Quantcast

ಹಿರೇಗುತ್ತಿಗೆ ಗರಿ..

ಪತ್ರಿಕೆ ಹಂಚುತ್ತಿದ್ದ ಹುಡುಗ ಹಣುಮಂತರಾಯ ಪ್ರಶಸ್ತಿ ಪಡೆಯುವಷ್ಟು ಬೆಳೆದದ್ದು!

ರಾಜೀವ ನಾರಾಯಣ ನಾಯಕ

ಕಾರವಾರದಿಂದ ಪ್ರಕಟವಾಗುವ “ಕರಾವಳಿ ಮುಂಜಾವು” ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಗಂಗಾಧರ ಹಿರೇಗುತ್ತಿಯವರಿಗೆ ಮೊಹರೆ ಹಣುಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಘೋಷಿಸಲಾಗಿದೆ.  ಪತ್ರಿಕಾ ಸಂಸ್ಥೆ ಕಟ್ಟಿ ಬೆಳೆಸಿದ ಸಾಧನೆಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

ಸುಮಾರು ಇಪ್ಪತ್ತೆರಡು ವರ್ಷದ ಹಿಂದೆ ಶುರುವಾದ “ಕರಾವಳಿ ಮುಂಜಾವು” ಇಂದು ಉತ್ತರ ಕನ್ನಡ ಮತ್ತು ಗೋವಾ ರಾಜ್ಯದ ಬಹುಪಾಲು ಕನ್ನಡಿಗರ ಪ್ರತಿನಿತ್ಯದ ಒಡನಾಡಿಯಾಗಿ ಬೆಳೆದಿದೆ.  ಹತ್ತು ಪುಟಗಳಲ್ಲಿ ಜಿಲ್ಲೆ, ರಾಜ್ಯ, ಅಂತಾರಾಷ್ಟ್ರೀಯ ಸುದ್ದಿಗಳಿದ್ದರೂ ತಾಲೂಕು ಮತ್ತು ಗ್ರಾಮಾಂತರ ಸುದ್ದಿಗಳಿಗೇ ಆದ್ಯತೆ ನೀಡುವುದರ ಜೊತೆಗೆ “ಮುಂಜಾವು” ಆರೋಗ್ಯ, ಸಾಹಿತ್ಯಿಕ ಮತ್ತು ಚಿಂತನ ಲೇಖನಗಳಿಂದಲೂ ಜನಪ್ರಿಯ ದಿನಪತ್ರಿಕೆಯಾಗಿ ರೂಪಗೊಂಡಿರುವು ನಿಜ. ಈ ದಿನಪತ್ರಿಕೆಗೆ ಈಗಾಗಲೇ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಅತ್ಯುತ್ತಮ ಗ್ರಾಮೀಣ ದಿನಪತ್ರಿಕೆ ಪ್ರಶಸ್ತಿ ಕೂಡ ದಕ್ಕಿದೆ.

ಒಂದು ಪತ್ರಿಕೆಯ ದಾರಿಯಲ್ಲಿ ಇಪ್ಪತ್ತೆರಡು ವರ್ಷಗಳು ಅಷ್ಟೇನು ದೀರ್ಘಾವಧಿಯಲ್ಲವಾದರೂ ಈ ಕಿರು ಅವಧಿಯಲ್ಲಿಯೇ ಅದು ಏರಿದ ಎತ್ತರವು ಪ್ರಶಂಸನಾರ್ಹವಾಗಿದೆ. ಈ ಪತ್ರಿಕೆಯನ್ನು ಯಶಸ್ವಿಯಾಗಿ ಮುನ್ನಡೆಸಿದ ಮತ್ತು ಪತ್ರಿಕೆಯೊಂದಿಗೇ ತಾನೂ ಬೆಳೆದು ಮೊಹರೆ ಹಣುಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಗಂಗಾಧರ ಹಿರೇಗುತ್ತಿಯವರಿಗೆ ಅಭಿನಂದನೆಗಳು.

