ಜುಗಾರಿ ಕ್ರಾಸ್‌ನಲ್ಲಿ ಭಗವಾನ್, ಭಗವಾನ್ ಹೇಳಿಕೆ ಮತ್ತು ಪ್ರಶಸ್ತಿ

ಪೆರಿಯಾರ್ ಜನ್ಮೋತ್ಸವದಲ್ಲಿ ಭಗವಾನ್ ಹೇಳಿಕೆ ಮತ್ತು ಅದು ಹುಟ್ಟು ಹಾಕಿದ ವಿರೋಧಕ್ಕೆ ಮೆಲ್ಗಣ್ಣಿಗೆ ಕಾಣದ ಇನ್ನೊಂದು ಕಾರಣವಿದೆ . ಅದು ಪುರುಷ ಪ್ರಜ್ಞೆಯನ್ನು ಸಿಟ್ಟಿಗೇಳಿಸಿದೆ ಎಂದು ಸಂವರ್ತಾ ಸಾಹಿಲ್ ಬರೀತಾರೆ. ಇದೊಂದು ಕುತೂಹಲಕರ ವಿಶ್ಲೇಷಣೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಚರ್ಚೆ ವಸ್ತುನಿಷ್ಠವಾಗಿರಲಿ, ಇಲ್ಲಿ ವೈಯಕ್ತಿಕ ನಿಂದೆ ಸಲ್ಲ.


ಜುಗಾರಿ ಕ್ರಾಸ್


11017455_10152654014805896_4441617299540891559_n

ಸಂವರ್ತಾ ಸಾಹಿಲ್

ಬೆಂಗಳೂರಿನಲ್ಲಿ ನಡೆದ ಪೆರಿಯಾರ್ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಮಾತಾನಡುವಾಗ ಕೆ.ಎಸ್. ಭಗವಾನ್ “ರಾಮ ಅಪ್ಪನಿಗೆ ಹುಟ್ಟಿದವನಲ್ಲ,” ಎಂದದ್ದು ನಾಡಿನ ಹಲವಾರುಮಂದಿಯನ್ನು ಕೆರಳಿಸಿದೆ. ಅದೇ ದಿನದಂದು ಕೆ.ಎಸ್. ಭಗವಾನ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಘೋಷಣೆ ಆಗಿ ಕೆರಳಿದ ಜನರು ಮತ್ತಷ್ಟುಸಿಟ್ಟಾಗುವಂತಾಯಿತು.

ಇದಾದ ಮಾರನೆ ದಿನವೇ ಕೆರಳಿದ ಜನರು ಕರ್ನಾಟಕ ಸಾಹಿತ್ಯ ಅಕಾಡೆಮಿ ಕೆ.ಎಸ್.ಭಗವಾನ್ ಅವರಿಗೆ ನೀಡಿದ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಆನ್ಲೈನ್ಪೆಟೀಶನ್ ತಯಾರಿಸಿ ಸಹಿ ಸಂಗ್ರಹ ಆರಂಬಿಸಿದ್ದು ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಾಕಷ್ಟು ಚರ್ಚೆ ಮಾಡಿ ಮತ್ತಷ್ಟು ಜನರನ್ನು ತಮ್ಮ ಈ ‘ಆಂದೋಲನಕ್ಕೆ’ಸೇರಿಸಿಕೊಂಡರು.

ಕೆ.ಎಸ್. ಭಗವಾನ್ ಅವರು ಕಳೆದ ಕೆಲವು ಸಮಯದಿಂದ ಸುದ್ದಿಯಲ್ಲಿರುವುದು ತಾವು ನೀಡಿದ ಹೇಳಿಕೆಗಳಿಗೆ ಮತ್ತು ತಾವು ಮಾಡಿದ ಭಾಷಣಗಳಿಗೆ. ಇವರು ಹಲವು ಮಾತುಗಳುಜನರ “ಧಾರ್ಮಿಕ ಭಾವನೆಗೆ” ಧಕ್ಕೆ ತಂದಿದೆ ಎಂಬ ಆರೋಪ ಇವರ ಮೇಲೆ ಬಹಳ ಸಮಯದಿಂದ ಇದೆ. ಆದರೂ ಹಿಂದೆಂದೂ ಕಾಣದಂತಾ ಪ್ರತಿಕ್ರಿಯೆ ಈ ಬಾರಿ ಯಾಕೆ ಕಂಡುಬಂದಿದೆ?

ನಿಷ್ಪಕ್ಷಪಾತವಾಗಿ ನೋಡಿದರೆ ಭಗವಾನ್ ಹೇಳಿದ್ದು ರಾಮಾಯಣದಲ್ಲಿ ಹೇಳಿರುವ ಸತ್ಯವನ್ನೇ ಹೊರತು ಅವರು ಸತ್ಯವನ್ನು ತಿರುಚಿಲ್ಲ. ವಾಲ್ಮೀಕಿ ರಾಮಾಯಣದಲ್ಲಿ ದಶರಥ ತನ್ನಮಂತ್ರಿಯಾದ ಸುಮಂತ್ರನನ್ನು ಕರೆದು ತನಗೆ ಮಕ್ಕಳಾಗಲು ಯಾಗ ಮಾಡಬೇಕು ಎಂಬುದನ್ನು ಹೇಳಿಕೊಂಡಾಗ ಸುಮಂತ್ರ ಬಹಳ ಹಿಂದೆ ಸಾಂತಕುಮಾರ ಎಂಬ ಋಷಿಋಷ್ಯಶೃಂಗ ಮತ್ತು ಅವನ ಹೆಂಡತಿ ಶಾಂತ ಇವರ ಸಹಕಾರದಿಂದ ದಶರಥನಿಗೆ ಮಕ್ಕಳಾಗುವುದು ಎಂದು ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾನೆ. ಆಗ ದಶರಥ ಋಷ್ಯಶೃಂಗನನ್ನುಕರೆದುಕೊಂಡು ಬರಲು ಹೋಗಿ ತನ್ನ ಗೆಳೆಯ ರೋಮಪಾದನನ್ನು ಅವನ ಅಳಿಯ ಋಷ್ಯಶೃಂಗ ಮತ್ತು ಮಗಳು ಶಾಂತಳನ್ನು ತನ್ನೊಡನೆ ಕಳುಹಿಸಿಕೊಡಲು ವಿನಂತಿಸಿಕೊಳ್ಳುತ್ತಾನೆ.ರೋಮಪಾದ ಒಪ್ಪಿಕೊಳ್ಳುತ್ತಾನೆ. ಋಷ್ಯಶೃಂಗ ಮತ್ತು ಶಾಂತ ಅಯೋಧ್ಯೆಗೆ ಬಂದಾಗ ದಶರಥ ಯಾಗಕ್ಕೆ ಎಲ್ಲಾ ಸಿದ್ಧತೆ ಮಾಡಿಸುತ್ತಾನೆ. ಯಾಗ ವಸಿಷ್ಠ, ವಾಮದೇವ, ಜಾಬಾಲಿ,ಕಶ್ಯಪ ಈ ಪುರೋಹಿತರ ಮುಂದಾಳತ್ವದಲ್ಲಿ, ಋಷ್ಯಶೃಂಗ ನಡೆಸುತ್ತಾನೆ. ಆ ಯಾಗದ ಅಗ್ನಿಯಿಂದ ಪ್ರಜಾಪತಿಯ ಪ್ರತಿನಿಧಿ ಹೊರಬಂದು ದಶರಥನಿಗೆ ಪಾಯಸ ನೀಡಿ ಅದನ್ನುಹೆಂಡತಿಯರಿಗೆ ನೀಡು ಆಗ ಅವರು ಗರ್ಭ ಧರಿಸುತ್ತಾರೆ ಎಂದು ಹೇಳುತ್ತಾನೆ. ದಶರಥ ಹಾಗೆಯೇ ಮಾಡುತ್ತಾನೆ. ಆಗ ಅವನ ಹೆಂಡತಿಯರು ಗರ್ಭ ಧರಿಸಿ ರಾಮ, ಭಾರತ, ಲಕ್ಷ್ಮಣ,ಶತ್ರುಘ್ನ ಜನಿಸುತ್ತಾರೆ.

