ಆಹಾ, ಅದೇನು ಘಮ ನನ್ನ ಪುಸ್ತಕದಲ್ಲಿ…

 

Invited Article


ಮೊದಲ ಪುಸ್ತಕವೆಂಬ ಮಾಯೆಯ ಕುರಿತು…

ಎಚ್ ಬಿ ಇಂದ್ರಕುಮಾರ್


ಮೊದಲ ಪುಸ್ತಕ… ಆಹಾ ಅದೇನು ನೆನಪು? ಏನು ಘಮ?
ಮೊನ್ನೆ ಫೇಸ್ ಬುಕ್ ನಲ್ಲಿ ಇಂದ್ರಕುಮಾರ್ ತಮ್ಮ ಮೊದಲ ಪುಸ್ತಕದ ಬಗ್ಗೆ ಎರಡು ಸಾಲು ಬರೆದುಕೊಂಡಿದ್ದರು. ಅರೆ… ನಿಮ್ಮೊಳಗೆ ಆಗ ಉಕ್ಕಿದ ಭಾವನೆಗಳನ್ನೆಲ್ಲಾ ಬರೆದುಕೊಡಿ ಎಂದು ‘ಅವಧಿ’ ಅವರನ್ನು ಕೇಳಿತು. ಅದಕ್ಕೆ ಸಿಕ್ಕ ಉತ್ತರ ಇಲ್ಲಿದೆ.

ಪುಸ್ತಕ ನೀವೂ ಬರೆದಿದ್ದೀರಿ. ನಿಮ್ಮ ಮೊದಲ ಪುಸ್ತಕ ನಿಮ್ಮೊಳಗೆ ಉಂಟು ಮಾಡಿದ ಥ್ರಿಲ್ ಎಂತಹದ್ದು.

ಬರೆದು ಕಳಿಸಿ ಸಾಕಷ್ಟು ಫೋಟೋಗಳೊಂದಿಗೆ

H B indrakumar
ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಿದ ಸಶಕ್ತಗೊಳಿಸಿದ ಸಾಹಿತಿಗಳ ಜೀವನಚರಿತ್ರೆಯನ್ನು ಓದುವಾಗ ಅವರ ಮೊಟ್ಟಮೊದಲ ಪುಸ್ತಕದೆಡೆಗೇ ನಮ್ಮ ಗಮನ. ಮೊದಲ ಪುಸ್ತಕ ಪ್ರಕಟವಾಗದೇ ಇದ್ದಿದ್ದರೆ ಅವರಿಗೆ ಮತ್ತೆ ಮತ್ತೆ ಆ ಬರೆಯುವ ಪ್ರಕಟಿಸುವ ಸಾಹಸ ಮಾಡಲು ಸಮಯ ಕೂಡಿಬರುತ್ತಿತ್ತೋ ಇಲ್ಲವೋ…

ಜಗತ್ತಿನ ಅನೇಕ ಸಾಹಿತಿಗಳ ಮೊದಲ ಪುಸ್ತಕಗಳು ಸೃಷ್ಟಿಸಿರುವ ಇತಿಹಾಸವೇ ವಿಶೇಷ. ಕೆಲವರಿಗೋ ತಾವು ಬದುಕಿರುವವರೆಗೆತಮ್ಮ ಮೊದಲ ಅಚ್ಚಾದ ಪುಸ್ತಕವನ್ನು ನೋಡುವ ಭಾಗ್ಯವೇ ಇರಲಿಲ್ಲ! ಸಾಹಿತ್ಯವನ್ನು ಒಳಗೊಂಡಂತೆ ಬಹುತೇಕ ಕ್ಷೇತ್ರಗಳಲ್ಲಿ ಈಗಲೂ ಮೊದಲನೆಯದ್ದಕ್ಕೇ ವಿಶೇಷ ಆದ್ಯತೆ, ವಿಶೇಷ ಬಹುಮಾನಗಳು ಬೇರೆ! ಬೇರೆಯವರ್ಯಾರೋ ಬರೆದ ಪುಸ್ತಕಗಳನ್ನು ನಾವು ಕೊಂಡುಕೊಂಡೋ ಕಡತಂದೋ ಪುಕ್ಕಟೆ ಗಿಫ್ಟ್ ಪಡೆದುಕೊಂಡೋ ನಮ್ಮ ಹೆಸರನ್ನು ಬರೆದು, ಇದು ನನ್ನದೇ ಪುಸ್ತಕವೆಂದು ಹೇಳಿಕೊಂಡ, ಅದಕ್ಕಾಗಿ ಜಗಳವಾಡಿಕೊಂಡ ಉದಾಹರಣೆಗಳು ಬಾಲ್ಯದಲ್ಲಿ ಅದೆಷ್ಟಿಲ್ಲ. ಆದರೆ ನಾವೇ ಬರೆದ ನಮ್ಮದೇ ಪುಸ್ತಕವನ್ನು ಬೇರೆಯವರು ಕೊಂಡುಕೊಂಡು ಇದು ನನ್ನ ಪುಸ್ತಕ ಎನ್ನುವಾಗ ಆಗುವ ಸಂತೋಷವೇ ವಿಶೇಷ.

