆ ಸಿಲುಕಿ ಅಪ್ಪನನ್ನೂ ಕಳೆದುಕೊಂಡು, ಭಾರತಕ್ಕೆ ಮರಳಿ ಬರುವ ಕಥೆ ಸಾವಿತ್ರೀಯದು. ಇದೆಲ್ಲವನ್ನೂ ಅವಳು ಪತ್ರದ ಮೂಲಕ ‘ಅವನಿಗೆ’ ಹೇಳಿಕೊಳ್ಳುತ್ತಾ ಹೋಗುವುದೇ ಕಾದಂಬರಿಯ ತಂತ್ರ.

ಹೆಚ್ಚು ಪರಿಚಯವೇ ಇಲ್ಲದ ಪುರುಷನೊಬ್ಬನಿಗೆ ಸಾವಿತ್ರಿ ಬರೆಯುವ ಈ ಪತ್ರಗಳು ಪ್ರೇಮ ಪತ್ರಗಳಂತೆ ಮೇಲುನೋಟಕ್ಕೆ ಕಾಣುವುದಾದರೂ ಇವು ಹೆಣ್ಣು ಗಂಡಿನ ನಡುವಿನ ಪಾರಂಪರಿಕ ಪ್ರೇಮದ ಸ್ವರೂಪವನ್ನು ಭಂಜಿಸಿವೆ. ಸಾವಿತ್ರಿಯ ಪ್ರೇಮ ಅನಿಯಂತ್ರಿತವಾದುದು. ಈ ಪ್ರೇಮ ಪತ್ರದಲ್ಲಿ ಹುಸಿಯಾದ ರಮ್ಯ ಲೋಕವಿಲ್ಲ. ಬದಲಾಗಿ ತತ್ವಜ್ಞಾನ, ಸೌಂದರ್ಯಶಾಸ್ತ್ರ, ಸಾಹಿತ್ಯ, ಭಾಷೆಯ ಸಾಮರ್ಥ್ಯ ಮತ್ತು ನಿರರ್ಥಕತೆ, ಯುದ್ಧ, ಮಾನವೀಯತೆ, ಬದುಕು, ವಾಸ್ತವತೆ, ಕನಸು, ಹತಾಶೆ ಈ ಎಲ್ಲವೂ ಪುಟ್ಟ ಕಾದಂಬರಿಯ ಪ್ರಪಂಚದೊಳಗೆ ಇನ್ನಿಲ್ಲದಂತೆ ಪ್ರತಿಬಿಂಬಿತವಾಗಿವೆ. ಈ ಎಲ್ಲವನ್ನೂ ತಮ್ಮ ಹೊಟ್ಟೆಯೊಳಗಿಟ್ಟುಕೊಂಡು ಓಡಾಡುವ ಪತ್ರಗಳು ಯುದ್ಧದ ಕಾವಿನಿಂದಾಗಿ ಒಮ್ಮೊಮ್ಮೆ ವಿಳಾಸ ತಪ್ಪಿ ಕಾಣೆಯಾಗಿಬಿಡುತ್ತವೆ. ಅನಂತರದ ಪತ್ರಗಳಲ್ಲಿ ಈ ಕುರಿತಾದ ಸಾವಿತ್ರಿಯ ಆತಂಕಗಳು ಬಯಲಾಗುತ್ತವೆ

ಕಾದಂಬರಿಯಲ್ಲಿ ಒಂದು ಆಳವಾದ ಕೊಳದ ಚಿತ್ರ ಬರುತ್ತದೆ. ಆಕಾಶದ ಬಣ್ಣಗಳು ಕೊಳದೊಳಗೆ ಪ್ರತಿಫಲನಗೊಳ್ಳುತ್ತವೆ ನಿಜ, ಆದರೆ ಕೊಳದ ಮೂಲ ಬಣ್ಣ ಮಾತ್ರ ಬೇರೆಯೇ ಅಗಿರುತ್ತದೆ ಎನ್ನುವುದನ್ನು ‘ಅವನಿಗೆ’ ಹೋಲಿಸಿ ಹೇಳುವ /ಬರೆಯುವ ಸಾವಿತ್ರಿಯ ಮಾತುಗಳು ಹೆಣ್ಣೊಬ್ಬಳಿಗೆ ಪುರುಷ ಯಾವಾಗಲೂ ನಿಗೂಢವಾಗಿಯೇ ಇರುತ್ತಾನೆ ಎಂಬುದನ್ನು ಸೂಚಿಸುತ್ತದೆ. ಅದು ಗಂಡಿಗೆ, ಹೆಣ್ಣು ಕೂಡ ನಿಗೂಢ ಎಂಬುದೂ ಅಷ್ಟೇ ನಿಜ.