1

ಇರುವ ನೂರಾರು ರಾಮಾಯಣಗಳಲ್ಲಿ ಹೆಚ್ಚಿನ ಜನರು ಅಧಿಕೃತ ಎಂದೇ ನಂಬಿರುವ ವಾಲ್ಮೀಕಿ ರಾಮಾಯಣದಲ್ಲಿ ಬರುವ ಈ ವಿವರಣೆಯನ್ನು ಸಂಕೇತ ಎಂದೇ ಭಾವಿಸಿದರೂ ಅಲ್ಲಿರಾಮ, ಭಾರತ, ಲಕ್ಷ್ಮಣ ಮತ್ತು ಶತ್ರುಘ್ನ ದಶರಥನ ಮಕ್ಕಳಲ್ಲ. ಹಾಗೆಂದು ವಾಲ್ಮೀಕಿಯೇ ಸೂಚಿರುವುದೇ ಹೊರತು ಕೆ.ಎಸ್. ಭಗವಾನ್ ಹೊಸದಾಗಿ ಏನು ಹೇಳುತ್ತಿರುವುದಲ್ಲ.

ಸೂಕ್ಷಮವಾಗಿ ಗಮನಿಸಿದರೆ ತಿಳಿಯುತ್ತದೆ, ಈ ಬಾರಿ ಕೆ.ಎಸ್. ಭಗವಾನ್ ಅವರ ಮಾತಿನಿಂದ ಜನರ ‘ಧಾರ್ಮಿಕ ಭಾವನೆ’ಗೆ ನೋವಾಗಿರುವುದಲ್ಲ. ಬದಲಾಗಿ ಭಗವಾನ್ ಅವರಮಾತಿನಿಂದ ನೋವಾಗಿರುವುದು ಜನರ ಪುರುಷಾಹಂಕಾರಕ್ಕೆ. ಇದನ್ನು ವಿವರಿಸಲು ಪ್ರಯತ್ನಿಸುತ್ತೇನೆ.

ಪುರುಷಪ್ರಧಾನ ಸಮಾಜದಲ್ಲಿ ಪುರುಶಾಹಂಕಾರ ಮನುಷ್ಯರ ಸ್ವಭಾವದ ಭಾಗವಾಗಿರುವುದು ಸಹಜ. ಪುರುಷಾಹಂಕಾರಕ್ಕೆ ತನ್ನ ಪುರುಷತ್ವ ಬಹಳ ಮಹತ್ವದ ವಿಚಾರ, ಪುರುಷಸ್ವಭಾವವನ್ನು ಎತ್ತಿಹಿಡಿಯುವ ವೀರತನ, ಶೂರತನಕ್ಕೆ ಮಹತ್ವ. ಇವು ಶ್ರೇಷ್ಠ ಮತ್ತು ಪ್ರಶಂಸಾರ್ಹವಾದ ಸಂಗತಿಗಳು. ಇವುಗಳಷ್ಟೇ ಸಹಜ ಪುರುಷಪ್ರಧಾನ ಸಮಾಜದಲ್ಲಿನಿರ್ವೀರ್ಯತೆ ಮತ್ತು ನಪುಂಸಕತ್ವದ ಬಗೆಗಿನ ಭಯ. ಪುರುಷಪ್ರಧಾನ ಸಮಾಜದಲ್ಲಿ ನಿರ್ವೀರ್ಯತೆ ಮತ್ತು ನಪುಂಸಕತ್ವ ಒಂದು ನಾಚಿಕೆಯ, ಅವಮಾನದ ವಿಷಯ. ಹೀಗಿರುವಾಗಗಂಡಸುತನದ ಬಗೆಗೆ ಸಂಶಯ ವ್ಯಕ್ತಪಡಿಸಿದರೂ ಪುರುಶಾಹಂಕಾರ ಕೇಳುತ್ತದೆ. ಆ ಕುರಿತು ಪ್ರಶ್ನೆ ಕೇಳಿದರಂತೂ ಉಗ್ರವಾಗಿ ಕೆರಳುತ್ತದೆ.

ಕೆ.ಎಸ್. ಭಗವಾನ್ ಅವರ “ರಾಮ ಅಪ್ಪನಿಗೆ ಹುಟ್ಟಿದ ಮಗನಲ್ಲ” ಎಂಬ ಮಾತು ಜನರನ್ನು ಕೆರಳಿಸಲು ಕಾರಣ ಪುರುಷಪ್ರಧಾನ ಸಮಾಜದ ಜನ ಸಮೂಹದ ಸುಪ್ತ ಮನಸ್ಸಿನಲ್ಲಿನಿರ್ವೀರ್ಯತೆ ಮತ್ತು ನಪುಂಸಕತ್ವದ ಬಗೆಗೆ ಇರುವ ಆತಂಕ ಮತ್ತು ಇವು ನಾಚಿಕೆ ಅವಮಾನದ ಸಂಗತಿ ಎಂಬ ನಂಬಿಕೆ. ಭಗವಾನ್ ಅವರ ಮಾತು ಸುಪ್ತ ಮನಸ್ಸಿನ ಈ ಸೂಕ್ಷ್ಮಪ್ರದೇಶವನ್ನು ಕೆರಳಿಸಿತು ಹಾಗಾಗಿ ಜನರು ತೀರಾ ಉಗ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮತ್ತು ಈ ಉಗ್ರ ಪ್ರತಿಕ್ರಿಯೆಯಲ್ಲಿ ಒಂದು ಗಂಡುಬೀರಿತನ ಇರುವುದು ಸುಳ್ಳಲ್ಲ. ಇವೆಲ್ಲನಿರೂಪಿಸುವ ಸಂಗತಿ ಏನೆಂದರೆ ಇಲ್ಲಿ ಧಕ್ಕೆ ಆಗಿರುವುದು ಧಾರ್ಮಿಕ ನಂಬಿಕೆಗೆ ಅಲ್ಲ ಬದಲಾಗಿ ಪುರುಷಾಹಂಕಾರಕ್ಕೆ ಎಂಬುದು.

ಇಲ್ಲವಾದರೆ ಅಂದು ಭಗವಾನ್ ಅವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಕಲೈ ಸೆಲ್ವಿ ಎಂಬವರು “ಮಹಾಭಾರತದಿಂದ ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗಿದೆ,” ಎಂದು ಹೇಳಿದ್ದುಜನರನ್ನು ಹೆಚ್ಚು ಸಿಟ್ಟಾಗಿಸಬೇಕಿತ್ತು. ಯಾಕೆಂದರೆ ಆ ಹೇಳಿಕೆ ತೀರ ಅಸಂಬಂಧವೂ ಅವೈಜ್ಞಾನಿಕವೂ ಆಗಿತ್ತು. ಭಗವಾನ್ ಹೇಳಿದ್ದು ರಾಮಾಯಣದಲ್ಲಿ ವಾಲ್ಮೀಕಿ ಸೂಚಿರುವಸಂಗತಿಯನ್ನೇ. ಆದರೆ ಸೆಲ್ವಿ ಅವರು ಮಾಡಿದ್ದು ಆಧಾರ ರಹಿತ ಆಪಾದನೆ. ಆದರೆ ಇವುಗಳಲ್ಲಿ ಪುರುಷಾಹಂಕಾರಕ್ಕೆ ತನ್ನ ಗಂಡಸುತನಕ್ಕಿರುವ ಆತಂಕವನ್ನು ನೆನಪಿಸಿದ್ದು ಹೆಚ್ಚುಮುಖ್ಯವಾಯಿತು. ಧಾರ್ಮಿಕ ನಂಬಿಕೆಗಳಿಗಿಂತ ಹೆಚ್ಚು ಬೇರು ಬಿಟ್ಟಿರುವುದು ಲೋಕದಲ್ಲಿ ಪುರುಶಾಹಂಕಾರ ಎಂಬುದು ಈ ಪ್ರಸಂಗದಲ್ಲಿ ಅನಾವರಣಗೊಂಡಿತು.

