Quantcast

ಅವ್ವನ ಪಟಗಳ ನೋಡಿ ಜೀವ ತಡೆಯಲಿಲ್ಲ..

ಡಾ. ಲಕ್ಷ್ಮಣ್.ವಿ.ಎ

ಹಳೆಯ ಸೈಕಲ್ ಪೆಡಲಿನ ಮೊಳೆ ಚುಚ್ಚಿ ಎಷ್ಟೋ ದಿನವಾಗಿತ್ತು.

ನನಗಾಗ ನಾಲ್ಕೋ ಐದೋ ವರ್ಷ

ಜಂಗು ತಿಂದ ಸೈಕಲ್ಲಿನ ಮೊಳೆ ಚುಚ್ಚಿ ನನಗೆ “ಟೆಟನಾಸ “ಆಗಿರಬಹುದೆಂಬ ಕಲ್ಪನೆ ಅಕ್ಷರ ಅರಿಯದ ಅಮ್ಮನಿಗೆ ಹೇಗೆ ಗೊತ್ತಾಗಬೇಕು? ಆಡು ಮೇಯಿಸುತಿದ್ದವನಿಗೆ ಇದ್ದಕ್ಕಿದ್ದಂತೆ ದೇಹ ಧನುರ್ವಿನಂತೆ ಬಾಗಿ ಬಾಯಲ್ಲಿ ಜೊಲ್ಲು ಸೋರಿ ಇನ್ನೇನು ಜೀವ ಆಗಲೋ ಈಗಲೋ ಹೋಗಬೇಕಿತ್ತು ,

ಯಾರೋ ತಿಳಿದವರು ಬೇಗ ಮೀರಜ್ ನ ಆಸ್ಪತ್ರೆ ಗೆ ಅಡ್ಮಿಟ್ ಮಾಡಲು ತಿಳಿಸಿದಾಗ ಅಮ್ಮ ನನ್ನ ಮಗ ಸತ್ತೆ ಹೋದನೆಂದು ಬಾಯಿ ಬಾಯಿ ಬಡಿದುಕೊಂಡು ಅಳುತ್ತಿರುವಾಗ ಎಲ್ಲೊ ಕೂಲಿಗೆ ಹೋಗಿದ್ದ ಅಪ್ಪನಿಗೆ ವಿಷಯ ಗೊತ್ತಾಗಿ ಅನಾಮತ್ತಾಗಿ ನನ್ನ ಚಂದಾಮಾಮಾದ ರಾಜಾ ವಿಕ್ರಮನು ಬೇತಾಳನನ್ನು ಹೆಗಲೇರಿಸಿಕೊಂಡಂತೆ ನನ್ನ ಎತ್ತಿಕೊಂಡು ಮೀರಜ್ ಗೆ ಹೋಗುವ ಲಾರಿ ಬಸ್ಸು ಟ್ರ್ಯಾಕ್ಟರ ನಿಲ್ಲಿಸಲು ಕೈ ಅಡ್ಡ ಹಾಕಿ ನಿಲ್ಲಿಸಲು ಗೋಗೆರೆಯಿತಿದ್ದರು.

ನಮ್ಮೂರು ಹೆದ್ದಾರಿ ಬದಿಯ ಹಳ್ಳಿಯಾದುದರಿಂದ express ಬಸ್ಸುಗಳ ನಿಲುಗಡೆಯಿರಲಿಲ್ಲ. ಯಮ ವೇಗದಲ್ಲಿ ಸಾಗುತಿದ್ದ ಮುಚ್ಚಿದ ಕಿಡಕಿಗಳ ಬಸ್ಸಿನ ಡ್ರೈವರುಗಳಿಗೆ ಅವ್ವನ ಕಿರುಚಾಟ ರೋದನೆ ಬಹುಷ ಕೇಳಿಸಿರಲಿಕ್ಕಿಲ್ಲ ,

ಸಾವೊಂದು ಹೆದ್ದಾರಿಯ ಟಾರಿನೊಂದಿಗೆ ಸೀದಾ ಯಮಲೋಕದ ದಾರಿಗೆ ಪ್ರವೇಶ ಪಡೆದವರಂತೆ ಯಕಶ್ಚಿತ್ ಮೋಳೆ ಗ್ರಾಮದ ವಿಠೋಬನೆಂಬ ಹೆಸರಿನ ಹಸಿರು ಪಡಿತರ ಚೀಟಿಯಲ್ಲಿನ ಯಜಮಾನನ ಕೊನೆಯ ಕಂದ ಇನ್ನೇನು ಗೋಣು ಚೆಲ್ಲುವಾಗ ಸರಕು ತುಂಬಿದ ಲಾರಿಯವನು ನಿಲ್ಲಿಸಿ ಮೀರಜ ತನಕ ಅವ್ವ ಅಪ್ಪನಿಗೆ ಹಿಂದೆ ಕುಳಿತು ಪ್ರಯಾಣಮಾಡುವ ಉಪಕಾರ ತೋರಿದರು.