ಇಲ್ಲಿ ಸಾವಿತ್ರೀ ‘ಅವನ’ ಮೂಲವನ್ನು ಶೋಧಿಸುವ ನೆಪದಲ್ಲಿ ನಿಜವಾಗಿ ತಾನೇ ಆ ಕೊಳದ ಪ್ರತೀಕವಾಗಿ ತನ್ನ ಮೂಲದ ಬಣ್ಣವನ್ನು ಅರಸುತ್ತಾ ಹೋಗುವ ಧೀರೋದ್ಧಾತ್ತ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾಳೆ. ಅಥವಾ ‘ಅವನು’ ತನ್ನೊಳಗೆ ಪ್ರತಿಫಲಿತವಾಗುವುದನ್ನೇ ಸತ್ಯ ಎಂದು ನಂಬುವ ಹೆಣ್ಣಿಗೆ ಕೊಡುವ ಎಚ್ಚರದ ಚಾಟಿಯೇಟು ಕೂಡ ಇದಾಗಿರಬಹುದು.

(ಇದೊಂದು ಅತಿರೇಕದ ಗ್ರಹಿಕೆಯಷ್ಟೆ ಕಾದಂಬರಿಯಲ್ಲಿ ಇದಕ್ಕೆ ಯಾವ ಆಧಾರಗಳೂ ದೊರೆಯುವುದಿಲ್ಲ. ಸಾವಿತ್ರೀಗೆ ಅವನ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯಗಳಿರುವಂತೆ ಅವನ ಬುದ್ಧಿವಂತಿಕೆಯ ಬಗ್ಗೆ ಒಂದು ರೀತಿಯ ಆರಾಧನಾ ಭಾವವೂ ಇರುವುದನ್ನು ಇಲ್ಲಿ ಗಮನಕ್ಕೆ ತಂದುಕೊಳ್ಳಬೇಕು. ಪ್ರೀತಿಸಿದವನ ಬಗ್ಗೆ ಈ ರೀತಿಯ ‘ಮೋಹ’ ಹುಟ್ಟುವುದು ಸಹಜವಾದುದೇ)

ಅವಳು ಅವನ  ಬೌದ್ಧಿಕ ಸಂಗಾತಿ. ಅವನನ್ನು ಬೆಳೆಸುವುದೇ ಅವಳು. ಸಾವಿತ್ರಿ ಹೇಳದಿದ್ದರೆ ಇಲ್ಲಿ ಅವನ ಬೆಳವಣಿಗೆಯೇ ಅರಿವಿಗೆ ಬರುವುದಿಲ್ಲ. ಪುರುಷನಿಗೆ ಸ್ತ್ರೀಯೊಬ್ಬಳು ಅರಿವನ್ನುಂಟು ಮಾಡುತ್ತಾಳೆ ಎಂಬ ಗ್ರಹಿಕೆಯನ್ನು ರೇಗೆ ಯವರು ಮೂಡಿಸುತ್ತಾರೆ. ಇದು ವಾಸ್ತವವಾಗಿ ನಮ್ಮ ಹೆಣ್ಣಿನ ಬಗೆಗಿನ, ನಮ್ಮ ಪಾರಂಪಾರಿಕ ಗ್ರಹಿಕೆಯನ್ನು ಮೀರಿದುದು. ರೇ.ಗೆಯವರು ಎಂತಹ ಆಕರ್ಷಕ ಪಾತ್ರವನ್ನು ಸೃಷ್ಟಿಸಿದ್ದಾರೆಂದರೆ, ಆ ಕಾಲಕ್ಕೆ ಮಾತ್ರವಲ್ಲ ಎಲ್ಲಾ ಕಾಲಕ್ಕೂ ಹೆಣ್ಣಿನ ಅತ್ಯುತ್ತಮ ಮಾದರಿಯನ್ನು ಸಾವಿತ್ರಿಯ ಪಾತ್ರದ ಮೂಲಕ ರೂಪಿಸಿದ್ದಾರೆ.

