Quantcast

ಇಂದು ಸಂಜೆ ಸಂಸ ರಂಗಮಂದಿರದಲ್ಲಿ ತಪ್ಪಿಸಿಕೊಳ್ಳಬಾರದ ನಾಟಕ ’ವಾಲಿ ವಧೆ’

ಸಂಧ್ಯಾರಾಣಿ 

 

“ಸ್ನೇಹಿತ ಗಣೇಶ್ ಇದೇ ತಂಡಕ್ಕಾಗಿ ‘ವಾಲಿವಧೆ’ ನಾಟಕ ಮಾಡಿಸಿದ್ದಾರೆ… ನಿಮ್ಮ 2 ಘಂಟೆ ಸಮಯ can mean a lot to them!” – ಹೀಗೆಂದು ಸ್ನೇಹಿತ ವೆಂಕಟೇಶ ಪ್ರಸಾದ್ ಫೇಸ್ ಬುಕ್ ನಲ್ಲಿ ನಾಟಕದ ಬಗ್ಗೆ ಬರೆದುಕೊಂಡಿದ್ದರು. ಅದನ್ನು ಓದಿ ಆ ನಾಟಕ ನೋಡಲು ಹೋದೆ.

ನಾಟಕ ಪ್ರಾರಂಭವಾದ ಹತ್ತು ನಿಮಿಷಗಳಲ್ಲಿ ಈ ನಾಟಕಕ್ಕೆ ಈ ಯಾವುದೇ ಪರಿಚಯ, ಶಿಫಾರಸ್ಸು, ಗ್ರೇಸ್ ಮಾರ್ಕುಗಳ ಅಗತ್ಯವೇ ಇಲ್ಲ ಎಂದು ಮನನವಾಗಿ ಹೋಯ್ತು.

ಶೇಷಗಿರಿ ಎಂಬ ಹಾವೇರಿ ಸಮೀಪದ ಪುಟ್ಟ ಹಳ್ಳಿ., ಹೆಚ್ಚು ಕಡಿಮೆ ಕುಗ್ರಾಮ… ಅಲ್ಲಿ ನಮ್ಮ ಶ್ರೀಪಾದ್ ಭಟ್ ಶಾಲಾ ಮಾಸ್ತರಾಗಿ ಕೆಲಸ ಮಾಡುತ್ತಿರುತ್ತಾರೆ..

ಅವರು ವರ್ಷಾನುಗಟ್ಟಲೆ ರಂಗಭೂಮಿಯಲ್ಲಿ ಕೆಲಸ ಮಾಡಿದವರು.. ನಾಟಕ ಮಾಡದೆ, ಮಾಡಿಸದೆ ಅವರ ದಿನಚರಿ ಅಪೂರ್ಣ.. ಹಾಗಾಗಿ ಕೆಲಸ ಮುಗಿದ ಮೇಲೆ ಸಂಜೆ ಶೇಷಗಿರಿಯ ಹುಡುಗರು, ಹುಡುಗಿಯರನ್ನು ಸೇರಿಸಿಕೊಂಡು ತಮ್ಮ ರಂಗಚಟುವಟಿಕೆ ಮುಂದುವರೆಸುತ್ತಾರೆ…

ವ್ಯವಸಾಯ, ಕೂಲಿ ಮಾಡುವವರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇವರನ್ನೆಲ್ಲ ಸೇರಿಸಿ ಅಲ್ಲೇ ನಾಟಕದ ತಾಲೀಮು.., ಪ್ರದರ್ಶನಗಳು..

ಇಂತಹ ವಿಭಿನ್ನ ತಂಡಕ್ಕೆ ಗಣೇಶ್ ಎಂ ಹೊಸ ನಾಟಕವನ್ನು ನಿರ್ದೇಶಿಸಿದ್ದಾರೆ. ಕುವೆಂಪು ಅವರ ’ಶ್ರೀ ರಾಮಾಯಣ ದರ್ಶನಂ’ ನಲ್ಲಿನ ಒಂದು ಪ್ರಸಂಗ ಆಧರಿಸಿದ ನಾಟಕ ’ವಾಲಿ ವಧೆ’. ನಿರ್ದೇಶನದ ಜೊತೆಜೊತೆಯಲ್ಲಿಯೇ ಸಂಗೀತ ನಿರ್ದೇಶನ ಮತ್ತು ಹಾಡುಗಳ ಹೊಣೆಯೂ ಅವರದ್ದೇ.

