'ಹಾಗಿದ್ದರೆ ಅಡಿಗರ ಕಾವ್ಯವನ್ನೂ ಚಿತ್ರೀಕರಿಸಬಹುದಲ್ಲ!’ – ಎಸ್ ದಿವಾಕರ್

ವಿಟ್ಮನ್ ಮತ್ತು ಅಡಿಗ

diwakar
ಎಸ್ ದಿವಾಕರ್

ಕವನವೆನ್ನುವುದು ಅಭಿವ್ಯಕ್ತಿ ಸಮಗ್ರತೆಯ ಅತ್ಯಂತ ತೀವ್ರ ರೂಪದಲ್ಲಿರುವ ಭಾಷೆ. ಅದನ್ನು ರಕ್ಷಿಸಿಡಬಲ್ಲವನು ಆ ಭಾಷೆಯ ಕವಿ ಮಾತ್ರ. ಹೀಗಿರುವಾಗ ಒಂದು ಕವನವನ್ನು ಇನ್ನೊಂದು ಭಾಷೆಗೆ ಅನುವಾದಿಸುವುದೇ ಸಾಧ್ಯವಿಲ್ಲವೆಂಬ, ಅನುವಾದಿಸುವಾಗ ಯಾವುದು ಕಳೆದುಹೋಗುತ್ತದೋ ಅದೇ ಕಾವ್ಯವೆಂಬ ಅಭಿಪ್ರಾಯವಿದೆ. ಹಾಗಾದರೆ ಕಾವ್ಯವನ್ನು ಗದ್ಯರೂಪದಲ್ಲಿ ಅನುವಾದಿಸಬಹುದೆ? ವ್ಲಾದಿಮೀರ್ ನಬೊಕೋವ್ನ ಪ್ರಕಾರ ಕವನವೊಂದರ “ಭಾವಾರ್ಥವನ್ನು ಒದಗಿಸುವ ತೀರ ಮುದ್ದಾದ ಗದ್ಯಕ್ಕಿಂತ ಒಡ್ಡೊಡ್ಡಾದ ಅಕ್ಷರಶಃ ಅನುವಾದವೇ ಎಷ್ಟೋ ಒಳಿತು”. ಯಾಕೆಂದರೆ ಕವನವೊಂದು ತನ್ನ ಭಾಷೆಯಲ್ಲಿ ಬದಲಾಯಿಸಲು ಸಾಧ್ಯವೇ ಇಲ್ಲದಂತಹ ಸ್ಥಿತಿಯಲ್ಲಿ ತಾನೇ ತಾನಾಗಿರುತ್ತದೆ.

ಕಾವ್ಯಾನುವಾದ ಎಷ್ಟೇ ಅಸಮರ್ಪಕವಾಗಿದ್ದರೂ ಅದು ಕಾವ್ಯಸೃಷ್ಟಿಯ ಸ್ವಭಾವದಿಂದ ಬೇರ್ಪಡಿಸಲಾಗದಂತೆ ಮರು-ಪ್ರತಿನಿಧಿಸುವುದರಿಂದ, ಮರು-ಸೃಷ್ಟಿಮಾಡುವುದರಿಂದ ಮೂಲದ ಚೈತನ್ಯಶೀಲತೆಯನ್ನು ಸ್ವಲ್ಪವಾದರೂ ಉಳಿಸಿಕೊಳ್ಳುತ್ತದೆ. ಕವನವೊಂದನ್ನು ಒಂದು ಹೊಸ ಕವಿತೆಯಾಗುವಂತೆ ಪ್ರತಿ ಬಾರಿ ಅನುವಾದಿಸಿದಾಗಲೂ ಮೂಲ ಕವನ ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಹೊಸದಾಗಿ ಅರಳಿಕೊಳ್ಳುತ್ತದೆ. ಇಷ್ಟಕ್ಕೂ ಕಾವ್ಯಾನುವಾದವೆನ್ನುವುದು ಮೌನವಾಗಿರುವುದನ್ನು ಮಾತಿನತ್ತ ಕೊಂಡೊಯ್ಯುವ ಒಂದು ಪ್ರಕ್ರಿಯೆಯಷ್ಟೆ.

