ಬಾ ತಾಯಿ ಮಹದಾಯಿ…

 – ಯರಗಲ್ಲ ವಿಜಯ

images

ಊರಾಗ ಒಳ ಹೊಕ್ಕರ ಸ್ಮಶಾನ ಮೌನ,ಸದ್ದಿಲ್ಲ, ಮಂದಿಯ ಉಲುವಿಲ್ಲ,

ಕಣ್ಣು ಹೊಳ್ಳಿಸಿದಷ್ಟೂ ಬರಡು ಬಣ ಬಣ, ಉಸಿರಿನ ಏರಿಳಿತವಿಲ್ಲ,ಜೀವಿಲ್ಲ,

ಅನ್ನ ನೀಡುವ ಭೂತಾಯಿ ಒಡಲು ಒಣ ಒಣ, ಮಡಿಲಾಗ ಚೂರು ಹಸಿರಿಲ್ಲ,

ಬರಗಾಲ ಹುಟ್ಟಿ ನದಿ ಸತ್ತು ಹೋಗ್ಯಾವ, ಕುಡಿಯಾಕ ಬೊಗಸೆ ನೀರಿಲ್ಲ ||

 

ವರ್ಷ ವರ್ಷ ತಪ್ಪದ ಬರ ಬರತೈತಿ, ಕಾಡುವ ವಿಧಿ ಬೆನ್ನ ಬಿಡುತಿಲ್ಲ,

ಮರಳುಗಾಡನ್ನ ಬೆನ್ನಿಗೆ ಕಟಗೊಂಡು ತರತೈತಿ, ಕಣ್ಣೀರು ಬಿಟ್ಟರ ಹನಿ ನೀರು ದಕ್ಕಲ್ಲ,

ಗುಡಿ ಮಸೀದಿ ಎಷ್ಟು ಹುಡುಕಿದರೂ, ಕಷ್ಟ ಕೇಳಾಕ, ದೇವರೂ ಸಿಗುತಿಲ್ಲ,

ತೆಂಕಣದ ಕಡೆ ಕೈ ಚಾಚಿ ಬೇಡಿದರ,ಒಂದಿಬ್ಬರು ಬಿಟ್ಟರ, ತಿರುಗಿ ಈ ಕಡೆ ನೋಡುವವರಿಲ್ಲ ||

 

ನೀರು ಬತ್ತಿ ಹೋದಾಗ, ಹುಟ್ಟೂರು ಬಿಟ್ಟು, ಹಕ್ಕಿಗಳು ಗುಳೆ ಹೋಗ್ತಾವ,

ಮಳೆ ಬಿದ್ದು, ಹೊಳೆ ತುಂಬಿ ಕರೆದಾಗ, ತಿರುಗಿ ಬಂದು ಬೇಸಾಯ ಮಾಡ್ತಾವ,

ಹರಿದು ಬರುವ ನೀರಿನಾಸೆಯ ಎಳಿಗೆ, ಊರಾಗ ಉಳಿದ ಜೀವಗಳು ಜೋತು ಬಿದ್ದಾವ,

ಭಗೀರಥ ಬಂದು ಮ್ಯಾಗ ಎತ್ತತಾನಂತ, ಕೈ ಸೋತರೂ ಬಿಡದ ಜೀವ ಹಿಡದಾವ ||

 

ಅವ್ವನ ಎದೆಹಾಲು ನೀವಷ್ಟ ಕುಡಿಯಬೇಕೇನು? ನಾವೂ ಅವಳ ಮಡಿಲಾಗ ಹುಟ್ಟಿ ಬೆಳದೇವಿ,

ನೀರು ಕೇಳಿದರ ತಾಯಿ ಇಲ್ಲ ಅನ್ನುವಳೇನು? ಹನಿ ಹೇಚ್ಚೇನು ಬ್ಯಾಡ, ನಮ್ಮ ಪಾಲಷ್ಟೇ ಕೇಳೀವಿ,

ನಾವು ಕೇಳಿದ ಬೊಗಸೆ ನೀರು, ಕಡಲಿನಂತ ತಾಯಿಯ ಮಹಾ ಒಡಲಿಗೆ ಲೆಕ್ಕವೇನೋ?

ಕಣ್ಣಿಗೆ ಕಾಣುವ ಸತ್ಯ, ಕಣ್ಣಿಗೆ ಬಟ್ಟಿ ಕಟ್ಟಿಗೊಂಡ ದೇವತಗೆ ಕಾಣಾಕ, ಇನ್ನೆಷ್ಟು ದಿನ ಕಾಯಬೇಕೋ? ||

 

ಬರಡುನಾಡಿನ ನೊಂದ ಮಂದಿಯ ಮ್ಯಾಗ, ಸರಕಾರದ ಕನಿಕರ ಉಕ್ಕಿ ಹರಿಯಲಿ,

ಕರುನಾಡುವೊಂದೇ ಎಂಬ ಘೋಷವಾಕ್ಯ ನಾಡಿನ ಜನತೆಯ ನಾಡಿಯಾಗ ಮೊಳಗಲಿ,

ಒಗ್ಗಟ್ಟಿನ ಬೇಡಿಕೆಯ ಕೂಗು ತಾಯಿ ಮಹದಾಯಿಯ ಕಿವಿಯ ಮುಟ್ಟಲಿ,

ಯಾರೇ ಅಡ್ಡ ಬಂದರೂ, ನಿಲ್ಲದ ನಮ್ಮವ್ವ, ನಮ್ಮೂರಿಗೆ ತಿರುಗಿ ಹರಿದು ಬರಲಿ ||

 

 

 

Leave a Reply