ಕಲ್ಪನೆ ಕಥೆ ಹುಚ್ಚು ಇತ್ಯಾದಿಗಳು ಸೇರಿಕೊಂಡು ಏನೇನೋ ಗೀಚಿಕೊಂಡು ಪ್ರಕಟಣೆಯೇ ಪರಮೋಚ್ಛಗುರಿಯೆಂಬಂತೆ ನಾನು ಬರೆದ ಕಥೆಗಳು ಪ್ರಕಟವಾಗಿ, ಅವೆಲ್ಲವೂ ಹೂಗುಚ್ಛದಂತೆ ಸೇರಿಕೊಂಡು ಪುಸ್ತಕ ರೂಪದಲ್ಲಿ ದೊರೆತ ಸಂಭ್ರಮವನ್ನು ನಿಮ್ಮೊಡನೆ ಹಂಚಿಕೊಳ್ಳುವ ಬಯಕೆಯೇ ಈ ಲೇಖನ.

Indrakumar bookಕಥೆ ಪುಸ್ತಕಗಳೆಡೆ ತೀವ್ರ ಸೆಳೆತದಲ್ಲಿ ಬಾಲ್ಯ ಕಳೆದವನು, ಕನ್ನಡದ ಬಹುತೇಕ ಕಥೆಗಳನ್ನು ಓದಿ ಆನಂದಿಸಿದ್ದೆ. ಶಾಲೆಯ ಪಠ್ಯವನ್ನು ಹೊರತು ಪಡಿಸಿ ಉಳಿದುದೆಲ್ಲದೂ ಅನಗತ್ಯವೆಂಬ ಪೋಷಕರ ಧೋರಣೆಯ ಸಮಯದಲ್ಲೇ ಉರುಹೊಡೆಸಲು ಪ್ರೋತ್ಸಾಹಿಸುವ ನೀರಸ ಪಠ್ಯಪುಸ್ತಕಗಳು ಅಗಾಧ ಸಾಧ್ಯತೆಯ ಸಾಗರದಂತಹ ಗ್ರಂಥಾಲಯಗಳೆಡೆ ಆಕರ್ಷಿತರಾಗುವಂತೆ ಮಾಡಿದ್ದವು. ದುರ್ಗದ ಕೋಟೆಯ ಯಾವಯಾವುದೋ ಬಂಡೆಗಳ ಹಿಂದೆ ಕಥೆಗಳನ್ನು ಬರೆದು ಓದಿ ಆನಂದಿಸಿ ಮರುಕ್ಷಣವೇ ಮುಜುಗರ ಮೂಡಿ ಹರಿದು ಹಾಕಿದ ಪ್ರಸಂಗಗಳು ಅದೆಷ್ಟೊ.

