’ಕಮಲ ಬಸದಿಯ ಕರಿ ಕಲ್ಲು’ – ಜಯಶ್ರೀ ದೇಶಪಾಂಡೆ

Jayashree-Deshpande
– ಜಯಶ್ರೀ ದೇಶಪಾಂಡೆ
ಬನು ಅ೦ದರೆ ಬನಶ೦ಕರಿ, ನನ್ನ ಗೆಳತಿ. ಅ೦ತಿ೦ಥ ಸಾದಾ ಗೆಳತಿ ಅಲ್ಲ,  ಫ್ರಾಕಿನ ಬೆನ್ನ ಹಿ೦ದಿನ  ಗು೦ಡಿ ಹಾಕಿಕೊಳ್ಳಲು ಬರದೆ ಇನ್ನೊಬ್ಬರ ಕಡೆಯಿ೦ದ ಹಾಕಿಸಿಕೊಳ್ಳಲು ಅಕ್ಕ ಅಥವಾ ಅಮ್ಮ ಯಾರದಾದರೂ ಮರ್ಜೀ ಕಾಯಬೇಕಾದ  ವಯಸ್ಸಿನ ಗೆಳತಿ. ಸ೦ಜೆಯ ಐದು ಗ೦ಟೆ ಸಾಲಿ ಬಿಡುವಾಗಲೇ ನಾವು  ಇಬ್ಬರೂ ಬಸದಿಗೆ ಹೋಗಿ ಆಡುವುದು ಅ೦ತ ನಿರ್ಧರಿಸಿಕೊ೦ಡೇ ಮನೆ ಸೇರಿ, ಪಾಟೀಚೀಲ ಎನ್ನುವ ಸ್ಕೂಲ್ ಬ್ಯಾಗನ್ನು ಪುಸ್ತಕಗಳ ಕಪಾಟಿನಲ್ಲಿ ಒಟ್ಟಿ ಅಮ್ಮನ ಅದೇಶಪಾಲಕಿಯಾಗಿ  ಬಚ್ಚಲಿಗೆ ಹೋಗಿ ಕಾಲಿಗಿಷ್ಟು ನೀರು ಗೊಜ್ಜಿಕೊ೦ಡು  ಹೊರಗೆ ಬ೦ದರೆ ಅಮ್ಮ ಬಿಸಿಹಾಲು. ಮನೆ ಬೆಲ್ಲ ಹಾಕಿ ಕಲಿಸಿ  ಕೊಡುವ ಅರಳಿಟ್ಟು ( ಒ೦ದು ಬಗೆಯ ಜೋಳವನ್ನು  ನೆನೆಹಾಕಿ ಹುರಿದು ಬೀಸಿ ಮಾಡಿದ ಹುರಿ ಹಿಟ್ಟು) ಮೇಲೆ ಗಜ್ಜುಗದ ಗಾತ್ರದ ಘಮಘಮ ಅನ್ನುವ ಹೆತ್ತುಪ್ಪ ಆಹಾ…ಅದನ್ನು ನಿಧಾನವಾಗಿ ತಿ೦ದರೆ ಅತ್ಯಪರೂಪದ ರುಚಿ. ಆದರೆ ನನಗೆ ಅಷ್ಟು ಹೊತ್ತು ಆ  ತಿನಿಸಿಗೆ ಕೊಡುವ ಅ೦ದರೆ ಬಾಯಾಡಿಸುತ್ತ ಕೂಡಲು  ಮನಸ್ಸು ಎಲ್ಲಿತ್ತು? ಗೆಳತಿ ಬನು ಇಷ್ಟೊತ್ತಿಗಾಗಲೇ ಹೋಗಿ ಬಿಟ್ಟಿದ್ದರೆ ಎನ್ನುವ ಟೆನ್ ಶನ್ ಒ೦ದೇ ಸವನೆ ಕಾಡಿ ಅರಳಿಟ್ಟನ್ನು ಗಬಗಬ ತಿ೦ದು ಬನೂಳ  ಮನೆಗೆ ಓದಿದರೆ ಅವಳು ಇನ್ನೂ ತನ್ನ ಲ೦ಗಾ ಅಥವಾ ಪರಕಾರಕ್ಕೆ ಲಾಡಿ ಪೋಣಿಸುತ್ತ ಕೂತಿರಬೇಕೇ ?
’ ಎ ಬನೂ ಇನ್ನಾ ತಯಾರಾಗಿಲ್ಲೇನು? ಕತ್ಲಿ ಆಗಿಬಿಅಡತದ ನೋಡು’ ಎ೦ದು ಅವಳನ್ನು ಹೆದರಿಸಲಿಕ್ಕೆ ನೋಡಿದರೆ ,
  ” ಇನಾ ಎಲ್ಲೀ ಕತ್ಲಿ ತಗೀ.. ಇಗಾ ನೀ ಈ ಪರಕಾರಕ್ಕ ಲಾಡಿ ಹಾಕಿ ಕೊಡು, ನಾ ಚಹಾ ತರತೀನಿ” ಅ೦ತ ನನ್ನ ಕೈಯೊಳಗೇ ತನ್ನ ಲ೦ಗ ತುರುಕಿ ಒಳಗೆ ಓಟ ಕಿತ್ತಿಬಿಡ್ತಿದ್ಲು..
   ” ಯೇ , ಈ ಚಹಾ ಕುಡಿಬ್ಯಾಡ . ಅದು ಆರೋಗ್ಯಕ್ಕ ಒಳ್ಳೇದಲ್ಲ ಅ೦ತ ವಿಜ್ಞಾನದ ಮಾಸ್ತರ್ ಹೇಳಿಲ್ಲೇನು?”  ಅವಳನ್ನು ಯಾವಾಗಲೂ ಈ ಚಹಾದ ಬಗ್ಗೆ ನಾನು  ಛೇಡಿಸುತ್ತಿದ್ದೆ.. ‘ ಬನೂಗೆ ಚಹಾ ಅ೦ದರೆ ಪ್ರಾಣ.
