Quantcast

ಅವರು ನಿನ್ನೆಗಳನ್ನು ಒಪ್ಪಿಕೊಳ್ಳಲಾರರು, ನಾಳೆಗಳು ಇನ್ನೂ ಅವರಿಗೆ ಸಿದ್ಧವಾಗಿಲ್ಲ..

ಎರಡು ಅತಿರೇಕಗಳ ನಡುವಿನ ಕಥೆ ’In Between’

ಒಂದು ದೃಷ್ಟಿಯಿಂದ ನೋಡಿದರೆ ಇದು ಈ ಕಾಲಘಟ್ಟದ ಯಾವುದೇ ಸಮಾಜದಲ್ಲಿ ನಡೆಯಬಹುದಾದ ಘಟನಾವಳಿಗಳು.

ಆದರೆ ಇದು ಕಥೆಯ ಒಂದು ಪದರ.

ಈ ಕಥೆಗೆ ಇನ್ನೊಂದು ಆಯಾಮ ಸಿಕ್ಕುವುದು ಅದು ಟೆಲ್ ಅವೀವ್ ನಲ್ಲಿ ನೆಲೆಸಿರುವ ಮೂರು ಆರಬ್ ಇಸ್ರೇಲಿ ಹೆಣ್ಣುಮಕ್ಕಳ ಕಥೆ ಎನ್ನುವ ಕಾರಣದಿಂದ. ಹೆಣ್ಣಿನ ಸಾಮಾಜಿಕ ಸ್ಥಾನಮಾನಗಳು ಕಥೆಯ ಮುಖ್ಯವಸ್ತುವಾಗಿದ್ದರೂ ಕಥೆಯಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಅಲ್ಲಿನ ರಾಜಕೀಯ ಪರಿಸ್ಥಿತಿ ಸಹ ಅತ್ಯಂತ ಸಹಜವಾಗಿ ಕಾಣಿಸಿಕೊಳ್ಳುವಂತೆ ಕಥೆ ಹೆಣೆಯಲ್ಪಟ್ಟಿದೆ.

ಈ ಚಿತ್ರದ ಮೂಲ ಹೆಸರು ’Bar Bahar’ ಅಂದರೆ ನೆಲ ಮತ್ತು ಸಮುದ್ರ, ಹೀಬ್ರೂವಿನಲ್ಲಿ ಈ ಹೆಸರನ್ನು “neither here, nor there” ಎಂದು ಅನುವಾದಿಸಲಾಗುತ್ತದೆ. ಇಂಗ್ಲಿಷಿಗೆ ಇದನ್ನು ‘In between’ ಎಂದು ಭಾಷಾಂತರಿಸಲಾಗಿದೆ, ಅಂದರೆ ’ಎರಡು ಅತಿಗಳ ನಡುವೆ’. ತಮಾಷೆ ಎಂದರೆ ಈ ಮೂರೂ ಹೆಸರುಗಳೂ ಬೇರೆ ಬೇರೆ ಅರ್ಥ ಕೊಡುತ್ತವೆ, ಮತ್ತು ಈ ಮೂರೂ ಹೆಸರುಗಳೂ ಚಿತ್ರಕ್ಕೆ ಹೊಂದುತ್ತವೆ.

ಚಿತ್ರದ ಕಥೆ ನಡೆಯುವುದು ಇಸ್ರೇಲ್ ನಲ್ಲಿ. ಅಲ್ಲಿನ ಜನಸಂಖ್ಯೆಯ ಸುಮಾರು 18 % ಅರಬ್ ಇಸ್ರೇಲಿಗಳಿದ್ದಾರೆ. ಅವರು ಪ್ಯಾಲೆಸ್ಟೇನ್ ನಿಂದ ಬಂದವರು. 1948 ರಲ್ಲಿ ಇಸ್ರೇಲ್ ಸ್ವತಂತ್ರ ರಾಷ್ಟ್ರವಾಗಿ ಹೊಮ್ಮಿದ ಮೇಲೆ ಇಲ್ಲೇ ನಿಂತ ಅಥವಾ ವಲಸೆ ಬಂದ ಅರಬರು ಇವರು. ಇಸ್ರೇಲಿಗಳಿಗೆ ಇವರ ಮೇಲೆ ಸಿಟ್ಟಿದೆ. ಇಸ್ರೇಲಿನಲ್ಲೇ ಇದ್ದರೂ ಇವರದ್ದೊಂದು ಪ್ರತ್ಯೇಕ ಬದುಕು.

ಇದು ಪ್ಯಾಲಿಸ್ತೇನಿ ನಿರ್ದೇಶಕಿ Maysaloun Hamoud ಅವರ ಮೊದಲ ಚಿತ್ರ.

