Quantcast

ನಮಸ್ಕಾರಗಳು. ಅಮ್ಮಾ..

ಇದು ವಿಶಿಷ್ಟವಾದ ಬರಹ. ಬರೆದವರು ಶೋಭಾ ಗುನ್ನಾಪೂರ. ಇವರು ಓದಿದ್ದು ೯ನೆಯ ತರಗತಿಯವರೆಗೆ ಮಾತ್ರ.  ವಿಜಯಪುರದ ಇಂಡಿ ತಾಲೂಕಿನ ಹಿರೇಮಸಳಿಯವರು.

‘ಅವಧಿ’ಯ ಓದುಗರಾದ ಅನಿಲ್ ಗುನ್ನಾಪೂರ ಅವರ ತಾಯಿ. 

ಡಾ.ವಿಜಯಾ ಅವರ  “ಕುದಿ ಎಸರು” ಆತ್ಮಕಥೆ ಓದಿದ ಮೇಲೆ ಅವರು ಇದನ್ನು ಬರೆದು ಕಳಿಸಿದ್ದಾರೆ. 

ಕುದಿ ಎಸರು” ಆತ್ಮಕಥನ ಬರೆದ ವಿಜಯಮ್ಮನವರಿಗೆ ನಿಮಗೆ ಮೊದಲು ತುಂಬಾ ತುಂಬಾ ನಮಸ್ಕಾರಗಳನ್ನು ಹೇಳುತ್ತೇನೆ.

ಅಮ್ಮನವರೇ, ನಿಮ್ಮ ಆತ್ಮಕಥೆಯನ್ನು ನಾಲ್ಕೈದು ದಿನ ಬಿಡದೇ ಬೇಗ ಬೇಗ ಮನೆಗೆಲಸ ಮುಗಿಸಿ ಮಧ್ಯಾಹ್ನದ ವೇಳೆಯಲ್ಲಿ ಓದಿ ಮುಗಿಸಿದೆ.

ಓದುತ್ತಾ ಓದುತ್ತಾ ಹೋದ ಹಾಗೆ ಅಮ್ಮ ನಿಮ್ಮ ಬಾಲ್ಯದ ದಿನಗಳು, ಚಿಕ್ಕವರಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಅಜ್ಜ, ಅಪ್ಪ ಮತ್ತು ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದು ಅಜ್ಜನ ಪ್ರೀತಿಯ ಮೊಮ್ಮಗಳಾಗಿ , ತಂದೆಯ ಪ್ರೀತಿಯ ಮಗಳಾಗಿ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದ ನೀವು… ಮತ್ತೂ ನಿಮ್ಮ ಒಡಹುಟ್ಟಿದ ತಮ್ಮಂದಿರು ಹುಟ್ಟಿದ ಸ್ವಲ್ಪೇ ದಿನದಲ್ಲಿ ಏನೋ ಕಾಯಿಲಿಗೆ ತುತ್ತಾಗಿ ಸತ್ತಿದ್ದು. ಬಡತನದ ಬೇಗೆಯಲ್ಲಿಯೂ ನಿಮ್ಮನ್ನು ಪ್ರೀತಿಯಿಂದ ಸಾಕಿದ್ದು ನಿಮ್ಮ ಅಜ್ಜ.

ಅಮ್ಮನವರೇ, ನಿಮ್ಮ ತಂದೆತಾಯಿಯವರಲ್ಲಿ ಯಾವಾಗಲೂ ವಿರಸ, ತಂದೆಯವರು ಯಾವುದೋ ಚಟಕ್ಕೆ ಅಂಟಿಕೊಂಡು ತಾಯಿಯ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಿದ ಸಲುವಾಗಿ ಬೇಗ ತಾಯಿಯವರನ್ನು ಕಳೆದುಕೊಂಡು ತಬ್ಬಲಿಯಾಗಿ ಅಜ್ಜ, ಅಪ್ಪ, ಮತ್ತು ಚಿಕ್ಕಪ್ಪ ಆಶ್ರಯದಲ್ಲಿ ಬೆಳೆದದ್ದು ಓದಿ ಬಹಳ ವೇದನೆ ಆಯಿತು.

