Quantcast

ಹೌದು, ಮನಸು ತುಂಬಿತು…

Thank you ಶಿವಮೊಗ್ಗ…

ಸಂಜ್ಯೋತಿ ವಿ.ಕೆ.

“ಅನಲ” ಮೊದಲ ಪ್ರದರ್ಶನವನ್ನು ಯಶಸ್ವಿಗೊಳಿಸಿದ್ದಕ್ಕೆ…

ಮೇ 14ರ ಭಾನುವಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನನ್ನಕಥನ ಕಿರುಚಿತ್ರ ‘ಅನಲ’ದ ಮೊದಲ ಸಾರ್ವಜನಿಕ ಪ್ರದರ್ಶನ ನಡೆಯಿತು.

ಪ್ರದರ್ಶನದ ಸಮಯ ಹತ್ತಿರವಾಗುತ್ತಿತ್ತು, ಅತಿಥಿಗಳು ಬಂದಾಯ್ತು,

ನೆಚ್ಚಿನ ಕವಿ, ಲೇಖಕಿ ಸವಿತ ನಾಗಭೂಷಣ ಯಾವುದೇ ಔಪಚಾರಿಕತೆಯಿಲ್ಲದೆ ತಮ್ಮ ಆಪ್ತ  ಮಾತುಗಳ ಮೂಲಕವೇ ಪ್ರದರ್ಶನದ ಉದ್ಘಾಟನೆ ಮಾಡಿದರು. ತಮ್ಮ ಹಿಂದಿನ ತಲೆಮಾರು, ತಮ್ಮತಲೆಮಾರು ಮತ್ತು ಮುಂದಿನ ತಲೆಮಾರಿನ ಹೆಣ್ಣು ಮಕ್ಕಳು ತಮ್ಮ ಅಭಿವ್ಯಕ್ತಿಗೆ ಹುಡುಕಿಕೊಳ್ಳುತ್ತಿರುವ ನೆಲೆಗಳು ಹಾಗೂ ಅವರು ಆಯ್ದುಕೊಳ್ಳುತ್ತಿರುವ ಮಾಧ್ಯಮಗಳು, ಅವುಗಳಲ್ಲಿ ಹೆಣ್ಣುಮಕ್ಕಳು ಎದುರಿಸುವ ಸವಾಲು –ಮಿತಿಗಳ ಬಗೆಗೆ ಮಾತನಾಡಿದರು.

ತಮ್ಮ ಸ್ವಾನುಭವಗಳನ್ನು ಹಂಚಿಕೊಳ್ಳುತ್ತಲೇ ಹೆಣ್ಣಿನಾಳದ ಮುಕ್ತತೆ, ಸ್ವಾತಂತ್ರ್ಯದ ತುಡಿತಗಳನ್ನು ಸರಳವಾಗಿ ತೆರೆದಿಟ್ಟರು. ನನ್ನ ಮುಂದಿನ ತಲೆಮಾರಿನ ಹೆಣ್ಣುಮಕ್ಕಳು ಹೇಗಿರಬೇಕೆಂದು ಕನಸಿದ್ದೆನೋ ಅದನ್ನು ಇಂದಿಗೂ ಹೆಚ್ಚೂಕಡಿಮೆ ಪುರುಷರ ಕ್ಷೇತ್ರ ಅನಿಸಿಕೊಂಡಿರುವ ಸಿನಿಮಾ ನಿರ್ಮಾಣದಂತಹ ಕ್ಷೇತ್ರದಲ್ಲಿ ತಮ್ಮ ಅಭಿವ್ಯಕ್ತಿ ಕಂಡುಕೊಳ್ಳುತ್ತಿರುವ ಇಂಥವರ ಕೆಲಸಗಳಲ್ಲಿ ಕಾಣುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಉತ್ತಮ ಧ್ವನಿ ವ್ಯವಸ್ಥೆ ಹಾಗೂ ಪ್ರೊಜೆಕ್ಷನ್ ವ್ಯವಸ್ಥೆ ಹೊಂದಿದ್ದ ಕುವೆಂಪು ರಂಗಮಂದಿರದಲ್ಲಿ 30 ನಿಮಿಷದ ಸಿನಿಮಾ ಪ್ರದರ್ಶನ ಅಚ್ಚುಕಟ್ಟಾಗಿ ಆಯ್ತು. ಪ್ರದರ್ಶನದ ನಂತರ ಪ್ರೊ. ರಾಜೇಂದ್ರ ಚೆನ್ನಿ, ಅಕ್ಷತಾ ಹುಂಚದಕಟ್ಟೆ, ಡಾ. ಸಿರಾಜ್ ಅಹಮದ್ ಹಾಗೂ ಡಾ. ಸಂಧ್ಯಾ ಕಾವೇರಿಯವರು ತಮ್ಮ ಸ್ಪಂದನೆ ನೀಡಿದರು.