ಮೊದಲ ಚಿತ್ರದಲ್ಲೇ ಬೋಲ್ಡ್ ಎನ್ನಬಹುದಾದ ಕಥೆ ಮತ್ತು ನಿರೂಪಣೆಯ ಕಾರಣದಿಂದ ಚಿತ್ರ ಹಲವರ ಮೆಚ್ಚುಗೆ ಮತ್ತು ಆಕ್ರೋಶ ಎರಡಕ್ಕೂ ತುತ್ತಾಗಿದೆ. ಆಕ್ರೋಶದ ಮಟ್ಟ ಎಷ್ಟಕ್ಕೆ ಹೋಯಿತೆಂದರೆ ಚಿತ್ರ ನಿರ್ದೇಶಕಿಯ ಮೇಲೆ ಫತ್ವಾ ಸಹ ಹೊರಡಿಸಲಾಯಿತು.

ಬದಲಾಗುತ್ತಿರುವ ಸಮಾಜದಲ್ಲಿ ಹೆಣ್ಣಿನ ಸ್ಥಾನ ಮತ್ತು ಆಕೆಯ ಸಂಬಂಧಗಳು ಪುನರ್ನಿರ್ವಚನಕ್ಕೆ ಒಳಗಾಗುತ್ತಲೇ ಇವೆ. ಅದು ಗಂಡಿನೊಡನೆ ಆಕೆಯ ಸಂಬಂಧವಾಗಿರಬಹುದು, ಜೊತೆಯ ಹೆಣ್ಣಿನೊಂದಿಗಿನ ಸಂಬಂಧವಾಗಿರಬಹುದು ಅಥವಾ ಸಮಾಜದೊಡನಿನ ಸಂಬಂಧವಾಗಿರಬಹುದು. ಬದಲಾವಣೆಯ ಮಾರ್ಗಗಳನ್ನು ಪುರುಷ ತುಳಿದಾಗ ಸಣ್ಣ ಪುಟ್ಟ ಧ್ವನಿಗಳು ಅದನ್ನು ವಿರೋಧಿಸಿದರೂ ಹೆಣ್ಣು ಅನಿವಾರ್ಯವಾಗಿ ಅದನ್ನು ಒಪ್ಪಿಕೊಳ್ಳಬೇಕಾಯಿತು.

ಆದರೆ ಹೆಣ್ಣು ಬದಲಾವಣೆಗೆ ತನ್ನನ್ನು ಒಡ್ಡಿಕೊಂಡಾಗ ಅಥವಾ ತನ್ನ ನಿಲುವನ್ನು ಪ್ರತಿಪಾದಿಸಿದಾಗ ಆಕೆ ಎದುರಿಸಬೇಕಾದ ಸಮಸ್ಯೆಗಳು ಈ ಚಿತ್ರದ ಕಥಾವಸ್ತು.

ಚಿತ್ರದಲ್ಲಿ ಮೂರು ಹೆಣ್ಣುಮಕ್ಕಳಿದ್ದಾರೆ. ಮೊದಲನೆಯವಳು ಲೈಲಾ. ಆಕೆ ಒಬ್ಬ ಅಡ್ವೋಕೇಟ್. ಸ್ವತಂತ್ರ ವ್ಯಕ್ತಿತ್ವದ ಹೆಣ್ಣು ಮಗಳು. ಹಗಲಿನಲ್ಲಿ ಗಟ್ಟಿದನಿಯ ವಕೀಲೆ, ಸಂಜೆ ಪಾರ್ಟಿ, ತಿರುಗಾಟ. ಅವಳಿಗೆ ತನ್ನ ಬದುಕಿನ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲ. ಅದನ್ನು ಆಕೆ ಯಾರ ಮುಂದೆ ಮರೆಮಾಚುವುದೂ ಇಲ್ಲ.

ಎರಡನೆಯವಳು ಸಲ್ಮಾ. ಮಡಿವಂತ ಕ್ರಿಶ್ಚಿಯನ್ ಕುಟುಂಬದ ಮಗಳು. ಹಳ್ಳಿ ಬಿಟ್ಟು ಬಂದು ಪಟ್ಟಣದಲ್ಲಿದ್ದಾಳೆ. ಡಿಸ್ಕ್ ಜಾಕಿಯಾಗಿ, ಬಾರ್ ನಲ್ಲಿ ಬಾರ್ ಗರ್ಲ್ ಆಗಿ, ಯಾವುದೋ ಹೋಟೆಲ್ ನಲ್ಲಿ ಅಡಿಗೆಯವಳಾಗಿ ಕೆಲಸ ಮಾಡುತ್ತಾ ಬದುಕು ಸಾಗಿಸುತ್ತಿದ್ದಾಳೆ. ಅವಳಿಗೆ ಮದುವೆಯಲ್ಲಿ ಆಸಕ್ತಿಯಿಲ್ಲ, ಆಕೆ ಸಲಿಂಗಿ. ಆದರೆ ಅದನ್ನು ಮನೆಯವರೆದುರಲ್ಲಿ ಹೇಳಲಾರಳು. ಮನೆಯವರು ಆಕೆ ಸಂಗೀತದ ಶಿಕ್ಷಕಿ ಎಂದುಕೊಂಡಿದ್ದಾರೆ. ಆಗಾಗ ಮದುವೆಗೆ ಗಂಡು ತೋರಿಸಲು ಇವಳನ್ನು ಊರಿಗೆ ಕರೆಯುತ್ತಿರುತ್ತಾರೆ, ಈಕೆ ಅವರ ಖುಷಿಗೆ ಹೋಗಿ ಬರುತ್ತಿರುತ್ತಾಳೆ.

