ಬಾಲ ಕಟ್ ಮಾಡ್ತಾರೆ ಅಷ್ಟೇ..

Journalist Roundup

ನೀವಾಡುವ ಮಾತನ್ನು ಒಬ್ಬೊಬ್ಬರು ಒಂದೊಂದು
ರೀತಿ ಗ್ರಹಿಸಬಹುದು ಎಂಬುದು ನೆನಪಿನಲ್ಲಿರಲಿ

R T Vittal Murthy

ಆರ್.ಟಿ.ವಿಠ್ಠಲಮೂರ್ತಿ

ಆ ಹೊತ್ತಿಗಾಗಲೇ ಸಿದ್ರಾಮಯ್ಯ ಸಿಎಂ ಎಂಬುದು ನಿಕ್ಕಿಯಾಗಿತ್ತು.ಕಾಂಗ್ರೆಸ್ ಹೈಕಮಾಂಡ್ ಕೂಡಾ ಇವರೇ ಮುಖ್ಯಮಂತ್ರಿ ಎಂದು ಘೋಷಿಸಿ ಆಗಿತ್ತು. ಸರಿ,ಸಿದ್ರಾಮಯ್ಯ ಅವರೇನೋ ಸಿಎಂ.ಆದರೆ ಅವರ ಸಚಿವ ಸಂಪುಟದಲ್ಲಿ ಯಾರಿರಬೇಕು? ಎಂಬುದು ನಿರ್ಧಾರವಾಗಬೇಕಲ್ಲ? ಹಾಗಂತಲೇ ಸಿಎಂ ಸಿದ್ಧರಾಮಯ್ಯ ತಮ್ಮ ಸಂಪುಟದಲ್ಲಿ ಯಾರು ಯಾರು ಇರಬೇಕು? ಅಂತ ಒಂದು ಪಟ್ಟಿಯನ್ನು ಸಿದ್ಧಪಡಿಸಿಕೊಂಡು ದೆಹಲಿಗೆ ಹೋದರು.

ಇನ್ನೇನು? ದೆಹಲಿಯ ಜನಪಥ್ ನಲ್ಲಿರುವ ಸೋನಿಯಾಗಾಂಧಿ ಅವರ ಮನೆ ಒಳಗೆ ಅವರು ನುಗ್ಗಬೇಕು.ಅಷ್ಟರಲ್ಲಿ ಆರ್.ಆರ್. ಹೆಸರಿನ ಒಬ್ಬ ನಾಯಕರು ಗಟ್ಟಿಯಾಗಿ ಕೂಗಿ ಹೇಳಿದರು. ಸಿದ್ರಾಮಣ್ಣ, ಕಾಂಗ್ರೆಸ್ ನಲ್ಲಿ ನಾನು ನಿಮಗಿಂತ ಹಿರಿಯ. ಹೀಗಾಗಿ ಮಂತ್ರಿ ಸ್ಥಾನವನ್ನೇನೋ ನನಗೆ ಕೊಡಲೇಬೇಕು. ಆದರೆ ಗ್ರೀನ್ ಸಿಗ್ನಲ್ ಪಡೆಯುವಾಗ ನನಗೆ ಹಣಕಾಸು ಇಲಾಖೆ ಬೇಕೇ ಬೇಕು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ ಎಂದರು.

assemblu unidentified
ವಾಸ್ತವವಾಗಿ ಆರ್.ಆರ್. ಹೆಸರಿನ ಅವರು ಮಂತ್ರಿ ಆಗುವ ಲಿಸ್ಟ್ ನಲ್ಲಿದ್ದರು. ಆದರೆ ಯಾವಾಗ ನನಗೆ ಹಣಕಾಸು ಖಾತೆಯೇ ಬೇಕು ಅಂತ ಅವರು ಪಟ್ಟು ಹಿಡಿದರೋ? ಆಗ ಸಿದ್ಧರಾಮಯ್ಯ ಕಿಡಿ ಕಿಡಿಯಾದರು.ಯಾಕೆಂದರೆ ಹಣಕಾಸಿನ ವಿಷಯದಲ್ಲಿ ಅವರೇ ಮಾಸ್ಟರ್.ಹೀಗಿರುವಾಗ ಜಬರ್ದಸ್ತಿನಿಂದ ಅದೇ ಖಾತೆಯನ್ನು ಮತ್ತೊಬ್ಬರು ಕೇಳುತ್ತಾರೆ ಎಂದರೆ ಅವರು ಸುಮ್ಮನಿರಲು ಸಾಧ್ಯವೇ? ಪರಿಣಾಮ? ಸದರಿ ಎಮ್ಮೆಲ್ಲೆಗೆ ಹಣಕಾಸು ಖಾತೆ ಸಿಗುವುದಿರಲಿ. ಮಂತ್ರಿಗಿರಿಯೂ ಸಿಗಲಿಲ್ಲ.

