ಪಾರಿಜಾತ ಆಯುವಾಗಲೆಲ್ಲಾ ಕೃಷ್ಣ ಬಿಡದೇ ಕಾಡುತ್ತಾನೆ…

ಆತ್ಮ ಸಖಿ ನೆನಪಾಗಲೇ ಇಲ್ಲವೇ..

smitha-4-150x150

-ಸ್ಮಿತಾ ಅಮೃತರಾಜ್, ಸಂಪಾಜೆ

download
ಹುಲ್ಲ ಹಾಸಿನ ಮೇಲೆ
ತಲೆ ಕೆಳಗು ಬಿದ್ದ ಪಾರಿಜಾತವ
ಆಯುವಾಗಲೆಲ್ಲಾ ಕೃಷ್ಣ ಬಿಡದೇ
ಕಾಡುತ್ತಾನೆ.
ಒಂದೊಂದೇ ಆಯ್ದು ಉಡಿ
ತುಂಬಿಕೊಳ್ಳುವಷ್ಟು ಹೊತ್ತು
ಮೌನ-ಸಂವಾದ.

ಜನುಮ ಜನುಮಾಂತರದ ಬಂಧುವಿನಂತೆ
ಆತ್ಮ ಸಖನಂತೆ ಕುಶಲ ವಿಚಾರಿಸಿ
ನನ್ನ ತುದಿ ಮೊದಲಿಲ್ಲದ ಪ್ರಶ್ನೆಗಳಿಗೆ ಮಾತ್ರ
ಬರಿದೇ ಮುಗುಳು ನಗುವಿತ್ತು ನಡೆದು ಬಿಡುತ್ತಾನೆ.

ನಾನೋ ಒಂದು ಕಿರುನಗೆಗೆ
ಅಪಾರ ಅರ್ಥ ಹೊದೆಸಿಕೊಂಡು
ಮತ್ತಷ್ಟು ಬಿಡದೇ ತೋಡಿಕೊಳ್ಳುತ್ತಿದ್ದೇನೆ.

ನಿಜ ಹೇಳು ಕೃಷ್ಣಾ..
ಪಟ್ಟದರಸಿಗೆ ದೇವಲೋಕದಿಂದ
ಪಾರಿಜಾತ ಗಿಡ ಅರಸಿ ತರುವಾಗ
ನಿನಗೆ ಒಮ್ಮೆಯೂ ಯಮುನಾ ತಟದ
ಆತ್ಮ ಸಖಿ ನೆನಪಾಗಲೇ ಇಲ್ಲವೇ..?

ನನ್ನ ಉತ್ಕಟ ಪ್ರಶ್ನೆಗೆ
ಹಾಯಿಸಿದ ಖಾಲಿ ಮುಗುಳು ನಗೆಯೊಳಗೆ
ಈಗ ಭಾವಾರ್ಥದ ಅಲೆಗಳು ಕಂಪಿಸುವುದಿಲ್ಲ.

ಕೆಂಪು ತೊಟ್ಟು ಆಕಾಶ ನೆಟ್ಟು
ಬಿಳಿ ಪಕಳೆ ಪಾರಿಜಾತ
ರುಕ್ಮಿಣಿ ಸತ್ಯಭಾಮೆಯರ ಅಂಗಳದ
ಪ್ರತಿ ಸಂಜೆಗಳಲ್ಲಿ ನಿಟ್ಟುಸಿರ ಬಿಕ್ಕುತ್ತಾ
ನೆಲಕ್ಕಪ್ಪುವಾಗ..

ಅದೆಷ್ಟೋ ಪ್ರೀತಿಯ ಕೊಡ ಹೊತ್ತ
ರಾಧೆಯಂದಿರು ಕಣ್ಣಲ್ಲಿ ಕಣ್ಣಿಟ್ಟು
ಪಾರಿಜಾತ ಸಸಿ ನೆಟ್ಟು ಹೂ ಹೆಕ್ಕುತ್ತಾ
ಹನಿಗಣ್ಣಾಗುತ್ತಿದ್ದಾರೆ.
ಗಂಧದೊಂದಿಗೆ ಬಂಧ ಬೆಸೆಯುತ್ತಾ
ನೆನಪುಗಳ ಹೀರಿ ಹಿಡಿದಿಟ್ಟುಕೊಳ್ಳುತ್ತಿದ್ದಾರೆ.

ಕೃಷ್ಣಾ..ಇವೆಲ್ಲಾ ನಿನಗೆ ಗೊತ್ತಿದೆಯಾ..?
ಕೇಳ ಬೇಕೆಂದಿದ್ದೆ.
ಹೇಗೂ ಪಾರಿಜಾತ ಆಯುವಾಗ
ನಾಳೆ ಬಂದೇ ಬರುವನಲ್ಲ
ಆಗ ಕೇಳಿಯೇ ತೀರಬೇಕು.

 

2 comments

  1. ಸಿಂಪ್ಲೀ ಸುಪರ್ಬ್ ಸ್ಮಿತಾ ಜಿ. ಅಂದಹಾಗೆ ಕವಿತೆ ಇನ್ನೂ ಇದೆ. ನಾಳೆ ಕೃಷ್ಣ ಬಂದಾಗ ನಿಮ್ಮೊಳಗಿನ ಸಖಿಯ ಮೂಲಕ ಕೇಳಿ ಆ ಸಖಿಯರಿಗಾಗಿ,, ಅವ ಹೇಳಿದ್ದು, ಹಂಚಿಕೊಳ್ಳಿ….ಸುಂದರ ಕವಿತೆ.

Leave a Reply