ಲೈಲಾ ಮತ್ತು ಸಲ್ಮಾ ಒಂದು ಫ್ಲಾಟಿನಲ್ಲಿ ಇರುತ್ತಾರೆ. ಆ ಫ್ಲ್ಯಾಟಿನ ಮೂರನೆಯ ಕೋಣೆಗೆ ಬರುವ ಸಂಪ್ರದಾಯಸ್ಥ ಇಸ್ಲಾಂ ಹುಡುಗಿ ನೂರ್. ಅಡಿಯಿಂದ ಮುಡಿಯವರೆಗೂ ಹಿಜಾಬ್ ಧರಿಸಿ ಕಂಪ್ಯೂಟರ್ ಓದಲೆಂದು ಬರುವ ಹುಡುಗಿ ಅವಳು. ಅವಳ ಮದುವೆ ನಿಶ್ಚಯವಾಗಿದೆ. ಮದುವೆ ಆಗುವವರೆಗೂ ಓದು ಮುಂದುವರಿಸಲೆಂದು ನಗರಕ್ಕೆ ಬಂದಿದ್ದಾಳೆ.

ಚಿತ್ರದ ಆರಂಭದ ದೃಶ್ಯವೇ ಎರಡು ಅತಿಗಳನ್ನು ನಮ್ಮ ಮುಂದೆ ನಿಲ್ಲಿಸುತ್ತದೆ. ವಧುವನ್ನು ಮದುವೆಗೆ ಸಿದ್ಧಪಡಿಸುತ್ತಿರುವ ಒಬ್ಬ ಅಜ್ಜಿ ಗಂಡನನ್ನು ಹೇಗೆ ಸದಾ ಸಂತುಷ್ಟವಾಗಿರಿಸಬೇಕೆಂದು ಅವಳಿಗೆ ಹೇಳುತ್ತಿದ್ದಾಳೆ. ಆ ದೃಶ್ಯ ಕಟ್ ಆದರೆ ಅದು ಮದುಮಗನ ಬ್ಯಾಚಲರ್ ಪಾರ್ಟಿ. ಮದ್ಯ, ಸಿಗರೇಟ್, ಸಂಗೀತ, ನೃತ್ಯ ಎಲ್ಲವೂ ಇದೆ. ಅಲ್ಲಿ ಆತನ ಸ್ನೇಹಿತೆಯರೂ ಇದ್ದಾರೆ. ಈ ವೈರುಧ್ಯ ಕಣ್ಣಿಗೆ ಹೊಡೆದಂತೆ ಚಿತ್ರಿತವಾಗಿದೆ. ತನ್ನ ಸರಿಸಮವಾಗಿ ಆಧುನಿಕವಾಗಿರುವ ’ಸ್ನೇಹಿತೆಯನ್ನು’ ಇಷ್ಟ ಪಡುವ ಗಂಡು ಪತ್ನಿ ಮಾತ್ರ ಅಮ್ಮನ ಹಾಗೆಯೇ ಇರಬೇಕು ಎಂದು ಹುಡುಕುತ್ತಾನೆ. ಅಲ್ಲಿ ಆ ಮದುವೆಯ ಹೆಣ್ಣಿಗೆ ಸಾಂಪ್ರದಾಯಿಕತೆಯ ಪಾಠ, ಗಂಡನನ್ನು ಹೇಗೆ ತೃಪ್ತಿ ಪಡಿಸಬೇಕು ಎನ್ನುವ ಪಾಠ ಆಗುತ್ತಿದೆ.

ಆದರೆ ಗಂಡು ಪಾರ್ಟಿ ಮಾಡುತ್ತಿದ್ದಾನೆ. ಅವನಿಗೆ ಯಾವ ಸಮಾಜದಲ್ಲಿಯೂ, ಯಾರೂ ಹೆಣ್ಣನ್ನು ಹೇಗೆ ಖುಷಿಯಾಗಿ ನೋಡಿಕೊಳ್ಳಬೇಕು ಎಂದು ತಿಳಿಸುವುದಿಲ್ಲ. ಹೆಣ್ಣಿನ ದೇಹ, ಮನಸ್ಸು ಎಲ್ಲವೂ ಕೇವಲ ’ತನ್ನ’ ತೃಪ್ತಿಗಾಗಿ ಮಾತ್ರ ಇರುವುದು, ಅದಕ್ಕೆ ಸುಖ ಬಯಸುವ ಮತ್ತು ಪಡೆಯುವ ಹಕ್ಕಿಲ್ಲ ಎಂದು ಸಮಾಜ ತನ್ನ ಮೌನದಿಂದ ಅವನಿಗೆ ಹೇಳುತ್ತಿರುತ್ತದೆ. ಮದುಮಗನ ಆ ಪಾರ್ಟಿಯಲ್ಲಿ ಲೈಲಾ ಇದ್ದಾಳೆ, ಸಲ್ಮಾ ಪಾರ್ಟಿಯ ಡಿಜೆ.

