Quantcast

VFX ಗಳಿಲ್ಲದ ವಿಷ್ಯುಯಲ್ ಟ್ರೀಟ್- ವಾಲಿವಧೆ

ಶಿವಕುಮಾರ್ ಮಾವಲಿ

“ಮಸೆಯದಿರ್ ನೆನಪಿನ ಸಾಣೆಯೊಳ್ ಒಲವನ್ ” ಎಂದು ವಾಲಿ ತನ್ನ ಪತ್ನಿ ತಾರೆಯನ್ನು ಬೇಡಿಕೊಳ್ಳುತ್ತಾನೆ.

ತಮ್ಮ ಭ್ರಾತೃತ್ವವನ್ನು ಸಂಪೂರ್ಣ ಮರೆತು ಹಗೆತನಕ್ಕೆ ತುತ್ತಾದ ವಾಲಿ-ಸುಗ್ರೀವರ ನಡುವಿನ ಸಮರಕ್ಕೆ ಶ್ರೀರಾಮನ ಪ್ರವೇಶ ಬೇರೆ ಆಗಿದೆ. ವಾಲಿ ತನ್ನ ಸಹೋದರನ ಮೇಲಿನ ದ್ವೇಷಕ್ಕಾಗಿ ಅವನ ಪತ್ನಿ ಉಮೆ ಯನ್ನು ಬಂಧನದಲ್ಲಿಟ್ಟಿದ್ದಾನೆ. ಶ್ರೀರಾಮನ ಸಹಾಯದಿಂದ ವಾಲಿಯನ್ನು ಸಂಹರಿಸಿಯೆ ತೀರುತ್ತೇನೆಂದು ಸುಗ್ರೀವ ಹೊರಟು ನಿಂತಿದ್ದಾನೆ. ಪರಾಕ್ರಮಿ ವಾಲಿಯೂ ಅವನ ಆಹ್ವಾನದಿಂದ ಕನಲಿದ್ದಾನೆ. ಸುಗ್ರೀವನನ್ನು ಮುಗಿಸಿಬಿಡುತ್ತೇನೆ ಎಂದು ಹೊರಡಲಣಿಯಾಗುತ್ತಿರುವ ವಾಲಿಯನ್ನು ಕುರಿತು ಆತನ ಪತ್ನಿ ತಾರೆ “ನೆನೆ ನಿಮ್ಮ ಬಾಲ್ಯದ ದಿನಗಳ ” ಎಂದು ಅವರಿಬ್ಬರ ಭ್ರಾತೃತ್ವದ ಘಳಿಗೆಗಳನ್ನು ನೆನಪಿಸುತ್ತಾಳೆ.

ತಮ್ಮನನ್ನು ಬೆನ್ನ ಮೇಲೆ ಹೊತ್ತು ” ಉಪ್ಪು ಬೇಕೆ ಉಪ್ಪು” ಎಂದು ಹಾಡಿದ, ಆಡಿದ ದಿನಗಳನ್ನು ನೆನಪಿಸುತ್ತಾಳೆ. ವಾಲಿ ತನ್ನ ತಮ್ಮನೊಡನಾಡಿದ ಸುಂದರ ಕ್ಷಣಗಳ ನೆನಪಿನಲ್ಲಿ ವೈರತ್ವವನ್ನು ಮರೆಯಲು ತಯಾರಾಗುತ್ತಾನೆ. ಎಷ್ಟು ಸುಂದರ ಅಲ್ಲವೆ ಹೀಗೆ ಹಳೆಯ ಸಂತಸದ ಕ್ಷಣಗಳ ನೆನಪು ಈಗಿನ ದ್ವೇಷ, ಅಸೂಯೆ, ಹಗೆತನಗಳನ್ನು ಇಲ್ಲವಾಗಿಸಿಬಿಡುತ್ತದೆ ಎಂದಾದರೆ ಕೇವಲ ಆಸ್ತಿ, ಸಂಪತ್ತು, ಅಧಿಕಾರ ಗಳಿಗಾಗಿ ಶತ್ರುಗಳಾದ ಅದೆಷ್ಟೋ ಸಹೋದರ ಸಂತೋಷವನ್ನು ಮರುಸ್ಥಾಪಿಸಲು ಇದೊಂದೇ ನೆಪ ಸಾಕಲ್ಲವೆ ಎಂದೆನ್ನಿಸಿತು.