ಅಂದ ಹಾಗೆ ಅವರಿಗೆ ಮಂತ್ರಿ ಪದವಿ ಸಿಗುತ್ತದೆ ಎಂಬುದಕ್ಕೆ ಈಗಲೂ ಖಾತರಿಯಿಲ್ಲ. ಹಾಗಂತ ಹಣಕಾಸು ವಿಷಯದಲ್ಲಿ ಈ ಶಾಸಕರು (ಜನತಾ ದಳ ಸರ್ಕಾರ ಇದ್ದಾಗ ವಸತಿ ಮಂತ್ರಿಯಾಗಿದ್ದರು) ಬುದ್ಧಿವಂತರಲ್ಲ ಎಂದೇನಲ್ಲ. ಈಗಲೂ ಹಣಕಾಸಿನ ವಿಷಯ ಬಂದಾಗ ವಿಧಾನಸಭೆಯಲ್ಲಿ ಅತ್ಯುತ್ತಮವಾಗಿ ಮಾತನಾಡುತ್ತಾರೆ. ಆದರೆ ರಾಜಕಾರಣದಲ್ಲಿ ಯಾರಿಗೆ ಯಾವ ಖಾತೆ ಕೊಡಬೇಕು ಎಂಬುದನ್ನು ಮುಖ್ಯಮಂತ್ರಿಗಳಾದವರು ನಿರ್ಧರಿಸಿರುತ್ತಾರೆ. ಆದರೆ ಯಾರಾದರೂ ತೀರಾ ಬುದ್ಧಿವಂತರು ಅಂತ ತೋರಿಸಿಕೊಳ್ಳಲು ಹೋದರೋ? ನಿರ್ಧಾಕ್ಷಿಣ್ಯವಾಗಿ ಬಾಲ ಕಟ್ ಮಾಡಿ ಬಿಡುತ್ತಾರೆ.
****

CM Siddaramaiah and patel archive
ಇದೇ ರೀತಿ ಮುಖ್ಯಮಂತ್ರಿ ಹುದ್ದೆಗೇರಿದ ನಂತರ ಬೆಂಗಳೂರನ್ನು ಸಿಲಿಕಾನ್ ವ್ಯಾಲಿಯನ್ನಾಗಿ ಮಾಡಿದ, ವಿಶ್ವದ ದೊಡ್ಡಣ್ಣ ಅಮೇರಿಕ ಕೂಡಾ ಬೆಂಗಳೂರಿನ ಕಡೆ ತಿರುಗಿ ನೋಡುವಂತೆ ಮಾಡಿದವರು ಎಸ್.ಎಂ.ಕೃಷ್ಣ.

ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಒಬ್ಬ ನಾಯಕರು ಕೃಷಿ ಮಾರುಕಟ್ಟೆ ಸಚಿವರಾಗಿದ್ದರು.ಆದರೆ ಅವರಿಗೆ ಸಿಕ್ಕಿದ್ದು ರಾಜ್ಯ ದರ್ಜೆ ಸಚಿವ ಸ್ಥಾನ. ರಾಜ್ಯ ದರ್ಜೆ ಸಚಿವ ಸ್ಥಾನವೆಂದರೆ, ಅವರ ಖಾತೆಗೆ ಸಂಬಂಧಪಟ್ಟ ವಿಷಯಗಳು ಕ್ಯಾಬಿನೆಟ್ಟಿಗೆ (ಸಚಿವ ಸಂಪುಟಕ್ಕೆ) ಬಂದಾಗ ಮಾತ್ರ ಅವರು ಕ್ಯಾಬಿನೆಟ್ಟಿಗೆ ಹೋಗಬಹುದು. ಉಳಿದಂತೆ ಲೇದು.