ಮುಂಜಾವು ಪತ್ರಿಕೆ ಪ್ರಾರಂಭಗೊಂಡಿದ್ದು ಪಂಚಾಯತಿ ರಾಜ್ ವ್ಯವಸ್ಥೆಯಿಂದಾಗಿ ಗ್ರಾಮೀಣ ಮಟ್ಟದಲ್ಲೂ ರಾಜಕೀಯ ಮತ್ತು ಸಮಾಜಿಕ ಪ್ರಜ್ಞೆ ಬಲಗೊಳ್ಳುತ್ತಿದ್ದ ಕಾಲದಲ್ಲಿ. ರಾಜ್ಯಮಟ್ಟದ ಪತ್ರಿಕೆಗಳು ರಾಜಧಾನಿ ಮತ್ತು ನಗರ ಕೇಂದ್ರಿತ ಸ್ಥಳಗಳಿಗೆ ಅಗ್ರಗಣ್ಯ ಸ್ಥಾನ ನೀಡಿ ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ಗ್ರಾಮೀಣಮಟ್ಟದ ಸಾಮಾನ್ಯ ಜನರ ಅಭಿವ್ಯಕ್ತಿಗೆ ಸಾಕಷ್ಟು ಅವಕಾಶಗಳಿರಲಿಲ್ಲ. ಅಂಥ ಸಂದರ್ಭದಲ್ಲಿ ಹುಟ್ಟಿದ ಈ ಪತ್ರಿಕೆಯು ಜನರ ಮಿಡಿತಗಳ ನಾಡಿಹಿಡಿಯುವ ಅಲಕ್ಷ್ಯಕ್ಕೊಳಗಾದವರ ಧ್ವನಿಯಾಗುವ ಕಾರ್ಯವಹಿಸಿತು.

ಹಿರೇಗುತ್ತಿಯವರೇನು ಯಾವುದೋ ಆದರ್ಶದ ಬೆನ್ನುಹತ್ತಿ ಪತ್ರಿಕೆ ಪ್ರಾರಂಭಿಸಲಿಲ್ಲ. ಪತ್ರಿಕೆ ಅವರಿಗೆ ಅವರ ಅಸ್ತಿತ್ವದ ಒಂದು ಹಾದಿಯಾಗಿತ್ತು ಮತ್ತು ಹೋರಾಟವಾಗಿತ್ತು. ಬಿಎ ಮಾಡಿಕೊಂಡು ಒಂದು ಸ್ಥಿರ ನೆಲೆಗಾಗಿ ಹೆಣಗಾಡುತ್ತಿದ್ದ ಅವರು ಅಷ್ಟೇನು ಕನ್ನಡ ವಾತಾವರಣವಿರದ ಕಾರವಾರದಲ್ಲಿ ಚಿಕ್ಕ ಪತ್ರಿಕೆಯೊಂದನ್ನು ಹಂಚುವ ಮೂಲಕ ಪತ್ರಿಕಾರಂಗಕ್ಕೆ ಕಾಲಿರಿಸಿದರು. ವಡ್ದರ್ಸೆ ರಘುರಾಮ ಶೆಟ್ಟರು ಪ್ರಾರಂಭಿಸಿದ ಮುಂಗಾರು ಪತ್ರಿಕೆಗೆ ವರದಿಗಾರರಾಗಿ ಸೇರಿದ್ದು ಅವರು ಪತ್ರಕರ್ತರಾಗುವ ದಿಶೆಯನ್ನು ಸ್ಪಷ್ಟಗೊಳಿಸಿತು ಅಥವಾ ಅವರೊಳಗೆ ಸುಪ್ತವಾಗಿರುವ ಪತ್ರಕರ್ತನನ್ನು ಜಾಗ್ರತಗೊಳಿಸಿತು ಎನ್ನಬಹುದು.