“ದೈನಂದಿಕತೆಯ ಅತಿ ಸಾಮಾನ್ಯವೆನ್ನಿಸುವ ಬದುಕಿನಲ್ಲಿ ಮಹಿಳೆ ಪ್ರತಿದಿನವೂ ಹೇಗೆ ಸಮಾಧಿಗೊಳ್ಳುತ್ತಾಳೆ ಎಂಬುದನ್ನು‘ಅನಲ’ ಕಿರುಚಿತ್ರ ಪ್ರತಿಮೆಗಳ ಮೂಲಕ ಸಶಕ್ತವಾಗಿ ಕಟ್ಟಿಕೊಟ್ಟಿದೆ. ವೈದೇಹಿ, ಸವಿತಾ ನಾಗಭೂಷಣರ ಕಾವ್ಯದ ರೀತಿ, ಮೆಲುದನಿಯಲ್ಲಿ ಸಂಕಟವನ್ನು ಹೇಳಿಕೊಳ್ಳುವ ಅಭಿವ್ಯಕ್ತಿ ಈ ಕಿರುಚಿತ್ರಕ್ಕೆ ದಕ್ಕಿದೆ. ಯಾವ ಗಲಾಟೆಯೂ ಇಲ್ಲದೆ, ಘೋಷಣೆಯನ್ನೂ ಮಾಡದೆ ನೋವು ಮತ್ತು ಅಸ್ವಾತಂತ್ರ್ಯಎಂದರೆ ಹೀಗಿರುತ್ತದೆ ಎಂದು ಹೇಳಿಬಿಡುತ್ತದೆ”ಎಂದು ಚಿಂತಕ ಪ್ರೊ. ರಾಜೇಂದ್ರಚೆನ್ನಿ ಮೆಚ್ಚುಗೆ ವ್ಯಕ್ತಪಡಿಸಿದರು.