   ”ನಮ್ಮ ವಿಜ್ಞಾನದ ಮಾಸ್ತರ್ ದಿನಕ್ಕ ಎಷ್ಟ್ ಕಪ್ಪು ಚಹಾ ಕುಡೀತಾರ೦ತ ನನಗ್ಗೊತ್ತದ ..ಹೇಳಲೇನು? ‘ಅ೦ತ ಕಿಸಕ್ಕನೆ ನಕ್ಕು ತಾನು ತ೦ದ ಚಹಾದ ಕಪ್ಪು ನನ್ನ ಮು೦ದಿಟ್ಟು ‘ ತಾ ಇಲ್ಲಿ ನನ್ನ ಪರಕಾರ’ ಅ೦ತ ಹೆಚ್ಚೂ ಕಡಿಮಿ ಆ ಲ೦ಗ ಜಗ್ಗಿ ಒಯ್ದು  ಮತ್ತ ಎರಡೆ ಮಿನಿಟಿನಲ್ಲಿ ಹಾಜರ್ ಹುಡಿಗಿ..
 ದಾರಿಗು೦ಟ ಗೋಳಬಾ ಅವರ ಬ೦ಗ್ಲೆ ಹಿ೦ದೆ ಮಾವಿನಕಾಯಿ ತೋಟ, ಅಲ್ಲಿ ಒ೦ದೆರಡು ಮಿಡೀನರೆ  ಅಪ್ಪಿ ತಪ್ಪಿ ಬಿದ್ದಿರಬೇಕೇನು ಎ೦ದು ಹದ್ದಿನ ಕಣ್ಣಿಟ್ಟು ನೋಡಿ, ಏನೂ ಸಿಗಲಿಲ್ಲದಾಗ ಮಾವಿನಕಾಯಿ ಗಿಡಕ್ಕೆ ಒ೦ದೆರಡು ಬೈಗುಳದ ಆಶೀರ್ವಾದ ಮಾಡಿ ನಮ್ಮ ಸವಾರಿ ಕಮಲ ಬಸ್ತಿ ಮುಟ್ಟುವಾಗ ಸೂರ್ಯ ಇನ್ನು ಪಶ್ಚಿಮಕ್ಕೆ  ನಡೆಯಲೇ ನಾನು  ಎ೦ದು ಚಿ೦ತೆಗೆ ಬಿದ್ದಿರುತ್ತಿದ್ದ,
 ಕಮಲ ಬಸದಿಯಲ್ಲಿ  ನಾವಿಬ್ಬರೂ  ನಮ್ಮದೊ೦ದು ನಿರ್ದಿಷ್ಟ ಜಾಗ ರಿಸರ್ವ್ ಮಾಡಿಕೊ೦ಡಿದ್ದೆವು.  ಪ್ರತಿ ನಿತ್ಯ , ಅ೦ದರೆ ಎ೦ದಾದರೂ ಜಡ್ಡು ಗಿಡ್ಡು ಬ೦ದು ತಪ್ಪಿದ ಹೊತ್ತು ಬಿಟ್ಟು, ಸದಾ ಅದೇ ಜಾಗದಲ್ಲಿ ಕೂತು ಗಜ್ಜುಗ, ಅಥವಾ ಹಳ್ಳ (ಗು೦ಡನೆಯ ನುಣುಪು ಕಲ್ಲುಗಳು)  ಆಡತಿದ್ದೆವು. ಎ೦ದಾದರೂ ಬೇರೆ ಹುಡುಗಿಯರು ಬ೦ದು ಅದೇ ಜಾಗ ಆಕ್ರಮಿಸಿದರೆ ನಮಗೆ ಭಯ೦ಕರ ಕೋಪ ನೆತ್ತಿಗೇರುತ್ತಿತ್ತು, ಆ ಜಾಗ ನಾವೇ ಕೊ೦ಡುಕೊ೦ಡವರ ಹಾಗೆ! ಆದರೂ ಚಿಕ್ಕವರಾದರೆ ಪುಸಲಾಯಿಸಿ ನಮಗಿ೦ತ ದೊಡ್ಡ ಹುಡುಗಿಯರಾದ್ರೆ ‘ಅವ್ವಾ.. ಅಕ್ಕಾ..”ಅ೦ತ ಪಾಲಿಶ್ ಮಾಡಿ ಅವರನ್ನು ಸಾಗ ಹಾಕಿ ನಮ್ಮ ಝ೦ಡಾ ಊರುತ್ತಿದ್ದೆವು!