ಅವರ ಮನೆಗೆ ಮೂರನೆಯ ರೂಮ್ ಮೇಟ್ ಆಗಿ ನೂರ್ ಬಂದಾಗ ಇಬ್ಬರಿಗೂ ಅಚ್ಚರಿ. ಆಧುನಿಕತೆಯೇ ಮೂರ್ತಿವೆತ್ತಂತಹ ಇವರು, ಬೇರೆಯದೇ ಲೋಕದಿಂದ ಬಂದಂತಿರುವ ಅವಳು. ಸಹಜವಾಗಿಯೇ ಅವರ ನಡುವೆ ಮೌಲ್ಯಗಳ ಘರ್ಷಣೆ, ಬದುಕುವ ರೀತಿಗಳ ನಡುವಿನ ಘರ್ಷಣೆ ಆಗುತ್ತಲೇ ಇರುತ್ತದೆ. ಆದರೆ ನಿಧಾನವಾಗಿ ಅವರ ನಡುವೆ ಒಂದು ಹೊಂದಾಣಿಕೆ ಪ್ರಾರಂಭವಾಗುತ್ತದೆ. ಅವರ ಧರ್ಮ ಭಿನ್ನ, ಹಿನ್ನಲೆ ಭಿನ್ನ, ಸ್ವಭಾವ ಭಿನ್ನ, ವಿದ್ಯಾಭ್ಯಾಸ ಭಿನ್ನ, ಆದರೆ ಈ ಎಲ್ಲಾ ’ಭಿನ್ನ’ಗಳ ನಡುವೆ ಅವರನ್ನು ಒಂದು ಎಳೆ ಸೇರಿಸುತ್ತದೆ. ಅದು ಕಾಣದ ಊರಿನಲ್ಲಿ, ಅಪರಿಚಿತರ ನಡುವೆ, ಒಂದು ಕಡೆ ವಾಸಿಸಬೇಕಾಗಿ ಬಂದಾಗ ಹೆಣ್ಣುಮಕ್ಕಳ ನಡುವೆ ಬೆಳೆಯುವ ಅವಲಂಬನೆ, ಸ್ನೇಹ, ಅನಿವಾರ್ಯ ಯಾವುದಾದರೂ ಆಗಬಹುದು.

ನೂರ್ ಳನ್ನು ಭೇಟಿ ಮಾಡಲು ಅವಳ ಭಾವಿ ಪತಿ ವಾಸಿಮ್ ಆಗಾಗ ಬರುತ್ತಿರುತ್ತಾನೆ. ಅವನನ್ನು ಭೇಟಿಯಾಗುವಾಗಲೂ ಸಹ ನೂರ್ ಹಿಜಾಬ್ ಧರಿಸಿ ಸಿದ್ಧವಾಗುತ್ತಾಳೆ. ಅವನಿಗೂ ಅದೇ ಪ್ರಿಯ. ಅವನಿಗೆ ಅವಳು ಯಾಕೆ ಓದಬೇಕು, ಕೆಲಸ ಮಾಡಬೇಕು ಎನ್ನುವ ಮನೋಭಾವ. ಧರ್ಮದ ವಾಕ್ಯಗಳ ಮೂಲಕವೇ ಅವಳನ್ನು ನಿಯಂತ್ರಿಸುತ್ತಿರುತ್ತಾನೆ. ಕಟ್ಟಾ ಸಂಪ್ರದಾಯವಾದಿ. ಅವಳ ಫ್ಲ್ಯಾಟ್ ನ ಸಹವಾಸಿಗಳ ಬಗ್ಗೆ ಕೇವಲವಾಗಿ ಮಾತನಾಡಿದಾಗ ನೂರ್ ಅದನ್ನು ಪ್ರತಿಭಟಿಸುತ್ತಾಳೆ. ಅವಳ ಆ ಸಣ್ಣ ಪ್ರತಿರೋಧವನ್ನೂ ಸಹಿಸದ ಅವನು ಅವಳ ಮೇಲೆ ಕೈ ಮಾಡುತ್ತಾನೆ. ಆ ಪಶು ಹುಮ್ಮಸ್ಸಿನಲ್ಲೇ ಅವಳ ಮೇಲೆ ಬಲಾತ್ಕಾರ ಮಾಡುತ್ತಾನೆ. ಒಲವಿನ ಮಾತುಗಳಿಲ್ಲದೆ, ಅನುನಯವಿಲ್ಲದೆ, ತನ್ನ ಒಪ್ಪಿಗೆ ಕೇಳದೆ ನಡೆದ ಈ ಕ್ರಿಯೆ ನೂರ್ ಳನ್ನು ಇನ್ನಿಲ್ಲದಂತೆ ಘಾಸಿಗೊಳಿಸುತ್ತದೆ.