ಸರಿ, ಈ ಮಂತ್ರಿಗೆ ಅದೇನು ಹಠ ಬಂತೋ ಗೊತ್ತಿಲ್ಲ. ಆದರೆ ರಾಜ್ಯದಿಂದ ಹಿಡಿದು ರಾಷ್ಟ್ರ ರಾಜಕಾರಣದ ಪ್ರಭಾವಿ ನಾಯಕರ ಮೇಲೆಲ್ಲ ಒತ್ತಡ ಹೇರಿದರು. ನಾನು ಶೋಷಿತ ವರ್ಗದಿಂದ ಬಂದವನು. ಆದರೆ ನನಗೆ ರಾಜ್ಯ ದರ್ಜೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಏನಾದರೂ ಮಾಡಿ ನನಗೆ ಕ್ಯಾಬಿನೆಟ್ ದರ್ಜೆ ಸಿಗುವಂತೆ ಮಾಡಿ ಎಂದರು.

ಸರಿ, ಒಂದಲ್ಲ, ಎರಡಲ್ಲ, ಹಲವು ಕಡೆಯಿಂದ ಅವರು ಒತ್ತಡ ಹೇರಿದ ಮೇಲೆ ಸಹಜವಾಗಿ ಮುಖ್ಯಮಂತ್ರಿಗಳಿಗೆ ಮೆಸೇಜು ಬಂತು.ಕ್ಯಾಬಿನೆಟ್ಟು ರೀ ಷೆಫಲ್ಲು ಮಾಡುವಾಗ ಸಂಬಂಧಪಟ್ಟ ಕೃಷಿ ಮಂತ್ರಿಗೆ ರಾಜ್ಯ ದರ್ಜೆಯಿಂದ ಕ್ಯಾಬಿನೆಟ್ ಗ್ರೇಡಿಗೆ ಬದಲಿಸಿ ಅಂತ. ಈ ರೀತಿಯ ಒತ್ತಡಗಳು ಅತಿಯಾದಾಗ ಎಸ್.ಎಂ.ಕೃಷ್ಣ ಅವರು, ಅರೇ,ಅವರಿಗೆ ಕ್ಯಾಬಿನೆಟ್ ಗ್ರೇಡ್ ಕೊಡುವುದರಲ್ಲಿ ನನಗೇನು ಸಮಸ್ಯೆ? ಖಂಡಿತ ಅವರನ್ನು ಕ್ಯಾಬಿನೆಟ್ ಸಚಿವರನ್ನಾಗಿ ಮಾಡುತ್ತೇನೆ ಅಂತ ಹೇಳಿದರು. ಮುಂದೆ ಕೆಲವೇ ದಿನಗಳಲ್ಲಿ ಸಚಿವ ಸಂಪುಟ ಪುನರ್ರಚನೆ ಆಯಿತು. ಆ ಸಂದರ್ಭದಲ್ಲಿ ಸದರಿ ಕೃಷಿ ಮಾರುಕಟ್ಟೆ ಸಚಿವರು ಕ್ಯಾಬಿನೆಟ್ ಗ್ರೇಡ್ ಗೆ ಬಡ್ತಿಯನ್ನೂ ಪಡೆದರು.

ಆದರೆ ಹೀಗೆ ಕ್ಯಾಬಿನೆಟ್ ಗ್ರೇಡು ಸಿಕ್ಕಿದರೂ ಅವರ ಗೋಳು ತಪ್ಪಲಿಲ್ಲ. ಹೀಗೇ .ಒಂದು ಸಲ ರೌಂಡ್ಸ್ ಗೆ ಅಂತ ಹೋದಾಗ ನಾನೇ ಕೇಳಿದೆ.  ಸಾರ್ ಸ್ಟೇಟ್ ಗ್ರೇಡ್ ನಿಂದ ಕ್ಯಾಬಿನೆಟ್ ಗ್ರೇಡಿಗೆ ಪ್ರಮೋಷನ್ ಆಗಿದೆ.ಈಗ ನಿಮ್ಮ ಕೊರಗು ನಿವಾರಣೆಯಾಗಿರಬೇಕು ಅಂತ. ಆದರೆ ಅವರು ಖಿನ್ನರಾಗಿ ಹೇಳಿದರು. ನಿಜ, ವಿಠ್ಠಲಮೂರ್ತಿ. ನನಗೆ ಕ್ಯಾಬಿನೆಟ್ ಗ್ರೇಡ್ ಸಚಿವನನ್ನಾಗಿ ಮಾಡಲಾಗಿದೆ ಎಂಬುದೇನೋ ಸರಿ. ಆದರೆ ಹೀಗೆ ಕ್ಯಾಬಿನೆಟ್ ಗ್ರೇಡ್ ಕೊಡುವಾಗ ಈ ಹಿಂದೆ ನನ್ನ ಕೈಲಿದ್ದ ಕೃಷಿ ಮಾರುಕಟ್ಟೆ ಖಾತೆಯನ್ನು ಕಿತ್ತುಕೊಂಡು, ಯೋಜನೆ ಮತ್ತು ಅಂಕಿ ಸಂಖ್ಯೆ ಖಾತೆಯನ್ನು ನೀಡಲಾಗಿದೆ. ಈ ಹಿಂದೆ ರಾಜ್ಯ ಪ್ರವಾಸ ಮಾಡಿ ಇಲಾಖೆಗೆ ಸಂಬಂಧಿಸಿದ ಜನರನ್ನಾದರೂ ನೋಡಬಹುದಿತ್ತು. ಮಾತನಾಡಬಹುದಿತ್ತು.