ಯಾವುದೇ ನಾಟಕವಾಗಲಿ, ಅದಕ್ಕೆ ಲೈವ್ ಮ್ಯೂಸಿಕ್ ಒಂದು ಹೆಚ್ಚಿನ ಆಯಾಮವನ್ನು ನೀಡುತ್ತದೆ, ಆದರೆ ಈ ನಾಟಕದಲ್ಲಿ ಅದು ಅಷ್ಟಕ್ಕೇ ನಿಂತಿಲ್ಲ. ಇಲ್ಲಿ ಸಂಗೀತದ್ದು ಮುಖ್ಯ ಭೂಮಿಕೆ. ನಾಟಕ ಮುಗಿಯುವಷ್ಟರಲ್ಲಿ ನಮ್ಮ ಮನಸ್ಸಿನಲ್ಲಿ ಒಂದು ಆಳವಾದ ವಿಷಾದ, ಕರುಣೆ, ಕಣ್ಣುಗಳಲ್ಲಿ ಒದ್ದೆ ಉಳಿಸುವುದರಲ್ಲಿ ಸಂಗಿತದ ಪಾತ್ರ ವಿಶೇಷವಾದದ್ದು. ನಿರ್ದೇಶನದ ಜೊತೆಜೊತೆಯಲ್ಲಿಯೇ ಗಣೇಶ್ ಅವರು ನಾಟಕಕ್ಕೆ ಈ ಕೊಡುಗೆಯನ್ನೂ ನೀಡಿದ್ದಾರೆ.

ಕುವೆಂಪು ಅವರ ’ಶ್ರೀ ರಾಮಾಯಣ ದರ್ಶನಂ’ ನನಗೆ ಅನೇಕ ಕಾರಣಗಳಿಗಾಗಿ ಇಷ್ಟವಾದ ಕಾವ್ಯ. ಅಲ್ಲಿ ರಾಮಾಯಣದಷ್ಟೇ ಮುಖ್ಯವಾಗುವುದು ಜನಮಾನಸದ ಬಗ್ಗೆ, ಮನುಷ್ಯರ ಸಂಬಂಧಗಳ ಘನತೆಯ ಬಗ್ಗೆ ಕುವೆಂಪುರವರ ನಂಬಿಕೆ ಮತ್ತು ಪ್ರೀತಿ. ಮಂಥರೆಯ ನಡವಳಿಕೆಗೆ ಇಲ್ಲಿ ಕುವೆಂಪು ಒಂದು ಮಮತೆಯ ಆವರಣ ಕಲ್ಪಿಸುತ್ತಾರೆ, ರಾಜವಂಶದವರ ಬಗ್ಗೆ ಅಷ್ಟೇ ಅಲ್ಲ ಅಲ್ಲಿನ ಜನರ ಬಗ್ಗೆಯೂ ಮಾತನಾಡುತ್ತಾರೆ.

ರಾವಣನನ್ನು ಎಲ್ಲರೂ ಮಹಾವೀರ, ಮಹಾಪಂಡಿತ ಎಂದು ವರ್ಣಿಸಿದ್ದಾರೆ. ಆದರೆ ಕುವೆಂಪು ಅವರಿಗೆ ರಾವಣನನ್ನು ಒಬ್ಬ ಕರುಣಾರ್ದ್ರ ಹೃದಯಯವುಳ್ಳ ಮನುಷ್ಯನನ್ನಾಗಿ ತೋರಿಸಬೇಕಿರುತ್ತದೆ. ಆಗ ಅವರೇನು ಮಾಡುತ್ತಾರೆ? ರಾವಣನನ್ನು ಒಂದು ಹೆಣ್ಣು ಮಗುವಿನ ತಂದೆಯನ್ನಾಗಿ ಮಾಡಿಬಿಡುತ್ತಾರೆ. ವಿಭೀಷಣನಿಗೆ ’ಅನಲೆ’ ಎನ್ನುವ ಮಗಳನ್ನು ಸೃಷ್ಟಿಸಿ, ರಾವಣನ ಬಾಯಲ್ಲಿ ’ಅನಲೆ ನಿನ್ನ ಮಗಳಲ್ತು, ಎನ್ನ ಮಗಳ್’ ಎಂದು ಹೇಳಿಸುತ್ತಾರೆ.