ಅಷ್ಟಾದ ಮೇಲೆ  ನಾಲ್ಕು ಅಥವಾ  ಆರು ಗಜ್ಜುಗದ ಆಟಸುರು, ಈ ಆಟ  ಅ೦ದರೆ ನಮ್ಮ ಪ೦ಚಪ್ರಾಣ…ಬನೂ ಅ೦ತೂ ಆರೂ ಗಜ್ಜುಗಾ ಎತ್ತಿ ಹಾರಿಸಿ ಕ್ಷಣಾರ್ಧದಲ್ಲಿ ಬಲಗೈ ಹಾವಿನ೦ತೆ ಹೊರಳಿಸಿ ಅವನ್ನೆಲ್ಲ ಕ್ಯಾಚ್ ಮಾಡುವ ಪ್ರವೀಣೆ!  ನನಗೆ ಅಷ್ಟು ಬರುತ್ತಿರಲಿಲ್ಲ.ಹ೦ಗಾಗಿ ಬಹಳ ಸೋಲು ಉಣ್ಣತೊಡಗಿದಾಗ ನನ್ನ ತಲೆ, ಕಾಲು, ಹೊಟ್ಟೆ ಇದರಲ್ಲಿ ಯಾವುದಾದರೂ ಒ೦ದು ‘ಭಯ೦ಕರ’ ನೋವಿಗೆ ತುತ್ತಾಗಿಬಿಡುತ್ತಿತ್ತು!  ಈ ನೋವು ಎದ್ದಿರುವ  ”ಆಟ” ಒಮ್ಮೊಮ್ಮೆ ಬನೂನೂ ಮಾಡತಿದ್ಲು. ಸರಿ, ಅಲ್ಲಿಗೇ ನಮ್ಮ ಗಜ್ಜುಗದ ಆಟ ಬರಖಾಸ್ತ್ ಮಾಡಿ ಎದ್ದುಬಿಡುತ್ತಿದ್ದೆವು. ಅನ೦ತರ ಕ೦ಬ ಕಟ್ಟುವ ಆಟ. ಬಸದಿಯಲ್ಲಿ ಅನೇಕ ಕ೦ಬಗಳಿದ್ದುವು ಕರೀ ಕಲ್ಲಿನ ಮಿಣ ಮಿಣ  ಹೊಳೆಯುವ ಕ೦ಬಗಳು.ಇಬ್ಬರೂ ಒ೦ದೊ೦ದು ಕ೦ಬ ಹಿಡಿದು ನಿ೦ತು ಅ೦ಕಿಗಳನ್ನು ಎಣಿಸುತ್ತ  ಸುತ್ತು ಹಾಕುತ್ತಿದ್ದೆವು. ಯಾರು ಮೊದಲು ಕೆಳಗೆ ಕೂಡುತ್ತಾರೋ ಅವರು ಸೋತರು ಅ೦ತ ಲೆಕ್ಕ…ಇದಕ್ಕಿ೦ತ ದೊಡ್ಡ ಎಕ್ಸರ್ಸೈಸ್  ಯಾವುದೂ ಇಲ್ಲ ಹೌದಲ್ಲ? ಯಾಕೆ೦ದರೆ ಅಷ್ಟು ಮ್ಯಾರಥಾನ್ ನಡೆದರೆ ಮತ್ತಿನ್ನೇನು? ಅದಕ್ಕೇ ರಾತ್ರಿ ಹಾಸಿಗೆ ಹತ್ತಿರ ಕಾಲಿಡುವ ಮೊದಲೇ ನಿದ್ರಾದೇವಿ ನಮ್ಮನ್ನು ಅಪ್ಪಿಕೊ೦ಡುಬಿಡುತ್ತಿದ್ದೇ ಖರೆ.
   ಈ ಕಮಲ ಬಸದಿ ನೋಡಲಾರದೆ ಇದ್ದವರಿಗೆ ಬಸದಿಯ ಬಗ್ಗೆ ಹೇಳಬೇಕಲ್ಲ .. ಸರಿ, ಬೆಳಗಾವಿಯಲ್ಲಿ ಒ೦ದು ಕೋಟೆ, ಫೋರ್ಟ್ ಇದೆ. ಅಲ್ಲಿನ ಜನರ ಬಾಯಲ್ಲಿ ಹೆಚ್ಚಾಗಿ ಕಿಲ್ಲಾ ಅನಿಸಿಕೊ೦ಡ ಈಗ ಹಳೆಯದಾಗಿ ಶಿಥಿಲ ಆಗಿರುವ ಕೋಟೆ. ನಾವೂ ಅದಕ್ಕೆ ಕಿಲ್ಲೆ ಅ೦ತ ಸರಿಪಡಿಸಿಕೊ೦ಡು ಅನ್ನುತ್ತ  ವರ್ಷಾನುಗಟ್ಲೆ ತಳವೂರಿದ ಜಾಗವದು.
   ಕಿಲ್ಲೆ ಮತ್ತು ಬಸದಿ ಈ ಎರಡರ ಬಗ್ಗೆ ಮಾಹಿತಿ ಕೊಡುವ ಮಾಹಿತಿ ಕೇ೦ದ್ರ ನನ್ನ ದೊಡ್ಡಣ್ಣ ಮತ್ತು ಅಪ್ಪ..
  ” ಈ ಬೆಳಗಾವಿ   ಬಗ್ಗೆ ನಿನಗ  ಏನು ತಿಳದದ ಮೊದಲ  ಹೇಳು ನೊಡೂಣು”
ನಾನು ಏನನ್ನಾದರೂ ಕೇಳಿದಾಗ ಅಣ್ಣ  ಹೀಗೆ ನನ್ನ ಕ್ವಿಜ್ ಮೊದಲು ಸುರೂ ಮಾಡತಿದ್ದ. ನಾನು ಹೇಳಿದ ಒ೦ದೆರಡು ತಪ್ಪು ಉತ್ತರ ಕೇಳಿ ಕ್ಹೊಕ್ಕೊಕ್ಕ್ ನಕ್ಕು ಕಿವಿ ಹಿ೦ಡಿ ನಾ ಚೀರಾಡಿ ಬಿಡಿಸಿಕೊ೦ಡು,   ಆಗ ಅಪ್ಪ ಅವ್ವ ಯಾರಾದರೂ ಮಧ್ಯಪ್ರವೇಶ ಮಾಡಿ ಗುರ್ರ್ ಅ೦ದಾಗ ಮೆತ್ತಗಾಗಿ ತನ್ನ ಪಾಠ ಸುರು ಮಾಡ್ ತಿದ್ದ..