ಹಾಗೆಯೇ ಹೆಣ್ಣಿನ ದೃಷ್ಟಿಯಲ್ಲಿ ಪುರುಷನ ಅತ್ಯುತ್ತಮ ಕಲ್ಪನೆಯೂ ಇದಾಗಿದೆ. ಹೆಣ್ಣು ಗಂಡಿನ ನಡುವಿನ ಸಂಬಂಧದ ಕುರಿತಾದ ಅಪರೂಪದ ವ್ಯಾಖ್ಯಾನ ಈ ಕಾದಂಬರಿಯಲ್ಲಿದೆ. ಎಲ್ಲಿಯೂ ‘ಸಾವಿತ್ರೀ’ ಸ್ತ್ರೀ ಪುರುಷ ಸಮಾನತೆಯೆಂಬ ಕಲ್ಪನೆ ಮೇಲ್ಪದರದ, ಕೇವಲ ಅಬ್ಬರದ ಘೋಷಣೆ ಆಗುವುದಿಲ್ಲ. ಅದು ಗಂಡು ಹೆಣ್ಣೆಂಬ ದೇಹದೊಳಗೆ ಸುಳಿವ ಅತ್ಮಕ್ಕೆ ಲಿಂಗದ ಹಂಗಿಲ್ಲ ಎಂದು ತೋರಿಸುವ ಧಾರ್ಷ್ಟ್ಯ ಇಲ್ಲಿದೆ. ಹಾಗೆ ತೋರಿಸುವಾಗ ಅದು ಸಾಧಿಸುವ ಸಮತೋಲನ ಅನನ್ಯವಾದುದು.

ಯುದ್ಧ ಮತ್ತು ಪ್ರೀತಿ

ಹಾಗೆ ನೋಡಿದರೆ ಈ ಕಾದಂಬರಿ ಗಂಡು ಹೆಣ್ಣಿನ ಸಂಬಂಧವನ್ನೂ ಮೀರಿ ಒಟ್ಟು ಜೈವಿಕ ಸಂಬಂಧಗಳ ಶೋಧನೆಯಾಗಿದೆ. ಜಪಾನ್ ನಾಶವಾದ ಹಿನ್ನೆಲೆಯಲ್ಲಿ ಅದು ಮತ್ತೆ ಫೀನಿಕ್ಸ್ ನಂತೆ ಬೂದಿಯಿಂದಲೇ ಮರುಹುಟ್ಟು ಪಡೆದು ಆಕಾಶಕ್ಕೆ ಎದ್ದು ನಿಂತ ಸಂದರ್ಭದಲ್ಲಿ ಕೂಡ ಈ ಕೃತಿ ಬಹಳ ಮುಖ್ಯವಾಗುತ್ತದೆ. ಯಾವ ಯುದ್ಧವೂ ಕೂಡ ಜಗತ್ತಿನ ಸೃಷ್ಟಿಶೀಲತೆಯನ್ನು ನಾಶಮಾಡಲು ಸಾಧ್ಯವಿಲ್ಲ, ಅದಕ್ಕೆ ಕಾರಣವಾಗುವ ಪ್ರೇಮದ ಸೆಲೆಯನ್ನು ದಮನಗೊಳಿಸಲು ಸಾಧ್ಯವಿಲ್ಲ ಎಂಬುದಕ್ಕೆ ಇಲ್ಲಿ ಬರುವ ಒಂದು ನಾಟಕವೂ ಸಾಕ್ಷಿಯಾಗಿದೆ.