ಅಳುತ್ತಾ ಕೂತ ಅವಳನ್ನು ಆನಂತರ ಫ್ಲ್ಯಾಟಿಗೆ ಬಂದ ಲೈಲಾ ಮತ್ತು ಸಲ್ಮಾ ಮಗುವಿನಂತೆ ಸಂತೈಸುತ್ತಾರೆ. ಅವಳನ್ನು ಸಮಾಧಾನ ಮಾಡಿ, ಸ್ನಾನ ಮಾಡಿಸಿ, ಕುಡಿಯಲು ಹಾಲು ಬಿಸಿ ಮಾಡಿಕೊಟ್ಟ ಮೇಲೆ ಅವರು ಆಡುವ ಮೊದಲ ಮಾತು, ’ಈಗ ನಾವು ಏನು ಮಾಡೋಣ?’. ಆ ಕ್ಷಣದಲ್ಲಿ ನೂರ್ ಳ ದುಃಖವನ್ನು ಅವರಿಬ್ಬರೂ ತಮ್ಮದಾಗಿಸಿಕೊಂಡು ಬಿಡುತ್ತಾರೆ.

ಗಂಡಿನಂತೆ ದುಡಿಯುವ, ಗಂಡಿನಂತೆ ಮಾತನಾಡುವ, ಗಂಡಿನಂತೆ ಮಾತನಾಡುವ ಲೈಲಾ, ಜ಼ಾಯೆದ್ ಎನ್ನುವ ಚಿತ್ರ ನಿರ್ಮಾಪಕನನ್ನು ಭೇಟಿ ಮಾಡುತ್ತಾಳೆ. ಅವನು ವಿದೇಶದಲ್ಲಿದ್ದು ಬಂದವನು. ತಾನು ಭಿನ್ನ ಮತ್ತು ಆಧುನಿಕ ಆಲೋಚನೆಗಳುಳ್ಳವ ಎಂದು ಹೇಳುತ್ತಾನೆ. ಲೈಲಾ ಅವನಿಗಾಗಿ ಹೆಣ್ಣಿನಂತೆ ಮಿಡಿಯುತ್ತಾಳೆ. ಅವನಿಗಾಗಿ ಅಡಿಗೆ ಮಾಡಲು ಪ್ರಯತ್ನಿಸುತ್ತಾಳೆ. ಅವಳ ಬಗ್ಗೆ ಎಲ್ಲಾ ತಿಳಿದ ಮೇಲೆಯೇ ಆತ ಅವಳೆದುರಲ್ಲಿ ಭವಿಷ್ಯದ ಕನಸುಗಳನ್ನು ಹರಡುತ್ತಾನೆ. ಗಂಡಿನಂತೆ ಯೋಚಿಸುವ ಈ ಹುಡುಗಿ ಅಪ್ಪಟ ಹೆಣ್ಣಿನಂತೆ ಅವನ ಮಾತುಗಳನ್ನು ನಂಬಿ ಕನಸು ಕಟ್ಟಲು ಪ್ರಾರಂಭಿಸುತ್ತಾಳೆ. ಆದರೆ ಇವಳೊಡನಿರುವಾಗ ಜಾಯೆದ್ ಬೇರೆ, ಆತ ತನ್ನ ಅಕ್ಕನ ಜೊತೆ ಇರುವಾಗ ಈಕೆ ಭೇಟಿ ಮಾಡುವ ಜಾಯೆದ್ ಬೇರೆ.

ತನ್ನ ಮನೆಗೆ ಬಂದವಳನ್ನು ’ಹೋಗಿ ಎಲ್ಲರಿಗೂ ಕಾಫಿ ಮಾಡಿಕೊಂಡು ಬಾ’ ಎಂದು ಆಜ್ಞಾಪಿಸುತ್ತಾನೆ. ಆಕೆ ಹೋಗಿ ಕಾಫಿ ಮಾಡುತ್ತಾಳೆ. ಅಲ್ಲಿಯವರೆಗೂ ಎಲ್ಲಾ ಸರಿಯಾಗಿರುತ್ತದೆ. ಆದರೆ ಕಾರಿನಲ್ಲಿ ಆತ, ’ನೀನು ಇನ್ನು ಮುಂದೆ ಸಿಗರೇಟು’ ನಿಲ್ಲಿಸಬೇಕು ಎನ್ನುತ್ತಾನೆ. ಅವಳಿಗೆ ಆಘಾತ, ಅದು ಕೇವಲ ಆತ ಸಿಗರೇಟು ನಿಲ್ಲಿಸು ಎಂದಿದ್ದಕ್ಕಲ್ಲ, ಅದರ ಬಗ್ಗೆ ಆಕೆಗೆ ಅಂತಹ ದೊಡ್ಡ ತಕರಾರೇನೂ ಇಲ್ಲ. ಆದರೆ ಅದು ಇಷ್ಟಕ್ಕೇ ನಿಲ್ಲುವುದೇ ಎನ್ನುವುದು ಅವಳ ಆತಂಕ. ಕಡೆಗೆ ಅವಳು ಅವನಿಗೆ ’ನಾನಿರುವುದು ಹೀಗೆ. ನನ್ನನ್ನು ಒಪ್ಪಿಕೊಳ್ಳಬೇಕಾದರೆ ಹೀಗೇ ಒಪ್ಪಿಕೊಳ್ಳಬೇಕು, ಈಗ ನನ್ನ ವ್ಯಕ್ತಿತ್ವವನ್ನೆಲ್ಲಾ ಬದಲಾಯಿಸಿಕೊಳ್ಳುವುದು ನನ್ನಿಂದಾಗದು’ ಎಂದು ಹೇಳಿಬಿಡುತ್ತಾಳೆ.