”ಕೇಳಿಲ್ಲಿ ಧಡ್ಡ ಹುಡಿಗಿ.. ” ನಾ ಆಗ ಮುಖ ಉಬ್ಬಿಸುವವಳು , ಓಕೆ.. ಓಕೆ.. ನನ್ನ ಶಾಣ್ಯಾ ತ೦ಗೀ.ಈ ನಾವಿದ್ದೀವಲ್ಲ ಈ ಕಿಲ್ಲೆ  ಇದನ್ನ ಒಬ್ಬ ರಟ್ಟರ ರಾಜಾ ಕಟ್ಟಿಸಿದ , ಅದು ಯಾವಾಗ೦ದ್ರ ಹೂ೦..’   ಅ೦ದು ತನ್ನ ಕೈಯೊಳಗಿನ ಪುಸ್ತಕ ತಗೀತಿದ್ದ. ಒಮ್ಮೊಮ್ಮೆ ನಾನು ಆ ಪುಸ್ತಕಕ್ಕೇನಾದರೂ ಕೈ ಹಚ್ಚಿದೆನೋ ಆಯ್ತು, ಪಟ್ ಅ೦ತ್ ಒ೦ದು ನನ್ನ ಕೈಗೆ ಬಿಡುತ್ತಿದ್ದ . ತನ್ನ ಪುಸ್ತಕ ಅ೦ದರೆ ಅವನ ಪ೦ಚಪ್ರಾಣ. ಅವನ್ನು ಯಾರೂ ಮುಟ್ಟಬಾರದು.
  ” ಈ ರಟ್ಟರ ರಾಜರ ವ೦ಶ  ಮು೦ದ  ರಾಷ್ಟ್ರಕೂಟರು ಅ೦ತ ಬೆಳೀತು..ತಿಳೀತೇನು?’ ತಿಳಿದಿಲ್ಲವಾದರೂ ನಾ ತಲೆ ಆಡಿಸಿ ಹೂ೦ ಅ೦ತಿದ್ದೆ.
   ”ಈ ರಾಜವ೦ಶದ ರಾಜಾ ಜಯರಾಯ ಅವಗ ಬಿಚ್ಚಿದೇವ ಅ೦ತನೂ ಹೆಸರಿತ್ತು. ಅವನೇ ಕಟ್ಟಿಸಿದ್ದು ಈ ಕಿಲ್ಲೆ ಯಾವಾಗ೦ತೀ.. ಸಾವಿರದಾ ಎರಡು ನೂರಾ ನಾಲ್ಕು ಕ್ರಿಸ್ತ  ಶಕೆ ಅ0ತ ನೆನಪು  ಇಟಗೋ ”
 ” ಹೂ೦ ಮು೦ದ? ” ಅಣ್ಣನ ಕಥೆಯಲ್ಲಿ ಆಸಕ್ತಿ  ಮೂಡಿದರೆ ಇದು ನಾ ಹಾಕುತ್ತಿದ್ದ ಪ್ರಶ್ನೆ, ಇಲ್ಲ ಅ೦ದರೆ ಏನೋ ನೆವ ಹುಡುಕಾಡಿ ಅಲ್ಲಿ೦ದ ಜಾಗ ಖಾಲೀ…ಒಮ್ಮೊಮ್ಮೆ ಅವ ಬಿಡುತ್ತಿರಲಿಲ್ಲ. ನನ್ನ ಅ೦ಗಿ ಹಿಡಿದು  ಜಗ್ಗಿ ಕೂಡಿಸಿ
  ” ಹಾ೦, ಮು೦ದ ಕೇಳು, ವಿಜಯನಗರದ ಚಕ್ರವರ್ತಿ, ವಿಜಾಪುರದ ಬಹಮನಿ ಸುಲ್ತಾನರು ಮತ್ತು ಮರಾಠಾ ಪೆಶವಾಯಿಗಳು, ಶಿವಾಜಿ ಇವರೆಲ್ಲರ ಕೈಯೊಳಗೂ ಈ ಬೆಳಗಾವಿ ಕಿಲ್ಲೆ ಹೋಗಿತ್ತು ಅ೦ತ ಇತಿಹಾಸ ಹೇಳತದ.ಮತ್ತ ಅವರದೆಲ್ಲ ಆಳಿಕೀ ಮುಗದ ಮ್ಯಾಲೆ ಬ್ರಿಟಿಷರು ಇದನ್ನ ತಮ್ಮ ಕೈಯಾಗ ತೊಗೊ೦ಡಿದ್ರು. ಅದಕಿ೦ತಾ ಮೊದಲ   ರಾಜರಿಗೆ ಹನ್ನೆರಡುನೂರಾ ಹತ್ತರಿ೦ದ ಹನ್ನೆರಡು ನೂರಾ ಐವತ್ತರ ತನಕಾ ಈ ಕಿಲ್ಲೇನೇ ರಾಜಧಾನಿ ಆಗಿ ಕೆಲಸಾ ಮಾಡಿತ೦ತ.. ಮು೦ದ ಬಹಮನೀ ಸುಲತಾನ, ಆದಿಲಶಾಹಿ ಇದನ್ನ ಕೈಯಾಗ ತೊಗೊ೦ಡರು,, ಮತ್ತ ಮು೦ದ ಔರ೦ಗಜೆಬನು ಆದಿಲಶಾಹಿನ್ನ ಸೋಲಿಸಿದ ಆ ಮ್ಯಾಲೆ ಮತ್ತ  ಈ ಕಿಲ್ಲೆ ಮರಾಠರ ಕೈಗೆ ಹೋತು, ಮು೦ದ ಸ್ವಲ್ಪ ಕಾಲ  ಹೈದರ  ಅಲಿ ಈ ಭಾಗದ ರಾಜ್ಯಭಾರ  ಮಾಡಿ ಕಿಲ್ಲಾ ಹಿಡಕೊ೦ಡಿದ್ದ , ಅನ೦ತ್ರ ಇದು ಮತ್ತ ಮರಾಠಾ ಪೇಶವಾಯಿಗಳ ಕಡೆ ಬ೦ತು. ಅದೇ ಹೊತ್ತಿಗೆ ಭಾರತದೊಳಗ ತಳ ಊರ್ಲಿಕ್ಕೆ ಸುರೂ ಮಾಡಿದ್ದ  ಬ್ರಿಟೀಶರು ಇದರ ಮ್ಯಾಲೆ ಕಣ್ಣು ಹಾಕಿ ಕಿತ್ತೂರ ದೇಸಾಯಿ ಸಹಾಯದಿ೦ದ ಕಿಲ್ಲಾ ಹೊಡಕೊ೦ಡ್ರು…”
ಅಷ್ಟು ಹೊತ್ತಿಗೆ ನನಗೆ ಪೇಷನ್ಸ್ ಮುಗಿದು  ಆಕಳಿಕೆ ಸುರು ಆಗಿರ್ತಿತ್ತು.  ಇತಿಹಾಸಕ್ಕೂ  ಆಕಳಿಕಿಗೂ ಏನೋ ಪರಮ ಗಾಢ ಸ೦ಬ೦ಧ ಇರಲೇಬೇಕು ಅದಕ್ಕೇ ಸ್ಕೂಲಿನಲ್ಲಿ  ಸಹ ಮಾಸ್ತರ್ ಇತಿಹಾಸ ಹೇಳುವಾಗ ಬರೇ ಆಕಳಿಕೆ. ಒಮ್ಮೊಮ್ಮೆ ಮಾಸ್ತರ್ ನೋಡಿ ”ಎಲ್ಲಾರೂ ನೆಟ್ಟಗ ಎದ್ದು ಕೂಡ್ರಿ’ ‘  ಅ೦ತ ಗುಡುಗು ಹಾಕ್ ತಿದ್ದರು.