ಅಮೆರಿಕದ ಪ್ರಸಿದ್ಧ ಕವಿ ವಾಲ್ಟ್ ವಿಟ್ಮನ್ನನ ‘ಲೀವ್ಸ್ ಆಫ್ ಗ್ರಾಸ್’ ಸಂಕಲನದಲ್ಲಿರುವ ನೂರೊಂದು ಕವನಗಳನ್ನು ಕನ್ನಡಕ್ಕೆ ಅನುವಾದಿಸಿರುವವರು ಕವಿ ಗೋಪಾಲಕೃಷ್ಣ ಅಡಿಗರು. ಕೇಂದ್ರ ಸಾಹಿತ್ಯ ಅಕಾಡೆಮಿ 1966ರಲ್ಲಿ ‘ಹುಲ್ಲಿನ ದಳಗಳು’ ಎಂಬ ಶೀರ್ಷಿಕೆಯಲ್ಲಿ ಹೊರತಂದ ಈ ಸಂಕಲನ 1996ರಲ್ಲಿ ಮರು ಮುದ್ರಣಗೊಂಡಿತು. ಆದರೂ ಅದೇಕೋ ಈ ಅನುವಾದ ನಮ್ಮ ವಿಮರ್ಶಕರನ್ನು ಅಥವಾ ಓದುಗರನ್ನು ಅಷ್ಟಾಗಿ ಆಕರ್ಷಿಸಿದಂತಿಲ್ಲ. ವಿಟ್ಮನ್ನನ್ನು ಮೂಲದಲ್ಲಿ ಓದಿರುವವರು ಅಡಿಗರ ಈ ಅನುವಾದ ಸಾಕಷ್ಟು ಯಶಸ್ವಿಯಾಗಿರುವುದನ್ನು ಗುರುತಿಸದಿರುವಂತಿಲ್ಲ.

‘ಲೀವ್ಸ್ ಆಫ್ ಗ್ರಾಸ್’ನ ಅತ್ಯಂತ ಸ್ವೋಪಜ್ಞ ಲಕ್ಷಣವೆಂದರೆ ಅದರ ವಾಕ್ಸರಣಿ ಅಥವಾ ಪದಪ್ರಯೋಗ. ವಿಟ್ಮನ್ ತನ್ನ ಕವನಗಳಲ್ಲಿ ಹೇಗೋ ಹಾಗೆ ತನ್ನ ವಿವಿಧ ಆವೃತ್ತಿಗಳಿಗೆ ಬರೆದ ಮುನ್ನುಡಿಗಳಲ್ಲೂ ಸ್ಪಷ್ಟಪಡಿಸುವಂತೆ ಅವನಿಗೆ ತನ್ನ ಕಾಲದ ಸಾಹಿತ್ಯ ಕೃತಿಗಳಿಂದ ಅಂಥ ಪ್ರಯೋಜನವೇನೂ ಆಗಿರಲಿಲ್ಲ. ಕಾವ್ಯಮೀಮಾಸೆಯಲ್ಲಿ ಯಾವುದು ಸರಿ, ಸೂಕ್ತ, ಸಮ್ಮತ ಎಂದಿತ್ತೋ ಅದರ ಬಗ್ಗೆ ಅನುಮಾನವಿದ್ದುದರಿಂದಲೇ ಅವನು ರೂಢಿಗತ ಛಂದಸ್ಸನ್ನು, ಪ್ರಾಸರಚನೆಯನ್ನು ಕೈಬಿಟ್ಟು ತನ್ನದೇ ಹೊಸ ಕಾವ್ಯತಂತ್ರವನ್ನು ಕಂಡುಕೊಂಡ.