ನಿಜ, ಗಂಡು ಅತ್ಯಂತ ಆರ್ದ್ರವಾಗುವುದು ತನ್ನ ಮಗಳ ಎದುರಿನಲ್ಲಿಯೇ ಅಲ್ಲವೆ? ಈ ಮಹಾಕಾವ್ಯದಲ್ಲಿ ರಾವಣ ಮಮತಾಮಯಿ ತಂದೆಯಾಗಿ ಮರೆಯಲಾರದ ಪಾತ್ರವಾಗಿಬಿಡುತ್ತಾನೆ.  ಹೀಗೆ ಇಂತಹ ಎಷ್ಟೋ ಕಾರಣಗಳಿಗಾಗಿ ನನಗೆ ರಾಮಾಯಣ ದರ್ಶನಂ ಇಷ್ಟ. ಅದರಲ್ಲಿನ ಒಂದು ಪ್ರಸಂಗದ ಆಧಾರದ ನಾಟಕ ಎನ್ನುವಾಗ ನೋಡದೆ ಇರಲು ಸಾಧ್ಯವೆ?

ಸೀತೆಯನ್ನು ಕಳೆದುಕೊಂಡು ಕಂಗೆಟ್ಟಿರುವ ರಾಮ ಮತ್ತು ಆತನ ನೆರಳಾಗಿರುವ ಸೌಮಿತ್ರಿ ಋಷ್ಯಮೂಕ ಪರ್ವತಗಳ ಬಳಿ ಬರುವುದರೊಡನೆ ನಾಟಕ ಪ್ರಾರಂಭವಾಗುತ್ತದೆ. ಹೆಂಡತಿಯ ನೆನಪಿನಲಿ ಕಂಗೆಟ್ಟು, ವಿಲಪಿಸುತ್ತಾ ರಾಮ ಕೈ ಚೆಲ್ಲಿ ಕುಳಿತುಕೊಂಡಿರುತ್ತಾನೆ. ಲಕ್ಷ್ಮಣ ಆತನಲ್ಲಿ ಧೈರ್ಯ ತುಂಬುವ ಮಾತುಗಳನ್ನಾಡುತ್ತಿರುತ್ತಾನೆ.

ಆಗ ಅಲ್ಲಿಗೆ ಬರುವ ಹನುಮಂತ ರಾಮ ಮತ್ತು ಸುಗ್ರೀವ ಇಬ್ಬರೂ ಸಮಾನ ನೋವನ್ನು ಸಹಿಸುತ್ತಿರುವವರು ಎಂದು ಅವರಿಬ್ಬರ ನಡುವಿನಲ್ಲಿ ಬಾಂಧವ್ಯದ ಸೇತುವೆ ಕಟ್ಟುತ್ತಾನೆ. ರಾಮ-ಸುಗ್ರೀವರ ಭೇಟಿ ಆಗುತ್ತದೆ. ಸುಗ್ರೀವ ಅಣ್ಣ-ತಮ್ಮಂದಿರ ನಡುವಣ ವೈರತ್ವಕ್ಕೆ ಹೇಗೆ ದುಂಧುಬಿಯ ಮಗ ಮಾಯಾವಿಯೊಡನಿನ ಯುದ್ಧ ಕಾರಣವಾಯ್ತು ಎಂದು ವಿವರಿಸುತ್ತಾನೆ. ಮುಂದಿನ ಕಥೆ ಎಲ್ಲರಿಗೂ ಗೊತ್ತಿರುವುದೇ.