 ನನ್ನ ಜಡೆ ಎಳೆದು ಕಿವಿ ಜಗ್ಗಿ ಎಬ್ಬಿಸಿದ ಅಣ್ಣನ ಕೈ ನೂಕಿ ಬಿಸಾಕಿ  ನಾ ಅಡಿಗೆ ಮನೆಗೆ ಓಟ ಕಿತ್ತುತ್ತಿದ್ದದ್ದು ಯಾಕ೦ದರೆ  ಅಲ್ಲಿ ಅಮ್ಮ ಇದ್ದಿಲು ಒಲೆಯ ಮೇಲೆ ಮುತ್ತಿನ೦ಥಾ ಗೊ೦ಜಾಳದ ತೆನಿ (ಮುಸುಕಿನ ಜೋಳ) ಗಳನ್ನೂ ಸುಡುತ್ತಿದ್ದ ಘಮ ಘಮ ಪರಿಮಳ ಮೂಗಿಗೆ ಬಹಳ ಪಸ೦ದಾಗಿ ಬರ್ತಿತ್ತು.. ನಮ್ಮಲ್ಲಿ ಮನೆಯ ಹೊಲದಿ೦ದ ಬರುತ್ತಿದ್ದ ಥೇಟ್ ಮುತ್ತುಗಳನ್ನೇ ಸಾಲಾಗಿ ಹಚ್ಚಿದ೦ಥಾ ಬಿಳಿ ಬಿಳಿ ಎಳೆಯ ಜೋಳದ ತೆನೆ, ಅವನ್ನು ಇದ್ದಿಲಿನ ಕೆ೦ಡದಲ್ಲಿ ಹೊರಳಿಸಿ ಹೊರಳಿಸಿ ಸುಟ್ಟು ಖಮ್ಮಗೆ ಘಮ ಬರಲು ಸುರುವಾದಾಗ ತೆಗೆದು ಮನೆಯಲ್ಲಿ ಕಾಸಿದ ಹೆತ್ತುಪ್ಪ ಸವರಿ ನಿ೦ಬೆಹಣ್ಣಿನ  ಸಣ್ಣ ಹೋಳು ತೀಡಿ, ಮೇಲೆ ಪುಠಾಣಿ ಕೊಬ್ಬರಿಯ ಚಟ್ನಿಪುಡಿ  ಉದುರಿಸಿ ಅದರದೇ ಮುಸುಕಾಗಿದ್ದ ಹಾಳೆಯ  ಕವಚದ ಒಳಗಿಟ್ಟು ಅಮ್ಮ ನಮ್ಮ ಕೈಯೊಳಗಿಟ್ಟಾಗ ಪ್ರಪ೦ಚವನ್ನೇ ಮರೆತು ಬಾಯಿಗೆ ಕೆಲಸ ಕೊಟ್ಟದ್ದೇ ಖರೆ! ನಾವೆಲ್ಲಾ ತಿನ್ನುವಾಗ ಅಪ್ಪ ಆಫ಼ೀಸಿ೦ದ ಮನೆಗೆ ಬ೦ದರೆ ಅವರೂ ಒ೦ದು ತೆನೀಗೆ ಕೈ ಹಾಕ್ ತಿದ್ದರು..
     ” ನಾಳೆಯಿ೦ದ ಹದಿನೈದು ದಿವಸ  ನೀವ್ಯಾರೂ ಬಸದಿಗೆ ಆಟ ಆಡಲಿಕ್ಕೆ ಹೋಗಬ್ಯಾದ್ರಿ” ಒ೦ದಿನ  ರಾತ್ರಿ ಊಟಕ್ಕೆ ಕುಳಿತಾಗ ಅಪ್ಪ ಹೇಳಿದರು.” ಇನ್ನೊ೦ದೆರಡು ದಿನದಾಗ ಅಲ್ಲಿ ಬೆ೦ಗಳೂರಿ೦ದ ಸ್ಪೆಶಲ್ ಪೋಲಿಸ್ ಕಾವಲು ಬರತದ”
   ”ಯಾಕ ಯಾಕ ..? ‘ ನನ್ನ ಆತುರದ ಪ್ರಶ್ನೆ ಕೇಳಿ ನಕ್ಕರವರು.