ವಿಟ್ಮನ್ನನದು ಒಂದು ಕಾವ್ಯಕ್ರಾಂತಿಗೆ ಕರೆಕೊಡುವಂಥ ರಚನೆಗಳು. ಆ ಕ್ರಾಂತಿಯ ತತ್ವಗಳು ಅವನ ಕವನ ಒಂದು ಪುಟದ ಮೇಲೆ ಕಾಣಿಸುವ ರೀತಿಯಲ್ಲೇ ವ್ಯಕ್ತವಾಗುತ್ತವೆ. ಉದ್ದುದ್ದನೆಯ ಸಾಲುಗಳು ಕವಿಯ ಆತ್ಮ ಅಡೆತಡೆಯಿಲ್ಲದೆ ಹೊರಚೆಲ್ಲುವ ಭಾವವನ್ನು, ತನ್ನಿಂದ ಏನೂ ತಪ್ಪಿಸಿಕೊಳ್ಳಬಾರದೆಂಬ ಮಹದಾಸೆಯನ್ನು ಪ್ರತಿನಿಧಿಸುತ್ತವೆ; ಹಂಚಿಕೊಳ್ಳಬೇಕಾದ ಸತ್ಯಗಳಿಗೆ ಹಳೆಯ ಕಾವ್ಯರೂಪಗಳು ಮತ್ತು ಹಳಸಿದ ಪ್ರಾಸಗಳು ಕೇವಲ ಕ್ಲೀಷೆಗಳಷ್ಟೇ ಆಗುತ್ತವೆಯೆಂಬ ಅವನ ನಂಬಿಕೆಯನ್ನು ಸೂಚಿಸುತ್ತವೆ.

gopala-krishna-adiga

‘ಲೀವ್ಸ್ ಆಫ್ ಗ್ರಾಸ್’ 1855ರಲ್ಲಿ ಮೊದಲು ಪ್ರಕಟವಾದಾಗ ಅದರಲ್ಲಿದ್ದ ‘ಸಾಂಗ್ ಆಫ್ ಮೈಸೆಲ್ಫ್’ ಓದುಗರಿಗೊಂದು ಪೀಠಿಕಾ ಪದ್ಯದಂತಿತ್ತು. ಅದು ಅವನ ಅಪರಿಮಿತವಾದ ಪ್ರತಿಭೆಗೆ ಸಾಕ್ಷಿಯಾಗಿತ್ತು. ಅಮೆರಿಕನ್ ಲೇಖಕರ ಕತೆ, ಕಾದಂಬರಿಗಳ ಪಾತ್ರಗಳನ್ನೂ ಒಳಗೊಂಡಂತೆ ಅವನ ಕವನಗಳು ಬಹುದೊಡ್ಡ ಜನಸಮೂಹವನ್ನು ಒಳಗೊಂಡಿದ್ದವು. ಅವನ ಕೃತಿಯಲ್ಲಿ ಎದ್ದು ಕಾಣುತ್ತಿದ್ದ ಪಾತ್ರವೆಂದರೆ ಸ್ವತಃ ವಿಟ್ಮನ್ನನೇ. ಅವನು ತನ್ನ ಆ ಪಾತ್ರವನ್ನು ಯಶಸ್ವಿಯಾಗಿಯೇ ನಿರ್ವಹಿಸಿದನೆನ್ನಬೇಕು. ಅವನಿಗೆ ಮುಂಚೆ ಯಾವ ಕವಿಯೂ ಇಡಿಯಾಗಿ ಅಮೆರಿಕನ್ನನಾಗಿರಲಿಲ್ಲ; ಪ್ರಜಾಪ್ರಭುತ್ವವನ್ನು, ಅಸ್ಮಿತೆಯನ್ನು ಹಾಡಿ ಹೊಗಳಲು ಬದ್ಧನಾಗಿರಲಿಲ್ಲ. ಶೀರ್ಷಿಕೆಯೇ ಸೂಚಿಸುವಂತೆ ಅವನ ಕಾವ್ಯ ನಿಸರ್ಗದ ಪ್ರತಿಮೆಗಳಿಂದ ತುಂಬಿದೆ. ಕವಿ ಹುಲ್ಲಿನ ದಳಗಳನ್ನು ‘ಲೀವ್ಸ್’ ಎಂದು (ಎಲೆಗಳೆಂದು) ಕರೆಯುವ ಮೂಲಕ ನಿಸರ್ಗವನ್ನು ಕುರಿತೇ ನಿರ್ದಿಷ್ಟವಾದುದನ್ನು ಹೇಳುತ್ತಿದ್ದಾನೆ: ಅದನ್ನು ಎಲೆಗಳಂತೆ ಅಥವಾ ಪುಸ್ತಕದ ಪುಟಗಳಂತೆ ಓದಬಹುದು. ಇಡೀ ಜಗತ್ತನ್ನು ಕಾವ್ಯದಂತೆ ಪರಿಭಾವಿಸುವ ಅವನು ತನ್ನ ಕವನಗಳನ್ನು ನೈಸಗರ್ಿಕ ಜಗತ್ತಿನ ಒಂದು ಭಾಗವಾಗಿ ಕೊಡಮಾಡುತ್ತಾನೆ. ಹುಲ್ಲು ಮತ್ತು ಎಲೆಗಳ ಗುಂಪು ಮೊದಲಾದ ಪ್ರತಿಮೆಗಳ ಜೊತೆ ಅವನ ಕಾವ್ಯದಲ್ಲಿ ಸಮುದ್ರ, ಕಾಲುವೆ, ನದಿ, ಸರೋವರಗಳು ಪ್ರಮುಖ ನಿಸರ್ಗ ಪ್ರತಿಮೆಗಳಾಗಿವೆ. ಒಂದು ಹುಲ್ಲಿನ ದಳ, ಒಂದು ಹನಿ ನೀರು ಅಥವಾ ಒಂದು ನಕ್ಷತ್ರ ಗಂಡು-ಹೆಣ್ಣುಗಳನ್ನೂ ನಿಸರ್ಗದ ಸರ್ವಸ್ವವನ್ನೂ ಒಳಗೊಂಡ ಬಹುದೊಡ್ಡ ವಿಶ್ವದ ಭಾಗಗಳೆಂದು ಗುರುತಿಸಬಹುದು.