ಈ ನಾಟಕದ ಹೆಸರೇ “ಹಾಡುವ ಮರ”. ಮರವೊಂದನ್ನು ರಾಜನೊಬ್ಬ ನಾಶಪಡಿಸಲು ಎಷ್ಟು ಪ್ರಯತ್ನಿಸಿದರೂ ಅದು ಬೇರೆ ಬೇರೆ ರೂಪ ಪಡೆದು ಪ್ರತ್ಯಕ್ಷವಾಗುತ್ತದೆ. ಲಚ್ಚಿಯ “ನವಿಲಿನ ನಾಟ್ಯ” ಮತ್ತು “ಹಾಡುವ ಮರ” ಈ ಎರಡೂ ಕಲಾರೂಪಗಳು ಮೇಲಿನ ಸೃಜನಶೀಲತೆ ಮತ್ತು ಜೀವನೋತ್ಸಾಹದ ಆಶಯವನ್ನೇ ಎತ್ತಿ ಹೇಳುತ್ತದೆ. ಜೀವನೋತ್ಸಾಹದಿಂದ ಪುಟಿಯುವ ಸಾವಿತ್ರೀ ಕೂಡ ಸೃಜನಶೀಲತೆಯ ಸಂಕೇತವಾಗಿದ್ದಾಳೆ.

ನಾಟಕವನ್ನು ಸಾವಿತ್ರೀ ಆಡಿಸುವುದು ಜಪಾನಿನಲ್ಲಿ. ವಿದ್ವಾಂಸರಾದ ಅವಳ ತಂದೆಯವರ ಉಪನ್ಯಾಸ ಕಾರ್ಯಕ್ರಮಕ್ಕಾಗಿ, ಅವರನ್ನು ಕರೆಸುವ ಸಂಸ್ಥೆಯ ಹೆಸರು “ಆನಂದ ಮಿಷನ್“. ಅವಳು ‘ಆನಂದಭಾವಿನಿ’ ಈ ‘ಆನಂದ’ದ ಉಲ್ಲೇಖಗಳೆಲ್ಲವೂ ಯುದ್ಧದದ ವಿರುದ್ಧ ಸಾರಿದ ಪ್ರೇಮದ / ಕಲೆಯ ವಿಜಯವೇ ಆಗಿದೆ. ಯುದ್ಧ ಮಾನವ ಸಂಸ್ಕತಿಯನ್ನು ನಾಶಮಾಡಿದರೆ ಪ್ರೇಮ ಅದರ ಉಗಮಕ್ಕೆ ಕಾರಣವಾಗುತ್ತದೆ. ಜಪಾನಿನ ಒಸಾಕ ಆಸ್ಪತ್ರೆಯೊಂದರಲ್ಲಿ ಯುದ್ಧದ ಗಾಯಾಳುಗಳ ಶುಶ್ರೂಷೆಗೆಂದು ದಾದಿಯಾಗಿ ಸಾವಿತ್ರಿ ಸೇರಿಕೊಳ್ಳುತ್ತಾಳೆ.

ಆಗ ಅವಳಿಗೆ ಪರಿಚಿತವಾದ ಮೇಜರ್ ಅಗ್ನಿಮಿತ್ರ ಸೇನ್ ಅ ಯುದ್ಧದಲ್ಲಿ ಮಡಿಯುವ ಕಾಲದಲ್ಲಿಯೇ, ಅವನ ಹೆಂಡತಿ, ಸಾವಿತ್ರೀ ಕೆಲಸಮಾಡುವ ಆಸ್ಪತ್ರೆಯಲ್ಲೇ ಹೆಣ್ಣುಮಗುವೊಂದಕ್ಕೆ ಜನ್ಮ ನೀಡಿ ಅಸು ನೀಗುತ್ತಾಳೆ. ಅದಕ್ಕೆ ಬೀನ ಎಂದು ಹೆಸರಿಟ್ಟು ಆ ಅನಾಥ ಹೆಣ್ಣುಮಗುವಿಗೆ ಸಾವಿತ್ರಿ ತಾಯಿಯಾಗುತ್ತಾಳೆ. ಆನಂತರ ತಂದೆಯನ್ನು ಕಳೆದುಕೊಂಡ ಸಾವಿತ್ರಿ ಆ ಮಗುವನ್ನು ಕರೆದುಕೊಂಡು ಭಾರತಕ್ಕೆ ಮರಳಿ ಬರುತ್ತಾಳೆ. ಎಲ್ಲವೂ ಭಸ್ಮವಾದ ಯುದ್ಧ ಭೂಮಿಯ ಮೇಲೆ ಮನುಷ್ಯನ ಕ್ರೂರ ವಿಧ್ವಂಸಕ ಕೃತ್ಯಗಳಿಗೆ ಎದುರಾಗಿ ಪ್ರೇಮದ ಅವಿನಾಶಿ ಚೈತನ್ಯದ ಪ್ರತೀಕವಾಗಿ ಇದು ಕಂಗೊಳಿಸುತ್ತದೆ.