ಸಲ್ಮಾಳದು ಇನ್ನೊಂದು ಕಥೆ. ಆಕೆಗೆ ಒಬ್ಬ ಸಂಗಾತಿ ಸಿಕ್ಕಿದ್ದಾಳೆ. ಅವಳನ್ನು ಊರಿಗೂ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಅಕಸ್ಮಾತ್ತಾಗಿ ತಾಯಿಗೆ ಇವರಿಬ್ಬರ ವಿಷಯ ಗೊತ್ತಾಗುತ್ತದೆ. ಮೊದಲು ಆಕೆಯ ಸಂಗಾತಿಯನ್ನು ಮನೆಯಿಂದ ಹೊರಗಟ್ಟುತ್ತಾರೆ. ಆನಂತರ ತಂದೆ ಸಲ್ಮಾಳ ಕೆನ್ನೆಗೆ ಬಾರಿಸಿ ತಾನು ನೋಡಿದ ಗಂಡನ್ನು ಮದುವೆ ಆಗಬೇಕು ಎಂದು ಅಪ್ಪಣೆ ಮಾಡುತ್ತಾನೆ. ಮಗಳ ಬದುಕಿನ ಬಗ್ಗೆ ಅವಳೊಡನೆ ಚರ್ಚಿಸಲೂ ಆತ ಸಿದ್ಧನಿಲ್ಲ. ಅವನ ಆತಂಕವೆಲ್ಲಾ ಒಂದೆ, ಇನ್ನೇನು ತಾನು ಮುನಿಸಿಪಲ್ ಚುನಾವಣೆಗೆ ಸ್ಪರ್ಧಿಸಲಿದ್ದೇನೆ, ಅಕಸ್ಮಾತ್ ತನ್ನ ಮಗಳು ಸಲಿಂಗಿ ಎಂದು ಗೊತ್ತಾದರೆ ತನ್ನ ಚುನಾವಣೆಯ ಭವಿಷ್ಯ ಏನು ಎನ್ನುವುದು ಅವನ ಆತಂಕ. ಅದೇ ರಾತ್ರಿ ಸಲ್ಮಾ ಮನೆ ಬಿಟ್ಟು ಓಡಿಬರುತ್ತಾಳೆ.

ಈಗ ಅವರು ತಮ್ಮ ತಮ್ಮ ಜೀವನದ ಸಿಕ್ಕುಗಳನ್ನು ತಾವೇ ಬಿಡಿಸಿಕೊಳ್ಳಬೇಕು. ಪರಸ್ಪರ ಸಹಕಾರದಿಂದಲೇ ಅವುಗಳನ್ನು ಬಿಡಿಸಿಕೊಳ್ಳುತ್ತಾರೆ. ವಾಸಿಮ್ ನ ಬಾಯಲ್ಲೇ ಮದುವೆ ಬೇಡ ಎಂದು ಹೇಳಿಸುತ್ತಾರೆ. ಇಲ್ಲಿನ ತಮಾಷೆ ಗಮನಿಸಿ, ಆತ ಆಕೆಯನ್ನು ಪಶುವಿನಂತೆ ನಡೆಸಿಕೊಂಡಿದ್ದಾನೆ. ಆದರೆ ಆಕೆ ತನ್ನ ಮನೆಯವರಿಗೂ ಅದನ್ನು ಹೇಳಿ ಮದುವೆ ನಿರಾಕರಿಸುವಂತಿಲ್ಲ. ಅದನ್ನೂ ಗಂಡೇ ಮಾಡಬೇಕು. ಈ ಇಡೀ ವ್ಯವಸ್ಥೆಯೇ ಎಷ್ತು ಕ್ರೂರಿ ಅನ್ನಿಸುತ್ತದೆ.