ಮೊದಲು ಪ್ರಕಟವಾದಾಗ ಈ ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ ವಿಟ್ಮನ್ ‘ಅಮೆರಿಕದ ಸಂಯುಕ್ತ ಸಂಸ್ಥಾನಗಳೇ ಮೂಲತಃ ಅತ್ಯುತ್ತಮ ಕವನ’ ಎಂದು ಸಾರಿದ; ‘ಕವಿಯ ಅಂತರಂಗದ ಬೆಳವಣಿಗೆಯೇ ಹೊರಗಡೆಯ ನಿರೂಪಣವನ್ನು ಸಾಧಿಸುವಂತೆ ಕಾವ್ಯ ‘ಸಾವಯವಿ’ ಆಗಿರಬೇಕು’ ಎಂದು ಪ್ರತಿಪಾದಿಸಿದ. ಅದಕ್ಕಾಗಿ ಅವನು ರೂಪಿಸಿಕೊಂಡದ್ದು ಒಂದು ಹೊಸ ಸ್ವಚ್ಛಂದ ಛಂದಸ್ಸನ್ನು – ಕುವೆಂಪು ತಮ್ಮ ‘ರಾಮಾಯಣದರ್ಶನಂ’ ಕಾವ್ಯಕ್ಕೆ ರೂಪಿಸಿಕೊಂಡ ಮಹಾಛಂದಸ್ಸಿನಂತೆ. ಜೊತೆಗೆ ಶಬ್ದಾಡಂಬರ, ಆವೇಶದಿಂದ ಕೂಡಿದ ಭಾಷಣದ ಧಾಟಿ, ವಾಕ್ತಾಂಡವ ಮೊದಲಾದವೂ ಅವನ ಕಾವ್ಯಾಭಿವ್ಯಕ್ತಿಯನ್ನು ರೂಪಿಸಿದುವೆನ್ನಬೇಕು. ಮೇಲ್ನೋಟಕ್ಕೆ ರೂಢಿಗತ ಛಂದಸ್ಸು, ಅನುಪ್ರಾಸ, ಅಕ್ಷರ ಧ್ವನಿಸಾಮ್ಯ, ಪುನರಾವರ್ತನೆ ಮೊದಲಾದವನ್ನು ವಿರೋಧಿಸುವಂತಿದ್ದರೂ ಅವನ ಕಾವ್ಯದಲ್ಲಿ ಕಲಾತ್ಮಕ ಅಭಿವ್ಯಕ್ತಿಗೇನೂ ಕೊರತೆಯಿಲ್ಲ.