ಆದರೆ ನಾನಿಲ್ಲಿ ವಾಲಿ ಮತ್ತು ಮಾಯಾವಿಯ ಯುದ್ಧ ಮತ್ತು ನಂತರದ ಘಟನೆಗಳನ್ನು ರಂಗಕ್ಕಳವಡಿಸಿದ ಬಗ್ಗೆ ಹೇಳಲೇಬೇಕು. ಗುಹೆಯೊಳಗೆ ವಾಲಿ ಮತ್ತು ಮಾಯಾವಿ ಯುದ್ಧ ಮಾಡುತ್ತಿರುತ್ತಾರೆ. ಒಳಗಿನ ಕೋಲಾಹಲ ಕೇಳಿದ ಸುಗ್ರೀವನಿಗೆ ಮಾಯಾವಿ ವಾಲಿಯನ್ನು ಕೊಂದಿರಬಹುದು ಎನ್ನಿಸಿ ಅತ್ತಿತ್ತ ಹುಡುಕಿ ಗುಹೆಯ ಮೂತಿಗೆ ಬಂಡೆಯೊಂದನ್ನು ಇಟ್ಟು ರಾಜಧಾನಿಗೆ ಹಿಂದಿರುಗುತ್ತಾನೆ. ಆದರೆ ಸತ್ತಿರುವುದು ವಾಲಿಯಲ್ಲ, ಮಾಯಾವಿ.

ವಿಜಯೋತ್ಸಾಹದಿಂದ ಹೊರಬಂದ ವಾಲಿಗೆ ಗುಹೆಯ ಬಾಗಿಲಿಗೆ ಬಂಡೆ ಇರುವುದು ಕಂಡು ಎಂತಹ ಆಘಾತವಾಗಿರಬೇಕು… ಆತ ಬಂಡೆಯನ್ನು ಒತ್ತುತ್ತಾನೆ, ನೂಕುತ್ತಾನೆ, ಕುಟ್ಟುತ್ತಾನೆ, ತಳ್ಳುತ್ತಾನೆ. ಅಲ್ಲಿ ನಾಟಕದೊಂದಿಗೆ ಹಾಡುಗಾರಿಕೆ ಒಂದಕ್ಕೊಂದು ಮೇಳೈಸಿ ಸೃಷ್ಟಿಸುವ ಪರಿಣಾಮ ಅಸದೃಶ್ಯವಾದದ್ದು. ಕಡೆಗೆ ಮಡದಿ ತಾರೆಯನ್ನು, ಮಗ ಅಂಗದನನ್ನೂ ನೆನೆದು ವಾಲಿ ಬಂಡೆಯನ್ನು ತಳ್ಳಿ ಹಾಕುತ್ತಾನೆ. ಆ ದೃಶ್ಯದ ಸೊಗಸೇ ಸೊಗಸು.

ನಾಟಕದಲ್ಲಿ ಮರೆಯಲಾರದ ಇನ್ನೊಂದು ದೃಶ್ಯವೆಂದರೆ ತಾರೆ ವಾಲಿಯನ್ನು ಯುದ್ಧ ನಿಲ್ಲಿಸು ಎಂದು ಮನವೊಲಿಸುವ ದೃಶ್ಯ. ತಾರೆ ವಾಲಿಗೆ ಸುಗ್ರೀವ ಸಣ್ಣ ಮಗುವಾಗಿದ್ದಾಗಿನ ದಿನಗಳನ್ನು ನೆನಪಿಸುತ್ತಾಳೆ. ಮನೆಯ ಹಿರಿಯ ಮಕ್ಕಳಿಗೆ ಥಟ್ಟನೆ ಅನುಭವವೇದ್ಯವಾಗುವ ನೆನಪು ಇದು. ಇಂದು ಎಷ್ಟೇ ಬೆಳೆದಿರಲಿ, ಅವರನ್ನು ಮಕ್ಕಳಾಗಿ ನೋಡಿದ, ಅವರನ್ನು ಎತ್ತಿಕೊಂಡು ಓಲೈಸಿದ ನೆನಪು ಹಿರಿಯ ಮಕ್ಕಳಿಗೆ ಇದ್ದೇ ಇರುತ್ತದೆ. ಅದು ಅವರೊಳಗೆ ಸದಾ ಒಬ್ಬ ತಂದೆ ಮತ್ತು ತಾಯಿಯನ್ನು ಜೀವಂತವಾಗಿಟ್ಟಿರುತ್ತದೆ. ವಾಲಿಯಲ್ಲಿನ ಆ ಮಮತೆಯ ಊಟೆಯನ್ನು ತಾರೆ ಮೀಟುತ್ತಾಳೆ.