“ಹೆಣ್ಣಿಗೆ ನಿಜ ಬದುಕಿನಲ್ಲಿ ಸಾಧ್ಯವಾಗದ ಕನಸುಗಳನ್ನು ರೂಪಕದ ಜಗತ್ತಿನಲ್ಲೂ ಆಗಿಸಿಕೊಳ್ಳುವುದು ಕೂಡ ತುಂಬಾ ದುಬಾರಿ, ಆ ಪ್ರಯತ್ನವೇ ಗಂಡನಲ್ಲಿ ಎಂತಹ ಅಭದ್ರತೆಯನ್ನು ಹುಟ್ಟುಹಾಕುತ್ತದೆ ಎಂಬುದನ್ನು ‘ಅನಲ’ ಹೇಳುವ ಪ್ರಯತ್ನ ಮಾಡಿದೆ. ‘ಅನಲ’ ಇನ್ನೂ ತೀವ್ರವಾಗಿ ತನ್ನ ಪ್ರತಿಕ್ರಿಯೆ ದಾಖಲಿಸಬೇಕಿತ್ತು ಅಂತ ನನಗನಿಸುತ್ತೆ” ಎಂದು ಗೆಳತಿ, ಕವಿ ಅಕ್ಷತಾ ಹುಂಚದಕಟ್ಟೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಚಿಂತಕ ಡಾ. ಸಿರಾಜ್ ಅಹಮದ್, “ಸಾಮಾನ್ಯವಾಗಿ ಯಾವುದೇ ಒಂದು ಚಿತ್ರದ ಕಥೆ ಎರಡು ವಿರುದ್ಧ ದಿಕ್ಕಿನ ಬೈನರಿಯನ್ನ ಸೃಷ್ಟಿಸಿಕೊಂಡಿರುತ್ತೆ. ಬಹಳಷ್ಟು ಸಾರಿ ಅವುಗಳಲ್ಲಿ ಒಂದರ ಪರವಾಗಿ ಮತ್ತೊಂದರ ವಿರುದ್ಧವಾಗಿ ಚಿತ್ರದ ದನಿ ಇರುತ್ತೆ. ಆದರೆಒಂದು ಒಳ್ಳೆಯ ಕಲಾಕೃತಿ ಯಾವುದೇ ಒಂದು ಪಾತ್ರವನ್ನು ಮಾತ್ರ ಬೆಳೆಸದೇ ಎರಡೂ ಮನಸ್ಸಿನಲ್ಲಾಗುವ ತುಮುಲಗಳನ್ನು ಸಮರ್ಥವಾಗಿ ಹಿಡಿದಿಡುವ ಪ್ರಯತ್ನ ಮಾಡುತ್ತೆ. ಅದು ಈ ಚಿತ್ರದಲ್ಲಿ ಬಹಳ ಪರಿಣಾಮಕಾರಿಯಾಗಿ ಆಗಿದೆ.” ಎಂದು ವಿಶ್ಲೇಷಿಸಿದರು.

‘ಗಂಡು ಹೆಣ್ಣುಗಳ/ ಗಂಡ ಹೆಂಡಿರ ನಡುವಿನ ಸಮಾನತೆ ಸಾಧಿಸಲು ರೋಲ್‍ ರಿಡಿಜಿಟಿಯನ್ನು ಮೀರಿ ರೋಲ್ ಫ್ಲೂಯಿಡಿಟಿಯನ್ನು ರೂಢಿಸಿಕೊಳ್ಳುವ ಅಗತ್ಯತೆಯನ್ನು ತಮ್ಮ ವೃತ್ತಿಯ ಅನುಭವಗಳೊಡನೆ ವಿವರಿಸಿತ್ತಾ ‘ಅನಲ’ ಚಿತ್ರ ರೋಲ್‍ ರಿಜಿಡಿಟಿ ಹುಟ್ಟು ಹಾಕುವ ತಲ್ಲಣಗಳನ್ನು ಸಶಕ್ತವಾಗಿ ಕಟ್ಟಿಕೊಡುತ್ತಾ ನಮ್ಮನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ’ ಎಂದು ಮನಶಾಸ್ತ್ರಜ್ಞೆ ಡಾ. ಸಂಧ್ಯಾ ಕಾವೇರಿ ಹೇಳಿದರು.

ನಂತರ ಪ್ರೇಕ್ಷಕರ ಪ್ರತಿಸ್ಪಂದನೆ, ನಿರ್ದೇಶಕಿಯೊಡನೆ ಸಂವಾದ ನಡೆಯಿತು. “ಪ್ರತಿಯೊಂದು ದಾಂಪತ್ಯವೂ ಯೂನಿಕ್, ನೀವು ಹೀಗೆ ಜನರಲೈಸ್ ಮಾಡಬಹುದೇ?’ ‘ಗಂಡನ ವರ್ತನೆಗೆ ಆಕೆ ಇಷ್ಟೆಲ್ಲಾ ಪ್ಯಾನಿಕ್‍ ಆಗಬೇಕಾಗಿಲ್ಲ’ ಎಂಬ ಪ್ರತಿಭಟನೆಯ ದನಿಯಿಂದ ಹಿಡಿದು, ‘ಸಂಬಂಧಗಳೆಂಬ ನವಿರು ಸಂಕೋಲೆಯ ಪ್ರತಿಮಾತ್ಮಕಅಭಿವ್ಯಕ್ತಿ, ಎಂದೂ ಸ್ಫೋಟಗೊಳ್ಳಲಾಗದೇ ಚಡಪಡಿಸುವ ನೀರೊಳಗಣ ಕಿಚ್ಚಿನ ಪ್ರತಿಮೆಗಳವರೆಗೆ ಹಲವು ವಿಷಯಗಳು ಚರ್ಚಿತವಾದವು.