ಅಡಿಗರು ವಿಟ್ಮನ್ನನ್ನು ಅನುವಾದಿಸುವ ಹೊತ್ತಿಗಾಗಲೇ (1966) ಅವರ ಬಹುಮುಖ್ಯ ಕವನ ಸಂಕಲನ ‘ಭೂಮಿಗೀತ’ ಪ್ರಕಟವಾಗಿತ್ತು (1959). ಅದಕ್ಕೂ ಮುನ್ನ, ಅಂದರೆ 1954ರಲ್ಲೇ, ತಮ್ಮ ‘ಚಂಡೆಮದ್ದಳೆ’ ಸಂಕಲನದಲ್ಲಿ ಆಡುಮಾತಿಗೆ ಹತ್ತಿರವಾದ, ಅರ್ಥಾನುಸಾರಿಯಾದ ಲಯವುಳ್ಳ, ಒತ್ತಕ್ಷರಗಳ ಬಳಕೆಯಿಂದ ನಾಟಕೀಯತೆಯನ್ನು ಸಾಧಿಸಿದ, ಸ್ವಚ್ಛಂಧ, ಸ್ವಭಾವೋಕ್ತಿಗಳಿಂದ ಕೂಡಿದ, ಸ್ವಲ್ಪಮಟ್ಟಿಗೆ ಏರುದನಿಯಲ್ಲಿದ್ದ, ಎಲ್ಲಕ್ಕಿಂತ ಮುಖ್ಯವಾಗಿ ಅದುವರೆಗೂ ಕನ್ನಡ ಕಾವ್ಯದಲ್ಲಿ ಕಾಣಿಸಿಕೊಂಡಿರದ, ಹೊಸ ಕಾವ್ಯಶೈಲಿಯೊಂದನ್ನು ಪ್ರಯೋಗಿಸಿದ್ದರು. ಆ ಸಂಕಲನದಲ್ಲಿರುವ ‘ಗೊಂದಲಪುರ’ ಎಂಬ ಕವಿತೆಯನ್ನು ಕುರಿತು “ಈ ಒಂದು ಕವಿತೆಯ ಮುಖಾಂತರವಾಗಿ ಅಡಿಗರು ಗದ್ಯ, ನಾಟಕಗಳಲ್ಲಿ ಮಾಡಬಹುದಾದ್ದನ್ನೆಲ್ಲ ಕವಿತೆಯಲ್ಲಿ ಮಾಡಿ ಕವಿತೆಯ ಅಹಿತವಾದ ಪ್ರತ್ಯೇಕತೆಯನ್ನು ಇಲ್ಲವಾಗಿಸಿದರು” ಎಂದಿದ್ದಾರೆ ವಿಮರ್ಶಕ ಕೀತರ್ಿನಾಥ ಕುರ್ತಕೋಟಿ. ಇದು ತೀರ ಅರ್ಥಪೂರ್ಣವಾದ ಮಾತು. ವಿಟ್ಮನ್ನನ ವಾಗಾಡಂಬರವನ್ನು, ಗದ್ಯಲಯವನ್ನು ನಮ್ಮ ಭಾಷೆಯಲ್ಲಿ ಹಿಡಿಯಲು ಇದಕ್ಕಿಂತ ಮಿಗಿಲಾದ ಇನ್ನೊಂದು ಕಾವ್ಯಶೈಲಿ ಇಲ್ಲ.