ನಂತರ ಹಿರೇಗುತ್ತಿಯವರು ಹಲವರ ಆರ್ಥಿಕ ಸಹಕಾರದೊಂದಿಗೆ “ಕರಾವಳಿ ಮುಂಜಾವು” ಎನ್ನುವ ಟ್ಯಾಬ್ಲಾಯಿಡ್ ರೂಪದ ಸ್ವಂತದ ದಿನಪತ್ರಿಕೆಯನ್ನು ಪ್ರಾರಂಭಿಸಿದರು.  ಸತತ ಪರಿಶ್ರಮ ಮತ್ತು ಅರ್ಪಣಾಭಾವದಿಂದ ತೊಡಗಿಸಿಕೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವವನ್ನೇ ಪತ್ರಿಕೆಗೆ ಧಾರೆಯೆರೆದರು. ಪತ್ರಿಕೆ ಪ್ರಾರಂಭದಲ್ಲಿ ಅಂಬೆಗಾಲಿಡುತ್ತಾ ನಡೆದರೂ ನಿಧಾನಗತಿಯಲ್ಲಿ ತನ್ನ ಹೆಜ್ಜೆಯನ್ನು ಸ್ಥಿರವಾಗಿಸಿಕೊಳ್ಳತೊಡಗಿತು. ಕಾಲಾಂತರದಲ್ಲಿ ಹಲವಾರು ಜನಮುಖಿ ವರದಿಗಳನ್ನೂ, ಭಾವಪೂರ್ಣ ಮತ್ತು ವೈಚಾರಿಕ ಅಂಕಣಗಳನ್ನೂ ಪ್ರಕಟಿಸುತ್ತಾ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿತು.

೨೦೦೪ ರಲ್ಲಿ ಟ್ಯಾಬ್ಲಾಯಿಡ್ ಪತ್ರಿಕೆ ಪೂರ್ಣಪ್ರಮಾಣದ ಆಕಾರವನ್ನು ಪಡೆದ ಮೇಲೆ ಇನ್ನೊಂದು ಮಜಲನ್ನು ತಲುಪಿತು. ಮಾಜಿ ಸಂಸದ ಬಿ ವಿ ನಾಯಕರು ತಮ್ಮ ಅಂಕಣಗಳಲ್ಲಿ ಹರಿಸಿದ ವಿಚಾರಧಾರೆ, ಡಾ. ಬ್ರಹ್ಮಾನಂದ ನಾಯಕರ ವೈದ್ಯಕೀಯ ಲೇಖನಗಳು, ಡಾ ಎಚ್ ಎಸ್ ಅನುಪಮಾ ಅವರ ಮಾನವೀಯ ಅಂತ:ಕರಣ ಸ್ಪುರಿಸುವ ಬರಹಗಳು  ಪತ್ರಿಕೆಯನ್ನು ಇನ್ನೊಂದು ಎತ್ತರಕ್ಕೆ ಒಯ್ದವು. ಗ್ರಾಮಾಂತರ ಪರಿಸರದ ಸುದ್ದಿಗಳನ್ನೂ ಅಚ್ಚುಕಟ್ಟಾಗಿ ನೀಡುವ ಮೂಲಕ ಮತ್ತು  ಎಲ್ಲರನ್ನೂ ಒಳಗೊಳ್ಳುವ ವರದಿಗಾರಿಕೆಯಿಂದ ಸಾಮಾನ್ಯ  ಪ್ರಜೆಯೂ ತನ್ನ ಅಸ್ಮಿತೆಯನ್ನು ಕಂಡುಕೊಳ್ಳುವಂತಾಯಿತು. ನೂರಾರು ಹೆರಿಗೆ ಮಾಡಿಸುವ ಹಾಲಕ್ಕಿ ಹೆಂಗಸು, ಉತ್ತಮ ಫಸಲು ಬೆಳೆಯುವ ರೈತ, ಮಣ್ಣಿನ ಜೇನುಗೂಡು ತಯಾರಿಸುವ ಕುಂಬಾರ-ಇಂಥ ಎಲೆ ಮರೆಯ ಪ್ರತಿಭೆಗಳನ್ನು ವರದಿಯಾಗಿಸುವ ಮೂಲಕ ಜನಪದದ ಭಾಗವಾಗತೊಡಗಿತು. ಅಪರೂಪದ ಪಕ್ಷಿ, ಚಿಟ್ಟೆ, ಮೀನು, ಸಸ್ಯ ಚಿತ್ರಲೇಖನವಾದವು.