ಇಲ್ಲಿ ನಿರ್ದೇಶಕರು ಬಾಲ ಸುಗ್ರೀವನ ಪಾತ್ರ ತರುತ್ತಾರೆ. ಇಂದಿನ ವಾಲಿ ಮತ್ತು ಬಾಲ ಸುಗ್ರೀವನ ನಡುವಿನ ಕೆಲವೇ ನಿಮಿಷಗಳ ಸನ್ನಿವೇಶ ಕಣ್ಣುಗಳನ್ನು ಒದ್ದೆಯಾಗಿಸಿಬಿಡುತ್ತದೆ. ’ಕಪಿಗಳ ಶಕ್ತಿ ಎಲ್ಲಿರುತ್ತದೆ ಅಣ್ಣಾ’ ಎಂದು ಸುಗ್ರೀವ ಕೇಳುತ್ತಾನೆ, ’ಮತ್ತೆಲ್ಲಿ, ಮುಷ್ಟಿಯಲ್ಲಿ! ಅಷ್ಟಿಲ್ಲದೆ ಕಪಿಮುಷ್ಟಿ ಎನ್ನುತ್ತಾರೆಯೇ’ ಎಂದು ವಾಲಿ ಹೆಮ್ಮೆಯಲ್ಲಿ ಉತ್ತರಿಸುತ್ತಾನೆ.

ಆಗ ಸುಗ್ರೀವ ಕೇಳುವುದು ಒಂದೇ ಪ್ರಶ್ನೆ, ’ಹಾಗಾದರೆ ಮುಷ್ಟಿ ಸಡಲಿಸಿ ನನ್ನ ಕೈ ಯಾಕೆ ಬಿಟ್ಟುಬಿಟ್ಟೆ ಅಣ್ಣ?’. ಇಡೀ ನಾಟಕದ ತಾಕತ್ತು ಇರುವುದು ಅಲ್ಲಿ, ವಾಲಿ ಎನ್ನುವ ವಾಲಿ ಹಿರಿಯಣ್ಣನಾಗಿ ಬದಲಾಗುವ ಆ ಸನ್ನಿವೇಶದಲ್ಲಿ.

ಮುಂದಿನ ದೃಶ್ಯದಲ್ಲಿ ಗುರ್ತಿಗಾಗಿ ರಾಮನಿಂದ ಹೂವಿನಹಾರ ಹಾಕಿಸಿಕೊಂಡ ಸುಗ್ರೀವ ವಾಲಿಯನ್ನು ಮತ್ತೆ ಯುದ್ಧಕ್ಕೆ ಕರೆಯುತ್ತಾನೆ. ಯುದ್ಧಕ್ಕೆ ಬಂದ ವಾಲಿಗೆ ಎದುರಲ್ಲಿ ಕಾಣುವುದು ತಮ್ಮ ಬಾಲ ಸುಗ್ರೀವ. ಅವನೊಂದಿಗೆ ವಾಲಿ ಹೇಗೆ ಕಾದಿಯಾನು? ತಮ್ಮನನ್ನು ಊರಿಗೆ ಕೊಂಡೊಯ್ಯಲ್ಲೆಂದು ಹೆಗಲ ಮೇಲೆ ಹೊತ್ತುಕೊಳ್ಳುವ ವಾಲಿಯ ಬೆನ್ನಿಗೆ ರಾಮನ ಬಾಣ ನಾಟುತ್ತದೆ, ವಾಲಿ ಸಾಯುತ್ತಾನೆ, ರಾಮ ಸೋಲುತ್ತಾನೆ.