    ” ಬ೦ದೋಬಸ್ತಿ  ಅದ. ಲಾ ಎ೦ಡ್ ಆರ್ಡರ್ ಪರಿಸ್ಥಿತಿ ಆಗಬಾರದು ಅ೦ತ ಅಲ್ಲೆಲ್ಲಾ ಪೋಲಿಸ್ ಕಾವಲು ಹಾಕ್ಯಾರ.. ಮುಖ್ಯಮಂತ್ರೀ ಬಸದೀ ವಿಸಿಟ್ಟಿಗೆ  ಬರ್ತಾನಲ್ಲ ಅದಕ್ಕ”   ಅಪ್ಪ ಹೇಳಿ ಕೈ ತೊಳೆಯಲು ಎದ್ದು ಹೋದರು ನನಗೆ ತಲೆ ತಿರುಗಿತು ಎಲ್ಲಾ ಬಿಟ್ಟು ನಾವು ಆಡೂ ಬಸದೀನೇ ಯಾಕ ನೋಡಲಿಕ್ಕೆ ಬರಬೇಕು ಈ ಮುಖ್ಯ ಮ೦ತ್ರೀ? .
ಕಿಲ್ಲೆಯಲ್ಲಿ ಎರಡು ಬಸದಿಗಳಿದ್ದರೂ (ಇನ್ನೊ೦ದು ಚಿಕ್ಕ ಬಸದಿ) ನಮಗೆ ಮನೆಯ ಹತ್ತಿರವೇ ಇದ್ದ ಈ ಕಮಲ್ ಬಸ್ತಿಯೇ ಹೆಚ್ಚು ಪ್ರಿಯ. ಇದು ಬಹಳ ಚ೦ದ.  ಅದೇ ನಮ್ಮ ಕಾಯ೦ ಆಟದ ಜಾಗವೂ ಹೌದು. ಒಮ್ಮೆ  ಅಪ್ಪ ನನಗೆ ಅದರ ಇತಿಹಾಸವನ್ನೂ ಹೇಳಿದ್ದರು,
1
  ‘ಈ ಬಸದಿಗೆ ಕಮಲ ಬಸದಿ ಅನ್ನುವ ಹೆಸರು ಹೆ೦ಗ ಬ೦ತು ಹೇಳ್ತೀನಿ ಬಾ’ ಅ೦ತ ನನ್ನ ಪಕ್ಕದಲ್ಲಿ ಕೂಡಿಸಿಕೊ೦ಡು  ” ಇಲ್ಲಿ ಬೆಳಗಾವಿ ಮ್ಯಾಲೆ ರಾಜ್ಯಭಾರ ಮಾಡಿದ ರಟ್ಟವ೦ಶದವರು ಜೈನ ಧರ್ಮ ಪಾಲಿಸತಿದ್ದರು, ಅವರ ರಾಜ ಕಾರ್ತವೀರ್ಯಾರ್ಜುನ ಅನ್ನುವವನ ಕಾಲದೊಳಗ ಈ ಬಸ್ತೀ ಕಟ್ಟಿದರು. ಇದಕ್ಕ ಚಾಲುಕ್ಯರ ಕಾಲದ ವಾಸ್ತುಶಿಲ್ಪ ಕಲಾ .ಅದರೊಳಗಿನ ಒಂದೊಂದು ಕಲ್ಲೂ ಹಂಗ ಮಿರಿ ಮಿರಿ ಮಿಂಚತಾವ  ನೋಡೀರೇನು? ”
”ಹೂ೦ ಹೂ೦ ಹೌದು, ಅದಕ್ಕೇ ನಾವು ಒ೦ದಿನಾನೂ ತಪ್ಪದೇ ಅಲ್ಲಿ ಹೋಗಿ ಹಳ್ಳಾ, ಗಜ್ಜುಗಾ  ಆಡತೀವಿ..”ನಂಗೆ ನನ್ನ ಆಟದ ಚಿ೦ತೆಯ ಹೊರತಾಗಿ ಬೇರೆ ಯಾವುದೂ ಮಹತ್ವದ್ದು ಇರಲಿಲ್ಲ.
   ಈಗ ದಿಕ್ಕೇ ತೋಚದ೦ತಾಯ್ತು. ಅಲ್ಲ ಮಂತ್ರಿ  ಬ೦ದರೆ ನಮಗೆ ಬಸದಿಯೊಳಗ ಆಟ ಆಡುವುದನ್ನು ಯಾಕೆ ನಿಲ್ಲಿಸಬೇಕು.  ಇದೆಲ್ಲಾ ಎಷ್ಟು ದಿನ?  ಹದಿನೈದು ದಿನ?  ಅದೂ ರಾಜಕಾರಣಿಗೋಳು ಬ೦ದರೆ ಅವರಿಗೆ ಕಮಲ ಬಸದೀನೇ ಯಾಕೆ ಬೇಕು? ಬೇರೆ ಜಾಗ  ಇಲ್ಲವೇನು? ಎ೦ದೆಲ್ಲಾ ಸಾವಿರದೆ೦ಟು ಪ್ರಶ್ನೆಗಳನ್ನು ನನ್ನ ಮನಸ್ಸು  ನನಗೆ ಕೇಳಲು ಶುರೂ ಮಾಡಿತು. ಈ ಬಸದಿ ನಮ್ಮ ಅತ್ಯ೦ತ ಪ್ರೀತಿಯ ಆಟದ ಜಾಗ ನಾವು ಒ೦ದೇ ಒ೦ದು ದಿನ ಬಸದಿಯಲ್ಲಿ ಆಡುವುದನ್ನು ತಪ್ಪಿಸಿದವರಲ್ಲ. ಆದರೆ  ನಮ್ಮ ರಾಜ್ಯದ  ಮುಖ್ಯ  ಮ೦ತ್ರಿ ಬರ್ತೀನಿ ಅಂದಾಗ ಅವರ ಮಾತು ಯಾರು ಮೀರಲು ಸಾಧ್ಯ? ಅಪ್ಪ ಪೋಲೀಸ್ ಅಧಿಕಾರಿಯಾಗಿದ್ದದ್ದಕ್ಕೆ  ಅವರದು ಡ್ಯೂಟೀ ಹೌದು., ಆದರ ಈಗ ನಾವೇನು ಮಾಡಬೇಕು …  ಯೋಚಿಸಿ ತಲೆಕೆಟ್ಟು ರಾತ್ರಿ ನಿದ್ದೆ ಬಾರದೇ  ಹೊರಳಾಡಿ  ಬನೂಳ  ಮನೆಗೆ ಮು೦ಜಾನೆ ಆರೂವರೆಗೇ  ಎದ್ದು ಹೋಗಿಬಿಟ್ಟೆ.  ಅವಳಿಗೆ ಮೊದಲು ಸುದ್ದಿ ಮುಟ್ಟಿಸಬೇಕಿತ್ತಲ್ಲ.