‘ಹುಲ್ಲಿನ ದಳಗಳು’ ಸಂಕಲನದಲ್ಲಿ ಮೊದಲ ಕವನ ‘ಒನ್ಸ್-ಸೆಲ್ಫ್ ಐ ಸಿಂಗ್’ ಎಂಬುದನ್ನು ಅಡಿಗರು ‘ನಾನು ಹಾಡುತ್ತೇನೆ ವ್ಯಕ್ತಿಸ್ವತ್ವವ ಕುರಿತು’ ಎಂದು ಅನುವಾದಿಸಿದ್ದಾರೆ. ಇಲ್ಲಿ ‘ಒನ್ಸ್-ಸೆಲ್ಫ್’ ಎಂಬುದಕ್ಕೆ ‘ವ್ಯಕ್ತಿಸ್ವತ್ವ’ ಎನ್ನುವುದು ಎಷ್ಟು ಸಮರ್ಪಕವಾಗಿದೆಯೆಂಬುದನ್ನು ಗಮನಿಸಬೇಕು. ಇದೇ ಕವನದ ಕೆಲವು ಸಾಲುಗಳನ್ನು ಮೂಲದೊಡನೆ ಹೋಲಿಸಿ ನೋಡಿದಾಗ ಅಡಿಗರು ವಿಟ್ಮನ್ನನ ಧಾಟಿಯನ್ನು ಅನುಸರಿಸಿರುವ ರೀತಿ ಸ್ಪಷ್ಟವಾಗುತ್ತದೆ.

Of physiology from top to toe I sing,

Not physiognomy alone nor brain alone is worthy for the Muse,

I say the Form complete is worthier far,

The Female equally with the Male I sing.

ಹಾಡುತ್ತೇನೆ ದೇಹವಿಜ್ಞಾನವನ್ನು ಅಡಿಯಿಂದ ಮುಡಿವರೆಗೆ,

ಶರೀರ ಸಾಮುದ್ರಿಕ ಅಷ್ಟೇ ಅಲ್ಲ, ಮೆದುಳು ಅಷ್ಟೇ ಅಲ್ಲ ಸರಸ್ವತಿಗೆ ಅರ್ಹ,
ಪರಿಪೂರ್ಣ ಆಕಾರ ಅರ್ಹತರ ಎನುವೆ,
ಗಂಡನ್ನು ಕುರಿತೆಷ್ಟೊ ಅಷ್ಟೆ ಹೆಣ್ಣಿನ ಕುರಿತು ನಾನು ಹಾಡುತ್ತೇನೆ.

ಅಡಿಗರ ‘ಚಂಡೆಮದ್ದಳೆ’ಯ ನಂತರದ ಕಾವ್ಯವನ್ನು ಓದಿರುವವರಿಗೆ ಅವರ ಕಾವ್ಯದ ಭಾಷೆ, ಲಯ, ನಾಟಕೀಯತೆ, ಪ್ರತಿಮಾ ಸೃಷ್ಟಿ ಮುಂತಾದವು ಈ ಅನುವಾದದಲ್ಲೂ ಕಂಡುಬಂದರೆ ಆಶ್ಚರ್ಯವಿಲ್ಲ. “ಸೂಯರ್ೋದಯದ ವೇಳೆ ಮರಗಳೆಲೆಮರೆಯಿಂದ ಹಕ್ಕಿಗೊರಳಿಂದುಗುವ ಗಾನದುಕ್ಕುಗಳು”. ಇದು ಅಡಿಗರ ಮೂಲ ಕಾವ್ಯದೊಂದು ಸಾಲೋ ಎನ್ನುವಷ್ಟು ಸಹಜವಾಗಿದೆಯಲ್ಲವೆ? ನಿದರ್ಶನಕ್ಕಾಗಿ ಈ ಕೆಳಗಿನ ಇನ್ನಷ್ಟು ಸಾಲುಗಳನ್ನೂ ನೋಡಬಹುದು:
ಸಂಜೆ ಬೆಳಕಿನಲ್ಲಿ ಹೊಳೆವಂಚುಳ್ಳ ವೀಚಿಗಳ, ಬಗೆದ ಹಳ್ಳಗಳನ್ನು, ತೆರೆಯೇರುಗಳ ಹೊಳಹುಲೀಲೆಯನ್ನು,
ದೂರ ವಿಸ್ತಾರ ಮಬ್ಬಾಗುತ್ತಿರುವುದನ್ನು, ರೇವುಗಳ ಬಳಿ ಬೆಣಚುಕಲ್ಲಿನುಗ್ರಾಣಗಳ
ನರೆಬಣ್ಣ ಗೋಡೆಯನ್ನು