ಮಹಾತ್ಮ ಗಾಂಧೀ ಅವರ ಹತ್ಯೆಯ ರಾಜಕೀರದ ಕುರಿತು ಬರೆಯುವಾಗ ಚಿಂತಕ ಆಶೀಶ್ ನಂದಿ ನಾಥುರಾಮ್ ಗೋಡ್ಸೆ ಅವರನ್ನು ರೂಪಿಸಿದ ಸಾಮಾಜಿಕ ರಾಜಕೀಯ ಸ್ಥಿತಿಗಳನ್ನುಮಾತ್ರವಲ್ಲದೆ ಅವರ ಮನೋಲೋಕವನ್ನೂ ಪರೀಕ್ಷೆಗೆ ಒಡ್ಡುತ್ತಾರೆ. ಅಲ್ಲಿ ಗಮನಕ್ಕೆ ಬರುವ ಒಂದು ಅಂಶ ಎಂದರೆ ಗೋಡ್ಸೆಗೆ ಗಾಂಧೀ ಭಾರತೀಯ ರಾಜಕೀಯವನ್ನು ತಮ್ಮಸ್ತ್ರೀರೂಪಿ ರಾಜಕೀಯ ತಂತ್ರಗಳಿಂದ ಷಂಡಗೊಳಿಸುತ್ತಿದೆ ಎಂಬ ಅಭಿಪ್ರಾಯ ಮತ್ತು ಆ ಕುರಿತು ಆಕ್ರೋಶ. ಬ್ರಿಟಿಷರು ಮತ್ತು ಮೊಘಲರು ದೇಶವನ್ನು ನಿರ್ವೀರ್ಯನ್ನಾಗಿ ಮಾಡಿದರುಎಂಬ ಅಭಿಪ್ರಾಯ ಮತ್ತು ಅದರ ಬಗ್ಗೆ ಸಿಟ್ಟು. ತನ್ನ ಈ ಅಧ್ಯಯನದಲ್ಲಿ ನಂದಿಯವರು ಗೋಡ್ಸೆ ಮನೋಲೋಕವನ್ನು ಅಧ್ಯಯನ ಮಾಡಿದ ಕಾಲಿನ್ಸ್ ಮತ್ತು ಲೆಫೇರೆ ಹೇಗೆ ಗೋಡ್ಸೆಯಭಾಷೆಯ ಮೂಲಕ ಅವನಲ್ಲಿ ಇದ್ದ ಲೈಂಗಿಕ ಕಾಳಜಿಯನ್ನು ನಿರೂಪಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಗೋಡ್ಸೆಯ ರಾಜಕೀಯ ಭಾಷಣದಲ್ಲಿ ಮತ್ತು ಸಂಭಾಷಣೆಯಲ್ಲಿ ದಟ್ಟವಾಗಿತುಂಬಿಕೊಂಡಿದ್ದ ಪ್ರತಿಮೆಗಳು ಪ್ರತೀಕಗಳು “ಫಲಹೀನತೆ” “ಷಂಡತನ” ದ ಭಯ ಮತ್ತು ಅವಮಾನವನ್ನು ಪ್ರತಿಫಲಿಸುತ್ತಿದ್ದವು, ಎಂದು ಕಾಲಿನ್ಸ್ ಮತ್ತು ಲೆಫೇರೆ ಅವನಭಾಷೆಯನ್ನೂ ಅಭ್ಯಾಸ ಮಾಡಿ ಕಂಡುಕೊಂಡರು.

ಹೀಗಿರುವ ಪುರುಷಪ್ರಧಾನ ಸಮಾಜದಲ್ಲಿ ಪುರುಶಾಹಂಕಾರ ಜನಗಳಲ್ಲಿ ಬೇರು ಬಿಟ್ಟಿರುವಾಗ ಭಗವಾನ್ ಜನರು ದೇವರು ಎಂದು ನಂಬುವ ರಾಮನ ಜನನದ ಬಗ್ಗೆ ಮಾತಾಡುವಾಗಆತನ ತಂದೆಯ ನಿರ್ವೀರ್ಯತೆಯನ್ನು ಜ್ನಾಪಿಸಿದ್ದೆ ಜನರು ಆಕ್ರೋಷಿತರಾದದ್ದು ಆಶ್ಚರ್ಯವೇನಲ್ಲ.

೨೦೧೨ರ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಗೋವಾ – ಇಫ್ಫಿ- ದಲ್ಲಿ ‘ಕ್ಯಾನ್’ ಎಂಬ ಟರ್ಕಿಷ್ ಸಿನಿಮಾ ನೋಡಿ ಹೊರಬಂದಾಗ ಹಿರಿಯರಾದ ಎಂ.ಎಸ್. ಸತ್ಯುಸಿಕ್ಕರು. ಅವರೂ ಆ ಸಿನಿಮಾ ನೋಡಿದ್ದ ಕಾರಣ, ಮತ್ತು ನಾನು ಆ ಸಿನೆಮ ಇಷ್ಟವಾಯಿತೋ ಇಲ್ಲವೋ ಎಂದು ನಿರ್ಧಾರ ಮಾಡಲು ಆಗದೆ ಇದ್ದ ಕಾರಣ, “ಹೇಗೆ ಅನ್ನಿಸ್ತು ಸರ್ನಿಮಗೆ ಈ ಸಿನಿಮಾ?” ಎಂದು ಕೇಳಿದೆ. ಅವರು ತಕ್ಷಣ ಏನೂ ಹೇಳಲಿಲ್ಲ. ಅರೆ ಕ್ಷಣ ಸುಮ್ಮನಿದ್ದು, “ನೋಡು, ತಾಯಿ ಆಗುವ ಇಲ್ಲ ಆಗದೆ ಇರುವ ಹಕ್ಕು ಪ್ರತಿ ಹೆಣ್ಣಿಗೂ ಇದೆ. ಹೆಣ್ಣುಗರ್ಭವತಿ ಆಗಲು ‘ಬೀಜ’ ಎಲ್ಲಿಂದ ಬಂತು ಅಂತ ಕೇಳೋ ಹಕ್ಕು ಯಾರಿಗೂ ಇಲ್ಲ. ಅದು ಆ ಹೆಣ್ಣಿಗೆ ಮಾತ್ರ ಸಂಬಂಧ ಪಟ್ಟಿದ್ದು. ಗಂಡನಾದವನು ಅದರ ಬಗ್ಗೆ ಪ್ರಶ್ನೆ ಎತ್ತಿದರೆ ಅದುಅವನ ಪುರುಷಾಹಂಕಾರ ಮಾತ್ರವಲ್ಲ, ಅದು ಅವನು ಹೆಣ್ಣನ್ನು ಆಕೆಗೆ ಪ್ರಾಕೃತಿಕವಾಗಿ ಸಿಕ್ಕಿರುವ ಹಕ್ಕನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದೇ ಆಗಿದೆ,” ಎಂದರು.