ನಗರದ ಬಡಜನರ ಓಣಿಗಳಲ್ಲಿ ಬೆಳೆದ ನನಗೆ ಅಕ್ಕಪಕ್ಕದ ಮನೆಯ ಅಜ್ಜ-ಅಜ್ಜಿಯರು ಹೇಳಿದ ಕಥೆಗಳೇ ಅನೂಹ್ಯ ಸೆಳೆತವನ್ನು ಸೃಷ್ಟಿಸಿದ್ದವು. ಇನ್ನು ಓದುವ ಖುಷಿಗೆ ಹಸಿವಿಗೆ ಸಾಕಾಗುವಷ್ಟು ಪುಸ್ತಕಗಳನ್ನು ಕೃಷ್ಣರಾಜೇಂದ್ರ ಗ್ರಂಥಾಲಯ ಹೊಂದಿತ್ತು. ದೊಡ್ಡವರ ವಿಭಾಗಕ್ಕೆ ಹೆಜ್ಜೆಯಿಡುತ್ತಿದ್ದಂತೆಯೆ ಓಡಿಸುತ್ತಿದ್ದವರು ಕ್ರಮೇಣ ಸುಮ್ಮನಾದದ್ದೇ ಗ್ರಂಥಾಲಯ ದೇವಾಲಯವಾಯಿತು, ಕಥೆಗಳು ಕಾಡತೊಡಗಿದವು. ಇದೊಂಥರ ಖುಷಿಕೊಡುವ ಲೋಕ, ನಮಗೂ ಎಂಟ್ರಿ ಇದೆಯಾ? ಎಂದು ಯೋಚಿಸುತ್ತಲೇ ಪುಸ್ತಕಗಳಲ್ಲಿ ವಿಳಾಸವನ್ನು ಕೊಟ್ಟಿರುವ ಲೇಖಕರಿಗೆಲ್ಲ ಪ್ರತ್ಯುತ್ತರದ ಕಾರ್ಡ್ ಇಟ್ಟು ಓದಿದ ಸಂಭ್ರಮವನ್ನು ಹಂಚಿಕೊಂಡಿದ್ದೆ. ಹತ್ತು ಹಲವಾರು ಪತ್ರಗಳಲ್ಲಿ ಪ್ರತಿಕ್ರಿಯೆ ನೀಡಿ ನಿಬ್ಬೆರಗಾಗುವಂತೆ ಮಾಡಿದವರು ಚೆನ್ನವೀರ ಕಣವಿ, ದೊಡ್ಡರಂಗೇಗೌಡ ಹಾಗೂ ಪ್ರಹ್ಲಾದಅಗಸನಕಟ್ಟೆಯವರು. ಅಗಸನಕಟ್ಟೆಯವರ ಮೊಟ್ಟಮೊದಲ ಕಥಾಸಂಕಲನದ ‘ರಾಧಾ’ ಕಥೆ ನನ್ನ ಬಹುವಾಗಿ ಆಕಷರ್ಿಸಿತ್ತು. ಕಥೆಕಟ್ಟುವುದರಲ್ಲೂ ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದೆಂಬ ಗುಪ್ತ ಆಸೆಯನ್ನೂ ಅದು ಮೊಳೆಸಿತ್ತು.

ಅವರ ಕಥೆಗಳೆಷ್ಟು ಸರಳವೋ ಅವರೂ ಅಷ್ಟೇ ಸರಳ ಮನಸ್ಸಿನವರಾದವರಿಂದ ಹಿಂಜರಿಕೆ ತೊರೆದು ಪತ್ರಗಳನ್ನು ಬರೆಯತೊಡಗಿದೆ. ಮರೆಯದಂತೆ ಅವರೂ ಪ್ರತ್ಯುತ್ತರಿಸುತ್ತ ಅವರ ಕಥಾಸಂಕಲನಗಳನ್ನು ಕೊಡುತ್ತ ಎತ್ತೆತ್ತಲೋ ಓಡುತ್ತಿದ್ದ ಮನಸ್ಸನ್ನು ಕಥೆಗಳ ಕಡೆಗೇ ಇರುವಂತೆ ಮಾಡಿದರು. ಭಾಷೆಯ ಬಳಕೆ ಹಾಗೂ ಶೈಲಿ ನನಗೆ ಸಾಹಿತ್ಯದಲ್ಲಿ ಬಹು ಮೆಚ್ಚುಗೆಯಾಗುವಂತಹ ಸಂಗತಿಗಳು. ಆ ಕಾರಣದಿಂದ ರವಿ ಬೆಳಗೆರೆಯವರ ಪಾ.ವೆಂ. ಹೇಳಿದ ಕಥೆ – ಕಥಾಸಂಕಲನ ಅದರದ್ದೇ ಗುಂಗಿನ ರಭಸದಲ್ಲಿ ಮೂರ್ನಾಲ್ಕುಕಥೆ ಬರೆಸಿತು. ಅವು ತಡವಿಲ್ಲದೇ ಕರ್ಮವೀರದಲ್ಲಿ ಆಯ್ಕೆಯೂ ಆದವು. ಪ್ರಕಟವಾದದ್ದು ಒಂದು ವರ್ಷದ ಬಳಿಕ ಅಷ್ಟೆ. ಜಯಂತ ಕಾಯ್ಕಿಣಿಯವರ ಕಥೆಗಳನ್ನು ಓದಿದ್ದೇ ಕಥೆಗಳು ನೀಡುವ ಅವರ್ಣನೀಯವಾದ ಸುಖದ ಹೊಸ ಬಾಗಿಲು ತೆರೆದುಕೊಂಡಂತಾಗಿತ್ತು.
ಸುಧಾ, ತರಂಗ, ಕರ್ಮವೀರ ಸಾಪ್ತಾಹಿಕಗಳ ಪ್ರೋತ್ಸಾಹ ನನ್ನ ಕಥೆಗಳ ಕಡೆಗಿನ ಒಲವನ್ನೂ ಬರೆಯಲು ಪ್ರೋತ್ಸಾಹವನ್ನೂ ನೀಡಿದವು. ಪ್ರಕಟಿತ ಕಥೆಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಬಹುತೇಕ ಎಲ್ಲ ದೈನಿಕ, ಮಾಸಿಕ, ಸಾಪ್ತಾಹಿಕಗಳಲ್ಲೂ ಕಥೆ ಪ್ರಕಟವಾದವು.