ಆದರೆ ಯೋಜನೆ ಮತ್ತು ಅಂಕಿ ಸಂಖ್ಯೆ ಖಾತೆಯಲ್ಲಿ ಏನಿದೆ ಮಣ್ಣು? ಬರೀ ಫುಟ್ ರೂಲು ಮಾತ್ರ. ಶಾಲೆಯಲ್ಲಿದ್ದಾಗ ನೀವು ಗ್ರಾಫ್ ಪುಸ್ತಕ ತೆಗೆದುಕೊಂಡು ಏರಿಕೆ, ಇಳಿಕೆ ಅಂತ ದಾಖಲಿಸುತ್ತೀರಲ್ಲ? ಅದೇ ಕೆಲಸವನ್ನು ನಾನೀಗ ಮಾಡುವ ಸ್ಥಿತಿ ಬಂದಿದೆ. ಮೊದಲೇ ಇದು ಹಣಕಾಸು ಖಾತೆಗೆ ಲಿಂಕ್ ಆದ ಇಲಾಖೆ. ಹೀಗಿರುವಾಗ ಏನೇ ಬೆಳವಣಿಗೆಗಳಿದ್ದರೂ ಅಧಿಕಾರಿಗಳು ಮುಖ್ಯಮಂತ್ರಿಗಳ ಸಿಗ್ನಲ್ ಇಲ್ಲದೆ ಚಕಾರ ಎತ್ತುವುದಿಲ್ಲ. ಮಾಡಲು ಬೇರೆ ಕೆಲಸವೂ ಇಲ್ಲ. ಸುಮ್ಮನೆ ಈ ಕ್ಯಾಬಿನೆಟ್ಟು ಗ್ರೇಡಿಗಿಂತ ಮುಂಚಿದ್ದ ಸ್ಟೇಟ್ ಗ್ರೇಡೇ ಚೆನ್ನಾಗಿತ್ತು ಅನ್ನಿಸುತ್ತದೆ ಎಂದು ಮೌನವಾದರು. ನಾನೂ ದುಸುರಾ ಮಾತನಾಡಲಿಲ್ಲ.
******

ಹಾಗೆ ನೋಡಿದರೆ ಯಾರು ಏನೇ ಮಾತನಾಡಿದರೂ ತಣ್ಣಗೆ ನಗುತ್ತಿದ್ದವರು ಜೆ.ಹೆಚ್.ಪಟೇಲ್ ಮಾತ್ರ. ಆಗಾಗ ತಮ್ಮ ಸರ್ಕಾರಿ ಬಂಗಲೆ ಕಾವೇರಿಯಲ್ಲಿ ಮಂತ್ರಿಗಳನ್ನೆಲ್ಲ ಕರೆದು ಮೀಟಿಂಗು ಮಾಡುತ್ತಿದ್ದರು. ಯಾರು ಯಾವುದೇ ವಿಷಯವನ್ನಾದರೂ ಮುಕ್ತವಾಗಿ ಮಾತನಾಡಬಹುದಿತ್ತು.