ಲಚ್ಚಿಯ ನವಿಲಿನ ನಾಟ್ಯದ ಆಶಯದೊಂದಿಗೆ, ತನ್ನ ತಂದೆಯ ನಿಡುಗಾಲದ ಸ್ನೇಹಿತ, ಅವರ ಬರಹಗಳ ಪರೀಕ್ಷಕ, ವಿಮರ್ಶಕ ಎಜ್‍ವರ್ಥ್ ಎಂಬುವವನ ಸ್ಮಾರಕವನ್ನು ಉದ್ಘಾಟಿಸುವುದರೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ. ನವಿಲಿನ ಪಾತ್ರವನ್ನು ಪಿ.ಎಚ್.ಡಿ ಪದವಿಯನ್ನು ಗಳಿಸಿಕೊಂಡು ವಿದೇಶದಿಂದ ಮರಳುತ್ತಿರುವ ‘ಅವನಿಗೇ’ ಸಾವಿತ್ರಿ ಮೀಸಲಾಗಿಡುತ್ತಾಳೆ.

‘ಎಕ್ಸಪೀರಿಯೆನ್ಸ ಅಂಡ್ ಗ್ರೋಥ್’ ಇದು ಸಾವಿತ್ರಿಯ ತಂದೆಯವರು ಪ್ರಕಟಪಡಿಸುವ ಪುಸ್ತಕದ ಹೆಸರು. ಇದರ ಕುರಿತಾದ ವಿಭಿನ್ನ ಚರ್ಚೆಗಳು ಕಾದಂಬರಿಯುದ್ದಕ್ಕೂ ಸಾಗಿಬರುತ್ತವೆ. ತಿರುಪೇಟೆಯಲ್ಲಿ ಪ್ರಾರಂಭವಾದ ಇದು ಮಹಾಯುದ್ಧ ಭೂಮಿಕೆಯಾದ ಜಪಾನಿನಲ್ಲಿ ಮುಂದುವರೆಯುತ್ತದೆ.

ಪರಸ್ಪರ ಕೊಳುಕೊಡುಗೆಗಳ ಮೂಲಕವೇ ವ್ಯಕ್ತಿತ್ವದ ವಿಕಸನ ಸಾಧ್ಯ. ಅದು ನಮ್ಮ ಅಸ್ತಿತ್ವದ ಕೇಂದ್ರವನ್ನು ಸಮೃದ್ಧಗೊಳಿಸುತ್ತದೆ. ಅದರ ಭಾಷೆಯೆಂದರೆ ಪ್ರೇಮವೇ. ಅದು ಬುದ್ಧನ ಭಾಷೆ ಕೂಡ ಹೌದು. ಜಪಾನ್ ನೆಲದ ಮೇಲೆ ನಡೆಯುವ ಘಟನೆಗಳು ಇದಕ್ಕೆ ಸಾರ್ಥಕವಾದ ಹಿನ್ನೆಲೆಯನ್ನು ಒದಗಿಸುತ್ತವೆ. ‘ಆನಂದಭಾವಿನಿ’ ತನ್ನ ಅನಿಯಂತ್ರಿತ ಪ್ರೇಮದ ಮೂಲಕ ‘ಆನಂದ ಮಿಷನ್ ನಿಜವಾದ ಹರಿಕಾರಳಾಗುತ್ತಾಳೆ.