ಮುಂದೆ ನಿಮ್ಮ ಜೀವನದಲ್ಲಿ ಏನು ನಡೆಯುತ್ತೆ ಎಂಬ ಕುತೂಹಲ ಹೆಚ್ಚುತ್ತಾ ಹೋಯಿತು. ಅಮ್ಮಾ ನಿಮ್ಮ ಜೀವನದಲ್ಲಿ ನಡೆದ ನರಕ ಯಾತನೆಗಳು ಕೇಳಿ ಕೈಕಾಲುಗಳು ನಡುಗಿ ಹೋದವು. ಎದೆಬಡಿತ ಹೆಚ್ಚಾಯಿತು. ಕಣ್ಣುಗಳು ಮಂಜಾದವು. ಇನ್ನೇನು ಮುತ್ತಿನ ಹಾಗೆ ಕಣ್ಣೀರು ಜಾರಿ ಬೀಳಬೇಕು ಎನ್ನುವಷ್ಟರಲ್ಲಿ ಮತ್ತೆ ಎಚ್ಚರವಾಗಿ ವಾಸ್ತವಕ್ಕೆ ಬಂದು ಓದುತ್ತಿದ್ದೆ. ಓದುತ್ತಾ ಓದುತ್ತಾ ಇಡೀ ನಿಮ್ಮ ಜೀವನ ಚಿತ್ರಣದೊಂದಿಗೆ ಮುಖಾಮುಖಿ ಆದಂತಾಯಿತು.

ಅಮ್ಮಾ, ನಿಮ್ಮ ಜೀವನದಲ್ಲಿ ನಡೆದಿರುವ ಎಲ್ಲ ಘಟನೆಗಳು ಮುಚ್ಚುಮರೆಯಿಲ್ಲದೆ ಬರೆದಿರುವಿರಿ. ಕೆಲವೊಮ್ಮೆ ಓದುಗರಿಗೆ ಮುಜುಗರ ತರುತ್ತದೆ. ಅದು ಅಲ್ಲದೆ ಎಷ್ಟೋ ಹೆಣ್ಣುಮಕ್ಕಳು ಈ ನರಕಯಾತನೆ ಅನುಭವಿಸಿರುತ್ತಾರೆ. ಮತ್ತೂ ನಮ್ಮ “ಪಾಲಿಗೆ ಬಂದಿದ್ದು ಪಂಚಾಮೃತ” ಎನ್ನುತ್ತಾ ಬಾಳುತ್ತಿದ್ದಾರೆ. ಈಗಿನ ಕಾಲಕ್ಕಿಂತಲೂ ಹಿಂದಿನ ಕಾಲದಲ್ಲಿ ನಮ್ಮ ಮಹಿಳೆಯರು ಕಷ್ಟದ ಮಡುವಿನಲ್ಲಿ ತೇಲಿಹೋಗಿದ್ದಾರೆ.

ಗಂಡನೆಂಬ ಪ್ರಾಣಿಯ ಬಲೆಯಲ್ಲಿ ಬಿದ್ದು ಆತ ನೀಡೀದ ಎಲ್ಲ ಚಿತ್ರಹಿಂಸೆಯನ್ನು ಸಹಿಸಿಕೊಂಡು ಗಂಡನ ಮನೆಯೇ ಸರ್ವಸ್ವವೆಂದು ಬದುಕಿದ್ದಾರೆ. ಬಹಳೇ ಸಹಿಸಿಕೊಳ್ಳಲು ಆಗದಿದ್ದರೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊದಲೇ ಹಿಂದಿನ ಕಾಲದಲ್ಲಿ ಶಾಲೆ ಕಲಿಯದ ಜನ ತಮ್ಮ ನೋವುಗಳನ್ನು ಯಾರ ಎದುರಲ್ಲಿಯೂ ಹೇಳಿಕೊಳ್ಳಲಾಗದೆ ಮನಸ್ಸಿನಲ್ಲೇ ಕೊರಗಿ ಕೊರಗಿ ಸತ್ತಿದ್ದಾರೆಂಬುದು ಎಷ್ಟೋ ಜನರ ಬಾಯಲ್ಲಿಯೂ ಕೇಳಿದ್ದೆ.