ಬನೂ ಎದ್ದಿರಲಿಲ್ ಇನ್ನೂ.. ನಾನೇ ಹೋಗಿ ಎಬ್ಬಿಸಿದಾಗ  ನನ್ನ ನೋಡಿ ” ಅಯ್ಯ ಇದೇನಿದು?”ಅಂತ ನಕ್ಕಳು.  ನನ್ನ ಎದೆ ಧಡಧಡ ಅಂತಿತ್ತು. ಮುಂದೆ ಐದೇ ಮಿನಿಟಿನಲ್ಲಿ ಅವಳೂ ನನ್ನಷ್ಟೇ ಚಿಂತಾಕ್ರಾಂತಳಾಗಿ ಮತ್ತೆ  ಇಬ್ಬರೂ ಕೂಡಿ ಒ೦ದು ರೆಸುಲ್ಯೂಶನ್ ತರಹ ಮಾಡಿ  ‘ಮುಖ್ಯಮಂತ್ರಿಯ ಭೇಟಿ ನಮ್ಮ ಆಡುವ ಹಕ್ಕನ್ನು ಕಸಿದುಕೊಳ್ಳುವ ಅನ್ಯಾಯದ ಬಗ್ಗೆ ಆಕ್ರೋಶಗೊಂಡ ಬಗ್ಗೆ  ಆಕಾಶದ ಹಿಂದಿರುವ ಯಾವನೇ ಒಬ್ಬ ದೇವರು ಅರ್ಥ ಮಾಡಿಕೊ೦ಡು  ನಮ್ಮ ಬೇಡಿಕೆಗೆ ಬಗ್ಗಿ ಇಲ್ಲಿಗೆ ಬರಬೇಕಾಗಿರುವ ಮಂತ್ರಿ ತನ್ನ ಮನೆ ಬಿಟ್ಟು ಹೊರಬೀಳದೆ ಇರುವಂತೆ ಮಾಡಿಬಿಡಲಿ’ ಅಂತ ಕಳಕಳಿಯ ಮನವಿ ಇಟ್ಟೆವು. ನಮ್ಮಿಬ್ಬರ ಗಂಭೀರ ಸಮಾಲೋಚನೆ ಬನೂಳ ಅಕ್ಕನ ಕಿವಿಗೂ ಬಿದ್ದಿರಬೇಕು. ಎಲ್ಲಿದ್ದಳೋ ಭರ್ರನೆ ಹಾರಿ ಬಂದು “ಏನ್ರೇ ಏನದು ಗುಸುಗುಸು ಮುಂಜಾನೆದ್ದು…ಸಾಲಿಗೆ ತಡಾ ಆಗ್ತದ ನಡೀರಿನ್ನ ” ಅಂತ ತನ್ನ ದೊಡ್ಡಕ್ಕನ ರೋಪು ಹಾಕಿದಳು.
ಹದಿನಾಲ್ಕಕ್ಕಾಗಲೇ ಇಪ್ಪತ್ತು ವಷ೯ದವರಷ್ಟು ಬೆಳೆದಿದ್ದ ಶಾಂತಿಯನ್ನು ನಾವು ಎದುರು ಹಾಕಿಕೊಳ್ಳುವ ಧಾಷ್೯್ಟ್ಯದವರಲ್ಲವೇ ಅಲ್ಲ. ಮನಸಿನಲ್ಲೇ ಅವಳನ್ನೂ ಬೈದುಕೊಳ್ಳುತ್ತ ಕಾಲೆಳೆದು ಮನೆಗೆ ನಡೆದೆ.
ಶಾಲೆಯಲ್ಲೂ ಅದೇ ಮಾತು.ಇಡೀ ದಿನ ಅದೇ. ಮುಖ್ಯ ಮಂತ್ರಿ ಗೆ ಶಾಪ. ಓದಲಿಲ್ಲ, ಬರೀಲಿಲ್ಲ,’ಬಸದೀಗೆ ಆಡಲಿಕ್ಕೆ ಹೋಗಬಾರದೂ ಅ೦ದ್ರ ಇನ್ನೆಲ್ಲಿ ಹೋಗೂದು?’
”ಅಲ್ಲ ಚಿಕ್ಕ ಬಸದಿಗೆ ಹೋಗೂಣೇನು?”ಅ೦ದಳು ಬನೂ.
”ಇಲ್ಲ, ಇಲ್ಲ, ಬ್ಯಾಡ .ಒ೦ದು ಕೆಲ್ಸಾ ಮಾಡೂಣು.. ಒಮ್ಮೆ ಕಮಲ ಬಸದಿಗೆ ಹೋಗೂಣು ಅಲ್ಲಿ ಇನ್ನೂ ಪೋಲೀಸರು ಬ೦ದಿದ್ದಿಲ್ಲ ಅ೦ದರ ಸ್ವಲ್ಪ್ ಹೊತ್ತು ಆಡಿ ಬ೦ದು ಬಿಡೂಣು …ಏನ೦ತೀ ” ನನ್ನ ಮಾತಿನೊಳಗಿದ್ದ ಆಶಾಭಾವನೆ ಅವಳನ್ನೂ ಹುರುಪಿಗೇರಿಸಿಬಿಟ್ಟಿತು.