ಚಿತ್ರದ ಕಡೆಯಲ್ಲಿ ಜ಼ಾಯೆದ್ ಲೈಲಾಳನ್ನು ಹುಡುಕಿಕೊಂಡು ಮತ್ತೆ ಬರುತ್ತಾನೆ. ಸಾಧಾರಣವಾಗಿ ಇಂತಹ ಸಂದರ್ಭದಲ್ಲಿ ಎಲ್ಲಾ ’ಜಾಣ’ ಹೆಣ್ಣುಮಕ್ಕಳೂ ಎಡವುತ್ತಾರೆ. ಬಹುಶಃ ಅವರ ಜಾಣತನವೇ ಅವರಿಗೆ ಮುಳುವಾಗುತ್ತದೆ. ತಮ್ಮ ಜಾಣ್ಮೆಯ ಮೇಲೆ ಅವರಿಗೆ ಎಂತಹ ನಂಬಿಕೆ ಎಂದರೆ ಈತನನ್ನು ತಾವು ಸುಧಾರಿಸಬಲ್ಲೆವು ಎಂದುಕೊಂಡೇ ಆತನನ್ನು ಮತ್ತೊಮ್ಮೆ ಕ್ಷಮಿಸುತ್ತಾರೆ, ಮತ್ತೊಮ್ಮೆ ಒಪ್ಪಿಕೊಳ್ಳುತ್ತಾರೆ, ಮತ್ತೊಂದು ನಿರಾಕರಣೆಗೆ ಸಿದ್ಧವಾಗುತ್ತಾರೆ.

ಆದರೆ ಇಲ್ಲಿ ಲೈಲಾ ಅವನನ್ನು ಒಂದೇ ಪ್ರಶ್ನೆ ಕೇಳುತ್ತಾಳೆ, ’ಹಾಗಾದರೆ ಈಗ ನನ್ನನ್ನು ನಿನ್ನ ಮನೆಯವರಿಗೆ ಪರಿಚಯಿಸುವೆಯಾ?’, ಅವನ ಉತ್ತರ ಮೌನ. ಕಣ್ಣುಗಳಲ್ಲಿ ನೀರು ತುಂಬಿಕೊಂಡ ಅವಳು ಅವನನ್ನು ಕಾರಿನಿಂದ ಇಳಿಯಲು ಹೇಳುತ್ತಾಳೆ.

ಕಡೆಯ ದೃಶ್ಯ ಬಹಳ ಅರ್ಥಪೂರ್ಣವಾಗಿದೆ. ಅವರ ಮನೆಯಲ್ಲಿ ಇನ್ನೊಂದು ಪಾರ್ಟಿ ನಡೆಯುತ್ತಿದೆ. ಎಲ್ಲಾ ಸದ್ದು ಗದ್ದಲ ಬಿಟ್ಟು ಈ ಮೂವರೂ ಬಾಲ್ಕನಿಗೆ ಬಂದು, ಒಬ್ಬರನ್ನೊಬ್ಬರು ಒತ್ತಿಕೊಂಡು ನಿಲ್ಲುತ್ತಾರೆ. ಅವರ ಒಂದು ಕಡೆ ಜೋರು ಗದ್ದಲ, ಇನ್ನೊಂದೆಡೆ ಕಡುಕಪ್ಪು ರಾತ್ರಿ, ನಡುವೆ ಪರಸ್ಪರರನ್ನು ನಂಬಿ ನಿಂತ ಈ ಮೂರು ಹೆಣ್ಣುಮಕ್ಕಳು. ಅವರು ನಿನ್ನೆಗಳನ್ನು ಒಪ್ಪಿಕೊಳ್ಳಲಾರರು, ನಾಳೆಗಳು ಇನ್ನೂ ಅವರಿಗೆ ಸಿದ್ಧವಾಗಿಲ್ಲ. ಎರಡೂ ದಡಗಳ ನಡುವೆ ತುಯ್ಯುವ ಕಡಲಂತೆ ಇವರು.