ಹೀಗಿರುವಾಗ ರಾಮ ತನ್ನ ತಾಯಿಯ ಗಂಡನಿಗೆ ಹುಟ್ಟಿದ್ದಲ್ಲ ಎಂಬುದನ್ನು ಅವಮಾನಕಾರಿ ಅನ್ನುವಂತೆ ಹೇಳುವುದು ಮತ್ತು ಆತ ತನ್ನ ತಾಯಿಯ ಗಂಡನಿಗೇ ಹುಟ್ಟಿದ್ದು ಎಂದುನಿರೂಪಿಸಲು ಹೊರಡುವುದು, ಎರಡೂ ಹೆಚ್ಚು ಕಡಿಮೆ ಸ್ತ್ರೀಯನ್ನು ಮತ್ತು ಆಕೆಯ ಲೈಂಗಿಕತೆಯನ್ನು ನಿಯಂತ್ರಿಸಲು ಪುರುಷಾಹಂಕಾರ ಮತ್ತು ಪುರುಷ ಪ್ರಧಾನ ವ್ಯವಸ್ಥೆಮಾಡುತ್ತಿರುವ ಪ್ರಯತ್ನ ಅಷ್ಟೇ. ಇಲ್ಲಿ ಧಾರ್ಮಿಕ ನಂಬಿಕೆ ಏನೂ ಇಲ್ಲ, ಕ್ರಾಂತಿಕಾರಿ ಸೈಧಾಂತಿಕತೆಯೂ ಇಲ್ಲ.

17 comments

  • ರಾಮಾಯಣ ಮತ್ತು ಮಹಾಭಾರತದಲ್ಲಿ ಅಪ್ಪನಿಗೆ ಹುಟ್ಟಿದವರು ಯಾರೂ ಇಲ್ಲ ಎಂಬ ಮಾತು ಹಳ್ಳಿಯಲ್ಲಿ ನಾವುಗಳು ಚಿಕ್ಕವರಿದ್ದಾಗಲೇ ಕೇಳಿದ್ದ ಮಾತು. ಅದನ್ನು ಸಾಮಾನ್ಯವಾಗಿ ನಾಲ್ಕು ಜನ ಅಷ್ಟಿಷ್ಟು ರಾಮಾಯಾಣ, ಮಹಾಭಾರತ ಮತ್ತಿತರ ಪುರಾಣಗಳನ್ನು ಬಲ್ಲವರು, ಬಯಲಾಟ ನಾಟಕಗಳನ್ನು ಆಡಿಸುವವರು, ಹತ್ತಿರದ ಪಟ್ಟಣಗಳಿಗೆ ಕೋರ್ಟು ಕಚೇರಿ ಎಂದು ತಿರುಗಾಡುತ್ತಿದ್ದವರು ಒಟ್ಟಿಗೆ ಸೇರಿದಾಗ ಬಹಿರಂಗವಾಗಿಯೇ ಆಡುತ್ತಿದ್ದರು. ಆಗ ಯಾವ ವಿವಾದಗಳೂ ಆಗುತ್ತಿರಲಿಲ್ಲ. ಈಗ ಭಗವಾನ್ ಅವರು ಹೇಳಿದಾಗ ಯಾಕೆ ಇಷ್ಟು ಗಲಾಟೆ? ಇದಕ್ಕೆ ಎರಡು ಮೂರು ಕಾರಣಗಳಿರಬಹುದು. ಭಗವಾನರ ರೀತಿ ನೀತಿ ಮಾತುಕತೆ ಹೇಗಿದೆಯೆಂದರೆ ಊರಿಗೆಲ್ಲಾ ಗೊತ್ತಾಗಿರುವ ಗುಟ್ಟನ್ನು ನನ್ನ ಕಿವಿಯಲ್ಲಿ ಮೆಲ್ಲಗೆ ಹೇಳು ಎಂದಂತಿದೆ. ಜತೆಗೆ ಇವೆಲ್ಲವನ್ನೂ ಈಗ ತಾನೇ ತಾವೇ ಸಂಶೋಧಿಸಿ ಹೇಳುತ್ತಿದ್ದೇನೆ; ಅಜ್ಞಾನದ ಅಂಧಕಾರದಲ್ಲಿರುವ ಜಗದ ಕಣ್ಣು ತೆರೆಸುತ್ತಿರುವವನು ನಾನೊಬ್ಬನೇ ಎಂಬ ಹುಂಬತನ ಕಾಣಿಸುತ್ತಿದೆ. ಇನ್ನುಳಿದಂತೆ ಅವರನ್ನು, ಅವರ ಮಾತುಗಳನ್ನು ಬೆಂಬಲಿಸಲು ಪುರುಷ ಅಹಂಕಾರ, ಸ್ತ್ರೀವಾದಿ ನೆಲೆ ಇತ್ಯಾದಿಗಳಿಂದ ನಾನಾ ವಾದಗಳನ್ನು ಹೊಸೆಯುವವರನ್ನು, ಅವರ ವರಸೆಗಳನ್ನು ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳಬೇಕಾಗಿಲ್ಲ. ಏಕೆಂದರೆ ಇವರೆಲ್ಲಾ ಅಡ್ಡಗೋಡೆಯ ಮೇಲೆ ಕೂತ ಬೆಕ್ಕುಗಳ ಹಾಗೆ. ಯಾವಾಗ ಯಾವ ಬದಿಗೆ ಬೇಕಾದರೂ ನೆಗೆಯುವಂತಹವರು. ಅವರುಗಳು ತಮ್ಮ ತಮ್ಮ ಸೆಮಿನಾರ್ ಭಾಷಣಗಳನ್ನು ಸೆಮಿನಾರ್ ಹಾಲಿನಲ್ಲೇ ಮರೆತು ಮನೆಗೆ ಹೋಗುತ್ತಾರೆ. ‘ಭಾರತೀಪುರ’ ಕಾದಂಬರಿಯ ಜಗನ್ನಾಥ ಇಂತಹವರ ಪ್ರತಿನಿಧಿ. ಆ ಕಾದಂಬರಿಯ ಕೊನೆಯಲ್ಲಿ ‘ತಾನು ಯಾರ ಮಗ?’ ಎಂಬ ಅನುಮಾನ ಅವನಿಗೆ ಬಂದಾಗ ಅವನ ‘ಜಾತಿ ನಿರ್ಮೂಲನ ಕ್ರಾಂತಿಯೇ ‘ನಿಂತುಹೋಗುತ್ತದೆ!!