ನನಗಷ್ಟು ಸಾಕಿತ್ತು ಸಂಭ್ರಮಿಸಲು. ಆದರೆ ಬಿಡಿ ಕಥೆಗಳು ಇಡಿಯಾಗಿ ಎಲ್ಲರನ್ನೂ ಮುಟ್ಟಲು ನೀನೊಂದು ಕಥಾ ಸಂಕಲನ ತರಬೇಕೆಂದು ಅಗಸನಕಟ್ಟೆಯವರು ಹಲವಾರು ಬಾರಿ ಹೇಳಿದ್ದರು. ನನಗೋ ಸದ್ಯಕ್ಕೆ ಹೇಗೋ ಕಥೆಗಳ ಪ್ರಕಟಣೆಗೆತೊಂದರೆಯಿಲ್ಲವಲ್ಲಎಂದು ಸುಮ್ಮನೇ ಇದ್ದುಬಿಟ್ಟಿದ್ದೆ. ಮೇಲಾಗಿ ಪುಸ್ತಕಗಳನ್ನು ಮುದ್ರಿಸುವುದು ಅಷ್ಟು ಸುಲಭದ ಕೆಲಸದಂತೆ ಕಾಣಲಿಲ್ಲ. ಡಿ.ಎಸ್.ಇ.ಆರ್.ಟಿ ಹಾಗೂ ಪಠ್ಯಪುಸ್ತಕ ಸಂಘದಲ್ಲಿ ಪರಿಚಿತರಾದ ಸಂಪನ್ಮೂಲ ವ್ಯಕ್ತಿ ರವೀಂದ್ರಆರ್.ಡಿಯವರು ನೀಲಾವರ ಸುರೇಂದ್ರಅಡಿಗರೆಂಬ ಸಹೃದಯ ಶಿಕ್ಷಕ-ಸಾಹಿತಿಯವರನ್ನು ಪರಿಚಯಿಸಿದರು. ಅದೆಷ್ಟೋ ಹೊಸಬರನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದ ನೀಲಾವರ ಸುರೇಂದ್ರಅಡಿಗರವರು ನನ್ನ ಕಥೆಗಳನ್ನು ಮೆಚ್ಚಿ ನನ್ನ ಬೆನ್ನು ಬಿದ್ದು, ಬೆಂಗಳೂರಿನ ಶ್ರೀನಿವಾಸ ಪುಸ್ತಕ ಪ್ರಕಾಶನ ಕಚೇರಿಗೆ ಕರೆದೊಯ್ದು ಹಸ್ತಪ್ರತಿಗಳನ್ನು ಕೊಡಿಸಿದ್ದರು. ಅಷ್ಟೇ, ತಿಂಗಳುಗಳು ಉರುಳಿ ವರ್ಷ ಕಳೆದು ಇನ್ನಿತರೆ ಆಸಕ್ತಿಗಳು ಸೆಳೆದಂತೆ ಆ ವಿಷಯವನ್ನೇ ಮರೆತುಬಿಟ್ಟಿದ್ದೆ.