ಒಂದು ಸಲ ತಮ್ಮ ಸರ್ಕಾರಿ ಬಂಗಲೆ ಕಾವೇರಿಯ ಹುಲ್ಲು ಹಾಸಿನ ಮೇಲೆ ಎಲ್ಲ ಮಂತ್ರಿಗಳು ಇರುವಾಗ, ಲೇಯ್ ಉಮೇಶ್ ಕತ್ತಿ. ಈಗಿರುವ ಸಚಿವ ಸಂಪುಟ ಇನ್ಯಾವ ರೂಪದಲ್ಲಿ ಇರಬೇಕಿತ್ತು ಅಂತ ನಿನಗನ್ನಿಸುತ್ತದೆ? ಅಂತ ಕೇಳಿದರು. ಆಗ ಉಮೇಶ್ ಕತ್ತಿ ಜೂನಿಯರ್ ಮಿನಿಸ್ಟರು. ಅಂದರೆ ಅನನುಭವಿ ಮಂತ್ರಿ.

ಆದರೆ ಉಮೇಶ್ ಕತ್ತಿ ಎಗ್ಗು ಸಿಗ್ಗಿಲ್ಲದ ವ್ಯಕ್ತಿ. ಹಾಗಂತಲೇ ಪಟೇಲರು ಹಾಗೆ ಕೇಳಿದಾಗ ಉಮೇಶ್ ಕತ್ತಿ ಯಾವುದೇ ಮುಲಾಜಿಲ್ಲದೆ ಹೇಳತೊಡಗಿದರು. ಸಾರ್. ಸರ್ಕಾರದಲ್ಲಿ ಪ್ರಮುಖ ಖಾತೆಗಳು ಅಂತ ಏನಿವೆ? ಅವುಗಳನ್ನು ನನ್ನಂತಹ ಜೂನಿಯರುಗಳಿಗೆ ಕೊಡಿ. ಯಾವುದು ಬರಖತ್ತಾಗದ ಖಾತೆ ಅಂತ ಇರುತ್ತವೋ?ಅಂತಹ ಖಾತೆಗಳಿಗೆ ಸೀನಿಯರ್ರುಗಳನ್ನು ನೇಮಕ ಮಾಡಿ.

ಈಗ ಎಕ್ಸಾಂಪಲ್ಲು. ಉದಾಸಿಗೆ ಲೋಕೋಪಯೋಗಿ ಖಾತೆ ಕೊಟ್ಟಿದ್ದೀರಿ. ಭೈರೇಗೌಡರಿಗೆ ಕೃಷಿ ಖಾತೆ ಕೊಟ್ಟಿದ್ದೀರಿ. ಸಿದ್ಧರಾಮಯ್ಯ ಅವರಿಗೆ ಹಣಕಾಸು ಖಾತೆ ಕೊಟ್ಟಿದ್ದೀರಿ. ರಮೇಶ್ ಜಿಗಜಿಣಗಿ ಅವರಿಗೆ, ಸಿಂಧ್ಯಾ ಅವರಿಗೆ, ಎಂ.ಪಿ,ಪ್ರಕಾಶ್ ಸೇರಿದಂತೆ ಎಲ್ಲ ಸೀನಿಯರ್ರುಗಳಿಗೆ ಪ್ರಮುಖ ಖಾತೆ ಕೊಟ್ಟಿದ್ದೀರಿ.ಆದರೆ ಈ ಖಾತೆಗಳೆಲ್ಲ ಸಹಜವಾಗಿಯೇ ನಡೆದುಕೊಂಡು ಹೋಗುತ್ತವೆ. ಅರ್ಥಾತ್, ಅಧಿಕಾರಿಗಳೇ ಆ ಖಾತೆಯನ್ನು ನಡೆಸಿಕೊಂಡು ಹೋಗುತ್ತಾರೆ. ಆದರೆ ನಮ್ಮಂತವರಿಗೆ ನೀಡಿದ ಖಾತೆಯಲ್ಲಿ ಕಾಸು ಇಲ್ಲ, ಕರೀಮಣಿಯೂ ಇಲ್ಲ. ಹೀಗಾಗಿ ನಾವು ಪರದಾಡಬೇಕಾಗುತ್ತದೆ. ಆದ್ದರಿಂದ ಸರ್ಕಾರದಲ್ಲಿ ಸೀನಿಯರ್ರುಗಳು ಅಂತ ಯಾರಿದ್ದಾರೆ? ಅವರಿಗೆ ಬರಖತ್ತೇ ಆಗದ ಖಾತೆಗಳನ್ನು ಕೊಡಿ. ತಮ್ಮ ಅನುಭವದ ಮೂಲಕ ಆ ಖಾತೆಗಳನ್ನು ಇವರು ಉದ್ದಾರ ಮಾಡಲಿ.