 1. ಭಗವಾನ್ ಅವರ ಮಾತಿನಿಂದ ನೋವಾಗಿರುವುದು ಜನರ ಪುರುಷಾಹಂಕಾರಕ್ಕೆ. ಆದ್ದರಿಂದ ಎಲ್ಲರೂ ಭಗವಾನರನ್ನು ವಿರೋಧಿಸುತ್ತಾ ಇದ್ದಾರೆ. ಪುರುಷಪ್ರಧಾನ ಸಮಾಜದಲ್ಲಿ ಪುರುಷಾಹಂಕಾರ ಜನಗಳಲ್ಲಿ ಬೇರು ಬಿಟ್ಟಿರುವಾಗ ಭಗವಾನ್ ಜನರು ದೇವರು ಎಂದು ನಂಬುವ ರಾಮನ ಜನನದ ಬಗ್ಗೆ ಮಾತಾಡುವಾಗ ಆತನ ತಂದೆಯ ನಿರ್ವೀರ್ಯತೆಯನ್ನು ಜ್ನಾಪಿಸಿದ್ದೆ ಜನರು ಆಕ್ರೋಷಿತರಾದದ್ದು ಆಶ್ಚರ್ಯವೇನಲ್ಲ ಎಂಬ ಈ ಬರಹ ಪ್ರತಿಪಾದಿಸುತ್ತದೆ.
  ಆದರೆ, ಭಗವಾನರ ಹೇಳಿಕೆ ತದ್ವಿರುದ್ಧವಾಗಿ ಕೆಲಸ ಮಾಡಿದೆ ಅನ್ನುವುದನ್ನು ನಾವು ನೋಡಬಹುದು.
  1. ಯಾರಿಗೆ ಪುರುಷ ಅಹಂಕಾರ ಇರುತ್ತದೋ ಆತ ಗಂಡಸುತನದ ಮಾತಾಡುತ್ತಾನೆ. ನೀನು ಅಪ್ಪನಿಗೆ ಹುಟ್ಟಿದವನೇ ಅಲ್ಲ ಅಂತ ಹೇಳುವುದು ಮೂದಲಿಕೆಯ ಮಾತು. ಪುರುಷ ಅಹಂಕಾರ ಉಳ್ಳವನು ಆಡುವ ಮಾತು.
  2. ಭಗವಾನ್ ಶ್ರೀರಾಮ ಅಪ್ಪನಿಗೆ ಹುಟ್ಟಿದವನಲ್ಲ ಅನ್ನುವುದನ್ನು ಮೆಚ್ಚುಗೆಯಿಂದಲೋ, ಮಹಿಳಾ ಸ್ವಾತಂತ್ರ್ಯದ ಸಮರ್ಥನೆಗಾಗಿಯೋ ಹೇಳಿಲ್ಲ. ಆ ಮಾತನ್ನು ಅವರು ಮೂದಲಿಕೆಯ, ಹೀಗಳೆಯುವ ಮಾತಾಗಿ ಹೇಳಿದ್ದಾರೆ.
  3. ಅವರ ಮಾತಲ್ಲಿ ಅಪ್ಪನಿಗೆ ಹುಟ್ಟದೇ ಇರುವುದು ಅತ್ಯಂತ ಕೀಳು ಎಂಬ ಭಾವನೆಯಿದೆ ಮತ್ತು ಅದೇ ಕಾರಣಕ್ಕೆ ಆ ಮಾತು ಶ್ರೀರಾಮನ ತಾಯಿಯ ಚಾರಿತ್ರ್ಯವನ್ನು ಅನುಮಾನಿಸುವಂತಿದೆ. ಹೀಗಾಗಿ ಇಲ್ಲಿ ಪುರುಷ ಅಹಂಕಾರ ಎದ್ದು ಕಾಣುವುದು ಭಗವಾನರ ಹೇಳಿಕೆಯಲ್ಲೇ ಹೊರತು, ವಿರೋಧಿಸುವವರ ಆಕ್ರೋಶದಲ್ಲಿ ಅಲ್ಲ.
  4. ಶ್ರೀರಾಮನ ಹುಟ್ಟಿನ ಕತೆ, ಪುತ್ರಕಾಮೇಷ್ಠಿಯ ಕತೆ ಕನ್ನಡ ಜನಕ್ಕೆ ಅನಾದಿಕಾಲದಿಂದಲೂ ಗೊತ್ತು. ಅದನ್ನು ಭಗವಾನರು ಹೇಳಿ ತಿಳಿದುಕೊಳ್ಳಬೇಕಾದದ್ದೇನಿಲ್ಲ. ಜನತೆಯಲ್ಲಿ ಪುರುಷ ಅಹಂಕಾರ ಇರುತ್ತಿದ್ದರೆ ಶ್ರೀರಾಮನನ್ನು ಅವರು ಸ್ವೀಕಾರ ಮಾಡುತ್ತಲೇ ಇರಲಿಲ್ಲ. ಹಾಗೆ ನೋಡಿದರೆ ಯಾರನ್ನೆಲ್ಲ ಮಂದಿ ವೀರನೆಂದೂ ಆದರ್ಶನೆಂದೂ ಸ್ವೀಕಾರ ಮಾಡಿದ್ದಾರೋ, ಯಾರನ್ನೆಲ್ಲ ಗೌರವಿಸುತ್ತಾರೋ ಅವರೆಲ್ಲರೂ ಮಾತೃಪ್ರಧಾನ ವ್ಯವಸ್ಥೆಯಿಂದಲೇ ಬಂದವರು. ವೇದವ್ಯಾಸ, ಭೀಷ್ಮ, ಅರ್ಜುನ, ಕರ್ಣ, ಧರ್ಮರಾಯ- ಎಲ್ಲರೂ ಕುಂತಿಯ ಮಕ್ಕಳೇ, ಕೌಂತೇಯರೇ. ಶ್ರೀಕೃಷ್ಣ ಎಷ್ಟು ವಾಸುದೇವನೋ ಅಷ್ಟೇ ದೇವಕೀಸುತ.
  5. ಈ ಪುರುಷ ಅಹಂಕಾರ ಇತ್ಯಾದಿ ವಾದಗಳೆಲ್ಲ ವಿಚಾರವಂತಿಕೆಯ ಅತಿರೇಕದಿಂದ ಹುಟ್ಟುವಂಥವು. ಕನ್ನಡ ಮಂದಿ ಒಂದು ಕತೆಯನ್ನು ಭಾವನಾತ್ಮಕವಾಗಿ ಸ್ವೀಕಾರ ಮಾಡುತ್ತಾರೆಯೇ ಹೊರತು, ವಿಚಾರಾತ್ಮಕವಾಗಿ ಅಲ್ಲ.
  6. ಸೃಜನಶೀಲವಾಗಿ ಏನನ್ನಾದರೂ ಬರೆಯದೇ ಹೀಗೆ ಆರೋಪಿತ ವಿಚಾರಧಾರೆಗಳ ಮೂಲಕ ಯಾರನ್ನೋ ಸಮರ್ಥಿಸಿಕೊಳ್ಳಲು ಹೆಣಗಾಡಿದಾಗ ಇಂಥ ಟೊಳ್ಳು ವಿಚಾರಗಳು ಹೊರಹೊಮ್ಮುತ್ತವೆ. ಅವುಗಳು ಅತ್ಯಂತ ತರ್ಕಬದ್ಧ ಎಂಬಂತೆ ಭಾಸವಾಗುತ್ತವಾದರೂ ಆಳದಲ್ಲಿ ಪೊಳ್ಳಾಗಿರುತ್ತವೆ, ಇಲ್ಲಾಗಿರುವಂತೆ.
  7. ಎಲ್ಲಕ್ಕಿಂತ ಹೆಚ್ಚಾಗಿ ಶ್ರೀರಾಮ ಕತೆಯ ಪ್ರಕಾರ ಕೂಡ ಅವತಾರಿ. ಅವತರಿಸುವವನಿಗೆ ತಂದೆಯಾಗಲೀ ತಾಯಿಯಾಗಲೇ ಗರ್ಭವಾಗಲೀ ನೆಪ ಮಾತ್ರ ಎಂದು ಕನ್ನಡ ಜನಪದಕ್ಕೆ ಚೆನ್ನಾಗಿ ಗೊತ್ತಿದೆ.