ನಾಟಕದಲ್ಲಿ ’ಅಣ್ಣಾ………ವಾಲಿ…..’ ಎನ್ನುವ ಆ ಕರೆಗೆ ಯಕ್ಷಗಾನಗಳ ಮಟ್ಟಿನ ದೇಸಿತನವಿದೆ. ’ಉಪ್ಪು ಬೇಕೆ ಉಪ್ಪು’ ಎನ್ನುವ ಆ ಸಾಲುಗಳಲ್ಲಿ ನಾಟಕವನ್ನು ನಮ್ಮ ಆವರಣದೊಳಕ್ಕೆ ಒಗ್ಗಿಸುವ ಆತ್ಮೀಯತೆ ಇದೆ. ನಿರ್ದೇಶಕರೇ ಇಲ್ಲಿ ಸಂಗೀತ ವಿನ್ಯಾಸವನ್ನೇ ಮಾಡಿರುವುದರಿಂದ ಬಹುಶಃ ನಾಟಕದ ಬಗೆಗಿನ ಅವರ ಒಟ್ಟೂ ನೋಟ ಇಲ್ಲೂ ವಿಸ್ತೃತಗೊಂಡಿರಬಹುದು.

ಕುವೆಂಪುರವರ ’ಶ್ರೀ ರಾಮಾಯಣ ದರ್ಶನಂ’ಗೆ ತನ್ನೊಳಗೇ ಅಂತರ್ಗತವಾದ ಮಹಾಕಾವ್ಯದ ಗುಣ ಇದೆ. ಕುವೆಂಪುರವರು ರಾಮಾಯಣದ ಪಾತ್ರಗಳೊಂದಿಗೆ ನಮ್ಮ ಮನಸ್ಸುಗಳನ್ನು ಕಟ್ಟಿಹಾಕುವ ಪರಿಯೇ ಅನನ್ಯವಾದುದು. ಅದನ್ನು ಓದುವುದು, ’ಮನೋರಂಗ’ದಲ್ಲಿ ಅದನ್ನು ಕಲ್ಪಿಸಿಕೊಳ್ಳುವುದು ಒಂದು ಸೊಗಸಾದರೆ, ರಂಗದ ಮೇಲೆ ಅದನ್ನು ನೋಡುವುದು ಇನ್ನೊಂದು ಸೊಗಸು. ಕಥೆ ಹೇಳುವ ಅಜ್ಜ ಅಜ್ಜಿಯರು ಕಾಣೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ನಾಟಕಗಳು ಮಕ್ಕಳ ಮನಸ್ಸಿನಲ್ಲಿ ಒಂದು ಕನಸಿನ ನಗರಿಯ ಕಥಾಲೋಕವನ್ನು ಕಟ್ಟಬೇಕು.

ಈ ನಾಟಕವನ್ನು ಕಳೆಗಟ್ಟಿಸುವಲ್ಲಿ ರಂಗ ಪರಿಕರ, ರಂಗ ಸಜ್ಜಿಕೆ, ವಸ್ತ್ರ ಮತ್ತು ಮುಖಾಲಂಕರ ಮಾಡಿದ ಪ್ರಶಾಂತ್ ಉದ್ಯಾವರ್ ವರ ಕೊಡುಗೆಯೂ ಸಣ್ಣದಲ್ಲ. ವಾಲಿ – ಸುಗ್ರೀವ – ಹನುಮಂತರ ಮೇಕಪ್ ಆ ಪಾತ್ರಗಳ ಒಳಗಿಗೆ ಅನುಗುಣವಾಗಿರುವಂತೆ ಪ್ರಶಾಂತ್ ನೋಡಿಕೊಂಡಿದ್ದಾರೆ.