ಅಮ್ಮಾ ಆದರೆ, ನಿಮ್ಮ ಆತ್ಮಕಥೆ ಓದುತ್ತಿದ್ದಾಗ ಇಂತಹ ಗಂಡಸರು ಇರುತ್ತಾರೆಯೇ? ಹೆಣ್ಣು ಬರೀ ಹೇರುವ ಯಂತ್ರವೆಂದೆ? ಇಲ್ಲ ಸುಖ ನೀಡುವ ಗೊಂಬೆಯೇ? ಜೀವಂತ ಶವದಂತೆ ನೋಡುವ ಈ ಕಲ್ಲು ಮನಸ್ಸಿನವರಿಗೆ ಏನೆನ್ನಬೇಕು. ಇಂತಹವರನ್ನು ಪಾಠ ಕಲಿಸಲು ಒಬ್ಬ ಹೆಣ್ಣುಮಗಳು ಗಟ್ಟಿ ಧೈರ್ಯ ಮಾಡಿ ನಿಲ್ಲಬೇಕು. ಆಗ ಎಲ್ಲರೂ ಸಣ್ಣಗೆ ಎಚ್ಚರರಾಗಿತ್ತಾರೆ ಇಲ್ಲವಾದರೆ ನಾವು ಪಡೆದು ಬಂದಿದ್ದೆ ಇಷ್ಟು ಎಂಬಂತೆ ದುಃಖ ಅನುಭವಸಿ ಸಾಯುತ್ತಾರೆ.

ಅಮ್ಮಾ ನೀವು ಅನುಭವಿಸಿದ ಕರಾಳ ರಾತ್ರಿಗಳು ಒಂದು ದಿನವಲ್ಲ, ಎರಡು ದಿನವಲ್ಲ, ಎರಡು ಮಕ್ಕಳು ಹೆತ್ತು ಅವರಿಗೆ ಏಳೆಂಟು ವರ್ಷ ಆಗುವ ತನಕ ಗಂಡ ಎಂಬ ರಾಕ್ಷಸನ ಕೈಯಲ್ಲಿ ಅದು ಹೇಗೆ ಕಳೆದಿರುವಿರೊ? ಗೊತ್ತಿಲ್ಲ. ಆ ಪುಟಗಳು ಓದುತ್ತಿದ್ದಂತೆ ನನಗೆ ಬಹಳ ವೇದನೆ ಆಯಿತು.

ಮತ್ತೆ ನೀವು ಹೇಳುತ್ತೀರಿ. ರಾತ್ರಿಯೊಂದು ಬಿಟ್ಟರೆ ಒಳ್ಳೆಯ ಮನುಷ್ಯನೆಂದು ಅದು ನನ್ನ ದೃಷ್ಟಿಯಲ್ಲಿ ಮನುಷ್ಯ ಆಕಾರದ ರಾಕ್ಷಸನೇ ಇರಬೇಕು ಅನಿಸುತ್ತದೆ.