 2. ಯಾರು ಏನೇ ಹೇಳಲಿ ‘ತಾಯಿ ಮಾತ್ರ ಸತ್ಯ. ತಂದೆ ಒಂದು ನಂಬಿಕೆ’ ಅಷ್ಟೇ! ತನ್ನ ಮಗು ಯಾರಿಗೆ ಹುಟ್ಟಿದ್ದೆಂದು ತಾಯಿಗೆ ಮಾತ್ರ ಗೊತ್ತಿರುತ್ತದೆ. ಈ ಪ್ರಪಂಚ ಏನೇ ನೀತಿ ನಿಯಮ ಹೇರುತ್ತಾ ಬೊಗಳುತ್ತಾ ಇರಲಿ, ಹೆಣ್ಣು ಯಾರಿಂದ ತಾನು ಫಲವತಿಯಾಗಬೇಕು ಎಂಬುದನ್ನು ಯಾರಿಗೂ ಕಾಣದಂತೆ ಈಗಲೂ ನಿಧಱರಿಸುತ್ತಿದ್ದಾಳೆ. ಪಾಪದ ಚಚಾಱಪಟುಗಳನ್ನು ನೋಡಿದರೆ ಅಯ್ಯೋ ಎನಿಸುತ್ತದೆ.

 3. Jogi sir you try understand the hypothesis here. There is a way of looking at things different way. I think Samvartha has done very good work and clear in putting his thoughts. Baghvan is highlighting the lapses in our epics. This has been done by many including A.K. Ramanujan.
  But Baghavan is bit vociferous. Having said that we can’t ignore him. He has the rights to bring facts to before the people. But interesting thing is that you people opposing his views or standing with the fringe right wing elements is clueless.

 4. jogiyavare nimma vaadavannu oppikkolluttene, Bhagavan avaru raama appanige huttidalla endu ethi saaruva agatya iralilla.
  Adare illiruva prashne, appanige huttalilla embuva maatu yaake janarannu ishtondu keralisuttade?. Ramayanada prakara alli dasharata mattu hendatiyaru tammage makkalaguvudilla embuvudanu aritu innobara athavaa innondu vidhanadinda makkalannu huttisuttare. adu aagina samaja oppikondiruva neetiyagirutte, illavaadare obba raaja aagi dsharatha ee reetiyalli makkalannu padedukollutiralilla. Andare aa samajadalli appaninda huttalilla embuvudu tappagiralilla, matte nachigeya vishyavu agiralilla.
  Haagiruvaaga ade matanne BHagavan avaru heliruvudu, adaralli ishtondu keraluva agatya enide. Rama appanige huttila anta matrege avaru, avarannu nambuvavirge devaralanta aaguttara. Yaaru avara appanige huttiddare embha karanakke deveragali devara samanavagali aguvudilla.

  Illi ee maatu janarannu istondu keralisakke kaarana janaralli athava samajadalli kadimeyagutiruva sensibility ashte. Obba vyakti avarige enu ramayanadalli kanisutto adannu heliddare, aduondarthadalli nijavu howdu. Adare eegina purusha pradhaana samajakke aa nijavannu oppikkolluva dhairya illa.. Athava a satya eega nachikeya vishayavagide. samajada yochaneyallagiruva ee badalavanege sahil heliruva purushahanara karana endu nambiddene.

 5. ಜೋಗಿಯವರ ಚಿಂತನೆಗಳು, ವಿಶ್ಲೇಷಣೆಗಳು ನಿಜಕ್ಕೂ ಸರಿ. ಬೇರೆ ತರಹ ವಿಶ್ಲೇಷಿಸುವ ಈ ಪುರುಷ ಸಿಂಹರು ಇಂತಹುದೇ ಹೀಯಾಳಿಕೆಗಳನ್ನು ಅನ್ಯರ ಕುರಿತಾಗಿ ಏಕೆ ನೀಡುವುದಿಲ್ಲ? ಬಹುಜನ ನಂಬಿದ ಮೌಲ್ಯಗಳನ್ನು ವಿನಾಕಾರಣ ಕೆಣಕುವುದು, ಕೆದಕುವ ಸಂಸ್ಕೃತಿ ಈ ನೆಲಕ್ಕೆ ತಕ್ಕುದಲ್ಲ ಬಿಡಿ. ಯಾಕೋ ವಿಚಾರಧಾರೆಗಳು ದಾರಿತಪ್ಪುತ್ತಿವೆ ಎಂದೆನಿಸುವುದಿಲ್ಲವೇ? ಇಲ್ಲಸಲ್ಲದ ಹೇಳಿಕೆಗಳಿಂದ ಸಮಾಜದ ಸ್ವಾಸ್ಥ್ಯ ಹದಗೆಡುವುದು ಬಿಟ್ಟರೆ ಇದರಿಂದ ಏನನ್ನಾದರೂ ಸಾಧಿಸಲು ಸಾಧ್ಯವೆ. ವಾದಕ್ಕಾಗಿ ಗೆಲ್ಲುವುದು ಸಲ್ಲದ ಮಾತು. ವಿಚಾರವಂತರ ಲಕ್ಷಣಗಳಲ್ಲ. ಜಗಜಿತ್ ಸಿಂಗರ ಗಜಲ್ ನ ಸಾಲು, ‘ಆಗ್ ತೊ ಕ್ಯಾ ಪಲ್ ದೋ ಪಲ್ ಮೇಂ ಲಗತಾ ಹೈ, ಬುಝತೆ ಬುಝತೇ ಏಕ್ ಜಮಾನಾ ಲಗತಾ ಹೈ’ ……ನೆನಪಾಯಿತು. ಏನನ್ನಾದರೂ ಹೇಳುವುದಕ್ಕಿಂತ ಮೊದಲು ವಿವೇಕ ಹೂಂ ಅನ್ನಬೇಕು. ಇಲ್ಲವಾದರೆ ಎಲುವಿಲ್ಲದ ನಾಲಿಗೆ ಇದೆ ಎಂದು ಏನನ್ನಾದರೂ ಹೇಳಿದರೆ, ಅದು ಹೇಳುವವರಿಗೆ ಭೂಷಣವಾಗುವುದಿಲ್ಲ, ಇದನ್ನು ಯಾರನ್ನೂ ಹೀಯಾಳಿಸುವುದಕ್ಕೆ, ಆಥವಾ ಬೆಂಬಲಿಸುವುದಕ್ಕೆ ಹೇಳುತ್ತಿರುವುದಲ್ಲ. ಸುಮ್ಮನೆ ಸಮಾಜದ ಒಂದು ನಂಬಿಕೆಯನ್ನು, ಸ್ವಾಸ್ಥ್ಯವನ್ನು ಕೆದಕುವುದರಲ್ಲಿ ಯಾವುದೇ ಅರ್ಥವಂತಿಕೆ ಇಲ್ಲವೆಂಬುದನ್ನು ವಿವೇಕ ಅರಿಯಬೇಕು. ಅನ್ಯಥಾ ಭಾವಿಸಬಾರದು. ನಮಸ್ಕಾರಗಳು.

 6. ಜೋಗಿಯವರ ವಿಶ್ಲೇಷಣೆ ಸಾಧುವಾಗಿದೆ. ಶ್ರೀ ರಾಮನ ಹುಟ್ಟಿನ ಬಗ್ಗೆ ಗೊತ್ತಿರುವಂತದ್ದೇ, ಅದರ ಬಗ್ಗೆ ಭಗವಾನ್ರು ನೆನಪಿಸಿವುದು ಅನಗತ್ಯ, ಹಾಗೂ ಅನೌಚಿತ್ಯ. ಕೇವಲ ವಾದಕ್ಕಾಗಿಯೋ, ಅಥವಾ ಸಿಟ್ಟಿಗಾಗಿಯೋ, ಯಾರನ್ನೋ ಕೆಣಕಲಿಕ್ಕಾಗಿಯೋ ಆಡಿದ ಮೂದಲಿಕೆಯ ಮಾತು ಭಗವಾನರದ್ದು. ಇದರ ಬದಲು ಮೌಲಿಕವಾದದ್ದನ್ನು, ಸೃಜನಶೀಲವಾದದ್ದನ್ನು ಬರೆದರೆ ಅದು ಗೌರವ!.