ಬೇಸಗೆಯ ಮಿದುತನದ ದೃಶ್ಯ – ಯಾವುದೊ ಅದೃಶ್ಯವಾದುದರ ಹಠಾತ್ಸ್ಪರ್ಶ – ಗಾಳಿಬೆಳಕುಗಳೊಂದು ಪ್ರಣಯ ನಿಮಿಷ

ನಾನು ಹಾರುತ್ತೇನೆ ದ್ರವರೂಪಿ ಸರ್ವಗ್ರಾಹಿ ಆತ್ಮದುಡ್ಡಯನವನ್ನು,
ಆಳವನ್ನಳೆವ ಗುಂಡಿನ ನಿಲುಕಿಗೂ ಕೆಳಗೆ ಹರಿಯುವುದು ನನ್ನ ಮಾರ್ಗ.

ಅಮೆರಿಕನ್ ಕವಿಯಿತ್ರಿ ಮ್ಯುರಿಯೆಲ್ ರ್ಯುಕೇಸರ್ ವಿಟ್ಮನ್ನನ ಕಾವ್ಯವನ್ನು ಕುರಿತು ಬರೆದಿರುವುದನ್ನು ನೋಡಿ: “ವಿಟ್ಮನ್ ತನ್ನ ಕವನಗಳನ್ನು ಬರೆದದ್ದು ಚಲನಚಿತ್ರದ ಕ್ಯಾಮೆರಾ ಆವಿಷ್ಕಾರಗೊಳ್ಳುವುದಕ್ಕೆ ಮುನ್ನ. ಅವನು ತನ್ನ ಕವನಗಳಲ್ಲಿ ಸನ್ನಿವೇಶಗಳ ನಂತರ ಸನ್ನಿವೇಶಗಳನ್ನು ಹೇಗೆ ಪೋಣಿಸಿದ್ದಾನೆಂದರೆ ಅವು ನಿರ್ದೇಶಕ, ಕ್ಯಾಮೆರಾಮನ್ನರಿಗಷ್ಟೇ ಅಲ್ಲ, ಸಂಕಲನಕಾರನಿಗೂ ಆದೇಶ ನೀಡುವಂತಿವೆ. ಆ ಸನ್ನಿವೇಶಗಳ ಲಯ ಸಿನಿಮಾದ ಲಯದಂತಿದೆ; ಆಕೃತಿ ‘ಮೊಂಟಾಜಿ’ನಂತೆ. ಹಾಗಾಗಿ ಅವನ ಕವನಗಳನ್ನು ಸುಲಭವಾಗಿ ಚಿತ್ರೀಕರಿಸಬಹುದು. ಕವನಗಳಲ್ಲಿರುವ ಉದ್ದುದ್ದನೆಯ ಸಾಲುಗಳು ಹಾಗೂ ಆಡುಮಾತಿನ ಲಯಗಳು ಸೌಂಡ್ ಟ್ರ್ಯಾಕ್ ಆದರೆ, ತುಂಡುತುಂಡಾಗಿ ಒಡೆದುಕೊಂಡಿರುವ ವರ್ಣನಾತ್ಮಕ ಸಾಲುಗಳು ಇಮೇಜ್ ಟ್ರ್ಯಾಕಿನಂತಿವೆ”. ಹೌದೆ? ಹಾಗಿದ್ದರೆ ಅಡಿಗರ ಕಾವ್ಯವನ್ನೂ ಚಿತ್ರೀಕರಿಸಬಹುದಲ್ಲ!

 

Leave a Reply