ಯಾವ ಖಾತೆ ಅಧಿಕಾರಿಗಳ ತಾಖತ್ತಿನ ಮೇಲೇ ನಡೆದುಕೊಂಡು ಹೋಗುತ್ತದೋ? ಅಂತಹ ಖಾತೆಗಳನ್ನು ನಮ್ಮಂತವರಿಗೆ ಕೊಡಿ. ಆಗ ನಮಗೆ ಅನುಭವವೂ ಆಗುತ್ತದೆ. ಅಲ್ಲಿಗೆ ಎಲ್ಲವೂ ಬ್ಯಾಲೆನ್ಸು ಆಗುತ್ತದೆ ಎಂದರು ಉಮೇಶ್ ಕತ್ತಿ.
ನಿಜ ಕಣೋ ಉಮೇಶ್ ಕತ್ತಿ. ನೀನು ಸರಿಯಾಗಿಯೇ ಹೇಳಿದ್ದೀಯ? ಓಕೆ ಸೀನಿಯರ್ರುಗಳೆಲ್ಲ ಇಲ್ಲೇ ಇದ್ದೀರಿ. ಈ ಕುರಿತು ನೀವೇನು ಹೇಳುತ್ತೀರಿ? ಎಂದು ಪ್ರತಿಯೊಬ್ಬರ ಕಡೆಗೂ ತಿರುಗಿ ನೋಡಿದರು ಪಟೇಲ್. ಎಲ್ಲರೂ ನಗುತ್ತಿದ್ದರೇ ಹೊರತು, ಯಾರೊಬ್ಬರೂ ಚಕಾರ ಮಾತನಾಡಲಿಲ್ಲ.

ವಾಟ್ ಎವರ್ ಮೇ ಬಿ. ಆತ ಹೇಳಿದ್ದು ನಿಜ ಅಲ್ಲವೇನ್ರೀ? ಜೂನಿಯರ್ರುಗಳಿಗೆ ಪ್ರಬಲ ಖಾತೆಯನ್ನು ಕೊಡುವುದು, ಸೀನಿಯರ್ರುಗಳಿಗೆ ಬರಖತ್ತಾಗದ ಖಾತೆಯನ್ನು ಕೊಟ್ಟು ಸುಧಾರಿಸುವುದು ಒಳ್ಳೆಯ ಐಡಿಯಾ ಅಲ್ಲವಾ? ಎಂದರು ಪಟೇಲ್. ಯಥಾ ಪ್ರಕಾರ ಎಲ್ಲರೂ ನಕ್ಕರು. ಮುಂದೆ ಉಮೇಶ್ ಕತ್ತಿಯವರಿಗೆ ಒಳ್ಳೆಯ ಖಾತೆಯೇ ಸಿಕ್ಕಿತು ಎನ್ನಿ.
*****
ಇದನ್ನೆಲ್ಲ ಏಕೆ ಹೇಳಿದೆನೆಂದರೆ, ನಾಯಕರಾದವರಿಗೆ ಯಾರಿಗೆ ಏನು ಜವಾಬ್ದಾರಿ ಕೊಡಬೇಕು ಎಂಬ ವಿಷಯದಲ್ಲಿ ತಮ್ಮದೇ ಆದ ಲೆಕ್ಕಾಚಾರವಿರುತ್ತದೆ. ತೀರಾ ಹಟ ಹಿಡಿದರೆ ಕೆಲವರು ಯಕ್ಕಾ ಮಕ್ಕಾ ಬಾರಿಸಿ, ಕೆಲಸಕ್ಕೆ ಬಾರದ ಜಾಗದಲ್ಲಿಟ್ಟು ಬಿಡಬಹುದು. ಅದೇ ರೀತಿ ಪಟೇಲರಂತವರು, ಎಲ್ಲ ಫೀಡ್ ಬ್ಯಾಕುಗಳನ್ನು ಮುಕ್ತವಾಗಿ ಸ್ವೀಕರಿಸಬಹುದು. ಹೀಗಾಗಿಯೇ ರಾಜಕಾರಣ ಅಂತಲ್ಲ. ಬದುಕಿನ ಯಾವುದೇ ಕ್ಷೇತ್ರವಿರಲಿ. ನಿಮಗಿರುವ ಅನುಭವದ ಗ್ರಾಫು ಏರುತ್ತಲೇ ಹೋಗುವಂತೆ ನೋಡಿಕೊಳ್ಳಿ. ಆಗ ಅವಕಾಶ ಎಂಬುದು ತಾನೇ ತಾನಾಗಿ ಹುಡುಕಿಕೊಂಡು ಬರುತ್ತದೆ.