ಅಮ್ಮನವರೇ , ನಿಮ್ಮ ತುಂಬಿದ ಮನೆಯಲ್ಲಿ ಅತ್ತೆ, ಮಾವ,  ಗಂಡ,  ಮೈದುನ ಮತ್ತು ಅಜ್ಜಿ, ಮಕ್ಕಳು ಇವರನ್ನೆಲ್ಲ ಅನುಸರಿಕೊಂಡು ಇವರ ಪ್ರೀತಿಗೆ ಪಾತ್ರರಾದಿರಿ. ಆದರೆ, ಎಲ್ಲವನ್ನೂ ಅನುಸರಿಕೊಂಡು ಹೋದರು ಗಂಡನೆಂಬ ರಾಕ್ಷಸನ ಕೈಯಲ್ಲಿ ಮತ್ತೆ ರಾತ್ರಿ ಅದೇ ನೋವುಗಳು ಅನುಭವಿಸಿದಿರಿ. ಮಕ್ಕಳ ಬೇಡವೆಂದು ಗಂಡ ಗರ್ಭಕೋಶದಲ್ಲಿ ಕೈ ಹಾಕಿ ತಗೆದ ಆ ರಕ್ತಪಿಂಡ ಒಂದು ಸಲ ಅಲ್ಲ, ಎರಡು ಸಲ ಅಲ್ಲ,  ಮೂರು ಸಲ ಹೇಗೆ ತಾಳಿದಿರಿ ಇಂತಹ ನೋವೆಲ್ಲ?  ನಿಮ್ಮ ಜೀವ ಮಗುವಿಗೆ ಹಾಲುಣಿಸುವಾಗ ತಾನು ಕುಡಿದು ಖಾಲಿ ಮಾಡುತ್ತಿರುವುದು ಕೇಳಿ ನನ್ನ ಮನಸ್ಸಿಗೆ ಈ ಜೀವ ಏಕೆ ಇರಬೇಕು ಅನ್ನಿಸುತ್ತಿತ್ತು. ಎಷ್ಟೋ ಸಲ ಆತ್ಮಹತ್ಯೆಗೆ ಪ್ರಯತ್ನ ಮಾಡಲು ಮುಂದಾದ ನಿಮ್ಮ ಜೀವ ಎಷ್ಟೊಂದು ನರಳಿರಬಹುದು. ಓದಿ ಕರಳು ಕಿವುಚಿದಂತೆ ಆಯಿತು.

ಅಮ್ಮಾ, ನಿಮ್ಮ ಎರಡು ಮಕ್ಕಳಾದ ಗುರುರಾಜ, ಸುರೇಶ ಇವರ ಸಲುವಾಗಿ ಜೀವನ ಮುಡುಪಾಗಿಟ್ಟು ಎಷ್ಟ ಬಂದರೂ ಸಹಿಸಿಕೊಂಡು ಹೋದಿರಿ. ನಿಮ್ಮ ಧೈರ್ಯ ಮೆಚ್ಚಯವಂತದ್ದು. ಹೆಮ್ಮೆ ಪಡುವಂತದ್ದು.

ಒಮ್ಮೆ ಅನಾರೋಗ್ಯದಿಂದ ಬಳಲಿರುವಾಗ ತಂದೆಯವರ ಬಳಿ ಹೋಗಿ ಆಸ್ಪತ್ರೆ ತೋರಿಸಿಕೊಂಡು ಬೇರೆ ಮನೆ ಮಾಡಿದರೆ ಕಳಿಸುತ್ತೇನೆ ಎಂದು ತಂದೆಯವರು ಅಳಿಯನನ್ನು ಹೇಳಿದಾಗ ಅದಕ್ಕೊಪ್ಪಿಕೊಂಡು ಬೇರೆ ಮನೆ ಮಾಡಿದರು. ಆದರೂ ನಿಮ್ಮ ಮನಸ್ಸಿನಲ್ಲಿ ಇದ್ದ ನೋವುಗಳು ಹೇಳದೆ ಮತ್ತದೇ ನೋವುಗಳು, ಅದೇ ಚಿತ್ರಹಿಂಸೆ ಅದರಿಂದಾಗಿ ತಮ್ಮ ದುಶ್ಚಟಗಳಿಂದ ಲೈಂಗಿಕ ಶಕ್ತಿಯನ್ನು ಕಳೆದುಕೊಂಡರು ಬೇರೆ ಬೇರೆ ರೀತಿಯಾಗಿ ಹಿಂಸೆ ಕೊಡುವುದನ್ನು ಕೊಡುವುದು ಕೆಲಸದಾಕೆಗೆ ಗೊತ್ತಾಗಿ ನೀವು ಈ ಮನುಷ್ಯನಿಂದ ದೂರು ಹೋಗುವುದೆ ಲೇಸು ಎಂದು ಮತ್ತು ತಂದೆಗೆ ಗೊತ್ತಾದಾಗ ಬೇರೆ ಮನೆ ಮಾಡಿ ಇದ್ದದ್ದು ಓದಿದಾಗ ಈ ಹೆಣ್ಣಿನ ಜನುಮ ಯಾಕಾದರೂ ಈ ಭೂಮಿಯ ಮೇಲಿದೆ ಅನಿಸುತ್ತಿದೆ.