 7. How does it really matters, first of all. If I have a belief that I’m from my father, if people are also in the same belief, why Bhagawan is so much interested in finding out my real father and announcing it. People should understand the real intention and business of these Bhagawans. I agree with all 7 points of Jogi.

 8. ಪುರುಷಾಹಂಕಾರವನ್ನು ಮೆರೆಯುವಾಗ ಸನಾತನಿಗಳು ಪ್ರಗತಿಪರರು ಒಂದೆ ಎಂಬುದನ್ನು ಸಂವರ್ತಾ ಸಾಹಿಲ್ ಸರಿಯಾಗಿ ವಿಶ್ಲೇಷಿಸಿದ್ದಾರೆ. ಮಾತೃತ್ವವವನ್ನು ಗೌರವಿಸಲಾರದ ಇಬ್ಬರೂ ಪುರುಷಾಮೃಗಗಳೆ.

 9. “ರಾಮ ಅಪ್ಪನಿಗೆ ಹುಟ್ಟಿದವನಲ್ಲ..” ಎಂಬ ಭಗವಾನ್ ಅವರ ಮಾತಿನಲ್ಲಿ ಮುಖ್ಯವಾದದ್ದು ಏನೋ ಇದೆ ಅಂತ ನನಗನಿಸುವದಿಲ್ಲ. ರಾಮ ದಶರಥನಿಂದ ನೇರವಾಗಿ ಹುಟ್ಟಿದ್ದಲ್ಲ ಅಂತ ರಾಮಾಯಣದಲ್ಲಿದ್ದರೂ ಕೂಡ!

  ವೈಯಕ್ತಿಕವಾಗಿ ನನಗೆ ರಾಮ, ರಾವಣ, ಸೀತೆ, ಹನುಮ, ಶೂರ್ಪನಖಿ, ತಾಟಕಿಯರು ಒಂದೊಂದು ಕಾನ್ಸೆಪ್ಟುಗಳಷ್ಟೇ. ಒಳ್ಳೆಯತನ, ಕೆಟ್ಟತನ, ಕಾಮುಕತೆ, ಕ್ಷುದ್ರತೆ, ಲಂಪಟತನ, ಹೀರೋತನದ ಪಾತ್ರಗಳಷ್ಟೇ. ಇಲ್ಲಿ, “ಹೀಗೆ ಮಾಡಿದರೆ, ಹೀಗೆ ಫಲ ಸಿಗುತ್ತದೆ..” ಅನ್ನುವ ಫಾರ್ಮುಲಾ ಡಿರೈವ್ ಮಾಡಿಟ್ಟಿರುವ ಒಂದು ಸೂತ್ರವೆಂಬಂತೆ ಇಡೀ ರಾಮಾಯಣವನ್ನು ನೋಡುತ್ತೇನೆಯೇ ಹೊರತು, ರಾಮನ ಪಾತ್ರವನ್ನು ರಾವಣ ಮಾಡಿದ್ದರೂ, ಮಂಡೋದರಿಯನ್ನು ರಾಮನೇ ಹೊತ್ತೊಯ್ದಿದ್ದರೂ ಪರಿಣಾಮ ಒಂದೇ ಆಗಿರುತ್ತಿತ್ತು ಅಂತ ಭಾವಿಸುತ್ತೇನೆ.

  ಏನೋ ಒಂದು ಬಲಿಷ್ಠ ಸಂದೇಶ ಕೊಡುವ ನಿಟ್ಟಿನಲ್ಲಿ ಕತೆ ಹೆಣೆಯುವ ಕತೆಗಾರ ಬಿಳುಪಿನ ಜೊತೆ ಕಪ್ಪು ಬಣ್ಣವನ್ನೂ ಬೇಕಂತಲೇ ಸೃಷ್ಟಿಸುತ್ತಾನೆ. ಇಲ್ಲಿ, ಬಿಳಿ ಯಾಕೆ ಸತ್ಯ, ಕಪ್ಪು ಯಾಕೆ ಮಿಥ್ಯ ಅಂತ ತಗಾದೆ ತಗೆದರೆ ನಾವು ಹೊಸತನ್ನೇನೂ ಹೇಳಿದಂತಾಗದು. ಅಸಲಿಗೆ, ಬಿಳಿಯ ಜಾಗದಲ್ಲಿ ಕಪ್ಪಿದ್ದರೂ, ಕಪ್ಪಿನ ಜಾಗದಲ್ಲಿ ಬಿಳಿ ಬಂದು ಕುಳಿತರೂ ಏನೇನೂ ಫರಕಾಗದು. ಒಟ್ಟಿನಲ್ಲಿ, ಮಿಥ್ಯೆಯ ಮೇಲೆ ಸತ್ಯದ ಜಯ ನಿಕ್ಕಿಯಾಗಿರಬೇಕಷ್ಟೇ.

  ಪುರುಷಾಲಂಕಾರ, ಪುರುಷಹಂಕಾರ ಇವೆಲ್ಲ ನನಗನಿಸುವಂತೆ ಕೇವಲ ಕೂದಲು ಸೀಳಿ ನೋಡುವ ಕ್ರಮಗಳಷ್ಟೇ. ಇದರಿಂದ ಈಗಾಗಲೇ ಡಿರೈವ್ ಆಗಿರುವ ಫಾರ್ಮುಲಾಗಳಿಗಿಂತ ಹೊಸತಾದ, ಸಕಾಲಿಕವಾದ ಮತ್ತು ಸಾರ್ವಕಾಲಿಕವೂ ಅನಿಸುವಂಥ ಬೇರೆ ಯಾವುದಾದರೂ ಫಾರ್ಮುಲಾ ಬರಬಹುದು ಅನ್ನುವ ನಿರೀಕ್ಷೆ ನನ್ನಲ್ಲಿಲ್ಲ..

  -Rj

  • ಋಷ್ಯಶೃಂಗದಲ್ಲಿ ಅಗ್ನಿಯಿಂದ ಪ್ರಜಾಪತಿಯು ಪಾಯಸವನ್ನು ದಶರಥನಿಗೆ ನಿನ್ನ ಹೆಡತಿಯರಿಗೆ ಕೊಡು ಮಕ್ಕಳಾಗುತ್ತವೆ ಎಂದ ಮಾತ್ರಕ್ಕೆ ದಶರಥನಿಗೆ ಹುಟ್ಟಿಲ್ಲ ಅಂತ ತಿಳಿಯುವುದು ಸರಿಯಲ್ಲ. ಯಾಕೆಂದರೆ ವಿಶ್ವಾಸ, ಭಕ್ತಿ, ನಂಬಿಕೆಯಿಂದ ಇಷ್ಟದೇವರಲ್ಲಿ ಬೇಡಿಕೆಯಿಟ್ಟಾಗ ಅಲ್ಲಿರುವ ಅರ್ಚಕ ಯಾವದೋ ದೆವರ ಪ್ರಸಾದ ಕೊಡುತ್ತಾನೆ ನಂತರ ಅವಳು ಗರ್ಭವತಿಯಾದರೆ ಅವಳು ಅರ್ಚಕನಿಂದ ಗರ್ಭವತಿಯಾದಳು ಗಂಡನಿಂದ ಅಲ್ಲ ಅನ್ನಲಾಗುವುದಿಲ್ಲ

 10. Ee lekhana ondhu pollu samarthaneyanthe thoruthadhe. Ramayana mathu Mahabarathadha Kathegalu namma janakke modhalinindhalu gothu mathu Rama janisidha katheya baggeyu gothu. Egina dinagalallu makkaLagadha dampathigalu vaidhyakiya padhathiya sahayadindha(IUI,IVF) makkaLannu padeyuthare adhara artha avara makkLu thandhege huttidhallavendhe Bhagawanara prakara?