ನಿರ್ದೇಶಕಿ Maysaloun Hamoud

ಈ ಚಿತ್ರದಲ್ಲಿ ಹಿನ್ನಲೆ ಸಂಗೀತ ಮತ್ತು ಛಾಯಾಗ್ರಹಣ ಎರಡೂ ವಿಶಿಷ್ಟವಾಗಿದೆ. ಹಿನ್ನಲೆ ಸಂಗೀತ ಬಳಕೆ ಆಗುವುದು ದೃಶ್ಯದಲ್ಲಿ ಸಂಗೀತದ, ಪಾರ್ಟಿಯ ದೃಶ್ಯಗಳು ಬಂದಾಗ ಮಾತ್ರ, ಮಿಕ್ಕಂತೆ ಸಂಭಾಷಣೆಗಳು ಸಂಗೀತವಿಲ್ಲದೆಯೇ ಅನುಸಂಧಾನಗೊಳ್ಳಲ್ಪಡುತ್ತವೆ. ಆ ಅನುಭವವೇ ಹೊಸತು ಅನ್ನಿಸುತ್ತದೆ. ಇನ್ನು ಛಾಯಾಗ್ರಹಣ ಸಹ ಅಷ್ಟೇ, ಹಳ್ಳಿಯ ಬದುಕನ್ನು ಮಂಕಾದ ಬಣ್ಣಗಳು, ಇಕ್ಕಟ್ಟಾದ ಫ್ರೇಂಗಳು, ಅದಕ್ಕೆ ವಿರುದ್ಧವಾಗಿ ನಗರದ ಗಾಢಬಣ್ಣಗಳ ಬದುಕು, ವಿಶಾಲವಾದ ಕ್ಯಾಮೆರಾ ಫ್ರೇಂಗಳು ಎರಡೂ ಜಗತ್ತುಗಳ ಭಿನ್ನತೆಯನ್ನು ಕಟ್ಟಿಕೊಡುತ್ತವೆ. ಅಭಿನಯದ ಬಗ್ಗೆ ಹೇಳುವುದಾದರೆ ಪ್ರತಿಯೊಂದು ಪಾತ್ರಧಾರಿಯೂ ತನ್ನ ಪಾತ್ರವನ್ನು ಅತ್ಯಂತ ಸಹಜವಾಗಿ, ಯಾವುದೇ ಮೆಲೋಡ್ರಾಮಾ ಇಲ್ಲದೆ ಕಟ್ಟಿಕೊಟ್ಟಿದ್ದಾರೆ.

ಚಿತ್ರದ ಬಗ್ಗೆ ತೆಗೆಯಬಹುದಾದ ಒಂದು ತಕರಾರೆಂದರೆ ನಿರ್ದೇಶಕಿ ಕೆಲವು ಕಡೆ ಅನುಕೂಲಕ್ಕಾಗಿ ಚಿತ್ರವನ್ನು ಸರಳೀಕರಿಸಿದ್ದಾರೆ ಎನ್ನುವುದು. ಹಳ್ಳಿ ಮತ್ತು ಪಟ್ಟಣಗಳ ಸಿದ್ಧ ಮಾದರಿಗಳನ್ನು ಇವರು ತೆಗೆದುಕೊಂಡಿದ್ದಾರೆಯೇ ಹೊರತು, ಎರಡರಲ್ಲೂ ಇರಬಹುದಾದ ಪದರಗಳನ್ನು ತರುವುದಕ್ಕೆ ನಿರ್ದೇಶಕಿಯ ಕೈಲಾಗಿಲ್ಲ.

ಚಿತ್ರದಲ್ಲಿನ ಗಂಡಸರ ಬಗ್ಗೆ ಸಹ ಇದೇ ಮಾತನ್ನು ಹೇಳಬಹುದು. ಲೈಲಾ ಮತ್ತು ನೂರ್ ರ ಸಂಗಾತಿಗಳನ್ನು ಕಪ್ಪು ಪಾತ್ರಗಳಾಗಿ ಚಿತ್ರಿಸುವ ಮೂಲಕ ಅವರನ್ನು ನಿರಾಕರಿಸುವ ಸುಲಭೋಪಾಯವನ್ನು ಕಂಡುಕೊಂಡಿದ್ದಾರೆ. ಆದರೆ ವಾಸ್ತವ ಜಗತ್ತಿನಲ್ಲಿ ಹೀಗಿರುವುದಿಲ್ಲ. ಹೀಗಿರುವುದಿಲ್ಲ ಎಂದಾಗಲೇ ನಿರ್ಧಾರ ಕಠಿಣವಾಗುತ್ತದೆ, ಸಂಘರ್ಷ ಏರ್ಪಡುತ್ತದೆ. ಆ ಸಂಘರ್ಷವನ್ನು ತರಲು ಸಾಧ್ಯವಾಗಿದ್ದಿದ್ದರೆ ಇದು ಇನ್ನೂ ಒಳ್ಳೆಯ ಚಿತ್ರವಾಗುತ್ತಿತ್ತು ಅನ್ನಿಸಿದರೂ, ಚಿತ್ರ ತನ್ನ ದಿಟ್ಟತನದಿಂದ ಗಮನ ಸೆಳೆಯುತ್ತದೆ.

11 Comments

 1. Anonymous
  May 20, 2017
 2. Hanamantha haligeri
  May 20, 2017
  • ಸಂಧ್ಯಾರಾಣಿ
   May 20, 2017
 3. Renuka
  May 20, 2017
  • ಸಂಧ್ಯಾರಾಣಿ
   May 20, 2017
 4. K.Nalla Tambi
  May 20, 2017
  • ಸಂಧ್ಯಾರಾಣಿ
   May 20, 2017
 5. Balu
  May 20, 2017
  • ಸಂಧ್ಯಾರಾಣಿ
   May 20, 2017
 6. ಭಾರತಿ ಬಿ ವಿ
  May 20, 2017
  • ಸಂಧ್ಯಾರಾಣಿ
   May 20, 2017

Add Comment

Leave a Reply