ನಂತರ ನನ್ನ ಕಥೆಗಳು ಪುಸ್ತಕ ರೂಪದಲ್ಲಿ ಬರುವ, ಅದನ್ನು ನಾನು ನೋಡಿ ಸಂಭ್ರಮಿಸುhbi-iirವ ದಿನ ಬರುತ್ತದೆಂದು ನೆನೆಸಿಕೊಂಡಿರಲೇ ಇಲ್ಲದವನಿಗೆ ಇದ್ದಕ್ಕಿದ್ದಂತೆಯೆ ಒಂದು ದಿನ ಪುಸ್ತಕ ಪ್ರಕಾಶನದವರು ಕರೆ ಮಾಡಿ ನಿಮ್ಮಕಥಾ ಸಂಕಲನ ‘ಆ ಮುಖ’ವನ್ನು ನಿಮ್ಮ ವಿಳಾಸಕ್ಕೆ ಕಳುಹಿಸಲಾಗಿದೆ. ಹೋಗಿ ಕಲೆಕ್ಟ್ ಮಾಡಿಕೊಳ್ಳಿ ಎಂದಿದ್ದರು. ಒಂದೊಂದು ಪದವನ್ನೂ ಪುನರುಚ್ಛರಿಸಿ ಖಾತ್ರಿ ಪಡಿಸಿಕೊಂಡಿದ್ದೆ. ಗ್ರಂಥ-ಕೃತಿ-ಪುಸ್ತಕವೊಂದರ ಲೇಖಕನಾದೆನಾ?

ನನಗೋ ಏನೂ ತೋಚದಷ್ಟು ಸಂತೋಷ. ಜೊತೆಗೆ ವಿಚಿತ್ರ ಕುತೂಹಲ. ನನ್ನ ಕಥೆಗಳು ಪುಸ್ತಕ ರೂಪದಲ್ಲಿ ಬಂದಿವೆಯೆ? ಎಲ್ಲವನ್ನೂ ಒಟ್ಟಿಗೇ ಓದಲು, ಸ್ನೇಹಿತ- ಓದುಗರಿಗೆ ಕೊಡಲು ಸಿಕ್ಕುತ್ತವೆಯೇ? ಪ್ರಶ್ನೆಗಳಲ್ಲಿಯೇ ನನ್ನಷ್ಟೇ ಖುಷಿಯಾಗಿದ್ದ ಸ್ನೇಹಿತ ಪ್ರಕಾಶ್ ಕೊಡಗನೂರ್ ಅವರನ್ನು ವಿ ಆರ್ ಎಲ್ ನಿಂದ ಪಾರ್ಸಲ್  ಬಿಡಿಸಿಕೊಂಡು ಬರಲು ಕರೆದೊಯ್ದೆ.

ಅವರ ಬೈಕಿನ ಮೇಲೆ ನನ್ನದೇ ಪುಸ್ತಕದ ಪಾರ್ಸಲ್ ಎಂಬ ಸಣ್ಣ ಸ್ವರ್ಗವನ್ನು ಹೊತ್ತು, ಮನೆ ಬರುವವರೆಗೂ ಕೊಟ್ಟಿದ್ದ ಅಷ್ಟೊಂದು ಕಥೆಗಳಲ್ಲಿ ಮುದ್ರಿತವಾದವೆಷ್ಟೊ, ತಿರಸ್ಕೃತವಾದವೆಷ್ಟೊ, ಲೇಖಕರ ಪ್ರತಿಗಳೆಂದು ಎಷ್ಟು ಪುಸ್ತಕಗಳನ್ನು ಇರಿಸಿದ್ದಾರೋ ಮುನ್ನುಡಿ ಯಾರು ಬರೆದರೋ ಇತ್ಯಾದಿ ಆತಂಕಗಳ ವಿಶೇಷ ಸಂಭ್ರಮದಲ್ಲಿ ಚರ್ಚಿಸುತ್ತ ಬಂದಿದ್ದೆವು.

ದೊಡ್ಡ ಪುಸ್ತಕದ ಪಾರ್ಸಲ್ ಮನೆಗೆ ಬಂದದ್ದೆ ಹೆಂಡತಿ ಮಗಳಿಗೆ ನಾನು ಅಲಿಬಾಬಾ ನಿಧಿಯ ಮೂಟೆ ಹೊತ್ತು ತಂದಂತೆಯೇ ಆಗಿತ್ತು. ಬಂಡಲ್ ಪ್ಯಾಕೇಜ್ ಒಡೆಯುವುದಕ್ಕೂ ಸಮಯ ನೋಡುವ ಯೋಚನೆ ಹೊಳೆದದ್ದು ಸುಳ್ಳಲ್ಲ. ಅಂತೂ ಎಷ್ಟೋ ವರ್ಷಗಳಿಂದ ಪ್ರಕಟಿಸುತ್ತ ಬಂದಿದ್ದ ಎಲ್ಲಾ ಹದಿನೈದು ಕಥೆಗಳನ್ನು ಒಳಗೊಂಡಿದ್ದ 2011ರ ಸಾಲಿನ ‘ಆಮುಖ’ ಕಥಾ ಸಂಕಲನ ನಮ್ಮ ಕೈ ಸೇರಿತು. ಅಲಿಬಾಬಾನ ನಿಧಿಯೊಳಗಿಂದ ಅಲ್ಲಾವುದ್ದೀನನ ಮಾಯಾದೀಪದಂತೆ ಹೊರಬಂದ ಪುಸ್ತಕಗಳು ಓದಿದಂತೆಲ್ಲ ಪುಳಕಗಳನ್ನು ಉಂಟುಮಾಡತೊಡಗಿತ್ತು.