‘ಸಿಜಿಕೆ ರಾಷ್ಟ್ರೀಯ ನಾಟಕೋತ್ಸವ’ದಲ್ಲಿ ಹಾವೇರಿ ಸಮೀಪದ ಶೇಷಗಿರಿಯ ಗಜಾನನ ಯುವಕ ಮಂಡಳಿಯವರು ಅಭಿನಯಿಸಿದ “ವಾಲಿವಧೆ” ನಾಟಕದಲ್ಲಿ ಇಂತಹ ಒಂದು ಹೊಸ ಹೊಳಹು ಹುಟ್ಟಿಸಿದ್ದು ಕುವೆಂಪು ಅವರ ರಾಮಾಯಣದ ಆಯ್ದ ಭಾಗ. ಒಂದೂ ವರೆ ತಾಸು ರಂಗಮಂಚದಮೇಲೆ ಯಕ್ಷಗಾನ , ನೃತ್ಯ ಮತ್ತು ಸಂಗೀತಗಳ ಮಿಶ್ರಣದಿಂದ ಮನೋಜ್ಞವಾಗಿ ಅಭಿನಯಿಸಿದ ಈ ಕಲಾವಿದರು ವೃತ್ತಿಯಿಂದ ಕೃಷಿಕರು ಮತ್ತು ಕೂಲಿ ಕಾರ್ಮಿಕರು ಎಂದು ತಿಳಿದಾಗ ಅಭಿಮಾನ ಇನ್ನೂ ಹೆಚ್ಚಾಯಿತು. ಕುವೆಂಪು ಅವರ ಸೃಷ್ಟಿಯಲ್ಲಿ ರಾಮಾಯಣದ ಪ್ರತಿಯೊಂದು ಪಾತ್ರಗಳು ” ಜೀರ್ಣೋದ್ಧಾರ ” ಕಾಣುತ್ತವೆ. ಹಾಗೆಯೇ ಶ್ರೇಷ್ಠ ಪಾತ್ರಗಳ ಸಾಮಾನ್ಯತೆಯೂ ಜಗಜ್ಜಾಹೀರಾಗುತ್ತದೆ.

ಇಲ್ಲಿಯೂ ಅಷ್ಟೇ, ಪರಿವರ್ತನೆಗೊಂಡ ಪಾಪಿಯನ್ನು ಬೆನ್ನಿಗೆ ಬಾಣ ಬಿಟ್ಟು ಸಂಹರಿಸುವ ಪರಾಕ್ರಮಿಯೂ ಇದ್ದಾನೆ. ಮತ್ತೆ ‘ ಗಟ್ಟಿಯೆಂದರಿತುದೆಲ್ಲ ಜೊಳ್ಳು ಮೇಣ್ ಜೊಳ್ಳೇ ಗಟ್ಟಿ ‘ ಎಂದು ಅರಿತುಕೊಳ್ಳುವ ವಾನರನೂ ಇದ್ದಾನೆ.

ಅಬ್ಬಾ ಅದೆಂಥ ಅಭಿನಯ ಅನ್ನಬೇಕು ನೀವು. ಮನಸೂರೆಗೊಳ್ಳುವ ಸಂಗೀತದೊಂದಿಗೆ ಇವರು ರಂಗದಮೇಲೆ ಎಂಬತ್ತು ನಿಮಿಷಗಳ ಕಾಲ ಮಹಾಕಾವ್ಯ ವೊಂದರ ದೃಶ್ಯಕಾವ್ಯವನ್ನೇ ಸೃಷ್ಟಿಸಿದ್ದರು. ಆ ನಟರನ್ನು ಹಾಗೆ ಪಳಗಿಸಿದ ನಿರ್ದೇಶಕರಿಗೊಂದು ಸಲಾಮ್.