ಇಂತಹ ಕ್ಷೇತ್ರದಲ್ಲಿ ನೀವು ಚೆನ್ನಾಗಿ ದುಡಿಯುತ್ತೀರಿ ಎಂದು ಗೊತ್ತಾದರೆ ನಾಯಕತ್ವದ ಗುಣ ಇರುವವರು ತಾವಾಗಿಯೇ ನಿಮ್ಮನ್ನು ಗುರುತಿಸುತ್ತಾರೆ. ಆದರೆ ನನ್ನಲ್ಲಿ ಇಂತಹ ಗುಣವಿದೆ. ನನಗೆ ಇಂತಹ ಜಾಗ ಸಿಗಲೇಬೇಕು ಎಂದೇನಾದರೂ ನೀವು ನಕರಾ ಮಾಡಿದಿರೋ?ಆಗ ನಿಮ್ಮನ್ನು ಕಟ್ ಮಾಡಲು ನಾಯಕರಾದವರು ಸಹಜವಾಗಿಯೇ ಬಯಸುತ್ತಾರೆ. ಹೀಗಾಗಿ ಒಂದು ನಿರ್ದಿಷ್ಟ ಕಾಲ ಬರುವವರೆಗೆ ನೀವು ನಿಮ್ಮ ಬಗ್ಗೆ ಹೇಳಿಕೊಳ್ಳಲು ಹೋಗಬೇಡಿ.  ಯಾಕೆಂದರೆ ನಾಯಕರು ಅಂತಲ್ಲ, ನಾವು, ನೀವು ಸೇರಿದಂತೆ ಎಲ್ಲರೂ ಒಂದೊಂದು ಮಾತನ್ನು ಭಿನ್ನ ಭಿನ್ನ ರೀತಿಯಲ್ಲಿ ಗ್ರಹಿಸುವ ಸಾಧ್ಯತೆಗಳಿರುತ್ತವೆ. ಒಂದೇ ಮಾತನ್ನು ಒಬ್ಬರು ಗಂಭೀರವಾಗಿ ಪರಿಗಣಿಸಬಹುದು ಮತ್ತೊಬ್ಬರು ಪಟೇಲರ ರೀತಿ ಲೈವ್ಲಿಯಾಗಿ ತೆಗೆದುಕೊಳ್ಳಬಹುದು.

ಇದನ್ನು ಅರ್ಥ ಮಾಡಿಕೊಂಡಿರೋ?ನಿಮಗೆ ಲಕ್ಕು ಒಲಿಯಬಹುದು. ಅಯ್ಯೋ, ನಾವು ಮಾಡುವ ಕೆಲಸಕ್ಕೆ, ಪಡುವ ಶ್ರಮಕ್ಕೆ ನಮಗೆ ಇಂತಹ ಲೆವೆಲ್ಲು ಅಂತ ದಕ್ಕಲೇಬೇಕು ಅಂದುಕೊಂಡಿದ್ದರೆ ಕ್ಷಮಿಸಿ,ನಿಮಗಿಂತ ಅತ್ಯಂತ ಅನರ್ಹರೂ ದೊಡ್ಡ ಜಾಗದಲ್ಲಿ ಬಂದು ಕೂರಬಹುದು. ಹೀಗಾಗಿ ಮಾಡುವ ಕೆಲಸ ಮಾಡಿ.ಕೆಲಸದ ತೃಪ್ತಿಯನ್ನು ಅನುಭವಿಸಿ.ದೊಡ್ಡ ಜಾಗ ಸಿಕ್ಕರೆ ಸಂತೋಷ.ಇಲ್ಲವೇ ಮಾಡಿದ ಕೆಲಸದ ಬಗ್ಗೆ ಜೀವಕ್ಕೆ ಸಮಾಧಾನ.ಇದಕ್ಕಿಂತ ಇನ್ನೇನು ಬೇಕು?

 

1 comment

Leave a Reply