ಅಮ್ಮಾ,  ಇದನ್ನೆಲ್ಲ ತಾಳಿಕೊಂಡು ಕಥೆ, ಕಾದಂಬರಿ ಎಂದು ಸಾಹಿತ್ಯದ ಕಡೆ ವಾಲಿದ ನಿಮ್ಮ ಆತ್ಮವಿಶ್ವಾಸಕ್ಕೆ ಎಷ್ಟು ಹೊಗಳಿದರು ಕಮ್ಮಿಯೆ.  ಎಷ್ಟೋ ಜನ ಸಾಹಿತ್ಯ ದಿಗ್ಗಜರು ನಿಮ್ಮ ಬರಹಗಳನ್ನು ಹೊಗಳಿದರು ಎಂದು ಹೇಳಿದಿರಿ ಖುಷಿಯಾಯಿತು.

ಮಲ್ಲಿಗೆ, ತುಷಾರ, ರೂಪತಾರ, ಉದಯವಾಣಿ ಹೀಗೆ ಹತ್ತು ಹಲವು ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದೀರಿ. ಕಷ್ಟ ಕಾಲದಲ್ಲಿ ಬದುಕನ್ನು ಹೇಗೆ ಸ್ವೀಕರಿಸಿ ಗೆಲ್ಲಬೇಕು ಎಂಬುದಕ್ಕೆ ನೀವೇ ಸಾಕ್ಷಿ.  ಮನುಷ್ಯನಿಗೆ ಎಲ್ಲ ಸರ್ವಸಂಪನ್ನ ಇದ್ದರೆ ಇಷ್ಟೆಲ್ಲ ಸಾಧನೆ ಮಾಡುವುದಿಲ್ಲ ಅನಿಸುತ್ತದೆ ನನಗೆ..

ಏನೇ ಹೇಳಿ, ನಾನು ಐದಾರೂ ಆತ್ಮಕಥೆಗಳನ್ನು ಓದಿದ್ದನೆ. ಹತ್ತಾರು ಗಟ್ಟಿಗಿತ್ತಿ ಮಹಿಳೆಯರನ್ನು ಕಣ್ಣಾರೆ ಕಂಡಿದ್ದೇನೆ. ಆದರೆ, ನಿಮ್ಮ ಆತ್ಮಕಥೆಯ ಸಾಲುಗಳು ಬಹಳ ಹಿಡಿಸಿವೆ. ನಿಮ್ಮ ಆತ್ಮವಿಶ್ವಾಸ ನನ್ನೊಳಗೆ ಮತ್ತಷ್ಟೂ ಹುಮ್ಮಸ್ಸು ನೀಡಿದೆ. ಹೆಣ್ಣುಮಕ್ಕಳು ಎಷ್ಟೊಂದು ಕಷ್ಟ ಅನುಭವಿಸುತ್ತಾರೆ ಆ ಕಷ್ಟಗಳಿಂದ ಹೊರಬಂದು ಬದುಕಲು ಸಾಕಷ್ಟು ದಾರಿಗಳಿವೆ ಎಂಬುದು ಕಲಿಸಿಕೊಟ್ಟಿದ್ದೀರಿ. ನಾವು ನಮ್ಮ ಚಾರಿತ್ರ್ಯವನ್ನು ಕಾಪಾಡಿಕೊಂಡು ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ತೋರಿಸಿ ನೀಚ ಗಂಡಸರಿಗೆ ಬುದ್ಧಿ ಕಲಿಸಬೇಕು.  ನಮಸ್ಕಾರಗಳು. ಅಮ್ಮಾ.

One Response

  1. Vijaykumar wadawadagi
    June 20, 2017

Add Comment

Leave a Reply