ದೂರದೂರಿನಲ್ಲಿ ಕಛೇರಿಯ ಕಡತಗಳಲ್ಲೋ, ನ್ಯೂಕ್ಲಿಯರ್ ಫ್ಯಾಮಿಲಿಯ ಪ್ರಯಾರಿಟಿಗಳಲ್ಲೋ, ಮಾಲ್ ಗಳಲ್ಲೋ, ಕ್ಲಬ್ಬು, ಪಬ್ಬು ಗಳಲ್ಲೋ, ರಿಯಾಲಿಟಿ ಷೋಗಳಲ್ಲೋ, ನೈಡ್ ಶಿಫ್ಟ್ ಗಳಲ್ಲೋ, ಟ್ರಾಫಿಕ್ ಜಾಮ್ ಗಳಲ್ಲೋ, ಫೈನಾನ್ಸ್ ಕಂಪೆನಿಗಳಿಗೆ ಈಎಮ್ಐ ಕಟ್ಟುವುದರಲ್ಲಿಯೋ, ಪತಿ ಅಥವಾ ಪತ್ನಿಯ ವಾಂಛೆಗಳನ್ನು ವಂಡರ್ ಕಣ್ಣುಗಳಿಂದ ನೋಡುತ್ತ ಅಸಾಹಯಕರಾದಾಗಲೋ, ತನಗಾಗಿ ಸಣ್ಣ ತ್ಯಾಗ ಮಾಡಿದ ಸಹೋದರ, ಸಹೋದರಿಯ ಮನೆಯ

bharath

ಹಾದಿಯನ್ನೇ ಮರೆತು ಕೃತಘ್ನ ನಾದಗಲೋ ನಮ್ಮೆಲ್ಲರನ್ನೂ ಮತ್ತೆ ಮತ್ತೆ ಮನುಷ್ಯರನ್ನಾಗಿಸುವ ಶಕ್ತಿ ಈ ” ಉಪ್ಪು ಬೇಕೆ ಉಪ್ಪು …” ಹಾಡಿಗಿದೆ. ನಿಮ್ಮನ್ನು ಬೆನ್ನ ಮೇಲೆ ಹೊತ್ತು ‘ಉಪ್ಪು ಬೇಕೆ ಉಪ್ಪು …ಅಥವಾ ‘ಆನೆ ಬಂತೊಂದಾನೆ ‘ ಎಂದು ಹಾಡಿದ ನಿಮ್ಮ ಅಣ್ಣ, ಅಕ್ಕ,ಅಪ್ಪ, ಅಮ್ಮ, ,ಯಾರೋ ಒಬ್ಬರು ನೆನಪಾದರೆ ಸಾಕು ಬರಗಾಲದಂತಿರುವ ನಮ್ಮಗಳ ಮನೋಭೂಮಿಕೆಗಳಿಗೆ ಮಳೆ ಹನಿಯ ಸಿಂಚನವಾದಂತಾಗುತ್ತದೆ. ಆಗ ಅಲ್ಲಿ ಪ್ರೀತಿ ,ಪ್ರೇಮಗಳ ಫಸಲು ಹದವಾಗಿ ಬೆಳೆಯಬಹುದು.

ಒಂದು ಕಲೆ ಅದು ಯಾವುದೇ ಪ್ರಕಾರದ್ದಾಗಿರಲಿ, ಅದು ರಂಜನೆಯ ಜೊತೆಗೆ ನಮ್ಮ ಭಾವಕೋಶವನ್ನೂ ಪ್ರವೇಶಿಸಿದರೆ ಮಾತ್ರ ಅದು ಶ್ರೇಷ್ಠದ್ದು ,ಅದಕ್ಕೆ ಇನ್ನೂರೋ, ಮುನ್ನೂರೋ ಕೋಟಿಯನ್ನೇ ಖರ್ಚು ಮಾಡಬೇಕೆಂದಿಲ್ಲ. ಕೇವಲ ದೃಶ್ಯ ವೈಭವ ಬಹುಕಾಲ ಉಳಿಯುವುದಿಲ್ಲ. ಅದರೊಂದಿಗೆ ನಮ್ಮ ಮನಸ್ಸನ್ನು ನಾಟುವ ಕಥಾವಸ್ತು ಇರಲೇಬೇಕು. ಆ ನಿಟ್ಟಿನಲ್ಲಿಯೂ ‘ವಾಲಿವಧೆ ‘ ಎಂಬುದು ಯಾವುದೇ VFX ಗಳನ್ನು ಬಳಸದ ಇಂದು ವಿಷ್ಯುಯಲ್ ಟ್ರೀಟ್ ಎಂದೇ ಹೇಳಬಹುದು.

ಅಂದಹಾಗೆ ,ನೀವು ಯಾರ ಬೆನ್ನ ಮೇಲೆ ‘ಉಪ್ಪಿನ ಮೂಟೆಯಾಗಿದ್ದಿರಿ ನೆನಪುಂಟೆ ?

One Response

  1. ಭಾರತಿ ಬಿ ವಿ
    May 20, 2017

Add Comment

Leave a Reply