ದುಖಃದ ಭಾರವ ಹೆಗಲು ಬದಲಾಯಿಸಿದಂತೆ ಜೀವ ಹೋಗುತ್ತಿರುವ ಕಂದನ ಇಬ್ಬರೂ ಹೆಗಲು ಬದಲಾಯಿಸಿ ಇಬ್ಬರೂ ಸಮಾಧಾನ ಮಾಡಿಕೊಳ್ಳುತ್ತ ಮೀರಜ್ ಮಿಷನ್ ಆಸ್ಪತ್ರೆ ತಲುಪಿ ,ಇವನನ್ನು ದಾದಿಯರ ಸುಪರ್ದಿಗೆ ವಹಿಸಿ ಆ ರಾತ್ರಿ ಇಬ್ಬರೂ ಆಸ್ಪತ್ರೆ ಯ ಕಾರಿಡಾರಿನ ಕತ್ತಲೆಯಲ್ಲಿ ಕಳೆದರು.

ಯಾರಿಗೆ ಗೊತ್ತು ಡ್ಯೂಟಿಯಲ್ಲಿದ್ದ ವೈದ್ಯರು ಏನು ಹೇಳುವವರು ಏನೊ ? ಬೆಳಕು ಹರಿಯುವುದರಲ್ಲಿ ಯಾವ ಸುದ್ದಿ ಇದೆಯೋ ಏನೊ ? ಆ ದಿನ ಅಥವ ಆ ರಾತ್ರಿ ಇಬ್ಬರೂ ಊಟ ಮಾಡಿದ್ದರಾ ? ಅಪ್ಪನ ಹರಿದ ಅಂಗಿಯಲ್ಲಿ ಎಷ್ಟು ರೂಪಾಯಿಗಳಿದ್ದವು ? I’m sorry ವಿವರಗಳು ಲಭ್ಯವಿಲ್ಲ .ನಮ್ಮೂರಿನಿಂದ ಸುಮಾರು ನಲವತ್ತು ಮೈಲಿ ದೂರದಲ್ಲಿದ್ದ ಮೀರಜ್ ಎಂಬ ಅಪರಿಚಿತ ಊರಿನಲ್ಲಿ ನೆಂಟರ ಮಾತು ಹಾಗಿರಲಿ ಪರಿಚಿತದ ಒಂದು ಮುಖವೂ ಇಲ್ಲ.

ಅವ್ವ ಹೇಳುವ ಪ್ರಕಾರ ನಾನು ಎರಡು ದಿನ ಐಸನಲ್ಲಿದ್ದೆ (ಐ.ಸಿ.ಯು) ಮೂರನೆಯ ದಿನ ನಾನು ಜನರಲ್ ವಾರ್ಡಿನಲಿ ದಾದಿ ಇಂಜೆಕ್ಷನ್ ಕೊಡುವಾಗ ಕಿರ್ರನೆ ಕಿರುಚಿದಾಗ ಮಾತ್ರ ಅವ್ವಳಿಗೆ ನಾನು ಬದುಕುಳಿಯುವ ವಿಶ್ವಾಸ ಬಂದಂತಿತ್ತು .
೧೯೮೦ ಇಸ್ವಿ ಯ ಆ ವರ್ಷ ಬರಗಾಲವಿತ್ತೆಂದು ನಮ್ಮೂರಿನ ಹಿರಿ ತಲೆಗಳು ಈಗಲೂ ಮಾತನಾಡಿಕೊಳ್ಳುತ್ತವೆ. ಕೊನೆಗೂ ನನಗೆ ಪುನರ್ಜನ್ಮ ಕಾದಿತ್ತು.

ಊರಿಗೆ ಹೋದಾಗಲೆಲ್ಲ ಈ ಕತೆಯನ್ನು ಎಷ್ಟು ಬಾರಿ ಕೇಳಿಸಿಕೊಂಡರೂ ಮತ್ತೆ ಮತ್ತೆ ಅವರಿಂದ ಈ ಕತೆಯನ್ನು ಕೇಳಿಸಿಕೊಂಡು ಈಗಿರುವ ನನ್ನ ಅಹಂ ನ್ನು ಮೆತ್ತಗಾಗಿಸುವ ವ್ಯರ್ಥ ಪ್ರಯತ್ನ ಮಾಡುತ್ತಿರುತ್ತೇನೆ . ಈ ಗೋಳಿನ ಕತೆಯನ್ನೆಲ್ಲ ನಿಮಗೆ ಹೇಳುವ ಇಷ್ಟವಿರಲಿಲ್ಲ. ಅಮ್ಮಂದಿರ ದಿನದ ನೆನಪಿಗಾಗಿ ಫೆ. ಬು. ತುಂಬ ಓಡಾಡಿದ ಅವ್ವನ ಪಟಗಳ ನೋಡಿ ಜೀವ ತಡೆಯಲಿಲ್ಲ.

ಅಂದಹಾಗೆ ಅಪ್ಪ ತೀರಿ ಇಂದಿಗೆ ಹದಿನೇಳು ವರ್ಷ ಅವ್ವಳಿಗೆ ಕೇವಲ ಎಪ್ಪತ್ತು ವರ್ಷ . ಕಿವಿ ಸ್ವಲ ಮಂದವಾದರೂ ಒಳಗಣ್ಣು ಹರಿತವಾಗಿವೆ

ನಿನ್ನೆ ಫೋನು ಮಾಡಿ ಮಾತನಾಡಿದಾಗ ಎರಡೇ ಹನಿ ಮಳೆ ಬಿದ್ದ ಖುಷಿಯಲ್ಲಿ ಎಲ್ಲ ಮರೆತು ಬೆಂಗಳೂರು ಪ್ಯಾಟಿ ಹುಷಾರು ಯಪ್ಪ ಅಂತ ಎಚ್ಚರಿಸಿ ಮಾತು ಮುಗಿಸಿದಳು.

 

Add Comment

Leave a Reply