ಹಿಂದಿನ ಸಾಲಿನಲ್ಲಿ ಕುಳಿತು ಚಿತ್ರ ನೋಡಿ, ಮುಂದೆ ಬಂದು, ಫೋಕಸ್ ಸರಿಪಡಿಸಿಕೊಂಡು ನಾಲ್ಕು ಫೋಟೋ ತೆಗೆದು, ‘ಅಭಿಪ್ರಾಯ ಹೇಳಿ ಸರ್’ ಎಂದಾಗ ನಗುತ್ತಾ ಟೋಪಿ ಸರಿಪಡಿಸಿಕೊಂಡು ಮೈಕ್ ಮುಟ್ಟದೆಯೇ “ಹೇ ಚೆನ್ನಾಗಿದೆ, ಇಷ್ಟ ಆಯ್ತು..”ಅಂತ ಕುಳಿತಲ್ಲಿಂದಲೇ ಕೈ ಬೀಸಿದ ಕಡಿದಾಳು ಶಾಮಣ್ಣ ಚಿತ್ರ ಆಪ್ತವಾಗಿ ಮನಸಲ್ಲಿ ಅಚ್ಚೊತ್ತಿದೆ.

30 ನಿಮಿಷದ ಕಿರುಚಿತ್ರವೊಂದರ ಮೇಲೆ 100 ನಿಮಿಷಕ್ಕೂ ಮಿಕ್ಕು ಸಂವಾದ ನಡೆಯುವುದು, ‘ಮಾತಾಡೋದು ಇನ್ನೂ ಇದೆ, ಸಮಯ ಇಲ್ಲವೇ’ ಅನ್ನಿಸುವುದು.. ‘ನಮ್ಮ ಶ್ರಮ ವ್ಯರ್ಥವಲ್ಲ, ಅರ್ಥಪೂರ್ಣ’ ಎಂಬ ಸಾರ್ಥಕ ಭಾವ ತುಂಬಿತು.

ಸಿನಿಮಾ ಪ್ರೀತಿಯಿಂದ, ಕಲೆಯ ಒಲವಿಗೆ, ಕಿರಿಯರ ಪ್ರಯತ್ನಕ್ಕೆ ಪ್ರೋತ್ಸಾಹಿಸುವ ಸಲುವಾಗಿ, ಕೆಲವರು ಪರಿಚಯವೇ ಇಲ್ಲದಿದ್ದರೂ ನಮ್ಮ ಶ್ರಮವನ್ನು ಮೆಚ್ಚಿ, ಹೀಗೆ ಹತ್ತು ಹಲವು ಕಾರಣಗಳಿಗಾಗಿ ನಮ್ಮ ಪ್ರಯತ್ನಕ್ಕೆ ಕೈಜೋಡಿಸಿದ, ಶ್ರಮಕ್ಕೆ ಹೆಗಲಾದ, ಸಹಾಯ ಹಸ್ತ ಚಾಚಿದ, ಊಟ ಮಾಡಿಸಿದ, ಟೀ ಕುಡಿಸಿದ, ಒಳ್ಳೆ ಮಾತಾಡಿ ಹುರಿದುಂಬಿಸಿದ, ಬೆನ್ನುತಟ್ಟಿ ಪ್ರೋತ್ಸಾಹಿಸಿದ ಎಲ್ಲ ಹಿರಿ-ಕಿರಿಯ ಗೆಳೆಯರಿಗೂ ಮನತುಂಬಿ ಧನ್ಯವಾದಗಳು..

ಹೌದು, ಮನಸು ತುಂಬಿತು…

 

One Response

  1. sangeetha raviraj
    May 17, 2017

Add Comment

Leave a Reply