ಪೌರಾಣಿಕ ನಾಟಕಗಳು ನಮ್ಮನ್ನು ಆಕರ್ಷಿಸುವುದು ಅವುಗಳ ಮಾಂತ್ರಿಕತೆಯ ಕಾರಣದಿಂದ, ಸ್ಟೇಜ್ ಮೇಲಿನ ವೈಭವದ ನೋಟದಿಂದ. ಈ ನಾಟಕ ರಂಗವನ್ನು, ಬೆಳಕಿನ ವಿನ್ಯಾಸವನ್ನು, ರಂಗ ಪರಿಕರಗಳನ್ನು ಅದ್ಭುತವಾಗಿ ಬಳಸಿಕೊಂಡಿದೆ. ಅದಕ್ಕೆ ಒಂದು ಉದಾಹರಣೆ ವಾಲಿ ಸುಗ್ರೀವರ ಕದನ. ಅವರಿಬ್ಬರ ಕದನಕ್ಕೆ ನಿರ್ದೇಶಕರು ರಂಗವನ್ನು, ರಂಗ ಪರಿಕರಗಳನ್ನು ಅತ್ಯಂತ ಕಲಾತ್ಮಕವಾಗಿ ದುಡಿಸಿಕೊಂಡಿದ್ದಾರೆ.

ಅದಕ್ಕೆ ಸಂವಾದಿಯಾಗಿ, ಸರಿಸಾಟಿಯಾಗಿ ಕೆಲಸ ಮಾಡಿರುವುದು ವಾಲಿ, ಸುಗ್ರೀವ, ಹನುಮಂತ, ಜಾಂಬವಂತರ ಎನರ್ಜಿ. ವಾಲಿ-ಸುಗ್ರೀವರ ಕದನದ ನಡುವೆ ಮಿಕ್ಕವರು ಎರಡೆರಡು ಬೊಂಬುಗಳನ್ನು ಹಿಡಿದುಕೊಂದು ಅವರ ಸುತ್ತಲೂ ಸುತ್ತುತ್ತಾ ಕದನಕ್ಕೆ ಒಂದು ಕದನದ ರಂಗಸಜ್ಜಿಕೆಯನ್ನು ಕಟ್ಟಿಬಿಡುತ್ತಾರೆ. ಅದೊಂದು ನಯನ ಮನೋಹರವಾದ ದೃಶ್ಯ. ವಾಲಿ ಸುಗ್ರೀವ ಪರಸ್ಪರ ಡಿಕ್ಕಿ ಕೊಟ್ಟುಕೊಳ್ಳುವುದು, ಮೈ ಮುಟ್ಟದೆ ಕಾದುತ್ತಲೇ ಮಲ್ಲ ಯುದ್ಧದ ಕಲ್ಪನೆ ಕಟ್ಟಿಕೊಡುವುದು ’ವಾಹ್’!

ನಾಟಕದಲ್ಲಿ ರಾಮ-ಲಕ್ಷ್ಮಣರ ನಟನೆ ಸ್ವಲ್ಪ ಪಳಗಬೇಕು. ಪಾತ್ರಗಳು ಎಲ್ಲೂ ತಮ್ಮಷ್ಟಕ್ಕೆ ತಾವು ನಿಲ್ಲಬಾರದು, ಸಹ ಪಾತ್ರಗಳ ಸಂಭಾಷಣೆ, ಕ್ರಿಯೆಗೆ ಮಿಕ್ಕ ಪಾತ್ರಗಳೂ ಸ್ಪಂದನೆ ನೀಡುತ್ತಿರಬೇಕು. ಆಗಲೇ ನಾಟಕ ಪರಿಪೂರ್ಣವಾಗುತ್ತದೆ. ಅದೊಂದನ್ನು ಆ ಎರಡೂ ಪಾತ್ರಧಾರಿಗಳೂ ಸ್ವಲ್ಪ ಗಮನಿಸಬೇಕು.

ಯಾರೂ ತಪ್ಪಿಸಿಕೊಳ್ಳಬಾರದ ನಾಟಕ ’ವಾಲಿ ವಧೆ’. ನಾಟಕ ಮತ್ತೆ ಮತ್ತೆ ಪ್ರದರ್ಶನಗೊಳ್ಳಲಿ.

4 Comments

 1. Guruprasad
  May 19, 2017
  • Guruprasad
   May 19, 2017
 2. ಭಾರತಿ
  April 3, 2017
 3. ಭರತ್ ಸ. ಜಗನ್ನಾಥ್
  April 3, 2017

Add Comment

Leave a Reply