ಇಂದಿರೆಯಿಂದ (ಇಂದಿರಾ, ಇಂದಿರಾಬಾಯಿ), ಹಿಡಿದು, ಮಂಜುಳೆ (ಮೈಮನಗಳ ಸುಳಿಗಳಲ್ಲಿ), ಮಂದಾಕಿನಿ (ಕ್ಷಿತಿಜ) ಯಾಮಿನಿ (ಬಂಡಾಯ), ವೃಂದಾ (ನಿರಿಂದ್ರಿಯ) ಗೌರಿ (ದಿವ್ಯ) ಯವರೆಗೆ ಕನ್ನಡದ ಎಲ್ಲಾ ಅದ್ಭುತ ಸ್ತ್ರೀಯರು ‘ಸಾವಿತ್ರಿ’ಯಲ್ಲಿ ಮೈಪಡೆದಿದ್ದಾರೆ.

ಇದು 1939 (1961)ರಲ್ಲೇ ಪು.ಶಿ. ರೇಗೆಯವರಿಗೆ ಸಾಧ್ಯವಾಯಿತು ಎಂಬುದು ಬಹಳ ಅಚ್ಚರಿಯ ಮಾತು. ಮಹಾರಾಷ್ಟ್ರವನ್ನು ರೂಪಿಸಿದ ಅಂದಿನ ಸಾಮಾಜಿಕ ಸಂದರ್ಭವೂ ಇದಕ್ಕೆ ಕಾರಣವಿರಬೇಕು. ಮಹಾರಾಷ್ಟ್ರದ ಮಣ್ಣಿನ ಗುಣವೇ ಅದು. ಅಲ್ಲಿನ ಹೆಣ್ಣುಗಳಿಗೆ ಇತರರಿಗಿಂತ ಬಹಳ ಮುಂಚಿತವಾಗಿಯೇ ವಿಕ್ಟಿಮ್ ಮೋಡ್ ನ ಪರಿಚಯವಾಗಿ ಅದರಿಂದ ಹೊರಬರಬೇಕೆನ್ನುವ ಎಚ್ಚರ ಮೂಡಲು ಸಾಧ್ಯವಾಗಿದೆ.

ಪಂ.ರಮಾಬಾಯಿ, ರಮಾಬಾಯಿ ರಾನಡೆ, ಸಾವಿತ್ರಿ ಬಾಯಿ, ಆನಂದೀ ಬಾಯಿ, ಕಾರ್ನೀಲಿಯಾ ಸೊರಾಬ್ಜಿ ಮುಂತಾದವರನ್ನು ಪೋಷಿಸಿ ಬೆಳೆಸಿದ ಭೂಮಿ. ಅಂತಹ ಮಹಾರಾಷ್ಟ್ರದ ಮಣ್ಣಿನಿಂದ ‘ಸಾವಿತ್ರಿ’ ಹುಟ್ಟಿಬಂದುದು ಅಚ್ಚರಿಯೇನಲ್ಲ.

ಕಾದಂಬರಿಯ ಆಯ್ದ ಭಾಗ 

ಈ ಎಲ್ಲವೂ ಸಂಭವಿಸಿದ್ದಾರೂ ಎಲ್ಲಿ? ..