ನಮ್ಮ ಬರವಣಿಗೆ ಅದರಲ್ಲೂ ಕಥೆಗಳು ಮೊಟ್ಟ ಮೊದಲ ಪುಸ್ತಕ ರೂಪದಲ್ಲಿ ಸಿಗುವ ಖುಷಿಯನ್ನು ಅನುಭವಿಸಿದವರೇ ಹೇಳಬೇಕು. ಪ್ರಪಂಚದಎಲ್ಲ ಹಿರಿ-ಕಿರಿಯ ಲೇಖಕರಜೀವನದ ಪರಮೋಚ್ಛ ಘಳಿಗೆಯಾಗುವ ಈ ಕ್ಷಣ ನಿಜಕ್ಕೂ ಅವಿಸ್ಮರಣೀಯ. ಇಂದಿಗೆ ನಾಲ್ಕು ವರ್ಷಗಳು ಸಂದ ಈ ಕ್ಷಣ ಬದುಕನ್ನು ಪುನರಾವಲೋಕನ ಮಾಡಿಸುತ್ತಿದೆ. ಅದರ ಹಿಂದೆ ನಾಲ್ಕು ಪುಸ್ತಕಗಳು ಪ್ರಕಟವಾದರೂ ಇದು ಚೊಚ್ಚಲ ಅನುಭವ.. ಮರೆಯಲಾದೀತೆ? ನೆನಪಿನಿಂದ ಹೊರಬರುವ ಕ್ಷಣಗಳು ಅದೆಷ್ಟು ಸೊಗಸೆಂದು ಹೇಳುತ್ತಿದೆ.

Indrakumar

 

4 comments

  1. ಇಂದ್ರಕುಮಾರ್ ಸರ್ ಅವರ ಮೊದಲ ಕಥಾ ಸಂಕಲನ ಕುರಿತು ಬರೆದ ಅಭಿಪ್ರಾಯ ತುಂಬಾ ಇಷ್ಟ ಆಯ್ತು. ಅವರ ಪರಮೂ ಪ್ರಪಂಚ ಸಂಕಲನದಲ್ಲೂ ಚಂದದ ಕಥೆಗಳಿವೆ. ನಾನು ಅವರ ಕಥೆಗಳನ್ನು ಓದುತ್ತಲೇ ನಾನು ಕಥೆ ರಚನೆಗೆ ಪ್ರೇರೆಪಣೆಗೊಂಡೆ ಎಂದು ಹೇಳಲು ಸಂತಸಪಡುತ್ತೇನೆ ಹಾಗೇನೆ ನಾನು ಬರೆದ ಕಥೆಗಳನ್ನು ಮೊದಲು ಕಳಿಸೋದೆ ಅವರಿಗೆ.. ಅವರು ತಿದ್ದುವ ತಿಳುವಳಿಕೆಯ ಮಾತುಗಳಿಂದ ನನ್ನ ಬರವಣಿಗೆಯ ವಿಧಾನ ಬದಲಾಗುತ್ತಿದೆ.. ಅವರ ಬರಹಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಹೊಳಪು ಪಡೆಯಲಿ ಎಂದು ಆಶಿಸುತ್ತೇನೆ.

  2. ಇಂದ್ರಕುಮಾರ್ ರವರ ಕತೆಗಳ ಶೈಲಿ ,,ಕೌತುಕ, ಸರಳ.ಸಾಮಾಜಿಕ ಕಾಳಜಿಯು ದೋಡ್ರ ಕತೆಗಾರರ ರಿೇತಿಯಲಿವೆ.ಅವರ books ಹೆಚಾಗಿ ಪ್ರಕಟಗೊಳಲಿ.ಅವರ ಕತೆಗಳು ನನಗೂ inspiration

Leave a Reply