ಪತ್ರಿಕೆ ನೀಡಿದ ಪ್ರೋತ್ಸಾಹದಿಂದ ಬರಹಗಾರರ ಹೊಸ ತಳಿಯೇ ಹುಟ್ಟಿಕೊಂಡಿತು; ವಿಶೇಷವಾಗಿ ಮಹಿಳೆಯರು ಪತ್ರಿಕೆಯನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮ ಮಾಡಿಕೊಂಡರು. ಇದೆಲ್ಲದಕ್ಕೂ ಗಂಗಾಧರ ಹಿರೇಗುತ್ತಿಯವರ ಪ್ರೋತ್ಸಾಹವೇ ಕಾರಣ. ಒಬ್ಬ ಸಮರ್ಥ ಸಂಪಾದಕನಾಗಿ ಕರಾವಳಿ ಮುಂಜಾವು ದೈನಿಕವನ್ನು ಒಂದು ಅಪರೂಪದ, ಜನಪ್ರಿಯ ಪತ್ರಿಕೆಯನ್ನಾಗಿ ರೂಪಿಸಿದರು.

ಈ ನಡುವೆ ಪತ್ರಿಕಾರಂಗದ ಅನುಭವ ಮತ್ತು ಅಪಾರ ಓದುವ ಹವ್ಯಾಸದಿಂದ ಗಂಗಾಧರ ಹಿರೇಗುತ್ತಿಯವರ ಸಂಪಾದಕೀಯ ಬರಹಗಳು ಅದ್ಭುತ ಹೊಳಪನ್ನು ಪಡೆಯತೊಡಗಿದ್ದವು. ಯಾವುದೇ ವಸ್ತು ವಿಷಯವನ್ನು ಅದರ ಎಲ್ಲ ಮಗ್ಗುಲಗಳಲ್ಲಿ ವಿಶ್ಲೇಷಿಸುವ, ನಿರುದ್ವಿಗ್ನವಾಗಿ ನಿರೂಪಿಸುವ ಶೈಲಿ ಅವರಿಗೆ ಒಲಿದಿದೆ. ದಿನೇದಿನೇ ಅವರ “ನನ್ನ ಪುಟ” ಅಂಕಣವು ಜನಪ್ರಿಯತೆಯನ್ನೂ ಸಾರಸ್ವತ ಲೋಕದಲ್ಲಿ ಗೌರವವನ್ನೂ ಹೆಚ್ಚಿಸಿದೆ. ಎಂಥದೇ ಸಂದಿಗ್ಧ ಸನ್ನಿವೇಶವನ್ನು ಶಾಂತವಾಗಿ ಗ್ರಹಿಸುವ ಮತ್ತು ವಾಸ್ತವ ಅಂಶಗಳನ್ನು ಒಂದು ಅಂತರದಲ್ಲಿ ನಿರುಕಿಸುವ ಶೈಲಿ ಅವರ ಬರವಣಿಗೆಯನ್ನು ವಿಶಿಷ್ಟವಾಗಿಸಿದೆ.

ನಾಗೇಶ ಹೆಗಡೆಯವರಿಗೆ ಟಿಎಸ್ಸಾರ್ ಪ್ರಶಸ್ತಿ ಮತ್ತು ಗಂಗಾಧರ ಹಿರೇಗುತ್ತಿಯವರಿಗೆ ಮೊಹರೆ ಹಣುಮಂತರಾಯ ಪ್ರಶಸ್ತಿ ಪಡೆದಿರುವುದು ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆ ಉಂಟುಮಾಡಿದೆ. ಇಬ್ಬರಿಗೂ ಹೃದಯಪೂರ್ವಕ ಅಭಿನಂದನೆಗಳು!

Add Comment

Leave a Reply