ಒಂದು ಪತ್ರದ ಕೇವಲ ಎರಡೇ ಶಬ್ದಗಳು ಅವಳನ್ನು ತೋಯಿಸಿಬಿಟ್ಟವು
ಅವಳಿಗೆ ಏನೂ ಹೊಳೆಯಲಿಲ್ಲ
ಯಾವ ನೂಲು ಹಾಸುಹೊಕ್ಕು ಹೆಣೆಯಿತು ಎಲ್ಲಿ, ಹೇಗೆ ?
ಸ್ವರಗಳನ್ನು ಒಟ್ಟಿಗೇ ಪೋಣಿಸಿದ ಆ ಹಕ್ಕಿಗಳಾವುವು?
ಹಗಲೆಂದರೆ ಅವಳಿಗೆ ಬೆರಗು. ಇರುಳ ತುಂಬಾ ಹೂಗಳ ಮೆರಗು.
ಅವಳು ಹೇಳಿದಳು: ನಿನ್ನಲ್ಲಿಗೆ ಒಮ್ಮೆ ಬರುವೆ- ಹಾಗೆಯೆ ಸುಮ್ಮನೆ.
ಆದರೆ ದಿನಗಳೇ ಕಳೆದು ಹೋದವು. ಅವಳು ಮಾತ್ರ ಬರಲೇ ಇಲ್ಲ.
ಬರುವ ದಾರಿಯ ಮೇಲೆ ಹೂತೋಟದಲ್ಲಿ ಅವಳಿಗೆ ಸಿಕ್ಕವರಾದರೂ ಯಾರು? ಯಾರು ಯಾರಲ್ಲಿಗೆ ಹೋಗುತ್ತಿದ್ದಿರಬಹುದು?
ಮುಂದೆ ಜೊತೆಯಾಗಿ ನಡೆಯುವಾಗ ಅವರ ಕಾಲುಗಳು ಮುಗ್ಗರಿಸಲಿಲ್ಲ. ಕಣ್ಣುಗಳು ಎಲ್ಲಿಯೂ ಒಂದೇ ಎಡೆ ನೆಟ್ಟಿರಲಿಲ್ಲ. ದಾರಿಯೂ ರೂಢಿಯಾಯಿತು. ಸುತ್ತಲ ಮರಗಳು ನೆರಳ ತೋರಣಗಳನ್ನು ಕಟ್ಟಿದವು. ಕೆಳಗೆ ಬಿದ್ದ ಎಲೆಗಳಿಗೆ ಮೊದಲಿನ ನೆನಪೂ ಉಳಿದಿರಲಿಲ್ಲ.
ನದಿಯ ಒಂದು ತೀರದಲ್ಲಿ ಕಳಿತುಕೊಂಡಾಗ; ನೀರಿನೊಳಗೆ ಅವಳು ವಿನಾಕಾರಣ ಕಲ್ಲೆಸೆದು ಭಯಪಡಿಸಲಿಲ್ಲ: ಒಂದು ಕೊಕ್ಕರೆಯು ದೂರದಿಂದ ಹಾರುತ್ತಾ ಬಂದು ಬಹು ಮೆಲ್ಲನೆ ತೀರದಲ್ಲಿನ ಹುಲ್ಲಿನ ಮೇಲೆ ಇಳಿಯಿತು; ಆಗ ಅದರ ಪ್ರತಿಬಿಂಬವು ಸ್ವಲ್ಪಮಾತ್ರವೂ ಚಲಿಸಲಿಲ್ಲ.
ಮೊದಲ ಮಳೆಯ ತುಂತರುಗಳು ಅಚಾನಕ್ಕಾಗಿ ಬೀಳಹತ್ತಿದವು. ಆಗ ತಪ ತಪ ತೋಯಿಸಿಕೊಳ್ಳುತ್ತಾ ಹಾಗೆಯೇ ನಿಂತಿದ್ದಳು.
ದೇವಸ್ಥಾನದ ಆವರಣದೊಳಗೆ ಅವನ ಜೊತೆ ಅಡ್ಡಾಡುತ್ತಾ ಅವಳು ಉತ್ಸವವೊಂದರಲ್ಲಿ ನೃತ್ಯಮಾಡುವಂತೆÀ ಸಹಜವಾಗಿ ಒಂದು ಅವರ್ತನ ಮಾಡಿದಳು. ಆಗ ಕ್ಷಣಮಾತ್ರದಲ್ಲಿ, ಅಲ್ಲಿ ಇಲ್ಲದ ವಾದ್ಯಗಳ ತಾಳಕ್ಕೆ ಸರಿಯಾಗಿ ಕುಣಿದಳು.
ಹಳ್ಳದ ದಂಡೆಯ ಮೇಲೆ ಕುಳಿತ ಅವಳು ಹೂವನ್ನು ಕಟ್ಟುವಾಗ ಬಾಡಿದ ಹೂಗಳಿಗೂ ಎಡೆಮಾಡಿಕೊಟ್ಟಳು.
ಈ ಎಲ್ಲವೂ ಸಂಭವಿಸಿದ್ದಾರೂ ಎಲ್ಲಿ? ..

4 Comments

 1. prathibha nandakumar
  May 16, 2017
 2. Anonymous
  May 15, 2017
  • Girijashastry
   May 15, 2017

Add Comment

Leave a Reply