 ಹಾಗೆ ಇಬ್ಬರೂ ಒ೦ದಿಷ್ಟು ಗುಟ್ಟು ಗುಟ್ಟು ಮಾಡಿಕೊ೦ಡೇ ಕಮಲ ಬಸದಿಯ ಹೊರಗಿನ ದೊಡ್ಡ ತೋಟವನ್ನು ಹಾಯ್ದು ಗಿಡಮರಗಳ ಮರೆಯಿ೦ದ ಸರಿದುಕೊಳ್ಳುತ್ತ ಒಳಗಿನ ಪ್ರಾಕಾರದ ಹತ್ತಿರ ಬ೦ದೆವು. ಸಾಮಾನ್ಯವಾಗಿ ಆ ಹೊತ್ತಿಗೆ ಅಲ್ಲಿ ಇರುವ ಮ೦ದಿ ಸ್ವಲ್ಪ ಕಡಿಮೆಯೇ ..ಇವತ್ತೂ ಹಾಗೇ ಇತ್ತು ಹಗುರ ಹೆಜ್ಜೆ ಹಾಕಿ ಇನ್ನೂ ಪೋಲೀಸರು ಬ೦ದಿಲ್ಲ ಅ೦ತ ಖಾತ್ರಿಯಾಗುತ್ತಲೂ ನಮ್ಮ ಸ್ಪೆಶಿಯಲ್ ಕ೦ಬದ ಬಳಿಗೆ ಓಡಿದೆವು..ನನಗಿ೦ತ ನಾಲ್ಕು ಹೆಜ್ಜೆ ಮು೦ದಿದ್ದ ಬನೂ ಇದ್ದಕ್ಕಿದ್ದ೦ತೆ ನಿ೦ತು ಜೋರಾಗಿ ಚೀರಿಕೊ೦ಡಳು ನಾನೂ ಬೆದರಿ ಅಲ್ಲಿ ಧಾವಿಸಿ ಹೋಗಿ ನೋಡಿದರೆ ಅವಳ ಹಾಗೆಯೇ ಬೆಚ್ಚಿ ಚೀರುವ ಹಾಗಾಯಿತು… ಅಲ್ಲಿ, ನಮ್ಮ ನಿತ್ಯದ ಜಾಗದಲ್ಲಿ ನಮಗೆ ಕ೦ಡ ದೃಶ್ಯ ಎದೆ ಒಡೆಯುವ ಹಾಗೆಯೇ ಇತ್ತು….ಅಲ್ಲೊಬ್ಬ ಸಾಧು  -ಕಾವಿ ಬಟ್ಟೆಯವನು ಮಲಗಿದ್ದ – ಇಲ್ಲ ಮಲಗಿರಲಿಲ್ಲ. ಅವನು ಸತ್ತು ಹೋಗಿರಬೇಕು, ಏಕೆ೦ದರೆ ಅ೦ಗಾತ ಮಲಗಿದ್ದ  ಅವನ  ಕಣ್ಣುಗಳೆರಡೂ ಅಗಲವಾಗಿ ತೆರೆದುಕೊ0ಡು ಒ೦ದು ತೋಳು ಕಟ್ಟೆಯಿ೦ದ ಕೆಳಗೆ ಜೋತಾಡುತ್ತಿತ್ತು…ಬಾಯಿ, ಮೂಗಿನ  ತು೦ಬ ನೊಣಗಳು…
    ಅಷ್ಟೇ , ನಾವಿಬ್ಬರೂ ಚೀರಿಕೊಳ್ಳುತ್ತ ಅಲ್ಲಿ೦ದ ಹಿ೦ದಕ್ಕೆ ಓಟ ಕಿತ್ತೆವು… ಮುಖದಲ್ಲಿ ಬೆವರು…ಕಾಲುಗಳು ಥರಥರ …ಎದೆ ಧಡ  ಧಡ! ಇಬ್ಬರೂ ಮನೆ ಮುಟ್ಟುವ ವರೆಗೂ ನಿಲ್ಲದೇ ಒ೦ದೇ ಓಟ.ಅಪ್ಪ ಊರಲ್ಲಿರಲಿಲ್ಲ. ಆದ್ದರಿ೦ದ ಇದನ್ನು ಯಾರಲ್ಲಿಯೂ ಬಾಯಿ ಬಿಡಬಾರದು ಅ೦ತ ಮನಸ್ಸಿನಲ್ಲೇ ಮಾತಾಡಿಕೊ೦ಡು ಅವಳೂ ನಾನೂ ಒಬ್ಬರಿಗೊಬ್ಬರು ಸಲಹೆ ಕೊಟ್ಟುಕೊ೦ಡು ಮೆತ್ತಗೆ ಬೆಕ್ಕುಗಳ ಹಾಗೆ ಮನೆಒಳಹೊಕ್ಕೆವು.
ಅದೇ ಕೊನೆ! ನಮ್ಮ ಕಮಲ ಬಸದಿಯ ಗಜ್ಜುಗ, ಹಳ್ಳಾಟದ ಎಪಿಸೋಡು ಅನೀರೀಕ್ಷಿತ ಮುಕ್ತಾಯ ಕ೦ಡಿತ್ತು… ಮತ್ತೆ೦ದೂ ನಾವು ನಮ್ಮ ಕಲ್ಲುಗಳನ್ನೆತ್ತಿಕೊ೦ಡು ಅಲ್ಲಿಗೆ ಕಾಲಿಡಲೇ ಇಲ್ಲ!

Leave a Reply