  Lekhakaradhavaru samajakke olleyadhaguvanthadhenadharu bareyabeke horathu asambhadha heLike kottu samajadha swasthya kedisuvudhalla. Bhagawanara vayyasige irabekadha gambirya/thiLivaLike avaralli kaNuthilla. Summane pracharakkoskara bahujanara nambikkege dhakke thandhu galabegaLige karaNavaguthidhare. Avara HeLikegala pariNamadha vaksamaragaLannu eegagale samjika jaala thaNagaLalli nodabahudhu.

  Inthavaru kanDithavagiyu prashasthige harhare?

 11. ವಿಮರ್ಶಕ ಕೆ.ಎಸ್.ಭಗವಾನ್ ಹೇಳಿದ್ದು ಸತ್ಯವಿತ್ತು. ಅದನ್ನು ನೀವು ಮತ್ತಷ್ಟು ವಿವರವಾಗಿ ಬರೆದಿದ್ದೀರಿ. ಮನೋವೈಜ್ಞಾನಿಕವಾಗಿ ಪುರುಷನ ಗಂಡಸ್ತನಕ್ಕೆ ಸವಾಲಾದಾಗ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಚನ್ನಾಗಿ ಹೇಳಿದ್ದಾರೆ. ಭಗವಾನ್ ಇದ್ದದ್ದನ್ನು ಇದ್ದಂತೆ ಅಷ್ಟೇ ಹೇಳಿದ್ದರು. ರಾಮಾಯಣದಲ್ಲಿ ಉಲ್ಲೇಖಗೊಂಡಿರುವ ಮತ್ತು ಜನಮಾನಸದಲ್ಲಿರುವ ಸತ್ಯವನ್ನೇ ಹೇಳಿದ್ದರು. ಆದರೆ ಇದನ್ನು ಕೆಲವರು ರಾಜಕೀಯಗೊಳಿಸಿದರು. ಹಲವರು ತಮ್ಮನ್ನೇ ಅವಮಾನ ಮಾಡಿದಷ್ಟು ಕಂಗಾಲಾದರು. ಕೆರಳಿ ಕೆಂಡವಾಗಿ ಪ್ರತಿಕ್ರಿಯಿಸಿದರು. ಸತ್ಯವನ್ನು ಅರಗಿಸಿಕೊಳ್ಳುವ ತಾಳ್ಮೆ ಅವರಲ್ಲಿ ಇರಲಿಲ್ಲ. ಭಗವಾನ್ ಹೇಳಿಕೆಯನ್ನು ಹೊರೆಗಚ್ಚುವ ಗೋಜಿಗೂ ಹೋಗಲಿಲ್ಲ. ಆ ಕ್ಷಣದ ಸಿಟ್ಟು ಮತ್ತು ಬಲಪಂಥೀಯ ವಿಚಾರಧಾರೆಯವರು ಮತ್ತು ಶ್ರೀರಾಮನ ಶ್ರೇಷ್ಠತೆಯನ್ನು ಕೊಂಡಾಡುವವರು ವಿವಾದ ಹುಟ್ಟುಹಾಕಿದರು. ಆದರೆ ಮಹಾಭಾರತದ ಕರ್ಣನಿಗೂ ಅಪ್ಪ ಇಲ್ಲ. ಆತ ಹುಟ್ಟಿದ್ದು ಸೂರ್ಯನ ವರಪ್ರಸಾದದಿಂದ ಅಲ್ಲವೇ? ಅವನು ಸೂತಪುತ್ರ. ರಾಮ ರಾಜಮನೆತನವನು ಎಂಬ ಭಿನ್ನತೆ ಇಂದಿಗೂ ಇದೆ. ರಾಮನ ಬಗೆಗೆ ಅಭಿಮಾನವುಳ್ಳವರು ಕರ್ಣನ ಕುರಿತು ಅಷ್ಟೊಂದು ಆಸಕ್ತಿ ತೋರಿಸುವುದಿಲ್ಲ. ಯಾಕೆಂದರೆ ಇದನ್ನು ಇನ್ನೊಂದು ಆಯಾಮದಿಂದಲೂ ನೋಡಲು ಅವಕಾಶವಿದೆ. ವೈದಿಕ ಮತ್ತು ಶೈವ ಪಂಥಗಳೆರಡೂ ಪರಸ್ಪರ ತಾನು ಶ್ರೇಷ್ಟ ಎಂದು ವಾದಿಸಿಕೊಂಡು ಕಿತ್ತಾಡುತ್ತಲೇ ಬರುತ್ತಿವೆ. ಆದರೆ ಇಂದು ಗೆದ್ದಿರುವುದು ವೈದಿಕ ಪಂಥವೇ ಹೊರತು, ಶೈವ ಪಂಥವಲ್ಲ. ಶೈವ ಪಂಥದ ಜನಪರ ಅಂಶಗಳನ್ನು ಪ್ರತಿಪಾದಿಸಬೇಕಾದವರು ವೈದಿಕ ಪಂಥಕ್ಕೆ ಶರಣು ಹೋಗಿದ್ದಾರೆ. ಹಾಗಾಗಿಯೇ ಇಂದು ರಾಮನ ಕುರಿತು ಸತ್ಯವನ್ನು ಹೇಳಿದರೆ ಮುಗಿಬೀಳುವಂತಾಗಿದೆ. ನಿಜದ ಸಮಸ್ಯೆಗಳನ್ನು ಬಿಟ್ಟು ಪೌರಾಣಿಕ ಕಾವ್ಯಗಳ ಪಾತ್ರಗಳ ಕುರಿತು ಜಗಳ ಮಾಡುವಂತಾಗಿದೆ. ಮನುಷ್ಯ ನಿಜವಾದ ಬದುಕಿನ್ನು ಅನುಭವಿಸದೆ ಭ್ರಮೆಗೆ ಒಳಗಾಗಿ ಸಂಕಟಪಡುತ್ತಿದ್ದಾನೆ. ಸತ್ಯ ಯಾವಾಗಲೂ ಕಹಿಯಾಗಿರುತ್ತದೆ ಎಂಬುದಕ್ಕೆ ಭಗವಾನ್ ಹೇಳಿಕೆಯೇ ಸಾಕ್ಷಿ. ದೇಶದ ಶೇಕಡ 75 ರಷ್ಟು ಜನರಿಗೆ ಇದ್ಯಾವುದೂ ಗೊತ್ತಿಲ್ಲ. ಆದರೆ ಶೇಕಡ 3ರಷ್ಟಿರುವ ಜನರು ಹಲವು ವಿವಾದಗಳನ್ನು ಹುಟ್ಟುಹಾಕುತ್ತಿದ್ದಾರೆ. ವಿಚಾರಗಳನ್ನು ಹರಿಯಬಿಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಪುರೋಹಿತಶಾಹಿ ವ್ಯವಸ್ಥೆಯನ್ನು ಕುವೆಂಪು ವಿರೋಧಿಸಿದ್ದು. ಬರವಣಿಗೆಯ ಮೂಲಕ ಪೆಟ್ಟುಕೊಟ್ಟದ್ದು. ಆದ್ದರಿಂದ ನಾವು ಇಂದು ಭಗವಾನ್ ಪರ ನಿಲ್ಲಬೇಕಾಗಿದೆ.

Leave a Reply